ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್ಟನ್‌ನಲ್ಲಿ ಬಡವರ ಬಂಧು !

By Staff
|
Google Oneindia Kannada News

*ಎಚ್‌. ಆರ್‌. ಸತೀಶ್‌ಕುಮಾರ್‌, ಅಲೆಕ್ಸಾಂಡ್ರಿಯಾ, ಯುಎಸ್‌ಎ

Washington Needleಸುಬ್ಬನಿಗೆ ಬೇರೆ ಯಾವ ಊರನ್ನು ನೋಡಲಿ ಬಿಡಲಿ, ವಾಷಿಂಗ್ಟನ್‌ ಡಿ. ಸಿ.ಯನ್ನು ಸಂಪೂರ್ಣವಾಗಿ ನೋಡಿಯೇ ತೀರುತ್ತೇನೆಂಬ ಹಟವಂತೂ ಸ್ಪಷ್ಟವಾಗಿ ಇದ್ದಂತೆ ತೋರುತ್ತಿತ್ತು. ಸರಿ, ವಾಷಿಂಗ್ಟನ್‌ ಡಿ. ಸಿ. ಅದರ ಸುತ್ತ ಮುತ್ತಲ ಪ್ರದೇಶಗಳನ್ನು ಒಂದು ದಿನದಲ್ಲಿ ನೋಡೋಕೆ ಆಗಲ್ಲ , ಅಲ್ಲದೇ ಪ್ರತೀ ಸಾರಿ ನಾನು ಇವನ ಜೊತೆಯಲ್ಲಿ ಬರೋಕೂ ಆಗಲ್ಲ ಅಂತ ಸುಬ್ಬನಿಗೆ ಇಲ್ಲಿನ ಮೆಟ್ರೋ ರೈಲು ವ್ಯವಸ್ಥೆಯನ್ನೂ, ಸುಬ್ಬನಂತೆಯೆ ಇಂತಹ ಸ್ಥಳಗಳನ್ನು ನೋಡುವ ಆಸಕ್ತಿಯುಳ್ಳವರನ್ನೂ ಪರಿಚಯ ಮಾಡಿಕೊಟ್ಟೆ. ನಾನು ಇಲ್ಲಿನ ಸ್ಥಳಗಳನ್ನು ನೋಡಿ ಹಲವು ದಿನಗಳಾದುದರಿಂದ ಒಂದು ದಿನ ಅವನೊಡನೆ ವಾಷಿಂಗ್ಟನ್‌ ಡಿ. ಸಿ. ಕಡೆಗೆ ಪ್ರಯಾಣ ಬೆಳೆಸಿದೆ.

ಶನಿವಾರ ಆದ್ದರಿಂದ ಪಾರ್ಕಿಂಗಿಗೆ ಯಾವ ತೊಂದರೆಯೂ ಆಗಲಿಲ್ಲ , ಆದರೂ ಸುಬ್ಬನಿಗೆ ಈ ಪಾರ್ಕಿಂಗ್‌ ವ್ಯವಸ್ಥೆ , ಇದರಿಂದ ಪಟ್ಟಣ, ನಗರ ಹಾಗೂ ಕೌಂಟಿಗಳು ಹೇಗೆ ವರ್ಷಕ್ಕೆ ಮಿಲಿಯನ್‌ಗಟ್ಟಲೆ ಕಾಸು ಮಾಡಿಕೊಳ್ಳುತ್ತವೆ, ಒಂದೊಂದು ಪಾರ್ಕಿಂಗ್‌ ಟಿಕೇಟು ಸುಮಾರು 25 ಡಾಲರ್‌ನಿಂದ 75 ಡಾಲರ್‌ವರೆಗೆ ಇದ್ದು , ಆಯಾ ಪ್ರದೇಶದ ಮುಖ್ಯ ‘ರೆವಿನ್ಯೂ source’ ಆಗಿ ಹೇಗೆ ಸಹಾಯಕಾರಿ ಎಂಬುದನ್ನು ಚೆನ್ನಾಗಿ ಮನವರಿಕೆ ಮಾಡಿಕೊಟ್ಟಿದ್ದರಿಂದಲೋ ಏನೋ, ಸುಬ್ಬ ನನಗಿಂತಲೂ ಕೂಲಂಕಷವಾಗಿ ಪಾರ್ಕಿಂಗ್‌ ಮೀಟರುಗಳನ್ನು, ಅದರ ಹತ್ತಿರದ ಸೈನ್‌ಗಳನ್ನೂ ಪರೀಕ್ಷಿಸತೊಡಗಿದ್ದ ! ಇದು ಒಳ್ಳೆಯ ಬೆಳವಣಿಗೆ ಎಂದು ನಾನು ಸುಮ್ಮನೇ ಇದ್ದೆ. ಪಾರ್ಕ್‌ ಮಾಡಿ ಸ್ಮಿತ್‌ಸೋನಿಯನ್‌ ಮ್ಯೂಸಿಯಂ ಬಳಗದ ಕಡೆಗೆ ನಡೆಯ ತೊಡಗಿದ ನಮ್ಮನ್ನು, ಮ್ಯೂಸಿಯಂ ಮುಂದೆ ಅಲ್ಲಲ್ಲಿ ಠಿಕಾಣಿ ಹೂಡಿದ್ದ ಹಾಟ್‌ ಡಾಗ್‌ ಅಂಗಡಿಗಳು ಗಮನ ಸೆಳೆದವು.

ಸುಬ್ಬನ ಉದ್ಗಾರ - ‘ಓಃ, ಇಲ್ಲೂ ಸೈತ ನಮ್ಮೂರಿನಂತೆ ಗೂಡಂಗಡಿಗಳು ಇದಾವೆ!’ ಕೇಳಿದ. ನಾನು ‘ಹೌದು ಕಣೋ, ಇವೇ ಚೀಪ್‌ ಅಂಡ್‌ ಬೆಸ್ಟ್‌’ ಅಂದು ‘ನಿನಗೇನಾದರೂ ತಿನ್ನೋಕೆ, ಕುಡಿಯೋಕೆ ಬೇಕಾ?’ ಎಂದೆ. ಸುಬ್ಬ - ‘ಬೇಡಪ್ಪಾ, ನನಗ್ಯಾಕೆ ಈ ಗರಮ್‌ ಕುತ್ತಾಗಳ ಸವಾಸ!’ ಎಂದವನು ಮತ್ತೆ ಮುಂದುವರೆಸಿ, ‘ಗರಮ್‌ ಕುತ್ತಾ ಅಂದ್ರೆ, ಅದೇ ಕಣೋ, ಬಿಸಿ ನಾಯಿ, ಅಥ್ವಾ ಹಾಟ್‌ ಡಾಗ್‌!!’ ಅಂದ. ನನಗೆ ನಗು ತಡೆಯದಿರಲಾಗಲಿಲ್ಲ.

ಮುಂದೆ ಅವನೇ ತುಸು ಗಂಭೀರ ಧ್ವನಿಯಲ್ಲಿ ‘ಹೌದು, ಈ ಹಾಟ್‌ ಡಾಗ್‌ ಅನ್ನೋ ಹೆಸರು ಹ್ಯಾಗೆ ಬಳಕೆಗೆ ಬಂತು?’ ಎಂದ.

ನಾನು ‘ಶುರುವಾಯ್ತಲ್ಲಪ್ಪಾ ನಿಂದು’ ಎನ್ನುತ್ತಾ ನ್ಯಾಷನಲ್‌ ಹಾಟ್‌ ಡಾಗ್‌ ಮತ್ತು ಸಾಸೇಜ್‌ ಅಸೋಸಿಯೇಷನ್‌ ಅಂತ ಒಂದು ಆರ್ಗನೈಜೇಷನ್ನೇ ಇದೆ, ಅದರ ಪ್ರಕಾರ Tod Dorganನ ಕಾರ್ಟೂನೂ, 1800 ರ ಕಾಲದಲ್ಲಿ ಈ ದೇಶಕ್ಕೆ ಬಂದ ಜರ್ಮನಿಯವರ ಹಾಟ್‌ ಡಾಗ್‌, ಸಾಸೇಜ್‌ ಬಳುವಳಿಯೂ, 1890 ರಲ್ಲಿ ಪ್ರಕಟವಾದ ಕಾಲೇಜ್‌ ಮ್ಯಾಗಜೀನ್‌ಗಳಲ್ಲಿ ಹಾಟ್‌ ಡಾಗ್‌ನ ಹೆಸರು ಮೊದಲು ಬಂತೆದೂ, ಇತರ ಇನ್ನಿತರ ಕಾನ್ಟ್ರೋವರ್ಸಿಯಲ್‌ ಕಥೆಗಳನ್ನೂ ಸಂಕ್ಷಿಪ್ತವಾಗಿ ಹೇಳಿದೆ.

ಸುಬ್ಬ ‘ಓಃ, ಹಾಗಾ!’ ಅಂದು ಸುಮ್ಮನಾದ.

ಸ್ವಲ್ಪ ಹೊತ್ತು ತಡೆದು ‘How funny’, ನಮ್ಮೂರಲ್ಲೇನಾದ್ರೂ ಬಿಸಿ ನಾಯಿ ಅಂತ ಮಾರಿದ್ರೆ, ಜನಗಳ reaction ಹೆಂಗಿರಬಹುದು?’

‘ಬಿಸಿ ನಾಯಿ ಅಂದ್ರೆ ತಿನ್ನೋಲ್ಲ, ಹಾಟ್‌ ಡಾಗ್‌ ಅಂಥಾ ಸ್ವಲ್ಪ ಮಸಾಲೆ ಸೇರಿಸಿ ಮಾರು, ಅಮೇರಿಕದಲ್ಲಿ ಪ್ರಸಿದ್ಧಿ ಅಂತಲೂ ಹೇಳು, ಸಗಣಿ ಕೊಟ್ರೂ ತಿಂತಾರೆ!’ ಅಂದೆ ನಾನು ಸ್ವಲ್ಪ ಸಿಟ್ಟಿನಿಂದ.

‘ಅದಕ್ಯಾಕೋ ಅಷ್ಟು ಸಿಟ್ಟಾಗ್ತೀಯಾ? ಎಲ್ಲರೂ ಬಿಸಿ ಬೇಳೆ ಭಾತನ್ನೇ ನೆಚ್ಚಿಕೊಳ್ಳೋಕಾಗುತ್ತಾ?’

‘ಸಿಟ್ಟೇನಿಲ್ಲ, ನಮ್ಮೂರುಗಳಿಗೆ ಈ ಪೀಡ್ಝಾ, ಕೋಕು ಬಂದಂಗೆ, ನಮ್ಮಿಂದ ಏನೂ ಎಲ್ಲೂ ಹೋಗಲ್ವಲ್ಲಾ ಅಂತ’

‘ಅದೂ ಸರಿ ಅನ್ನು, ಬೆಂಗ್ಳೂರಲ್ಲಿ ಪಿಡ್ಝಾ ಮಾರೋದು ದೊಡ್ಡ ದಂಧೆ ಆಗೇತಪ್ಪಾ, ಅದನ್ನೇನು ಕೇಳ್ತಿ, ಐನೂರು ರೂಪಾಯಿಗೊಂದು ಅಂದ್ರೂ ಜನ ಸೈ ಅಂತಾರೆ ನೋಡು’ ಅಂದ.

ನಾನು ‘ಹೌದಾ!’ ಅಂದೆ.

World Bankಸುಬ್ಬ ‘ಹೌದು ಕಣೋ, ಇಲ್ಲೀದನ್ನ ಯಥಾವತ್ತಾಗಿ ಕಾಪೀ ಮಾಡೋಕ್‌ ಹೋಗ್ತಾರೆ, ಎಲ್ಲೋ ಏನೋ ಸರಿ ಆಗ್ಲಿಲ್ಲ ಅಂತ ತಲೆ ಕೆಡಿಸಿಕಂತಾರೆ - ಸರಿಯಾದ ವ್ಯವಸ್ಥೆ, infrastructure ಅನ್ನೋದಿಲ್ದಿದ್ರೆ ಇನ್ನೇನಾಗುತ್ತೆ , ಮತ್ತೆ?’

‘ಹೌದು, ನಾನೂ ಓದಿದ್ದೀನಿ, ಅರ್ಜೆಂಟ್‌-ಅರ್ಜೆಂಟಲ್ಲಿ ಗಾಡೀ ಓಡಿಸಿ, ಸಾಯೋ ಪಿಡ್ಝಾ ಹುಡುಗರ ಕಥೆನಾ’ ಎಂದೆ.

ಹೀಗೆ ಒಂದೆರಡು ಮ್ಯೂಸಿಯಂಗಳನ್ನು ನೋಡಿಕೊಂಡು, ವಾಷಿಂಗ್ಟನ್‌ ಮಾನ್ಯುಮೆಂಟಿನ ಕಡೆ ನಡೆದೆವು. ಸುಬ್ಬ ಆ ಸ್ತಂಭವನ್ನೂ, ಅದರ ಸುತ್ತಲೂ ಹಾರಿಸಿರುವ ಅಮೇರಿಕನ್‌ ಧ್ವಜಗಳನ್ನೂ, ಸ್ಮಾರಕದ ವಿವರಗಳನ್ನೆಲ್ಲ ನೋಡಿ, ಮುಖ್ಯವಾದ ಅಂಶಗಳನ್ನು ತನ್ನ ಪುಸ್ತಕದಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ, ಕ್ಯಾಮೆರದಿಂದ ಹಲವು ಕೋನಗಳಲ್ಲಿ ಚಿತ್ರಗಳನ್ನೂ ಸೆರೆ ಹಿಡಿಯುತ್ತಿದ್ದ. ‘ಇದರ ಮೇಲೇನೈತಿ?’ ಅಂತ ಕೇಳಿದ್ದಕ್ಕೆ, ‘ನೀನೇ ನೋಡುವಿಯಂತೆ, ಇನ್ನೊಂದು ಸಾರಿ ಬಂದಾಗ, ಅದನ್ನೂ ವೈಟ್‌ ಹೌಸನ್ನೂ ಒಟ್ಟಿಗೆ ನೋಡಿದ್ರೆ ಆಯ್ತು’ ಎಂದೆ.

ಅವನಿಗೇನನ್ನಿಸಿತೋ ಏನೋ, ಒಡನೆಯೇ ‘ಅಲ್ಲಾ, ಇವರು ಪದೇ-ಪದೇ God Bless America ಅಂತ ಯಾಕಂತಾರೆ? ನಾನು May God Bless You ಅನ್ನೋದನ್ನ ಕೇಳಿದ್ದೇನೆಯೇ ಹೊರತು, ತಮ್ಮನ್ನ ತಾವೇ God Bless Us ಅಂತ ಒಂದು ದೇಶಕ್ಕೇ ಹೇಳೋದನ್ನ ಎಲ್ಲೂ ಕೇಳಿಲ್ಲ’ ಅಂದ.

ನಾನು ‘ಹೇ, ಅದೊಂದು ಹಾಡಿನ ಸಾಲು ಕಣೋ, ನಮಗೆ ವಂದೇ ಮಾತರಂ ಇದೆಯಲ್ಲಾ ಹಾಗೆ’ ಎಂದು Irving Berlinನ ಪದ್ಯದ ಬಗ್ಗೆ ಹೇಳಿದೆ.

‘ಹೌದಾ, ನಂಗೆ ಗೊತ್ತೇ ಇರ್ಲಿಲ್ಲ , ಇಷ್ಟು ದಿನ ಅದರ ಬಗ್ಗೆ ತಲೆ ಕೆಡಿಸಿಕೊಂಡದ್ದೇ ಬಂತು ನೋಡು’ ಎಂದು ನಕ್ಕ.

Beggarಸಂಜೇವರೆಗೂ ಅಲ್ಲೀ-ಇಲ್ಲಿ ಸುತ್ತಾಡಿ ನನಗೆ ಸಾಕುಸಾಕಾದರೂ ಸುಬ್ಬ ಮಾತ್ರ ತನ್ನ ಅಮಿತ ಶಕ್ತಿಯಲ್ಲಿ ಇನ್ನೂ ಆಕ್ಟಿವ್‌ ಆಗಿಯೇ ಇದ್ದ. ವಾಷಿಂಗ್ಟನ್‌ ಡಿ.ಸಿ.ಯ ಸದಾ ಒಂದಲ್ಲ ಒಂದು ಥರದ ರಿಪೇರಿಗೆ ಒಳಗಾಗುವ ವರ್ತುಲಾಕಾರದಲ್ಲಿ ಸುತ್ತುವ ರಸ್ತೆಗಳೂ, ಅಲ್ಲಲ್ಲಿ ಕಣ್ಣಿಗೆ ರಾಚುವ ಕೊಳಕೂ, ಹಾಗೂ ಕರಿಯರ ಹಾವಳಿಯೂ ಸುಬ್ಬನಿಗೆ ಇಷ್ಟವಾಗಲಿಲ್ಲ. ಅದರ ಬಗ್ಗೆ ಅವನು ಹತ್ತು ಹಲವು ಪ್ರಶ್ನೆಗಳನ್ನು ಕೇಳಿದರೂ ಹೆಚ್ಚೇನು ಹೇಳದೇ ಅಲ್ಲಿಗಲ್ಲಿಗೆ ಉತ್ತರಿಸಿದೆ - ಅದು ಬಿಟ್ಟು, ಇದು ಬಿಟ್ಟು, ಇನ್ಯಾವುದನ್ನೋ ನಮ್ಮೂರು ಎಂದು ಬದುಕಲು ಬಂದ ನಮಗೆ, ನಮ್ಮೂರಿನ ಬಗ್ಗೆ ಕೆಟ್ಟದ್ದನ್ನ ಹೇಳಲು ಹೇಗೆ ತಾನೆ ಮನಸ್ಸು ಬಂದೀತು!? ಗಾಳಿ ಇದ್ದಲ್ಲಿ ಧೂಳು ಇದ್ದದ್ದೇ ಎಂದುಕೊಂಡು ಸುಮ್ಮನಿದ್ದರಾಯಿತು!

‘ಸರಿ, ಇನ್ನೊಂದು ಮುಖ್ಯವಾದ ಸ್ಥಳವನ್ನ ನೋಡಿ, ಮನೆಕಡೆ ಜಾಗ ಖಾಲಿ ಮಾಡೋಣ’ ಅಂದೆ.

‘ಯಾವುದು?’

‘ಅದೇ ಕಣೋ, ನಿನ್ನ ಮೆಚ್ಚಿನ ಬಡವರ ಬಂಧು! I.M.F, World Bank!’ ಎಂದೆ.

‘ಓ, ಅದಾ, ನಡಿ-ನಡೀ, ಮೊದ್ಲು ತೋರ್ಸಪಾ’ ಎಂದ.

ಸಾಮಾನ್ಯರಲ್ಲಿ ಸಾಮನ್ಯರಾದ ನಮ್ಮನ್ನೆಲ್ಲ ಅದರೊಳಗೆ ಎಲ್ಲಿ ಬಿಡ್ತಾರೆ, ಸುಮ್ಮನೇ ನಿಂತ ಭವ್ಯ ಕಟ್ಟಡಗಳನ್ನ ಹೊರಗಡೆಯಿಂದ ನೋಡಿದೆವೆನ್ನಿ!

ಸುಬ್ಬ ಎಂದಿನಂತೆ ತನ್ನ ತೆರೆದ ಕಂಗಳಿಂದ ಈ ಕಟ್ಟಡಗಳ ಚೆಲುವನ್ನು ಸವಿಯ ತೊಡಗಿ, ಪ್ರತಿಯಾಂದು ಇಂಚನ್ನೂ ತನ್ನ ಚಿತ್ತ ಪಟಲದಲ್ಲಿ ಸ್ಕ್ಯಾನ್‌ ಮಾಡಿಕೊಂಡು, ಒಳಗಿನ ಥರಾವರಿ ಲೈಟುಗಳು, ಮಿರುಗುಟ್ಟುವ ಬಾಗಿಲು, ಕಿಟಕಿಗಳ ಗ್ಲಾಸು, ಕಟ್ಟಡದೊಳಗಿನ ಚಿತ್ರಗಳನ್ನು ಇಷ್ಟ ಪಟ್ಟವನಂತೆ ನೋಡತೊಡಗಿದ.

ಅಲ್ಲಿ ಹೊರಗೆ ಜುಳು-ಜುಳು ಹರಿಯುತ್ತಿದ್ದ ಕಾರಂಜಿ ನೋಡಿ ಸುಬ್ಬ ‘ಇದರ ಒಳಗಿಂದ ಒಂದು ಕೆಂಪು ಲೈಟು ಹಾಕಿದ್ರೆ ಬಾಳ ಚೆನ್ನಾಗಿತ್ತು ನೋಡು’ ಅಂದ.

‘ಯಾಕೋ? ನಿನ್ನ ಸೌಂದರ್ಯ ಪ್ರಜ್ಞೆ ಇದ್ದಕ್ಕಿದ್ದಂತೆ ಜಾಗೃತವಾದಂತಿದೆ’ ಎಂದು ಕಿಚಾಯಿಸಿದೆ.

‘ಹಂಗೆ ಮಾಡಿದ್ರೆ, ಬಡವರ ರಕ್ತ ಹೀರಿ, ಆ ರಕ್ತನೇ ಈ ಕಾರಂಜಿ ನೀರಿನಲ್ಲಿ ಹರಿದಂತೆ ಕಾಣುತ್ತೆ ನೋಡು!’ ಅಂದ.

‘ಬಾಯಿ ಮುಚ್ಚೋ, ನಿನ್ನ ತಲೆ ಹರಟೆ ಅತೀ ಆಯ್ತು’ ಅಂತ ಕೊಂಚ ಗದರಿ ‘ನಡಿ ಮನೇಗ್‌ ಹೋಗೋಣ’ ಎಂದೆ.

ಅಷ್ಟರಲ್ಲಿ World ಬ್ಯಾಂಕಿನ ಮುಂದಿನ ಫುಟ್‌ಪಾಥ್‌ನಲ್ಲಿ ಒಬ್ಬ ಭಿಕ್ಷುಕ ತನ್ನ ‘ಸರಕು’ ತುಂಬಿದ ಕೈಗಾಡಿಯನ್ನು ತಳ್ಳಿಕೊಂಡು ಬರುತ್ತಿದ್ದುದನ್ನು ಗಮನಿಸಿದ ಸುಬ್ಬ - ‘ಏ, ತಡಿ ಮಾರಾಯಾ, ಒಂದು Kodak ಫೋಟೊ ಮೂಮೆಂಟ್‌ ಸಿಕ್ಕಿದೆ’ ಎಂದು ನಕ್ಕ! ನಾನು ಎಲಾ ಇವನ ಅನ್ನೋದರಲ್ಲಿ ಇವ ಆಗಲೇ ಆ ಭಿಕ್ಷುಕನ ಹತ್ರ ಮಾತಾಡಿ ಒಂದು ಒಂದು ಫೋಟೋಗೆ ಒಪ್ಪಿಸಿ ಆಗಿತ್ತು! ಇವನ ಅದೃಷ್ಟವೆಂಬಂತೆ ಆ ಭಿಕ್ಷುಕ ಪೋಸ್‌ ಕೊಡಲು ಒಪ್ಪಿದ್ದೇ ಹೆಚ್ಚು. ಇವ ಕಿಂಚಿತ್ತೂ ಸಮಯ ಹಾಳು ಮಾಡದೇ, ಈ ದೊಡ್ಡ-ಕಟ್ಟಡಗಳ ಬ್ಯಾಕ್‌ಗ್ರೌಂಡಿನಲ್ಲಿ ಬರುವಂತೆ ಆ ಕುರುಚಲ ಗಡ್ಡದವನನ್ನು ಅವನ ಸರಕಿನ ಸಮೇತ ಒಂದೆರಡು ಫೋಟೋಗಳಲ್ಲಿ ಕ್ಲಿಕ್ಕಿಸಿಕೊಂಡು ‘ Thank You’ ಅಂದ ಮೇಲೆ ಅವನು ಯೋ, ‘Got a Dollar’ ಅಂದ. ನನ್ನ ಕಡೆ ಇವ ಹಲ್ಲು ಗಿಂಜಿದ್ದನ್ನು ನೋಡಿ ಒಂದು ಡಾಲರನ್ನು ಸುಬ್ಬನ ಕೈಲಿ ಕುಕ್ಕಿದೆ.

‘ಅಲ್ವೋ, ಅವನ ಫೋಟೋ ನಿಂಗ್ಯಾಕಪ್ಪಾ ಬೇಕು, ಅದನ್ನ ತಗೊಂಡೋಗಿ ಊರಲ್ಲಿ ತೋರುಸ್ತೀಯಾ, ಅಮೇರಿಕದಲ್ಲೂ ಭಿಕ್ಷುಕರಿದ್ದಾರೆ ಅಂತಾ?’

‘ಏ, ನಿನಗೊತ್ತಾಗಲ್ಲ ಸುಮ್ನಿರೋ, ಈ ವಿಶ್ವವನ್ನೇ ಆಳೋ ಮಹಾನ್‌ ಬ್ಯಾಂಕಿನ ಹಿನ್ನೆಲೆಯಾಳಗ ಒಬ್ಬ ಭಿಕ್ಷುಕನ ಚಿತ್ರಾ ಅಂದ್ರೇನು, ಅದನ್ನ ತೋರಿಸಿರೋ ರೀತಿ ಮೇಲೆ ಒಂದು ಮಹಾ ಕಾವ್ಯಾನೇ ಜನಾ ಬರೀತಾರಪ್ಪಾ, ನಿಂಗೇನು ಗೊತ್ತು?, ಇದನ್ನ ಪಬ್ಲಿಷ್‌ ಮಾಡ್ತೀನಿ, ನೋಡ್ತಾ ಇರು, ಅವಾಗ ಗೊತ್ತಾಗುತ್ತೆ, ಈ ಫೋಟೋದ ಬೆಲಿ ಏನೂ ಅಂತ...’ ಎಂದು ‘ಯಾರಿಗುಟು, ಯಾರಿಗಿಲ್ಲ ಬಾಳೆಲ್ಲ ಬೇವೂ ಬೆಲ್ಲ’ ಅನ್ನೋ ಹಾಡನ್ನ ಗುನುಗ ತೊಡಗಿದ.

ನಾನು ‘ಪರವಾಗಿಲ್ವೇ!’ ಎಂದು ಸುಬ್ಬನ ವ್ಯವಹಾರ ಪ್ರಜ್ಞೆ, ವಸ್ತು-ವಿಷಯಗಳನ್ನು relate ಮಾಡೋ ತರ್ಕವನ್ನು ಕಂಡು ‘ಭೇಷ್‌’ ಎಂದು ಬೆನ್ನು ತಟ್ಟುತ್ತಾ ಇನ್ನು ಕತ್ಲಾದರೆ ಕೆಡ್ತು ಎಂದು ಅವನನ್ನು ಮನೇ ಕಡೆ ಹೊರಡಿಸಿದೆ.

Post your Views

ಪೂರಕ ಓದಿಗೆ...

ಶಾಪ್ಪಿಂಗ್‌ ಕಾಂಪ್ಲೆಕ್ಸ್‌ನ ಅಡ್ನ್ಯಾಡೀ ಬಾಗಿಲು !
ಗಣೇಶನ ಮಹಿಮೆ !
ಅಲ್ಲಿ ಹಾಲಿವುಡ್‌ ಆದರೆ ಇಲ್ಲಿ ಸ್ಯಾಂಡಲ್‌ವುಡ್‌ ಯಾಕೆ ?
ನೀರಿಗೆ ಬೆಂಕಿ ಬಿದ್ದಿದೆ ಬನ್ನಿ !

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X