• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿರೀಶ್‌ ಕಾರ್ನಾಡರೇ ಮೆಚ್ಚಬಲ್ಲ ‘ಯಯಾತಿ’ಯ ಅಮೋಘ ಪ್ರದರ್ಶನ

By Staff
|

*ಶ್ರೀನಿವಾಸ ಎಸ್‌. ಭಟ್‌, ಪೊಮೋನಾ, ಕ್ಯಾಲಿಫೋರ್ನಿಯಾ

ಹೀಗೊಂದು ಮಾತಿದೆ :

‘ಕಾವ್ಯೇಷು ನಾಟಕಂ ರಮ್ಯಂ, ನಾಟಕೇಷು ಶಕುಂತಲಾ।

ತತ್ರಾಪಿ ಚ ಚತುರ್ಥೋ’ಂಕಃ, ತತ್ರ ಶ್ಲೋಕ ಚತುಷ್ಟಯಂ।।’

A situation from Yayati(ಶ್ರವ್ಯ ಮತ್ತು ದೃಶ್ಯ ಕಾವ್ಯಗಳಲ್ಲಿ ನಾಟಕವೇ ರಂಜನೀಯ, ನಾಟಕಗಳಲ್ಲಿ ಹೆಸರಾದುದೆಂದರೆ ಕಾಳಿದಾಸನ ‘ಅಭಿಜ್ಞಾನ ಶಾಕುಂತಲಾ’. ಆ ಶಾಕುಂತಲದ ನಾಲ್ಕನೇ ಅಂಕ, ಅದರಲ್ಲಿ ಆ ಅಂಕದ ನಾಲ್ಕು ಶ್ಲೋಕಗಳು ಅತಿ ಅರ್ಥಪೂರ್ಣ).

ಮೇಲಿನ ಮಾತಿಗೆ ಪರ್ಯಾಯವಾಗಿ, ನಮಗೆ ಅನ್ವಯಿಸುವಂತೆ ಇಂದು, ಇಲ್ಲಿ, ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹೇಳುವುದಾದರೆ, ಸಮಕಾಲೀನ ನಾಟಕಕಾರರಲ್ಲಿ ಇಡೀ ಭಾರತದಲ್ಲಿ ಜನಪ್ರಿಯರಾದವರು- ‘ಜ್ಞಾನಪೀಠ’ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡರು. ‘ಯಯಾತಿ’ಅವರ ಅತ್ಯುತ್ತಮ ನಾಟಕಗಳಲ್ಲೊಂದು. ಉತ್ತರ ಅಮೆರಿಕದಲ್ಲಿ ಹೆಸರಾಂತ ಕಲಾವಿದರನ್ನೊಳಗೊಂಡ ಕನ್ನಡ ಕೂಟವೆಂದರೆ, ಮೇರಿಲ್ಯಾಂಡ್‌- ವಾಷಿಂಗ್‌ಟನ್‌ ಡಿಸಿ- ವರ್ಜೀನಿಯಾ ಪ್ರದೇಶದ ‘ಕಾವೇರಿ’. ಕಾವೇರಿಯ ಕಲಾವಿದರ ಪರಿಪೂರ್ಣವಾದ, ಪಕ್ವವಾದ ಪ್ರದರ್ಶನ ನಡೆದುದೆಂದರೆ - ನಮ್ಮ ಕರ್ನಾಟಕ ಸಾಂಸ್ಕೃತಿಕ ಸಂಘದ 108 ಗಣೇಶನ ಸಮ್ಮುಖದಲ್ಲಿ !

ಒಂದೇ ಮಾತಿನಲ್ಲಿ ಹೇಳುವುದಾದರೆ, ನಾಲ್ಕು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ ಸಭಾಂಗಣದಲ್ಲಿನ ಪ್ರೇಕ್ಷಕರನ್ನು, ಎರಡು ಗಂಟೆಗಳ ಕಾಲ ಭಾವನಾ ಪ್ರಪಂಚಕ್ಕೆ ಕೊಂಡೊಯ್ದವರು- ರಂಗ ನಿರ್ದೇಶಕ ಮನೋಹರ ಕುಲಕರ್ಣಿಯವರು. ಸರಳವಾದರೂ ಬಹಳ ಮಿತವಾದ ರಂಗಸಜ್ಜಿಕೆ. ಸಮಯಕ್ಕೆ ಸರಿಯಾಗಿ ನೆರವಾದ ಕತ್ತಲು ಬೆಳಕಿನ ದೀಪ ಸಂಯೋಜನೆ. ದೃಶ್ಯಗಳು ಕೊನೆಗೊಂಡಾಗ, ಪರದೆಯನ್ನು ಮುಚ್ಚಿ- ತೆರೆಯದೆ, ರಂಗಮಂಚದಲ್ಲಿ ಕತ್ತಲಾವರಿಸುವಂತೆ ಮಾಡಿ ಪ್ರೇಕ್ಷಕರ ಭಾವನಾ ಲಹರಿಗಳಿಗೆ ಕಡಿವಾಣ ಬೀಳದಂತೆ ನೋಡಿಕೊಂಡ ಚಾತುರ್ಯ. ಮಗನಿಂದ ತಂದೆ ವೃದ್ಧಾಪ್ಯವನ್ನು ಮರಳಿ ಪಡೆವ ದೃಶ್ಯ, ಅಂತಃಪುರದಲ್ಲಿ ರಾಜ-ರಾಣಿಯರ ಪ್ರಣಯ ಸನ್ನಿವೇಶಗಳು ಸೂಚ್ಯವಾಗಿಯೂ ಮನೋಜ್ಞವಾಗಿಯೂ ಇದ್ದವು. ಕತ್ತಲು ಕಳೆದು, ಬೆಳಕಿನಲ್ಲಿ ಮೊದಲ ಬಾರಿಗೆ ಮುಪ್ಪಾದ ಪತಿಯ ದರ್ಶನವಾದೊಡನೆ ಚಿತ್ರಲೇಖೆ ಕಿಟಾರನೆ ಕಿರುಚಿದ ದೃಶ್ಯವಂತೂ ನೈಜತೆಯ ಪರಮಾವಧಿಯನ್ನು ಮುಟ್ಟಿತ್ತು. ನನ್ನಂತೆ ಪ್ರೇಕ್ಷಕರಲ್ಲಿ ಬಹಳಷ್ಟು ಮಂದಿ ನಾಟಕದುದ್ದಕ್ಕೂ ರೋಮಾಂಚನಗೊಂಡಿರುವುದರಲ್ಲಿ ಸಂದೇಹವಿಲ್ಲ. ದಾಸಿ ಸ್ವರ್ಣಲೇಖಳ ಅಭಿನಯ, ಮುಖಭಾವ ಮುಂದೆ ಕುಳಿತ ನನ್ನನ್ನು ಮುಗ್ಧಗೊಳಿಸಿತು. ಪ್ರತಿಯಾಂದು ಪಾತ್ರದ ಸಂಭಾಷಣೆ, ಮಾತಿನ ವೈಖರಿ ನಾಟಕೀಯವಾಗಿರದೆ ಸಹಜವಾಗಿತ್ತು. ಕಾರ್ನಾಡರ ಸಂಯೋಜಿತ ಕಠಿಣ, ಖಚಿತ ಅರ್ಥಪೂರಿತವಾದ, ಆದರೆ ದೀರ್ಘ ಸಾಲುಗಳನ್ನು ಎಲ್ಲ ಪಾತ್ರಧಾರಿಗಳು ಲೀಲಾಜಾಲವಾಗಿ ಹರಿಬಿಟ್ಟರು. ದೇವಯಾನಿಯ ಪಾತ್ರಕ್ಕೆ ಸುಮಾ ಮುರಳೀಧರ ಅವರು ಭಾವುಕತೆಯಾಂದಿಗೆ ಜೀವ ತುಂಬಿದರು. ಭಾರತಿ ತ್ಯಾಗರಾಜನ್‌ ಅವರು ಶರ್ಮಿಷ್ಠೆಯನ್ನು ಭೂಲೋಕಕ್ಕಿಳಿಸಿ, ಮಿಂಚಿ ಮೆರೆದರು. ಯಯಾತಿಯಾಗಿ ಸಂಜಯ್‌ ರಾವ್‌ ತನ್ನ ಯೌವನವನ್ನು ಕಾಪಾಡಿಕೊಳ್ಳಲು ನೀಡುವ ಸಮಜಾಯಿಷಿ, ಕಾರ್ನಾಡರ ದೃಷ್ಟಿ ಕಲಾಭಿಮಾನಿಗಳ ಮನಮುಟ್ಟಿತು. ಯುವರಾಜ ಪುರು ಆಗಿ ರವಿ ಹರಪನ ಹಳ್ಳಿ ಅವರು ಮುಪ್ಪಿನ ಮತ್ತು ತಾರುಣ್ಯದ ವೈಷಮ್ಯ ಭಾವ- ಭಂಗಿಗಳನ್ನು ಹೆಚ್ಚು ವೇಷಭೂಷಣಗಳಬದಲಾವಣೆಯ ನೆರವಿಲ್ಲದೆಯೇ, ತಮ್ಮ ಕಲಾತ್ಮಕ ಅಭಿನಯದಿಂದಲೇ ಪ್ರದರ್ಶಿಸಿದರು. ಸನ್ನಿವೇಶಗಳನ್ನು ಅನುಸರಿಸಿ ಎಷ್ಟೆಷ್ಟು ಬೇಕೋ ಅಷ್ಟಷ್ಟು ಗಟ್ಟಿಯಾಗಿ, ಮೆಲ್ಲಗೆ ಮಾತನಾಡುತ್ತ, ತಮ್ಮ ಧ್ವನಿಯ ಏರಿಳಿತಗಳೊಂದಿಗೆ ಶೃಂಗಾರ, ಹಾಸ್ಯ, ಬೀಭತ್ಸ, ರೌದ್ರ, ಗಂಭೀರ, ಶಾಂತ ಇತ್ಯಾದಿ ಭಾವಗಳನ್ನು ಸಮಯೋಚಿತವಾಗಿ ಪ್ರದರ್ಶಿಸುತ್ತಿದ್ದಾಗ- ನಿರ್ದೇಶಕರು ಪಾತ್ರಗಳನ್ನು ಹೇಗೆ ಜೀವಂತಗೊಳಿಸಿದರೆಂಬುದು ಪ್ರೇಕ್ಷಕರಿಗೆ ಮನದಟ್ಟಾಯಿತು !

Yayati drama artists troupeಪಾತ್ರಧಾರಿಗಳೆಲ್ಲರ ವೇಷಭೂಷಣ, ವರ್ಣಾಲಂಕಾರ, ಸೂಚ್ಯ ಸರಳ ರಂಗ ಸಜ್ಜಿಕೆ ಸಮರ್ಪಕವಾಗಿತ್ತು. ನಾಟಕದ ತಂಡದವರು ಈ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಪಟ್ಟ ಶ್ರಮ ಸಾರ್ಥಕವಾಯಿತು. ಇಂಥದೊಂದು ಪ್ರಯೋಗ ನಡೆಯಿತೇ ಎಂಬುದು ಕರ್ನಾಟಕದಿಂದ ಹತ್ತು ಸಾವಿರ ಮೈಲಿಗಳ ದೂರದಲ್ಲಿ ಕುಳಿತು ಆನಂದಿಸಿದ ಸಭಿಕರಿಗೆ ನಂಬಲಸಾಧ್ಯವಾಗಿತ್ತು. ಪ್ರದರ್ಶನ ಬಹುಶಃ ಕರ್ನಾಟಕದಲ್ಲಿರುವ ವೃತ್ತಿ ಪರ(ಪ್ರೊಫೆಶನಲ್‌) ತಂಡದವರನ್ನೂ ದಂಗುಬಡಿಸುವಂತಿತ್ತು. ಇದೇ ನಾಟಕ ತಂಡದವರ ಹಿಂದಿನ ಪ್ರಯೋಗಗಳನ್ನು ನಾನು ನೋಡಿಲ್ಲ. ಆದರೆ ನೋಡಿದವರಿಂದ ಕೇಳಿ ತಿಳಿದ ವಿಷಯ ಇದು : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆಸಿದ ಈ ಪ್ರದರ್ಶನ, ಅಮೆರಿಕಾದಲ್ಲಿ ಹಲವೆಡೆ ನಡೆಸಿದ ಹಿಂದಿನ ಎಲ್ಲ ಪ್ರದರ್ಶಗಳಿಗಿಂತ ಅತ್ಯುತ್ತಮವಾದದ್ದು, ಪರಿಪೂರ್ಣವಾದದ್ದು !

ಸಾಮಾನ್ಯವಾಗಿ ಸಂಭಾವಿತ ಅಭಿಮಾನಿಗಳ ಸಂಯಮವನ್ನು ಪರೀಕ್ಷಿಸುವುದು- ಮೈಕಾಸುರನ ಹಾವಳಿ. ಪಾತ್ರಧಾರಿಗಳ ಮಾತೇ ಕೇಳದಾದಾಗ ಪ್ರೇಕ್ಷಕರ ಹರಟೆಗಳೇ ಪ್ರಧಾನವಾಗುತ್ತದೆ. ಇಲ್ಲಿ ಹಾಗಾಗಲಿಲ್ಲ. ಧ್ವನಿವ್ಯವಸ್ಥೆ ಬಹಳ ಚೆನ್ನಾಗಿತ್ತು. ಉತ್ತಮ ಧ್ವನಿವರ್ಧಕ ವ್ಯವಸ್ಥೆಯನ್ನು ಒದಗಿಸಿಕೊಟ್ಟ ವಿಜಯಕೊಟ್ರಪ್ಪ ಮತ್ತು ರವೀಂದ್ರ ಗೌಡರು ನಿಜಕ್ಕೂ ಅಭಿನಂದನಾರ್ಹರು. ಒಟ್ಟಾರೆ ಈ ಪ್ರದರ್ಶನ ಇಲ್ಲಿ ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿದ ನಮ್ಮ ಕನ್ನಡ ಸಂಘದ ಪದಾಧಿಕಾರಿಗಳಿಗೂ ನೇಪಥ್ಯದ ಹಿಂದೆ ನಿಸ್ಪೃಹರಾಗಿ ದುಡಿದ ಕಾರ್ಯಕರ್ತರಿಗೂ ಮೆಚ್ಚುಗೆ ಸಲ್ಲಬೇಕು.

ಇಷ್ಟು ಹೇಳಿ, ಒಂದು ಕೊನೇ ಮಾತು: ನಿಜವಾಗಿಯೂ ಪರಿತಪಿಸಬೇಕಾದವರು ಯಾರು ಗೊತ್ತೇ- ಕುಂಟು ನೆಪದಿಂದಲೋ, ಅಥವಾ ಆಲಸ್ಯಕ್ಕೆ ಮಾರು ಹೋಗಿಯೋ ಏನೋ ಆಗಿ ಇಂಥ ನಾಟಕ ನೋಡುವ ಅಪೂರ್ವ ಸ್ವರ್ಣಾವಕಾಶವನ್ನು ಕಳೆದುಕೊಂಡ ಗೈರು ಹಾಜರಾದ, ಈಗ ನಿರಾಸೆ ಪಡುತ್ತಿರುವ ಆ ಕೆಲವು ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರು!

ಪೂರಕ ಓದಿಗೆ...

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X