ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾವೇರಿ’ಯಲ್ಲಿ ಸಡಗರದ ರಾಜ್ಯೋತ್ಸವ-ದೀಪಾವಳಿ-ಮಕ್ಕಳ ದಿನಾಚರಣೆ

By Staff
|
Google Oneindia Kannada News

*ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌

Deepa Nruthya : Kaveri Mahileyaru‘ಹಲೋ, ಉಮಾ ಅವ್ರಾ? ನಾನು ಪ್ರತಿಮಾ ಮಾತಾಡ್ತಿರೋದು...’
‘ಹಲೋ ಪ್ರತಿಮಾ ಅವ್ರೇ, ನಾನು ಉಮಾ. ಏನ್ಸಮಾಚಾರ ?...’
‘ಏನಿಲ್ಲಾ , ಮೊನ್ನೆ ಕಾವೇರಿ ಫಂಕ್ಷನ್‌ ಮಿಸ್‌ ಮಾಡ್ಕೊಂಡೆ... ಹೇಗಿತ್ತು ಕೇಳೋಣಾ ಅಂತ ಫೋನ್‌ ಮಾಡ್ದೆ...’
‘ಅಯ್ಯೋ! ಯಾಕೆ, ಸ್ನೈಪರ್‌ನನ್ನು ಈಗಾಗ್ಲೇ ಹಿಡಿದುಕಟ್ಟಿಹಾಕಿದ್ರೂ ನಿಮ್ಗೆ ಇನ್ನೂ ಹೆದರಿಕೇನಾ? ಅಥವಾ ದಿನವಿಡೀ ಸುರಿದ ಮಳೆ ನಿಮ್ಮನ್ನು ಮನೆಯಲ್ಲೆ ಕಟ್ಟಿಹಾಕಿತೇ?... ನೀವೊಬ್ರು! ತುಂಬ ಚೆನ್ನಾಗಿತ್ತೂರಿ ಫಂಕ್ಷನ್‌. ನೀವೂ ಬರಬೇಕಿತ್ತು....’
‘ಸರಿ. ಹೇಳಿ, ಫೋನಲ್ಲೇ ನನಗೆ ಜಸ್ಟ್‌ ಒಂದು ‘ಜಿಸ್ಟ್‌’ ಕೊಡಿ.’
‘ಅದಕ್ಕೇನಂತೆ? ನಂಗೂ ಈಗ ಪುರುಸೊತ್ತು ಇದೆ. ಕೇಳಿ. ’

*

ಪ್ರ: ಕಾವೇರಿ ಫಂಕ್ಷನ್ಸ್‌ ಜನರಲೀ ಗ್ರ್ಯಾಂಡ್‌ ಆಗೇ ಇರ್ತಾವೆ. ಈ ಸಲದ್ದು?
ಉ: ವೆರಿ ಮಚ್‌. ರಾಜ್ಯೋತ್ಸವ, ದೀಪಾವಳಿ, ಮಕ್ಕಳ ದಿನಾಚರಣೆ- ತ್ರೀ-ಇನ್‌-ವನ್‌ ಕಂಬೈಂಡ್‌! ಅಂದ ಮೇಲೆ ಅದ್ದೂರಿಯಾಗಿರ್ಲಿಕ್ಕೇ ಬೇಕು!

ಪ್ರ: ಹಿಂದುಸ್ತಾನಿ ಸಂಗೀತ ಕಛೇರಿ ಇತ್ತಂತೆ?
ಉ: ಹೌದು. ಮ್ಯೂಸಿಕ್ಕೂ ಇತ್ತು, ಮ್ಯಾಜಿಕ್ಕೂ ಇತ್ತು. ಹೇಳ್ತೇನೆ ತಡೀರಿ. ಮೊದಲು ಮಕ್ಕಳ ಕಾರ್ಯಕ್ರಮದ ಬಗ್ಗೆ. ಏನ್‌ ಚಂದ ಅಂತೀರಾ? ‘ತಾರೆಗಳ ತೋಟದಿಂದ ಚಂದಿರ ಬಂದ...’ ಹಾಡಿಗೆ ಎಷ್ಟು ಚೆನ್ನಾಗಿ ಡ್ಯಾನ್ಸ್‌ ಮಾಡಿದ್ವು ಗೊತ್ತಾ ಪುಟ್ಟಪುಟ್ಟ ಮಕ್ಕಳು? ಅದೂ ಅಲ್ದೇ ‘ಫರ್ಸ್ಟ್‌ ಇಂಪ್ರೆಷನ್‌ ಇಸ್‌ ಬೆಸ್ಟ್‌ ಇಂಪ್ರೆಷನ್‌’ ಎಂದಂತೆ ಕಾರ್ಯಕ್ರಮದಲ್ಲಿ ಪ್ರಾರ್ಥನೆಯ ನಂತರ ಇದು ಮೊಟ್ಟಮೊದಲನೆಯ ಐಟಂ ಆದ್ದರಿಂದ ತೆರೆ ಸರಿದು, ವಿವಿಧ ವರ್ಣಗಳ ಉಡುಗೆತೊಡುಗೆಯಾಂದಿಗೆ ಹದಿನೈದು-ಇಪ್ಪತ್ತು ಮಕ್ಕಳು ತಾರೆ, ಚಂದ್ರಮ, ನೈದಿಲೆಗಳಂತೆ ಕಾಣಿಸಿಕೊಂಡಾಗ ಪ್ರೇಕ್ಷಕರೆಲ್ಲ ಭೇಷ್‌ ಎಂದರು. ಫೋಟೊ ತೆಗೆಯಲಿಕ್ಕೆ, ವಿಡಿಯೋ ರೆಕಾರ್ಡ್‌ ಮಾಡಲಿಕ್ಕೆ ದುಂಬಾಲು ಬಿದ್ದರು! ಈ ಮಕ್ಕಳಿಗೆಲ್ಲರಿಗೂ, ಮತ್ತು ಶ್ರದ್ಧೆ-ಸಹನೆಯಿಂದ ತಾಲೀಮು ನಡೆಸಿ ಮಕ್ಕಳ ಕಾರ್ಯಕ್ರಮ ನಿರ್ದೇಶಿಸಿದ ನಮ್ಮ ಸುಚರಿತಾ ಮುರಳೀಧರ್‌ ಅವರಿಗೂ ತ್ರೀ ಚೀರ್ಸ್‌ ಎನ್ನಬೇಕು!

ಪ್ರ: ಓ, ಪ್ರೋಗ್ರಾಂಗೆ ಒಳ್ಳೇ ಕಳೆ ಬಂದಿರಬೇಕು ಮಕ್ಕಳ ಡ್ಯಾನ್ಸ್‌ನಿಂದ! ಬೇರೆ ಏನು ಐಟಂಸ್‌ ಇದ್ವು ಮಕ್ಕಳದ್ದು?
ಉ: ಅವಳು, ಶ್ರದ್ಧಾ ಮುರಳೀಧರ್‌ ಅನ್ಬಿಟ್ಟು , ಜಸ್ಟ್‌ ಐದು ವರ್ಷದ ಹುಡುಗಿ. ಸಂಪಿಗೆ ಮರದ ಹಸಿರೆಲೆ ನಡುವೆ... ಮತ್ತು ಏಳು ಸ್ವರವು ಸೇರಿ ಸಂಗೀತವಾಯಿತು.... ಹಾಡುಗಳನ್ನು ಬ್ಯೂಟಿಫುಲ್ಲಾಗಿ ಹಾಡಿದಳು! ಕನ್ನಡದ ಸ್ಪಷ್ಟ ಉಚ್ಚಾರವನ್ನ ನೀವೂ ನಾನೂ ಈ ಬಾಲೆಯಿಂದ ಕಲಿಯಬೇಕು.

ಪ್ರ: ಕಾವೇರಿಯ ‘ಯುತ್‌ ಕಮಿಟಿ’ ಕೂಡ ತುಂಬ ಆಕ್ಟಿವ್‌ ಅಂತ ಕೇಳಿದ್ದೇನೆ. ಅವರಿಂದ ಸ್ಪೆಷಲ್‌ ಇತ್ತೇ ಏನಾದ್ರೂ?
ಉ: ಆಫ್‌ ಕೋರ್ಸ್‌! ಅಖಿಲ್‌ ಮತ್ತು ಅರ್ಪಿತ್‌ ರಾವ್‌ ಅವರ ‘ಡ್ಯಾನ್ಸ್‌-ಮ್ಯೂಸಿಕ್‌-ಮೆಡ್ಲೆ’. ಕನ್ನಡ, ಹಿಂದಿ, ಇಂಗ್ಲೀಷ್‌ ಸೇರಿದಂತೆ ವಿವಿಧ ಟ್ಯೂನ್‌ಗಳ, ಬೀಟ್‌ಗಳ ಸಂಗೀತ ಸಂಯೋಜನೆಗೆ ಈ ಇಬ್ಬರು ಸಹೋದರರಿಂದ ಸ್ಟೇಜ್‌ ಮೇಲೆ ಡ್ಯಾನ್ಸ್‌. ಅದೂ ತುಂಬ ಚೆನ್ನಾಗಿ ಬಂತು. ಒಂಥರಾ ‘ಇಂಟೆಗ್ರೇಷನ್‌’ ಮೆಸೇಜ್‌ ಈ ಮ್ಯೂಸಿಕ್‌-ಡ್ಯಾನ್ಸ್‌ನಲ್ಲಿತ್ತು. ‘ಅಖಿಲ’ಭಾರತದ ವಿವಿಧ ಸಂಗೀತ ನೃತ್ಯದ ಗುಚ್ಛವೊಂದು, ಕೊನೆಯಲ್ಲಿ ಪರದೆಯಲ್ಲಿ ಮೂಡಿಬಂದ ತ್ರಿವರ್ಣಧ್ವಜ-ಭಾರತ-ಕರ್ನಾಟಕ ನಕಾಶೆಗೆ ಕೈಮುಗಿದು ನಿಂತ ಈ ಮಾಸ್ಟರ್‌-ಡ್ಯಾನ್ಸರ್ಸ್‌ರಿಂದ ‘ಅರ್ಪಿತ’ವಾಯಿತು!

ಪ್ರ: ಅಖಿಲ್‌-ಅರ್ಪಿತ್‌ ಹೆಸರು ಬರುವಂತೆ ಒಳ್ಳೇ ನಾಟಕ ಶೈಲಿಯಲ್ಲಿ ಮಾತಾಡಿದ್ರಿ ನೀವು. ಈ ಸಲ ನಾಟಕ ಇರಲಿಲ್ವೇ?
ಉ: ಇಲ್ಲಾ, ಆದರೆ ಶಿವಶಂಕರ್‌ ಭಟ್‌ ಒಂದು ಒಳ್ಳೆಯ ಏಕಪಾತ್ರಾಭಿನಯ ಮಾಡಿ ತೋರ್ಸಿದ್ರು. ‘ಕರ್ಣನಿಗೆ ಕಡೆಗಾಲ’ ಅಂತ, ಮಹಾಭಾರತದಲ್ಲಿ ಕೃಷ್ಣ-ಕರ್ಣರ ಭೇಟಿಯ ಸನ್ನಿವೇಶವನ್ನು ಸುಂದರ, ಸ್ಪಷ್ಟ ಮತ್ತು ಹೃದಯಸ್ಪರ್ಶಿ ಸಂಭಾಷಣೆಯಾಂದಿಗೆ ಚೆನ್ನಾಗಿ ಅಭಿನಯಿಸಿದರು. ಕರ್ಣನ ಮಾತುಗಳು ತುಂಬಾನೇ ಮನಮುಟ್ಟುವಂತಿದ್ದುವು.

ಪ್ರ: ಅದ್ಸರಿ ಉಮಾ ಅವ್ರೇ. ಪ್ರೋಗ್ರಾಂಗೆ ಜನ ಎಷ್ಟು ಬಂದಿದ್ರು? ತುಂಬ ಮಂದಿ ಮಳೆಯಿಂದ ನನ್ನ ಹಾಗೆ ಚಕ್ಕರ್‌ ಹಾಕಿರಬೇಕು!
ಉ: ಅವ್ರಿಗೆಲ್ಲ ಮಳೆ ಒಂದು ನೆಪ. ಸೋಶಲೈಸ್‌ ಮಾಡ್ಬೇಕ್ರೀ. ಈ ದೇಶದಲ್ಲಿ ಹೀಗೆ ನಮಗೆಲ್ಲ ಒಟ್ಟಾಗಿ ಕಲೆತು ಒಂದಿಷ್ಟು ಸಮಯ ಕಳೆಯುವುದಕ್ಕೆ ಅವಕಾಶ ಸಿಗೋದೇ ಕಡಿಮೆ. ಅದನ್ನೂ ಉಪಯೋಗಿಸದಿದ್ರೆ? ಇದ್ರು, ಸುಮಾರು ಮುನ್ನೂರು ಜನ ಆಗಬಹುದೆಂದು ನನ್ನ ಅಂದಾಜು. ಸಣ್ಣ ಮಕ್ಕಳೂ ಇದ್ದರು ತುಂಬ. ಮ್ಯಾಜಿಕ್‌ ಶೋ ಬೇರೆ ಇತ್ತಲ್ಲ!

ಪ್ರ: ಹೂಂ, ಅದನ್ನೇ ಕೇಳೋಣ ಅಂತಿದ್ದೆ. ಹೇಗಿತ್ತು ಮ್ಯಾಜಿಕ್‌ ಶೋ?
ಉ: ಇಟ್‌ ವಾಸ್‌ ನೈಸ್‌. ಅವರ್ಯಾರೋ ಗೌತಮ್‌ ಘೋಷ್‌ ಅಂತ ಹೆಸರು. ಯಂಗ್‌ ಆಗೇ ಇದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜನಿಯರ್‌. ಜಸ್ಟ್‌ ಹಾಬಿ ಅಂತ ಮ್ಯಾಜಿಕ್‌ ಮಾಡ್ತಾರಂತೆ. ಕಾರ್ಡ್‌ ಟ್ರಿಕ್ಸ್‌, ರೋಪ್‌ ಟ್ರಿಕ್ಸ್‌, ಮ್ಯಾಜಿಕ್‌ ರಿಂಗ್ಸ್‌, ಎಲ್ಲ ಮಾಡಿ ತೋರ್ಸಿದ್ರು. ಸಾಬೂನಿನ ನೊರೆಯ ಗಾಳಿಗುಳ್ಳೆ ಇದ್ದದ್ದು ಕ್ರಿಸ್ಟಲ್‌ ಬಾಲ್‌ ಆಗಿ ಪಿಂಗ್‌ಪಾಂಗ್‌ ಬಾಲ್‌ ಆಗಿ ಒಂದಿದ್ದದ್ದು ಹತ್ತಾರಾಗಿ... ವ್ಹಾ ! ಕೆಲವೆಲ್ಲ ಟ್ರಿಕ್ಸ್‌ ಸೂಪರ್‌ ಆಗಿತ್ತೂರಿ. ಸಭೆಯಿಂದ ಪುಟ್ಟ ಮಕ್ಕಳನ್ನು ವೇದಿಕೆಗೆ ಕರೆಸಿ ಶೋದಲ್ಲಿ ಅವರನ್ನೂ ಇನ್‌ವಾಲ್ವ್‌ ಮಾಡಿದ್ರು. ಕೊನೆಯಲ್ಲಿ ಪರದೆಯ ಮೇಲೆ ‘ವರ್ಚ್ಯುವಲ್‌ ಫೈರ್‌ವರ್ಕ್ಸ್‌’ ಕೂಡ ತೋರಿಸಿದರು. ಅವರ ಒಂದು ಟ್ರಿಕ್‌ ಮಾತ್ರ ನನಗೂ ಗೊತ್ತಾಯಿತು ಬಿಡಿ!

ಪ್ರ: ಏನದು?
ಉ: ಒಂದು ಅಂಕೇನ ಮನಸಲ್ಲಿ ಊಹಿಸಲು ಹೇಳಿ, ಅದಕ್ಕೆ ಗುಣಾಕಾರ-ಭಾಗಕಾರ ಮಾಡ್ಸಿ ಅಂಕೆಗೆ ಇಂಗ್ಲೀಷ್‌ ಅಕ್ಷರಗಳನ್ನು ಹೊಂದಿಸಿ, ಆ ಅಕ್ಷರದಿಂದ ಆರಂಭವಾಗುವ ದೇಶದ ಹೆಸರು ಮತ್ತು ಮುಂದಿನ ಅಕ್ಷರದಿಂದ ಆರಂಭವಾಗುವ ಪ್ರಾಣಿಯ ಹೆಸರು ಸಭೆಯಲ್ಲಿದ್ದ ಎಲ್ಲ ಪ್ರೇಕ್ಷಕರೂ ಊಹಿಸಿದ್ದೂ ‘ಡೆನ್ಮಾರ್ಕ್‌’ ಮತ್ತು ‘ಎಲಿಫೆಂಟ್‌’ ಆಗಿರುವುದು!

ಪ್ರ: ಓ, ಅದು ನನಗೂ ಗೊತ್ತು ಬಿಡಿ. ಯಾವ ಅಂಕೆ ಊಹಿಸಿದರೂ ಗುಣಾಕಾರ-ಭಾಗಾಕಾರದಿಂದಾಗಿ ಅಕ್ಷರ ‘ಡಿ’ ಮತ್ತು ‘ಇ’ ಗಳೇ ಬರೋದು. ಹಾಗಾಗಿ ಡೆನ್ಮಾರ್ಕ್‌, ಎಲಿಫೆಂಟ್‌... ಅದೇ ತಾನೇ? ಓಕೆ, ಮ್ಯಾಜಿಕ್‌ ಆದ ಮೇಲೆ ನೆಕ್ಸ್ಟ್‌?
ಉ: ದೀಪೋತ್ಸವ! ನಮ್ಮ ಕಾವೇರಿ ಮಹಿಳೆಯರ ದೀಪನೃತ್ಯ. ಮಾರ್ವೆಲಸ್‌ ಐ ಸೇ! ಚಿಟ್ಟಿಬಾಬು ವೀಣಾವಾದನದ ತಿಲ್ಲಾನವೊಂದಕ್ಕೆ ದೀಪನೃತ್ಯವನ್ನು ಪ್ರತಿಭಾ ದೊಡ್ಮನಿ ಅವರ ನಿರ್ದೇಶನದಲ್ಲಿ ಕಾವೇರಿ ಲೇಡೀಸ್‌ ತುಂಬ ಚೆನ್ನಾಗಿ ಮಾಡಿದ್ರು. ಶಾರ್ಟ್‌ ಎಂಡ್‌ ಸ್ವೀಟ್‌ ಪ್ರೋಗ್ರಾಂ ಅದು.

ಪ್ರ: ಸ್ವೀಟ್‌ ಅಂದಾಗ ನೆನಪಾಯಿತು. ಊಟ ಹೇಗಿತ್ತು ? ಏನೆಲ್ಲ ವಿಶೇಷ ?
ಉ: ನಿಮಗೆ ಊಟದ್ದೇ ಚಿಂತೆ! ಇರಿ, ಇನ್ನೊಂದೇ ಒಂದು ಲಾಸ್ಟ್‌ (ಬಟ್‌ ನಾಟ್‌ ಲೀಸ್ಟ್‌) ಐಟಂ ಬಗ್ಗೆ ಹೇಳ್ತೀನಿ. ನಾಗರಾಜ ಹವಾಲ್ದಾರ್‌ ಅವರ ಹಿಂದುಸ್ತಾನಿ ಸಂಗೀತ ಕಛೇರಿ.

ಪ್ರ: ಈಗ ಯು.ಎಸ್‌ನಲ್ಲಿ ಟೂರ್‌ ಮಾಡ್ತಾ ಇದ್ದಾರೆ. ಬೆಂಗಳೂರಿಂದ ಬಂದಿರೋರು. ಕಿರಾನಾ ಘರಾನಾದ ಕಲಾವಿದ ಅವ್ರಾ? ಕೇಳಿದ್ದೇನೆ ಅವರ ಬಗ್ಗೆ ವೆಬ್‌ಸೈಟ್‌ ಕೂಡ ನೋಡಿದ್ದೇನೆ. ಚೆನ್ನಾಗಿತ್ತಾ ಕಛೇರಿ?
ಉ: ಮೆಲೋಡಿಯಸ್‌! ಅದೂ ಅಲ್ದೇ ಆಲಾಪ್‌-ವಿಲಂಬಿತ್‌ನಲ್ಲಿ ತೀನ್‌ತಾಲ್‌ ಅಂತೆಲ್ಲ ಸಾಕಷ್ಟು ತಾಳ್ಮೆ ಬೇಕಾಗುವ ಶಾಸ್ತ್ರೀಯ ಕಛೇರಿಗಿಂತ ಲಘುಶೈಲಿಯಲ್ಲಿ ಕನ್ನಡದ್ದೇ ಚಿರಪರಿಚಿತ - ಭಾಗ್ಯದ ಲಕ್ಷ್ಮಿ ಬಾರಮ್ಮಾ, ಹಸಿವಾದೊಡೆ, ಹೊನ್ನು ತಾ ಗುಬ್ಬಿ, ಅಕ್ಕ ಕೇಳವ್ವಾ ನಾನೊಂದ ಕನಸ ಕಂಡೆ... ಹೀಗೆ ಪುರಂದರದಾಸ, ಅಕ್ಕಮಹಾದೇವಿ ಇತ್ಯಾದಿಯವರ ಕೃತಿಗಳನ್ನು ಅವರು ಹಾಡಿದ್ದರಿಂದ ಚೆನ್ನಾಗಾಯ್ತು. ಆಕ್ಚುವಲಿ ನನಗೆ ಕರ್ನಾಟಕ್‌ ಶೈಲಿ ಲೈಕ್‌ ಆಗೋದು. ಹಿಂದುಸ್ತಾನಿ ಅಂದರೆ ಬೋರ್‌. ಆದರೆ ನನ್ನ ಆ ಭಾವನೆ ಅಳಿಸಿ, ಆಮೇಲೆ ಅಲ್ಲೇ ಹಾಲ್‌ ಹೊರಗಡೆ ಮಾರಾಟಕ್ಕಿದ್ದ ಅವರ ಒಂದು ಸಿ.ಡಿಯನ್ನು ನಾನು ಖರೀದಿಸುವ ಮಟ್ಟಿಗೆ ನನಗೆ ಇಷ್ಟ ಆಯಿತು ನಾಗರಾಜ್‌ ಅವರ ಕಾರ್ಯಕ್ರಮ!

ಪ್ರ: ಒಂದೂಕಾಲು ಗಂಟೆ ಕಚೇರಿ ಮುಗಿದಾಗ ರಾತ್ರೆ ಒಂಬತ್ತೂವರೆ ಆಗಿರಬೇಕು ಹಾಗಿದ್ರೆ. ಎಲ್ಲರೂ ಊಟಕ್ಕೆ ಹೋಗದೇ ಸಭಾಸದರಾಗೇ ಇದ್ದರೇ?
ಊ: ಸುಮಾರು ಮಂದಿ ಇದ್ದರು. ಕೆಲವರು ತುಂಬ ದೂರ ಡ್ರೈವ್‌ ಮಾಡಿ ವಾಪಸಾಗಬೇಕಾದವರು ಮೊದಲ ಬ್ಯಾಚ್‌ನಲ್ಲೇ ಊಟ ಮಾಡಿದ್ರು. ಒಂದೇ ಸಮನೆ ಊಟದ ಹಾಲ್‌ನಲ್ಲಿ ರಷ್‌ ಆಗೋದಕ್ಕಿಂತ ಇದೂ ಒಂದು ರೀತಿ ಒಳ್ಳೆಯದೇ ಆಯ್ತು ಬಿಡಿ. ನಾಗರಾಜ್‌ ಹವಾಲ್ದಾರ್‌ ಅವರ ಇನ್ನೊಂದು ದೊಡ್ಡಗುಣದ ಬಗ್ಗೆ, ವಂದನಾರ್ಪಣೆ ಸಲ್ಲಿಸಿದ ವಿಜಯೇಂದ್ರ ಅವ್ರು ಹೇಳಿದ್ರು - ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಕೊಡುಗೈ ದಾನಿಯಂತೆ ಹವಾಲ್ದಾರ್ರು. ಸ್ವತಃ ವಿಜಯೇಂದ್ರ ಅವರೇ ಒಬ್ಬ ಫಲಾನುಭವಿಗಳಂತೆ! ಇನ್‌ ಫ್ಯಾಕ್ಟ್‌, ನಾನವರ ಸಿ.ಡಿ ಖರೀದಿಸಿದ್ದಕ್ಕೆ ಇನ್ನೊಂದು ಕಾರಣ ಅದೇ. ಹಿ ಯೂಸಸ್‌ ಹಿಸ್‌ ಟ್ಯಾಲೆಂಟ್‌ ಫಾರ್‌ ಎ ಗುಡ್‌ ಕಾಸ್‌. (ಎಲ್ಲರೂ ಮಾಡುವಂತೆ ‘ಗುಡ್‌ ಕಾಸು’ಗೆ ಅಲ್ಲ!)

ಪ್ರ: ಅಲ್ಲಿಗೆ ಕಾರ್ಯಕ್ರಮ ಮುಗಿಯಿತು. ಇನ್ನಾದರೂ ಹೇಳ್ತೀರಾ ಊಟ ಹೇಗಿತ್ತಂತ?
ಉ: ಮಡ್ರಾಸ್‌ ಪ್ಯಾಲೇಸ್‌ ರೆಸ್ಟೋರೆಂಟ್‌ನಿಂದ ತರಿಸಿದ ವಿಶೇಷ ಊಟ. ಈ ಕಾವೇರಿಯವರು ಮಡ್ರಾಸ್‌ಪ್ಯಾಲೇಸನ್ನ ಯಾಕೆ ಪಾಟ್ರೋನೈಜ್‌ ಮಾಡ್ಬೇಕು? ಅಲ್ಲೇ ಪಕ್ಕದ ಕನ್ನಡಿಗರ ವುಡ್‌ಲ್ಯಾಂಡ್ಸ್‌ ಕಾಣಿಸುವುದಿಲ್ಲವೇ ಅವರಿಗೆ... ಅಂತ ನಾನು ಅಂದುಕೊಳ್ಳುವುದಿದೆಯಾದರೂ ನಮಗೆ ಯಾಕೆ ಆ ಉಸಾಬರಿ, ನಮಗೆ ರುಚಿರುಚಿಯಾದ ಊಟ ಸಿಕ್ಕಿದ್ರೆ ಆಯ್ತು ಅಂತ ಸುಮ್ನಿರ್ತೇನೆ. ಊಟ ಮಾತ್ರ ಹೈಕ್ಲಾಸಾಗಿತ್ತು ಪ್ರತಿಮಾ ಅವ್ರೇ. ಕಟ್ಲೆಟ್‌, ಪಲಾವ್‌, ಪರಾಠಾ, ಸಾಗು, ಮೊಸರನ್ನ, ಸ್ವೀಟ್‌ ಎಲ್ಲ ಚೆನ್ನಾಗಿತ್ತು. ನಿರೀಕ್ಷೆಗಿಂತ ಜನ ಬಂದಿದ್ದು ಸ್ವಲ್ಪ ಕಡಿಮೆಯಾದ್ರಿಂದ ಎಲ್ಲರಿಗೂ ಯಥೇಷ್ಟ ಭೋಜನ. ಹಾಗೆ ನೋಡಿದರೆ ಭೋಜನದೇರ್ಪಾಡಲ್ಲೂ ಕಾವೇರಿ ಸಂಘದವರು ಯಾವಾಗ್ಲೂ ಪರ್ಫೆಕ್ಟ್‌.

ಪ್ರ: ತುಂಬ ಥ್ಯಾಂಕ್ಸ್‌ ಉಮಾ. ಸೋ ನೈಸ್‌ ಆಫ್‌ ಯೂ. ಬರ್ತೀನಿ ನಾನಿನ್ನು. ಸ್ಕೂಲ್‌ಬಸ್‌ ಬಂತೂಂತ ಕಾಣಿಸ್ತದೆ. ಮಗಳಿಗೆ ಪರ್ಫೆಕ್ಟ್‌ ಸ್ನ್ಯಾಕ್ಸ್‌ ರೆಡಿ ಮಾಡಿಡದಿದ್ದರೆ ನನ್ನ ಬೆಂಡೆತ್ತಾಳೆ. ಇನ್ನೊಂದ್‌ ದಿನ ಮಾತಾಡ್ವಾ. ಬಾಯ್‌!
ಉ: ಬೈ, ಟೇಕ್‌ ಕೇರ್‌.

*

ಇದು ಫೋನ್‌ ಕದ್ದಾಲಿಕೆಯಲ್ಲ . ಸಮಾರಂಭದ ವರದಿಗೊಂದು ಹೊಸತನವಿರಲಿ ಎಂದು ಈ ಶೈಲಿ. ಪ್ರತಿಮಾ-ಉಮಾ ಕೇವಲ ಕಾಲ್ಪನಿಕ ವ್ಯಕ್ತಿಗಳು. ಪ್ರಶ್ನೆ ಮತ್ತು ಉತ್ತರಕ್ಕೆ ಶಾರ್ಟ್‌-ಫಾರ್ಮ್‌ ಆಗುವಂತೆ ಈ ಹೆಸರುಗಳೇ ವಿನಹ ಬೇರೇನೂ ಅಲ್ಲ.

ಕಳೆದ ವರ್ಷವಿಡೀ ಕಾವೇರಿ ಕನ್ನಡ ಸಂಘದ ಹೆಚ್ಚಿನ ಎಲ್ಲ ಕಾರ್ಯಕ್ರಮಗಳನ್ನೂ ಸವಿದ ನಾನು ಗಮನಿಸಿದಂತೆ ಪ್ರತಿಯಾಂದು ಕಾರ್ಯಕ್ರಮವೂ ವಿಭಿನ್ನ-ವಿಶಿಷ್ಟವಾಗಿರುವಂತೆ ಸಾಕಷ್ಟು ನಿಗಾವಹಿಸುತ್ತಾರೆ ಕಾವೇರಿ ಪದಾಧಿಕಾರಿಗಳು. ಲೇಟ್‌ ಸ್ಟಾರ್ಟ್‌ (ಮೊನ್ನೆಯ ಕಾರ್ಯಕ್ರಮದ ಅರ್ಧಗಂಟೆ ವಿಳಂಬ ಅನಿವಾರ್ಯ ಮತ್ತು ಸಮರ್ಥನೀಯ. ಒಳ್ಳೆಯ ಆಡಿಟೋರಿಯಂ ಈ ನವೆಂಬರ್‌ ತಿಂಗಳಲ್ಲಿ ಸಿಗಲು ತುಂಬ ಹೆಣಗಾಡಿರುವ ಕಾವೇರಿ ಕಾರ್ಯಕರ್ತರು ಕೊನೆಗೂ ಸಿಲ್ವರ್‌ಸ್ಪ್ರಿಂಗ್‌ನ ಕೆನಡಿ ಹೈಸ್ಕೂಲ್‌ ಸಭಾಂಗಣ ಪಡೆವಲ್ಲಿ ಯಶಸ್ವಿಯಾದರೂ ಆ ಸ್ಟೇಜ್‌ ಸಿದ್ಧಮಾಡುವಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು), ಮೈಕ್‌ಪ್ರಾಬ್ಲೆಂನಂತಹ (ಮೊನ್ನೆ ಈ ಹಾವಳಿ ಅಷ್ಟೇನೂ ಇರಲಿಲ್ಲ) ಸಣ್ಣಪುಟ್ಟ ವಿಷಯಗಳನ್ನು ಬಿಟ್ಟರೆ, ಉತ್ಕೃಷ್ಟ ದರ್ಜೆಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಕಾರ್ಯಕರ್ತರು, ಕಲಾವಿದರು ಕಾವೇರಿ ಬಳಗದಲ್ಲಿರುವುದರಿಂದ ಕಾವೇರಿಸಂಘದ ಪ್ರೋಗ್ರಾಂ ಬಗ್ಗೆ ವರದಿ ಬರೆಯುವುದೇ ಒಂದು ಆನಂದ.

ಡಿಸೆಂಬರ್‌ನಲ್ಲಿ ತಮ್ಮ ವರ್ಷಾವಧಿಯನ್ನು ಮುಗಿಸುವ ರವಿ ಡಂಕಣಿಕೋಟೆ ನೇತೃತ್ವದ ಕಾವೇರಿ ಕಾರ್ಯಕರ್ತರಿಗೆ, ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು ಮತ್ತು ಮುಂದಿನ ವರ್ಷದ ಪದಾಧಿಕಾರಿಗಳು ಈ ಪರಂಪರೆಯನ್ನು ಮುಂದುವರಿಸುವಂತೆ ಮುಂಗಡ ಶುಭ ಹಾರೈಕೆಗಳು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X