• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕಾಗೋ ಕನ್ನಡಿಗರನ್ನು ಮಂತ್ರಮುಗ್ಧರನ್ನಾಗಿಸಿದ ‘ಯಯಾತಿ’!

By Staff
|

*ಶ್ರೀವತ್ಸ ಜೋಶಿ, ವೆಸ್ಟ್‌ಮಾಂಟ್‌

Srivathsa Joshi, The Authorಹೆಪ್ಪುಗಟ್ಟುವ ಹಿಮ, ಕೊರೆಯುವ ಚಳಿ, ಗೋಸುಂಬೆಯಂತೆ ಕ್ಷಣಾರ್ಧದಲ್ಲಿ ಬದಲಾಗುವ ಹವಾಮಾನಕ್ಕೆ ಅನ್ವರ್ಥನಾಮವಾದ ಶಿಕಾಗೋದಲ್ಲಿ ಈಗ ಜೂನ್‌-ಜುಲೈ ತಿಂಗಳಲ್ಲಿ ಹಿತಕರ ಬೇಸಿಗೆಯಿದೆ. ಮೊನ್ನೆ ಜೂನ್‌ ಹದಿನೈದರ ಶನಿವಾರವೂ ಇಡೀ ದಿನ ಉಲ್ಲಾಸಕರ ವಾತಾವರಣ. ಅದಕ್ಕೆಂದೇ ಇರಬೇಕು, ಸಂಜೆ ಲೇಮಾಂಟ್‌ನ ರಾಮಾಲಯದ ಸಭಾಂಗಣದಲ್ಲಿ ನಡೆದ ನಾಟಕ ‘ಯಯಾತಿ’ಯನ್ನು ನೋಡಲು ಕನ್ನಡಿಗರೆಲ್ಲ ಉತ್ಸಾಹದಿಂದ ಬಂದರು ; ಅವರ ಉತ್ಸಾಹ, ನಿರೀಕ್ಷೆ ಹುಸಿಯಾಗದಂತೆ ಅಷ್ಟೇ ಹುಮ್ಮಸ್ಸಿನಿಂದ ನಾಟಕ ಪ್ರದರ್ಶಿಸಿದರು ದೂರದ ವಾಷಿಂಗ್ಟನ್‌ನಿಂದ ಬಂದಿದ್ದ ಅಲ್ಲಿನ ‘ಕಾವೇರಿ’ ಕನ್ನಡ ಸಂಘದ ನಾಟಕ ತಂಡದವರು. ಗಿರೀಶ್‌ ಕಾರ್ನಾಡರ ಮೇರುಕೃತಿಗಳಲ್ಲೊಂದಾದ ನಾಟಕ ‘ಯಯಾತಿ’, ಅದರ ಸಂಭಾಷಣೆಯಲ್ಲಿನ ಪ್ರತಿಯಾಂದು ಪದ, ಅದರ ಅಂತಸತ್ವವನ್ನು ಒಂದಿನಿತೂ ಧಕ್ಕೆಯಾಗದಂತೆ ರಂಗಕ್ಕಿಳಿಸಿದ ವಾಷಿಂಗ್ಟನ್‌ ಕಲಾವಿದರ ಪ್ರತಿಭೆ, ನಾಟಕದ ಒಂದೊಂದು ದೃಶ್ಯವನ್ನೂ ತದೇಕಚಿತ್ತದಿಂದ ಕುಳಿತು ಆಸ್ವಾದಿಸಿದ ಸಭಿಕರ ಆಸಕ್ತಿ , ನಾಟಕ ಮುಗಿದ ನಂತರ ಎಲ್ಲರೂ ಸೇರಿ ಸವಿದ ಭೋಜನ- ಈ ಎಲ್ಲದಕ್ಕೂ ಒಂದೇ ವಿಶೇಷಣ ಪದ ಸಾಕು- ‘ಪವರ್‌ಫುಲ್‌’!

ಈ ಹಿಂದೆ ಅಂದರೆ ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಮುಂಬಯಿಯಲ್ಲಿ ಸಿ.ಆರ್‌.ಸಿಂಹ ನಿರ್ದೇಶನದಲ್ಲಿ ಗಿರೀಶ್‌ ಕಾರ್ನಾಡರ ‘ತುಘಲಕ್‌’ ನಾಟಕವನ್ನು ನಾನು ನೋಡಿದ್ದೆ . ಅದರಲ್ಲಿ ಸಿ.ಆರ್‌.ಸಿಂಹ, ಲೋಕೇಶ್‌ ಇತ್ಯಾದಿ ಗುಬ್ಬಿ ಕಂಪನಿಯಲ್ಲಿ ಪಳಗಿದ ವೃತ್ತಿಪರ ಕಲಾವಿದರು. ಇಲ್ಲಾದರೋ ಮನೋಹರ ಕುಲಕರ್ಣಿಯವರ ನಿರ್ದೇಶನದಲ್ಲಿ ಇವರೆಲ್ಲ ಹವ್ಯಾಸಿ hobby ಕಂಪನಿಯವರು! ಆದರೆ, ಭಲೇ! ಅವತ್ತಿನ ಆ ನಾಟಕ ಪ್ರದರ್ಶನ ಮತ್ತು ಮೊನ್ನೆಯ ಈ ನಾಟಕ ಪ್ರದರ್ಶನ ಯಾವ ಅಂಶದಲ್ಲೂ ಒಂದಕ್ಕಿಂತ ಒಂದು ಕಡಿಮೆಯಿಲ್ಲ ! ಬಹುಶಃ ಕಾರ್ನಾಡರ ನಾಟಕಗಳ ಗುಟ್ಟೇ ಅದು. ಪ್ರತಿಯಾಂದು ಪಾತ್ರವೂ ಕಲಾವಿದನಲ್ಲಿ ‘ಆವಾಹನೆ’ಯಾಗಿ ಬಿಡುತ್ತದೆ. ಇಲ್ಲಿ ಯಾವೊಂದು ಪಾತ್ರವೂ ಸಣ್ಣದಲ್ಲ . ಕಥೆಯ ಮುನ್ನಡೆಯಲ್ಲಿ ಎಲ್ಲ ಸಮಭಾಗಿಗಳು. ಗಾಢ ಅರ್ಥ ತುಂಬಿಕೊಂಡ ಸಂಭಾಷಣೆಯನ್ನು ಅಷ್ಟೇ ಭಾವನಾತ್ಮಕವಾಗಿ ಉಸುರುವಲ್ಲಿ ಎಲ್ಲ ನಿಸ್ಸೀಮರು. ಮಾತುಗಳೆಲ್ಲ ಸಾಹಿತ್ಯಿಕ ದೃಷ್ಟಿಯಿಂದ ಶ್ರೀಮಂತವಾಗಿರುವ ಅಣಿಮುತ್ತುಗಳು.

‘ಯಯಾತಿ’ ಮಹಾಭಾರತಕ್ಕಿಂತಲೂ ಪೂರ್ವದ ಪೌರಾಣಿಕ ಕಥೆ. ಅಮರತ್ವ ಗಳಿಸಲು ಮನುಷ್ಯತ್ವ ಮೌಲ್ಯಗಳನ್ನೆಲ್ಲ ಗಾಳಿಗೆ ತೂರಿ ನಂತರ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಕೊಳ್ಳುವ ರಾಜ ಯಯಾತಿ. ತನ್ನ ಪೂರ್ವಜರು ತುಳಿದ ಹಾದಿಯಲ್ಲಿ ಹೋಗಲಿಚ್ಛಿಸದ ಅವನ ಯುವರಾಜ ಪುರು, ಬಿಡಿಸಲಾರದ ಒಗಟಿನಂತಿರುವ ಶರ್ಮಿಷ್ಠೆ, ಅವಳಿಂದ ಬಾವಿಗೆ ದೂಡಲ್ಪಟ್ಟ ಅಪಮಾನದಿಂದ ಉರಿವ ದೇವಯಾನಿ, ‘ಸಂಶಯ ಪಿಶಾಚಿ’ ಗಂಡನನ್ನು ಕಳಕೊಂಡ ಕೆಲಸದಾಕೆ ಸ್ವರ್ಣರೇಖೆ, ಚಂದ್ರವಂಶದ ಉದ್ಧಾರದ ಕನಸುಳ್ಳ ಪುರುವಿನ ನವವಧು ಚಿತ್ರಲೇಖೆ- ಹೀಗೆ ಎಲ್ಲ ಪಾತ್ರಗಳೂ ಪ್ರಬಲ. ಆ ಪಾತ್ರಗಳನ್ನು ನಿರ್ವಹಿಸಬೇಕಾದ ಮತ್ತು ನಿರ್ವಹಿಸಿದ ರೀತಿಯೂ ಅಷ್ಟೇ ಪ್ರಬಲ.

ಸಂಭಾಷಣೆ, ಅಭಿನಯ ಚೆನ್ನಾಗಿತ್ತು ಎಂದು ಮತ್ತೆ ಮತ್ತೆ ಬರೆಯುವುದಕ್ಕಿಂತ ಒಂದಿಷ್ಟು ಸ್ಯಾಂಪಲ್‌ಗಳನ್ನು ನೀಡಿದರೆ ನಿಮಗೂ ನಾಟಕದ ಕೆಲ ತುಣುಕುಗಳನ್ನು ಕೇಳಿದ ಅನುಭವವಾಗುತ್ತದೆ. ನಾಟಕ ನೋಡಿದವರು ಈ ವರದಿಯನ್ನು ಓದುವವರಾದರೆ ಅವರಿಗೆ ಮತ್ತೆ ನೆನಪಾಗುತ್ತದೆ. ಹಾಗಾಗಿ ನನಗೆ ತುಂಬ ಮೆಚ್ಚುಗೆಯಾದ ಕೆಲವು ಡಯಲಾಗ್‌ಗಳನ್ನು ನೋಟು ಮಾಡಿಟ್ಟು ಇಲ್ಲಿ ಬರೆದಿದ್ದೇನೆ.

  • ‘... ಇದು ಪೂರ್ವಜರ ಕತೆಯಾದರೂ ಅದನ್ನು ನೋಡುವಾಗ ನಾವು ಕಾಣುವ ನಮ್ಮದೇ ಪ್ರತಿಬಿಂಬವನ್ನು ಅದರದೇ ಭಾಗವೆಂದು ಸ್ವೀಕರಿಸುವುದೂ ನಮ್ಮ ಹೊಣೆ... (ಸೂತ್ರಧಾರ)’
  • ‘... ನಾನು ಸ್ವಚ್ಛಂದ ಸರೋವರದಲ್ಲಿ ಕಲ್ಲನ್ನು ಮಾತ್ರ ಒಗೆಯಬಲ್ಲೆ , ಅದೆಬ್ಬಿಸಿದ ಅಲೆಗಳ ಮೇಲೆ ನನ್ನ ಅಧಿಕಾರವಿಲ್ಲ ... ಮನುಷ್ಯನ ಅಸ್ತಿತ್ವ ಅವನ ಮನುಷ್ಯತ್ವದಲ್ಲಿಲ್ಲ , ಅದರ ಅಭಾವದಲ್ಲಿದೆ... (ಶರ್ಮಿಷ್ಠೆ)’
  • ‘... ಪರಿಸ್ಥಿತಿಯಿಂದ ಓಡಿದರೂ ಮನಸ್ಸಿನಿಂದ ಓಡಲಿಕ್ಕಾಗುವುದಿಲ್ಲ ದೇವೀ... (ಸ್ವರ್ಣಲತೆ)’
  • ‘... ನಿನಗಿನ್ನೂ ಮನುಷ್ಯನ ಗುಣ ಸಂಪೂರ್ಣ ಅರಿವಾಗಿಲ್ಲ . ಸೂರ್ಯನ ತೇಜದಲ್ಲಿ ಆಗದ ಕೆಲಸ ಸುವರ್ಣ ನಾಣ್ಯಗಳ ಪ್ರತಿಬಿಂಬಿತ ಕಾಂತಿಯಲ್ಲಾಗುತ್ತದೆ... (ಯಯಾತಿ)’
  • ‘... ನಾನು ಹುಟ್ಟಿದ್ದೇನೆ, ನಿಮ್ಮ ಉಜ್ವಲ ಭವಿತವ್ಯ ಇನ್ನೂ ಹುಟ್ಟಿಲ್ಲ. ಇನ್ನೂ ಊದಬೇಕಾಗಿರುವ ನೀರು-ಗುಳ್ಳೆಗಾಗಿ ಅಸ್ತಿತ್ವವನ್ನು ನೀರು ಮಡುವುದೇ? ’...(ಚಿತ್ರಲೇಖೆ)
  • ‘... ಒಂದು ಜನ್ಮದಲ್ಲಿ ಕಲಿಯದಿದ್ದುದನ್ನು ಒಂದು ದಿನದಲ್ಲಿ ಕಲಿಯುವ ಪ್ರಸಂಗ ಬಂತು.. (ಯಯಾತಿ)’
  • ‘... ಸಾಮಾನ್ಯ ಮನುಷ್ಯನಿಗೆ ಸಾಮಾನ್ಯತೆ ಸಾಕು. ಕ್ಷುದ್ರತೆ, ಮತ್ಸರ-ದ್ವೇಷ, ಕ್ಷುಲ್ಲಕತೆಯಲ್ಲಿ ಸಿಗುವ ಆನಂದವೇ ಸಾಕು. ದೈವಿಕತೆ ಕಲ್ಲಿನಂತೆ. ಪೂಜಿಸಲಿಕ್ಕೆ ಅಡ್ಡಿಯಿಲ್ಲ, ಮೆರವಣಿಗೆ ಮಾಡಲಿಕ್ಕಡ್ಡಿಯಿಲ್ಲ ಹೊರತು ಕುತ್ತಿಗೆಯಲ್ಲಿ ಧರಿಸಲಿಕ್ಕಾಗುತ್ತದೆಯೆ?.. (ಪುರು)’

- ಹೀಗೆ ಅರ್ಥ ಮಾಡಿಕೊಂಡಷ್ಟೂ ಇನ್ನೂ ಇನ್ನೂ ಅರ್ಥ ಹೊರಸೂಸುವ ಸಂಭಾಷಣೆ. ಮಂದವಾದ ಬೆಳಕಿನಲ್ಲಿ ಹಣತೆಯನ್ನೆತ್ತಿ ಆರತಿ ಮಾಡುವ ನೆಪದಲ್ಲಿ ತನ್ನ ಗಂಡ ಪುರುವಿನ ತೇಜವನ್ನು ಮನಸಾರೆ ನೋಡಬಯಸಿದ್ದ ಚಿತ್ರಲೇಖೆ, ಆಗ ತಾನೆ ಏಕಾಏಕಿ ಮುದುಕನಾಗಿಬಿಟ್ಟಿದ್ದ ಪುರುವಿನ ಮುಖ ಕಂಡು ಮಾಡುವ ಚೀತ್ಕಾರ ಅಭಿನಯದ ‘ಹೈಲೈಟ್‌’ ಎನ್ನಬಹುದು.

ನಾಟಕದಲ್ಲಿ ಸೂತ್ರಧಾರನ ಪಾತ್ರ ಮತ್ತು ನಾಟಕದ ನಿರ್ದೇಶನ- ಮನೋಹರ ಕುಲಕರ್ಣಿ, ಯಯಾತಿ- ಸಂಜಯ ರಾವ್‌, ದೇವಯಾನಿ- ಸುಮಾ ಮುರಲೀಧರ್‌, ಶರ್ಮಿಷ್ಠೆ - ಭಾರತಿ ತ್ಯಾಗರಾಜ್‌, ಪುರು- ರವಿ ಹರಪ್ಪನಹಳ್ಳಿ, ಚಿತ್ರಲೇಖೆ- ಮೀನಾ ರಾವ್‌, ಸ್ವರ್ಣಲತೆ- ಶೈಲಜಾ ಗುಂಡೂರಾವ್‌, ಸಂಗೀತ ಮತ್ತು ನಿರ್ಮಾಣ- ಡಾ।ಬಿ.ಎಸ್‌.ತ್ಯಾಗರಾಜ್‌, ಬೆಳಕು- ಮಾಯಾ ಹರಪ್ಪನಹಳ್ಳಿ, ವರ್ಣಾಲಂಕಾರ-ಜಮುನಾ ಶ್ರೀನಿವಾಸ್‌. ಈ ತಂಡದಲ್ಲಿ ಮನೋಹರ-ವಿಜಯಾ ಕುಲಕರ್ಣಿ, ಸಂಜಯ- ಮೀನಾ ರಾವ್‌, ರವಿ- ಮಾಯಾ ಹರಪ್ಪನಹಳ್ಳಿ, ಭಾರತಿ- ಡಾ।ಬಿ.ಎಸ್‌.ತ್ಯಾಗರಾಜ್‌- ಇತ್ಯಾದಿ ‘ದಂಪತಿ’ ಕಲಾವಿದರು! ಅಂದರೆ ಅವರ ಮನ-ಮನೆ ಎರಡರಲ್ಲೂ ಕಲೆ ಮೇಳೈಸಿದೆ ಎಂದಾಯಿತು! ಪ್ರಾಯಶಃ ಈ ತಂಡದ ‘ಟೀಮ್‌ವರ್ಕ್‌’ಗೆ ಪೋಷಕ ಅಂಶಗಳಲ್ಲಿ ಇದೂ ಒಂದು. ಅಂದಹಾಗೆ, ಇದೇ ತಂಡದಿಂದ ಇದೇ ‘ಯಯಾತಿ’ ನಾಟಕ ಮುಂದಿನ ಸೆಪ್ಟಂಬರ್‌ನಲ್ಲಿ ಸ್ಯಾನ್‌ ಹೋಸೆ (ಕ್ಯಾಲಿಫೋರ್ನಿಯಾ)ದಲ್ಲಿ ಪ್ರದರ್ಶನಗೊಳ್ಳುವುದಿದೆಯಂತೆ. ಅಲ್ಲಿನ ಕನ್ನಡಾಭಿಮಾನಿಗಳಿಗೆ ನನ್ನ ಕಿವಿಮಾತು: ‘ಇದನ್ನು ಮಿಸ್‌ ಮಾಡಬೇಡಿ’ !

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ವಿದ್ಯಾರಣ್ಯ ಕನ್ನಡ ಕೂಟದ ಕಾರ್ಯಕಾರೀ ಸದಸ್ಯರೆಲ್ಲರೂ, ಮುಖ್ಯವಾಗಿ ರೋಹಿಣಿ ಉಡುಪ ಮತ್ತು ಅಧ್ಯಕ್ಷ ಜಯರಾಂ ಅಭಿನಂದನಾರ್ಹರು. ಸಂಘದ ವತಿಯಂದ ಇದು ಒಂದು ‘ಚಾರಿಟೇಬಲ್‌ ಫಂಡ್‌ ರೈಸಿಂಗ್‌’ ಕಾರ್ಯಕ್ರಮವಾಗಿತ್ತು . ಸಭೆಯಲ್ಲೇ ಇಬ್ಬರು ದಾನಿಗಳು ತಲಾ 5 ಸಾವಿರ ಡಾಲರ್‌ ಮೊಬಲಗನ್ನು ದತ್ತಿನಿಧಿಗೆ ದೇಣಿಗೆ ನೀಡಿದ್ದು ಅಲ್ಲದೆ ಅನಾಮಧೇಯರಾಗಿ ಉಳಿಯಬಯಸಿದ್ದು ಪ್ರಶಂಸನೀಯ.

ಆಕರ್ಷಕ ರೇಷ್ಮೆ ಸೀರೆ, ಗಣೇಶ ವಿಗ್ರಹ, ಸೀ.ಡಿ ಡಿಸ್ಕ್‌ಮ್ಯಾನ್‌ ಇತ್ಯಾದಿ ಬಹುಮಾನಗಳಿದ್ದ ಲಕ್ಕಿಡಿಪ್‌ ಡ್ರಾ ಬೇರೆ ಇತ್ತು ಮತ್ತು ಕಾರ್ಯಕ್ರಮಕ್ಕೆ ಒಂದು ರೀತಿಯ ಮೋಜು-ಮಜಾ ನೀಡಿತು! ನಾಟಕ ಆರಂಭವಾಗುವ ಮೊದಲು ಸಮೋಸಾ-ಮಿಕ್ಸ್ಚರ್‌-ಕಾಫಿ, ನಾಟಕ ಪ್ರದರ್ಶನದ ನಂತರ ಅಚ್ಚ ಕರ್ನಾಟಕ ಶೈಲಿಯ ಅಡುಗೆಯ ಊಟ, ಜಿಲೇಬಿ- ಎಲ್ಲ ಸೊಗಸಾದ ಏರ್ಪಾಡು.

ಇಷ್ಟು ಅಂದವಾದ ಕಾರ್ಯಕ್ರಮಗಳು ನಡೆಯುತ್ತವೆಯೆಂಬ ಭರವಸೆ ಸಿಕ್ಕರೆ ಹೆಚ್ಚುಹೆಚ್ಚು ಮಂದಿ ಸಂಘಟನೆಯ ಸದಸ್ಯರಾಗುತ್ತಾರೆ. ಒಳ್ಳೆಯ ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನಿಟ್ಟು ‘ಫಂಡ್‌ ರೈಸಿಂಗ್‌’ ಮಾಡಿದರೆ ಸಾಕಷ್ಟು ಪ್ರೋತ್ಸಾಹ ಸಿಗುತ್ತದೆ. ಹೆಚ್ಚು ಚಟುವಟಿಕೆಗಳು ನಡೆಯುತ್ತವೆ. ಕಾರ್ಯಕ್ರಮಗಳು, ಯೋಜನೆಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ. ತನ್ಮೂಲಕ ಕನ್ನಡದ ಮತ್ತು ಅರ್ಹ ಕನ್ನಡಿಗರ ಪೋಷಣೆಯಾಗುತ್ತದೆ. ಹಾಗೇ ಆಗಲಿ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X