ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ಶತಮಾನದ ಕನ್ನಡ ಸಾಹಿತ್ಯ ಪ್ರಾಕಾರಗಳು-ಒಂದು ಪಕ್ಷಿನೋಟ

By Staff
|
Google Oneindia Kannada News

*ಎಂ. ಎನ್‌. ಪದ್ಮನಾಭ ರಾವ್‌, ಮಿಲ್ಪಿಟಾಸ್‌

Padmanabha Rao, The Authorಕವನ ಮತ್ತು ಸಾಹಿತ್ಯ ಕಳೆದ ಶತಮಾನದಲ್ಲಿ ಅನೇಕ ಬದಲಾವಣೆಯನ್ನು ಕಂಡಿದೆ. ಹಲವಾರು ಉತ್ತಮ ಕವಿಗಳನ್ನು, ಕೃತಿಗಳನ್ನು ಕನ್ನಡ ಜಗತ್ತಿಗೆ ಪರಿಚಯಿಸಿವೆ. ಈ ನಿಟ್ಟಿನಲ್ಲಿ ಕವನ ಸಾಹಿತ್ಯದ ಬೆಳವಣಿಗೆಯನ್ನು ಕನ್ನಡ ಸಾಹಿತ್ಯಕ ಪಂಥಗಳಲ್ಲಿ ಗುರುತಿಸುವ ಹಾಗೂ ಪರಿಚಯಿಸುವ ಪ್ರಯತ್ನ ಇಲ್ಲಿದೆ.

ಕಳೆದ ಶತಮಾನದಲ್ಲಿ, ಪುರಾತನ ಕೆಲವು ಸಾಹಿತ್ಯಕ ಪ್ರಾಕಾರಗಳನ್ನು ಬಿಟ್ಟರೆ ತಟ್ಟನೆ ನೆನಪಿಗೆ ಬರುವುದು ನವೋದಯ ಮತ್ತು ನವ್ಯ ಸಾಹಿತ್ಯ ಪಂಥಗಳು. ಕಳೆದ ಶತಮಾನಕ್ಕೂ ಹಿಂದೆ ಕವನ ರಚನೆ ಬಹಳ ಪ್ರಾಸಬದ್ಧವಾಗಿ ಇತ್ತು. ಆದರೆ ನವೋದಯ, ನವ್ಯ ಮತ್ತಿತರ ಸಾಹಿತ್ಯ ಕೊಡುಗೆಗಳು ಇವೆರಡನ್ನು ಬಿಟ್ಟು ಸ್ವಲ್ಪ ವಿಶಿಷ್ಟ ರೀತಿಯಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗಿತು.

1. ನವೋದಯ ಸಾಹಿತ್ಯ

ನವೋದಯ ಅಂದರೆ ಹೊಸ ಉದಯ. ಇದು ಸಾಮಾಜಿಕ ಬದುಕನ್ನೇ ಒಳಗೊಂಡಂತಹ ಸಾಹಿತ್ಯ ಪ್ರಾಕಾರ. ಈ ಪದ ಆಂಗ್ಲ ಭಾಷೆಯ ರೋಮ್ಯಾಂಟಿಕ್‌ ಎಂಬ ಪದಕ್ಕೆ ಸಂವಾದಿಯಾಗಿ ಬಳಕೆಯಾಗುತ್ತದೆ. ಈ ಪ್ರಾಕಾರವನ್ನು ಬಿ.ಎಂ.ಶ್ರೀ ಅವರ ಇಂಗ್ಲೀಷ್‌ ಗೀತೆಗಳಿಂದ ಆರಂಭ ಮಾಡಿ, ಪ್ರಗತಿ ಶೀಲ ಕಾಲದವರೆಗೆ ಗುರುತಿಸಬಹುದು.

ಹೊಸ ಬಗೆಯ ಕಾವ್ಯ, ಕತೆ, ಕಾದಂಬರಿ, ಪ್ರಬಂಧ ಇತ್ಯಾದಿಯನ್ನು ನೀಡಿದ್ದು ಈ ನವೋದಯ ಸಾಹಿತ್ಯ. ನಿಸರ್ಗಕ್ಕೆ ಪ್ರತಿಕ್ರಿಯೆ ಮತ್ತು ಆಧ್ಯಾತ್ಮಿಕತೆಯ ಕಾಳಜಿಗಳು ಈ ಪಂಥದ ಕಾವ್ಯಗಳಲ್ಲಿ ಮುಖ್ಯವಾದವು. ಭಾವಗೀತೆ ಈ ಕಾಲದ ಪ್ರಮುಖ ಅಭಿವ್ಯಕ್ತಿ ಪ್ರಾಕಾರವಾಯಿತು. ಇದರೊಳಗೆ ಸುನೀತ, ಶೋಕಗೀತೆ, ಪ್ರಗಾಥ, ಕಥನಕಾವ್ಯ, ಖಂಡಕಾವ್ಯ, ಮಹಾಕಾವ್ಯ ಮುಂತಾದ ಹಲವಾರು ಹೊಸ ಪ್ರಾಕಾರಗಳ ರಚನೆಗಳಾದವು.

ಗೋವಿಂದ ಪೈ, ಡಿ.ವಿ.ಜಿ, ಪಂಜೆ, ಎಸ್‌.ಜಿ. ನರಸಿಂಹಾಚಾರ್‌, ಹಟ್ಟಿಯಂಗಡಿ ನಾರಾಯಣ ರಾಯ, ಶಾಂತಕವಿ, ಬೇಂದ್ರೆ, ಮಾಸ್ತಿ, ಕುವೆಂಪು, ಪು.ತಿ.ನ, ಕೆ.ಎಸ್‌. ನರಸಿಂಹ ಸ್ವಾಮಿ ಮುಂತಾದವರು ಭಾವಗೀತೆಯನ್ನು ಬಳಸಿಕೊಂಡು ಬದುಕಿನ, ಸಾಮಾಜಿಕ ಸಂದರ್ಭಗಳ ತು-ಯ್ತಗಳನ್ನು ಅಭಿವ್ಯಕ್ತಿಸಿದರು.

2. ಪ್ರಗತಿಶೀಲ ಸಾಹಿತ್ಯ

ಆಗಿನ ತರುಣ ಜನಾಂಗದ ಕೊಡುಗೆ. ವಿದೇಶದಿಂದ ಹಿಂದಿರುಗಿದ ಯುವ ಲೇಖಕರಿಂದ ಬಂದ ಸಾಹಿತ್ಯಿಕ ಪ್ರಾಕಾರ. ಶ್ರೀರಂಗ, ನಿರಂಜನ, ವಿ.ಎಂ. ಇನಾಂದಾರ್‌ ಹಾಗೂ ಕೃಷ್ಣಕುಮಾರ ಕಲ್ಲೂರ, ಅನಕೃ, ಕುಮಾರ ವೆಂಕಣ್ಣ ಮೊದಲಾದ ಸಾಹಿತಿಗಳು ಈ ಪಂಥವನ್ನು ಕಟ್ಟಿ, ಬೆಳೆಸಿ ಪೋಷಿಸಿದರು. ಅಡಿಗರ ಕಟ್ಟುವೆವು ನಾವು, ರಾಮಚಂದ್ರ ಶರ್ಮರ ಹೃದಯ ಗೀತ ಪ್ರಮುಖ ಸಂಕಲನಗಳು. ಈ ಕವನ ಸಂಕಲನಗಳಲ್ಲಿ ಪ್ರಗತಿಪರ ಧೋರಣೆಯನ್ನು ಕಾಣಬಹುದು. ಆದರೆ ಅಡಿಗ, ರಾಮಚಂದ್ರ ಶರ್ಮ, ಗಂಗಾಧರ ಚಿತ್ತಾಲ, ಸು.ರಂ. ಎಕ್ಕುಂಡಿ ಮುಂತಾದವರು ನವ್ಯಕಾವ್ಯದ ಕಡೆಗೆ ತಿರುಗಿದ್ದರಿಂದ ಪ್ರಗತಿಶೀಲ ಕಾವ್ಯ ಬೆಳೆಯಲಿಲ್ಲ.

3. ನವ್ಯ ಸಾಹಿತ್ಯ

ನವ್ಯ ಅಂದರೆ ಹೊಸದು. ಆಂಗ್ಲ ಭಾಷೆಯ ‘ಮಾಡರ್ನಿಸಂ’ ಎಂಬುದಕ್ಕೆ ಸಂವಾದಿಯಾಗಿ ಈ ಪದವನ್ನು ಪಾರಿಭಾಷಿಕವಾಗಿ ಬಳಸಲಾಗುತ್ತದೆ. ಈ ಹಂತದಲ್ಲಿ ಪಾಶ್ಚಾತ್ಯ ಆಧುನಿಕ ಕಾವ್ಯದ ಎಜ್ರಾಪೌಂಡ್‌, ಟಿ.ಎಸ್‌. ಏಲಿಯಟ್‌ ಮುಂತಾದವರ ಪ್ರಭಾವ ಕಾಣುತ್ತೇವೆ. ಗೋಪಾಲಕೃಷ್ಣ ಅಡಿಗರು ಈ ಪಂಥವನ್ನು ತಮ್ಮ ಕಾವ್ಯದ ಮುಖ್ಯ ಕಾಳಜಿಯನ್ನಾಗಿಸಿಕೊಂಡವರು. ಇವರ ಕೃತಿಗಳಾದ ವರ್ಧಮಾನ, ಭೂಮಿಗೀತ, ಚಂಡೆ ಮದ್ದಳೆ, ದೆಹಲಿಯಲ್ಲಿ, ಬತ್ತಲಾರದ ಗಂಗೆ, ಸುವರ್ಣ ಪುತ್ಥಳಿ ಮುಂತಾದ ಕೃತಿಗಳಲ್ಲಿ ನವ್ಯತೆಯನ್ನು ಕಾಣಬಹುದು.

4. ದಲಿತ ಸಾಹಿತ್ಯ

ಇದು ಒಂದು ಜನಾಂಗೀಯ ಸಾಹಿತ್ಯ. ಅವಮಾನಿತ ಅಕ್ಷರಸ್ಥ ಸಮುದಾಯವೊಂದು, ತಮ್ಮ ಕೇರಿಯ, ಪ್ರದೇಶದ ಭಾಷೆಯನ್ನು ಉಪಯೋಗಿಸಿಕೊಂಡು, ಅವಮಾನ ದೌರ್ಜನ್ಯಗಳನ್ನು ದಾಖಲಿಸಿದ ಸಾಹಿತ್ಯ ಪ್ರಾಕಾರ. ದೇವನೂರು ಮಹಾದೇವರು ಬರೆದ ಏಳು ಕಥೆಗಳ ‘ದ್ಯಾವನೂರು’ ಸಂಕಲನ ಇದರಲ್ಲಿ ಪ್ರಮುಖವಾದ ಕೃತಿ. ಇನ್ನು ಕೆಲವು ಪ್ರಮುಖರು ಸಿದ್ಧಲಿಂಗಯ್ಯ (ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು..) ಅರವಿಂದ ಮಾಲಗಿತ್ತಿ (ಕಪ್ಪು ಕಾವ್ಯ, ಮೂಕನಿಗೆ ಬಾಯಿ ಬಂದಾಗ..) ಮುಳ್ಳೂರ ನಾಗರಾಜ (ಮರಣ ಮಂಡಳ ಮಧ್ಯದೊಳಗೆ) ಇತ್ಯಾದಿ.

5. ಬಂಡಾಯ ಸಾಹಿತ್ಯ

ಇದು ತನ್ನ ಸಾಹಿತ್ಯ ಮತ್ತು ಸಂಘಟನೆ ಎರಡೂ ರೂಪದಲ್ಲಿ ಕರ್ನಾಟಕದಾದ್ಯಂತ ಬೆಳೆದಿದೆ. ಹೊಸ ಆಲೋಚನೆಯ ಯುವ ಬರಹಗಾರರನ್ನು ಹುಟ್ಟುಹಾಕಿದ ಸಂಘಟನೆ. ವ್ಯಕ್ತಿವಾದಿ ನೆಲೆಗೆ ವಿರುದ್ಧವಾಗಿ ಸಮಾಜವಾದಿ ನೆಲೆಯಲ್ಲಿ ಆಲೋಚಿಸಿ, ಬರೆದು, ಬದುಕುವ ಧ್ಯೇಯದ ಕೊಡುಗೆ. ಅಬ್ಬರ, ಸಿಟ್ಟು ಮತ್ತು ರೊಚ್ಚು ಬಹಳವಾಗಿ ಕಾಣಿಸುತ್ತವೆ. ಈ ಬಂಡಾಯ ಸಾಹಿತ್ಯ ಅನೇಕ ಮುಖ್ಯವಾದ ಸಂವೇದನೆಗಳನ್ನು ಹುಟ್ಟುಹಾಕಿದೆ (ದಲಿತ, ಸ್ತ್ರೀ..). ಚಂದ್ರಶೇಖರ ಪಾಟೀಲ, ಜಂಬಣ್ಣ ಅಮರಚಿಂತ, ಅಲ್ಲಮ ಪ್ರಭು, ಬರಗೂರು ರಾಮಚಂದ್ರಪ್ಪ ಈ ಸಾಹಿತ್ಯ ಪ್ರಾಕಾರದಲ್ಲಿ ಪ್ರಮುಖರು. ‘ಕಪ್ಪು ಜನರ ಕೆಂಪು ಕಾವ್ಯ’, ‘ಬಂಡಾಯದ ಬಿಸಿಯುಸಿರು’, ‘ಕನ್ನಡ ಪ್ರತಿಭಟನೆ ಕಾವ್ಯ’ ಮುಂತಾದವು ಪ್ರಮುಖ ಕೃತಿಗಳು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X