• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಶಾನ್ಯ ಅಮೇರಿಕದಲ್ಲಿ ಕನ್ನಡ ನಡೆದು ಬಂದ ದಾರಿ- 2

By Staff
|

ನ್ಯೂಯಾರ್ಕಿನಲ್ಲಿ ನಡೆದ ಐದನೆಯ ಈಶಾನ್ಯ ಸಮೇಳನದಲ್ಲಿ ಕನ್ನಡ ನುಡಿ ಇಲ್ಲಿ ಉಳಿಯುವ ಬಗ್ಗೆ ಚರ್ಚೆ ನಡೆಸಿದೆವು. 1981ರ ವೇಳೆಗಾಗಲೇ ಮನೆಯಲ್ಲಿ ಮಕ್ಕಳು ಕನ್ನಡ ಮಾತಾಡುವುದಿಲ್ಲ. ಎಲ್ಲಾ ಸಂಭಾಷಣೆ ಇಂಗ್ಲಿಷ್‌ನಲ್ಲಿಯೇ ನಡೆಯುತ್ತಿದೆ ಎಂದು ಮನವರಿಕೆಯಾಗಿತ್ತು. ಎಂಭತ್ತರ ದಶಕದಲ್ಲಿ ದೇಶದಲ್ಲಿ ಅಲ್ಲಲ್ಲಿ ನಡೆದ ಸಮ್ಮೇಳನಗಳಲ್ಲೂ ಇದೇ ಚರ್ಚೆ. ಜನಜೀವನದಲ್ಲಿ, ಉದ್ಯೋಗ, ಪರಿಸರದಲ್ಲಿ, ಶಾಲೆಯಲ್ಲಿ- ಎಲ್ಲೆಲ್ಲೂ ಇಂಗ್ಲಿಷ್‌ ಹಾಸುಹೊಕ್ಕಾಗಿ ಹರಡಿ ಕನ್ನಡದ ಪದಾಧಿಕಾರಿಗಳೂ ತಮಗೆ ಸುಲಭವಾಗಿ ಮಾತನಾಡಲು ಬರುವ ಇಂಗ್ಲೀಷನ್ನೇ ಕನ್ನಡದ ವೇದಿಕೆಯ ಮೇಲೂ ಬಳಸಲು ಆರಂಭಿಸಿದ್ದು, ಕನ್ನಡದ ಉಳಿವಿನ ಬಗ್ಗೆ ತೀವ್ರ ಅನುಮಾನ ತರಲು ಕಾರಣವಾಯಿತು.

ಸರಿ- ಇನ್ನೇನು ಮಾಡುವುದು ? ಮನೆಯಲ್ಲಿ ಅಜ್ಜ, ಅಜ್ಜಿ ಇದ್ದರೆ ಕನ್ನಡ ಸ್ವಲ್ಪ ಮಟ್ಟಿಗಾದರೂ ಬಳಸಿಯಾರು - ತಂದೆ ತಾಯಿಯರು ಮನಸ್ಸು ಮಾಡಿ ಮನೆಯಲ್ಲಿ ಕನ್ನಡದ ಬಳಕೆ ಮಾಡಿ ಎಂದು ಎಚ್ಚರಿಸಲು ಆರಂಭಿಸಿದೆವು. ಇಂಥ ಉಪದೇಶ ಜನ ಮೆಚ್ಚಿದರು ಎಂದು ಹೇಳುವಂತಿಲ್ಲ.

ಉದ್ಯೋಗ ಪರಿಸರದ ಒತ್ತಡಕ್ಕೆ ಮಣಿದು ಅನೇಕರು ತಮ್ಮ ಹೆಸರುಗಳನ್ನೇ ಬದಲಾಯಿಸಿಕೊಂಡರಲ್ಲ ! ಸಂಪತ್ಕುಮಾರ ಸ್ಯಾಮ್‌ ಆದ, ನೀಲಕಂಠ ಘಛಿಜ್ಝಿ kಚ್ಞಠಿ ಆದ ! ಮಕ್ಕಳಿಗೆ ಹರಿ, ಗಿರಿ ಎಂದು ಹೆಸರಿಟ್ಟವರು ಹ್ಯಾರಿ, ಜೆರ್ರಿ ಎಂದು ಕರೆದರು. ಮನೆಗಳಲ್ಲಿ ಶಾಲೆಗೆ ಹೋಗಿ ಬರುವ ಮಕ್ಕಳು ತಂದೆ ತಾಯಿಯರ ಇಂಗ್ಲೀಷ್‌ ಉಚ್ಚಾರ ಕೇಳಿ ನಕ್ಕರು, ತಿದ್ದಿದರು. ಇವರ ಬೆರಕೆ ಭಾಷೆಗೆ ಮಕ್ಕಳು ಇಂಗ್ಲಿಷ್‌ನಲ್ಲಿ ಉತ್ತರಿಸಿದರು. ಬೆರಕೆ ಭಾಷೆ ನಮಗೆ ಹೊಸದೇ ? ಭಾರತೀಯರು ಭಾರತದಲ್ಲಿ ಮಾತನಾಡುವುದೇ ಕಲಬೆರಕೆಯ ಭಾಷೆ. ದ್ವಿಭಾಷಾ ಸಂಪ್ರದಾಯ, ಕೆಲವು ಸಂದರ್ಭಗಳಲ್ಲಿ ಮೂರು ನಾಲ್ಕು ಭಾಷೆಗಳನ್ನಾಡುವ ಸಂಪ್ರದಾಯ ಸಾಮಾನ್ಯವಾದದ್ದೇ. ಶುದ್ಧ ಕನ್ನಡದಲ್ಲಿ ನಿತ್ಯ ಸಂಭಾಷಣೆ ನಡೆಯುವುದೇ ಇಲ್ಲ. ಅರ್ಧ ಇಂಗ್ಲೀಷ್‌, ಅಲ್ಲೊಂದು ಇಲ್ಲೊಂದು ಕನ್ನಡ ಪದ, ಹಿಂದಿ ಪದ- ಹೀಗೆ ಕಲಸು ಮೇಲೋಗರದ ಭಾಷೆಯೇ ಸಾಮಾನ್ಯ. ಇಂಥ ಸಂದರ್ಭದಲ್ಲಿ ಇಲ್ಲಿ ಬೆಳೆಯುವ ಮಕ್ಕಳಿಗೆ ಕನ್ನಡದ ಬಗ್ಗೆ ಉತ್ಸಾಹ ಹುಟ್ಟುವುದು ಹೇಗೆ?

ಪ್ರಯತ್ನವೇನೋ ಮಾಡಿದೆವು. ಬಾಲವಿಹಾರಗಳಲ್ಲಿ ಕನ್ನಡ ಅಕ್ಷರಗಳ ಕಲಿಕೆ, ಕೂಟದ ಚಟುವಟಿಕೆಗಳಲ್ಲಿ ಮಕ್ಕಳ ಕಾರ್ಯಕ್ರಮಗಳು, ದಾಸರ ಪದಗಳು, ಶಿವಶರಣರ ವಚನಗಳ ಗಾಯನ ಸ್ಪರ್ಧೆ, ಕನ್ನಡ ಜನಸಾಮಾನ್ಯರ ವೇಷ- ಭೂಷಣ ಪ್ರದರ್ಶನ ಹೀಗೆಲ್ಲಾ. ಕೆಲವು ವರ್ಷಗಳು ನಡೆದು ಕಣ್ಮರೆಯಾದ ಉತ್ತಮ ಮಟ್ಟದ ಪತ್ರಿಕೆ ಅಮೆರಿಕನ್ನಡ ಕನ್ನಡ ಪಾಠ ಕ್ರಮಗಳನ್ನು ಒದಗಿಸಿತ್ತು. ಈ ಪಾಠಕ್ರಮಗಳನ್ನು ಉಪಯೋಗಿಸಿ ತರಗತಿಗಳನ್ನು ನಡೆಯಿಸಿದೆವು. ಕಲಿಯಲು ಮುಂದೆ ಬಂದ ಮಕ್ಕಳ ಸಂಖ್ಯೆ ಸಾಲದೆಂದು ಮರುಗಿದೆವು. ಮಕ್ಕಳನ್ನು ಎರಡು ವರ್ಷಕ್ಕಾದರೂ ಒಮ್ಮೆ ಕರ್ಣಾಟಕಕ್ಕೆ ಕರೆದುಕೊಂಡು ಹೋಗಿ ಕನ್ನಡದ ಅನುಭವ ಪಡೆಯಿಸುವ ಅಭ್ಯಾಸ ಅನೇಕ ಸಂಸಾರಗಳಲ್ಲಿ ಆರಂಭವಾಯಿತು. ಆದರೆ ಅಲ್ಲಿಗೆ ಹೋದಾಗ ತಮ್ಮ ಸೋದರಿಕೆಯ ಮಕ್ಕಳು, ಸ್ನೇಹಿತರು (ಊರಿನಲ್ಲಿ ಬೆಳೆದವರು) ಬರಿಯ ಇಂಗ್ಲೀಷ್‌ನಲ್ಲೇ ಸಂಭಾಷಣೆಗೆ ತೊಡಗುತ್ತಾರೆ- ಕನ್ನಡ ಮಾತಾಡುವುದೇ ಇಲ್ಲ ಎಂದು ಇಲ್ಲಿನ ಮಕ್ಕಳು ಪೇಚಾಡುವುದನ್ನು ಕೇಳಿದೆವು. ಕನ್ನಡ ನಾಡಿನಿಂದ ಸಾಹಿತಿಗಳು ಬಂದಾಗ ಅವರಲ್ಲಿ ಪಾಠ ಕಲಿಯುವ ವ್ಯವಸ್ಥೆಯೂ ಆಗೀಗ ನಡೆಯಿತು.

ಬರಿಯ ಸಂಭಾಷಣೆಯ ಕನ್ನಡ ಮಾತ್ರ ಮಕ್ಕಳು ಕಲಿತರೆ ಸಾಕಾಗುವುದಿಲ್ಲ- ಓದಿ ಬರೆಯಲೂ ಕಲಿಯಬೇಕು. ಭಾಷೆಯಲ್ಲಿ ಪ್ರೀತಿ ಹುಟ್ಟಬೇಕಿದ್ದರೆ ಕನ್ನಡ ಗ್ರಂಥಗಳನ್ನು ಓದಿ ಅರ್ಥಮಾಡಿಕೊಳ್ಳುವುದು ಅಗತ್ಯ- ಓದಲು ಬಂದರೆ ಬರೆಯುವ ಸಾಮರ್ಥ್ಯ ಅಸಾಧ್ಯವಲ್ಲ. ಇಂಥ ವಿಚಾರ ಸರಣಿ ಸರ್ವೇ ಸಾಮಾನ್ಯವಾಯಿತು. ಓದಿ ಬರೆಯುವುದನ್ನು ಕಲಿಸಲು ಚತುರ ಉಪಾಧ್ಯಾಯರು ಬೇಕಲ್ಲವೇ? ಎರಡೂ ಭಾಷೆಗಳಲ್ಲಿ ಪ್ರವೇಶ, ಅನುಭವ ಇದ್ದವರು ಮಾತ್ರವೇ ಕಲಿಸಲು ಶಕ್ತರು. ಅಂಥವರು ಎಷ್ಟು ಮಂದಿ ದೊರಕಿಯಾರು? ಈ ದೇಶದಲ್ಲಿ ಪೆನ್‌ಸಿಲ್‌ವೇನಿಯಾ, ಬರ್‌ಕ್ಲಿ, ಚಿಕಾಗೋ, ವಿಸ್‌ಕಾನ್ಸಿನ್‌, ಟೆಕ್ಸಾಸ್‌ ಮತ್ತಿತರ ವಿಶ್ವವಿದ್ಯಾಲಯಗಳಲ್ಲಿ ಈ ಬಗೆಯ ಬೋಧನೆಗೆ ಅವಕಾಶ ಇದೆಯಾದರೂ ಎಷ್ಟು ಮಂದಿ ಮಕ್ಕಳು ಪ್ರಯೋಜನ ಪಡೆದಾರು? ಬೇಸಗೆಯಲ್ಲಿ ಕರ್ಣಾಟಕಕ್ಕೆ ಮಕ್ಕಳನ್ನು ಕಳಿಸಿ ಕನ್ನಡ ಕಲಿತು ಬರಲು ಪ್ರೇರೇಪಿಸುವ ತಂದೆತಾಯಂದಿರು ಎಷ್ಟು ಮಂದಿ ಇದ್ದಾರು? ಕರ್ಣಾಟಕದಿಂದ ಈ ಕಾರಣಕ್ಕಾಗಿಯೇ ಬಂದ ಉಪಾಧ್ಯಾಯರಿಂದಲೂ ಪ್ರಯೋಜನ ಪಡೆಯುವವರ ಸಂಖ್ಯೆ ಸಣ್ಣದೇ.

ನಾವು ಇಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಬೋಧನೆಗೆ ನಡೆಸುವ ಪ್ರಯತ್ನ ಕೂಡ ಸಮರ್ಪಕವಾಗಿಲ್ಲ. ಅಯೋವ ವಿಶ್ವವಿದ್ಯಾನಿಲಯದವರು ತಮ್ಮ ಕ್ರಿ.ಶ.2000ರ ವಿಕಾಸ ಯೋಜನೆಯಲ್ಲಿ ಕನ್ನಡವನ್ನು ಆರಿಸಿಕೊಂಡು ಪೀಠವೊಂದರ ಸ್ಥಾಪನೆಗೆ ಅಣಿಯಾದರು. ಅದಕ್ಕೆ ತಗಲುವ ಒಂದೂವರೆ ಮಿಲಿಯನ್‌ ಡಾಲರುಗಳಲ್ಲಿ ಈವರೆಗೆ ಸೇರಿರುವ ಹಣ ಸುಮಾರು ನೂರು ಸಾವಿರ ಡಾಲರ್‌ಗಳಷ್ಟು. ಹಾಗಾಗಿ ಪೀಠ ಸಾಧ್ಯವಾಗದೆ ಕೇವಲ ಆಹ್ವಾನಿತ ಪ್ರಾಧ್ಯಾಪಕರನ್ನು ವರ್ಷಕ್ಕೊಮ್ಮೆ ಕರೆಯಿಸುವ ಸನ್ನಾಹ ನಡೆದಿದೆ.

ಈಗ ನಮ್ಮ ಜನಾಂಗದ ಎರಡನೆಯ ಪೀಳಿಗೆ ಆರಂಭವಾಗಿದೆ. ಮಕ್ಕಳು ಮದುವೆಯಾಗಿ ಸ್ವತಂತ್ರ ಜೀವನ ನಡೆಸಿದ್ದಾರೆ. ಅನೇಕರ ಮನೆಗಳಲ್ಲಿ ಮಕ್ಕಳು ಪರಭಾಷೀಯರನ್ನು ಮದುವೆಯಾಗಿ ಕನ್ನಡವನ್ನು ಕೈ ಬಿಟ್ಟಿದ್ದು ನೋಡುತ್ತಿದ್ದೇವೆ. ಮೂರು ದಶಕಗಳ ನಂತರ ಕನ್ನಡದ ಗತಿಯ ಬಗ್ಗೆ ನಮಗೆ ಮನವರಿಕೆಯಾಗುವುದು ಏನೆಂಬುದನ್ನು ಸೂಚಿಸಿ ಈ ಲೇಖನವನ್ನು ಮುಗಿಸುತ್ತಿದ್ದೇನೆ:

1. ಪರಕೀಯ ಸಂಸ್ಕೃತಿಯ ನಡುವೆ, ಪ್ರಚಂಡ ಇಂಗ್ಲೀಷ್‌ ಒತ್ತಡವನ್ನು ತಾಳಿಕೊಂಡು ಕನ್ನಡ ತಾನೇ ತಾನಾಗಿ ವಿಜೃಂಭಿಸುತ್ತದೆ ಎಂಬುದು ಸಲ್ಲದ ಮಾತು. ಜನಜೀವನದಲ್ಲಿ ಉಪಯೋಗಿಸುವ ಭಾಷೆ ಕ್ರಮೇಣ ಮರೆಯಾಯಿತೆಂದರೆ ಆಶ್ಚರ್ಯಪಡುವ ಪ್ರಮೇಯವಿಲ್ಲ.

2. ಹಾಗೆಂದು ನಮ್ಮ ಒಂದೋ ಎರಡೋ ಪೀಳಿಗೆಗಳಿಗೆ ಮಾತ್ರ ಈ ನುಡಿ ಸೀಮಿತವಾಗಿದೆ ಎನ್ನುವುದೂ ಸರಿಯಲ್ಲ. ಅಮೆರಿಕ ವಲಸೆಗಾರರ ದೇಶ. ಕನ್ನಡ ನಾಡಿನಿಂದ ಹೊಸ ರಕ್ತ ವರ್ಷೇ ವರ್ಷೇ ಬರುತ್ತಲೇ ಇದೆ. ಕೂಟದ ಈಚಿನ ಸಮಾರಂಭಗಳಲ್ಲಿ ಈ ಹೊಸ ಯುವ ಜನರನ್ನು ನೋಡಿದಾಗಲೆಲ್ಲ ನನಗೆ ಹರ್ಷ ಉಕ್ಕಿದೆ!

3. ನಮ್ಮ ಯುವಜನರಲ್ಲಿ ಕೆಲವರಾದರೂ ಕನ್ನಡ ಭಾಷಾ ಶಾಸ್ತ್ರ ವಿದ್ಯಾರ್ಥಿಗಳಾಗಿ ಪ್ರಬುದ್ಧ ವ್ಯಾಸಂಗ ಇಲ್ಲಿ ನಡೆಸಿಯೇ ಇದ್ದಾರೆ.

4. ಅಮೆರಿಕದ ಇತರ ಜನಾಂಗಗಳ ಯುವಜನರು ಪರಭಾಷೆಯಾಂದನ್ನು ಕಲಿಯುವ ಉತ್ಸಾಹ ತೋರಿಸಿ ವಿಶ್ವ ವಿದ್ಯಾನಿಲಯಗಳಲ್ಲಿ ಕನ್ನಡ ವ್ಯಾಸಂಗಕ್ಕೆ ತೊಡಗುವುದನ್ನೂ ನೋಡಿದ್ದೇವೆ. ಕೆಲವರು ಕರ್ಣಾಟಕಕ್ಕೂ ಹೋಗಿ ಬಂದವರಿದ್ದಾರೆ. ಇಲ್ಲಿ ನೆಲೆಸಿದ ಕನ್ನಡಿಗರ ಸಂಭ್ರಮ ಕಂಡು ಈ ಜನ ಉತ್ತೇಜಿತರಾಗಿರುವುದು ಸಾಧ್ಯ.

5. ಇಲ್ಲಿ ದಿಟ್ಟವಾಗಿ ನಿಂತ ವ್ಯಕ್ತಿ ವೈಶಿಷ್ಟ್ಯ ನಮ್ಮ ಜನರನ್ನು ತಟ್ಟದೇ ಇದ್ದೀತೆ? ಸ್ವಲ್ಪ ಮಟ್ಟಿಗಾದರೂ ನಮ್ಮ ಮುಖ ಚಹರೆ ಹೊತ್ತ ಮುಂದಿನ ಪೀಳಿಗೆಯ ಕನ್ನಡ ಸಂತಾನ ತಾವು ಯಾರೆಂಬುದನ್ನು ಸಮರ್ಥಿಸಿಕೊಳ್ಳಲು ಕನ್ನಡ ನಾಡಿಗೆ ತೆರಳಿ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತಿಳಿಯಲು, ಆಳವಾಗಿ ಅಭ್ಯಾಸ ಮಾಡಲು ತೊಡಗುವುದರಲ್ಲಿ ಸಂಶಯವಿಲ್ಲ. ನಮ್ಮ ಸುತ್ತ ಮುತ್ತ ಇರುವ ಯೂರೋಪಿಯನ್‌ ಜನಾಂಗದವರಲ್ಲಿ ಇತರ ಏಷ್ಯಾದವರಲ್ಲಿ ಇದನ್ನು ನೋಡಿದ್ದೇವೆ.

6. ಉಪಯುಕ್ತ ಭಾಷೆಯಾಗಿ ಅಲ್ಲದಿದ್ದರೂ ನಮ್ಮ ಪುರಾತನ ಸಂಸ್ಕೃತಿಯ ಪ್ರತೀಕವಾಗಿ ಕನ್ನಡ ಉಳಿಯುತ್ತದೆ- ಎಂದು ಸಮಾಧಾನ ಪಟ್ಟುಕೊಳ್ಳಬಹುದು.

Previous page

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more