ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಕೆಎನ್‌ಸಿ : ದೀವಳಿಗೆ ಪ್ರಭೆಯಲ್ಲಿ ಕಳೆಗಟ್ಟಿದ ರಾಜ್ಯೋತ್ಸವ

By Staff
|
Google Oneindia Kannada News

* ಎಂ.ಎನ್‌. ಪದ್ಮನಾಭ ರಾವ್‌, ಮಿಲ್ಪಿಟಾಸ್‌

Padmanabha Rao, The Authorಬೇ ಏರಿಯಾದ ಕನ್ನಡಿಗರೆಲ್ಲರಿಗೆ ನವೆಂಬರ್‌ 2, 2002 ರಂದು ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಆಚರಣೆಯ ಸಂಭ್ರಮ- ಸಡಗರ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ವತಿಯಿಂದ ಲಾಸ್‌ ಆಲ್ಟೋಸ್‌ ಹಿಲ್ಸ್‌ನಲ್ಲಿರುವ ಫೂಟ್‌ಹಿಲ್‌ ಕಾಲೇಜಿನ ಸ್ಮಿತ್‌ವಿಕ್‌ ಸಭಾಂಗಣದಲ್ಲಿ ಸಮಾರಂಭದ ವ್ಯವಸ್ಥೆಯಾಗಿತ್ತು. ಸಮಯಕ್ಕೆ ಸರಿಯಾಗಿ ಕನ್ನಡ ಸಹೃದಯರು ಮೆಟ್ಟಿಲು ಮೇಲೆ ಮೆಟ್ಟಿಲು ಹತ್ತಿ, ತಿರುಪತಿ ಗಿರಿವಾಸನನ್ನು ನೆನೆಯುತ್ತಾ ಸಭಾಂಗಣದಲ್ಲಿ ನೆರೆದಿದ್ದರು.

ಅಪರಾಹ್ನ 4.00 ಘಂಟೆಗೆ ಸಮಾರಂಭ ಪ್ರಾರಂಭವಾಯಿತು. ಪುಟಾಣಿಗಳ ಗಣಪತಿ ಸ್ತುತಿಯ ನಂತರದ ‘ಹಚ್ಚೇವು ಕನ್ನಡದ ದೀಪ’ ಪ್ರಾರ್ಥನೆ ಸಮಾರಂಭಕ್ಕೆ ಕಳೆ ತಂದುಕೊಟ್ಟಿತ್ತು. ಹಾಡಿಗೆ ತಕ್ಕ ಲಯಬದ್ಧವಾದ ತಬಲಾವಾದನ ಕಿವಿಗಿಂಪಾಗಿತ್ತು. ಕನ್ನಡ ಕೂಟದ ಪ್ರಸ್ತುತ ವರ್ಷದ ಅಧ್ಯಕ್ಷರಾದ ರಾಂಪ್ರಸಾದ್‌ ಅವರು ‘ಕನ್ನಡ ಕಲಿ’ ಕಾರ್ಯಕ್ರಮದಲ್ಲಿ ಕನ್ನಡ ಕಲಿತವರಿಗೆ ಮತ್ತು ಕಲಿಸಿದ ಉಪಾಧ್ಯಾಯರುಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು.

ಕನ್ನಡಕೂಟದ ಮುಂದಿನ ಸಾಲಿನ ಅಧ್ಯಕ್ಷಗಿರಿಗಾಗಿ ನಡೆದ ಚುನಾವಣಾ ಕಾರ್ಯಕ್ರಮವನ್ನು ತಿರುನಾರಾಯಣ ಐಯ್ಯಂಗಾರ್‌ ಅವರು ನಡೆಸಿಕೊಟ್ಟರು. ಸುರೇಶ್‌ ಬಾಬು ಅವರು ಒಮ್ಮತದಿಂದ ಹೊಸ ಅಧ್ಯಕ್ಷರಾಗಿ ಚುನಾಯಿತರಾದರು. ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಸುರೇಶ್‌ ಬಾಬು ಅವರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ, ‘ಕನ್ನಡ ಕೂಟಕ್ಕಾಗಿ ನಾವೆಲ್ಲರೂ ಸಹೃದಯತೆ ಮತ್ತು ಸೌಜನ್ಯತೆಗಳಿಂದ ಪರಸ್ಪರ ಸಹಕರಿಸಬೇಕು. ಆರ್ಥಿಕವಾಗಿ, ಸೌಹಾರ್ದಿಕವಾಗಿ ಕನ್ನಡಕೂಟಕ್ಕೆ ಎಲ್ಲರು ಬೆಂಬಲಿಸಬೇಕು’ ಎಂದರು.

ರಂಗವೇದಿಕೆಗೆ ಬಂದ ಬಲಿ
ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಸೂಚಿಸುವ ಬಲಿ ಚಕ್ರವರ್ತಿ ನಾಟಕ, ಸುಮಾರು ಹದಿನಾರು ಪುಟಾಣಿಗಳಿಂದ ರಂಗೇರಿತ್ತು. ಮಹಾಬಲಿಯ ಅಬ್ಬರ, ಇಂದ್ರನ ಆಸ್ಥಾನದಲ್ಲಿ ಅಪ್ಸರೆಯರ ನಾಟ್ಯ, ಮತ್ತು ಪುಟ್ಟ ವಾಮನಾವತಾರಿಯ ಅಭಿನಯ ಸಭಿಕರ ಮನಸೂರೆಗೊಂಡಿತು. ನಾಟಕದ ರಚನೆ ಮತ್ತು ನಿರ್ದೇಶನ ವೆಂಕಟ್ರಮಣ ಭಟ್‌ ಅವರದು.

ನಂತರದಲ್ಲಿ ‘ಆಗುವೆಯಾ ನೀ ಕೋಟ್ಯಾಧಿಪತಿ’ ಎಂಬ ಹಾಸ್ಯ ಪ್ರಧಾನ ಕಿರುಪ್ರಹಸನವನ್ನು ಪುಷ್ಪ ಸುಬ್ಬರಾವ್‌ ಅವರ ನಿರ್ದೇಶನದಲ್ಲಿ ಮಕ್ಕಳು ನಡೆಸಿಕೊಟ್ಟರು. ರೀಮಾ ಕಾಶ್ಯಪ್‌ ಮತ್ತು ತಂಡದವರಿಂದ ನಡೆದ ನವಸಂಯೋಜಿತ ನೃತ್ಯ ಸಭಿಕರಿಗೆ ಆನಂದವುಂಟುಮಾಡಿತು.

ಸಂಗೀತ ಕಟ್ಟಿ-ಕುಲಕರ್ಣಿಯವರ ಸುಮಧುರ ಸಂಗೀತ ಕಾರ್ಯಕ್ರಮವನ್ನು ಸಭಿಕರೆಲ್ಲಾ ಕರತಾಡನದೊಡನೆ ಮೆಚ್ಚಿಕೊಂಡರು. ಒಂದೆರಡು ಶಾಸ್ತ್ರೀಯ ಕೃತಿಗಳನ್ನೂ, ಕೆಲವು ಕೀರ್ತನೆಗಳನ್ನೂ ಮತ್ತೆ ಕೆಲವು ಭಾವಗೀತೆಗಳನ್ನೂ ಹಾಡಿದ ಕಟ್ಟಿ-ಕುಲಕರ್ಣಿಯವರು ಸಭಿಕರನ್ನು ಗಾನಸುಧೆಯಲ್ಲಿ ತೇಲಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ರವಿ ಕಾಶ್ಯಪ್‌ ಅವರು ವಂದನಾರ್ಪಣೆ ಮಾಡಿದರು. ರಾಘವೇಂದ್ರ ಮತ್ತು ಶ್ರೀಲಲಿತ ಹೆಬ್ಬಳಲು ಅವರು ನಡೆಸಿಕೊಟ್ಟ ‘ಹಚ್ಚೇವು ಕನ್ನಡದ ದೀಪ’ ಕಾರ್ಯಕ್ರಮವು ಎರಡೂ ದೇಶಗಳ ರಾಷ್ಟ್ರಗೀತೆಗಳೊಂದಿಗೆ ಮುಕ್ತಾಯವಾಯಿತು. ಮನೆಗೆ ತೆರಳುವಾಗ ಸಭಿಕರೆಲ್ಲರಿಗೆ ವಿತರಿಸಿದ ತಿಂಡಿಪೊಟ್ಟಣಗಳು ಎಲ್ಲರಿಗೂ ಆಪ್ಯಾಯಮಾನವಾದವು.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X