• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುವೆಂಪು ಅವರ ‘ನೆನಪಿನ ದೋಣಿಯಲ್ಲಿ’ಭೂಮಿಕಾ ಬಳಗದ ವಿಹಾರ

By Staff
|

*ಶ್ರೀವತ್ಸ ಜೋಶಿ

ದೇಶ ನನ್ನದು ನನ್ನದು ನಾಡು। ಎನ್ನದ ಮಾನವನೆದೆ ಸುಡುಗಾಡು ।।

ದೂರ ದೇಶಕೆ ಹೋದ ಸಮಯದಿ। ತನ್ನ ನಾಡನು ನೆನೆನೆನೆದುಬ್ಬದ ।।

ಮಾನವನಿದ್ದರೆ ಲೋಕದಲಿ। ತಾವಿಲ್ಲವನಿಗೆ ನಾಕದಲಿ ವೀರ ಲೋಕದಲಿ ।।

Dr Vijayalakshmi Gowda speaking about KuVemPuದೂರದೇಶದಲ್ಲಿದ್ದರೂ ಪ್ರತಿ ತಿಂಗಳ ಎರಡನೆ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಒಂದಿಷ್ಟು ಕನ್ನಡ ಕಲಾಭಿಮಾನಿಗಳು ಸೇರಿ ಒಂದೆರಡು ತಾಸಿನಲ್ಲಿ ಸಾಹಿತ್ಯ-ಸಂಗೀತ-ನಾಟಕ-ಜನಪದ ವಿಷಯದ ಚರ್ಚೆ, ವಿಚಾರಮಂಥನ ನಡೆಸಿ ಜ್ಞಾನಭಂಡಾರದ ‘ಮೆಮೊರಿ’ಗೆ ಇನ್ನೂ ಕೆಲವು ಮೆಗಾಬೈಟ್‌ಗಳನ್ನು ಸೇರಿಸಿ ಮನೆಗೆ ಹಿಂತಿರುಗುತ್ತಾರೆ. ಇದು ವಾಷಿಂಗ್ಟನ್‌ ಡೀ.ಸಿ ಪ್ರದೇಶದ ‘ಭೂಮಿಕಾ’ ಎಂಬ ಚರ್ಚಾ-ಚಾವಡಿಯಲ್ಲಿ ಸುಮಾರು ಏಳು ವರ್ಷಗಳಿಂದ ಅನೂಚಾನವಾಗಿ ಬಂದಿರುವ ಕ್ರಮ.

ತನ್ನ ನಾಡನು ನೆನೆದು ಉಬ್ಬುವ, ನಾಡಿನ ಕಲಾಸಂಪತ್ತನ್ನು ಇಲ್ಲಿ ಅಮೆರಿಕದಲ್ಲಿ ಹಬ್ಬುವ ಕಾರ್ಯಕ್ರಮ ಅದು. ಕಾಕತಾಳೀಯವಾಗಿ, ಮೊನ್ನೆ ಅಕ್ಟೋಬರ್‌ 13ರ ಭಾನುವಾರದ ಚರ್ಚೆಯ ವಿಷಯ ತಾಯ್ನಾಡಿನ ಅಭಿಮಾನದ ಈ ಸುಂದರ ಕವಿತೆಯನ್ನು ಬರೆದ ಕುವೆಂಪು ವಿರಚಿತ ‘ನೆನಪಿನ ದೋಣಿಯಲ್ಲಿ’ ಆತ್ಮಕಥನ. ನಡೆಸಿಕೊಟ್ಟವರು ‘ನೆನಪಿನ ದೋಣಿಯಲ್ಲಿ’ ಪುಸ್ತಕವನ್ನು ಓದಿ, ಆ ಬಗ್ಗೆ ಎರಡು ಗಂಟೆಗಳ ಕಾಲ ಸೊಗಸಾಗಿ ಮಾತನಾಡುವಷ್ಟು ಸಿದ್ಧತೆ ನಡೆಸಿ ಬಂದಿದ್ದ ಡಾ।ವಿಜಯಲಕ್ಷ್ಮಿ ಗೌಡ.

‘ನೆನಪಿನ ದೋಣಿಯಲ್ಲಿ’ ಪುಸ್ತಕದಲ್ಲಿ ಕುವೆಂಪುರವರು ತಮ್ಮದೇ ಮಾತುಗಳಲ್ಲಿ, 1904ರಲ್ಲಿ ಕುಪ್ಪಳ್ಳಿಯಲ್ಲಿ ಪುಟ್ಟಪ್ಪನಾಗಿ ಜನಿಸಿ ಮುಂದೆ ರಾಷ್ಟ್ರಕವಿ ಮತ್ತು ವಿಶ್ವಮಾನವನಾಗಿ ಬೆಳೆಯುವ ವಿವಿಧ ಮಜಲುಗಳನ್ನು ದಾಖಲಿಸಿದ್ದಾರೆ. ನಿಸ್ಸಂದೇಹವಾಗಿಯೂ ಮಲೆನಾಡಿನ ಸುಂದರ ಪ್ರಕೃತಿ, ಪುಟ್ಟಪ್ಪ ಒಬ್ಬ ಪುಟ್ಟ ಕವಿಯಾಗುವುದಕ್ಕೆ ಮೊದಲ ಪ್ರೇರಣೆ. ಆರಂಭದ ಕವಿತೆಗಳೆಲ್ಲ ವಿದ್ಯಾರ್ಥಿ ದೆಸೆಯಲ್ಲಿ ಅಂಗ್ಲಭಾಷೆಯನ್ನು ಕಲಿಯುತ್ತಿದ್ದುದರಿಂದ ಇಂಗ್ಲೀಷ್‌ನಲ್ಲೇ ಬರೆದದ್ದು. ಭಾರತ ಸ್ವಾತಂತ್ರ್ಯ ಚಳುವಳಿ, ಒಂದನೇ ಮತ್ತು ಎರಡನೇ ಪ್ರಪಂಚ ಯುದ್ಧಗಳೂ ಪುಟ್ಟಪ್ಪನವರ ಲೇಖನಿಯಿಂದ ಕವಿತೆ ಹರಿಯುವಂತೆ ಪ್ರೇರೇಪಿಸಿವೆ. ಜತೆಯಲ್ಲೇ ರಾಮಕೃಷ್ಣಾಶ್ರಮ-ದಕ್ಷಿಣೇಶ್ವರ ಭೇಟಿಗಳಿಂದ ಆದ ಆಧ್ಯಾತ್ಮದತ್ತ ಒಲವು, ಮೂಢ ನಂಬಿಕೆಗಳ ವಿರುದ್ಧ ಸಮರ, ಇಂಗ್ಲೀಷ್‌ ಬಿಟ್ಟು ಕನ್ನಡದಲ್ಲಿ ಕವನ ಬರೆಯಲು ಆರಂಭ, ಮುಂದೆ ನಾಟಕಕಾರನಾಗಿ, ಕಾದಂಬರಿಕಾರನಾಗಿ ಬೆಳೆದ ಬಗೆ - ಇವೆಲ್ಲ ಪುಸ್ತಕದ ಪುಟಗಳನ್ನು ಸಮೃದ್ಧವಾಗಿ ತುಂಬಿಸಿವೆ. ಪುಟ್ಟಪ್ಪನವರು ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದ ಮತ್ತು ಬೇರೆಲ್ಲೂ ಪ್ರಕಟವಾಗದಿದ್ದ ಕವಿತೆಗಳು ಇದರಲ್ಲಿವೆ. ಕರ್ನಾಟಕದ ರಾಷ್ಟ್ರಗೀತೆ ಎಂಬ ಹೆಮ್ಮೆಯ ‘ಜೈ ಭಾರತ ಜನನಿಯ ತನುಜಾತೆ...’ ಪದ್ಯದ ಮೂಲರೂಪವನ್ನು ಈ ಪುಸ್ತಕದಿಂದ ಡಾ।ವಿಜಯಲಕ್ಷ್ಮಿಯವರು ಓದಿ ಹೇಳಿದರು.

ಕುವೆಂಪು ಹೇಗೆ ನಿಷ್ಠುರವಾದಿಗಳಾಗಿದ್ದರು, ರಮ್ಯ ಕವಿತೆ ಬರೆಯುವವರಾಗಿದ್ದರೂ ಕ್ರಾಂತಿಕಾರಿ ಮನೋಭಾವ ಅವರಲ್ಲೆಷ್ಟಿತ್ತು, ಹಾಸ್ಟೆಲಲ್ಲಿರುತ್ತ ಒಂದು ದಿನ ತಾಯಿಯ ನಿಧನದ ಟೆಲಿಗ್ರಾಂ ಬಂದರೂ ಹೇಗೆ ನಿರ್ಲಿಪ್ತರಾಗಿದ್ದರು, ಪತ್ನಿ ಹೇಮಾವತಿಯವರ ನಿಧನ ಬರವಣಿಗೆಯನ್ನೇ ನಿಲ್ಲಿಸುವಷ್ಟು ಅದು ಹೇಗೆ ಅವರನ್ನು ಶೋಕಕ್ಕೀಡುಮಾಡಿತು - ಇತ್ಯಾದಿಯೆಲ್ಲವೂ ಸಭಿಕರ ಪ್ರಶ್ನೋತ್ತರ ರೂಪದಲ್ಲಿ ಮಂಥನಗೊಂಡವು ಈ ಕಾರ್ಯಕ್ರಮದಲ್ಲಿ.

ಸುಮಾರು ನೂರು ಮೈಲು ದೂರದ ವರ್ಜೀನಿಯಾದ ರಿಚ್ಮಂಡ್‌ನಿಂದ ಹಿರಿಯರಾದ ಈಶ್ವರ ರಾಜು ಅವರು ಭೂಮಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತಪ್ಪದೇ ಬರುವುದನ್ನು ನಾನು ಗಮನಿಸಿದ್ದೇನೆ. ಅಷ್ಟೇ ಏಕೆ, ಅಂತರ್ಜಾಲ ಪತ್ರಿಕೆಗಳ ಮೂಲಕ ಇಂಥದೊಂದು ಕಾರ್ಯಕ್ರಮವಿದೆಯೆಂದು ತಿಳಿದು, ಸುಮಾರು ಇನ್ನೂರೈವತ್ತು ಮೈಲು ದೂರದ ನಾರ್ತ್‌ ಕೆರೊಲಿನಾದ ಗೋಲ್ಡ್ಸ್‌ಬೊರೊನಿಂದ , ಆರು ಗಂಟೆ ಡ್ರೈವ್‌ ಮಾಡಿಕೊಂಡು ಬಂದಿದ್ದರು ಕೃಷ್ಣೇ ಗೌಡ ಮತ್ತವರ ಧರ್ಮಪತ್ನಿ. ಕುವೆಂಪು ಮತ್ತು ಪೂರ್ಣಚಂದ್ರತೇಜಸ್ವಿಯವರನ್ನು ನಿಕಟವಾಗಿ ಬಲ್ಲ ಕೃಷ್ಣೇಗೌಡರ ಉಪಸ್ಥಿತಿ ಮತ್ತು ಮಾತುಗಳು ಚರ್ಚೆಗೆ ಕಳೆಯೇರಿಸಿದವು. ಸ್ಥಳೀಯ ಡಾ।ಸಿದ್ದಲಿಂಗಯ್ಯನವರೂ ಕಾರ್ಯಕ್ರಮದ ಘನತೆ ಹೆಚ್ಚಿಸಿದರು. ಪ್ರಭವಾದಿ ಅರುವತ್ತು ಸಂವತ್ಸರಗಳ ಒಂದು ಸೈಕಲ್‌ಅನ್ನು ಈಗಾಗಲೇ ನೋಡಿರುವ ಇಂಥ ಹಿರಿಯರೇ ಉತ್ಸಾಹದಿಂದ, ಸಮಯಕ್ಕೆ ಸರಿಯಾಗಿ ಈ ರೀತಿಯ ಕಾರ್ಯಕ್ರಮಗಳಿಗೆ ಬರುತ್ತಿರುವುದನ್ನು, ಗೈರುಹಾಜರಿಗೆ ಅಥವಾ ಒಂದು ಗಂಟೆ ತಡವಾಗಿ ಬಂದು ತಮ್ಮ ’ಬಿಜಿ’ನೆಸ್ಸನ್ನು ತೋರುವ ಮತ್ತು ಕುಂಟುನೆಪ ಕೊಡುವ ಸ್ಥಳೀಯ ಕಲಾಭಿಮಾನಿಗಳು(?) ವಿಶೇಷವಾಗಿ ಗಮನಿಸಬೇಕೇನೊ!

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X