• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಕಾರಿಗೆ ಶಾಂತಿ ಪೂಜೆ ಮಾಡೋದು ಯಾಕೆ?

By Super
|

‘ಹೌದಾ? ನನಗೆ ಇದೇನು ಅರ್ಥವೇ ಆಗಲ್ಲ. ಅಲ್ಲಾ ನರಸಿಂಹ, ಹೀಗೆ ಕಾರಿಗೆ, ವ್ಯಾನಿಗೆ, ಟ್ರಕ್ಕಿಗೆಲ್ಲಾ ಪೂಜೆ ನಮಸ್ಕಾರ ನಡೆಸ್ತಾ ಹೋದರೆ ಇದು ಎಲ್ಲಿಗೆ ಕೊನೆ? ಇನ್ನು ಹೀಗೇ, ಟಿವಿ ಸೆಟ್‌ಗೆ, ಕಂಪ್ಯೂಟರ್‌ಗೆ, ಫೋನ್‌ಗೆಲ್ಲಾ ಪೂಜೆ ಮಾಡ್ಬೇಕು, ಹೊಸದಾಗಿ ತೊಗೊಂಡ್‌ ತಕ್ಷಣಾ ಪೂಜೆ! ಇದೆಲ್ಲಾ ಹಾಸ್ಯಾಸ್ಪದ’- ಎಂದೆ, ಈ ನನ್ನ ಅಭಿಪ್ರಾಯಕ್ಕೆ ಆತ ಸಹಾನುಭೂತಿ ತೋರಿಸಬಹುದೂ ಅಂತ ಅಂದ್ಕೊಂಡು.

‘ಹಾಗೇನಿಲ್ಲಾ, ನೋಡಿ ಈ ರೀತಿ ಪೂಜೆಗಳು ಪುರಾತನ ಕಾಲದಿಂದ ನಮ್ಮ ಸಂಪ್ರದಾಯದಲ್ಲಿ ಬಂದಿವೆ. ಪುರಾತನಕಾಲದಲ್ಲಿ ಕಾರುಗಳೆಲ್ಲಿತ್ತು, ಅಂತೀರಾ? ಹಿಂದಿನ ಕಾಲದಲ್ಲಿ ರಾಜರು ಕುದುರೆ, ಆನೆ, ರಥಗಳು, ಇತರೆ ವಾಹನಗಳು ಮತ್ತು ಆಯುಧಗಳಿಗೆ ಹಬ್ಬ ಹುಣ್ಣಿಮೆಗಳಲ್ಲಿ ಪೂಜೆ ಮಾಡುತ್ತಿರಲಿಲ್ಲವೇ? ನವರಾತ್ರೀಲಿ ಆಯುಧಪೂಜೆ ಅಂತ ಒಂದು ದಿನ ಮಾಡ್ತಾ ಇರಲಿಲ್ಲವೇ? ಹಾಗೇ ಈ ಯುಗದ ರಣತೇಜಿಯಾದ ಕಾರಿಗೂ ಶಾಂತಿಪೂಜೆ ಮಾಡುವುದರಲ್ಲಿ ತಪ್ಪೇನು? ನೋಡಿ, ನಾವು ಅಮೆರಿಕಾದಲ್ಲೆ ಇರಬಹುದು. ಆದರೂ ನಮ್ಮ ಸಂಪ್ರದಾಯ, ಸಂಸ್ಕೃತೀನ ನಾವು ಪರಿಪಾಲಿಸುವುದು ನಮ್ಮ ಧರ್ಮ, ಗೊತ್ತಾ?’, ಅಂತ ನರಸಿಂಹ ಹೇಳಿದ.

ನಾನು ಯಾಕಾದರೂ ಈ ವಿಚಾರ ಇವನೊಂದಿಗೆ ಎತ್ತಿದೆನೋ, ಅನ್ನಿಸುತ್ತಿತ್ತು. ಅವನು ಬಿಡಲಿಲ್ಲ; ಮುಂದುವರೆಸಿದ: ‘ದೇವಸ್ಥಾನದ ಪೂಜಾ ಪಟ್ಟಿಯಲ್ಲಿ ಕುಂಕುಮಾರ್ಚನೆ, ಸಹಸ್ರನಾಮ, ಹುಟ್ಟು ಹಬ್ಬ, ಜುಟ್ಟು ಅಥವಾ ಮೊಟ್ಟ ಮೊದಲು ಮಗುವಿಗೆ ಕೂದಲು ತೆಗೆಸುವುದು, ನಾಮಕರಣ, ಮದುವೆ ಹೇಗೋ ಹಾಗೇನೇ, ಈ ಹೊಸ ಕಾರಿನ ಶಾಂತಿಪೂಜೆಯು ಸಹ ಸೇರಿದೆ, ಗೊತ್ತಾ’- ಎಂದು ನನಗೆ ಜ್ಞಾನೋದಯ ಮಾಡುವ ಉದ್ದೇಶದಿಂದ ಭಾಷಣ ಬಿಗಿದ, ಅಲ್ಲ ಗೊತ್ತಾಗಿಸಿದ !

‘ನೋಡಿ, ಈ ಮದುವೆಯ ವಾರ್ಷಿಕೋತ್ಸವ, ರಜತ ಮಹೋತ್ಸವ ಇವೆಲ್ಲಾ ಈಗ ಮಾಡ್ತೀವಲ್ಲ, ಮುಂಚೆ ಎಲ್ಲಿತ್ತು?’ ಅಂತ ಅವನು ಇನ್ನೂ ಏನೇನೋ ಹೇಳೋಕೆ ಪ್ರಾರಂಭಿಸಿದಾಗ, ಅವನನ್ನು ತಡೆದು, ಕಾರಿನ ಕಡೆ ಅವನ ಗಮನ ಸೆಳೆದೆ.

ಕಾರ್‌ ಕಾರ್‌ ಕಾರ್‌...ನಯ ನಾಜೂಕಿನ ಕಾರ್‌!

ಈ ಕಾರ್ಯಕ್ರಮಕ್ಕೆ ಪ್ರಧಾನ ವಸ್ತುವಾದ ಆ ಹೊಸ ಕಾರು ಕೆಂಪು ಬಣ್ಣದ್ದು. ಸೂರ್ಯನ ರಶ್ಮಿ ಅದರ ಮೇಲೆ ಹಿತಮಿತವಾಗಿ ಬಿದ್ದು ಥಳ ಥಳ ಹೊಳೀತಿತ್ತು. ನಯ ನಾಜೂಕಿನ ಎರಡೇ ಸೀಟಿನ ಕಾರು; ನೆತ್ತಿಯ ಮೇಲೆ ಫಳ ಫಳ ಹೊಳೆಯೋ ಸನ್‌ ಷೇಡು, ಅರೆ- ಕಪ್ಪು ಗಾಜಿನ ಕಿಟಕಿಗಳು; ಮುಂಭಾಗ, ಹಿಂಭಾಗ- ಎಲ್ಲಾ ಒಂದು ಥರಾ ಗುಂಡು ಗುಂಡಾದ ಮನಮೋಹಕ ಉಬ್ಬು, ಒಳಗಡೆ ಕರೀ ಬಣ್ಣದ ಸೀಟುಗಳು, ಸುಖಾಸನಗಳು...ಹೊರಗಡೆ, ಪಕ್ಕದ ಕಿಟಕಿಗಳಿಗೆ, ಕಾರಿನ ಮುಂಭಾಗದ ವಿಸ್ತಾರವಾದ ಗಾಜಿನ ಎದೆ ಮೇಲೆ, ಗಂಧದ ಲೇಪನ ಮಾಡಿದ್ದರು; ಮತ್ತು ಅರಿಸಿನ ಕುಂಕುಮ ಹಚ್ಚಿದ್ದರು. ಮುಂದಿನ ಕಿಟಕಿಯ ಮೇಲೆ ಒಂದು ದೊಡ್ಡ ಹೂಮಾಲೆ ರಾರಾಜಿಸುತ್ತಿತ್ತು.

‘ಕಾರು ಮದುವೆ ಹೆಣ್ಣಿನಂತೆ ಎಷ್ಟು ಸುಂದರವಾಗಿ ಕಾಣುತ್ತಿದೆ ಅಲ್ವಾ’- ಅಂತ ಶಾಲಿನಿ ಬಗ್ಗಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು. ಎಷ್ಟೇ ಹಿಂದೇಟು ಹಾಕಿದರೂ ನನಗೆ ತಡೆಯಲಾಗಲಿಲ್ಲಾ, ಕೇಳಿದೆ:

‘ಈ ಕಾರು ಹೆಣ್ಣು ಅಂತ ಹೇಗೆ ತೀರ್ಮಾನಕ್ಕೆ ಬಂದೆ?’

‘ನೀವು ಒಬ್ಬರು ಪೆದ್ದರು, ಅಷ್ಟು ಗೊತ್ತಾಗೋದಿಲ್ಲವೇ?’

ನಾನು ಅವಳ ಮುಖ ನೋಡಿದೆ.

‘ಕಾರು ಹುಡುಗಿ ಹೇಗೆ ಅನ್ನೋ ವಿಚಾರವನ್ನು ನಿಮಗೆ ಹೇಳಬೇಕಾ?’ ಎಂದಳು.

ನನ್ನ ತಲೆಗೆ ಹೊಳೆದದ್ದು : ಕಾರು ಅಂದರೆ, ಮೆಕ್ಯಾನಿಕ್‌ನಂತೆ, ಆಯಿಲ್‌ ಛೇಂಜ್‌ ಮಾಡುವಾಗ, ಲ್ಯೂಬ್ರಿಕೇಟ್‌ ಮಾಡುವಾಗ, ಇಲ್ಲವೇ ರಿಪೇರಿ ಮಾಡುವಾಗ, ಕಾರಿನಡಿಯಲ್ಲಿ ತೆವಳಿ ಹೋಗಿ, ಪರೀಕ್ಷೆ ಮಾಡೋ ವಿಚಾರ ಒಂದೇ. ಜಹಜುಗಳಿಗೆ ಸ್ತ್ರೀಲಿಂಗಾತ್ಮಕ ಹೆಸರು ಇಟ್ಟಿದ್ದನ್ನ ಕೇಳಿದ್ದೆ. ಅದಕ್ಕೂ ಇದಕ್ಕೂ ಏನು ಸಂಬಂಧ? ಹಾಗೆ ಮಾಡಿದ ನಂತರವೂ ಆ ಸಮಸ್ಯೆ ಪರಿಹಾರವಾಗುವಂತೆ ನನಗೆ ತೋಚಲಿಲ್ಲಾ. ಎರಡು ಮಕ್ಕಳ ತಂದೆಯಾಗಿ ನನ್ನ ಹೆಂಡತಿಯಿಂದ ಈ ತರಹ ವಿಚಾರಗಳಲ್ಲಿ ತರಬೇತಿ ಪಡೆಯಬೇಕಾಗಿ ಬಂತಲ್ಲಾ ಎಂದು ನನ್ನ ಮನಸ್ಸಿಗೆ ಅವಮಾನವಾದಂತೆ ಕಂಡರೂ, ‘ಹೇಳು, ಹೇಗೆ’- ಎಂದೆ.

‘ಈ ಕಾರು ನಯ ನಾಜೂಕಿನ ಟೂ ಸೀಟರ್‌ ‘ಕೂಪ್‌ಉ’. ನೋಡಿ ಹೇಗಿದೆ ! ಕೆಂಪು ಕೆಂಪಾಗಿ ನಾಚಿದ ಹೆಣ್ಣಿನಂತೆ ನಿಂತಿಲ್ವೇ? ಇದರ ಹೆಸರೋ ‘ಪೋರ್ಷಾ ’ ಅಂತ. ಪಿಕ್‌ ಅಪ್‌ ಟ್ರಕ್ಕೋ, ದೊಡ್ಡ ವ್ಯಾನೋ, ಎಸ್‌ಯುವಿ, ಆರ್‌ವಿ, ಮೊಬೈಲ್‌ ಹೋಂಉ ಆಗಿದ್ದಿದ್ದರೆ, ಅದು ಗಂಡು. ಆವಾಗ, ಅವುಗಳ ಹೆಸರು ಸಿಲ್ವರಾಡೋ, ವಾಯೇಜರ್‌, ಮೌನ್ಟನೀರ್‌, ರ್ಯಾನ್ಗ್‌ಲರ್‌- ಅಂತ ಏನೇನೋ ಇರ್ತಾ ಇತ್ತು. ಈಗ ಅರ್ಥವಾಯ್ತೆ?’ ಎಂದು ಮುಖಕ್ಕೆ ಮಂಗಳಾರತಿ ಮಾಡಿದಳು.

ಆ ವೇಳೆಗೆ ಕಾರಿಗೂ ಮಂಗಳಾರತಿ ಮಾಡುತ್ತಾ, ಪೂಜೆ ಕೊನೆಯ ಹಂತದಲ್ಲಿದೆ, ಇನ್ನೇನು ಮುಗೀತು- ಎಂದು ಪುರೋಹಿತರು ವ್ಯಕ್ತಪಡಿಸಿದ್ದನ್ನು ಕೇಳಿ, ಎಲ್ಲರೂ ‘ಸಧ್ಯ....’ ಎಂದು ನಿಟ್ಟುಸಿರು ಬಿಟ್ಟರು, ಮೆಲ್ಲಗೆ, ಅವರಿಗೆ ಕೇಳಿಸದ ಹಾಗೆ. ಯಾಕೆಂದರೆ, ನಮ್ಮ ಸಬ್ವೇ ಜಾಯ್ಸ್‌, ಅಲ್ಲಾ ಸುಬ್ಬಾ ಜೋಯಿಸರ ಪೂಜೆ ಅಂದ್ರೆ ಸ್ವಲ್ಪ ಸಾಂಗವಾಗಿಯೇ, ದೀರ್ಘವಾಗಿಯೇ ನೆರವೇರುತ್ತೆ. ಕಾರಣ, ನಮ್ಮ ನರಸಿಂಹ ಹೇಳ್ತಾನೆ: ‘ನಮ್ಮಲ್ಲಿ ದೇವರುಗಳ ಸಂಖ್ಯೆ ಸ್ಪಲ್ಪ ಜಾಸ್ತೀನೇ ನೋಡಿ. ಅವರನ್ನೆಲ್ಲ ಒಂದೊಂದಾದ್ರೂ ಮಂತ್ರ ಹೇಳಿ, ಬರಮಾಡಿಕೊಳ್ಳಬೇಕು, ನಮಸ್ಕರಿಸಬೇಕು, ಪ್ರಾರ್ಥಿಸಬೇಕು, ಗೊತ್ತಾ? ಬೇಗ ಬೇಗ ಬೇಗ ಅಂದ್ರೆ, ಅದು ಹೇಗೆ ಸಾಧ್ಯ?’

ಕಾರಿನ ನಾಲ್ಕು ಚಕ್ರಗಳಡಿಯಲ್ಲಿ ರಸವತ್ತಾದ ಒಂದೊಂದು ನಿಂಬೆಯ ಹಣ್ಣನ್ನಿಟ್ಟು, ‘ಚಾಲಕಾಸನದಲ್ಲಿ ಕುಳಿತುಕೊಳ್ಳೋಣವಾಗಲಿ’- ಅಂತ ಸುಬ್ಬಾಜೋಯಿಸರು ಶ್ಯಾಮಸುಂದರನಿಗೆ ಅಪ್ಪಣೆ ಕೊಟ್ಟರು. ‘ಚಾಲಕಾಸನ’ ಅಂದರೆ, ‘ಡ್ರೆೃವರ್ಸ್‌ ಸೀಟು’ ಅಂತ ನರಸಿಂಹ ತರ್ಜುಮೆ ಮಾಡಿದ. ‘ರಥ ಹತ್ತೋಕೆ ಹೇಳೋ ವೇದದ ಮಂತ್ರಾನ ಜೋಯಿಸರು ಈಗ ಹೇಳ್ತಾ ಇದಾರೆ!’ ಅಂತಾನೂ ಸೇರಿಸಿದ.

‘ಚಕ್ರಗಳ ಕೆಳಗೆ ನಿಂಬೆಹಣ್ಣೇಕೆ’- ಎಂದು ಬಾಯಿತಪ್ಪಿ ನಾನು ನರಸಿಂಹನಿಗೆ ಕೇಳಿದೆ

ಅವನು ಶುರು ಮಾಡ್ದ. ‘ಪ್ರತಿ ಹೊಸ ವಾಹನಕ್ಕೂ ಅದು ಇಷ್ಟಿಷ್ಟು ಪ್ರಾಣಿಗಳನ್ನು ಜಖಂ ಮಾಡೋದು; ಅಥವಾ ಇಷ್ಟಿಷ್ಟು ಪ್ರಾಣಿಗಳನ್ನು ಕೊಲ್ಲೋ ಸಂಭವ ಇದೆ ಅಂತ Quota ಗಳು ಮೊದಲೆ ತೀರ್ಮಾನವಾಗಿ ಬಿಟ್ಟಿರುತ್ತೆ; ನಿಗದಿ ಆಗಿ ಬಿಟ್ಟಿರುತ್ತೆ- ಅಂತ ನಂಬಿದವರ ನಂಬಿಕೆ. ಆ ಕೋಠಾ ಇದೆಯಲ್ಲ ಅದನ್ನು ಪ್ರಾರಂಭದಲ್ಲೆ ಈಡೇರಿಸಿಬಿಡಲು, ಆ ಪ್ರಾಣಿಗಳನ್ನು ಆಮೇಲೆ ಆಹುತಿ ಕೊಡುವ ಬದಲು, ಈ ನಿಂಬೇ ಹಣ್ಣುಗಳನ್ನು ಸಿಂಬಾಲಿಕ್‌ ಆಗಿ, ಅವುಗಳ ಜಾಗದಲ್ಲಿ ಉಪಯೋಗಿಸುತ್ತಾರೆ, ಗೊತ್ತಾ?’ ನಮ್ಮ ನರಸಿಂಹನ ಈ ಕರ್ಮ ಸಿದ್ಧಾಂತ, ಈ ದಯೆ ತುಂಬಿದ ಕಾರ್ಯಾಚರಣೆ, ಬುದ್ಧ ಬಂದು ಬಲಿ ತಪ್ಪಿಸಿದ್ದು- ಎಲ್ಲಾ ಮೆಚ್ಚಿದೆ.

ಶ್ಯಾಮಸುಂದರ್‌ ಕಾರಿನಲ್ಲಿ ಹೋಗಿ ಕುಳಿತ. ಸುಬ್ಬಾ ಜೋಯಿಸರು ಶ್ಯಾಮಸುಂದರನಿಗೆ ಸೂಚನೆ ಕೊಟ್ಟರು, ಇಗ್ನಿಷನ್‌ ಹಾಕಲು. ನನ್ನ ಪಕ್ಕದಲ್ಲಿದ್ದ ನರಸಿಂಹ ಮೆಲ್ಲಗೆ ಹೇಳಿದ : ‘ಈಗ ಸುಬ್ಬಾ ಜೋಯಿಸರು ಹೇಳುತ್ತಿರುವುದು ‘ಅಗ್ನಿ ಸೂಕ್ತ’ ಗೊತ್ತಾ?’ ನಾನು ತಲೆದೂಗಿದೆ.

ಶ್ಯಾಮಸುಂದರ ಕಾರನ್ನು ಸ್ವಲ್ಪ ನಡೆಸಿದ; ಚಕ್ರಗಳು ನಿಂಬೆಹಣ್ಣುಗಳ ಮೇಲೆ ಹೋಗಿ, ಅವು ಒಡೆದು ಚೂರಾದವು; ನಿಂಬೆಹಣ್ಣಿನ ಮೇಲೆ ಚಕ್ರಬಿಟ್ಟಾಗ, ಸುಬ್ಬಾ ಜೋಯಿಸರು ಹೇಳುತ್ತಿದ್ದುದನ್ನು ನರಸಿಂಹ ವ್ಯಾಖ್ಯಾನಿಸುತ್ತಿದ್ದ. ಅದೆಲ್ಲಾ ಬರೆದರೆ, ನಿಮಗೆ ತುಂಬಾ ಬೋರ್‌ ಆಗುತ್ತೆ.

ಈಗ ಬೇಡ.

ಸುಬ್ಬಾ ಜೋಯಿಸರ ಅನುಜ್ಞೆಯ ಮೇರೆಗೆ, ಶ್ಯಾಮಸುಂದರ್‌ಮತ್ತು ಕೋಕಿಲಾ ಕೈ ಕೈ ಹಿಡಿದುಕೊಂಡು ಕಾರನ್ನು ಪ್ರದಕ್ಷಿಣೆ ಹಾಕಿ ಸುತ್ತ ತೊಡಗಿದರು.

‘ಈಗೇನು ನಡೆಯುತ್ತಿದೆ ?’ ಕುತೂಹಲ ತಡೆಯಲಾರದೆ, ವಿಚಾರಿಸಿದೆ ನರಸಿಂಹನನ್ನು.

‘ಸಪ್ತ ಚಕ್ರಾವರ್ತ ಶಪಥ’

‘ಅಂದರೆ ?’

‘ ಮದುವೆಗಳಲ್ಲಿ ‘ಸಪ್ತಪದಿ’ಎನ್ನುತ್ತಾರಲ್ಲಾ ಹಾಗೆ ಕಾರು ಪೂಜೆಯಲ್ಲಿ ಇದು ಕೊನೇ ಹಂತ !’

‘ಏನು ಹೇಳ್ತಿದ್ದಾರೆ ?, ಏನು ನೀನು ಹೇಳೋದು?’ - ಪ್ರಶ್ನಿಸಿದೆ.

‘ಪ್ರೋಗ್ರಾಂ ಬ್ರೋಷೂರ್‌ನ ನೋಡಿ ; ಅದರಲ್ಲಿ ಅದೆಲ್ಲವನ್ನೂ ಕನ್ನಡದಲ್ಲಿಯೇ ವಿವರಿಸಿದ್ದಾರೆ’ ಎಂದು ಪ್ರೋಗ್ರಾಂ ಬ್ರೋಷೂರನ್ನು ಕೈಯಲ್ಲಿ ಇಟ್ಟು ತೋರಿಸಿದ. ತೆಗೆದು ಓದಿದೆ.

ಲೇಖನದ ಮೊದಲ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Car Warming ritual in developed countries too !! Dr. Ashwath N Rao St. Louis Missori takes a dig at this practice, very familiar in developing countries especially in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more