• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲಿದ್ದರೂ ಬರ ಸೆಳೆವ ನಮ್ಮೂರಲ್ಲಿ ಕಮ್ಮುನಿಕೇಷನ್‌....

By Staff
|

*ಸತೀಶ್‌ ಕುಮಾರ್‌, ಅಲೆಕ್ಸಾಂಡ್ರಿಯಾ

Satish Kumar, Alexandriaಜಡ್‌ ಜಡ್ಡಿ ನಕ್ಕ್‌ ನಕ್ಕು, ಟಂಕ್‌ ಟಂಕ್‌ ನಕ್ಕ್‌ ನಕ್ಕಾ... ಎಂದು ಜಕರ್ಯಾ ಹಲಗೆ ಹೊಡೆಯುತ್ತಾ ಬಂದರೆ, ಮುದುಕರಿಂದ ಮಕ್ಕಳಾದಿಯಾಗಿ ಎಲ್ಲರೂ ರಸ್ತೆಗೆ ಬಂದು ನೋಡುವವರೇ. ‘ಇವತ್ತು ಇಂಥಾ ದಿವಸ ಸೊಸೈಟಿಯಲ್ಲಿ 2 ಕೆಜಿ ಸಕ್ರೆ, 5 ಕೆಜಿ ಗೋಧಿ ಕೊಡ್ತಾರಂತೆ !’ ಎನ್ನುವ, ಇಲ್ಲಾ ‘ಮುಂದಿನ ಶನಿವಾರ ಸಂತೆ ದುರ್ಗಮ್ಮನ ಗುಡಿ ತಾವ’ ಎಂದೋ ಕೂಗಿ ಹೇಳುವ ಸುದ್ದಿ ಸೋಜಿಗವಾಗದೇ ಇನ್ನೇನು ? ಶನಿವಾರ ಸಂತೆ, ವರ್ಷಕ್ಕೊಂದೆರಡು ಬಾರಿ ಸೇರುವ ದುರ್ಗಮ್ಮನ ಕೇರಿ ಸಂತೆ, ಇಲ್ಲ ಅಪರೂಪಕ್ಕೊಮ್ಮೆ ಕೋಟಿಪುರದ ಸಂತೆ, ಊರಿನ ಹಟ್ಟಿ ಹಬ್ಬದ ಪ್ರಚಾರವಾಗಿರಬಹುದು, ಇದೇ ಇತ್ಯಾದಿ ವಿಷಯಗಳು ಇವನಿಂದಲೇ ತಿಳಿಯತಕ್ಕವು ! ಇದೇ ಜಕರ್ಯಾ ಒಂದು ದಿನ ರಾಮಚಂದ್ರ ಶೆಟ್ಟರ ಟೂರಿಂಗ್‌ ಥಿಯೇಟರ್‌ನಲ್ಲಿ ರಜನಿಕಾಂತ್‌ ನಟಿಸಿದ ‘ ಪ್ರಿಯಾ’ ಸಿನೆಮಾ ಇದೆ ಎನ್ನೋ ಬದಲು ‘ಫ್ರೀ’ ಇದೆ ಎಂದು ‘ಸಿನೆಮಾ ಫ್ರೀ ಅಂತೆ.. ’ ಎಂದು ಹೊಸ ಕ್ರಾಂತಿಯನ್ನೇ ಮಾಡಿದ್ದ !

ನೀವು ಬೆಳಗ್ಗೆ ಏಳುತ್ತಿದ್ದ ಹಾಗೆ ‘ಗಜಮುಖನೆ ಗಣಪತಿಯೇ ನಿನಗೆ ವಂದನೆ...’ ಎಂಬ ಹಾಡನ್ನು ಕೇಳಿದಿರೋ ಒಂದೇ ನಿಮಗೆ ಆವತ್ತು ಯಾರದೋ ಮದುವೆಯ ಸಿಹಿ ಊಟ ಅಥವಾ ಬರೀ ಸಿನಿಮಾ ಹಾಡುಗಳ ರಸದೂಟ ಅಥವಾ ಎರಡೂ ಕಾದಿದೆಯೆಂದೇ ಅರ್ಥ ! ಈ ಹಾಡನ್ನು ನಮ್ಮೂರಲ್ಲಿ ಎಷ್ಟರ ಮಟ್ಟಿಗೆ ಬಳಸುತ್ತಾರೆಂದರೆ, ಎಲ್ಲ ಕಾರ್ಯಕ್ರಮವೂ ಇದರಿಂದಲೇ ಆರಂಭ- ಮದುವೆ- ಮುಂಜಿ ಇರಬಹುದು, ಶುಭ- ಅಪರ ಕಾರ್ಯಗಳಿರಬಹುದು, ಹೋಗಲಿ ದಿನಾ ಸಿನಿಮಾದವನೂ ಇದೇ ಈ ಹಾಡನ್ನೇ ಸಿನಿಮಾ ಚಾಲೂ ಆಗುವ ಕುರುಹಾಗಿ ಬಳಸುತ್ತಾನೆ. ಸಿನಿಮಾ ರಸ್ತೆಯಲ್ಲಿ ನೀವು ನಡೆದಾಡುತ್ತಿರುತ್ತೀರಾದರೆ, ಈ ಹಾಡು ಹಾಕಿದಾಗ ಸ್ವಲ್ಪ ಹುಷಾರಾಗಿರಿ, ಯಾಕೆಂದರೆ ಜನರು ಸಿನಿಮಾ ನೋಡುವ ಭರದಲ್ಲಿ ನಿಮ್ಮನ್ನೇ ತಳ್ಳಿ ಕೊಂಡು ಹೋದಾರು. ಇನ್ನು ಈ ಹಾಡು ಹೇಳಿದ ಎಸ್‌. ಜಾನಕಿಯವರಿಗೇ ಸಾಕಪ್ಪ ಸಾಕು, ಈ ಹಾಡನ್ನು ಯಾಕಾದರೂ ಹೇಳಿದೆನೋ ಅನ್ನುವಷ್ಟರ ಮಟ್ಟಿಗೆ ಅದರ ಬಳಕೆ ಇದೆ. ಇಷ್ಟೇ ಏಕೆ , ಈ ಮೈಕಾಸುರನ ಹಾವಳಿ ಬಗ್ಗೆ ಮತ್ತೊಂದು ಮಹಾಪ್ರಬಂಧವನ್ನೇ ಬರೆಯಬಹುದು.

ಎಲೆಕ್ಷನ್‌ ಸಮಯದಲ್ಲಿ ಆರಂಭವಾಗುವ ‘ಮಾನ್ಯ ಮತದಾರ ಬಂಧುಗಳೇ...’ ಕೇಳುವ ಆ ದೇವರಿಗೇ ಪ್ರೀತಿ ! ಕನ್ನಡ, ಸಂಸ್ಕೃತ ಪದಗಳ ಹೊಗಳು ಶಬ್ದಗಳ ಮಹಾ ಮೇಳವೇ ಇಲ್ಲಿ ಜಮಾಯಿಸುತ್ತದೆ. ನಮ್ಮಲ್ಲಿ ರಾಜಕೀಯ ಧುರೀಣರನ್ನು ಹೊಗಳುವ ಬಗೆಯನ್ನು ಕೇಳುವ ಯಾವ ದೊರೆಯೂ ಹೊಟ್ಟೆ ಕಿಚ್ಚು ಪಟ್ಟಾನು, ಅವರ ಹೊಗಳು ಭಟರಿಗೆಲ್ಲಿ ಈ ವಿದ್ಯೆ ಸಿದ್ಧಿಸೀತು ? ಒಂದು ಲೊಟಕ ಅಂಬಾಸಿಡರ್‌ ಕಾರು, ಅದರಲ್ಲಿ ಹಿಂದಿನ ಸೀಟಿನಲ್ಲೊಬ್ಬ, ಒಂದೇ ತಾರಕ ಸ್ವರದಲ್ಲಿ ಅರಚುತ್ತಿರುತ್ತಾನೆ, ಇನ್ನು ಕಾರಿಗೆ ಕಟ್ಟಿದ ಬ್ಯಾನರ್‌ಗಳೂ ಸಹ ಏನು ಕಡಿಮೆಯವಲ್ಲ, ಅವಂತೂ ಇನ್ನೂ ರಂಜನೀಯವಾಗಿರುತ್ತವೆ !

‘ಕನ್ನಡ ಚಲನ ಚಿತ್ರ ಪ್ರೇಮಿಗಳೇ, ಚಿತ್ರ ರಸಿಕರೇ, ಚಿತ್ರಕಲಾ ಪೋಷಕರೇ, ಇಂದಿನಿಂದ ನಿಮ್ಮ ನೆಚ್ಚಿನ ಶ್ರೀವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ನಟ ಸಾರ್ವಭೌಮ, ಗಾನಗಂಧರ್ವ, ರಸಿಕರ ರಾಜ, ಪದ್ಮಭೂಷಣ ಡಾಕ್ಟರ್‌ರ್‌ರ್‌.. ರಾಜ್‌ಕುಮಾರ್‌ ಅವರ ಹಾವಿನ ಹೆಡೆ ದಿನಾಲು ಮೂರು ಆಟದಲ್ಲಿ ಪ್ರದರ್ಶನವಾಗಲಿದೆ... ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ, ಮಗದೊಮ್ಮೆ ನೋಡಿದರೆ ಹಲವಾರು ಬಾರಿ ನೋಡಲೇ ಬೇಕೆನಿಸುವ ಚಿತ್ರ, ಹಾವಿನ ಹೆಡೆ, ಹಾವಿನ ಹೆಡೆ ...ಹಾವಿನ ಹೆಡೆ !ತಾರಾಗಣದಲ್ಲಿ ರಾಜ್‌ಕುಮಾರ್‌ರವರೊಂದಿಗೆ ಸುಲಕ್ಷಣಾ ಹಾಗೂ ಮತ್ತಿತರರು ನಟಿಸಿದ್ದಾರೆ... ’. ನಟ ನಟಿಯರ ಬಿರುದು ಬಾವಲಿಗಳು ಇಲ್ಲೇ ಹುಟ್ಟುವವು, ಇನ್ನು ನಿಮಗೆ ಬಿರುದು ನೀಡಲು ಸಹಾಯವೇನಾದರೂ ಬೇಕಿದ್ದಲ್ಲಿ ತಿಳಿಸಿ. ನಮ್ಮೂರಿನ ಸಿನಿಮಾ ಮಂದಿರದ ಫೋನ್‌ ನಂಬರ್‌ ಕೊಡುತ್ತೇನೆ. ಒಂದೇ ಅವನ ಎತ್ತಿನ ಗಾಡಿಯ ಹಿಂದೆಯೋ, ಇಲ್ಲಾ ರಿಕ್ಷಾದ ಹಿಂದೋ ಓಡುವ ಹುಡುಗರು, ಸಿನಿಮಾ ಮಂದಿರದವರೆಗೂ ಹೋಗಿ ಅಲ್ಲಿ ಪೋಸ್ಟರ್‌ಗಳನ್ನು ಹಚ್ಚಿ ಅವಕ್ಕೆ ಅಲಂಕಾರ ಮಾಡುವ ಮೋಡಿಯನ್ನು ನೋಡಿ, ಒಂದು ರೂಪಾಯಿ ಕೊಟ್ಟು ಸಿನಿಮಾ ನೋಡಿಕೊಂಡು, ಮರುದಿನ my name is raj, what is your name please ಎಂದು ಹುಡುಗಿಯರನ್ನು ಗೋಳು ಹೊಯ್ದುಕೊಂಡಿದ್ದೂ ಇದೆ ! ಅಣ್ಣಾವ್ರ ಸಿನಿಮಾ ಅಂದರೆ ನಮ್ಮೂರಿನ ಪಕ್ಕದ ಹಳ್ಳಿಗಳಿಂದ ಎತ್ತಿನ ಗಾಡಿಗಳಲ್ಲಿ ಬಂದಿಳಿಯುವ ಜನಗಳಿಗೆ ಲೆಕ್ಕವೇ ಇಲ್ಲ.

ಲಾಟರಿ ಟಿಕೇಟ್‌ ಮಾರಾಟ: ‘ಅಣ್ಣಾವ್ರೇ, ನೀವೇ ಯೋಚನೆ ಮಾಡಿ, ಒಂದು ರುಪಾಯಿ ಕಾಫಿ ಕುಡಿದರೆ ಹೋಗತ್ತೆ, ಅದೇ ಒಂದು ರೂಪಾಯಿಯಿಂದ ಒಂದು ಲಕ್ಷ ಗೆಲ್ಲಬಹುದು ! ನಿಮ್ಮದೇ ಸರಕಾರದವರ ಲಾಟರಿ, ಜನರಿಂದ ಜನಗಳಿಗಾಗಿ ಬಂದ ಲಾಟರಿ, ಮುಂದಿನ ಇದೇ ಶುಕ್ರವಾರ ದಾವಣಗೆರೆಯಲ್ಲಿ ಡ್ರಾ ಇದೆ, ಇನ್ನು ಕೇವಲ ಕೆಲವೇ ಟಿಕೇಟ್‌ಗಳು ಮಾತ್ರ, ಇಂದೇ ಕೊಳ್ಳಿ, ಕರ್ನಾಟಕ ರಾಜ್ಯ ಲಾಟರಿ!’ ಇದೇನಪ್ಪ ! ಕಾರಲ್ಲಿ ನೋಡಿದ್ರೆ ಯಾರೂ ಮಾತಾಡ್ತಾ ಇಲ್ಲ, ಆದ್ರೆ ಧ್ವನಿ ಮಾತ್ರ ಬರ್ತಾ ಇದೆ ಅಂತ ನೋಡಿದ್ರೆ, ಒಳಗೆ ಒಂದು ಟೇಪ್‌ರೆಕಾರ್ಡರ್‌ನ ಅಸ್ಥಿ ಪಂಜರ ಈ ಕೆಲಸ ಮಾಡ್ತಾ ಇದೆ ! ಅದೇ ಕೀರಲು ಸ್ವರ, ಅದೇ ಸಂದೇಶ, ಆದ್ರೆ ಕ್ಯಾಸೆಟ್‌ ಮಾತ್ರ ದಿನೇ ದಿನೇ ಬದಲಾಗುತ್ತದೆ. ಪರವಾಗಿಲ್ಲ , ಹೆಚ್ಚು ಮ್ಯಾನ್‌ಪವರ್‌ ಇರುವ ನಮ್ಮ ದೇಶದಲ್ಲೂ ಯಂತ್ರಗಳ ಬಳಕೆ ಮಾಡುತ್ತಾರೆನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಎಲ್ಲಿ ಸಿಕ್ಕಬಹುದು !

ನಮ್ಮೂರಿನ ಪೇಟೆ ಧಾರಣೆಗಳು , ಯಾವ dow jones ಅಥವಾ NASDAQ ಮೇಲೂ ಅವಲಂಬಿತವಾಗಲ್ಲ. ಅವುಗಳನ್ನು ಬಿತ್ತರಿಸೋಕೆ ಸಿಬಿಎಸ್‌ ನೆಟ್‌ವರ್ಕೂ ಇಲ್ಲ. ಅವುಗಳನ್ನು customer service ಅರಿಯದ ನಮ್ಮೂರಿನ ರೈತರೇ ನಿರ್ವಹಿಸುತ್ತಾರೆ. ಯಾರಿಗೂ ನಷ್ಟವಿಲ್ಲದ ವ್ಯವಹಾರವದು. ಧಾರವಾಡ ಆಕಾಶವಾಣಿಯಲ್ಲಿ ದಿನಾ ಸಂಜೆ ಪ್ರದೇಸ ಸಮಾಚಾರಕ್ಕೆ ಮೊದಲು ರೈತರಿಗೆ ಸಲಹೆಯಲ್ಲಿ ಭಿತ್ತರವಾಗುವ ‘ಪೇಟೆ ಧಾರಣೆ’ ಇವರಿಗೆ ಲೋಕದೆಲ್ಲೆಡೆ ಹೇಗೆ ಎಂದು ತಿಳಿವಳಿಕೆ ನೀಡುತ್ತದೆ. ನಾನು ಮೆಣಸಿನ ಕಾಯಿ ಮಾರೋ ವ್ಯಾಪಾರಿ ಗಡ್ಡದ ಈರಬಸಣ್ಣ ಎಷ್ಟೋ ಸರ್ತಿ ಒಣ ಮೆಣಸಿನ ಕಾಯಿ ಚೀಲಕ್ಕೆ ತಂಬಿಗೆಗಟ್ಟಲೆ ನೀರು ಸುರಿಯೋದನ್ನ ನೋಡಿದ್ದೇನೆ. ಇನ್ನು ಇಪ್ಪತ್ತು -ಮೂವತ್ತು ಕೆಜಿ ತೂಕದ ಚೀಲವನ್ನು ಸ್ಪ್ರಿಂಗ್‌ ತ್ರಾಸ್‌ನಲ್ಲಿ ಲೀಲಾಜಾಲವಾಗಿ ಎತ್ತಿ ತೂಕ ನಿಗದಿ ಮಾಡೋ ಅವನ ಪರಿಯನ್ನು ಸ್ಪ್ರಿಂಗ್‌ ತ್ರಾಸ್‌ ಕಂಡು ಹಿಡಿದವರು ನೋಡದಿದ್ದರೆ ಸಾಕು, ಇಲ್ಲಾ ಆತ್ಮ ಹತ್ಯೆ ಮಾಡಿಕೊಂಡಾರು. ಅದೇ ನಮ್ಮೂರಿನ ರೈತರು ತೂಕ/ ಅಳತೆ ಮಾಡಿ ಕೊಟ್ಟಾಗ ಅವರು ಕೊಡುವುದು ಯಾವಾಗಲೂ ಅಳತೆಗಿಂತ ತುಸು ಹೆಚ್ಚೇ. ಒಂದು ಕೆಜಿಗೆ ಐವತ್ತು ಗ್ರಾಂ ಹೆಚ್ಚು ಕೊಡುತ್ತಿದ್ದೇವಲ್ಲ ಎಂಬುದು ಅವರನ್ನು ಬಾಧಿಸದು, ಅದು ಹೂವಿನ ಮಾರೇ ಇರಲಿ, ಮೊಳವೇ ಇರಲಿ, ಕತ್ತರಿಸುವಾಗ ಸ್ವಲ್ಪ ಹೆಚ್ಚಿಗಿ ಹಿಡಿ ಎಂದು ಜನ ಅಂತಾರಂತಲೇ ಹೂವಮ್ಮ ಎರಡು ಇಂಚು ಹೆಚ್ಚು ಕತ್ತರಿಸುವುದು.

ಬಸ್ಸಿನಲ್ಲಿ ಬಂದು ಗೋಗರೆಯುವ ಭಿಕ್ಷುಕರು: ಇವರ ಬಗ್ಗೆ ಹೇಳಲೇ ಬೇಕು, ನಾನು ಸಂಜೆ ಊಟ ಮಾಡಲೇ ಬೇಕು ಎಂದು ಒಬ್ಬ ದುಂಬಾಲು ಬಿದ್ದರೆ, ಮತ್ತೊಬ್ಬ ಕಾಲೇಜಿಗೆ ಹೋಗಿಯೋ, ಮದುವೆಯಾಗಿಯೋ ಕೈಕೊಟ್ಟ ಇಲ್ಲಾ ಸತ್ತು ಹೋದ ಮಗನ ಕತೆಯನ್ನು ನಿಮ್ಮ ಕಣ್ಣಲ್ಲಿ ನೀರು ಬರುವಂತೆ ಹೇಳಿ ದುಡಿಯುತ್ತಾರೆ. ಇವರು ಊರಿನ, ಮನೆಯ ಆಗು ಹೋಗುಗಳಲ್ಲಿ ಭಾಗಿಗಳು- ‘ನಿಮ್ಮ ದೊಡ್ಡ ಮಗಳು ಬಂದಾಳಂತ್‌ ಹೌದೇನ್ರಿ ? ’ ಅಂದೋ ಅಥವಾ ‘ ಇದು ನಿಮ್ಮ್‌ ಮೊಮ್ಮಗನೇನ್ರವ್ವಾ, ಭಾಳ್‌ ಶ್ಯಾಣ್ಯಾ ಆಕಾನ್‌ ಬಿಡ್ರಿ’ಅಂದೋ ಅವರ ತಿಳಿವಳಿಕೆಯನ್ನು ಪ್ರಚುರಪಡಿಸುತ್ತಾರೆ !

ಊರಿಗೊಂದೇ ಟೆಲಿಫೋನ್‌ ಎಕ್ಸ್‌ಚೇಂಜ್‌: ನಮ್ಮೂರಿನ ದೂರವಾಣಿ- ಹೆಲ್ಲೋ ಅಂಥ ಯೆಲ್ಲ್‌ ಮಾಡದೇ ಬೇರೆ ವಿಧಿ ಇಲ್ಲಾ. ಅವ ಹೇಳಿದ್ದೆ ಧಾರಣೆ ಅವನದ್ದೇ ಧೋರಣೆ. ಇಲ್ಲಿ ಕೆಲಸ ಮಾಡುವ ಜನರು ಸಕಲ ಕಲಾ ವಲ್ಲಭರು. ಸರ್ವ ಕೆಲಸ ಬಲ್ಲರು. ಗುಂಡಿ ತೋಡುವುದಕ್ಕೆ ಲಾಯಕ್ಕು, ಮುಚ್ಚುವುದಕ್ಕೆ ನಾಲಾಯಕ್‌. ಹೆಂಡ ಕುಡಿದೂ ಕಂಬ ಹತ್ತಬಲ್ಲರು! ಕೈಗೆ ಕೈಗವಸಿಲ್ಲ, ಆಧುನಿಕ ಸಲಕರಣೆಗಳಿಲ್ಲ, ಪುರಾತನ ಕಾಲದ ಸರಕಾರಿ ಸ್ವಾಮ್ಯದ ಉಪಕರಣಗಳ ಸಹವಾಸ. ಮೊದಲೇ ಹೇಳಿದ್ದೇನೆ, ಊರಿಗೊಂದೇ ಎಂದು, ಇನ್ನು ಇವರ ಸ್ನೇಹಿತರಾಗಿರೋದೇ ಧರ್ಮ !

ನಮ್ಮೂರಿನ ಹರಿಕಾರ ಅಂದ್ರೆ ಅಂಚೆಯಣ್ಣ ಯಾವಾಗಲೂ ಒಂದು ಹರ್‌ಕ್ಯುಲೆಸ್‌ ಸೈಕಲ್‌ ಹತ್‌ತಾನಣ್ಣ . ಅವನ ಕಷ್ಟ ಅವನಿಗೆ. ಬಹಳ ಕಡಿಮೆ ಸಂಬಳಕ್ಕೆ ದುಡಿಯುವ ಅವನ ಫೆಡರಲ್‌ ಬದುಕು ನನ್ನ ಶತ್ರುವಿಗೂ ಬೇಡ. ಇವತ್ತಿಗೂ ಅವನ ಉತ್ಪಾದನೆಯಲ್ಲಿ ದೊಡ್ಡ ರೂಪದಲ್ಲಿ ಬರುವುದೆಂದರೆ ಮನಿ ಆರ್ಡರನ್ನು ತೆಗೆದುಕೊಂಡು ಕೃತಜ್ಞತೆಯಿಂದ ನಮ್ಮೂರಿನವರು ಕೈ ಮುಂದೆ ಮಾಡಿ ಕೊಡುವ ಒಂದೆರಡು ರೂಪಾಯಿಗಳ ಮೊತ್ತ. ಎಲ್ಲರಿಗೂ ಎಲ್ಲ ಸುದ್ದಿಯೂ ಮುಟ್ಟುತ್ತದೆ ! ಹಾಗೇ ಎಲ್ಲರ ಕಷ್ಟ ಸುಖಗಳಲ್ಲಿ ಅವನಿಗೂ ಸರಿಯಾದ ಪಾಲು ಸಿಗುತ್ತದೆ. ಇನ್ನು the fastest way of communication ಅಂದ್ರೆ , ಲೋಕಲ್‌ ವಿಷಯವಾದರೆ ಊರಿನ ಹೆಣ್ಣು ಮಕ್ಕಳಿಗೆ ಆ ವಿಷಯವನ್ನು ತಿಳಿಸಿ, ಇದು ತುಂಬಾ ಸೀಕ್ರೆಟ್‌, ಇದನ್ನು ಯಾರಿಗೂ ಹೇಳಬೇಡ ಎಂದರೆ ಆಯಿತು. ನಿಮ್ಮ ಸಂದೇಶ ತಲುಪಬೇಕಾದ ಕಡೆ ಕ್ಷಣಾರ್ಧದಲ್ಲಿ ತಲುಪುತ್ತದೆ. ಅಥವಾ ಅದು ನೂರು ಮೈಲಿಯಿರಲಿ, ಐನೂರು ಮೈಲಿಯಿರಲಿ, ಬಸ್ಸಿನ ಡ್ರೆೃವರ್‌ಗೆ ಎರಡು ರೂಪಾಯಿ ಕೊಟ್ಟರೆ, ನಿಮ್ಮವರು ಬಂದು ಬಸ್‌ಸ್ಟ್ಯಾಂಡಿನಲ್ಲಿ ತೆಗೆದುಕೊಳ್ಳುತ್ತಾರೆಂದರೆ, ಆತನ ಸೇವೆ ಯಾವ UPS, FedEx ಗಳಿಗೂ ಕಡಿಮೆ ಏನಿಲ್ಲ. ನಿಮ್ಮ ಪಾರ್ಸೆಲ್‌ ಸುರಕ್ಷಿತ ಮತ್ತು ತ್ವರಿತವಾಗಿ ತಲುಪೀತು. ಆದರೆ ಯಾವುದೇ package tracking facility ಇಲ್ಲ ಜೋಕೆ !

ಅಮ್ಮಾ ಹಾಲೋ.. ಮತ್ತು ಅಮೈ: ನಮ್ಮೂರಲ್ಲಿ ದಿನಾ ಬೆಳಗ್ಗೆ ಈ ಎರಡು ಸ್ವರಗಳು ಇಲ್ಲದೇ ಇದ್ದರೆ ಸೂರ್ಯನೂ ಬೇಜಾರಾದಾನು. ಈ ಧ್ವನಿ ಅವರ ಆರೋಗ್ಯವನ್ನು ಶಕ್ತಿಯನ್ನೂ ತಿಳಿಸುವುದೂ ಅಲ್ಲದೇ ಅವರ ಗಡಿಬಿಡಿಯನ್ನೂ ಸೂಚಿಸುತ್ತದೆ. ‘ಅಮೈ’ ಎನ್ನುವ ಮಹೇಶಣ್ಣನ ಪ್ರೀತಿಯ ಕರೆಯಲ್ಲಿ ನನಗೆ ಮೊದಲು ಅಮೈ ಅಂದರೆ ಏನು ಎಂದು ಗೊತ್ತಿರಲಿಲ್ಲ. ಕೊನೆಗೆ ಅದರ ಅರ್ಥ ಆತ ಅಮ್ಮಾ ಎನ್ನುವುದಕ್ಕೆ ಬಳಸುವ, ಆತನೇ ಬಳಸಿ ಸೃಷ್ಟಿಸಿದ ಪರ್ಯಾಯ ಪದ ಎಂದು ಗೊತ್ತಾಯಿತು ! ಅವನ ಹೆಸರು ಮಹೇಶ ಎಂದಿದ್ದರೂ ಎಲ್ಲರೂ ಅವನನ್ನು ಕರೆಯುವುದು ಅಮೈ ಎಂದೇ. ಇನ್ನು ಸೊಪ್ಪು ತರಕಾರಿ ಮಾರಿ ಬರುವವರ ಹೆಸರು, ಅವರು ಮಾರುವ ಹೊತ್ತಿನಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ. ‘ಏ ಮೆಣಸಿನ ಕಾಯಿ, ಹೆಂಗಮ್ಮಾ ಕೆಜಿಗೇ ? ’ ಎಂದೋ ಅಥವಾ ‘ಏ ಸೊಪ್ಪು ಬಾರಪ್ಪಾ ಇಲ್ಲಿ ’ಎಂದೂ ಅವರನ್ನೂ ಸಂಬೋಧಿಸಬಹುದು. ಕೆಲವೊಮ್ಮೆ ಬೀಟ್‌ರೂಟ್‌ ಗಡ್ಡೆಯೇ ಒಂದು ಕೆಜಿ ಕಲ್ಲಾಗಿ ಬಳಕೆಯಾಗುವುದರ ಜೊತೆಗೆ ಅದನ್ನೇ ಮಾಪನವಾಗಿ ಬಳಸಿ ಎರಡು ಕೆಜಿ, ಅರ್ಧ ಕೆಜಿ ತೂಗುವುದು ವಾಡಿಕೆ ! ಹೆಚ್ಚಿನ ಅಕ್ಷರ ಬರದ ನಮ್ಮೂರಿನ ಸಂತೆ ವ್ಯಾಪಾರಿಗಳು, ಎಂಥ ಅಮೇರಿಕನ್ನರೂ ನಾಚುವಂತೆ ಕೂಡಿ, ಕಳೆದು ಭಾಗಿಸಿ ಗುಣಿಸಿ ಲೆಕ್ಕ ಮಾಡಿ ಸರಿಯಾಗಿ ಚಿಲ್ಲರೆ ಕೊಡುವುದನ್ನು ನೀವು ಬೆರಗಿನಿಂದ ನೋಡುವಂತೆ ಮಾಡುತ್ತವೆ.

ನಮ್ಮೂರಿನ ಮೆಸ್ಸೇಜ್‌ ಬೋರ್ಡ್‌ಗಳು: ಬಾವಿಕಟ್ಟೆ @ನಮ್ಮೂರು.ಕಾಮ್‌ ಅಂದ್ರೆ ನಮ್ಮೂರಿನ ಮಹಿಳೆಯರು ಕಲೆತು ಕೂಡಿ ತಮ್ಮ ವಿಷಯ ಭಂಡಾರವನ್ನು ಹಂಚಿಕೊಳ್ಳುವ ಜಾಗ ! ಈ ಮೆಸ್ಸೇಜ್‌ ಬೋರ್ಡ್‌ನಲ್ಲಿ ಬಾರದ ವಿಷಯಗಳೇ ಇಲ್ಲ. ಬಿಲ್‌ ಕ್ಲಿಂಟನ್‌ನಿಂದ ಅಫ್ಘಾನಿಸ್ತಾನದವರೆಗಿನ ಅಂತಾರಾಷ್ಟ್ರೀಯ ವಿಷಯಗಳೂ ಅಲ್ಲದೆ ಸ್ಥಳೀಯ ‘ ಆಕರ್ಷಣೆಗಳೂ’ ಇಲ್ಲದಿಲ್ಲ. ಆಗಾಗ್ಗೆ ರಸ್ತೆಯಲ್ಲಿ ನಡೆಯುವ ನಿಮಗೆ ಅವರಿವರ ಜಗಳಗಳೂ ಕೇಳಿ, ನಿಮ್ಮ ಮನಸ್ಸು ಅಲ್ಲಿನ ಪದ ಪುಂಜಗಳ ಬಳಕೆಯ ವೈಖರಿಗೆ ಮುದಗೊಳ್ಳಬಹುದು, ಇಲ್ಲಾ ‘ಭಾಷೆ ಹೇಗೆ ಬೆಳವಣಿಗೆ ಹೊಂದೀತು ?’ ಎಂದು ಗಾಢವಾಗಿ ಯೋಚಿಸುವ ಚಿಂತಕನನ್ನು ನಿಮ್ಮಿಂದ ಹೊರತರಿಸಬಹುದು. ‘ಅವನೌವ್ವನ...’ಎಂದು ಶುರುವಾಗುವ ಗಂಡಸರ ಜಗಳಗಳು ಹೇಳಬೇಕಾದುದನ್ನು ಹೇಳುವುದೂ ಅಲ್ಲದೆ ಒಬ್ಬನ integrity ಯ ಬೆಲೆ ಏನು ಎಂದು ಕೆಲವೊಮ್ಮೆ ಪರಿಣಾಮಕಾರಿಯಾಗಿಯೂ ತೋರಿಸುತ್ತವೆ !

ಅವರವರ ಭಾವಕ್ಕೆ, ಅವರವರ ಬಕುತಿಗೆ ತಕ್ಕಂತೆ ನಮ್ಮೂರಿನ ಜನ ಮುಗ್ಧರು, ಸೋಮಾರಿಗಳು, ಸಹೃದಯರು, ವಾಚಾಳಿಗಳು, ಕಪಟವನ್ನರಿಯದವರು (ಹದಿನೈದು ವರ್ಷದ ಹಿಂದೆ), ಎಲ್ಲರ ಕಷ್ಟಗಳಿಗೂ ಆಗು-ಹೋಗುವವರು. ನನ್ನಂತಹವರನ್ನು ಕಂಡರೆ ಇವರಿಗೆ ಮಹಾ ಪ್ರೀತಿ. ‘ ಇನ್ನೂ ಕನ್ನಡಾ ಚೊಲೋತ್ನಾಗಿ ಮಾತಾಡ್ತಿ ಹೊದಿಲ್ಲೋ, ಅಷ್ಟೇ ಸಾಕ್‌ ಬಿಡು ಮತ್ತ ’ ಎಂದು ಉಬ್ಬಿಸಿ ಹಲವಾರು ಪ್ರಶ್ನೆಗಳನ್ನು ಒಂದೇ ಉಸಿರಲ್ಲಿ ಕೇಳುವವರು ! ‘ ಅಲ್ಲೇ ಯಾವ್ದಾರ ಬಿಳಿ ಹುಡ್ಗಿ ಕಟಗಂಡ್‌ ಹಳ್ಳ ಹತ್ತಿ ಹೋಗಿ ಬಿಟ್ಟಿ ಅಂತಾ ಮಾಡಿದ್ವಿ ! ’ಅಂಥ ಇಂಟೆಗ್ರಿಟಿಯನ್ನೇ ಕೆದಕಿ ನೋಡುವವರು. ನಮ್ಮೂರಲ್ಲಿ ಯಾವ್ದೂ ಪಬ್ಲಿಕ್‌ ಪ್ರೆೃವೇಟ್‌ ಅಂತಾ ಏನೂ ಇಲ್ಲ - ಎಲ್ಲ ವಿಷಯಗಳೂ ಮೆಸೇಜ್‌ ಬೋರ್ಡಿಗೆ ಬಂದೇ ಬರುತ್ತವೆ. ಸಾರ್ವಜನಿಕ ಆಸ್ತಿ- ಪಾಸ್ತಿಗಳ ಬಗ್ಗೆ ಕೇಳಬೇಡಿ. ಸಾರ್ವಜನಿಕ ನಲ್ಲಿಯೋ, ಮೂತ್ರಾಲಯವೋ, ಮತ್ತೊಂದೋ ನೋಡಲೂ ಅಸಹ್ಯವಾಗುವಷ್ಟರ ಮಟ್ಟಿಗಿರುತ್ತವೆ. ಇನ್ನು ಗೋಡೆ, ಕಾಂಪೌಂಡುಗಳ ಮೇಲಿನ ಬಣ್ಣದ ಬರಹಗಳು, ಭಿತ್ತಿ ಚಿತ್ರಗಳು ನಮ್ಮೂರಲ್ಲಿ ಸರ್ವಕಾಲಿಕವಾಗುಳಿದು, ಹಳೆ ನೆನಪನ್ನು ತರುತ್ತವೆ. ಏನೇ ಹೇಳಿ ಸ್ವಾಮಿ, ನಮ್ಮೂರು, ನಮ್ಮೂರೇ. ಅದರದೇ ಚೆಂದ, ಅದರದೇ ಅಂದ , ನಾವು ಎಲ್ಲಿದ್ದರೂ ನಮ್ಮನ್ನು ಬರಸೆಳೆದುಕೊಳ್ಳುತ್ತದೆ. ಲಕ್ಷ್ಮೀ ಪೂಜೆ ದಿನ ನಮ್ಮೂರಲ್ಲಿ ಇನ್ನೂ ಮಂಡಕ್ಕಿ, ಹಣ್ಣುಗಳನ್ನು ಧಾರಾಳ ಹಂಚುತ್ತಾರೆ. ವಿಜಯದಶಮಿ ದಿನ ಬ್ರಾಂಡಿ ಶಾಪ್‌ನವನಿಗೂ ಮಕ್ಕಳು ಬನ್ನಿ ಕೊಟ್ಟರೆ ಹತ್ತು ಪೈಸೆಯನ್ನಾದರೂ ಕೊಡುತ್ತಿದ್ದ. ನಮ್ಮೂರಲ್ಲೇ ಇರೋದು ಅಂದ್ರೆ ಏನೋ ಸುಖಾ, ಇಮೈಲ್‌ ಇಲ್ಲಾ, ಇಂಟರ್‌ನೆಟ್‌ ಇಲ್ಲಾ ಅಂತ ಎರಡು ದಿನ ಅನಿಸಿದರೂ ಚೆನ್ನಾಗಿ ನಿದ್ದೆ ಬರೋದು ಅಲ್ದೆ, ಬೆಳಗ್ಗೆ ಎದ್ದಾಗ ಹಕ್ಕಿಗಳೂ ನಿಮಗೆ ಸುಪ್ರಭಾತ ಹಾಡಿಯಾವು. ಪ್ರತಿ ಗಲ್ಲಿ-ಕೇರಿಗಳ ಪರಿಚಯ ನಿಮಗಿರೋದಕ್ಕಿಂತ - ನಿಮ್ಮ ಪರಿಚಯ ಅವುಗಳಿಗಿರುವುದರಿಂದ ಬದುಕು ಬಲು ಸುಲಭ. ಮತ್ತೆ ನಮ್ಮೂರಲ್ಲಿ ಡೈರೆಕ್ಷನ್‌ ನೋಡಲಿಕ್ಕೆ, yahpoo maps ಏನೂ ಬೇಡ. ಯಾರನ್ನಾದರೂ ‘ಇಲ್ಲಿ ಇಂತಹವರ ಮನೆ ಎಲ್ಲಿ ?’ ಅಂದರೆ ಅವರ ಮನೆಯಲ್ಲಿ ಯಾವುದೋ ಶುಭಕಾರ್ಯವೆಂದರೆ ಅಡಿಕೆ ಬಾಳೆಗಳು ಸಲೀಸಾಗಿ ಪುಕ್ಕಟೆ ಬಂದು ಬಿದ್ದಾವು. ಬುಟ್ಟಿ ತುಂಬ ಹಣ್ಣುಗಳ ಬಳವಳಿ ಉಚಿತವಾಗಿ ಹಾರೈಕೆಯಾಡನೆ ಸಿಕ್ಕೀತು. ಎಂತಹ ಬಡವರ ಮನೆಗೆ ಹೋದರೂ ಚಾ ಕುಡಿ, ರೊಟ್ಟಿ ತಿನ್ನು, ಕೈ ತೊಳಕ, ಊಟ ಮಾಡ್‌ ನಡಿ ಎಂಬ ಶಬ್ದಗಳು ಕೇಳಿಸದೇ ಇರಲ್ಲ. ಏನಿಲ್ಲವೆಂದರೂ ನಿಮ್ಮ ಕಷ್ಟಕ್ಕೆ, ಪರಿಸ್ಥಿತಿಗೆ ತಕ್ಕಂತೆ ಒಸರುವ ಜನರ ಅನುಕಂಪದ ಸಹಾಯದ ಒರತೆ ಯಾವತ್ತೂ ಬತ್ತಿಲ್ಲ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more