• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರಿಂದ ದೇವರುಗಳಾ? ಏನೀ ಅವತಾರದ ಅವಾಂತರ !

By Staff
|

*ಎಂ. ಎನ್‌. ಪದ್ಮನಾಭ ರಾವ್‌, ಮಿಲ್ಪಿಟಾಸ್‌, ಕ್ಯಾಲಿಫೋರ್ನಿಯ

Padmanabha Rao, Melanahalli, The Authorಮಗಳಿಗೆ ಪ್ರತಿದಿನ ಇಂಡಿಯನ್‌ ಕಲ್ಚರ್ರೂ ಅಂತ ಧ್ರುವ, ಪ್ರಹ್ಲಾದ , ರಾಮ ಹಾಗೂ ಕೃಷ್ಣರ ಕಥೆ ಹೇಳಿ ಹೇಳಿ ಸಾಕಾಗಿ ಒಂದು ದಿನ ನಿಲ್ಲಿಸಿದೆ. ಯಾಕೆ ಅಂತೀರ ? ಪ್ರತಿಯಾಂದು ಕಥೆ ಕೇಳಿದಾಗಲೂ ಬುಲೆಟ್ಟಿನಂತೆ ಬರುತ್ತಿತ್ತು ಪ್ರಶ್ನೆಗಳ ಮೇಲೆ ಪ್ರಶ್ನೆಗಳು.

‘ಅಪ್ಪ, ಸ್ಟಾರ್‌ಗಳು ಹೇಗೆ ಕ್ರಿಯೇಟ್‌ ಆಗುತ್ತೆ ಅಂತ ನನಗೆ ಗೊತ್ತು. ಆದರೆ ಧ್ರುವನನ್ನು ನಿಜವಾಗಿಯೂ ಸ್ಟಾರ್‌ ಮಾಡಿಬಿಟ್ಟನಾ ವಿಷ್ಣು ? ರಾಮ, ಕೃಷ್ಣ, ನಾರಾಯಣ ಎಲ್ಲಾ ಒಂದೇ ದೇವರಾದರೆ ನಿಜವಾದ ದೇವರು ಯಾರು ? ದೇವರಿಗೆ ಸಾವಿಲ್ಲ ಎಂದೆ. ಆದರೆ ರಾಮ ಸತ್ತು ಹೋದನಲ್ಲಾ.. ಅದು ಹೇಗೆ ?’

-ಹೀಗೆ ಹತ್ತು ಹಲವು ಪ್ರಶ್ನೆಗಳು ನನ್ನನ್ನು ಕಕ್ಕಾಬಿಕ್ಕಿಯನ್ನಾಗಿ ಮಾಡಿ ಬೆಡ್‌ ಟೈಂ ಕಥೆಗೆ ಈಗ ಬೇರೆ ಸ್ವರೂಪ ಕೊಟ್ಟಾಯಿತು. ಒಮ್ಮೆ ಹೀಗೇ ಯೋಚಿಸುತ್ತಿದ್ದೆ... ಹೌದು, ಈ ಅವತಾರಗಳ ಅವಾಂತರ ಏನೂ ಅಂತ. ಯೋಚನೆ ಬಂದದ್ದೇ ತಡ, ಯಾಹೂಗೆ ಹೋಗಿ ಅವಾಂತರ ಎಂದು ಟೈಪಿಸಿ, ಇಲಿ-ಮರಿಯ (ಅದೇ ಮೌಸ್‌) ಬೆನ್ನ ಮೇಲೆ ಹೊಡೆದೆ ! ತಕ್ಷಣ ಬಂತು ಸ್ವಾಮಿ, ಎರಡು ಜಾಲ ಪುಟದ ವಿವರ. ಅವತಾರ ಸೈಟು ಮತ್ತು ಲಾರ್ಡ್‌ ಕೃಷ್ಣ ಸೈಟೂ... ದೇವರ ಎಲ್ಲಾ ಅವತಾರದ ಪ್ರಾರಂಭಕ್ಕೂ ಒಂದು ಇಂಗ್ಲಿಷ್‌ ಕ್ಯಾಲೆಂಡರಿನ ದಿನಾಂಕ ಸಹ ದಾಖಲಿಸಿದ ಸೈಟು.

ಸರಿ. ಅವತಾರಗಳ ಬಗ್ಗೆ ಇನ್ನೇನು ಕೊಟ್ಟಿದ್ದಾನೆ ಎಂದು ಕುತೂಹಲ ತಡೆಯದೆ ನೋಡಿದರೆ, ಎಲ್ಲಾ ಉಂಟು ಸ್ವಾಮಿ ! ಅವಾಂತರದ ಚಿತ್ರಗಳು ಮತ್ತು ಅವತಾರದ ಡೆಫಿನೇಷನ್ನು.. ವಾಹ್‌, ಇಷ್ಟೆಲ್ಲಾ ಕಷ್ಟಪಟ್ಟು ವಿವರಗಳು ಹಾಕಿದ್ದಾರಲ್ಲಾ ಎಂದು, ಇನ್ನೂ ಗಾಢವಾಗಿ ಚಿಂತಿಸಲು ಪ್ರಾರಂಭಿಸಿದೆ. ಭಗವದ್ಗೀತೆಯಿಂದ ಚೈತನ್ಯ ಚರಿತಾಮೃತದವರೆಗೆ ಸಿಕ್ಕ ಸಿಕ್ಕ ಎಲ್ಲಾ ವಿವರಗಳನ್ನು ಅರಿಯಲು ಶುರು ಹಚ್ಚಿಕೊಂಡೆ.

ಈ ಅವತಾರ ದೇವರ ಸಾಮ್ರಾಜ್ಯದಿಂದ ಬರುತ್ತೆ. ಇದಕ್ಕೆ ಇನ್ಕಾರ್ನೇಷನ್ನು ಎನ್ನುತ್ತಾರೆ. ..ಇತ್ಯಾದಿ, ಇತ್ಯಾದಿ ವಿವರ ಓದಿದರೂ ಸರಿಯಾಗೆ ತಲೆಗೆ ಹತ್ತದೆ ನನ್ನ ಕೆಲವು ಮಿತ್ರರಿಗೆ ಇ-ಮೇಯ್ಲ್‌ ಹಚ್ಚಿದೆ. ಅಯ್ಯಾ, ಸ್ನೇಹಿತ ಬಾಂಧವರೇ, ನಿಮಗೆ ಎಷ್ಟು ಗೊತ್ತು ಅವತಾರದ ಅವಾಂತರ ? ಬಂತು ನೋಡಿ ಸಾಲು ಸಾಲು ಉತ್ತರಗಳು. ನಿಮಗೂ ಒಮ್ಮೆ ಬರಬಹುದು ನನ್ನ ಸಣ್ಣ ಪ್ರಶ್ನೆ. ಒರಿಜಿನಲ್‌ ಪ್ರಶ್ನೆ ನೋಡುವ ಆಸಕ್ತಿಯಿಂದ ಹುಡುಕಿ ನೋಡಿದರೆ ಇ-ಮೇಯ್ಲ್‌ ಪುಟದಲ್ಲಿ ಕೊಟ್ಟ ಕೊನೆಯಲ್ಲಿ ನೋಡಿದರೆ ಮೌಸ್‌ಗೆ ಕೊಡುವ ಕಷ್ಟ ಸ್ವಲ್ಪ ತಪ್ಪಿಸಬಹುದು ನೋಡಿ.

ಓದಿ ಮತ್ತು ಹತ್ತು ಜನರಿಗೆ ಕಳುಹಿಸಿ !

ಸ್ವಾಮಿ, ಈ ಇ-ಮೇಯ್ಲ್‌ ಎಂದಾಕ್ಷಣ ಕೆಲವು ವಿಚಾರ ಹೇಳಲೇ ಬೇಕು. ಹಲವು ಜನರಿಗೆ ಇದು ಒಂದು ಮೋಜಿನ ಸಂಗತಿಯಾದರೆ ಕೆಲವರಿಗೆ ಇದೊಂದು ಆಟದ ಚಟ. ಮೊನ್ನೆ ನನಗೊಂದು ಇ-ಮೇಯ್ಲ್‌ ಬಂತು. ಅಲ್ಲಿ- ಇಲ್ಲಿ ಸುತ್ತಿ ಹೊಟ್ಟೆ ದಪ್ಪ ಮಾಡಿಕೊಂಡು, ‘ಇದನ್ನು ಓದಿ ಮತ್ತು ಹತ್ತು ಜನರಿಗೆ ಕಳುಹಿಸಿ. ನಿಮಗೆ ಗುಡ್‌ಲಕ್‌ ಆಗುತ್ತೆ’ ಅಂತ. ಆಗುತ್ತೋ, ಸಿಗುತ್ತೋ ಗೊತ್ತಿಲ್ಲ. ಆದರೆ ಇ-ಮೇಯ್ಲ್‌ ಈಗಾಗಲೇ ನೂರಾರು ಜನರಿಗೆ ಸರಿಯಾಗಿ ಗುಡ್‌ಲಕ್‌ ತಂದು ಕೊಟ್ಟಿದೆ ಎಂದು !!

ಆ ಎಲ್ಲಾ ಇ-ಮೇಯ್ಲ್‌ ಓದಿದ ನಂತರ ಹತ್ತು ಜನರಿಗೆ ತಳ್ಳಿದ ಮಿಕಗಳ ಗುಂಪಿನ ಗಾಂಪ ನಾನಾಗಿದ್ದು ಸತ್ಯ. ಹಾಗೇ ನಾನಾಗಿಯೇ ಬಯಸಿದ್ದಲ್ಲ ! ಕೆಲವೊಮ್ಮೆ ಡಿ. ಎಂ. ವಿ ರೆಕಾರ್ಡ್‌ ಓದಬೇಕೇ ? ಇಲ್ಲಿ ನಿಮ್ಮ ಹೆಸರು, ಕುಲ-ಗೋತ್ರ ಹಾಕಿ ಎಂಬ ಜಾಲಪುಟದ ವಿವರ ಸಹ ಬರುವುದುಂಟು. ಹೇಳಿದಂತೆ ಎಲ್ಲ ವಿವರ ಟೈಪಿಸಿ, ಕ್ಲಿಕ್ಕಿಸಿದರೆ ಬರುವುದು ಕೋತಿಯ ಹಲ್ಕಿರಿದ ಮುಖ. ಹಲವು ಬಾರಿ ‘ರೆಕಾರ್ಡ್‌ ಹುಡುಕುತ್ತಿದ್ದೇನೆ’ ಎಂಬ ಇನ್ಕಾರ್ನೇಷನ್‌ಗಳ ಬಳಿಕ.

ನನ್ನ ಸ್ನೇಹಿತ ಹೇಳಿದ್ದು ಇನ್ನೂ ಅಮೋಘ. ಕೆಲವು ಜಾಹೀರಾತುಗಳ ರಂಪದಂತೆ ಈ ಇನ್ಕಾರ್ನೇಷನ್ನು ಅಂತ. ಅದು ಹೇಗೆ ಎಂದಾಗ, ಈ ಎಕ್ಸ್‌- 10 ಜಾಹೀರಾತು ನೋಡು. ಏನಾದರೂ ಸೀರಿಯಸ್ಸಾಗಿ ಜಾಲ ಪುಟದಲ್ಲಿ ಹುಡುಕ ಹೊರಟರೆ ಬರುವುದು ಈ ಜಾಹೀರಾತು. ಸುಂದರ ಹುಡುಗಿಯ ಮೈ - ಮಾಟದೊಡನೆ ಸಣ್ಣ ಕ್ಯಾಮರಾ ಕಣ್ಣು. ಬಂದ ಜಾಹೀರಾತನ್ನು ಮುಲಾಜಿಲ್ಲದೆ ಎಕ್ಸ್‌ ಮೇಲೆ ಕ್ಲಿಕ್ಕಿಸಿ ಹೊಸಕಿ ಹಾಕಿದರೆ ನೀವೂ ನೋಡಬಹುದು, ಅದು ಇನ್ನೊಂದು ಇನ್ಕಾರ್ನೇಷನ್ನು. ಸರಿ ಬಿಡು ಇಷ್ಟೆಲ್ಲಾ ಸುಲಭ ಅಲ್ಲ ದೇವರ ಇನ್ಕಾರ್ನೇಷನ್ನು. ನಾನೆಂದೆ! ಇನ್ನು ಹ್ಯಾಗಪ್ಪಾ ಎಂದು ಮರು ಪ್ರಶ್ನೆ ಕೇಳಿದ ನಾವು ಇಂಟರ್‌ನೆಟ್‌ ಚಾಟ್‌ ಮಾಡುತ್ತಿದ್ದಾಗ.

ಕರೆಯದೆ ಬರುವವನ, ಕರೆದರೂ ಬರದವನ..

Technology and incarnationಈ ಚಾಟ್‌ ಎಂದರೆ ಏನು ಎಂದು ಹೇಳುತ್ತೇನೆ . ಇದೂ ಒಂದು ರೀತಿಯ ಅವತಾರದ ಅವಾಂತರವೇ. ನೀವು ಏನಾದರೂ ಮಾಡುತ್ತಿರಿ. ಕಂಪ್ಯೂಟರ್‌ ಡಬ್ಬದ ಮೇಲೆ ಆಗಾಗ್ಗೆ ನಿಮಗೆ ಕೇಳುತ್ತಿರುವುದು ಇನ್ಕಾರ್ನೇಷನ್ನಿನ ಪೂರ್ವ ಸಿದ್ಧತಾ ಶಬ್ದಗಳು. ಬಾಗಿಲ ಮೇಲೆ ‘ನಾಕ್‌ ನಾಕ್‌’ ಶಬ್ದ. ಅಥವಾ ‘ಥೂ ಹೋಗಾಚೆ’ ಎಂದು ಬಾಗಿಲು ಮುಚ್ಚುವ ಶಬ್ದ. ಒಮ್ಮೊಮ್ಮೆ ಬರುವುದು ಔಟ್‌-ಆಫ್‌- ಬ್ಲೂನಿಂದ ಏನ್ಮಾಡ್ತಾ ಇದ್ಯೋ ಎಂಬ ಚಾಟ್‌ ಆಮಂತ್ರಣ. ಆ ಕ್ಷಣದಲ್ಲಿ ನೆನಪಿಗೆ ಬರುವುದು ‘ಕರೆಯದೆ ಬರುವವನ, ಕರೆದರೂ ಬರದವನ ಹುಡುಕಿ...’ ಹೋಗಲಿ ಬಿಡಿ, ಏನು ಹೇಳ್ತಿದ್ದೆ ಅಂದ್ರೆ, ಇದೊಂದು ರೀತಿಯ ಚಾಟ್‌ ಇನ್ಕಾರ್ನೇಷನ್‌. ಇದರಲ್ಲಿ ದೇವ ದಾನವರಿದ್ದಾರೆ ಸ್ವಾಮಿ. ಬರೀ ಟೈಪಿಸಿ ಮಾತನಾಡುವ ಇನ್ಕಾರ್ನೇಷನ್ನು ಒಂದಾದರೆ, ದೂ. ಕಾ. ಕರೆಯಂತೆ ಮಾತನಾಡುವ ಚಾಟ್‌ ಸಹ ಒಂದು ರೀತಿಯ ಇನ್ಕಾರ್ನೇಷನ್ನು. ಇದು ಸ್ವಲ್ಪ ತಲೆ ತಿನ್ನುವ ಅವಾಂತರ. ನೀವು ಮಲಗಿದ್ದರೂ ಬಿಡದೆ ಕಾಡುವ ಇನ್ಕಾರ್ನೇಷನ್ನು. ನಿಮ್ಮ ಕಂಪ್ಯೂಟರ್‌ ಆರಿಸಿ, ಮಲಗಿ ಬಿಡಿ. ಬೆಳಗ್ಗೆ ಎದ್ದು ಕಂಪ್ಯೂಟರ್‌ ಹತ್ತಿಸಿ ಇಂಟರ್‌ನೆಟ್‌ನಲ್ಲಿ ಯಾಹು ಸಂದೇಶ ವಾಹಕನನ್ನು ಎಚ್ಚರಿಸಿ ಸಾಕು. ನಿಮಗೆ ಆಗುವುದು ಸಪ್ತಗಿರಿವಾಸನ ದರ್ಶನ. ಬೆಳ-ಬೆಳಗ್ಗೆ ಸಂದೇಶ ವಾಹಕನ ಇನ್ಕಾರ್ನೇಶನ್ನು. ಇಷ್ಟೆಲ್ಲಾ ಅವಾಂತರದ ಜೊತೆಗೇ ಇನ್ನೊಂದು ವಿಶೇಷ ಏನೆಂದರೆ ವರ ಕೊಡುವ ಹಿರಿತನ. ಈ ದೇವರು ಪ್ರತ್ಯಕ್ಷನಾದಾಗ ಯಾರ್ಯಾರು ಏನೇನು ಕೇಳಿದ್ದಾರೆ ಅಂತ ನೆನಪಿಸಿಕೊಂಡರೆ ಬೀಚಿಯವರ ತಿಂಮ ಮೊದಲು ದಿಮ್ಮಲೆ ರಂಗ ಎಂದು ಬರುತ್ತಾನ

ಒಮ್ಮೆ ತಿಂಮ ತಪಸ್ಸಿಗೆ ಕುಳಿತಿದ್ದನಂತೆ ! ದೇವರು ಪ್ರತ್ಯಕ್ಷನಾಗಿ, ‘ನಿನಗೇನು ವರ ಬೇಕಯ್ಯಾ ತಿಂಮ’ ಎಂದು ಕೇಳಿದಾಗ ನಕ್ಕು, ‘ಸ್ವಾಮಿ ವರ ಬೇಕಾಗಿರುವುದು ನನ್ನ ಮಗಳಿಗೆ, ನನಗಲ್ಲ ’ ಎಂದನಂತೆ, ವರಾನ್ವೇಷಣೆ ಮಾಡಿ ಸುಸ್ತಾಗಿದ್ದ ತಿಂಮ. ಹಾಗೇ ಕೆಲವು, ಕೆಲವೇಕೆ ಹಲವು ಬಾರಿ ನೀವು ದರ್ಶನ ಮಾಡಬಹುದು.

‘ನಿಮಗೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ತಿಳಿಯಬೇಕೇ ? ಇಲ್ಲಿ ಕ್ಲಿಕ್ಕಿಸಿ’, ‘ಭಾರತಕ್ಕೆ ಫ್ರೀಯಾಗಿ ದೂ.ಕಾ. ಕರೆ ಮಾಡಿ’ ಅಥವಾ ‘ನಿಮ್ಮ ಲೈಂಗಿಕ ಶಕ್ತಿಯ ಉದ್ದೀಪನ ಉಜ್ವಲಕ್ಕಾಗಿ ನಮ್ಮ ಜಾಲ ಪುಟ ನೋಡಿ’

ಇತ್ಯಾದಿ ಫ್ರೀ - ತನದ ಇನ್ಕಾರ್ನೇಷನ್ನು.

ಸಾಕಪ್ಪಾ ಸಾಕು ಈ ಅವತಾರಗಳ ಅವಾಂತರದ ಪರಿಪಾಟು ಎಂದು ಸುಮ್ಮನಿದ್ದಾಗ, ಮಗಳೆಂದಳು ‘ಏಕಪ್ಪಾ ! ಏನೋ ಯೋಚಿಸುತ್ತಿರುವಂತಿದೆ ?’ ‘ಏನೂ ಇಲ್ಲಮ್ಮ’ ನಾನೆಂದೆ. ‘ದೇವರು ರೂಪ ಬದಲಾಯಿಸಿದರೂ ಒಂದೇ ರೂಪಿ’ ಎಂದು ನನಗೆ ತಿಳಿಯಿತು ಎಂದಳು. ‘ಎಲಾ ಇವಳ. ಇಷ್ಟು ದಿನ ನಾನು ಎಷ್ಟು ಕಷ್ಟ ಪಟ್ಟೆ, ಇವಳಿಗೆ ಹೇಗೆ ಗೊತ್ತಾಯಿತು !’ ಎಂದುಕೊಳ್ಳುತ್ತಾ ‘ಹೇಗಮ್ಮಾ ’ಎಂದೆ.

‘ಇವತ್ತು ನಮ್ಮ ಸ್ಕೂಲ್ನಲ್ಲಿ ಬಣ್ಣಗಳ ಪರಿಚಯ ಪಾಠ ಇತ್ತು. ನಮ್ಮ ಮಿಸ್ಸು ಒಂದು ಪ್ರಯೋಗ ಮಾಡಿ ತೋರಿಸಿದರು. ರೈನ್‌ಬೋ ಕಲರ್ಸ್‌ ಎಲ್ಲಾ ಒಂದು ಚಕ್ರದ ಮೇಲೆ ಹಾಕಿ, ಚಕ್ರ ತಿರುಗಿಸಿದರೆ ಬರೀ ಬಿಳಿ ಬಣ್ಣವಾಯಿತು. ಹಾಗಾಗಿ ಬಿಳಿ ಬಣ್ಣದಿಂದ ರೈನ್‌ಬೋ ಕಲರ್ಸ್‌ ಹೇಗೋ ಹಾಗೆ ದೇವರಿಂದ ಬಣ್ಣ- ಬಣ್ಣದ ದೇವರುಗಳು ಎಂದು ಚೋಟಿ ಹೊರಗೆ ಆಟವಾಡಲು ಓಡಿಯೇ ಬಿಟ್ಟಳು ನೋಡಿ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X