ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಪ್ಪಿಂಗ್‌ ಕಾಂಪ್ಲೆಕ್ಸ್‌ನ ಅಡ್ನ್ಯಾಡೀ ಬಾಗಿಲು !

By Staff
|
Google Oneindia Kannada News

* ಎಚ್‌. ಆರ್‌. ಸತೀಶ್‌ಕುಮಾರ್‌, ಅಲೆಕ್ಸಾಂಡ್ರಿಯಾ

ನನಗೆ ಹೆಚ್ಚು ರಜಾ ದಿನಗಳಿಲ್ಲದ ಕಾರಣ ಸುಬ್ಬನನ್ನು ಮನೆಯಾಳಗೆ ಕೂಡಿ ಹಾಕಿ ಆಫೀಸಿಗೆ ಹೋಗುತ್ತಿದ್ದುದೇ ಸಾಮಾನ್ಯವಾಗಿತ್ತು. ವೀಕೆಂಡ್‌ ಬರಲಿ ಅನ್ನೋ ಮಾತು - ‘ಬರೀ ನೀನು ಮೂಗಿನ ಮೇಲೆ ಹಚ್ಚೋ ತುಪ್ಪಾ ನೋಡಪ್ಪಾ’ ಅಂತ ಅವನೇ ಎಷ್ಟೋಸಲ ಹೇಳಿಯಾಗಿತ್ತು - ಯಾಕೆಂದರೆ ಅವನಿಗೆ ವೀಕೆಂಡ್‌ ಬರಲಿ ಅದು ಮಾಡಾಣ, ಇದು ಮಾಡಾಣ ಅಂತ ನಮ್ಮ ರಾಜಕಾರಣಿಗಳ ಥರಾ ಆಶ್ವಾಸನೆ ಕೊಟ್ಟಿದ್ನೇ ಹೊರತು ಅದರಲ್ಲಿ ಕೈಗೂಡಿದವು ಕೇವಲ ಕೆಲವೇ ಕೆಲವು. ‘ಬರೀ ವೀಕೆಂಡ್‌, ವೀಕೆಂಡ್‌ ಅಂತ ವೀಕೆಂಡ್‌ನ್ಯಾಗೆ ಹುಟ್ಟಿದಂಗೆ ಆಡ್‌ಬೇಡ್ವೋ’ ಅನ್ನೋದು ನನ್ನ ಅಮೇರಿಕನ್‌ ಬದುಕನ್ನು ಕುರಿತು ಅವನ ಮತ್ತೊಂದು ಮೆಚ್ಚುಗೆಯ ಮಾತು!

Author H. R. Satish kumar with his wife Supriyaನಮ್ಮ ಸುಬ್ಬನಿಗೆ ವಿಂಡೋ ಶಾಪ್ಪಿಂಗ್‌ ಅಂದ್ರೆ ಅಲರ್ಜಿ, ‘ಅದೂ-ಇದೂ ನೋಡೇ ಹೊಟ್ಟೆ ತುಂಬಿಸಕಳಾಕ್‌ ಆಗುತ್ತಾ?’ ಅನ್ನೋದು ಅದರ ಹಿಂದಿನ ಕಾರಣ, ಹಾಗೆ ಹೇಳಿ ಹೊರಗಡೆ ಹೋದಾಗ ನಿಡುಸುಯ್ಯುವವನಾದರೂ, ದೊಡ್ಡ-ದೊಡ್ಡ ಮಾಲ್‌ಗೆ ಕರೆದುಕೊಂಡು ಹೋದಾಗ ಸುಬ್ಬ ಕಣ್ಣುಗಳನ್ನು ಮುಚ್ಚಿದವನೇ ಅಲ್ಲ ! ಅದರ ಬಗ್ಗೆ ನಾನೇನೂ ಅಂದುಕೊಳ್ಳದಿದ್ದರೂ, ನಾನು ಹೆದರುತ್ತಿದ್ದುದು ಅವನ ಬಾಯಿಗೆ ಮಾತ್ರ - ಈಗ ತೆರೆದರೆ ಯಾವಾಗ ಮುಚ್ಚುತ್ತೋ, ಯಾರ್ಯಾರಿಗೆ ಉಗಿದು ಉಪ್ಪಿನಕಾಯಿ ಹಾಕ್ತಾನೋ, ಏನೇನು ಪ್ರಶ್ನೆ ಕೇಳ್ತಾನೋ ಅನ್ನೋದು ನನ್ನ ಹೆದರಿಕೆ !

ಗಾಜಿನ ಬಾಗಿಲಿನ ಗಮ್ಮತ್ತು...
ಹೀಗೇ ಅಲ್ಲಿ-ಇಲ್ಲಿ ತಿರುಗಾಡಿ ಒಂದು ಬಟ್ಟೆ ಅಂಗಡಿಗೆ ನುಗ್ಗಲು ತೀರ್ಮಾನಿಸಿದೆವು. ಅಲ್ಲಿನ ಸ್ಲೈಡಿಂಗ್‌ ಅಟೋಮ್ಯಾಟಿಕ್‌ ಗಾಜಿನ ಬಾಗಿಲು ತೆಗೀಲೋ-ಬೇಡವೋ ಅನ್ನುವ ಕನ್‌ಪ್ಯೂಷನ್‌ನಿಂದ ತೆರೆದುಕೊಂಡಿತು. ಸುಬ್ಬ ಒಂದು ಕ್ಷಣ ಮತ್ತೆ ಹಿಂದೆ ಹೋಗಿ ಮುಂದೆ ಬಂದ, ಮತ್ತೂ ಹಾಗೇ ಆಯಿತು. ಅದೇ ಸಮಯಕ್ಕೆ ಒಳಗಿನಿಂದ ಒಬ್ಬ ಕಪ್ಪು ಹೆಂಗಸು ಹೊರಗೆ ಬಂದಳು, ಆಗ ಮಾತ್ರ - ಎಲ್ಲೋ ಆಕೆಯ ಪರಿಚಯ ಹಲವಾರು ವರ್ಷಗಳಿಂದ ಆ ಬಾಗಿಲಿಗೆ ಇದೆ ಎನ್ನುವಂತೆ - ತಕ್ಷಣ ತೆರೆದುಕೊಂಡಿತು. ಸುಬ್ಬ ಇದನ್ನೆಲ್ಲ ಗಮನಿಸಿದವನೇ ದೊಡ್ಡದಾಗಿ ಗಹಗಹಿಸಿ ನಗುತ್ತಾ, ನನ್ನ ಕಡೆ ತನ್ನ scientist ಮುಖ ತಿರುಗಿಸಿದ, ಅವನು ಬಾಯಿ ಬಿಡುವಷ್ಟರಲ್ಲಿ ನಾನು ಅವನನ್ನು ಎಳೆದು ಕೊಂಡು ಅದೇ ಬಾಗಿಲಿನ ಮೂಲಕವೇ ಹೊರಗೆ ಬಂದೆ - ಮತ್ತೆ ಆ ಬಾಗಿಲು ಹಂಗೇ ಮಾಡಿತು - ಒಳಗಿದ್ದವರು ನಮ್ಮನ್ನೇ ನೋಡುತ್ತಿದ್ದರು !

ಹೊರಗೆ ಬಂದರೂ ಇನ್ನೂ ನಗುತ್ತಲೇ ಇದ್ದ ಸುಬ್ಬ, ‘ನಮ್ಮನ್ನು ನೋಡಿ ಆ ಬಾಗಿಲು ಅದ್ಯಾಕೆ ಹಂಗೆ ಮಾಡ್ತು, ಗೊತ್ತಾಯ್ತಾ?’ ಅಂದ.
ನಾನು ‘ What (nonsense)?’ ಅನ್ನೋ ಥರಾ ಮುಖ ಮಾಡಿದೆ.
‘ಅಟೋಮ್ಯಾಟಿಕ್‌ ಬಾಗಿಲಿನ ಸೆನ್ಸರನ್ನೂ ಈ ದೇಶದಲ್ಲಿ ಪ್ರೋಗ್ರ್ಯಾಂ ಮಾಡಿರ್ತಾರೆ ಅಂತ ಕೇಳಿದ್ದೆ, ಆದ್ರೆ ಹಿಂಗೆ ಅಂತ ಗೊತ್ತಿರಲಿಲ್ಲ, ಈಗ ತಿಳೀತು ನೋಡು ಅದರ ಹೂಟಿ’ ಅಂದು ಮತ್ತೆ ಒಂದು ಉಸಿರೆಳೆದುಕೊಂಡು ಮುಂದುವರೆಸಿದ.

‘ನೋಡೋ, ಆ ಬಾಗಿಲ ಹತ್ರ ಒಂದೇ ಕರೀ ಜನ ಅಥ್ವಾ ಬಿಳೀ ಜನ ಬಂದ್ರೆ ಸರಿಯಾಗಿ ಕೆಲಸಾ ಮಾಡುತ್ತೆ, ಆದ್ರೆ ನಮ್ಮಂಥ ಕಂದು ನನ ಮಕ್ಕಳು ಬಂದ್ರೆ ಕನ್‌ಪ್ಯೂಷನ್‌ ಮಾಡ್‌ಕಳತ್ತೆ...’

‘ಯಾಕೇಳ್ತೀನಿ ಅಂದ್ರೆ - ಉದಾಹರಣೆಗೆ ಒಬ್ಬ ಬಿಳಿ ಮನುಷ್ಯ ಬಂದ್ರೆ, ಅವನ ಮೇಲೆ ಬಿದ್ದ ಬೆಳಕು ಹೆಚ್ಚು ರಿಫ್ಲೆಕ್ಟ್‌ ಆಗುತ್ತೆ, ಮತ್ತೆ ಏನೋ ಚಲಿಸೋ ಸೂಚನೇನೂ ಸಿಕ್ಕ ಕೂಡ್ಲೇ ಬಾಗಿಲು ತಕ್ಷಣ ಓಪನ್‌ ಆಗುತ್ತೆ, ಅದೇ ಕರೀ ಮನುಷ್ಯ ಬಂದ್ರೆ ಸ್ವಲ್ಪನೂ ಲೈಟ್‌ ರಿಫ್ಲೆಕ್ಟ್‌ ಆಗಲ್ಲ, ಬರೀ ಚಲಿಸೋ ಸೂಚ್ನೆ ಮಾತ್ರ ಸಿಗುತ್ತೆ, ಆವಾಗ್ಲೂ ತೊಂದ್ರೆ ಇಲ್ಲ, ಬಾಗಿಲು ಸರಿಯಾಗೇ ಕೆಲಸ ಮಾಡುತ್ತೆ, ನಮ್ಮಂಥ ಕಂದು ಬಣ್ಣದವರು ಬಂದ್ರೇ ಎಡವಟ್ಟು ನೋಡು - ಅತ್ಲಾಗೂ ಇಲ್ಲ, ಇತ್ಲಾಗೂ ಇಲ್ಲ !’ ಎಂದು ಅವನ ದೊಡ್ಡ ಸಂಶೋಧನೆಯನ್ನೇ ಜಗತ್ತಿಗೆ ಪ್ರಚುರ ಪಡಿಸಿದಷ್ಟು ಸಮಾಧಾನಗೊಂಡ.

ಇವ ಸ್ವಲ್ಪ ಅಧಿಕ ಅಂದುಕೊಂಡ್ರೂ, ಬಹಳ ವರ್ಷಗಳಿಂದ ಇವನನ್ನು ಬಲ್ಲ ನಾನು , anyway, he has a point ಎಂದು ಮನಸ್ಸಿನಲ್ಲಿ ಅಂದುಕೊಂಡು ಬಿಳಿ-ಕಂದು-ಕಪ್ಪು ಬಣ್ಣಗಳ ಲೋಕದಲ್ಲಿ ತೇಲತೊಡಗಿದೆ.

ಈ ರೀತಿ ಇನ್ನೂ ಏನೇನು ಹರಟೆ ಹೊಡೆದುಕೊಂಡು, ಅತ್ತಿತ್ತ ತಿರುಗಾಡಿ ಸ್ವಲ್ಪ ಪರ್‌ಚೇಸೂ ಮಾಡಿಕೊಂಡು ‘ನಮ್ಮನೇ ಹತ್ರ ಇರೋ ಸೂಪರ್‌ ಮಾರ್ಕೆಟ್‌ಗೆ ಹೋಗೋಣ ನಡಿ, ಸ್ವಲ್ಪ ಹಾಲು ತರಬೇಕು’ ಅಂದು ಸುಬ್ಬನನ್ನು ಹೊರಡಿಸಿದೆ. ‘ನಡೀ ಗುರೂ, ನೀನು ಎಲ್ಲಿ ಹೇಳ್ತೀಯೋ ಅಲ್ಲಿಗೆ, ನಂಗೇನೂ ಪ್ರಾಬ್ಲಂ ಇಲ್ಲ, ಸಾಯಂಕಾಲ ಏಳೂವರೆಗೆ ಸೈನ್‌ಫೀಲ್ಡ್‌ ನೋಡಿದ್ರೆ ಸಾಕು!’ ಎಂದ.

ಸುಬ್ಬ ನನ್ನ ಜೊತೆ ಎಷ್ಟೋ ಸಾರಿ ಹಾಲು ತರೋಕ್‌ ಬಂದ್ರು, ಇವತ್ತು , Fat Free 1%, 2% ಹಾಲಿನ ಬಗ್ಗೆ ಸ್ವಲ್ಪ ಕುತೂಹಲಿತನಾಗಿ ನೋಡತೊಡಗಿ ‘ನಮ್ಮೂರೇ ಬೆಷ್ಟ್‌ ಕಣೋ !’, ‘ನಮ್ಮೂರಲ್ಲಿ ಹಾಲು ಯಾವಾಗ್ಲೂ ನ್ಯಾಚುರಲ್ಲಿ , Fat Free ನಮ್ಮ ಗೌಳಿಗರಿಗೆ ಥ್ಯಾಂಕ್ಸ್‌ ಹೇಳಬೇಕು ನೋಡು- ನೀರಿಗೆ ಹಾಲನ್ನೋ, ಹಾಲಿಗೆ ನೀರನ್ನೋ ಬೆರಸೋ ಕಲೆ ಅವರಿಗೆ ವಂಶಪಾರಂಪರ್ಯವಾದದ್ದು !’ ಎಂದ.

ಶೋಷಣೆ...

ನಾನು ‘I agree with you on the first part - ನಮ್ಮೂರೇ ಬೆಸ್ಟ್‌!’ ಎಂದು ಸುಮ್ಮನಾದೆ. ಹಾಲಿನ ಜೊತೆಗೆ ಮತ್ತೊಂದೆರಡು ಐಟೆಮ್ಸ್‌ ತೆಗೆದುಕೊಂಡು ಚೆಕ್‌ ಇನ್‌ ಮಾಡಲು ಲೈನಿನಲ್ಲಿ ನಿಂತೆವು. ನನ್ನ ಹಿಂದೆ ಸುಬ್ಬ ಇದ್ದ, ನನ್ನ ಮುಂದೆ ಒಬ್ಬ ಬಿಳಿ ಮನುಷ್ಯ ‘ಪೂರ್ತಿ ಅಂಗಡಿಯನ್ನೇ ಖಾಲಿ ಮಾಡುತ್ತೇನೆ’ ಎಂದು ಶಪಥ ತೊಟ್ಟವನಂತೆ ಕೈಗಾಡಿಯಿಂದ ತೆಗೆದೂ-ತೆಗೆದೂ ಸಾಮಾನುಗಳನ್ನು ಇಡುತ್ತಲೇ ಇದ್ದ. ನಾವು ಕಾದು ನಿಂತಿದ್ದೆವು. ಅವನದೆಲ್ಲ ಮುಗಿದ ಮೇಲೆ ಕೌಂಟರಿನಲ್ಲಿ ನಿಂತಿದ್ದ ಚೆಲುವೆ (ಈ ಲಲನಾಮಣಿಗಳನ್ನೆಲ್ಲ ಸುಬ್ಬ ಕರೆಯುವುದೇ ಹಾಗೆ!) - thank you for shopping with us, you have a great day!’ ಎಂದು ತನ್ನೆಲ್ಲಾ ಹಲ್ಲುಗಳನ್ನು ಪ್ರದರ್ಶಿಸಿ ಉಲಿದಳು - ಆತ ಮುಗುಳ್ನಕ್ಕು ಮುಂದೆ ಹೋದ. ನಂತರದ ಸರದಿ ನಮ್ಮದು - ಸುಬ್ಬನೂ ನಾನೂ ಸೇರಿ ನಮ್ಮ ಕೈಲಿದ್ದ ಹಾಲು, ಬಾಳೆಹಣ್ಣು, ಬ್ರೆಡ್‌, ಇತ್ಯಾದಿ ವಸ್ತುಗಳನ್ನು ಕೌಂಟರಿನ ಮೇಲೇರಿಸಿದೆವು. ಅದನ್ನೆಲ್ಲ ಅವಳು ಸ್ಕ್ಯಾನ್‌ ಮಾಡಿ ಪ್ಲಾಸ್ಟಿಕ್‌ ಬ್ಯಾಗಿನೊಳಗಿಟ್ಟವಳೇ, ನನ್ನ ಕ್ರೆಡಿಟ್‌ ಕಾರ್ಡನ್ನು, ಉಜ್ಜಿ, ಸಹಿ ಹಾಕಿಸಿಕೊಂಡು - ಬರೀ thank you!’ ಎಂದು ಸುಬ್ಬನ ಹಿಂದೆ ನಿಂತಿದ್ದ ಗಿರಾಕಿಯ ಸಾಮಾನುಗಳನ್ನು ಸ್ಕ್ಯಾನು ಮಾಡತೊಡಗಿದಳು. ಸುಬ್ಬ ಹೇಳುವವರೆಗೆ ಇದ್ಯಾವುದರಲ್ಲಿ ನನಗೇನೂ ವ್ಯತ್ಯಾಸ ಕಾಣಲಿಲ್ಲ, ಆದರೆ ಸುಬ್ಬ ಒಂದೇ ಸಮನೆ ಬುಸುಗುಟ್ಟ ತೊಡಗಿದ ! (ಅಂದಹಾಗೆ ನಾವು ಈ ಸ್ಟೋರ್‌ನಿಂದ ಹೊರಬರುವಾಗ ಗಾಜಿನ ಅಟೋಮ್ಯಾಟಿಕ್‌ ಬಾಗಿಲು ನಮ್ಮಿಬ್ಬರಿಗೆ ಯಾವುದೇ ತಾರತಮ್ಯ ತೋರಲಿಲ್ಲ).

‘ಇಲ್ಲಿ ಭಯಂಕರ customer service ಇದೆ, ಹಂಗೇ ಹಿಂಗೇ ಅಂಥ ಹಾರಾಡ್ತೀಯಲ್ಲ, ಇವರುಗಳ treatment ನೋಡಿದ್ಯಾ? ನಮಗೊಂದು ಥರಾ, ಮಂದಿಗೊಂದು ಥರಾǚ’ ಎಂದ. ನಾನು ಸುಮ್ಮನೇ ಇದ್ದೆ.

‘ Descrimination’ ಅದೂ-ಇದೂ ಅಂತ ಸುಟ್ಟು-ಸುಡುಗಾಡು ಕಾನೂನುಗಳಿದ್ದರೂ, ಜನ ಬದಲಾಯಿಸ್ತಾರೇನಯ್ಯಾ? ಅವರವರಿಗೆ ಹೆಂಗೆ ಬೇಕೋ ಹಂಗೆ ಮಾಡ್ಕ್ಯಂತಾರೆ, ಆಡ್ಕ್ಯಂತಾರೆ. ಅದಕ್ಕಾಗಿ ನಾನೂ ನೀನೂ ಏನು ಮಾಡಾಕಾದೀತ್‌ ಹೇಳು?...ಈ ದೇಶದಾಗ ಬದುಕಿದರೂ ಬದುಕಿದಂಗೇ ಆಗಲ್ಲ, ಅಷ್ಟು ದೊಡ್ಡ ಅಂಗಡಿಯಾಳಗೆ ನಮಗೆ ಬೇಕಾಗಿದ್ದುದು, ನಾವು ತೆಗೊಂಡಿದ್ದುದು ಎರಡೋ ಮೂರೋ ಐಟಂ, ಉಳಿದೋವು, ಏನು-ಹೆಂಗǚ ಅಂಥನೂ ಗೊತ್ತಿಲ್ಲ!’

ನಾನೆಂದೆ ‘ನೋಡೋ ಶಿವಾ, ಈ ಪರಕೀಯ ಮನೋಭಾವನೆ ಎಲ್ಲಿ ಹೋದ್ರೂ ನಿನ್ನ ಬಿಡಂಗಿಲ್ಲ, ಅದು ಹೊರಗೆ ಹೆಂಗೈತೋ ಹಂಗೇ ನಿನ್ನೊಳಗೂ ಐತಿ - ನಮ್ಮ ದೇಶದಲ್ಲಿ ಇನ್ನೂ ಕಷ್ಟ...’ ಅಂದು ಮತ್ತೆ ಮುಂದುವರೆಸಿದೆ, ಸುಬ್ಬ ಜಗಳ ಆಡೋಕೆ ಶುರು ಮಾಡೋನ ಥರಾ ತೋಳು ಮಡಚುತ್ತಿರುವವನಂತೆ ಗೋಚರಿಸಿ ಮಧ್ಯೆ ಬಾಯಿ ಹಾಕೋಕೆ ಬಂದರೂ, ನಾನು ಹಿಂದಿನ ದಿನ ‘ಮಾತಾಡುವಾಗ, ಮಧ್ಯೆ-ಮಧ್ಯೆ ಬಾಯಿ ಹಾಕ ಬೇಡ, ಮಾತು ಮುಗಿಯುವವರೆಗೂ ತಡಿ’ ಅಂಥ ಹೇಳಿದ್ದೆ ಅಂತಲೋ ಏನೋ, ನನ್ನ ಮಾತುಗಳನ್ನು ಕೇಳಿಯೂ ಕೇಳದಂತೆ ಇದ್ದು, ನಾನು ಮಾತು ಮುಗಿಸುವುದನ್ನೇ ಬಾಯಿ ಬಿಟ್ಟುಕೊಂಡು ಕಾಯತೊಡಗಿದ!

ನೀನೆಷ್ಟು ಪರಕೀಯ ?
‘ನಮ್ಮಲ್ಲಿ, ನೀನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೋ, ಮತ್ತೊಂದು ಊರಿಗೋ ಹೋಗಿ ನೋಡು, ನೀನು ಎಷ್ಟು ಪರಕೀಯ ಅಂತ ಗೊತ್ತಾಗುತ್ತೆ, ನಿನ್ನ ಜಾತಿ, ಊರೂ ಇರಲಿ, ನಿನ್ನ ಭಾಷೆಯಿಂದಲೇ ಎಷ್ಟು ಪರಕೀಯನನ್ನಾಗಿ ನೋಡ್ತಾರೆ ಅಂತಾ, ಗೊತ್ತಾ?’

ನಾನು ಹೇಳಿದ್ದು ಅವನಿಗೆ ಸ್ವಲ್ಪ ಸತ್ಯ ಅನ್ನಿಸ್ತು ಅಂತ ಕಾಣ್ಸುತ್ತೆ - ಯಾಕೆಂದರೆ ಅವನು ಅಮೇರಿಕಾಕ್ಕೆ ಬರುವಾಗ ಮದ್ರಾಸ್‌ ಏರ್‌ಪೋರ್ಟ್‌ ತಲುಪಿ, ಅಲ್ಲಿ ನಡೆದ ಹಲವು ಯಶೋಗಾಥೆಗಳನ್ನು ಯಾವಾಗಲೋ ಹೇಳಿ ನನ್ನ ತಲೆ ತಿಂದಿದ್ದ - ಒಂದು ರೀತಿಯಲಿ ್ಲ ನಾನು ಹೇಳಿದ್ದು ಅರ್ಧಂಬರ್ಧ ಸರಿ ಅಂತ ಒಪ್ಪಿ ಒಂದು ದೊಡ್ಡ ಸವಾಲು ಎಸೆದ.

‘ಅದೇನೇ ಇರ್ಲಿ ಗುರೂ, ನಮ್ಮ ದೇಶದಾಗ ಬರೀ ನೀರು ಕುಡಕೊಂಡು ಬಾಳ್ವೇ ಮಾಡಬಹುದು, ಇಲ್ಲಿ ಹಂಗಾಗಂಗಿಲ್ಲಾǚ, ಏನಂತೀ?’ ಅಂದ, ನಾನು ‘ಅದು ಸರಿ’ ಎಂದು ಹ್ಞೂ ಗುಟ್ಟಿದೆ. ಅಷ್ಟರಲ್ಲಿ ಮನೆ ತಲುಪಿದ್ದೆವು.

ನಾನು ಅಡಿಗೆ ಮನೆಯಲ್ಲಿ ತಂದ ಸಾಮಾನುಗಳನ್ನು ಜೋಡಿಸಿಡೋದರೊಳಗೆ ಇವನು ಸೋಫಾದಲ್ಲಿ ಕೂತು ಆರೂ ಮೂವತ್ತರ ಸೌತ್‌-ಏಷಿಯಾ ನ್ಯೂಸ್‌ ಹಾಕಿಯಾಗಿತ್ತು. ಒಂದೆರಡು ನಿಮಿಷ ತಡೆದು ‘ಏ, ಲೊಗು ಬಾ ಇಲ್ಲಿ, ವಿಘ್ನೕಶನ್ನ ತೋರಿಸ್ತಾ ಇದಾರೆ!’ ಅಂತ ಬೊಬ್ಬೆ ಹೊಡೆದ. ನಾನು ಇದೇನಪ್ಪಾ ಅಕ್ಟೋಬರ್‌ ಕೊನೆಯಲ್ಲಿ ಗಣೇಶ ಅಂತ ಓಡಿ ಬಂದೆ - ಕಾವೇರಿ ಗಲಾಟೆ ಕುರಿತು ಯಾವುದೋ ವರದಿಗೆ ಸಂಬಂಧಿಸಿದಂತೆ ಎಸ್‌. ಎಂ. ಕೃಷ್ಣರನ್ನು ತೋರಿಸುತ್ತಿದ್ದರು.

‘ಕೃಷ್ಣಾ ಅವರು ತಲೀಗೆ ವಿಗ್‌ ಹಾಕ್ಕೋತಾರಲ್ಲ, ಅದಕ್ಕೆ ನಮ್ಮೂರ್ನ್ಯಾಗೆ ಎಲ್ಲರೂ ಅವರ್ನ ‘ವಿಗ್ನೇಶಾ’ ಅಂತಲೇ ಅನ್ನೋದು - ಮೊದ್ಲು ಬಾಳಾ ಚೋಲೋ ಇದ್ನಪಾ, ಇತ್ತಿತ್ಲಗ್ಯಾಕೋ ಬರೀ ವಿಘ್ನಕಾರಕನೇ ಆಗ್ಯಾನ!’ ಎಂದ.

ನಾನು ನಕ್ಕು ‘ಮತ್ತೆ, ವಿಗ್‌ ತಲೀಗ್‌ ಹಾಕ್ಕ್ಯಳ್ದೇ ಕಾಲಿಗ್‌ ಹಾಕ್ಕ್ಯಂತಾರೇನ್ಲೇ?’ ಎಂದು ಕೆಲಸ ನೋಡಲು ಹೋದೆ.

Post Your Views

ಪೂರಕ ಓದಿಗೆ...

ಎಲ್ಲಾ Flushing ಗಣೇಶನ ಮಹಿಮೆ !
ಅಲ್ಲಿ ಹಾಲಿವುಡ್‌ ಆದರೆ ಇಲ್ಲಿ ಸ್ಯಾಂಡಲ್‌ವುಡ್‌ ಯಾಕೆ ?
ನೀರಿಗೆ ಬೆಂಕಿ ಬಿದ್ದಿದೆ ಬನ್ನಿ !

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X