ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಕಾದಲ್ಲಿ ನವ್ಯ-ನವ್ಯೋತ್ತರ ಸಾಹಿತ್ಯದ ವಿಚಾರಸಂಕಿರಣ

By Staff
|
Google Oneindia Kannada News

* ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌

Sudarshan Patil Kulkarni in Bhoomikaaಅವರೊಬ್ಬ ಇಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವೀಧರ. ಹುಬ್ಬಳ್ಳಿಯಲ್ಲಿ ಓದು ಮುಗಿಸಿ, ಪ್ರಸ್ತುತ ವರ್ಜೀನಿಯಾದ ನಾರ್ಫಾಕ್‌ ವಿಶ್ವವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಕಂಟ್ರೋಲ್‌ ಸಿಸ್ಟಂಸ್‌ ಬಗ್ಗೆ ಪಿ.ಎಚ್‌.ಡಿ ಅಧ್ಯಯನ ನಡೆಸುತ್ತಿರುವವರು. ಜತೆಜತೆಯಲ್ಲೇ, ಕನ್ನಡ ಸಾಹಿತ್ಯದ ಬಗ್ಗೆ - ಸಾಹಿತ್ಯ ಪ್ರಕಾರಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ಸ್ವತಃ ಒಬ್ಬ ಸಾಹಿತಿ, ಕವಿ, ವಿಮರ್ಶಕ ಮತ್ತು ಹೊಸದೊಂದು ಅಂತರ್ಜಾಲ ಕನ್ನಡ ಪತ್ರಿಕೆಯ ಸಂಪಾದಕ ಕೂಡ !

ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ನಿಮಗನ್ನಿಸುತ್ತಿದೆಯೇ? ಭೂಮಿಕಾದ ತಿಂಗಳ ಚರ್ಚೆಯಡಿ ನಿನ್ನೆ, ನವೆಂಬರ್‌ ಹತ್ತರಂದು ಭಾನುವಾರ ವಿಚಾರಸಂಕಿರಣ ನಡೆಸಿಕೊಟ್ಟ ಸುದರ್ಶನ್‌ ಪಾಟೀಲ್‌ ಕುಲಕರ್ಣಿಯವರ ಬಗ್ಗೆ ಕೇಳಿದರೆ ಯಾರಿಗಾದರೂ ಹಾಗೆ ಅನ್ನಿಸುತ್ತದೆ ಬಿಡಿ!

ಎರಡು-ಮೂರು ದಶಕಗಳಷ್ಟು ಹಿಂದೆ ಕರ್ನಾಟಕದಿಂದ ಇಲ್ಲಿ ಅಮೆರಿಕಕ್ಕೆ ಬಂದು ನೆಲೆಸಿರುವ ಹಿರಿಯ ಪೀಳಿಗೆಯ ಭೂಮಿಕಾ ಸದಸ್ಯ-ಸಾಹಿತ್ಯಾಸಕ್ತರಿಗೆ, ಪ್ರಸಕ್ತ ಕರ್ನಾಟಕದಲ್ಲಿ ಸಾಹಿತ್ಯ ವಲಯದಲ್ಲಿ ಶೈಲಿ-ಭಾಷೆ-ವಸ್ತು-ವಿಷಯಗಳಲ್ಲಿ ಏನೇನು ಬದಲಾವಣೆ, ಹೊಸತನಗಳು ಬಂದಿವೆಯೆನ್ನುವುದನ್ನು ತಿಳಿಸಲು ಹೇಳಿ ಮಾಡಿಸಿದಂಥವರು - ಈಗ್ಗೆ ಮೂರು ವರ್ಷಗಳ ಹಿಂದೆಯಷ್ಟೆ ಕರ್ನಾಟಕದಿಂದ ಅಮೆರಿಕಕ್ಕೆ ಬಂದು ವ್ಯಾಸಂಗ ನಡೆಸುತ್ತಿರುವ ಸುದರ್ಶನ ಪಾಟೀಲ ಕುಲಕರ್ಣಿ. ಹಾಗಾಗಿಯೇ, ನವ್ಯ-ನವ್ಯೇತರ-ನವ್ಯೋತ್ತರ ಕನ್ನಡಸಾಹಿತ್ಯದ ಬಗ್ಗೆ ಅವರ ಸೋದಾಹರಣ ಕಾರ್ಯಕ್ರಮ ಆಸಕ್ತಿಕರವಾಗಿ ಮೂಡಿಬಂತು; ಭಾಗವಹಿಸಿದವರಿಗೆಲ್ಲ ತೃಪ್ತಿಯಾಯಿತು.

ದ್ವಿಮುಖ ಸಂಭಾಷಣೆಯ ಕಾರ್ಯಕ್ರಮ

‘ಆಧುನಿಕ ಕನ್ನಡ ಸಾಹಿತ್ಯ: ನವ್ಯ ಮತ್ತು ಅನಂತರ’ ಎಂಬುದು ಕುಲಕರ್ಣಿಯವರ ಕಾರ್ಯಕ್ರಮದ ಸ್ಥೂಲ ಸ್ವರೂಪವಾದರೂ ಮುಖ್ಯವಾಗಿ ಗದ್ಯ ಪ್ರಕಾರದ ಮೇಲಷ್ಟೇ ಅವರು ಬೆಳಕು ಚೆಲ್ಲುತ್ತ ಹೋದದ್ದು. ನವ್ಯಯುಗವನ್ನಾರಂಭಿಸಿದ ಅಡಿಗ, ಲಂಕೇಶ್‌, ಅನಂತಮೂರ್ತಿ, ಚಿತ್ತಾಲ ಹೀಗೆ ಎಲ್ಲ ಸಾಹಿತಿಗಳ ಬರವಣಿಗೆಯಲ್ಲಿ ಕಂಡುಬರುವ ಸಮುದಾಯದ ಬಗ್ಗೆಯೇ ಪ್ರತ್ಯೇಕತಾಭಾವ ಅಥವಾ ಪರಕೀಯತೆ, ನಗರ ಪ್ರಭಾವ, ಪೂರ್ವ-ಪಶ್ಚಿಮದ ಸಂಘರ್ಷ, ಈ ಲೇಖಕರ ಸಾಹಿತ್ಯಕೃಷಿ ಬೆಳೆದಂತೆಲ್ಲ ಆದ ಪರಿವರ್ತನೆಗಳು - ಎಲ್ಲವೂ ಚರ್ಚೆಗೊಳಗಾದುವು. ಮುಖ್ಯವಾಗಿ ಕಾರ್ಯಕ್ರಮವು ‘ಏಕಮುಖ ಭಾಷಣ’ವಾಗಿರದೆ ಚರ್ಚೆ-ಪ್ರಶ್ನೋತ್ತರಗಳ ರೂಪ ಪಡೆದದ್ದು ಇಂಥ ಕಾರ್ಯಕ್ರಮಗಳ ಒಟ್ಟಂದಕ್ಕೆ ಅನುವಾಗುವ ಅಂಶ. ನವ್ಯೇತರವೆಂದುಕೊಳ್ಳಬಹುದಾದ ತೇಜಸ್ವಿ, ದೇವನೂರು ಮಹಾದೇವ, ವೈದೇಹಿ... ಅಂಥವರ ಬರವಣಿಗೆಯಲ್ಲಿ ಕಾಣಸಿಗುವ ಪರಿಸರಪ್ರಭಾವ, ತುಂಬಿಬರುವ ಮಾನವೀಯತೆ, ಶೈಲಿಯಲ್ಲಿ ಸೀಮೋಲ್ಲಂಘನ - ಇವನ್ನೆಲ್ಲ ಆಯಾ ಸಾಹಿತಿಗಳ ಕೃತಿಗಳಿಂದ ಒಂದೆರಡು ಪ್ಯಾರಾಗ್ರಾಫ್‌ಗಳನ್ನೋದುವುದರ ಮೂಲಕ ಕುಲಕರ್ಣಿಯವರು ವಿಷದಪಡಿಸಿದರು.

‘ನವ್ಯೋತ್ತರ’ ವೆಂಬ ಹಣೆಪಟ್ಟಿಯ ಜಡೆಯಲ್ಲಿ ಬರುವ ಜಯಂತ್‌ ಕಾಯ್ಕಿಣಿ, ವಿವೇಕ್‌ ಶಾನ್‌ಭಾಗ್‌, ಮೊಗಳ್ಳಿ ಗಣೇಶ್‌, ಎಂ.ಎಸ್‌.ಶ್ರೀರಾಂ, ಅಬ್ದುಲ್‌ ರಶೀದ್‌ ಹೀಗೆ ವಿವಿಧ ಎಳೆಗಳನ್ನೂ, ಈ ಸಾಹಿತಿಗಳ ಬರವಣಿಗೆಯಲ್ಲಿ ಕಾಣಸಿಗುವ ಗ್ರಾಮೀಣ ಸೊಗಡು, ಸಮಕಾಲೀನ ಪಲ್ಲಟ, ಹೃದಯವಂತಿಕೆಗಳ ಪರಿಚಯವನ್ನೂ ಮಾಡಿಕೊಟ್ಟರು ಕುಲಕರ್ಣಿಯವರು. ಮೊಗಳ್ಳಿಯವರ ‘ಬುಗರಿ’, ಅಬ್ದುಲ್‌ ರಶೀದ್‌ರ ‘ಮಣ್ಣಾಂಗಟ್ಟಿ’ ಕೃತಿಗಳಿಂದಲೂ ಕೆಲ ಸ್ಯಾಂಪಲ್‌ಗಳನ್ನು ಸಭಿಕರಿಗೆ ಉಣಿಸಿದರವರು. ಹಾಗೆಯೇ ನವ್ಯೋತ್ತರದ ಸ್ಥಿತಿ ಮತ್ತು ಸವಾಲುಗಳೇನೆಂಬುದರ ಬಗ್ಗೆಯೂ ಮಾತನಾಡಿದರು. ಜಾಗತೀಕರಣ, ಈ ಹಿಂದೆ ಭಾರತ-ಯುರೋಪ್‌ಗಷ್ಟೆ ಸೀಮಿತವಾಗಿದ್ದ ಸಂಸ್ಕೃತಿರೇಖೆ ವಿಶಾಲವಾಗಿ ಅಮೆರಿಕ, ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳು, ಆಫ್ರಿಕನ್‌ ದೇಶಗಳ ಜನಜೀವನ, ಸಂಸ್ಕೃತಿಗಳು ಸಾಹಿತ್ಯದಲ್ಲಿ ಮೂಡಿಬರುತ್ತಿರುವ ಬಗ್ಗೆ ವಿವರಿಸಿದರು.

ಬಹುಶ್ರುತ ಶ್ರೋತೃ ವರ್ಗ

ವಿಜಯಾ ಕುಲಕರ್ಣಿ, ಈಶ್ವರರಾಜು, ಸಿದ್ಧಲಿಂಗಯ್ಯ, ಸತೀಶ್‌ ಕುಮಾರ್‌, ಮನೋಹರ್‌, ಶ್ರೀನಿವಾಸ್‌ ಇತ್ಯಾದಿ ಸಭಿಕರೆಲ್ಲ ಸೇರಿ ಈ ರಸವತ್ತಾದ ಚರ್ಚೆಗೆ ಇನ್ನೂ ಕಳೆಯೇರಿಸಿದ್ದು, ವರ್ಜೀನಿಯಾದ ನಾರ್ಫಾಕ್‌ನಿಂದ ಸುಮಾರು ನಾಲ್ಕೈದು ಗಂಟೆ ಡ್ರೈವ್‌ ಮಾಡಿ ಈ ಕಾರ್ಯಕ್ರಮ ನಡೆಸಿಕೊಡಲಿಕ್ಕೆಂದೇ ಬಂದಿದ್ದ ಸುದರ್ಶನ್‌ ಪಾಟೀಲ್‌ ಕುಲಕರ್ಣಿಯವರಿಗೆ ಧನ್ಯತಾಭಾವವಿತ್ತಿರಬೇಕು. ಜತೆಯಲ್ಲೇ ಕನ್ನಡ ಸಾಹಿತ್ಯ-ಸಂಸ್ಕೃತಿಯ ಚಟುವಟಿಕೆಯಲ್ಲಿ ನಿರತ ‘ಭೂಮಿಕಾ’ದ ರೆಕಾರ್ಡ್‌ಬುಕ್‌ಗೆ ಇನ್ನೂ ಒಂದು ಉತ್ತಮ ಕಾರ್ಯಕ್ರಮ ಜರುಗಿದ್ದು ದಾಖಲಾಯಿತು. ಕನ್ನಡಸಾಹಿತ್ಯ ಮತ್ತದರ ಪ್ರಕಾರಗಳ ಬಗ್ಗೆ ಅಷ್ಟೇನೂ ಆಳವಾಗಿ ಜ್ಞಾನವಿಲ್ಲದ ನನ್ನಂಥವನಿಗೆ ಒಂದು ಹೊಸ ಕಲಿಕೆಯೂ ಆದಂತಾಯಿತು!

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X