ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹೋಗಿ ಬನ್ನಿ, ಶುಭವಾಗಲಿ’ ಹರಿ-ನಾಗಲಕ್ಷ್ಮಿದಂಪತಿಗೆ ಬೀಳ್ಕೊಡುಗೆ

By Staff
|
Google Oneindia Kannada News

*ಸುಪ್ತದೀಪ್ತಿ , ಕುಪರ್ಟಿನೊ, ಕ್ಯಾಲಿಫೋರ್ನಿಯಾ

Home coming....ಯಾವುದೇ ಕೆಲಸ ಕಾರ್ಯದ ಮೊದಲ ನಮನ ವಿಘ್ನ ವಿನಾಶಕನಿಗೆ. ವಿದ್ಯಾಧಿದೇವತೆಯೂ ಆದ ಏಕದಂತನನ್ನು ಏನೊಂದು ಮುನ್ಸೂಚನೆಯಿಲ್ಲದೆ ವೇದಿಕೆಯ ಮೇಲೆ ಬಂದು ‘ಗಜಮುಖನೆ ಗಣಪತಿಯೆ ನಿನಗೆ ವಂದನೆ....’ ಎಂದು ಪ್ರಾರ್ಥಿಸಿದ ಅಷ್ಟ ಬಾಲಿಕೆಯರು- ಮೇಘ ಮತ್ತು ಮಧು ಜೋಷಿ, ಸೌಮ್ಯ ಮತ್ತು ರಮ್ಯ ಕೆದ್ಲಾಯ, ದೀಪಿಕಾ ಕಿಶೋರ್‌, ದ್ಯುತಿ ಭಟ್‌, ನೇಹಾ ವೆಂಕಟೇಶ್‌, ಹಾಗೂ ಪೂಜಾ ಮುರಳೀಧರ್‌. ಮಕ್ಕಳಿಗೆ ಧನ್ಯವಾದ ಹೇಳಿ, ಸಭಿಕರಿಗೆ ಸ್ವಾಗತ ಬಯಸಿ, ಕಾರ್ಯಕ್ರಮದ ಸಂಕ್ಷಿಪ್ತ ಮುನ್ನೋಟ ನೀಡಿದರು ನಿರ್ವಾಹಕಿ ಸಂಧ್ಯಾ ರವೀಂದ್ರನಾಥ್‌.

‘ಹರಿ ದಂಪತಿಗಳು ಸಹೃದಯರು, ಸ್ನೇಹಪರರು, ಬರಹಗಾರರು. ಕಥೆ, ಕವನ, ಪ್ರಬಂಧ, ಲೇಖನಗಳನ್ನು ಬರೆಯುವವರು, ಬರೆಸುವವರು.’ ಎಂದು ಮುನ್ನುಡಿ ಹಾಡಿದ ಸಂಧ್ಯಾ, ಹರಿಯವರನ್ನು ಬಹುಕಾಲದಿಂದ ಬಲ್ಲ ನಾಗಾ ಐತಾಳ್‌ ಅವರನ್ನು ಈ ಅಪರೂಪ ದಂಪತಿಯ ಬಗ್ಗೆ ಒಂದೆರಡು ಮಾತಾಡುವಂತೆ ವೇದಿಕೆಗೆ ಆಹ್ವಾನಿಸಿದರು. ಐತಾಳರು ತಮಗೆ ಹರಿ ನಾಗಲಕ್ಷ್ಮಿಯವರ ಪರಿಚಯವಾದ ಬಗೆ- ಎಂದು, ಎಲ್ಲಿ, ಹೇಗೆ, ಇತ್ಯಾದಿ ಎಲ್ಲವನ್ನು ನೆನಪಿನಾಳದಿಂದ ಮೊಗೆದು ಹಂಚಿಕೊಂಡರು. ತಮ್ಮ ಸಂಪಾದಕತ್ವದಲ್ಲಿ ಹೊರಬಂದ ‘ಕಾರಂತ ಚಿಂತನ’ ಕ್ಕಾಗಿ ಹರಿಯವರ ಸಹಾಯವನ್ನು ಸ್ಮರಿಸಿದರು. ಒಂದೆರಡು ರಸನಿಮಿಷಗಳ ಬುತ್ತಿ ಬಿಚ್ಚಿದರು. ಎಲ್ಲವನ್ನೂ ಚುಟುಕಾಗಿ ರಸವತ್ತಾಗಿ ಸಭಿಕರಿಗೆ ಉಣಿಸಿದರು. ಐತಾಳರು ಲೇಖಕ, ಉತ್ತೇಜಕ ಹರಿಯವರ ಮುಖದ ಚಿಕ್ಕ ಪರಿಚಯ ನೀಡಿದರೆ, ಪದ್ಮಜಾ ಕಿಶೋರ್‌ ಅವರು ಕವಿ-ಹರಿಯ ಮುಖದತ್ತ ನಮ್ಮನ್ನು ಹೊರಳಿಸಿದರು. ಹರಿಯವರು ಸಂಸ್ಕೃತದಿಂದ ಅನುವಾದಿಸಿದ- ‘ಓ ಅಗ್ನಿ ನನಗಾಗಿ ಬರಮಾಡು ಲಕ್ಷ್ಮಿಯನು....’ ಮತ್ತು ‘ಬಾ ಬೆಳಕೆ ಕಾಪಾಡು, ಹೃದಯದಲಿ ತಳವೂರು....’ ಕವನಗಳಿಗೆ ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು.

ಹರಿಯವರೊಳಗಿನ ಭಾವುಕ ಕವಿ ಮತ್ತು ಪ್ರಬಂಧಕಾರನ ಚಿತ್ರಣ- ಉತ್ಸಾಹಿ ಓದುಗ, ವಿಮರ್ಶಕ ಮಹಾಬಲ ಶಾಸ್ತ್ರಿಯವರಿಂದ. ಹರಿಯವರ ಕವನ ಸಂಕಲನ ‘ವಿದೇಶಕ್ಕೆ ಬಂದವರು’ ಮತ್ತು ಪ್ರಬಂಧ ಸಂಕಲನ ‘ಮಾತಿನ ಮಂಟಪ’ಗಳ ಬಗ್ಗೆ ಅತಿ ಸೂಕ್ಷ್ಮವಾಗಿ ಆದರೆ ಸರಳ ಸುಂದರವಾಗಿ ಮಾತಾಡಿ, ರಸಾನುಭವದ ಕೋಶಗಳನ್ನು ಬೆರಳಿಟ್ಟು ತೋರಿಸಿದರು. ರಬೀಂದ್ರನಾಥ್‌ ಠಾಗೋರರು ‘ಪಾಶ್ಚಿಮಾತ್ಯರು ಭೌತಿಕ ಜೀವನದಲ್ಲಿ ಅದ್ವಿತೀಯರು. ಅವರು ಪ್ರಕೃತಿಯನ್ನು ಕಾಮಧೇನುವಿನಂತೆ ಉಪಭೋಗಿಸಬಲ್ಲರು’ ಎಂದಿದ್ದನ್ನು ಸ್ಮರಿಸಿದ ಶಾಸ್ತ್ರಿಯವರು, ಸಾಂದರ್ಭಿಕವಾಗಿ ಹರಿಯವರ ‘ವಿದೇಶಕ್ಕೆ ಬಂದವರು’, ‘ನಾನೂ ಪರದೇಶಿ’, ‘ಎಲಿವೇಟರ್‌ನಲ್ಲಿ’ ಕವನಗಳನ್ನು ಉದಾಹರಿಸಿದರು. ‘ಸಮಯ’, ‘ಕಣ್ಣು-ನೋಟ-ಕಾಣ್ಕೆ’ ಪ್ರಬಂಧಗಳ ಬಗ್ಗೆಯೂ ಒಂದೆರಡು ಮಾತುಗಳಲ್ಲೇ ಹೇಳಿ ಹರಿಯವರ ಜ್ಞಾನಭಂಡಾರದ ಬಗ್ಗೆ ವಿಸ್ಮಯ-ಪ್ರಶಂಸೆ-ಮೆಚ್ಚುಗೆ ಸೂಸಿದರು. ಕೊನೆಗೆ ಹರಿಯವರ ‘ಅವರು ಹೋದರು’ ಕವನವನ್ನೇ ಉದ್ಧರಿಸಿ, ‘ಅಲ್ಲಿ ಕವಿಯೇ ಹೇಳಿದಂತೆ, ಇನ್ನೀಗ ಇವರು ಭಾರತಕ್ಕೆ ಮರಳಿದ ಮೇಲೆ, ಕೇಳಬೇಕೆಂದರೂ ಕನ್ನಡದ ಹಾಡು ಇಲ್ಲಿ ನಮ್ಮ ಕಿವಿಗಳಿಗೆ ಕೇಳಿಸದೇನೋ...’ ಎಂದರು.

ಲಾಸ್‌ಏಂಜಲ್ಸ್‌ನಿಂದ ಬಂದಿದ್ದ ವಿಶೇಷ ಆಹ್ವಾನಿತರ ಬಳಗದ ಸುಮ ಶ್ರೀನಿವಾಸ ಭಟ್‌ ಅವರು ಹರಿಯವರ ಸಂಸ್ಕೃತಾನುವಾದಿತ ‘ಎಲ್ಲೆಡೆ ಜೇನು, ಎಲ್ಲವು ಜೇನು...’ ಕವನವನ್ನು (ರವಿ ರವೀಂದ್ರನಾಥ್‌ ಅವರ ಸಂಗೀತ ಸಂಯೋಜನೆ) ಮಾಧುರ್ಯ ತುಂಬಿ ಹಾಡಿದಾಗ ಜೇನೇ ಸುರಿದಂತೆ ಭಾಸವಾಗಿತ್ತು. ಡಾ। ಎನ್‌. ಎಸ್‌. ಲಕ್ಷ್ಮಿನಾರಾಯಣ ಭಟ್ಟರ ‘ಯಾರು ಜೀವವೇ, ಯಾರು ಬಂದವರು...’ ಹಾಗೂ ಡಾ। ಸಾ.ಶಿ.ಮ. ಅವರ ‘ನಮ್ಮೂರ ದಾರಿಯಲಿ ರಂಗೋಲೆ ಬರೆದಿತ್ತವ್ವೆ....’ ಕವನಗಳನ್ನೂ ಹಾಡಿದ ಸುಮ ಸಭಿಕರನ್ನು ಗಂಧರ್ವ ಲೋಕಕ್ಕೊಯ್ದಿದ್ದರು. ಮುಂದಿನದು ನವರಸಪಾಕ ಎಂದರೂ ಸರಿಯೇ. ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ರಾಜ್‌ ಜೋಷಿ, ಭಗವಾನ್‌, ಪ್ರಶಾಂತ್‌ ಇವರುಗಳು ಪ್ರದರ್ಶಿಸಿದ ಪ್ರಹಸನ, ಹರಿಹರೇಶ್ವರ-ನಾಗಲಕ್ಷ್ಮಿಯವರ ಜೀವನಾಧಾರಿತ. ‘ಅಮೆರಿಕನ್ನಡ’ದ ಪತಾಕೆಯ ಹಿಂದೆ ಮುಖವಾಡ ಧರಿಸಿದ ಇಬ್ಬರು ಈ ಜೋಡಿಯ ಬಗ್ಗೆ, ಅವರ ಸಾಧನೆಗಳ ಬಗ್ಗೆ, ಸಾಹಸಗಳ ಬಗ್ಗೆ ಹಾಸ್ಯಭರಿತವಾಗಿ ನಿರೂಪಿಸಿದರು. ಅಮೆರಿಕನ್ನಡದ ಲೇಖಕರ ಪಟ್ಟಿಯನ್ನೂ ನಿರೂಪಕರು ಓದಿದ್ದು ಈ ಪ್ರಹಸನದ ಕೇಂದ್ರ ಬಿಂದು. ಜೊತೆಗೆ, ಹರಿಯವರು ನಡೆಸಿದ-ನಡೆಸುವ ಕೆಲಸಗಳಲ್ಲಿ ಮುಖ್ಯವಾದವುಗಳನ್ನು ತೋರಿಸುವ ಪಟಲ. ಕೊನೆಗೆ ವೈಯಕ್ತಿಕ, ಆರ್ಥಿಕ, ಮತ್ತು ಆರೋಗ್ಯ ಮಿತಿಗಳನ್ನು ಮೀರಿ ದುಡಿಯುವ ಹರಿಯವರಿಗೆ ಸಂದ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯ ಸಾಂಕೇತಿಕ ಬಿಂಬವನ್ನೂ ಪ್ರದರ್ಶಿಸಿದರು.

ಹೃದಯದಿಂದ ಬಂದ ಮಾತುಗಳ ಲಹರಿ

ಕಾರ್ಯಕ್ರಮದ ಮುಂದಿನ ತಿರುವು, ವೇದಿಕೆಯ ಮೇಲೆ ಹರಿ ದಂಪತಿಯಾಂದಿಗೆ ಸಂದರ್ಶನ. ವಿಶ್ವನಾಥ್‌ ಮರವಂತೆ ಮತ್ತು ಜ್ಯೋತಿ ಮಹಾದೇವ್‌ ಅವರು ನಡೆಸಿಕೊಟ್ಟ ಈ ಸಂದರ್ಶನ ಅತಿಥಿಗಳ ಮನಸ್ಸಿನಿಂದ, ಹೃದಯದಿಂದ ಬಂದ ಮಾತುಗಳ ಲಹರಿ. ಗಂಭೀರ ಮತ್ತು ತುಂಟ ವಿಷಯಗಳನ್ನು ಆರಿಸಿಕೊಂಡು ಪ್ರಶ್ನೆಗಳನ್ನು ಎಸೆಯಲಾಯಿತು. ‘ಈಗ, ಈ ವಯಸ್ಸಿನಲ್ಲಿ, ಭಾರತಕ್ಕೆ ಮರಳುವ ಕಾರಣ?’ದಿಂದ ಹಿಡಿದು, ‘ಇಬ್ಬರೂ ಲೇಖಕರಾದ್ದರಿಂದ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟರೆ ಮೇಲ್ಗೈ ಯಾರದಾಗಬಹುದು?’, ‘ಭಾರತಕ್ಕೆ ಮರಳಿದ ಮೇಲೆ ಸಾಹಿತ್ಯದಲ್ಲಿ ಇಬ್ಬರಿಂದಲೂ ಯಾವ ರೀತಿಯ ‘ತಾದಾತ್ಮ್ಯತೆ’ಯನ್ನು (ಇನ್ವೋಲ್ವ್‌ಮೆಂಟ್‌) ನಿರೀಕ್ಷಿಸಬಹುದು?’, ಹಾಗೂ ‘ನಿಮ್ಮಿಬ್ಬರಲ್ಲಿನ ಸಾಹಿತ್ಯಾಭಿರುಚಿಯನ್ನು ಮತ್ತು ಕನ್ನಡ ಪ್ರೇಮವನ್ನು ನಿಮ್ಮ ಮಕ್ಕಳಲ್ಲೂ ಬಿತ್ತುವಲ್ಲಿ ಎಷ್ಟರಮಟ್ಟಿಗೆ ಸಫಲರಾಗಿದ್ದೀರಿ, ಹಾಗೂ ಈ ನಿಟ್ಟಿನಲ್ಲಿ ಇಲ್ಲಿರುವ ಇತರ ಹೆತ್ತವರಿಗೆ ನಿಮ್ಮ ಮಾರ್ಗದರ್ಶಕ ಕಿವಿಮಾತುಗಳೇನು?’ ಇತ್ಯಾದಿ ಪ್ರಶ್ನೆಗಳಿಗೆ ಇಬ್ಬರಿಂದಲೂ ಬಂದ ಉತ್ತರಗಳು ಮನಮುಟ್ಟುವಂತಿದ್ದವು. (ಸಂದರ್ಶನದ ಪೂರ್ಣ ಪಾಠ ಇನ್ನೊಂದು ಲೇಖನದಲ್ಲಿದೆ.)

ಹರಿ-ನಾಗಲಕ್ಷ್ಮಿಯವರ ಹಿರಿಮಗಳು ನಂದಿನಿ ವೇದಿಕೆಯಲ್ಲಿ ತನ್ನ ಹೆತ್ತವರ ಬಗ್ಗೆ ಮಾತಾಡಲು ಬಂದವಳು, ‘ಅವರ ಅಗಲುವಿಕೆಯ ದುಃಖವನ್ನು ತಾವಿಬ್ಬರು ಮಕ್ಕಳಿಗಿಂತಲೂ ಹೆಚ್ಚಾಗಿ ನೀವುಗಳು ಅನುಭವಿಸುತ್ತಿದ್ದೀರಿ. ನಾವಾದರೂ ಅವರನ್ನು ಕಾಣುತ್ತೇವೆ, ಅವರೊಂದಿಗೆ ಮಾತಾಡುತ್ತೇವೆ. ನಿಮಗೆಲ್ಲ ಮಾರ್ಗದರ್ಶಕರಾಗಿ, ಹೆತ್ತವರಂತೆಯೇ ಗೌರವಪಾತ್ರರಾಗಿ, ಹಿರಿಯರಾಗಿ, ಜ್ಞಾನರೂಪರಾಗಿದ್ದ ನನ್ನ ತಂದೆ-ತಾಯಿಯನ್ನು ನೀವು ಸಂತೋಷದಿಂದ ಬೀಳ್ಕೊಡಬೇಕು. ಅವರು ಜೀವನದ ಮುಂದಿನ ಮಜಲಿಗೆ ಸಾಗುತ್ತಿದ್ದಾರೆ, ನಮಗೆ ಅಲ್ಲೂ ಒಂದು ಮನೆಯನ್ನು ಸೃಷ್ಟಿಸುತ್ತಿದ್ದಾರೆ. ಅವರಿಗೆ ಶುಭ ಹಾರೈಸಿ, ದುಃಖಿಸಬೇಡಿ’ ಎಂದು ಮನೋಜ್ಞವಾಗಿ ನುಡಿದಳು.

‘ಒಳ್ಳೇ ಲೇಖಕನನ್ನು ಮತ್ತೆ ಬರಮಾಡಿಕೊಳ್ಳುತ್ತೇನೆ’

ಸ್ಯಾನ್‌ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಮತ್ತೊಬ್ಬ ಪ್ರತಿಭಾವಂತ ಗಾಯಕ ನಚಿಕೇತ ಶರ್ಮ ಅವರು ಹರಿಯವರ ‘ಬಾ ಬೆಳಕೆ ಕಾಪಾಡು....’ ಹಾಡನ್ನು ಬೇರೊಂದು ರಾಗದಲ್ಲಿ ಹಾಡಿ ಕವನದ ಇನ್ನೊಂದು ಭಾವವನ್ನು ಅನಾವರಣಗೊಳಿಸಿದರು. ಆಶಾ ಭಟ್‌ ಅವರ ಸ್ವರಚಿತ ಕವನ ‘ಎರಡು ಹಣತೆಗಳು’ ಸಂದರ್ಭಕ್ಕೆ ಅರ್ಥಪೂರ್ಣವಾಗಿತ್ತು. ಬೆಂಗಳೂರಿಂದ ಬಂದ ನಿವೃತ್ತ ಪ್ರಾಂಶುಪಾಲರಾದ ಹನುಮಂತ ಸೆಟ್ಟಿಯವರು ಹರಿಯವರ ಬಗ್ಗೆ ತಮಗಿದ್ದ ಗೌರವ ಭಾವನೆಗಳನ್ನು ಸಭಿಕರೊಡನೆ ಹಂಚಿಕೊಂಡರು. ‘ಅಮೆರಿಕಾದ ಯಾವುದೇ ಬರಹಗಾರರಲ್ಲಿ ಹರಿಯವರ ಬರವಣಿಗೆಯ, ಪ್ರೋತ್ಸಾಹದ ಛಾಯೆಯನ್ನು ಕಾಣಬಹುದು’ ಎಂದ ಸೆಟ್ಟಿಯವರು, ‘ಭಾರತದಲ್ಲಿ ಅಂದು, ಹರಿಯವರು ಹೊರನಾಡಿಗೆ ಹೊರಟಂದು, ಒಬ್ಬ ಒಳ್ಳೆ ವ್ಯಕ್ತಿಯನ್ನು ಲೇಖಕನನ್ನು ಕಳೆದುಕೊಂಡಿದ್ದೆವು. ಇಂದೀಗ ಭಾರತೀಯರೆಲ್ಲರ ಪರವಾಗಿ, ಕನ್ನಡಿಗರ ಪರವಾಗಿ ನಾನು ಅವರನ್ನು ಮರಳಿ ಭಾರತಕ್ಕೆ ಬರಮಾಡಿಕೊಳ್ಳುತ್ತೇನೆ.’ ಎಂದರು.

‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’ (ಕೆ.ಕೆ.ಎನ್‌.ಸಿ) ಸದಾ ಚಟುವಟಿಕೆಯಲ್ಲಿರುವಂತೆ ಹರಿಯವರು ಬಹಳಷ್ಟು ದುಡಿದಿದ್ದಾರೆ. ಅವರ ಬೆಂಬಲ, ಉತ್ಸಾಹ, ಪ್ರೋತ್ಸಾಹಗಳಿಲ್ಲದೆ ನಾವು ಇಂದು ಇಷ್ಟೊಂದು ಮುಂದುವರೆಯಲು ಸಾಧ್ಯವಾಗುತ್ತಿರಲಿಲ್ಲ’’ ಎಂದು ಕೃತಜ್ಞತಾ ನಮನಗಳನ್ನು ಸಲ್ಲಿಸಿದ ಪ್ರಸ್ತುತ ವರ್ಷದ ಕೆ.ಕೆ.ಎನ್‌.ಸಿ. ಅಧ್ಯಕ್ಷ ರಾಮ್‌ಪ್ರಸಾದ್‌ ಅವರು ಸಂಸ್ಥೆಯ ಪರವಾಗಿ ಈ ಹಿರಿಯರಿಗೆ ‘ಅದ್ವಿತೀಯ ದಂಪತಿಗಳು’ ಎಂಬ ಅಭಿದಾನದೊಂದಿಗೆ ಪ್ರಶಸ್ತಿಫಲಕ ನೀಡಿ ಸನ್ಮಾನಿಸಿದರು. ಸಂಸ್ಥೆಯ ಉಪಾಧ್ಯಕ್ಷಿಣಿ ಪುಷ್ಪಲತ ಸುಬ್ಬರಾವ್‌ ಅವರು ತಮ್ಮ ಸ್ವರಚಿತ ‘ಹೋಗಲೊಲ್ಲದೆ ಹೋಗೇನೊ?, ಇರಲೊಲ್ಲದೆ ಹೋಗೇನೊ?’ ಕವನವನ್ನು ಓದಿ, ಕಟ್ಟುಹಾಕಿಸಿದ ಪ್ರತಿಯಾಂದನ್ನು ದಂಪತಿಗೆ ಅರ್ಪಿಸಿದರು.

ಸ್ಯಾನ್‌ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಪ್ರಖ್ಯಾತ ಗಾಯಕಿ, ‘ರಾಗ’ ತಂಡದ ಸುಗಂಧ- ಪರಿಮಳ ಮುರಳೀಧರ್‌ ಅವರು ಆಯೋಜಿಸಿ ಪ್ರಸ್ತುತ ಪಡಿಸಿದ ವೃಂದಗಾನವು ಸಹೃದಯ ಕವಿ- ಪ್ರೊ. ನಿಸಾರ್‌ ಅಹಮದ್‌ ಅವರ ‘ನಿತ್ಯೋತ್ಸವ’, ಮೃದುಭಾಷಿ ಕವಿ- ಡಾ। ಸಾ.ಶಿ.ಮ. ಅವರ ‘ಸುಮ ಸುಂದರ ತರುಲತೆಗಳ ವೃಂದಾವನ ಲೀಲೆ’, ಮಲ್ಲಿಗೆ ಕವಿ- ಕೆ.ಎಸ್‌.ನ. ಅವರ ‘ನದನದಿಗಳ ಗಿರಿವನಗಳ ತಾಯೇ ಭರತಮಾತೆ’, ಪೂ.ರ. ಸೀತಾರಾಮ ಶಾಸ್ತ್ರಿಯವರ ‘ಜಲಲ ಜಲಲ ಜಲ ಧಾರೆ’ ಕವನಗಳಿಂದ ಜೀವಂತವಾಗಿತ್ತು. ಕೊನೆಯಲ್ಲಿ, ಮಲ್ಲಿಗೆ-ಕವಿಯ ‘ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ’ ಹಾಡಿಗೆ ಕುಮಾರಿ ಮೇಘ ಜೋಷಿ ಮತ್ತು ಪ್ರಶಾಂತ್‌, ನಾಗಲಕ್ಷ್ಮಿ-ಹರಿಹರೇಶ್ವರರಾಗಿ ಅಭಿನಯಿಸಿದಾಗ ಹಿರಿಯರ ಹದಿಹರೆಯಕ್ಕೆ ಹಿನ್ನೋಟವಿದೆಂದು ವೃಂದಗಾನದ ನಿರೂಪಕಿ ಆಶಾ ಭಟ್‌ ಅವರು ಕಚಗುಳಿಯಿಟ್ಟರು.

ಹೆಣ್ಣುಮಕ್ಕಳಿಬ್ಬರಿಗೂ ವರಶ್ರೇಷ್ಠರು ಸಿಗಲಿ

ಯುವಪ್ರತಿಭೆಗಳಾದ ಮನೋಜ್‌ ಪ್ರಭಾಕರ್‌ ಮತ್ತು ಮೇಘ ಜೋಷಿ ಅವರನ್ನೊಳಗೊಂಡ ವೃಂದಗಾನ ತಂಡದಲ್ಲಿ ಬಿ.ವಿ. ಜಗದೀಶ್‌, ರಾಮ್‌ಪ್ರಸಾದ್‌, ದಿಲೀಪ್‌ ದೇಶಪಾಂಡೆ, ಸುನಿಲ್‌, ರಮೇಶ್‌ ಜನಾರ್ದನ್‌ ಹಾಗೂ ಪ್ರಶಾಂತ್‌; ಶೋಭಾ ಪ್ರಭಾಕರ್‌, ಛಾಯಾ ಕುಂಬ್ಳೆ, ಪ್ರೇಮಾ ಹೆಗ್ಡೆ, ಜ್ಯೋತಿ ಸುನಿಲ್‌ ಹಾಗೂ ಅರ್ಚನ ಉಪಾಧ್ಯ ಇದ್ದರು. ಸುಶ್ರಾವ್ಯವಾದ ಸಂಗೀತದಿಂದ ‘ಸುಮ-ಕೋಮಲ’ ಹಾಡುಗಳ ‘ಜಲಧಾರೆ’ಯಾಳಗೆ ಸಭಿಕರನ್ನು ತಣಿಸಿ, ‘ತಾಯಿ ಭಾರತಿ’ಯ ಸ್ಮರಣೆಯಾಂದಿಗೆ ‘ಉತ್ಸವ’ದ ವಾತಾವರಣ ಕಲ್ಪಿಸಿದರು; ಮನತಟ್ಟಿ ‘ಪಯಣಕ್ಕೆ’ ಸಜ್ಜುಗೊಳಿಸಿದರು.

ಹರಿಹರೇಶ್ವರ, ನಾಗಲಕ್ಷ್ಮಿಯವರಿಗೆ ಹರಕೆ ಹಾರೈಕೆಗಳು: ಸನ್ನಿವೇಲ್‌ ದೇವಳದ ಪ್ರಧಾನ ಅರ್ಚಕರಾದ ವಿದ್ವಾನ್‌ ಗಜಾನನ ಜೋಷಿಯವರಿಂದ ದೇವರ ಪ್ರಸಾದದ ಜೊತೆಗೆ ಆಶೀರ್ವಚನ. ಮುತ್ತಿನಹಾರದ ಮೂಲಕ ಶುಭ ಹಾರೈಸಿ, ‘ಹೆಣ್ಣುಮಕ್ಕಳಿಬ್ಬರಿಗೂ ವರಶ್ರೇಷ್ಠರು ಸಿಗಲಿ, ಹೆತ್ತವರಾಗಿ ಇವರ ಭಾರವಾದ ಯೋಚನೆ ಹಗುರಾಗಲಿ’ ಎಂದು ಜೋಷಿಯವರು ಹರಸಿದರು. ಕನ್ನಡ ಸಾಹಿತ್ಯಪರ ಚಟುವಟಿಕೆಗಳಿಗೆಂದೇ ಹುಟ್ಟು ಹಾಕಿದ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ್‌ ಹುಲಿಕಲ್‌ ಅವರಿಂದ ಸಂಸ್ಥೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಹರಿ-ದಂಪತಿಗೆ ಕಾಣಿಕೆಗಳ ಸಮರ್ಪಣೆ. ರಾಜ್‌ ಜೋಷಿಯವರು ಸಭೆಯ ಪರವಾಗಿ, ಎಲ್ಲರ ಕೊಡುಗೆಯನ್ನು ಹರಿಯವರಿಗೆ ನೀಡಿದರು.

ಕಾರ್ಯಕ್ರಮದ ಸಂಘಟನೆಯಲ್ಲಿ ಮತ್ತು ಅದನ್ನು ನಡೆಸಿಕೊಡುವಲ್ಲಿ ನೆರವಾದ ಪ್ರತಿಯಾಬ್ಬರಿಗೂ ವಂದನೆ, ಕೃತಜ್ಞತೆಗಳನ್ನು ಸಲ್ಲಿಸಿದ ಆಯೋಜಕಿ ವಿಜಯಾ ಜೋಷಿಯವರು ಎಲ್ಲರ ಸಹಾಯಗಳನ್ನು ಪ್ರೀತಿಯಿಂದ ಸ್ಮರಿಸಿದರು. ಧ್ವನಿವರ್ಧಕಕ್ಕೆ ಸಹಾಯ ಮಾಡಿದ ಶ್ರೀಕಾಂತ್‌ ಸಂಪಿಗೆತ್ತಾಯ ಮತ್ತು ಬೆಳಗ್ಗೆ ಎಂಟು- ಎಂಟೂವರೆಯಿಂದಲೇ ತಮಗೆ ಅಡುಗೆಯ ಕೆಲಸಗಳಲ್ಲಿ ನೆರವಾದ 15-16 ಅನ್ನಪೂರ್ಣೆಯರನ್ನೂ ನೆನೆದು, ಪುಷ್ಕಳ ಭೋಜನವನ್ನು ಸವಿದೇ ಎಲ್ಲರೂ ತೆರಳಬೇಕೆಂದು ಪ್ರಾರ್ಥಿಸಿದರು. ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ, ತಂತಮ್ಮ ಮನೆಗಳಿಗೆ ತೆರಳಿದಾಗ ಎಲ್ಲರ ಕೈಯಲ್ಲೂ ಹರಿಯವರು ನೀಡಿದ್ದ ಒಂದೆರಡು ಪುಸ್ತಕಗಳಿದ್ದವು. ಮನಸ್ಸು-ದೇಹಕ್ಕೆ ಉತ್ತಮ ಆಹಾರ ದೊರಕಿದ್ದೇ ಅಲ್ಲದೆ ಬುದ್ಧಿಗೂ ಒಳ್ಳೆಯ ಗ್ರಾಸ ದೊರಕಿತ್ತು. ಅದು ಹರಿಯವರ ವಿಶಿಷ್ಟತೆ. ವಿದಾಯವೆಂದು ನೆರೆದಿದ್ದ ಸಭೆ ಹೃದಯದ ಬೆಸುಗೆಗಳನ್ನು ಬಿಗಿಮಾಡಿಕೊಂಡಿತ್ತು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X