• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಟ್ಸ್‌ಕನ್ನಡ ಸಂಪಾದಕರೊಂದಿಗೆ ಉತ್ತರ ಕ್ಯಾಲಿಫೋರ್ನಿಯ ಕನ್ನಡಿಗರು

By Staff
|

*ಎಂ.ಎನ್‌.ಪದ್ಮನಾಭರಾವ್‌, ಮಿಲ್ಪಿಟಾಸ್‌, ಕ್ಯಾಲಿಫೋರ್ನಿಯ

S.K. Shama Sundara interacting with north Calif kannadigasಸೆಪ್ಟೆಂಬರ್‌ 7, 2002, ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ಒಂದು ವಿಶೇಷ ದಿನ. ಹಲವು ದಿನಗಳ ಕಾತರ, ಕತೂಹಲದ ಮನಸ್ಸುಗಳಿಗೆ ನೆಮ್ಮದಿಯ ಸಂದರ್ಭ. ಬೆಳಗ್ಗೆ 10.30 ರಿಂದ ಎಸ್‌. ಕೆ. ಶಾಮಸುಂದರ ಅವರು ಸನ್ನಿವೇಲ್‌ ಹಿಂದೂ ದೇವಾಲಯದಲ್ಲಿ ತಮ್ಮ ದಟ್ಸ್‌ಕನ್ನಡ.ಕಾಮ್‌ನ ಅಭಿಮಾನಿ ಓದುಗರನ್ನು ಮತ್ತು ಆತ್ಮೀಯರನ್ನು ಮಾತನಾಡಿಸಲು ಬಂದಿದ್ದರು. ಚಿಕ್ಕ ಚಿಕ್ಕ ಗುಂಪುಗಳು ಅವರನ್ನು ಸುತ್ತುವರೆದು ಪತ್ರಿಕೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಮ್‌ ಲವಲವಿಕೆಯಿಂದ ಎಲ್ಲರ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ಕೇಳಿ ಸಮಾಧಾನವಾಗಿ ಉತ್ತರಿಸಿದರು. ಆ ಆತ್ಮೀಯ ಮಿಲನ, ಅನೌಪಚಾರಿಕ ಮಾತುಕತೆ ಮತ್ತು ದಟ್ಸ್‌ಕನ್ನಡ.ಕಾಮ್‌ನ ಬಗ್ಗೆ ನಡೆದ ವಿಚಾರ- ವಿನಿಮಯ ಎಲ್ಲರಿಗೂ ಖುಷಿ ಕೊಟ್ಟಿತು. ಅಮೆರಿಕಾ ಕನ್ನಡಿಗರಿಗೆ ಇ- ಮೇಯ್ಲ್‌ ಮುಖಾಂತರ ಚಿರಪರಿಚಿತರಾಗಿದ್ದ ಅವರು ಈ ಮಿಲನ ಸಂದರ್ಭದಲ್ಲಿ ಮತ್ತಷ್ಟು ಹತ್ತಿರವಾದರು.

ಉತ್ತರ ಕ್ಯಾಲಿಫೋರ್ನಿಯಾ, ಕನ್ನಡದ ವಿವಿಧ ಚಟುವಟಿಕೆಗಳ ಆಗರ. ಬಿಸಿನೀರಿನ ಬುಗ್ಗೆಯಂತೆ ಸ್ವಲ್ಪ ಸಮಯದಲ್ಲಿಯೇ ಇಲ್ಲಿ ಹಲವಾರು ಕಾರ್ಯಕ್ರಮಗಳು ವೇದಿಕೆಯೇರುತ್ತವೆ. ಮಿಲನದ ನಂತರ ಕಾರ್ಯಕ್ರಮ ಪ್ರಾರಂಭವಾಯಿತು. ‘ಕನ್ನಡ ಓದುಗರು ಎಂತಹ ಲೇಖನಗಳನ್ನು ಮೆಚ್ಚುತ್ತಾರೆ ?’ ಅನ್ನುವ ವಿಷಯದ ಬಗ್ಗೆ ಈ ಕಾರ್ಯಕ್ರಮದಲ್ಲಿ ಶಾಮ್‌ ಸುದೀರ್ಘವಾಗಿ ಮಾತನಾಡಿದರು. ‘ಸಾಹಿತ್ಯ ಗೋಷ್ಠಿ ’ ಮತ್ತು ‘ಕನ್ನಡ ಬಳಗ’ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಸಾಹಿತ್ಯ ಗೋಷ್ಠಿ ಇಲ್ಲಿಯ ಕನ್ನಡಿಗರಿಗೆ ತಿಂಗಳಿಗೆ ಎರಡು ಉಪನ್ಯಾಸಗಳಂತೆ ಸಾಹಿತ್ಯದ ರಸದೌತಣ ನೀಡುತ್ತಿದೆ. ಈ ಕಾರ್ಯಕ್ರಮ ಸಾಹಿತ್ಯ ಗೋಷ್ಠಿಯ ಹತ್ತನೆಯ ಕೊಡುಗೆ. ಕಳೆದ ವರ್ಷದ ನವೆಂಬರ್‌ನಲ್ಲಿ ಹುಟ್ಟಿದ ಈ ಸಂಸ್ಥೆಯ ಮುಖ್ಯ ಗುರಿ ಕನ್ನಡಿಗರಲ್ಲಿ ಶುದ್ಧ ಸಾಹಿತ್ಯ ಅಭಿರುಚಿಯನ್ನು ಮೂಡಿಸಿ ವೃದ್ಧಿಸುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಲ್ಲರಿಗೂ ಚಿರಪರಿಚಿತರಾದ ಕನ್ನಡದ ಕಟ್ಟಾಳು ಎಸ್‌.ಕೆ. ಹರಿಹರೇಶ್ವರ ವಹಿಸಿದ್ದರು. ವೇದಿಕೆಯ ಮೇಲೆ ಕನ್ನಡದ ಸಮೃದ್ಧ ಬರಹಗಾರ ಎಂ.ವಿ.ನಾಗರಾಜ ರಾವ್‌ ಉಪಸ್ಥಿತರಿದ್ದರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಹಾರ್ನಳ್ಳಿ ರಾಮಸ್ವಾಮಿಯವರು ಮುಖ್ಯ ಅತಿಥಿಯಾಗಿದ್ದರು.

ಮಧುಕಾಂತ ಕೃಷ್ಣ ಮೂರ್ತಿಯವರ ಸುಮಧುರ ಕಂಠದಿಂದ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ’ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ನಿರೂಪಣೆ, ಅತಿಥಿಗಳ ಪರಿಚಯ ಮತ್ತು ಸ್ವಾಗತವನ್ನು ವಿಶ್ವನಾಥ್‌ ಹುಲಿಕಲ್‌ ಮಾಡಿದರು.

ಅಮೆರಿಕದಲ್ಲಿನ ಕನ್ನಡಿಗರ ಕನ್ನಡದ ಬಗೆಗಿನ ಕಳಕಳಿ, ಇಂದಿನ ಸಂಘರ್ಷ ಜನಜೀವನ, ಪರಿಸರ ಪ್ರಭಾವ ಮತ್ತು ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಯ ಬಗ್ಗೆ ಶಾಮ್‌ ಮಾತನಾಡಿದರು. ತಮ್ಮ ಬಾಲ್ಯದ ನೆನಪುಗಳನ್ನು, ಚಿತ್ರದುರ್ಗದಲ್ಲಿ ತಾವು ಬೆಳೆದ ವಾತಾವರಣವನ್ನು, ಅನಂತರ ಬೆಂಗಳೂರಿಗೆ ವಲಸೆ ಬಂದ ಕಾರಣವನ್ನು ಸ್ವಾರಸ್ಯವಾಗಿ ಹೇಳಿ ತಮ್ಮ ಮಾತುಗಳಿಂದ ಸಭಿಕರನ್ನು ಸೆರೆ ಹಿಡಿದರು.

ಓದುಗರಿಗೆ ಏನು ಬೇಕು ಎಂದು ಅರಿತು ಬರೆಯುವುದು ಕಷ್ಟ . ಪೂರ್ವ ಪಶ್ಚಿಮಗಳ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಬರೆಯುವುದು ಸದಾ ಒಂದು ಸವಾಲು ಎಂದು ಅಭಿಪ್ರಾಯಪಟ್ಟರು. ದಟ್ಸ್‌ಕನ್ನಡ.ಕಾಮ್‌ ಬೆಳೆದು ಬಂದ ದಾರಿಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಹೊರನಾಡ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಪ್ರತಿನಿಧಿಸುವ ಕೆಲಸವನ್ನು ತಮ್ಮ ಅಂತರ್ಜಾಲ ವ್ಯವಸ್ಥೆ ಮಾಡುತ್ತಿದೆ. ಬಹಳಷ್ಟು ಹೊರನಾಡ ಕನ್ನಡಿಗರು ಉತ್ತಮವಾಗಿ ಬರೆಯುತ್ತಿದ್ದಾರೆ. ಇಲ್ಲಿ ಚಿಂತಕ ಲೇಖಕರಿದ್ದಾರೆ. ಆದರೆ ನಿರ್ದಿಷ್ಟ ಗುರಿಯಿಂದ ಓದುಗರ ಮನಸನ್ನರಿತು ಬರೆಯುವ ಕೆಲಸ ಆಗುತ್ತಿಲ್ಲ. ಈ ಕೊರತೆಯನ್ನು ತುಂಬಬೇಕು ಎಂದರು. ಪತ್ರಿಕೆಯ ಅಂತರ್‌ಜಾಲ ಪುಟದ ಓದುಗರ ಬಗ್ಗೆ ತಿಳಿಸುವ ವೆಬ್‌ಲಾಗಿನ್‌ ರಿಪೋರ್ಟ್‌ ಬಗ್ಗೆ ತಿಳಿಸಿದರು. ಹೆಚ್ಚು ಜನರು ಓದುವ ಪುಟಗಳು ಚಲನಚಿತ್ರದ ಬಗ್ಗೆ. ಆದರೆ ದಟ್ಸ್‌ಕನ್ನಡ.ಕಾಮ್‌ ಈ ಬಗ್ಗೆ ಹೆಚ್ಚಿನ ಮಹತ್ವ ಕೊಡುತ್ತಿಲ್ಲ . ಬದಲಿಗೆ ಜನರನ್ನು ಉತ್ತಮ ಸಾಹಿತ್ಯದೆಡೆಗೆ ಕರೆದೊಯ್ಯುವ ಸವಾಲಿನ ಕೆಲಸ ಮಾಡುತ್ತಿದೆ. ಅಂತರ್‌ಜಾಲ ವ್ಯವಸ್ಥೆ ಇನ್ನೂ ಮನೆ- ಮನ ಮುಟ್ಟಿಲ್ಲ. ಪೆನೆಟ್ರೇಷನ್‌ ಸಾಲದು ಎಂದರು.

ದಟ್ಸ್‌ಕನ್ನಡ.ಕಾಮ್‌ನ ಶೇ 63 ಭಾಗದ ಓದುಗರು ಉತ್ತರ ಅಮೆರಿಕಾದವರು ಎಂದ ಶಾಮ್‌, ಸ್ಥಳೀಯ ಸುದ್ದಿಗಳನ್ನು ಪ್ರಪಂಚದೆಲ್ಲೆಡೆ ಹಂಚಿರುವ ಕನ್ನಡಿಗರಿಗೆ ತಿಳಿಸುವುದು ಸ್ವಲ್ಪ ಕಷ್ಟ. ಆದರೂ ಈ ವಿಚಾರವಾಗಿ ನಾವು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು. ಲೇಖನಗಳು ತಮ್ಮ ದೈನಂದಿನ ಜೀವನಕ್ಕೆ ತೀರಾ ಸಮೀಪವಾಗಿದ್ದರೆ, ಓದುಗರು ಉತ್ತಮವಾಗಿ ಸ್ವೀಕರಿಸುತ್ತಾರೆ. ಕಥಾ ವಸ್ತುವನ್ನು ಹುಡುಕುವುದು ಒಂದು ಕಲೆ. ವಸ್ತುಗಳು ಎಫ್‌-1 ವೀಸಾದಲ್ಲಿ ಬಂದ ವಿದ್ಯಾರ್ಥಿಯ ಬಗ್ಗೆಯಾಗಬಹುದು, ಹಣಕಾಸಿನ ತೊಂದರೆಯಿಂದ ಕೆಲಸ ಕಳೆದುಕೊಂಡ ಜನರ ಭಾರತ ಮರುಪ್ರವಾಸವಾಗಬಹುದು ಅಥವಾ ಹೊರನಾಡ ಕನ್ನಡಿಗರ ಜೀವನ ಶೈಲಿ, ನಡೆನುಡಿ, ಸಂಪ್ರದಾಯ, ಭಾಷೆಯಾಗಿರಬಹುದು. ಹಿರಿಯರ ಜೀವನಚರಿತ್ರೆ ಸಹ ಆಗಬಹುದು ಎಂದು ಸೂಚಿಸಿದರು.

MN Padmanabha Raoಇದೇ ಸಂದರ್ಭದಲ್ಲಿ ಸಭಿಕರು ಪತ್ರಿಕೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಭವಗಳನ್ನು ಅವರೊಡನೆ ಹಂಚಿಕೊಂಡರು. ಶೋಭಾ, ಎ. ಎನ್‌. ಜೆ. ಹನುಮಂತೇಶ್‌ ತಮ್ಮ ಅಮೆರಿಕಾ ಪ್ರವಾಸಕಾಲದಲ್ಲಿನ ಅನುಭವಗಳನ್ನು ತಿಳಿಸಿದರು. ಡಾ. ಕೆ. ಆರ್‌. ಎಸ್‌. ಮೂರ್ತಿಯವರು ಇದುವರೆಗೆ ಅವರು ಮಾತನಾಡಿದ ವಿವರಗಳನ್ನು ತಮ್ಮ ಅಂತರ್‌ಜಾಲ ಪುಟದಲ್ಲಿ ದಾಖಲಿಸಲು ಕೇಳಿಕೊಂಡರು. ಎಸ್‌. ಕೆ. ಹರಿಹರೇಶ್ವರ ಅವರು ಓದುಗರ ಓಲೆಯನ್ನು ಕನ್ನಡದಲ್ಲೇ ಪ್ರಕಟಿಸಲು, ಕನ್ನಡದಲ್ಲಿ ಬರೆಯಲು ಉತ್ತೇಜಿಸಬೇಕು ಎಂದು ಅಭಿಪ್ರಾಯಪಟ್ಟರು ಮತ್ತು ದಟ್ಸ್‌ ಕನ್ನಡ.ಕಾಮ್‌ ಕನ್ನಡ ಪತ್ರಿಕೆಯಾಗಬೇಕು, ಇಂಗ್ಲಿಷ್‌-ಕಮ್‌- ಕನ್ನಡ ಪತ್ರಿಕೆಯಾಗುವುದು ಬೇಡ ಎಂದು ತಿಳಿಸಿದ್ದು ಸಭಿಕರಿಗೆ ಹಿಡಿಸಿ, ಅದನ್ನು ಕರತಾಡನದ ಮೂಲಕ ಅಭಿವ್ಯಕ್ತಿಸಿದರು. ಶಾಮ್‌ ವಿವರಗಳನ್ನು ನೀಡಿ, ಕೆಲವು ಅಂತರ್ಜಾಲ ಪುಟದ ಮೆಟ ಕೀಸ್‌ ಬಗ್ಗೆ ಉದಾಹರಣೆ ಸಹಿತ ಹೇಳಿದ್ದು ಸಭಿಕರಿಗೆ ಸರಿಯೆನಿಸಿತು. ಕ.ಕಾಗೋಡಿಯವರ ಜನಸಂಖ್ಯಾ ಸ್ಫೋಟ ಮತ್ತು ಬರಹಗಾರರ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ ಲೇಖಕರು ವಸ್ತುವಿನ ಕ್ಲಿಷ್ಟತೆಯನ್ನು ಉದಾಹರಣೆಗಳ ಮೂಲಕ ವಿವರಿಸಿ, ಅದೇ ಕ್ಷೇತ್ರದಲ್ಲಿ ದುಡಿದವರ ಅನಿಸಿಕೆ, ಸಲಹೆಯನ್ನು ಓದುಗರಿಗೆ ತಿಳಿಸಿದರೆ ಉತ್ತಮ ಎಂದರು. ಮಧುಕಾಂತ ಕೃಷ್ಣಮೂರ್ತಿಯವರು ಕನ್ನಡ ಸ್ಲನ್ಗ್‌ , ಕೂಲ್‌ ಶಬ್ದಗಳಿಗಾಗಿ ಒಂದು ಅಂಕಣ ಮಾಡಿದರೆ ಇಂದಿನ ಯುವ ಜನಾಂಗ ಕನ್ನಡಕ್ಕೆ ಹತ್ತಿರವಾಗಬಹುದು ಎಂದು ತಿಳಿಸಿದರು. ವಿಶ್ವನಾಥ ಹುಲಿಕಲ್‌ರ ಪ್ರಶ್ನೆಗೆ ಉತ್ತರಿಸುತ್ತಾ , ಕನ್ನಡ ಲಿಪಿ (ಫಾಂಟ್‌) ಬಗ್ಗೆ ಸುದೀರ್ಘ ವಿವರ ನೀಡಿ ದಟ್ಸ್‌ಕನ್ನಡ.ಕಾಂ ಈಗ ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸಿದರು. ಕರ್ನಾಟಕ ಸರ್ಕಾರ ಶ್ರೀಘ್ರವಾಗಿ ಏಕರೀತಿಯ ಫಾಂಟ್‌(ಯೂನಿಕೋಡ್‌) ಬಗ್ಗೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದರು. ಸತ್ಯನಾರಾಯಣ ಅವರು ಅಮೆರಿಕಾ ಜೀವನ ಶೈಲಿಯ ಬಗ್ಗೆ ಕನ್ನಡ ಕೂಟಗಳ ಲೇಖನಗಳು ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಸ್ಮರಿಸಿದರು. ದತ್ತಾತ್ರಿಯವರ ಅಮೆರಿಕ ಪತ್ರಿಕೆಗಳ ಇನ್ವೆಸ್ಟಿಗೇಟಿವ್‌ ಜರ್ನಲಿಸಂ ಮಟ್ಟ ಕನ್ನಡದ ಪತ್ರಿಕೆಗಳಲ್ಲಿ ಕಾಣುತ್ತಿಲ್ಲ , ಕಾರಣವೇನು ಎನ್ನುವ ಪ್ರಶ್ನೆಗೆ, ಕನ್ನಡ ಪತ್ರಿಕೋದ್ಯಮದ ಸೋಲು ಎಂದು ವಿಷಾದದಿಂದ ನುಡಿದು- ಕನ್ನಡ ಪತ್ರಿಕೋದ್ಯಮದಲ್ಲಿ ಅರ್ಹ ಸಂಪಾದಕರ ಕೊರತೆ, ಅವರಿಗಿರುವ ಸೀಮಿತ ಸ್ವಾತಂತ್ರ್ಯದ ಬಗ್ಗೆ ತಿಳಿಸಿದರು.

ರಾಘವೇಂದ್ರ ಅವರ ಪ್ರಶ್ನೆಗೆ ದಟ್ಸ್‌ಕನ್ನಡ.ಕಾಂನಲ್ಲಿರುವ ನೌಕರ ವರ್ಗ ಮತ್ತು ಸಂಪಾದಕರ ದಿನಚರಿ ಬಗ್ಗೆ ದೀರ್ಘವಾಗಿ ಉತ್ತರಿಸಿದರು. ಕೇವಲ ಐದು ಜನರು ದಿನದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುವುದು, ಓದುಗರ ಓಲೆಗಳನ್ನು ವಿಂಗಡಿಸಿ ಉತ್ತರಿಸುವುದು ಪ್ರಮುಖ ದಿನಚರಿ ಎಂದು ತಿಳಿಹಾಸ್ಯದಲ್ಲಿ ಹೇಳಿದರು. ಶಾಮ್‌ ಮತ್ತು ಸಭಿಕರ ಸಂವಾದ ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿ, ಪತ್ರಿಕೆಯ ಸಮಸ್ಯೆಗಳನ್ನು ತಿಳಿದುಕೊಳ್ಳುವಲ್ಲಿ ಸಫಲವಾಯಿತು.

ಉತ್ತರ ಕ್ಯಾಲಿಫೋರ್ನಿಯಾದ ವಿವಿಧ ಸಂಘ ಸಂಸ್ಥೆಗಳು ಶಾಮ್‌ರ ಸೇವೆಯನ್ನು ಗುರ್ತಿಸಿ ಆತ್ಮೀಯವಾಗಿ ಹೃದಯ ತುಂಬಿ ಸನ್ಮಾನ ಮಾಡಿದವು. ಸಾಹಿತ್ಯ ಗೋಷ್ಠಿ ಮತ್ತು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ ಸನ್ಮಾನ ಪತ್ರವನ್ನು ಸಮರ್ಪಿಸಿ ಗೌರವಿಸಿದವು.

ಸಿರಿಗನ್ನಡ ಅರ್ಥಕೋಶ ಬಿಡುಗಡೆ

ಸುಪ್ರಿಂ ಟೆಕ್ನಾಲಜಿಸ್‌, ಬೆಂಗಳೂರು ಇವರು ಡಾ. ಶಿವರಾಮ ಕಾರಂತರ ಜನ್ಮಶತಾಬ್ಧಿಯ ಸಂದರ್ಭದಲ್ಲಿ ಸಿ.ಡಿ. ರೂಪದಲ್ಲಿ ಹೊರತಂದಿರುವ ಸಿರಿಗನ್ನಡ ಅರ್ಥಕೋಶ, ಕನ್ನಡ-ಕನ್ನಡ ನಿಘಂಟನ್ನು ಹಾರ್ನಳ್ಳಿ ರಾಮಸ್ವಾಮಿಯವರು ಬಿಡುಗಡೆ ಮಾಡಿದರು. ಇದು ಕನ್ನಡದಲ್ಲಿ ಯಾರೂ ಮಾಡದಿರುವ ಸಾಹಸದ ಕೆಲಸ. ಇಂತಹ ಕೆಲಸ ಮಾಡಿದ ರಾಘವೇಂದ್ರರಾವ್‌ ಅವರು ಅಭಿನಂದನಾರ್ಹರು ಎಂದು ಹಾರ್ನಳ್ಳಿ ರಾಮಸ್ವಾಮಿ ಹೇಳಿದರು. ಅನಂತರ ಎಂ.ವಿ.ನಾಗರಾಜರಾವ್‌ ಅವರು ತಾವು ಹೊರ ತಂದಿರುವ ಕಾರಂತರ ನಿಘಂಟಿನ ಸಿ.ಡಿ.ಯ ವಿಶೇಷತೆಗಳನ್ನು ಸಭಿಕರಿಗೆ ತಿಳಿಸಿ ಪ್ರತಿಯಾಂದು ಮನೆಯಲ್ಲೂ ಇದು ಇರಬೇಕು ಎಂದರು.

ಎಸ್‌.ಕೆ.ಹರಿಹರೇಶ್ವರ ಅವರು ಅಧ್ಯಕ್ಷ ಭಾಷಣ ಮಾಡಿದರು. ಕೊನೆಯಲ್ಲಿ ವಿಶ್ವನಾಥ ಹುಲಿಕಲ್‌ರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more