• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರಂತ ನಮನ :ಅಂಬರಕ್ಕೆ ಹಾರಿದ ಗಿಳಿಗೆ ಭೂಮಿಕಾದಲ್ಲಿ ಕಂಬನಿ

By Staff
|

* ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌ನಿಂದ

‘ಒಂಬತ್ತು ಬಾಗಿಲ ಮನೆಯಲ್ಲಿ..

ತುಂಬಿ ತುಂಬಿ ಮಂದಿ ಇರಲು...

ಕಂಬ ಮುರಿದು ಡಿಂಬ ಬಿದ್ದು ..

ಅಂಬರಕ್ಕೆ ಹಾರಿತಲ್ಲೋ..

ರಾಮಾ ಗಿಳಿಯು ಪಂಜರದೊಳಿಲ್ಲ...’

B. V. Karanth remembered in Bhoomika‘ಸತ್ತವರ ನೆರಳು’ ನಾಟಕದಲ್ಲಿ ಪುರಂದರ ದಾಸರ ಈ ಪಾರಮಾರ್ಥಿಕ ತತ್ವದ ಸರಳ ಗೀತೆಯನ್ನು ಸ್ವತಃ ಹಾಡಿ ಅಭಿನಯಿಸಿದ್ದ ಬಾಬುಕೋಡಿ ವೆಂಕಟರಮಣ ಕಾರಂತ ಇನ್ನಿಲ್ಲವೆಂದು ಸಮಾಚಾರ ತಿಳಿದ ಅವರ ಅಭಿಮಾನಿಗಳು, ಒಡನಾಡಿಗಳು, ಸಹಪಾಠಿಗಳು ಮತ್ತು ಶಿಷ್ಯರು ಹೀಗೆ ಒಂದು ಶ್ರದ್ಧಾಂಜಲಿ ಅರ್ಪಣೆಗಾಗಿ ಸಭೆ ನಡೆಸಿದರು. ‘ಭೂಮಿಕಾ’ದ ತಿಂಗಳ ಚರ್ಚೆ ಕಾರ್ಯಕ್ರಮದಡಿ ಸಪ್ಟೆಂಬರ್‌ 8ರಂದು ಭಾನುವಾರ.

ವಾಷಿಂಗ್ಟನ್‌ ಡಿ.ಸಿ. ಪ್ರದೇಶದಲ್ಲಿ ವಾಸಿಸುವ ಕಲಾಭಿಮಾನಿ ಕನ್ನಡಿಗರ ಒಂದು ಸಮುದಾಯ-ಭೂಮಿಕಾ. ಮನೋಹರ ಕುಲಕರ್ಣಿ ಮತ್ತು ವಿಜಯಾ ಮನೋಹರ್‌ ಅವರ ಸರಳ ಸಾರಥ್ಯದಲ್ಲಿ ಅಮೆರಿಕದ ವಿವಿಧ ಕಡೆಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡಿದೆಯಲ್ಲದೆ, ಕಳೆದ ಸುಮಾರು ಏಳೆಂಟು ವರ್ಷಗಳಿಂದ ಪ್ರತಿ ತಿಂಗಳ ಎರಡನೇ ಭಾನುವಾರ ಸಾಹಿತ್ಯ- ರಂಗಭೂಮಿ- ಸಂಗೀತ- ಜನಪದ ಹೀಗೆ ಲಲಿತ ಕಲೆಯ ಯಾವುದೇ ಒಂದು ಪ್ರಕಾರದ ಕುರಿತು ಇಲ್ಲಿಯವರಿಂದ, ಭಾರತದಿಂದ ಪ್ರವಾಸ ಬಂದವರಿಂದ ಭಾಷಣ- ಸೋದಾ ಹರಣ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುತ್ತ ಬಂದಿದ್ದು, ಕನ್ನಡ ಲಲಿತಕಲಾರಂಗಕ್ಕೆ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ಕುಲಕರ್ಣಿ ದಂಪತಿ ದಿ.ಬಿ. ವಿ.ಕಾರಂತರ ಗರಡಿಯಲ್ಲಿ ಪಳಗಿದವರು. ಕಾರಂತರೊಂದಿಗೆ ನಾಟಕಗಳಲ್ಲಿ ಅಭಿನಯಿಸಿದವರು ಮತ್ತು ಕಾರಂತರ ನಾಟಕಗಳನ್ನು ಅಮೆರಿಕದಲ್ಲಿ ಯಶಸ್ವಿಯಾಗಿ ನಿರ್ದೇಶಿಸಿ ಪ್ರದರ್ಶಿಸಿದವರು. ಕಾರಂತರ ಬಗ್ಗೆ ಮಾತನಾಡುವಾಗ ಇವರು ಗದ್ಗದಿತರಾದದ್ದು ಗುರು ಸಮಾನ ಮಿತ್ರರೊಬ್ಬರನ್ನು ಕಳಕೊಂಡ ಶೋಕದಿಂದ.

ಬಿ.ವಿ.ಕಾರಂತರಿಗೆ ಶ್ರದ್ಧಾಂಜಲಿ ಅರ್ಪಿಸುವ ಇಂಥದೊಂದು ಕಾರ್ಯಕ್ರಮ ನಡೆಯಲಿದೆ ಎಂದು ಕೇಳಿ ತಿಳಿದು ಸಭೆಯಲ್ಲಿ ಭಾಗವಹಿಸಲು ಬಂದ ಕನ್ನಡೇತರ ಅಭಿಮಾನಿಗಳಿದ್ದದ್ದು ಕಾರಂತರ ಜನಪ್ರಿಯತೆಗೆ ಸಾಕ್ಷಿ. ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದ ಮಾಜಿ ಪ್ರಾಂಶುಪಾಲ ಪಿ. ಸಿ. ಜೋಶಿಯವರಂತಹ ಜ್ಞಾನ ವೃದ್ಧ - ವಯೋವೃದ್ಧರು ಕಾರಂತರೊಂದಿಗಿನ ತಮ್ಮ ದಿನಗಳ್ನು ನೆನೆದರಲ್ಲದೆ, ಭಾಷೆಯ ನಿರ್ಬಂಧವಿಲ್ಲದೆ ಅದೆಷ್ಟು ಚೆನ್ನಾಗಿ ಕಾರಂತರು ರಂಗಭೂಮಿಯಲ್ಲಿ ದುಡಿದರು ಮತ್ತು ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡಿದರು ಎಂದು ಮನೋಜ್ಞವಾಗಿ ಮಾತನಾಡಿದರು.

ಕಾರಂತರ ಭೋಪಾಲ್‌ ದಿನಗಳಲ್ಲಿ , ಭೋಪಾಲ್‌ ಆಕಾಶವಾಣಿಯ ನಿರ್ದೇಶಕರಾಗಿದ್ದ ಈಗ ಅಂಬಿಕಾಪುರ ಆಕಾಶವಾಣಿ ಕೇಂದ್ರದಲ್ಲಿರುವ ಮತ್ತು ಸದ್ಯ ‘ವಾಯ್ಸ್‌ ಆಫ್‌ ಅಮೆರಿಕಾ’ ಬಾನುಲಿಗೆ ಪ್ರವಾಸದಲ್ಲಿ ಬಂದಿರುವ ರಾಜೀವ್‌ ಕುಮಾರ್‌ ಶುಕ್ಲಾ ಅವರೂ ಕಾರಂತ ಚಿಂತನ ಮಾಡಿದರು. ಹಿಂದಿ ರಂಗಭೂಮಿಗೆ ಕಾರಂತರ ಸೇವೆಯನ್ನು ಶ್ಲಾಘಿಸಿದರು. ದೆಹಲಿಯ ಡ್ರಾಮಾ ಸ್ಕೂಲಲ್ಲಿ ಕಾರಂತರ ಶಿಷ್ಯೆಯಾಗಿದ್ದ ಮತ್ತು ನಾಟಕಗಳಲ್ಲಿ ಅಭಿನಯಿಸಿದ್ದ ಸುರೇಖಾ ಕೃಷ್ಣನ್‌ ಅವರೂ ನುಡಿ ನಮನ ಸಲ್ಲಿಸಿದರು. ಒಂದು ದಿನ ರಿಹರ್ಸಲ್‌ಗೆ ತಡವಾಗಿ ತಲುಪಿದ್ದ ತನಗೆ, ಸಮಯ ಪ್ರಜ್ಞೆ ಪರಾಕಾಷ್ಟೆ ಹೊಂದಿದ್ದ ಕಾರಂತರು ಆಡಿದ್ದ ಬೋಧೆ- ಉಪದೇಶ ಹೇಗೆ ತನ್ನ ಮನಸ್ಸಿನಲ್ಲಿನ್ನೂ ದಾರಿದೀಪವಾಗೆ ನಿಂತಿದೆ ಎಂದು ನೆನೆಸಿಕೊಂಡರು.

ದಿ. ಕಾರಂತರ ಪತ್ನಿ ಪ್ರೇಮಾ ಕಾರಂತ್‌ ಅವರ ಹತ್ತಿರದ ಸಂಬಂಧಿಯಾದ ಗೋಪಿನಾಥ್‌ ಬೋರೆಯವರು ಕನ್ನಡದಲ್ಲೇ ಮಾತನಾಡಿದರು. ಆರ್ಕಿಟೆಕ್ಚರ್‌ ವಿಷಯದಲ್ಲಿ ಸಂಶೋಧನಾ ಪ್ರಬಂಧದಲ್ಲಿ ತೊಡಗಿದ್ದಾಗ ಕಾರಂತರೊಡನೆ ತಮ್ಮ ಭೇಟಿ ಮತ್ತು ಥಿಯೇಟರ್‌ ಆರ್ಕಿಟೆಕ್ಚರ್‌ಗೆ ಕಾರಂತರು ನೀಡಿದ ಹೊಸ ಆಯಾಮವನ್ನು ತಾವು ಅಭ್ಯಸಿಸಿದನ್ನು ತಿಳಿಸಿದರು. ಕಾರಂತರ ಇನ್ನೋರ್ವ ಅಭಿಮಾನಿ ಅನುಯಾಯಿ ಶೈಲಜಾ ಗುಂಡೂರಾವ್‌ ಅವರು ದೆಹಲಿಯಲ್ಲಿನ ತಮ್ಮ ದಿನಗಳನ್ನು, ಕನ್ನಡಿಗ ಮಿತ್ರರೆಲ್ಲ ಕಾರಂತರೊಂದಿಗೆ ಕಳೆದ ರಸನಿಮಿಷಗಳನ್ನು ಈಗ ಅಮೆರಿಕದಲ್ಲಿ ನೆಲೆಸಿರುವಾಗಲೂ ಒಂದೆರಡು ಸಲ ಅತಿಥಿಯಾಗಿ ತಮ್ಮ ಮನೆಗೆ ಭೇಟಿ ನೀಡಿ ಸ್ನೇಹವನ್ನು ಉಳಿಸಿ ಬೆಳೆಸಿದ್ದ ಕಾರಂತರ ಸರಳ ಸ್ವಭಾವವನ್ನು ಕೊಂಡಾಡಿದರು. ಮನೋಹರ್‌ ಕುಲಕರ್ಣಿಯವರೂ, ವಿಜಯಾ ಮನೋಹರ್‌ ಅವರೂ ತಮ್ಮ ಗುರುವಿನ ಅಗಲಿದ ಆತ್ಮಕ್ಕೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಭೂಮಿಕಾ ಸ್ಥಾಪನೆಗಿಂತಲೂ ಮೊದಲೇ ಅಂದರೆ 1990ರಲ್ಲಿ ಕಾರಂತರು ವಾಷಿಂಗ್ಟನ್‌ ಡಿ.ಸಿಗೆ ಬ್ರಾಡ್‌ವೇ ರಂಗಮಂದಿರಿದಲ್ಲಿ ನಾಟಕ ಪ್ರದರ್ಶನಕ್ಕೆ ಬಂದಿದ್ದಾಗ ತಮ್ಮ ಮನೆಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು.

ಬಿ.ವಿ. ಕಾರಂತರು ತಮ್ಮ ‘ಹಯವದನ’, ‘ಸತ್ತವರ ನೆರಳು’ ಮೊದಲಾದ ನಾಟಕಗಳಿಂದಾಯ್ದು ‘ಡೊಂಕು ಬಾಲದ ನಾಯಕರೇ...’ ‘ಇಬ್ಬರು ಹೆಂಡಿರ ಸುಖವ ಕಾಣಿರೋ...’, ‘ಲೊಳಲೊಟ್ಟೆ ...’, ‘ನಾ ಡೊಂಕಾದರೆ ನಿನ್ನ ನಾಮ ಡೊಂಕೇ...’ ಇತ್ಯಾದಿ ಪದಗಳನ್ನು ಹೊಸ ದಾಟಿಯಲ್ಲಿ ಹೊಸ ಶೈಲಿಯಲ್ಲಿ ಹಾಡು ಮಾತು- ಸಂಗೀತದಿಂದಲೇ ನಾಟಕವನ್ನು ಮುಂದುವರೆಸುವ ಅದ್ಭುತ ಕೌಶಲ್ಯ ತೋರಿಸುವ ವಿಡಿಯೋವನ್ನು ಪ್ರದರ್ಶಿಸಲಾಯಿತು. ಗಂಧದ ಮಾಲೆ ಹಾಕಿ ಬಳಿಯಲ್ಲಿ ದೀಪ ಹಚ್ಚಿಟ್ಟಿದ್ದ ಕಾರಂತರ ಭಾವ ಚಿತ್ರದ ಸುತ್ತ ಕಾರಂತರ ನಾಟಕಗಳ ದೃಶ್ಯಗಳ, ನಾಟಕ ಕ್ಯಾಂಪ್‌ಗಳ ಸಮಯ ಬರೇ ಜಮಖಾನೆಯಾಂದರ ಮೇಲೆ ಕಾರಂತರು ಮಲಗಿದ್ದ, ಜೀವಿ ಅಯ್ಯರ್‌ರಿಂದ ಕಾರಂತರು ಸನ್ಮಾನಿತರಾದ ಸಂದರ್ಭದ ಚಿತ್ರಗಳನ್ನೆಲ್ಲ ನೆನಪಿನ ಬುತ್ತಿಯಾಗಿ ಜೋಡಿಸಿಟ್ಟಿದ್ದರು ಈ ಅಭಿಮಾನಿಗಳು.

‘ಸತ್ತವರ ನೆರಳು’ ಕಾರಂತರ ಒಂದು ನಾಟಕ. ಕಾರಂತರ ಒಡನಾಡಿಗಳಿಗೆ ಈಗ ‘ಸತ್ತವರ ನೆನಪು’. ಕಾರಂತ ಸಾವಿಗೀಡಾಗಿರಬಹುದು; ಅವರ ಕಲಾ ತಪಸ್ಸಿನ ಫಲ ಸತ್ತಿಲ್ಲ. ಪಂಜರದ ಗಿಳಿ ಅಂಬರಕ್ಕೆ ಹಾರಿ ಹೋಗಿರಬಹುದು. ಗಿಳಿಯ ಮಾತುಗಳು ಹಾರಿ ಹೋಗಿಲ್ಲ. ಸುಲಭದಲ್ಲಿ ಹಾರಿ ಹೋಗುವಂಥವೂ ಅಲ್ಲ !

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X