• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುನರಪಿ ನಾಟಕಂ! ಎನ್‌ಇಕೆಕೆಯಲ್ಲಿ ಯುಗಾದಿ ನಾಟಕೋತ್ಸವ

By Staff
|

*ವಾದಿರಾಜ ಮನಗೋಳಿ

ನಾಟಕಗಳು !
ನಿತ್ಯ ಜೀವನದ ಘಟನೆಗಳಿಗೆ ವ್ಯಂಗ್ಯದ ಭೂಷಣಗಳನ್ನು ತೊಡಿಸಿ ರಂಗದ ಮೇಲೆ ಮೆರೆಯುವ ನಾಟಕಗಳು ನೀಡುವ ಖುಷಿಯನ್ನು ಅನುಭವಿಸಿಯೇ ತಿಳಿಯಬೇಕು. ಆಯಾ ಕಾಲದ ಸಮಾಜಕ್ಕೆ ಕನ್ನಡಿಯಂತೆ ನಾಟಕಗಳು ಹುಟ್ಟಿಕೊಳ್ಳುತ್ತವೆ. ಅದು ಷೇಕ್ಸ್‌ಪಿಯರ್‌ ಕಾಲದಲ್ಲಿ ಆಳುವ ವರ್ಗದ ದುರಂತವನ್ನ ಬಿಂಬಿಸಿದ್ದರೆ, ಮಾಸ್ಟರ್‌ ಹಿರಣ್ಣಯ್ಯನವರ ದಿನಗಳಲ್ಲಿ ಪ್ರಜಾಪ್ರಭುತ್ವದಲ್ಲಿನ ಭ್ರಷ್ಟಾಚಾರದ ಮುಖಕ್ಕೆ ಅಪ್ಪಳಿಸಿರಬಹುದು. 21ನೇ ಶತಮಾನದಲ್ಲಿ ಹಾಸ್ಯದತ್ತ , ಯಾಂತ್ರಿಕ ಬದುಕಿನ ವ್ಯಂಗ್ಯದತ್ತ ವಾಲಿರಬಹುದು !

ನಾಟಕಗಳು ಒಂದು ಕಾಲದಲ್ಲಿ ಊರ ಮಂದಿಗೆಲ್ಲ ಸಡಗರ ತಂದುಕೊಡುತ್ತಿದ್ದವು. ನಾಟಕಗಳ ಹುಚ್ಚು ಹಿಡಿಸಿಕೊಂಡು ಅಲೆದಾಡುವ ಮಕ್ಕಳಿಗೆ, ಗಂಡನಿಗೆ ಹಿಡಿ ಶಾಪ ಹಾಕುವ ಅಮ್ಮಂದಿರು, ನಾಟಕದ ಗೀಳಿನಲ್ಲಿಯೇ ಶಾಲೆಯಲ್ಲಿ ಸಿಗದ ಜೀವನ ಪಾಠವನ್ನು ಕಲಿತು ಡಿವಿಜಿಯ ಕಗ್ಗವನ್ನು ಹಾಡುವ ಅಪ್ಪ, ಅಜ್ಜಂದಿರು ಆವಾಗೆಲ್ಲ ನಾಟಕದ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದ್ದರು. ಆ ದಿನಗಳ ನಡುವೆಯೇ ಬೆಳೆದ ತಂತ್ರಜ್ಞಾನ ಟಿವಿ ಎಂಬ ಮಾಯಾ ಪೆಟ್ಟಿಗೆಯನ್ನು ತಂದುಕೊಟ್ಟಿತು. ಸಿನೆಮಾ ಎಂಬ ಅಯಸ್ಕಾಂತ ಸುಲಭವಾಗಿ ಕೈಗೆ ನಿಲುಕಿತು. ಇವುಗಳ ಮುಂದೆ ನಾಟಕ ತುಸು ಹಿಂಜರಿದುದು ಸುಳ್ಳಲ್ಲ.

ತಂತ್ರಜ್ಞಾನ ಎಂಬುದು ಸಮುದ್ರವನ್ನು ಬಯಸದೇ ಹರಿಯುತ್ತಲೇ ಇರುವ ಬೃಹತ್‌ ನದಿಯಲ್ಲವೇ ? ಈಗ ಮತ್ತೆ ಕಂಪ್ಯೂಟರ್‌ ಎಂಬ ತೆಕ್ಕೆಯಗಲದ ಕರಡಿಗೆ ಬಂದಿದೆ. ಪುರುಸೊತ್ತನ್ನು ನುಂಗಿ ಹಾಕುವ ಈ ಯಂತ್ರದ ಮುಂದೆ ಕೂರುವುದು ಅನಿವಾರ್ಯವಾಗಿದೆ. ಬೊಗಸೆ ಚೆಲ್ಲುವಷ್ಟು ದೊರೆಯುವ ಹಣವನ್ನು ಮನರಂಜನೆಗೆಂದು ಖರ್ಚು ಮಾಡಬೇಕೆಂದಿದ್ದರೂ ಟೈಮಿಲ್ಲ.

ಆದರೆ ಈ ಎಲ್ಲ ಗೊಂದಲಗಳ ನಡುವೆ ಕಳೆದು ಹೋಗುವ ಪ್ರವೃತ್ತಿ ನಾಟಕದ್ದಲ್ಲ. ಕಾಲದ ಜೊತೆಗೆ ಸಾಗುವ ನಾಟಕಗಳು ಜನಜೀವನದ ವ್ಯಂಗ್ಯಗಳನ್ನು ಬಿಟ್ಟಾದರೂ ಹೇಗಿರುತ್ತವೆ ಹೇಳಿ. ಆದ್ದರಿಂದಲೇ ಮಂಗಳೂರಿನಲ್ಲಿ ರಾಜ್‌ಕುಮಾರ್‌ ಹಿಟ್‌ ಸಿನೆಮಾಗಳು ಸುದ್ದಿ ಮಾಡುತ್ತಿದ್ದಂತೆಯೇ ಸುದ್ದಿ ಮಾಡುವ ದೇವದಾಸ್‌ ಕಾಪಿಕಾಡ್‌ ಅವರ ಹಾಸ್ಯ ನಾಟಕಗಳು, ಗಂಭೀರವಾಗಿ ರಂಗಭೂಮಿ ಕ್ಷೇತ್ರವನ್ನು ಹಚ್ಚಿಕೊಂಡಿರುವ ಹೆಗ್ಗೋಡಿನ ನೀನಾಸಂದಂತಹ ತಂಡಗಳು, ಎಚ್ಚೆನ್‌ ಕಲಾಕ್ಷೇತ್ರಕ್ಕೆ ಜಯನಗರದ ಹಳೇ ಲುಕ್‌ನ್ನು ಎತ್ತಿ ಹಿಡಿಯುವ ವಾರಾಂತ್ಯದ ನಾಟಕಗಳು, ಸಾಗರದಾಚೆಗೂ ಸದ್ದು ಮಾಡುವ ಹಾಲಿವುಡ್‌ನಲ್ಲಿ ಯಮ, ನಂಜುಂಡಾ ಶ್ರೀನಿವಾಸ ನಾಟಕಗಳು ರಂಗಭೂಮಿಯನ್ನು ರಮ್ಯವಾಗಿರಿಸಿವೆ.

ಎನ್‌ಇಕೆಕೆಯಲ್ಲಿ ಪಂಚನಾಟಕಗಳ ಸಂಭ್ರಮ !

ಹೌದು. ಸಾಗರದಾಚೆಗೆ ರಂಗಭೂಮಿಯ ಕಲರವ ಜೀವಂತಿಕೆಯಿಂದ ಕೂಡಿದೆ. ಮತ್ತೊಂದು ಉದಾಹರಣೆ ಕೊಡುವುದಿದ್ದರೆ ನ್ಯೂಇಂಗ್ಲೆಂಡ್‌ ಕನ್ನಡ ಕೂಟದ ಯುಗಾದಿ ಕಾರ್ಯಕ್ರಮದ ಸಲುವಾಗಿ ಪಂಚನಾಟಕಗಳು ತಯಾರಾಗುತ್ತಿವೆ. ಯುಗಾದಿ ಹಬ್ಬದ ವಿಶೇಷ ಅತಿಥಿ ಸಿಕಾಮೋರ್‌ ನೆಟ್‌ವರ್ಕ್ಸ್‌ನ ಅಧ್ಯಕ್ಷ ಗುರುರಾಜ್‌ ದೇಶಪಾಂಡೆ. ಎನ್‌ಇಕೆಕೆಯ ಸುದ್ದಿ ಪತ್ರ ‘ದರ್ಪಣ’ದ ಬಿಡುಗಡೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಕಾರ್ಯಕ್ರಮ ನಡೆಯುವ ಸ್ಥಳ : ActonBoxborough High School, 96 Hayward Road

Acton, MA 01720

ಪ್ರದರ್ಶನವಾಗಲಿರುವ ಐದು ನಾಟಕಗಳು:
ಮಕ್ಕಳ ನಾಟಕ ತಂಡ ರಸರಂಗದಿಂದ ‘ಭಕ್ತ ಪ್ರಹ್ಲಾದ’, ಶೃಂಗಾರ್‌ ಮಕ್ಕಳ ನಾಟಕ ತಂಡದಿಂದ ‘ಕಿತ್ತೂರು ಚೆನ್ನಮ್ಮ’, ರಸರಂಗ ತಂಡದ ‘ಸಾಹಿತ್ಯಕ್ಕೆ ಏನು ಬೆಲೆ’ , ಬಾಲ ವಿಹಾರ ತಂಡದಿಂದ ‘ತಿರುಕ ರಾಜಕುಮಾರ’ ಮತ್ತು ಶೃಂಗಾರ ತಂಡದಿಂದ ‘ಗೌಡರ ಅಳಿಯ’ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಕನ್ನಡ ಕೂಟದ ಸದಸ್ಯರಲ್ಲದವರಿಗೆ 7 ಡಾಲರ್‌ ಪ್ರವೇಶ ಶುಲ್ಕವಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ನಾಗೇಂದ್ರ ಪರಮೇಶ್ವರ: 978-670 1073 , ಪ್ರಕಾಶ್‌ ಪುರೋಹಿತ್‌: 508-842 4889

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more