ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಕಾ ಚರ್ಚೆಯಲ್ಲಿ ಕರ್ನಾಟಕ ಬೇರುಗಳ ಅನ್ವೇಷಣೆ

By Staff
|
Google Oneindia Kannada News

*ಎಚ್‌. ಆರ್‌. ಸತೀಶ್‌ ಕುಮಾರ್‌, ಅಲೆಕ್ಸಾಂಡ್ರಿಯಾ

H. R. Satish kumar, Alexandria- authorಕಳೆದ ಭಾನುವಾರ (ಡಿ.8)ದ ಭೂಮಿಕಾ ಕಾರ್ಯಕ್ರಮ ಎರಡು ಮುಖ್ಯ ವಿಷಯಗಳನ್ನೊಳಗೊಂಡಿತ್ತು : ಮೊದಲನೆಯದಾಗಿ ಪ್ರತೀವರ್ಷದ ಕೊನೆಯಲ್ಲಿಯಂತೆ ಈ ವರ್ಷವೂ ಸಹ ಭೂಮಿಕಾ ನಡೆದು ಬಂದ ಹಾದಿಯತ್ತ ಸಿಂಹಾವಲೋಕನ-ಸಲಹೆ ಸೂಚನೆ ಗಳನ್ನು ಆಹ್ವಾನಿಸುವುದರ ಜೊತೆಗೇ ನರೇಂದ್ರ ಕುಮಾರ್‌ ಅವರ ‘ಕರ್ನಾಟಕದ ಮೂಲ’ ಎಂಬ ವಿಷಯದ ಬಗೆಗೆ ಸಂವಾದ.

ಮೊದಲು ಸಿದ್ಧಲಿಂಗಯ್ಯನವರು ಕಾಡುಗಳ್ಳನ ದೆಸೆಯಿಂದ ನಾಗಪ್ಪನವರು ಕಾಲವಾದುದನ್ನು ಸಭೆಗೆ ತಿಳಿಸಿ, ನಾಗಪ್ಪನವರು ಅಮೇರಿಕಕ್ಕೆ ಬಂದಾಗ ಇಲ್ಲಿನ ಕನ್ನಡಿಗರೊಡನೆ ಅವರು ಬೆರೆತ ಸಂದರ್ಭಗಳನ್ನು ನೆನಪಿಸಿಕೊಂಡರು. ಸಭೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿತು.

1994ರಿಂದ (1995 ರಲ್ಲಿ ನೋಂದಾಯಿತವಾದ) ಭೂಮಿಕಾ ಪ್ರತಿ ತಿಂಗಳ ಎರಡನೇ ಭಾನುವಾರದಂದು ಒಂದಲ್ಲ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ವರ್ಷದ ಕೊನೆಯ ಕಾರ್ಯಕ್ರಮದ ಮುನ್ನ ಬಳಗದವರೊಡನೆ ಆತ್ಮೀಯ ಸಂವಾದದಲ್ಲಿ ತೊಡಗಿ, ಬೇಕು-ಬೇಡಗಳ ಚರ್ಚೆ ನಡೆಸುವುದು ಈ ಎಂಟು ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಎಂದಿನಂತೆ ಇಂದೂ ಲವಲವಿಕೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿಜಯಾ ಮನೋಹರ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬಳಗದವರಲ್ಲಿ ತಮ್ಮ ಈ ವರ್ಷದ ಕಾರ್ಯಕ್ರಮಗಳ ಬಗೆಗೆ ಅನುಭವ-ಅನಿಸಿಕೆಗಳನ್ನು ಹಂಚಿಕೊಳ್ಳಲು ವಿನಂತಿಸಿದರು. ಹಾಗೆಯೇ 1994ರಿಂದ ಇಲ್ಲಿಯವರೆಗೆ ಭೂಮಿಕಾ ನಡೆದು ಬಂದ ಹಾದಿಯನ್ನು ಸ್ಥೂಲವಾಗಿ ಪರಿಚಯಿಸಿದರು.

ಮುಂಬರುವ ದಿನಗಳಲ್ಲಿ ಭೂಮಿಕಾ ಯುವ ಜನತೆಯನ್ನು ತಲುಪಬೇಕು, ಭೂಮಿಕಾ ಕಾರ್ಯಕ್ರಮ ತಲೆಮಾರುಗಳಲ್ಲಿ ಮುಂದುವರೆಯ ಬೇಕು ಎನ್ನುವ ಆಶಯವನ್ನು ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಸಿದ್ಧಲಿಂಗಯ್ಯನವರು ವ್ಯಕ್ತಪಡಿಸಿದರು.

ನಂತರ ಪ್ರಭಾಕರ್‌ರವರು ತಮ್ಮ ಡಿ.ವಿ.ಜಿ. ಅನುಭವಗಳನ್ನು ಸ್ವಾರಸ್ಯಕರವಾಗಿ ಶ್ರೋತೃಗಳಲ್ಲಿ ಹಂಚಿಕೊಂಡಿದ್ದೂ ಅಲ್ಲದೇ ‘ನಾವು ಬರೀ ನಮ್ಮ ಬೆನ್ನು ನೋಡಿಕೊಂದರೆ ಸಾಲದು, ಹೊಟ್ಟೆಯನ್ನೂ ನೋಡಿಕೊಳ್ಳಬೇಕು’ ಎನ್ನುವ ಮೂಲಕ- ಭೂಮಿಕಾ ಬರೀ ಹಳೆಯ ಸಾಹಿತ್ಯ, ರಂಗ ಕೃತಿಗಳ ಚರ್ಚೆಗಳಿಗಷ್ಟೇ ಸೀಮಿತವಾಗದೆ, ಸಾಹಿತ್ಯ, ಸಂಗೀತ, ರಂಗಗಳಲ್ಲಿ ಇತ್ತೀಚಿನ ಬೆಳವಣಿಗೆಯನ್ನೂ ಚರ್ಚಿಸುವಂತಾಗಿ ತಲೆಮಾರುಗಳ ನಡುವಿನ ಕಂದಕ ಮುಚ್ಚಲು ಸಹಾಯವಾಗುವಂತಾಗಲಿ ಎಂದು ಸೂಚ್ಯವಾಗಿ ಹೇಳಿದರು.

ವಿಜಯಾ ಮನೋಹರ್‌ರವರು ಎಲ್ಲರ ಅನಿಸಿಕೆಗಳನ್ನು ಶ್ಲಾಘಿಸಿ ಮುಂಬರುವ ದಿನಗಳಲ್ಲಿ ಭೂಮಿಕಾ ಈ ನಿಟ್ಟಿನಲ್ಲಿ ಪ್ರಯತ್ನಮಾಡುತ್ತದೆ ಎಂಬ ಭರವಸೆಯನ್ನು ನೀಡುವುದರ ಮೂಲಕ ಮುಂಬರುವ ಕಾರ್ಯಕ್ರಮಗಳ ಒಂದು ಚಿಕ್ಕ ಪರಿಚಯವನ್ನೂ ನೀಡಿದರು.

ಕಾರ್ಯಕ್ರಮದಲ್ಲಿ ಹೊಸ ಮುಖಗಳು

ವರ್ಷಾಂತ್ಯದ ಭೂಮಿಕಾ ಕಾರ್ಯಕ್ರಮದಲ್ಲಿನ ಚರ್ಚೆ ನಡೆಯುತ್ತಿದ್ದಂತೆ ಸಭಾಂಗಣ ತುಂಬಿಕೊಳ್ಳತೊಡಗಿತ್ತು. ಎಂದಿಗಿಂತ ಹೆಚ್ಚು ಜನರು ಬಂದಿದ್ದೂ ಅಲ್ಲದೇ ಕೆಲವು ಹೊಸ ಮುಖಗಳು ಕಾಣಸಿಕ್ಕಿದ್ದು ಸಮಾರಂಭಕ್ಕೆ ಮೆರುಗು ನೀಡಿತ್ತು. ಎಲ್ಲರ ಮುಖದಲ್ಲೂ ಕರ್ನಾಟಕದವರ ಬಗೆಗೆ ಹೆಚ್ಚು ತಿಳಿಯಬೇಕು ಎನ್ನುವ ಕುತೂಹಲ, ಕನ್ನಡ ದಾಹ. ವಿಜಯಾ ಮನೋಹರ್‌ ಅವರು ನರೇಂದ್ರ ಕುಮಾರ್‌ರವರ ಕಿರುಪರಿಚಯವನ್ನು ಸಭಿಕರಿಗೆ ಮಾಡಿಕೊಟ್ಟರು. ನರೇಂದ್ರ ಕುಮಾರ್‌ರವರು ಗಣಿತಶಾಸ್ತ್ರ ಹಾಗೂ ಭೌತಶಾಸ್ತ್ರಗಳೆರಡರಲ್ಲೂ ಸ್ನಾತಕೋತ್ತರ ಪದವೀಧರರು. ಅಮೇರಿಕಾದಲ್ಲಿ ತಮ್ಮ ಸಂಶೋಧನ ಪ್ರಬಂಧಕ್ಕೆ ಪಿ. ಎಚ್‌ಡಿ. ಯನ್ನೂ ಪಡೆದಿದ್ದಾರೆ. ಹಲವಾರು ದೇಶಗಳನ್ನು ಸುತ್ತಿರುವ ನರೇಂದ್ರ ಕುಮಾರ್‌, ಸಂಸ್ಕೃತ, ಪಶ್ತೂನ್‌, ಇಂಗ್ಲೀಷ್‌, ಹಿಂದಿ, ಮರಾಠಿ, ತಮಿಳು, ತೆಲುಗು, ಹಾಗೂ ಕನ್ನಡ ಭಾಷೆಗಳಲ್ಲಿ ಪರಿಣಿತಿ ಹೊಂದಿರುವುದೂ ಅಲ್ಲದೇ ಸನಾತನ ವೇದಾಧ್ಯಯನವನ್ನೂ ಮಾಡಿದ್ದಾರೆ. ಪ್ರಸ್ತುತ ಮಹಾಭಾರತವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನರೇಂದ್ರ ಕುಮಾರ್‌, 34 ಅಧ್ಯಾಯಗಳಲ್ಲಿ ಪ್ರಕಟವಾಗಬಹುದಾದ ಈ ಕೃತಿಯ ಮೊದಲನೇ ಅಧ್ಯಾಯವನ್ನು ಶ್ರೋತೃಗಳಿಗೆ ತೋರಿಸಲು ತಂದಿದ್ದರು.

‘ನನಗೆ ಕನ್ನಡದಲ್ಲಿ ಮಾತನಾಡಲಿಕ್ಕೆ ಅಷ್ಟೊಂದು ಚೆನ್ನಾಗಿ ಬರೋಲ್ಲ’ ಅಂತಲೇ ಮಾತು ಆರಂಭಿಸಿದ ನರೇಂದ್ರ ಕುಮಾರ್‌, ಕರ್ನಾಟಕ, ಕನ್ನಡಿಗರ ಹಿನ್ನೆಲೆಯನ್ನು ವಿಂಧ್ಯ ಪರ್ವತದಿಂದ ಆರಂಭಿಸಿದರು. ಹಲವಾರು ಪುರಾಣ, ಪುರಾಣೇತರ ಉದಾಹರಣೆಯಾಂದಿಗೆ ವಿಸ್ತಾರವಾಗಿ ಮಾತಿಗಾರಂಭಿಸಿದ ನರೇಂದ್ರ ಕುಮಾರ್‌ ಅವರ ಭಾಷಣದ ವ್ಯಾಪ್ತಿ, ಕ್ರಿಸ್ತಪೂರ್ವ ಸಮಯದಲ್ಲಿ ನಡೆದ ಘಟನೆಗಳಿಂದ ಹಿಡಿದು ಇತ್ತೀಚಿನ ಬೆಳವಣಿಗೆಗಳನ್ನು ಒಳಗೊಂಡಿತ್ತೆಂದರೆ, ವಿಷಯದ ವಿಸ್ತಾರ ಎಷ್ಟು ಎಂಬುದು ಎಂತಹವರಿಗೂ ಮನವರಿಕೆಯಾಗುವಂತಿತ್ತು !

ಕರ್ನಾಟಕ ಅಥವಾ ಕರ್ಣಾಟಕ ಎಂಬ ಪದದ ಅರ್ಥವೇನು ?

ಕ್ರಿಸ್ತ ಪೂರ್ವದಲ್ಲಿ ಭಾರತದ ಸ್ಥಿತಿ-ಗತಿ, ಸಿಂಧೂ ಕಣಿವೆ ನಾಗರಿಕತೆ, ಗಂಗಾ ನದಿ ಭೂಭಾಗದಲ್ಲಿ ಆಳ್ವಿಕೆಯಲ್ಲಿದ್ದ ರಾಜ್ಯ ಪರಂಪರೆಗಳು ಇತ್ಯಾದಿಯಾಗಿ ಮಾತನ್ನು ಬೆಳೆಸಿಕೊಂಡು ದಕ್ಷಿಣ ಭಾರತದೆಡೆಗೆ ವಲಸೆ ಬರತೊಡಗಿದ, ಹಾಗೂ ದಕ್ಷಿಣದಲ್ಲಿದ್ದವರನ್ನು ಸೇರಿಕೊಳ್ಳತೊಡಗಿದ ಒಂದೊಂದೇ ಧರ್ಮ, ಜಾತಿ, ಪಂಥಗಳನ್ನು ನರೇಂದ್ರಕುಮಾರ್‌ ಪರಿಚಯಿಸಿದರು.

ಕೆಲವು ಶ್ಲೋಕಗಳ ಮೂಲಕ, ಕೆಲವು ಶಬ್ದಗಳ ವ್ಯುತ್ಪತ್ತಿಯ ಆಧಾರದೊಂದಿಗೆ, ನರೇಂದ್ರ, ನರೇಂದರ್‌, ಅಲೆಕ್ಸಾಂಡರ್‌ ಎಂಬ ಹೆಸರುಗಳು ಮಧ್ಯ ಏಷ್ಯಾ, ಏಷ್ಯಾಗಳಲ್ಲಿ ಬರುವ ವಿವಿಧ ಪ್ರಾಂತ್ಯಗಳಲ್ಲಿ ಯಾವ ಯಾವ ರೂಪ ಪಡೆಯಬಲ್ಲದು ಎಂಬುದನ್ನು ವಿವರಿಸಿದರು. ನರೇಂದ್ರ ಕುಮಾರ್‌ರವರ ಮಾತುಗಳಲ್ಲಿ ದಕ್ಷಿಣ ಭಾರತದಲ್ಲಿ ಈವರೆಗೆ ಆಳಿದ, ಬಂದು ಹೋದ ಚಾಲುಕ್ಯ, ಚೋಳ, ಗಂಗ, ಕದಂಬ, ರಾಷ್ಟ್ರಕೂಟ, ಹೊಯ್ಸಳ, ಬಲ್ಲಾಳ ಮುಂತಾದ ರಾಜ ವಂಶಗಳ ಬಗೆಗೆ ಪಕ್ಷಿನೋಟವೂ ಇತ್ತು. ‘ಸ್ಥಳೀಯ’ ಕನ್ನಡಿಗರನ್ನು ಹೊರತು ಪಡಿಸಿ ದಕ್ಷಿಣ ದಿಕ್ಕಿಗೆ ಬಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಾದಿಯಾಗಿ, ಡಚ್‌, ಪೋರ್ಚುಗೀಸ್‌ ಮುಂತಾದ ವಿದೇಶಿಯರನ್ನು ಅವರು ಪ್ರತ್ಯೇಕವಾಗಿ ಪರಿಚಯಿಸಿದರು.

ಸಮಯಾಭಾವ, ವಿಷಯದ ವ್ಯಾಪ್ತಿ, ಶ್ರೋತೃಗಳ ನಿರಂತರ ಪ್ರಶ್ನೆಗಳು, ಕೆಲವು ಪರಾಮರ್ಶೆ- ವಿಷಯಗಳ ಮೇಲಿನ ವಾದ-ವಿವಾದಗಳು ನರೇಂದ್ರರವರ ಯೋಜನೆಯಂತೆ ಮಾತನ್ನು ಮುಂದುವರಿಯ ಬಿಡದೇ ಚರ್ಚೆಯನ್ನು ಅರ್ಧದಲ್ಲೇ ಮೊಟಕುಗೊಳಿಸುವಂತಾಯಿತು. ನರೇಂದ್ರ ಕುಮಾರ್‌ರವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದಂತೆ ಕರ್ನಾಟಕದ ಮೂಲ, ನದೀ ಮೂಲ ಎರಡೂ ಒಂದೇ, ಎಷ್ಟು ಹುಡುಕಿದರೂ ಸಿಗದು ಎಂಬ ಮಾತು ಶ್ರೋತೃಗಳಿಗೆ ನಿಜವೆಂದು ಮನದಟ್ಟಾಯಿತು. ದೀರ್ಘ ಚರ್ಚೆಯ ನಡುವೆ ಪ್ರಭಾಕರ್‌ರವರು ಹೇಳಿದಂತೆ ‘ಕರ್ನಾಟಕ’ ಎಂಬ ಪದಕ್ಕೆ ಅರ್ಥ ಕೊಡುವುದೇ ಕಷ್ಟ ಎಂಬುದು ಎಲ್ಲರೂ ಒಪ್ಪಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ವಿಜಯಾ ಮನೋಹರ್‌ ಅವರು ಅತಿಥಿಗಳಿಗೆ ವಂದನೆಗಳನ್ನು ಸಲ್ಲಿಸುತ್ತಾ, ಇಂದಿನ ಚರ್ಚೆಯ ವಿಷಯದ ವ್ಯಾಪ್ತಿ ಮುಂದಿನ ಭೂಮಿಕಾ ಕಾರ್ಯಕ್ರಮಗಳಲ್ಲಿ ವಿಸ್ತ ೃತ ಚರ್ಚೆಗೆ ಒಳಗಾಗಲಿ ಎಂದು ಆಶಿಸಿದರು.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X