ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಥಮನರ್ಥಮ್‌ ಭಾವಯ ನಿತ್ಯಮ್‌- ಒಂದು ವೈನೋದಿಕ

By Staff
|
Google Oneindia Kannada News

*ಶ್ರೀವತ್ಸ ಜೋಶಿ, ವೆಸ್ಟ್‌ಮಾಂಟ್‌

Shreevatsa Joshi, Westmontನಮ್ಮ ಭಾರತೀಯ ಭಾಷೆಗಳೆಲ್ಲ ಒಂದಿಲ್ಲೊಂದು ರೀತಿಯಲ್ಲಿ ಸಂಸ್ಕೃತ ಭಾಷೆಯಿಂದ ಪದಗಳನ್ನು ಪಡೆದಿವೆ. ಕೆಲವು ಪದಗಳು ಸಂಸ್ಕೃತದ ಮೂಲ ರೂಪದಲ್ಲೇ ಉಳಿದುಕೊಂಡಿದ್ದರೆ ಇನ್ನು ಕೆಲವು ಆಯಾ ಭಾಷೆಯ ಉಚ್ಚಾರಣೆ, ಅಕ್ಷರಗಳ ಮಿತಿ ಇತ್ಯಾದಿಯಿಂದ ಅಪಭ್ರಂಶಗೊಂಡಿವೆ ಅಥವಾ ರೂಪಾಂತರವಾಗಿವೆ. ಇಂಗ್ಲಿಷ್‌ ಮತ್ತಿತರ ಭಾಷೆಗಳ ಪದಗಳಿಂದಲೂ ನಮ್ಮ ಶಬ್ದ ಭಾಂಡಾರ ಶ್ರೀಮಂತವಾಗಿದೆ. ಈ ಲೇಖನದಲ್ಲಿ ಕೆಲವು ಸಂಸ್ಕೃತ/ ಇಂಗ್ಲಿಷ್‌ನ ಮೂಲ ಪದಗಳು, ಕನ್ನಡದಲ್ಲಿ ಅವುಗಳ ರೂಪಾಂತರ, ಬಳಕೆ- ಇತ್ಯಾದಿ ಗಹನ ವಿಚಾರಗಳನ್ನು, ಭಾಷಾ ಪಂಡಿತರು ಮಾತ್ರ ಮೆಚ್ಚುವಂತಹ/ ತಲೆಕೆಡಿಸಿಕೊಳ್ಳುವಂತಹ ಸಂಗತಿಗಳನ್ನು ಮಂಡಿಸಿ ನಿಮ್ಮನ್ನು ಬೋರ್‌ ಹೊಡೆಸುವ ಬದಲು, ಆಯ್ದ ಒಂದಿಷ್ಟು ಪದಗಳನ್ನು, ವಿಡಂಬನಾತ್ಮಕ ದೃಷ್ಟಿಕೋನದಲ್ಲಿ ನೋಡಿದರೆ ಹೇಗಿರುತ್ತದೆ ಎಂಬ ವಿವರಣೆ ತುಂಬಿಸಿದ್ದೇನೆ. ಅದಕ್ಕೆಂದೇ ಶೀರ್ಷಿಕೆಯನ್ನು ‘ ಅರ್ಥಮನರ್ಥಮ್‌ ಭಾವಯ ನಿತ್ಯಮ್‌..’ (ಭಜಗೋವಿಂದಮ್‌ನ ಒಂದು ಸಾಲು) ಎಂದಿಟ್ಟಿದ್ದೇನೆ.

ಕನ್ನಡದ ಪ್ರಮುಖ ವಾರಪತ್ರಿಕೆ ‘ಸುಧಾ’ದಲ್ಲಿನ ಜನಪ್ರಿಯ ಅಂಕಣ ‘ಚೌಚೌ ಚೌಕಿ’ಯಲ್ಲಿ ಈ ತರಹದ ಪದವಿಶ್ಲೇಷಣೆ ಓದುಗರಿಂದ, ಪ್ರಾಜ್ಞರಿಂದ ಸಾಕಷ್ಟು ಆಗುತ್ತಿರುತ್ತದೆ. ಸುಧಾದ ಈ ಅಂಕಣದಲ್ಲಿ ಒಂದೆರಡು ಬಾರಿ ನನ್ನ ಉತ್ತರಗಳೂ ಪ್ರಕಟವಾಗಿದ್ದವು. ಅವನ್ನೂ ಇಲ್ಲಿ ಸೇರಿಸಿದ್ದೇನೆ.

ತತ್ವ ಮಸಿ ಎಂದರೇನು ?
ಸಂಸ್ಕೃತದ ಮೂಲದಲ್ಲಿ ‘ತತ್‌ ತ್ವಮ್‌ ಅಸಿ’(ಅದೆಲ್ಲವೂ ನೀನೇ ಆಗಿರುವೆ) ಎಂದು ಭಗವಂತನನ್ನು ಸಂಬೋಧಿಸುವ ಈ ಪದಕ್ಕೆ ಶುದ್ಧ ತರಲೆ ಉತ್ತರ - ‘ಜಿಡ್ಡು ಕೃಷ್ಣಮೂರ್ತಿಯವರಂತಹ ದಾರ್ಶನಿಕರು, ತತ್ವಜ್ಞಾನಿಗಳು ತಮ್ಮ ಬರವಣಿಗೆಗೆ ಉಪಯೋಗಿಸುವ ಇಂಕ್‌’!

ಸಿದ್ಧಪುರುಷ ಎಂದರೆ ಯಾರು ?
ಯೋಗ ಸಿದ್ಧಿಯನ್ನು ಸಾಧಿಸಿದ ಮಹಾನುಭಾವರನ್ನು ಸಿದ್ಧಪುರುಷ ಎಂದು ಸಾಹಿತ್ಯ ಭಾಷೆಯಲ್ಲಿ ವೈಭವೀಕರಿಸುವುದು ವಾಡಿಕೆ. ಅಂತಹ ಸಾಹಿತ್ಯಕ ಶ್ರೀಮಂತ ಪದಪ್ರಯೋಗವನ್ನು ಬದಿಗಿಟ್ಟು, ನಿತ್ಯ ಜೀವನಕ್ಕೆ ಶ್ರೀಸಾಮಾನ್ಯನ ಪ್ರಪಂಚಕ್ಕೆ ಬಂದರೆ ಅಲ್ಲಿ ಸಿದ್ಧಪುರುಷ ಎಂದರೆ ‘ಪೇಟೆಗೆ/ಸಿನೆಮಾಕ್ಕೆ/ ಪಾರ್ಟಿಗೆ/ಹೋಗಲು ತಾನು ಆಗಲೇ ರೆಡಿಯಾಗಿ ನಿಂತು ಹೆಂಡತಿಯ ಮೇಕಪ್‌ಗಾಗಿ ಗಂಟೆಗಟ್ಟಲೆ ಕಾಯುವ ಗಂಡನೆಂಬ ಬಡಪಾಯಿ ಎಂಬ ಅರ್ಥ ಸಮಂಜಸವಾಗುವುದಿಲ್ಲವೇ ?

ಲಲಿತಕಲೆ ಎಂದರೇನು ?
ಸರ್ಫ್‌ ಜಾಹೀರಾತು ಮತ್ತು ಅದರಲ್ಲಿ ಶುಭ್ರ-ಶ್ವೇತ ಸೀರೆಯುಟ್ಟ ಲಲಿತಾ ಪವಾರ್‌ಜೀ ನೆನಪಿದೆಯೇ ? ಸರ್ಫ್‌ ಬಳಕೆಯಿಂದಾಗಿ ಲಲಿತಾ ಪವಾರ್‌ ಸೀರೆಯ ಮೇಲೆ ‘ಗಾಯಬ್‌’ ಆಗಿರುವ ಕಲೆಯೇ ಲಲಿತ ಕಲೆ !

ಸೊಳ್ಳೆಗಳ ದೇಶಭಕ್ತಿ !
‘ಈ ಮಣ್ಣು ನಮ್ಮದು, ಈ ಗಾಳಿ ನಮ್ಮದು.. ಕಲಕಲನೆ ಹರಿಯುತಿಹ ನೀರು ನಮ್ಮದು... ಕಣ ಕಣದಲಿ ಭಾರತೀಯ ರಕ್ತ ನಮ್ಮದು...’ಎಂಬ ದೇಶಭಕ್ತಿಗೀತೆಯನ್ನು ನೀವು ಕೇಳಿರಬಹುದು. ಸೊಳ್ಳೆಗಳು ಮುಸ್ಸಂಜೆಯಲ್ಲಿ ಗುಂಯ್‌ಗುಡುತ್ತಾ ಈ ಹಾಡನ್ನು ಹಾಡುತ್ತವೆಯೇ? ಹೌದು. ‘ಭಾರತಿ’ ಎಂಬ ಹುಡುಗಿಗೆ ಕಚ್ಚಿದ ಸೊಳ್ಳೆಗಳು ‘ಕಣಕಣದಲಿ ಭಾರತೀಯ ರಕ್ತ ನಮ್ಮದು...’ ಎಂದು ಹಾಡಿದರೆ ಅದರಲ್ಲಿ ಆಶ್ಚರ್ಯವೇನು ?

Curtain Raiser ಮತ್ತು ಗೋಮಟೇಶ್ವರ !
ಯಾವುದೇ ಪ್ರಮುಖ ಸಮಾರಂಭ. ಪಂದ್ಯಾವಳಿ ಉದ್ಘಾಟನೆ ಇತ್ಯಾದಿಯ ಮುನ್ನಾದಿನ ದೂರದರ್ಶನದವರು ‘ಕರ್ಟನ್‌ ರೈಸರ್‌’ ಕಾರ್ಯಕ್ರಮವನ್ನಿಟ್ಟುಕೊಳ್ಳುತ್ತಾರೆ. ಮುಂದೆ ನಡೆಯಲಿರುವ ಸಮಾರಂಭದ ಬಗ್ಗೆ ಒಂದು ಪಕ್ಷಿನೋಟದ ಕಾರ್ಯಕ್ರಮ ಅದು. ಶ್ರವಣ ಬೆಳಗೊಳ ಗೋಮಟೇಶ್ವರನ ಮಸ್ತಕಾಭಿಷೇಕದ ಹಿಂದಿನ ದಿನವೂ ಇಂಥ ಒಂದು ಕರ್ಟನ್‌ ರೈಸರ್‌ ಕಾರ್ಯಕ್ರಮವಿತ್ತು. ಆದರೆ ನೀವೇ ಹೇಳಿ, ಎಲ್ಲವನ್ನೂ ಪರಿತ್ಯಾಗ ಮಾಡಿ ದಿಗಂಬರನಾಗಿ ನಿಂತ ಗೊಮ್ಮಟನಿಗೆ ಎಲ್ಲಿಯ ಕರ್ಟೈನ್‌, ಎಲ್ಲಿಯ ಕರ್ಟೈನ್‌ ರೈಸರ್‌ ?

ಶರಶಯ್ಯೆ ಮತ್ತು ಟೂಥ್‌ಬ್ರಷ್‌ !
ಮಹಾಭಾರತ ಯುದ್ಧದಲ್ಲಿ ಭೀಷ್ಮ ಪಿತಾಮಹ ಸೋತ ನಂತರ, ಅವನು ಇಚ್ಥಾಮರಣಿಯಾದ್ದರಿಂದ ತನ್ನ ಮರಣವನ್ನು ಉತ್ತರಾಯಣ ಆರಂಭದವರೆಗೆ ಮುಂದೂಡುತ್ತಾನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಪವಡಿಸದಿರಲೆಂದು ಅರ್ಜುನನು ಬಾಣಗಳಿಂದ ನಿರ್ಮಿಸಿದ ಶಯ್ಯೆ(ಹಾಸಿಗೆ)ಯ ಮೇಲೆ ಭೀಷ್ಮ ಮಲಗುತ್ತಾನೆ. ಇದು ಪುರಾಣದ ಕತೆ. ನಾಳೆ ಬೆಳಗ್ಗೆ ನಿಮ್ಮ ಟೂಥ್‌ ಬ್ರಷ್‌ಗೆ ಪೇಸ್ಟ್‌ ಹಚ್ಚಿದ್ದು ‘ಶರಶಯ್ಯೆ’ಯ ಮೇಲೆ ಭೀಷ್ಮ ಹೇಗೆ ಪವಡಿಸಿರಬಹುದೆಂದು ಸೂಕ್ಷ್ಮ ಚಿತ್ರಣ ನಿಮಗೆ ಕೊಡುತ್ತದೆಯೋ ನೋಡಿ !

ತೀರ್ಥಂಕರ ಮತ್ತು ಬೀರ್‌ಬಲ್‌ ಯಾರು ?
ಆದಿದೇವ ವೃಷಭನಾಥನಿಂದ ಹಿಡಿದು ವರ್ಧಮಾನ ಮಹಾವೀರನವರೆಗಿನ ಇಪ್ಪತ್ತನಾಲ್ಕು ಮಂದಿ ತೀರ್ಥಂಕರರ ವಿಚಾರ ಹೊಳೆಯುತ್ತಿದ್ದಂತೆಯೇ, ಖೋಡೆ, ವಿಜಯ್‌ ಮಲ್ಯರಂತಹ ‘ಬ್ರೂವರೀಸ್‌’ ಮಾಲೀಕರನ್ನೂ ‘ತೀರ್ಥಂಕರ’ ಎಂದರೆ ತಪ್ಪಾಗಲಾರದೇನೋ ! ಇನ್ನು ‘ಬೀರ್‌’ನ್ನು ಮಾತ್ರ ಬಲ್ಲವನು (ವಿಸ್ಕಿ, ರಮ್‌, ಬ್ರಾಂಡಿ ಮುಟ್ಟದವನು)‘ಬೀರ್‌ಬಲ್ಲ’ ನಾಗುತ್ತಾನೆ. ನಿಮ್ಮ ಅಭ್ಯಂತರವೇನಾದರೂ ಇದೆಯೇ ?

ಅದೆಲ್ಲ ಸರಿ, ವೈನೋದಿಕ ಎಂದರೆ ?
ತೀರ್ಥಂಕರ, ಬೀರ್‌ಬಲ್‌ ಪ್ರಸ್ತಾಪದ ಜತೆಗೇ ಇದನ್ನೂ ಸೇರಿಸಬೇಕು. ವಿನೋದವುಳ್ಳದ್ದು ವೈನೋದಿಕವೇ ಅಥವಾ ವೈನ್‌ನಂತೆ ತಂಪಾಗಿ ಕಿಕ್‌ ಕೊಡುವಂಥದ್ದನ್ನು ವೈನೋದಿಕ ಎನ್ನಬೇಕೆ ? ( ನಾನು ಒಬ್ಬ teetotaller ಅಂದರೆ tea ಮಾತ್ರ ಕುಡಿಯುವವನು !)ಹಾಗಾಗಿ ತೀರ್ಥಂಕರರು, ಬಲ್ಲವರು, ಅಥವಾ ಬೀರ್‌ಬಲ್ಲರು ತಿಳಿಸಬೇಕು ! ಹಾಗೆಯೇ, ‘ವೈನತೇಯ’ ಅಂದರೆ ಗರುಡ. ಗರುಡನ ಗಮನ ವೈನ್‌ಷಾಪ್‌ನತ್ತ ಹೋದರೆ ಗರುಡಗಮನ ವಿಷ್ಣುವಿನ ಗತಿ ? ಆಗ ವೈನತೇಯನಿಗೆ ವೈನ್‌ಷಾಪ್‌ನ ಬದಲು ಶಾಪ ಸಿಗಬಹುದು. ಅದೇ ರೀತಿ ಇನ್ನೂ ನಾನು ಇದೇ ತರಹ ಅರ್ಥ/ಅನರ್ಥ ಎಂದು ‘ಕೊರೆ’ಯುತ್ತಿದ್ದರೆ ನಿಮ್ಮ ಗತಿ ? ಅದಕ್ಕೆಂದೇ , ಇಲ್ಲಿಗೆ ಮುಗಿಸುವ ಸದ್ಯಕ್ಕೆ. ಆಗದೇ ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X