ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೈತ್ರೋಲ್ಲಾಸ : ಸಿಲಿಕಾನ್‌ ಕಣಿವೆಗೆ ಬಂದ ವಸಂತ

By Staff
|
Google Oneindia Kannada News

*ಪ್ರಕಾಶ್‌ ನಾಯಕ್‌, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

Prakash Nayakಚಿತ್ರಭಾನು ಸಂವತ್ಸರದ ಯುಗಾದಿ ಕಾರ್ಯಕ್ರಮಗಳನ್ನು ಎದುರುನೋಡುತ್ತಿದ್ದ ಸಿಲಿಕಾನ್‌ ಕಣಿವೆಯ ಕನ್ನಡಿಗರಿಗೆ ಮೇ 4ರ ‘ಚೈತ್ರೋಲ್ಲಾಸ’ದ ಕಾರ್ಯಕ್ರಮಗಳು ಮನರಂಜನೆಯ ಮಹಾಪೂರವನ್ನೇ ಹರಿಸಿದವು. ಸಿಲಿಕಾನ್‌ ಕಣಿವೆಗೆ ವಸಂತ ಸ್ವಲ್ಪ ತಡವಾಗಿ ಬಂದರೂ ಅವನು ತಂದ ಸಂತಸ ನಿರೀಕ್ಷೆಗೂ ಮೀರಿತ್ತು.

ಕು.ಅದಿತಿ ಮತ್ತು ಕು.ದ್ಯುತಿಯವರ ಸುಶ್ರಾವ್ಯ ಪ್ರಾರ್ಥನೆಯಾಂದಿಗೆ ಚೈತ್ರೋಲ್ಲಾಸದ ಕಾರ್ಯಕ್ರಮಗಳು ಆರಂಭವಾದವು. ಸತ್ಯನಾರಾಯಣ ಹೆಬ್ಬಳಲು ಅವರ ಪಂಚಾಂಗ ಶ್ರವಣ ಕಾರ್ಯಕ್ರಮಕ್ಕೊಂದು ಸಾಂಪ್ರದಾಯಿಕ ಅರ್ಥ ಮತ್ತು ಮೆರುಗು ತಂದುಕೊಟ್ಟಿತು.

ಖ್ಯಾತ ಗಮಕ ಕಲಾವಿದೆ ವಸಂತಲಕ್ಷ್ಮಿಯವರ ಕಂಚಿನ ಕಂಠದಿಂದ ಮೂಡಿ ಬಂದ ಕುಮಾರವ್ಯಾಸ ಭಾರತದ ಉತ್ತರನ ಪೌರುಷ, ಪ್ರೇಕ್ಷಕರಲ್ಲಿ ಹಲವರಿಗೆ ಕನ್ನಡದ ಕಾವ್ಯ ಸಂಪತ್ತನ್ನು ನೆನಪಿಗೆ ತಂದರೆ ಇನ್ನು ಕೆಲವರಿಗೆ ಕುವೆಂಪು ಅವರ ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ... ’ ಹಾಡಿನ ಅರ್ಥವನ್ನು ಮನಗಾಣಿಸಿತು. ಕುಮಾರ ವ್ಯಾಸನ ಚಿತ್ರಕ ಶಕ್ತಿಗೆ ಮೆರುಗು ಕೊಟ್ಟ ವಸಂತ ಲಕ್ಷ್ಮಿಯವರ ಗಮಕ ನೈಪುಣ್ಯತೆ ಉತ್ತರನನ್ನು ಪ್ರೇಕ್ಷಕರ ಎದುರಿಗೆ ಬಗೆ ಬಗೆಯ ಬಣ್ಣಗಳಲ್ಲಿ ಚಿತ್ರಿಸಿತು. ಅಲ್ಲಿಯೇ ಕೆಲವರಿಗೆ ಮರೆಯಾಗುತ್ತಿರುವ ಗಮಕ ಕಲೆಯ ಆಳ ಮತ್ತು ಎತ್ತರವನ್ನು ನೆನಪಿಸಿತು.

ದ್ವಾಪರದಲ್ಲಿದ್ದ ಪ್ರೇಕ್ಷಕರನ್ನು ಮತ್ತೆ ಕಲಿಯುಗಕ್ಕೆ ಅದರಲ್ಲೂ ಸಿಲಿಕಾನ್‌ ಕಣಿವೆಗೆ ಕರೆದು ತಂದು, ನಗಿಸುತ್ತಲೆ ವಾಸ್ತವವನ್ನು ಪರಿಚಯಿಸಿದ ಜ್ಯೋತಿ ಶೇಖರ್‌ ಅವರ ‘ಅದಲು ಬದಲು’ ನಾಟಕ, ತನ್ನ ನೈಜ ಮತ್ತು ಚುರುಕಾದ ಸಂಭಾಷಣೆಯಿಂದ ಪ್ರೇಕ್ಷಕರನ್ನು ರಂಜಿಸಿತು. ಕನಸಿನಲ್ಲಿ ತನ್ನ ಮಡದಿಯ ಸ್ಥಾನದಲ್ಲಿ ತನ್ನನ್ನು ಚಿತ್ರಿಸಿಕೊಳ್ಳುವ ಗಂಡ, ನಿದ್ರೆಯಿಂದೆದ್ದಾಗ ತನ್ನ ದೈನಂದಿನ ಚಟುವಟಿಕೆಗಳನ್ನು ಹೆಂಡತಿಯ ಅವ್ಯಕ್ತ ಇಂಗಿತಕ್ಕನುಗುಣವಾಗಿ ಬದಲಾಯಿಸಿಕೊಳ್ಳುವುದು ನಾಟಕದ ವಸ್ತು.

ಯುಗಾದಿ ಕಾರ್ಯಕ್ರಮಗಳೆಂದರೆ ಮನಕ್ಕೆ ಕಚಗುಳಿಯಿಡುವ ಹಾಸ್ಯಭರಿತ ಮನರಂಜನಾ ಕಾರ್ಯಕ್ರಮಗಳೆನ್ನುವುದು ಸಿಲಿಕಾನ್‌ ಕಣಿವೆಯಲ್ಲಿನ ಕನ್ನಡಿಗರಲ್ಲೀಗ ಜನಜನಿತ ವಿಚಾರ. ಇದಕ್ಕೆ ಇಂಬುಕೊಡುವಂತೆ ಅಲಮೇಲು ಅಯ್ಯಂಗಾರ್‌ ನಿರ್ದೇಶಿತ ಹಾಸ್ಯ ಕವಯಿತ್ರಿ ಸಮ್ಮೇಲನ ಕಣಿವೆಯಲ್ಲಿನ ಕವಯಿತ್ರಿಯರ ಹಾಸ್ಯ ಕವನಗಳನ್ನು ಪರಿಚಯಿಸಿತು. ಮರೆಗುಳಿ ಬಡಪಾಯಿ ಗಂಡ, ತಿರುಪತಿಯ ತಿಮ್ಮಪ್ಪ, ಒಸಾಮಾ ಬಿನ್‌ ಲ್ಯಾಡೆನ್‌.. ಹಾಸ್ಯ ಕವಿತೆಗಳಿಗೆ ವಸ್ತುವಾದರು.

ಕನ್ನಡ ಕಾರ್ಯಕ್ರಮಗಳ ಜನಪ್ರಿಯತೆಯಲ್ಲಿ ಭೋಜನದ ಪಾಲು ಮಹತ್ವವಾದದ್ದು. ಪ್ರತೀ ಕಾರ್ಯಕ್ರಮದ ಯಶಸ್ಸನ್ನು ನಿರ್ಧರಿಸುವಷ್ಟು ಪ್ರಾಮುಖ್ಯತೆ ಇದಕ್ಕಿದೆ. ವಿಜಯ ಜೋಷಿಯವರು ಯೋಚಿಸಿ, ಸಂಯೋಜಿಸಿ, ನಿರ್ವಹಿಸಿದ ಈ ಸಲದ ‘ಮೋಜಿನ ಭೋಜನ’ ಸರ್ವರ ಮೆಚ್ಚುಗೆಗೆ ಪಾತ್ರವಾಗಿತ್ತು.

ಭೂರೀ ಭೋಜನದ ನಂತರ ಇಂಚರ ತಂಡದವರು ನಡೆಸಿಕೊಟ್ಟ ‘ ಹಾಸ್ಯ ಗೀತೆಗಳು’ ಮತ್ತೆ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದವು. ಇಲ್ಲಿನ ಜನರಿಗೆ ಚಿರಪರಿಚಿತ ರವೀಂದ್ರನಾಥ್‌ ದಂಪತಿಗಳು ಹಿಂದಿಯಿಂದ ಅನುವಾದಿಸಿ ಪ್ರಸ್ತುತಪಡಿಸಿದ ‘ವಸಂತ ಗೀತ’ ತನ್ನ ಸಾಹಿತ್ಯ ಮತ್ತು ಸುಮಧುರ ಸಂಗೀತದಿಂದ ಜನರ ಮನ ತಣಿಸಿತು. ಈ ಮಧ್ಯೆ ವರ್ಷದ ಸಂಪ್ರದಾಯದಂತೆ ಸಿಲಿಕಾನ್‌ ಕಣಿವೆಯಲ್ಲಿ ಕನ್ನಡ ಭಾಷೆ ಸಂಸ್ಕೃತಿಗಳಿಗಾಗಿ ದುಡಿದ ಮಹನೀಯರನ್ನು ಸನ್ಮಾನಿಸಿ ಬಿನ್ನವತ್ತಳೆಯನ್ನು ಸಲ್ಲಿಸುವ ಕಾರ್ಯಕ್ರಮದಲ್ಲಿ ಸಂಧ್ಯಾ ರವೀಂದ್ರನಾಥ್‌ ಮತ್ತು ರವಿ ರವೀಂದ್ರನಾಥರನ್ನು ಸನ್ಮಾನಿಸಲಾಯಿತು.

ಬಹು ಹೊತ್ತಿನಿಂದ ನಿರೀಕ್ಷಿಸುತ್ತಿದ್ದ ನಾಟಕ ಇನ್ನೂ ಯಾಕೆ ಪ್ರಾರಂಭವಾಗಿಲ್ಲ ಎಂದು ಯೋಚಿಸುತ್ತಿದ್ದ ಪ್ರೇಕ್ಷಕರನ್ನು ಸಭಾಂಗಣದ ಹಿಂದಿನಿಂದ ಗುಡುಗಿದ ಅಟ್ಟಹಾಸದ ನಗು ಎಚ್ಚರಿಸಿತು. ಅಮೇರಿಕಾದ ವಿವಿಧೆಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಯಮ, ಸಿಲಿಕಾನ್‌ ಕಣಿವೆಯಲ್ಲೂ ಗುಡುಗಿದ. ವಲ್ಲೀಶ ಶಾಸ್ತ್ರಿಯವರು ರಚಿಸಿ, ನಿರ್ದೇಶಿಸಿ ಮತ್ತು ಯಮನ ಪಾತ್ರದಲ್ಲಿ ನಟಿಸಿ ತಮ್ಮ ನಾಟಕ ಕಲೆಯನ್ನು ಇಲ್ಲಿನ ಜನರಿಗೂ ಪರಿಚಯಿಸಿದರು. ವೃತ್ತಿಪರ ನಾಟಕದವರನ್ನೂ ಮೀರಿಸುವಂತೆ ವೇಷಭೂಷಣ ಮತ್ತು ಮಾತುಗಾರಿಕೆಗಳನ್ನು ಪ್ರದರ್ಶಿಸಿದ ತಂಡದವರು, ಜನ ಮೆಚ್ಚುಗೆಗೆ ಪಾತ್ರರಾದುದರಲ್ಲಿ ಆಶ್ಚರ್ಯವಿಲ್ಲ. ಚಿತ್ರಗುಪ್ತನ ಪಾತ್ರದಲ್ಲಿ ಜಗನ್ನಾಥ್‌‘ಪಾಪ’ಗಳ ಲೆಕ್ಕ ಒಪ್ಪಿಸುವ ಪರಿ, ಸಿಲಿಕಾನ್‌ ಕಣಿವೆಯ ಮಹಿಳೆಯಾಗಿ ನಟಿಸಿದ ಧಾರಿಣೀ ದೀಕ್ಷಿತ್‌ ಅವರ ಅರಳು ಹುರಿದಂತ ಧಾರವಾಡದ ಗಂಡುಗನ್ನಡ, ಹೈಟೆಕ್‌ ಪೂಜಾರಿ ವಿಶ್ವೇಶ್ವರ ದೀಕ್ಷಿತರ ‘ಯಮ ಸಹಸ್ರನಾಮ’ ಎಲ್ಲವೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.

ಸಿಲಿಕಾನ್‌ ಕಣಿವೆಯ ಕನ್ನಡಿಗರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಚೈತ್ರೋಲ್ಲಾಸ’ ಕಾರ್ಯಕ್ರಮ ಎಲ್ಲರ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಕನ್ನಡ ಕೂಡದ ಅಧ್ಯಕ್ಷ ರಾಮಪ್ರಸಾದರು ಈ ವರ್ಷ ಇನ್ನೂ ಹಲವು ಅನಿರೀಕ್ಷಿತ ಮನರಂಜನಾ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಹೇಳಿದ ಮಾತು ಸಿಲಿಕಾನ್‌ ಕಣಿವೆಯ ಕನ್ನಡಿಗರನ್ನು ಚಿತ್ರಭಾನು ಸಂವತ್ಸರದಲ್ಲಿ ಮನರಂಜನೆಯ ಮಹಾಪೂರವನ್ನು ಎದುರು ನೋಡುವಂತೆ ಮಾಡಿದೆ.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X