• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹ್ಯೂಸ್ಟನ್‌ ವಿಶ್ವಕನ್ನಡ ಸಮ್ಮೇಳನದ ಸವಿ ನೆನಪುಗಳು...

By Staff
|

*ಸುಕನ್ಯಾ ರಮೇಶ, ಸ್ಯಾನ್‌ ಹೋಸೆ, ಕ್ಯಾಲಿಫೋರ್ನಿಯಾ

ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನ ಅಮೆರಿಕ ಖಂಡದ, ಟೆಕ್ಸಾಸ್‌ ರಾಜ್ಯದ, ಹ್ಯೂಸ್ಟನ್‌ ನಗರದಲ್ಲಿ ಸೆಪ್ಟಂಬರ್‌ 1,2,3- 2000 ದಂದು ನಡೆಯಿತು. ನೆರೆದ 2 ಸಾವಿರಕ್ಕೂ ಹೆಚ್ಚು ಕನ್ನಡಿಗರು, ಆಹ್ವಾನಿತ ಗೌರವ ಪೂರ್ಣ ಅತಿಥಿಗಳು, ಕವಿಗಳು, ಸಾಹಿತಿಗಳು, ನೃತ್ಯ- ಸಂಗೀತ ಪರಿಣತ ಕಲಾವಿದರು, ಜೊತೆಗೆ ಸ್ಥಳೀಯ ಕಲಾವಿದರು. ಎಲ್ಲೆಲ್ಲೂ ಸಂಭ್ರಮ, ಸಂತೋಷ, ಉತ್ಸಾಹ, ಓಡಾಟ. ಮೊದಲೆರಡು ದಿನಗಳ ಉದ್ಘಾಟನಾ ಸಮಾರಂಭ, ಎಡೆಬಿಡದೆ ನಡೆದ ಮನೋರಂಜನ ಕಾರ್ಯಕ್ರಮ, ಭಾಷಣಗಳು, ಸಾಹಿತ್ಯ ಗೋಷ್ಠಿಗಳು... ಇತ್ಯಾದಿ. ಆ ಸಮ್ಮೇಳನ ಕುರಿತ ಕೆಲವು ಸವಿ ನೆನಪುಗಳು...

 • ‘ಸ್ಮರಣ ಸಂಚಿಕೆ’, ‘ದರ್ಶನ’

‘ಅಮೆರಿಕನ್ನಡ’ ಸೃಷ್ಟಿಕರ್ತ, ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಯಾರೆಂದು ನಿಮಗೆಲ್ಲ ತಿಳಿದಿದೆ ತಾನೆ? ಇನ್ನಾರಿದ್ದಾರು- ನಮ್ಮ ನಿಮ್ಮೆಲ್ಲರ ಮೆಚ್ಚಿನ ಹರಿಹರೇಶ್ವರರಲ್ಲದೇ. ಕನ್ನಡವೇ ಉಸಿರಾಗಿರುವ ಇವರ ಇತ್ತೀಚಿನ ಬೃಹತ್‌ ಕಾರ್ಯ ವಿಶ್ವ ಕನ್ನಡ ಸಮ್ಮೇಳನದಂದು ಹೊರತಂದ ಮಹಾ ಕೃತಿಗಳೆರಡರ ಪ್ರಧಾನ ಸಂಪಾದಕೀಯದ ಹೊಣೆ.

Huston Kannada Sammelana souvenirಪ್ರಾದೇಶಿಕ ಲೇಖಕರಿಗೆ ಪ್ರಾಮುಖ್ಯತೆ ಕೊಡುವ ಉದ್ದೇಶದಿಂದ ಹೊರಬಂದದ್ದು ‘ಸ್ಮರಣ ಸಂಚಿಕೆ’. ಅವರ ಅಪಾರ ಪರಿಶ್ರಮ, ಎಡಬಿಡದ ಛಲ, ಈ ದೇಶಾದ್ಯಂತ ಹರಡಿರುವ ಲೇಖಕರ ಬೆನ್ನು ಹತ್ತಿ ಲೇಖನಗಳನ್ನು ಗಿಟ್ಟಿಸಿಗೊಂಡ ಬಗೆ ಪ್ರಶಂಸನೀಯ. ಮಾನ್ಯರು ತಮ್ಮ ಸಂಪಾದಕೀಯದಲ್ಲಿ ಹೇಳಿಕೊಂಡಂತೆ ಈ ವೈವಿಧ್ಯಪೂರ್ಣ ಗ್ರಂಥ ‘ಬಣ್ಣ ಬಣ್ಣದ ಹೂಗಳನ್ನು, ಪರಿ ಪರಿಯ ಪರಾಗಗಳನ್ನು ಹೊತ್ತ ಒಂದು ಸುಂದರ, ಸುಮಧುರ ಹೂದೋಟ.’

ಇದೇ ಸಂದರ್ಭದಲ್ಲಿ ಹೊರಬಂದ ಇನ್ನೊಂದು ಹೊತ್ತಿಗೆ ‘ದರ್ಶನ.’ ಸಂಪಾದಕರ ಮಾತಲ್ಲಿ ಹೇಳುವುದಾದರೆ ‘ಕನ್ನಡ ನಾಡು, ನುಡಿ, ಇತಿಹಾಸ, ಕಥೆ, ಸಂಗೀತ, ಕ್ರೀಡೆ, ಮೊದಲಾದ ವಿಷಯಗಳ ಬಗ್ಗೆ ಆಯಾಯ ಕ್ಷೇತ್ರದಲ್ಲಿ ಪರಿಣತರಾದ ಕನ್ನಡ ವಿದ್ವಾಂಸರುಗಳ ಅಮೂಲ್ಯ ಲೇಖನಗಳ ಒಂದು ಹೂಮಾಲೆ ‘ದರ್ಶನ.’ ಒಂದು ರೀತಿಯಲ್ಲಿ ಕನ್ನಡ ತಾಯಿಯ ಪ್ರತಿಭೆಯ ದರ್ಶನವೆನ್ನಿ. ಮೇಲಿನ ಎರಡು ಕೃತಿಗಳನ್ನು ಹೊರತರುವ ಮಹತ್ತರ ಕಾರ್ಯದಲ್ಲಿ ಹರಿಹರೇಶ್ವರರಿಗೆ ಬೆಂಬಲವಾಗಿ, ಹಗಲಿರುಳು ದುಡಿದು, ಉತ್ತೇಜನವಿತ್ತವರು ಯಾರೆನ್ನುತ್ತೀರಿ? ಅವರು, ನಮ್ಮ ಬೇ ಏರಿಯಾದ, ಕನ್ನಡವನ್ನು ತಮ್ಮಲ್ಲಿ ಅರಗಿಸಿಕೊಂಡಿರುವ, ಹರಿಹರೇಶ್ವರರ ಧರ್ಮಪತ್ನಿ, ನಾಗಲಕ್ಷ್ಮಿಯವರು. ಈ ದಂಪತಿಗಳು ಹ್ಯೂಸ್ಟನ್‌ ಸಮ್ಮೇಳನದ ಬೆನ್ನೆಲುಬಾಗಿ ಸಹಕರಿಸಿರುವುದು ಬಹಳ ಹೆಮ್ಮೆಯ ಸಂಗತಿ.

 • ಯಾರವರು?

ಸೆಪ್ಟಂಬರ್‌ 2, ಶನಿವಾರ, ಸಮ್ಮೇಳನದ ಎರಡನೆಯ ದಿನ. ನೆರೆದ 2 ಸಾವಿರ ಜನರಿಗೆ, ತಮಗಿತ್ತ 10 ನಿಮಿಷದಲ್ಲಿ, ಮನ ಮುಟ್ಟುವಂತೆ, ಸ್ವಂತ ಉದ್ಯಮದ ಬಗ್ಗೆ ಉಪಯುಕ್ತ ಸಲಹೆಗಳನ್ನಿತ್ತರು- ‘ಮನಸ್ಸು ಮಾಡಿದರೆ ಕನ್ನಡದವರು ಏನನ್ನೂ ಮಾಡಬಲ್ಲರು-’ ಸ್ವಭಾವತ ಕನ್ನಡದವರು ಸಂಕೋಚ ಪ್ರವೃತ್ತಿಯವರು’- ಎಂಬುದನ್ನು ಅಲ್ಲಗಳೆದು, ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ತಾಳಿ. ಎದ್ದೇಳಿ ಕನ್ನಡಿಗರೇ’ ಎಂದು ಕರೆ ಇತ್ತರು ಈ ನಿಗರ್ವಿ ಉದ್ಯಮಶೀಲ. ಯಾರವರು?... ಸರಿಯಾಗೆ ಹೇಳಿದಿರಿ- ಸಮರ್ಥ ವ್ಯವಸ್ಥಾಪಕ, ದಾನಿ, ಸರಳತೆಯೇ ಮೂರ್ತಿವೆತ್ತ ಬಿ.ವಿ.ಜಗದೀಶರು.

 • ಜನಪದದ ಇಂಚರ

ಹ್ಯೂಸ್ಟನ್ನಿನ ಬೇಸಿಗೆಯ ಬೇಗೆಯಲ್ಲಿ ತಂಪಾಗಿ ತೇಲಿಬಂದವು ಇಂಪಾದ ಜನಪದ ಹಾಡುಗಳು. ವೃತ್ತಿಯಲ್ಲಿ ಇಂಜಿನಿಯರ್‌ ಆಗಿರುವ ಈ ಮೂವರು ಸಂಗೀತಗಾರರು- ಇಂಚರ ತಂಡದ ರವಿ, ರಾಘವೇಂದ್ರ ಹಾಗೂ ಸುಕುಮಾರ್‌ ಅವರು. ಜನಪದದಷ್ಟೇ ಸುಲಲಿತವಾಗಿ ಭಾವಗೀತೆ, ಚಿತ್ರಗೀತೆಗಳನ್ನು ಇವರು ಹಾಡಬಲ್ಲರು.

 • ಸಂಗೀತ, ನೃತ್ಯ, ಹಾಸ್ಯಗಳ ಸಂಗಮ

A scene of Hudukataಶನಿವಾರ ಸಂಜೆ 8 ಗಂಟೆ. ಕಣ್ಣಿಗೆ ಕಾಣದನ್ನು ಹುಡುಕಿ ಹೊರಟಿತ್ತು ನಾಟಕ ‘ ಹುಡುಕಾಟ’. ನೃತ್ಯ, ಸಂಗೀತಗಳಿಂದ ಮನಸ್ಸು ತಣಿಸುತ್ತಾ, ಜನರನ್ನು ಬಡಿದೆಬ್ಬಿಸಿತು. ವಿಚಾರಕ್ಕೀಡುಮಾಡಿತು, ಅಂತೆಯೇ ನಗೆಗಡಲಲ್ಲಿ ತೇಲಾಡಿಸಿತು. ‘ಅವರವರ ಭಾವಕ್ಕೆ, ಅವರವರ ತೆರನಾಗಿ...’ ಅರ್ಥೈಸಿಕೊಂಡು ‘ಹುಡುಕಾಟ’ದ ಅಭಿಮಾನಿಗಳು ಜನಿಸಿದರು. ಮನಮುಟ್ಟುವಂತೆ ಅಭಿನಯಿಸಿದ ಬೇ ಏರಿಯಾದ ‘ಕಟ್ಟೆ ತಂಡ’ದ ಕಲಾವಿದರು - ಅಶೋಕ ಕುಮಾರ, ವಾದಿರಾಜ ಭಟ್‌, ರಾಜ ಜೋಷಿ, ಶ್ರೀನಿವಾಸ ಮೂರ್ತಿ. ನಿರ್ದೇಶನ ಅಶೋಕ ಕುಮಾರ. ಸಂಗೀತ ‘ರಾಗ ’ಕಲಾವಿದರು. ನೃತ್ಯ ಸಂಯೋಜನೆ ವೀಣ ಹಾಗು ‘ಕಟ್ಟೆ’ ಕಲಾವಿದರು.

 • ಹೈಕ್ಲಾಸ್‌ ಜಯಭೇರಿ !
  ಸೆಪ್ಟೆಂಬರ್‌ 3, ಭಾನುವಾರ, ನಾಟಕ ‘ಹೈಟೆಕ್‌ ಹಯವದನಾಚಾರ್‌’. ಅಮೆರಿಕದಲ್ಲಿನ ಕನ್ನಡಿಗರಿಗೆ ಮನಮುಟ್ಟುವಂತ ಕಥೆ. ದಿನನಿತ್ಯದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಹಾಸ್ಯಭರಿತ ಚುರುಕು ಸಂಭಾಷಣೆಯಾಂದಿಗೆ ಕಥೆ ಹೆಣೆದು ನಾಟಕವನ್ನು ಆಡಿತೋರಿಸುವ ಅಲಮೇಲು ಅಯ್ಯಂಗಾರರ ಕೈಚಳಕ ನಿಮಗೆಲ್ಲ ಪರಿಚಿತ. ಹ್ಯೂಸ್ಟನ್‌ ಜನತೆಯನ್ನು ನಗೆಗಡಲಲ್ಲಿ ತೇಲುವಂತೆ ಅಭಿನಯಿಸಿದವರು ಅಲಮೇಲು ಅಯ್ಯಂಗಾರ್‌ , ನಾರಾಯಣ ಅಯ್ಯಂಗಾರ್‌, ಬಿ.ವಿ. ಜಗದೀಶ್‌, ರತಿ ಶ್ರೀವತ್ಸ, ಸರಳ ರಾವ್‌, ಸುಧಾ ಶ್ರೀಧರ, ಶ್ರೀಧರ, ಶ್ರೀವತ್ಸ ಮೂರ್ತಿ. ರಂಗದ ಹಿಂದಿನ ಸಹಾಯ ಹರಿದಾಸರವರದು.
 • ಸಿಟ್ಟು....ಗುಟ್ಟು !

Chadmavesha in Huston Sammelanaಕಾನ್ಕರ್ಡ್‌ ವಾಸಿ, ಡಾ. ನರಸ ಭಟ್ಟರಿಂದ ಹೃದಯ ರೋಗಕ್ಕೆ ಕಾರಣಗಳಲ್ಲೊಂದಾದ ಸಿಟ್ಟಿನ ಬಗ್ಗೆ ಪಿಸುಮಾತು: ಸಿಟ್ಟು, ಹೃದಯರೋಗಕ್ಕೆ ಗುಟ್ಟು ! ಈ ಗುಟ್ಟನ್ನು ಬಹುಸರಳವಾಗಿ, ತಿಳಿ ಹೇಳಿ ರಟ್ಟು ಮಾಡಿದ ನಮ್ಮ ವೈದ್ಯ ಮಹಾಶಯರನ್ನು ಹ್ಯೂಸ್ಟನ್ನಿನ ಜನ ಬಹಳವಾಗಿ ಮೆಚ್ಚಿದರು.

 • ಔತಣ, ರಸದೌತಣ !!!

ಭಾನುವಾರ ರಾತ್ರಿ ಔತಣ ಕೂಟ ! ಸಮ್ಮೇಳನದ ಕೊನೆಯ ದಿನ ! ರುಚಿರುಚಿಯಾದ ಕನ್ನಡದೂಟ ! ಜರತಾರಿ ಸೀರೆಗಳು, ಸೂಟು ಕೋಟುಗಳು ! ರಾತ್ರಿ 8 ಗಂಟೆ. ಬಂದೇ ಬಿಟ್ಟಿತು...ತೇಲುತ್ತ..., ಉಕ್ಕುಕ್ಕಿ ಹರಿಯುತ್ತ...
ಅಶೋಕ್‌ ಕುಮಾರರ ನಿನಾದ
ಪರಿಮಳ ಮುರಳೀಧರರ ಮಂಜುಳ ನಾದ
ಶೋಭ ಪ್ರಭಾಕರರ ಸುಮಧುರ ನಾದ
ರವಿಕುಮಾರರ ಸವಿ ನಾದ
ಚಂದ್ರಿಕಾ ಶಂಕರರ ಜುಳುಜುಳು ನಾದ
ಸುನಿಲ್‌ ಶಂಕರರ ಕೀಬೋರ್ಡ್‌ ವಾದ
ವಾದಿರಾಜಭಟ್ಟರ ಡೋಲಕು ವಾದ
ಪ್ರಣವ್‌ ಜುಮಕಾವಾಲರ ಗಿಟಾರು ವಾದ...- ಔತಣ ಕೂಟಕ್ಕೆ ಕಳೆಕಟ್ಟಿತ್ತು.

ಆಯ್ದ ಚಿತ್ರಗೀತೆಗಳು ಜನರನ್ನು ಭಾವನಾ ಲೋಕಕ್ಕೆ ಕರೆದೊಯ್ದವು. ಜನಭರಿತ ಹಾಲಿನಲ್ಲಿ ರಸಭರಿತ ಸಂಗೀತ ರಾತ್ರಿ! ಜನ ಹುಚ್ಚೆದ್ದು ಕುಣಿದರು! ‘ ಒನ್ಸ್‌ ಮೋರ್‌ , ಒನ್ಸ್‌ ಮೋರ್‌ (ಇನ್ನೊಮ್ಮೆ ಹಾಡಿ, ಇನ್ನೊಮ್ಮೆ ಹಾಡಿ)’ ಎಂದು ಕೂಗಿ ಕುಣಿದಾಡಿದರು. ಕೈಗಳು ಸೋಲದೆ ಚಪ್ಪಾಳೆ ತಟ್ಟಿದವು ! ತಕ್ಕ ಹಾಡುಗಳ ಆಯ್ಕೆ, ಸಮಯ ಸಂಯೋಜನೆ, ತನ್ಮಯತೆ ಎದ್ದು ಕಾಣುತ್ತಿದ್ದವು ನಮ್ಮ ಹಾಡುಗಾರರಲ್ಲಿ !

Shobhayatre in Huston Vishwa Kannada Sammelana‘ನೀರ ಬಿಟ್ಟು... ’, ‘ ದೂರದಿಂದ ಬಂದಂತ..’ ‘ ನಾನೂ ನೀನು ಒಂದಾದ ಮೇಲೆ...’ ‘ ನಾನು ಬಳ್ಳಿಯ ಮಿಂಚು...’ ಇತ್ಯಾದಿ. ‘ ಆರಾಧಿಸುವೆ ಮದನಾರಿ...’ ವಾಹ್ಹ್‌ ! ಜನ ‘ ರಾಗ’ ತಂಡದವರನ್ನು ಆರಾಧಿಸತೊಡಗಿದರು ಎಂದರೆ ಅತಿಶಯೋಕ್ತಿ ಆಗಲಾರದು. ಸಮಯ ಸರಿದದ್ದು ತಿಳಿಯಲಿಲ್ಲ. ‘ ಮುಂದಿನ ಹಾಡು ನಮ್ಮ ಕೊನೆಯ ಹಾಡು’, ಎಂದು ನಿರ್ದೇಶಕ ವಾದಿರಾಜರು ಎಂದಾಗ ನಡೆದ ಗದ್ದಲ ನೋಡಬೇಕು! ತಮಗಿರುವುದು ಒಂದೇ ಗಂಟೆಯ ಅವಕಾಶ ಎಂದು ತಿಳಿದಿದ್ದ ‘ರಾಗ ’ ತಂಡದವರಿಗೆ ಜನರ ಉತ್ಸಾಹಕ್ಕೆ ತಣ್ಣೀರೆರಚಲು ಆದ ಕಷ್ಟ ಅಷ್ಟಿಷ್ಟಲ್ಲ !

 • ವಿಶ್ವ ಕನ್ನಡ ಸಮ್ಮೇಳನದಲ್ಲಿ ಬೇ ಏರಿಯಾ ಹೀಗೆ ಮಿಂಚಿತ್ತು- ಜಗಜಗನೆ, ಫಳಫಳನೆ! ‘ ರಾಗ’ದ ನಶೆಯಲ್ಲಿ ಮೀಯುತ್ತಿದ್ದ ಹಲವು ಕೊರಳುಗಳೆಂದವು : ‘ಬೇ ಏರಿಯಾದ ನಿಮಗೆ ಹೊರಗಿನ ಕಲಾವಿದರನ್ನು ತರುವ ಅವಶ್ಯಕತೆಯಿಲ್ಲ, ನಿಮ್ಮಲ್ಲೇ ಸಾಕಷ್ಟು ಪ್ರತಿಭೆ ಇರಬೇಕಾದರೆ’ ! ಹತ್ತಿರದಲ್ಲೇ ಇದ್ದ ನಮಗೆ ಗರ್ವದಿಂದ ಬೀಗದೇ, ನಮ್ರತೆಯಿಂದ ‘ಹಾಗೇನಿಲ್ಲಪ್ಪ ’ ಎನ್ನಲು ಸಖತ್ತು ಕಷ್ಟವಾಯ್ತು !
 • ಹ್ಯೂಸ್ಟನ್ನು ಮೈಸೂರಾದ ಬಗೆ ಕೇಳುತ್ತೀರಾ?

ಮೊದಲೇ ಹೇಳಿದಂತೆ, ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನ ನಡೆದದ್ದು ಅಮೇರಿಕ ಖಂಡದ, ಟೆಕ್ಸಾಸ್‌ ರಾಜ್ಯದ, ಹ್ಯೂಸ್ಟನ್‌ ನಗರದಲ್ಲಿ , ಸೆಪ್ಟೆಂಬರ್‌ 1, 2, 3, 2000ದ ಇಸವಿಯಲ್ಲಿ. ನೆರೆದ 2000 ಜನ ಕನ್ನಡಿಗರು, ಆಹ್ವಾನಿತ ಗೌರವ ಪೂರ್ಣ ಅತಿಥಿಗಳು, ಕವಿಗಳು, ಸಾಹಿತಿಗಳು, ನೃತ್ಯ-ಸಂಗೀತ ಪರಿಣತ ಕಲಾವಿದರು, ಜೊತೆಗೆ ಸ್ಥಳೀಯ ಕಲಾವಿದರು. ಎಲ್ಲೆಲ್ಲೂ ಸಂಭ್ರಮ, ಸಂತೋಷ, ಉತ್ಸಾಹ, ಓಡಾಟ. ಮೊದಲೆರಡು ದಿನಗಳ ಉದ್ಘಾಟನಾ ಸಮಾರಂಭ, ಎಡೆಬಿಡದೆ ನಡೆದ ಮನೋರಂಜನ ಕಾರ್ಯಕ್ರಮ, ಭಾಷಣಗಳು, ಗೋಷ್ಠಿಗಳು....ಇತ್ಯಾದಿ. ಸುಸ್ತಾದ ತನು ಮನಗಳಿಗೆ ಧ್ವನಿವರ್ಧಕದ ಮೂಲಕ ಆಗಾಗ್ಗೆ ಕೇಳಿ ಬಂದ ಕರೆ : ‘‘ನಾಳೆ ಬೆಳಿಗ್ಗೆ, ಸೆಪ್ಟೆಂಬರ್‌ 3ರಂದು, 8.45ಕ್ಕೆ ಸರಿಯಾಗಿ ದಸರಾ ಮೆರವಣಿಗೆ. ತಪ್ಪದೆ ಬನ್ನಿ’’.

 • ದಸರಾ ಮೆರವಣಿಗೆ

ಎರಡು ದಿನಗಳಿಂದ ಕಾರ್ಯಕಾರಿ ಸಮಿತಿಗಳ ಸಮಯನಿಷ್ಠತೆಯಿಂದ ಪ್ರಭಾವಿತರಾದ ನಮಗೆ ‘‘8.45ಕ್ಕೆ ಸರಿಯಾಗಿ’’ ಎನ್ನುವುದರ ಚುರುಕು ಮುಟ್ಟಿತ್ತು. ಅಂದರೆ, ಮಲಗುವಾಗ ನಡುರಾತ್ರಿ ಮೀರಿದರೂ ಬೆಳಗ್ಗೆ ಬೇಗ ಏಳಬೇಕಲ್ಲವೆ?- ಲೆಕ್ಕ ಹಾಕಿತು ಮನಸ್ಸು. ಸಾವಿರ ಸಾವಿರ ಮೈಲಿಗಳಾಚೆ, ಆನೆ ಅಂಬಾರಿಗಳಿಲ್ಲದೆ, ಸೀಮಿತ ಸಂಪನ್ಮೂಲಗಳಿಂದ ಅದೇನು ಮೆರವಣಿಗೆ ನಡೆಸಿಯಾರು, ಅದೂ ದಸರಾ ಮೆರವಣಿಗೆ- ಎನ್ನುತ್ತಾ, ಕಣ್ಣು ಉಜ್ಜಿಕೊಳ್ಳುತ್ತಾ, ಕಾಲೆಳೆದುಕೊಂಡು ಬಂದ ನಮಗೆ ಕಾದಿತ್ತು ನೋಡಿ:

ಲಾಠಿ ಹಿಡಿದ ಚಡ್ಡಿ ಪೊಲೀಸರು
ಸಮವಸ್ತ್ರ ಧರಿಸಿದ ಎನ್‌.ಸಿ.ಸಿ
ಕಸರತ್ತಿಗೆ ಕರೆವ ಜಟ್ಟಿ
ದಾರಿಯುದ್ದಕ್ಕೂ ನೃತ್ಯ ಸಂಗೀತ
ಅದೋ ಬಂದೇ ಬಿಟ್ಟರು ಮೈಸೂರ ಅರಸರು
ಅವರೇ ನಮ್ಮ ಜಯಚಾಮರಾಜ ಒಡೆಯರು
ಬಣ್ಣ ಬಣ್ಣದ ಪತಾಕೆ, ಬಾವುಟ
ಚಿನಕುರಳಿಗಳಿಂದ ಲಯಬದ್ಧ ಕೋಲಾಟ
‘‘ಎಲ್ರೀ ಜಂಬೂಸವಾರಿ’’ ಎನ್ನುತ್ತಿದ್ದ ಹಾಗೆ......
ಆನೆ ಬಂತೊಂದು ಆನೆ, ಹ್ಯೂಸ್ಟನ್ನಿನ ಆನೆ, ಕನ್ನಡದಾನೆ
ನಿಜವಾಗ್ಲೂ ಬಂತು ರೀ ಆನೆ
ಬೂದು ಬಣ್ಣದ ಆನೆ, ಅಂಬಾರಿ ಒಳಗೊಂಡ ಆನೆ,
ಸರಪಳಿಗಳಿಂದ ಎಳಸಿಕೊಂಡಾನೆ
ಆಗಾಗ ಎತ್ತಲು ಆನೆಯ ಲದ್ದಿ
ಹಿಂದೆಯೇ ಇದ್ದ ಸಮವಸ್ತ್ರ ಸಿಬ್ಬಂದಿ
ಹೂವು ಸುಗಂಧಗಳನ್ನು ಹೊತ್ತ ಸುಮಂಗಲೆಯರು
ಹಿಂದೆಯೇ ಬಂದರು ರಾಜ ಪುರೋಹಿತರು
ವೇದಘೋಷ, ಮಂತ್ರ ಪಠನ
ಮೈ ಎಲ್ಲಾ ರೋಮಾಂಚನ
ರಾಜ ನರ್ತಕಿಯರು, ಆಸ್ಥಾನ ಪಂಡಿತರು
ಅನಂತಮೂರ್ತಿಗಳು, ಗಿರೀಶ ಕಾರ್ನಾಡರು
ಕವಿ ಲಕ್ಷ್ಮೀನಾರಾಯಣ ಭಟ್ಟರು
ಸಾಹಿತಿ, ಕವಿಗಳೆಲ್ಲರ ಕೂಗು ಒಂದೇ
‘‘ಕನ್ನಡವ ಉಳಿಸಿ, ಅಳಿಸದಿರಿ’’ ಎಂದೇ
ಎಡಬಿಡದೆ ಒತ್ತೊತ್ತಿ ಹೇಳಿದರು ನೋಡಿ:
‘‘ಹುಮ್ಮಸ್ಸು, ಉತ್ಸಾಹ ಅಲ್ಲವೇ ಕನ್ನಡಿಗರ ಜೀವನಾಡಿ
ಗಡಿದಾಟಿ ಬಂದರೂ ಅದನೆಂದೂ ಬಿಡಬೇಡಿ’’
ವಿವರ ವಿವರಗಳಿಗಿತ್ತ ಅಟೆನ್ಷನ್ನು
ಮಿಡಿಯಿತೆಲ್ಲರ ಎಮೋಷನ್ನು
ಜೇಬು, ವ್ಯಾನಿಟಿಯಿಂದ ಕರವಸ್ತ್ರಗಳಿಣಿಕಿದವು
ಕನ್ನಡಮ್ಮನ ನೋಡಲು ಹಾತೊರೆದವು ಕಣ್ಣುಗಳು
‘‘ಏನಿದು ಈ ರೀತಿ ಡೀಟೈಲಿಗೆ ಅಟೆನ್ಷನ್ನು’’
ಮೆಚ್ಚುಗೆಯ ಸಾರಿದವು (ನಾಲ್ಕು) ಸಾವಿರ ಕಣ್ಣು
ದಸರಾ ಮೆರವಣಿಗೆಯ ಪೋಲಿಸಪ್ಪನಿಗೆ:
‘‘ಇದಿಗೋ ಕೊಡುವೆವು ನೀ ಕೇಳಿದ ಲಂಚ
ನಮಗಾಗಿ ದಾರಿಬಿಡು ಇದೀಗ ಕೊಂಚ’’


ಅದಕ್ಕೆ ಆತನೆಂದ:
‘‘ಕೊಡಿ ಮೊದಲು ನಿಮ್ಮ ಕ್ರೆಡಿಟ್ಟು ಕಾರ್ಡು ನಂಬರು
ಅನಂತರ ನಾವು ಏನು ಮಾಡಲೂ ತಯಾರು’’
ಖಾಕಿ ಸಮವಸ್ತ್ರದೊಡೆ ಸಮಯಸ್ಫೂರ್ತಿಯೂ ಸೇರಿ
ಕರೆದೊಯ್ತು ಮೈಸೂರ ನನಪಿನಂಗಳಕೆ ಹಾರಿ
ಹ್ಯೂಸ್ಟನ್ನಿನ ಜಕಣಾಚಾರಿಗಳೇ, ಕೇಳಿರಿ ಕಿವಿತುಂಬ!
ನೋಡಿದೆವು ನಿಮ್ಮ ಕೈಚಳಕ ಕಣ್ತುಂಬ!
ನೀವ್‌ ಕಡೆದಿಟ್ಟ ಶಿಲ್ಪಗಳ ಬಿಂಬ!
ಕಂಡೆವು ನಾವಲ್ಲಿ ಮೈಸೂರ ಪ್ರತಿಬಿಂಬ!Post your Views

ವಾರ್ತಾ ಸಂಚಯ

ವಿಶ್ವ ಸಹಸ್ರಮಾನ ಕನ್ನಡ ಸಮ್ಮೇಳನ -2000

ಮಿಡಿವ ಹೃದಯಗಳ ‘ಸಂಗೀತ ಸಂಧ್ಯಾ’
ಹರಿಹರೇಶ್ವರ: ಕನ್ನಡಕ್ಕಾಗಿ ಕೈ ಎತ್ತಿದವರು, ತಾವೇ ಕಲ್ಪವೃಕ್ಷವಾದವರು

‘ನಾಟಕ ಕಲಾವತಂಸ’ ಪ್ರಶಸ್ತಿ ಪುರಸ್ಕೃತರಾಗುವ ಅಲಮೇಲು ಐಯಂಗಾರ್‌

ಹ್ಯೂಸ್ಟನ್‌ನಲ್ಲಿ ‘ ದರ್ಶನ ’, ಡೆಟ್ರಾಯಿಟ್‌ನಲ್ಲಿ ‘ಸ್ಪಂದನ’ ಸ್ವಾಗತಕ್ಕೆ ‘ ಚಂದನ ’

ಕನ್ನಡದ ತೇರು ಬರುತ್ತಿದೆ ದಾರಿಬಿಡಿ....

ಏಕ ಛತ್ರಿಯಡಿ ಕನ್ನಡ, ಕನ್ನಡಿಗ - ಅಕ್ಕನ ಕಣ್ಣಲ್ಲಿ ಕಾಮನಬಿಲ್ಲು

ಆಸೆಗಳು ಬಾನಗಲ,ಬೊಕ್ಕಸ ಬೊಗಸೆಯಗಲ: ಇದು ಕನ್ನಡ ಮತ್ತು ಸಂಸ್ಕೃತಿ !

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more