• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದ ನೆಲದಲ್ಲಿ ನಾನು ಯಕ್ಷಗಾನ ಆಡಿಸಿದೆ...

By Staff
|

*ಮಹದೇವ ಭಟ್‌, ಮಿಯಾಮಿ, ಫ್ಲೋರಿಡಾ

Yakhagana- Coastal Karnataka art formಮಕ್ಕಳಿಂದ ಮೋಹಿನಿ ಭಸ್ಮಾಸುರ ಯಕ್ಷಗಾನ ಬಯಲಾಟ ಆಡಿಸಬೇಕು ಎಂಬ ಆಲೋಚನೆಯನ್ನು ಸ್ನೇಹಿತರ ಮುಂದಿಟ್ಟಾಗ ಅವರೆಲ್ಲ ‘ಜೋಕ್‌ ಆಫ್‌ ದ ಡೇ’ ಎಂದು ನಕ್ಕು ಬಿಟ್ಟರು. ದಕ್ಷಿಣ ಫ್ಲೋರಿಡಾದ ‘ಶ್ರೀಗಂಧ ಕನ್ನಡ ಕೂಟ’ ಏಪ್ರಿಲ್‌ 13ರಂದು ಯುಗಾದಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆ ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶಿಸಬೇಕು ಅನ್ನುವುದು ನನ್ನ ಆಸೆ. ಇದಾಗಲಿಕ್ಕಿಲ್ಲ ಎಂದು ಸ್ನೇಹಿತರು ಹೇಳಿದರೂ ನಾನು ಹಠ ಬಿಡಲಿಲ್ಲ. ಮಾತುಗಾರ ಮಕ್ಕಳನ್ನು ಹುಡುಕಿ ಯಕ್ಷಗಾನ ತರಬೇತಿಗೊಳಿಸುವ ಕಾರ್ಯಕ್ಕೆ ಟೊಂಕ ಕಟ್ಟಿ ನಿಂತೆ.

ಈ ಫ್ಲೋರಿಡಾದಲ್ಲಿ ಹಿನ್ನೆಲೆ, ಸಂಗೀತ, ಯಕ್ಷಗಾನದ ವೇಷ ಭೂಷಣಗಳನ್ನು ಹೊಂದಿಸುವುದು ನೀರು ಕುಡಿದಷ್ಟು ಸುಲಭವೇನಲ್ಲ. ಆಯ್ಕೆ ಮಾಡಿಕೊಂಡ ಪ್ರಸಂಗದಲ್ಲಿ ಮೋಹಿನಿ ಮತ್ತು ಭಸ್ಮಾಸುರರ ನೃತ್ಯವೇ ಪ್ರಮುಖ ರಸಘಟ್ಟ. ಜೊತೆಗೆ ಶಿವಪಾರ್ವತಿ ಪಾತ್ರಧಾರಿಗಳಿಗೂ ನೃತ್ಯ ಹೇಳಿಕೊಡಬೇಕು.

ಛಲವೆ ನಮ್ಮ ಕುಲ!

ಕರ್ನಾಟಕದಲ್ಲಿರುವ ನನ್ನ ಸಹೋದರನಿಗೆ ಫೋನ್‌ ಹೊಡೆದು ಸ್ವಲ್ಪ ಸಹಾಯ ಮಾಡು ಮಾರಾಯ ಎಂದೆ. ನನ್ನ ಯಕ್ಷಗಾನ ತರಬೇತಿಯ ಹುಮ್ಮಸ್ಸು ಅವನಿಗೂ ತಮಾಷೆಯೆನಿಸಿತ್ತು. ‘ಇದೆಲ್ಲಾ ಆಗಲಿಕ್ಕುಂಟಾ...ನಿಂಗೆಲ್ಲೋ ಹುಚ್ಚು’ ಅಂತ ಅವನೂ ನಕ್ಕುಬಿಟ್ಟ. ಮತ್ತೆ ನನ್ನ ಒಂಟಿಯತ್ನ ಮುಂದುವರೆಯಿತು. ಯಕ್ಷಗಾನ.ಕಾಮ್‌ನಲ್ಲಿ ವೇಷಭೂಷಣದ ಬಗ್ಗೆ ಏನಾದರೂ ಮಾಹಿತಿ ಸಿಗಬಹುದಾ ಅಂತ ಹುಡುಕಿದೆ. ಆದರೆ ಅಲ್ಲಿರುವ ಮಾಹಿತಿ ನನ್ನ ಪ್ರಯೋಗಕ್ಕೆ ಪೂರಕವಾಗಿರಲಿಲ್ಲ. ನನ್ನ ಛಲ ಬಲವಾಗಿತ್ತು. ಮೂರು ಗಂಟೆಗಳ ಕಾಲ ಜವಳಿ ಅಂಗಡಿಯಾಂದರಲ್ಲಿ ನನ್ನ ರಿಸರ್ಚ್‌ ಮುಂದುವರೆಸಿದೆ. ವೇಷಭೂಷಣಕ್ಕೆ ಮೂಲ ತಯಾರಿ ಮುಗಿಯಿತು.

ಕರಾವಳಿಯಲ್ಲಾದರೆ ಯಕ್ಷಗಾನ ಕಲಾವಿದರು ಸಂಭಾಷಣೆಯನ್ನು ರಂಗಸ್ಥಳದಲ್ಲಿಯೇ ಸೃಷ್ಟಿಸುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಮಕ್ಕಳು ಕನ್ನಡವನ್ನೇ ನಿರರ್ಗಳವಾಗಿ ಮಾತನಾಡುವುದು ಕಷ್ಟ. ಎಂದ ಮೇಲೆ ಯಕ್ಷಗಾನಕ್ಕೆ ಸ್ಕಿೃಪ್ಟ್‌ ಬರೆಯುವುದು ಅನಿವಾರ್ಯ. ದಿನವಿಡೀ ಕುಳಿತು ಮಕ್ಕಳ ಬಯಲಾಟಕ್ಕೆ ಸಂಭಾಷಣೆ ಬರೆದು ರೆಡಿ ಮಾಡಿದೆ.

ಭೂಷಣ...ಕಿರೀಟಗಳ ನೋಡಿ ಖುಷಿಗೊಂಡ ಮಕ್ಕಳು

ಸದ್ಯ. ಮಕ್ಕಳಿಗೆ ವಸಂತದ ರಜೆಯಿತ್ತು. ಯಕ್ಷಗಾನ ಅಭ್ಯಾಸ ಮಾಡಲು ಇದು ಅನುಕೂಲವಾಯಿತು. 45 ನಿಮಿಷಗಳ ಈ ಆಟಕ್ಕೆ ಅಭ್ಯಾಸ ಕಾರ್ಯ ಶುರುವಾಯಿತು. ಅಭ್ಯಾಸವೆಂದರೆ ಸುಲಭವೇ...? ಪ್ರಸಂಗ ಪೂರ್ವ ಭಾಗದಲ್ಲಿ ಬರುವ ಬಾಲಗೋಪಾಲ ವೇಷ ದಿಂದ ಹಿಡಿದು ಮಂಗಳ ಪದ್ಯದವರೆಗೆ ಛಲ ಬಿಡದೆ ಅಭ್ಯಾಸ ಶುರುಮಾಡಿದೆವು. ಬಾಲಗೋಪಾಲ ವೇಷದ ತ ದಿನ್ನ ..ತಕ ದಿನ್ನ ಹೆಜ್ಜೆಗಳಿಂದ ಹಿಡಿದು ಮೋಹಿನಿ ನೃತ್ಯದ ತ ತ್ತೋನ್ನ ಧಿಗು ತಕ ತೈಯ್ಯ ತೈಯ್ಯ ಕಿಟ ತಕ... ಎನ್ನುವ ಕ್ಲಿಷ್ಟ ಹೆಜ್ಜೆಗಳವರೆಗೆ ಈ ಅಭ್ಯಾಸ ಕಾರ್ಯ ಒಂದು ಸವಾಲೇ ಸರಿ.

ಆರಂಭದಲ್ಲಿ ಮಕ್ಕಳಿಗೆ ಅಂತಹ ಉತ್ಸಾಹವೇನೂ ಇರಲಿಲ್ಲ . ಈ ನಡುವೆ ನಾನು ಬಾಲಗೋಪಾಲ ವೇಷಕ್ಕೆ ಬೇಕಾದ ಭೂಷಣಗಳನ್ನು ತಯಾರಿಸಿದೆ. ಈ ಭೂಷಣ ಮತ್ತು ಕಿರೀಟಗಳನ್ನು ನೋಡಿ ಮಕ್ಕಳು ಖುಷಿಗೊಂಡರು. ನಾನು ಇಡೀ ಪ್ರಸಂಗವನ್ನು ರೆಕಾರ್ಡ್‌ ಮಾಡಿ ಕ್ಯಾಸೆಟ್‌ನ್ನು ಮಕ್ಕಳ ಕೈಗಿತ್ತೆ. ಅವರು ಸಂಭಾಷಣೆಯನ್ನು ಬಾಯಿಪಾಠ ಮಾಡಿದರು. ಯಕ್ಷಗಾನ ಎಂಬ ಪದವೇ ಈ ಮಕ್ಕಳಿಗೆ ಹೊಸದು. ಆದರೆ ಹತ್ತೇ ದಿನಗಳ ಅವಧಿಯಲ್ಲಿ ಅವರು ಭಸ್ಮಾಸುರ ಮೋಹಿನಿ ಪ್ರಸಂಗಕ್ಕೆ ರೆಡಿಯಾಗಿರುವುದು ನೋಡಿ ನಾನೇ ಅವಾಕ್ಕಾದೆ. ಜಾಣ ಮಕ್ಕಳು. ನಿಜ ಹೇಳಬೇಕೆಂದರೆ ಅವರ ನಿರರ್ಗಳ ಮಾತುಗಾರಿಕೆಯೇ ಯಕ್ಷಗಾನವನ್ನು ಯಶಸ್ವಿಯಾಗಿಸಿದ್ದು.

ನನ್ನ ಮಗಳಿಗೆ ಭರತ ನಾಟ್ಯ ಗೊತ್ತಿದೆ. ಇದರಿಂದ ಮೋಹಿನಿ ನೃತ್ಯವನ್ನು ಅವಳು ಸಲೀಸಾಗಿ ಮಾಡುವುದು ಸುಲಭವಾಯಿತು. ಪ್ರಸಿದ್ಧ ಭಾಗವತರಾದ ದಿ।ಕಾಳಿಂಗ ನಾವಡರ ‘ನವಿಲು ಕುಣಿಯುತಿದೆ...’ ಮತ್ತು ದಿ। ಉಪ್ಪೂರು ನಾರಾಯಣ ಭಾಗವತರ ‘ ಬಂದಳಾಗ ಮೋಹಿನಿ...’ ಹಾಡಿನ ಮೂಲಕ ಪ್ರೇಕ್ಷಕರ ಗಮನವನ್ನು ಮೋಹಿನಿ ತನ್ನ ಹೆಜ್ಜೆಗಳಲ್ಲಿ ಬಿಗಿದಿಟ್ಟಿದ್ದಳು.

ಈ ಖುಷಿಗೆ ಯಾವ ಬಹುಮಾನ ಸಾಟಿ ?

ವೇಷ ಭೂಷಣ ತಯಾರಿಕೆಯ ಕಾರ್ಯ ಏಪ್ರಿಲ್‌ 13ರ ದಿನ ಬೆಳಗಿನಷ್ಟೊತ್ತಿಗೆ ಮುಗಿದಿತ್ತು. ಹಿಂದೆ ನಮ್ಮೂರಿನಲ್ಲಿದ್ದಾಗ ನಂಗೂ ಯಕ್ಷಗಾನದ ಗೀಳಿತ್ತು. ಆ ನೆನಪುಗಳೊಂದಿಗೆ, ನಾನು ಈ ಪ್ರಸಂಗದ ಹಾಡುಗಳಿಗೆ ನೃತ್ಯವನ್ನು ಹೇಳಿಕೊಟ್ಟೆ. ಮೇಕಪ್‌ಗೆ ಸುಮಾರು ಮೂರುವರೆ ಗಂಟೆ ತಗುಲಿತು. ಅಂತೂ ಇಂತೂ ಶಿವಪಾರ್ವತಿ ಒಡ್ಡೋಲಗದೊಂದಿಗೆ ಆರಂಭವಾದ ಪ್ರಸಂಗ 45 ನಿಮಿಷಗಳ ಕಾಲ ಚೆಂದಾಗಿ ನಡೆಯಿತು. ನನಗೆ ನೆಮ್ಮದಿ. ಪ್ರೇಕ್ಷಕರದು ದಂಗಾಗುವ ಸರದಿ.

ಸುಮಾರು 150 ಮಂದಿ ಪ್ರೇಕ್ಷಕರು ಪೂರ್ತಿ ಯಕ್ಷಗಾನವನ್ನು ಆಸಕ್ತಿಯಿಂದ ವೀಕ್ಷಿಸಿ ಪ್ರೋತ್ಸಾಹಿಸಿದರು. ನೃತ್ಯ, ಸಂಭಾಷಣೆ ಮತ್ತು ಮಾತುಗಾರಿಕೆಯಿಂದ ಮಕ್ಕಳು ಪ್ರೇಕ್ಷಕರ ಮನ ಗೆದ್ದಿದ್ದರು. ಶಿವ ಮತ್ತು ಭಸ್ಮಾಸುರನ ಸಂಭಾಷಣೆ ಹಾಗೂ, ವಿದೂಷಕನ ಮಾತುಗಾರಿಕೆ, ಮೋಹಿನಿ ಭಸ್ಮಾಸುರನ ವಿನೋದ ಸಂಭಾಷಣೆಗಳನ್ನು ಕೇಳಿದ ವೀಕ್ಷಕರು ಮನಸಾರೆ ನಕ್ಕರು. ನಮಗಿನ್ನೇನು ಬೇಕು?

ಛಲದ ಬೆನ್ನೇರಿ ನಡೆಸಿದ ನನ್ನ ಪ್ರಯತ್ನ ಯಶಸ್ವಿಯಾದಾಗ ನನಗಾದ ಖುಷಿಯನ್ನು ಹೇಗೆ ಹೇಳಿ ಕೊಳ್ಳಲಿ. ಆ ಯಶಸ್ಸಿನಷ್ಟು ದೊಡ್ಡ ಬಹುಮಾನ ಇನ್ನಾವುದಿದೆ ? ಮಾತಿಗೆ ಮೀರಿದ ಆ ಸಂತೋಷದಲ್ಲಿ ನೆನಪಾದದ್ದು ಅಪ್ಪ. ನನಗೆ ಚಿಕ್ಕಂದಿನಲ್ಲಿ ಯಕ್ಷಗಾನ ತಾಳಮದ್ದಳೆ ಹೇಳಿಕೊಟ್ಟದ್ದು ಅಪ್ಪನೇ. ನಾನು ಕಾಲೇಜಿಗೆ ಹೋಗುವಾಗ ಈ ಯಕ್ಷಗಾನದ ಗೀಳು ಬಿಟ್ಟುಬಿಡಬೇಕಾಯಿತು. ಮತ್ತೆ 25 ವರ್ಷಗಳ ನಂತರ ಈ ದೂರದ ಅಮೆರಿಕಾದಲ್ಲಿ ನನ್ನ ನೆನಪುಗಳನ್ನು ಹೆಣೆದು ಮಕ್ಕಳ ಯಕ್ಷಗಾನವನ್ನು ಪ್ರೇಕ್ಷಕರ ಮುಂದಿಡುವುದು ಸಾಧ್ಯವಾಗಿದೆ. ಯಕ್ಷಗಾನ ಪ್ರದರ್ಶನ ನೀಡುವ ಕನಸು ನಿಜವಾಗಿದೆ! ಸಾರ್ಥಕ ಕ್ಷಣಗಳನ್ನು ನನ್ನ ಬದುಕಿನ ಬುತ್ತಿಯಲ್ಲಿ ಕಲಸಿ ಇಟ್ಟಿದೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more