ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಜಿತ ರೇ ಮತ್ತು ಪಥೇರ್‌ ಪಾಂಚಾಲಿ- ಭಾಗ 2

By Staff
|
Google Oneindia Kannada News

sarbojaya, durga, hariharಹಡಗಿನಲ್ಲಿ ಮೊಳೆತು ಜನ ಮನದಲ್ಲಿ ಅರಳಿದ ಪಥೇರ್‌ ಪಾಂಚಾಲಿ

ಪಥೇರ್‌ ಪಾಂಚಾಲಿ ನಿರ್ಮಾಣದ ಹಂತದಿಂದಲೂ ಅನೇಕ ಕುತೂಹಲಭರಿತ ಸಂಗತಿಗಳಿಂದ ಕೂಡಿದೆ. ರೇ ಇದಕ್ಕೆ ಚಿತ್ರಕತೆ ಬರೆದದ್ದು ಲಂಡನ್ನಿನಿಂದ ವಾಪಸ್ಸು ಬರುತ್ತಾ ಹಡಗಿನಲ್ಲಿ. ತನ್ನ ಕೆಲಸದ ನಿಮಿತ್ತ ಕೈಗೊಂಡಿದ್ದ ಲಂಡನ್ನಿನ ಪ್ರವಾಸ ರೇ ಅವರ ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆಯಿತು. ಅಲ್ಲಿದ್ದ ಆರು ತಿಂಗಳಲ್ಲಿ ರೇ ನೂರಾರು ಚಿತ್ರಗಳನ್ನು ನೋಡಿದರು. ಒಂದು ರೀತಿಯಲ್ಲಿ ಇದು ರೇಯನ್ನು ಹಾಲಿವುಡ್‌ಗೆ ಪರಿಚಯಿಸಿತು. ಅದರಲ್ಲೂ ‘ಬೈಸಿಕಲ್‌ ಥೀವ್ಸ್‌’ನಂಥ ಚಿತ್ರ ರೇ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿ, ಅವರ ಭವಿಷ್ಯದ ರೂಪುರೇಷೆಗಳನ್ನು ನಿರ್ಮಿಸಿತು. ಮುಂದೆ ರೇ ಬರೆದ ‘Our films, Their films ’ ಪುಸ್ತಕಕ್ಕೆ ಅವರ ಲಂಡನ್‌ನ ಅನುಭವವೂ ಕಾರಣ.

ಚಿತ್ರ ನಿರ್ಮಾಣದ ಅನುಭವವೇ ಇಲ್ಲದ ರೇ ಅವರ ಮೇಲೆ ಹಣವನ್ನು ಹೂಡಲು ಯಾವ ನಿರ್ಮಾಪಕರೂ ತಯಾರಿರಲಿಲ್ಲ. ಆಗ ಪಶ್ಚಿಮ ಬಂಗಾಲದ ಸರಕಾರ ಅವರ ಸಹಕಾರಕ್ಕೆ ಬಂದು ಬಂಡವಾಳವನ್ನು ಹೂಡಿತು. ಒಂದು ಸರಕಾರ ಕಲಾತ್ಮಕ ಚಿತ್ರ ಒಂದಕ್ಕೆ ಬಂಡವಾಳ ಹೂಡುವುದೆಂದರೆ ‘ಪಂಥೇರ್‌ ಪಾಂಚಾಲಿ’ ನಿರ್ಮಾಣವಾದ ಐವತ್ತು ವರ್ಷಗಳ ನಂತರವೂ ನಂಬಲು ಕಷ್ಟಸಾಧ್ಯವಾದ ವಿಚಾರ.

ಅವರವರ ಭಾವಕ್ಕೆ ಪಥೇರ್‌ ಪಾಂಚಾಲಿ...

ಪಥೇರ್‌ ಪಾಂಚಾಲಿಯಲ್ಲಿ ಮಾನವೀಯ ಮೌಲ್ಯಗಳ ಸೂಕ್ಷ್ಮ ತಂತುಗಳಿವೆ. ಕಿತ್ತು ತಿನ್ನುವ ಬಡತನವಿದೆ. ಮಗಳು ಸಾಯುವಾಗ ಅಸಹಾಯಕಳಾಗಿ ಅವಳನ್ನು ತಬ್ಬಿ ಮಲಗುವ ತಾಯಿ ಇದ್ದಾಳೆ. ಒಮ್ಮೆ ಹಂಗಿಸಿ, ಇನ್ನೊಮ್ಮೆ ಸಹಾಯಕ್ಕೆ ನಿಲ್ಲುವ ಹಳ್ಳಿಯಿದೆ. ಮೇಲಾಗಿ ಮಾನವ ಪ್ರಯತ್ನಗಳನ್ನು ನಿರ್ವಿಣ್ಣಗೊಳಿಸುವ ಪ್ರಕೃತಿ ಇದೆ. ಪಥೇರ್‌ ಪಾಂಚಾಲಿ ಎಲ್ಲರ ಕಣ್ಣಿಗೂ ಒಂದೇ ತರ ಕಂಡಿಲ್ಲ. ಆಗ ನೆಹರೂ ನಾಯಕತ್ವದಲ್ಲಿ ‘ಸಮಾಜ ಮರು ನಿರ್ಮಾಣ’ ಕ್ಕೆ ಹೊರಟಿದ್ದ ಅನೇಕ ಮಹಾನುಭಾವರಿಗೆ ರೇ ಚಿತ್ರಗಳು ರುಚಿಸಲಿಲ್ಲ. ‘ ರೇ ಭಾರತದ ಬಡತನವನ್ನು ವಿದೇಶಿಗರ ಮುಂದೆ ಪ್ರದರ್ಶನಕ್ಕಿಟ್ಟಿದ್ದಾನೆ’ ಎಂದು ನರ್ಗೀಸ್‌ ದತ್ತ್‌ ಪಾರ್ಲಿಮೆಂಟಿನಲ್ಲಿ ಕೂಗಾಡಿದಳು. ಭೂಗತ ಜಗತ್ತಿನೊಂದಿಗೆ ಚಿತ್ರ ನಿರ್ಮಿಸುವ ಮುಂಬೈನ ಚಿತ್ರರಂಗಕ್ಕೆ ಏನು ತಿಳಿಯುತ್ತದೆ ಭಾರತದ ಬಡತನ ! ರೇ ‘ ಶಾಂತಿನಿಕೇತನ’ದಲ್ಲಿ ಓದಿದವರು, ಹಳ್ಳಿ ಹಳ್ಳಿ ತಿರುಗಿದವರು. ರೇಗಿಂತಾ ಬೇರೆ ಭಾರತೀಯ ಬೇಕೆ ಭಾರತದ ಬಗ್ಗೆ ಹೇಳಲು ? ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಪಶ್ಚಿಮಗಳನ್ನು ಕಂಡವರು ರೇ. ಪಥೇರ್‌ ಪಾಂಚಾಲಿ ಮತ್ತು ಅಸಾನಿ ಸಂಕೇತ್‌ (ದೂರದ ಸಿಡಿಲು) ಭಾರತದ ಸ್ವಾತಂತ್ರ್ಯ ಪೂರ್ವದ ಕತೆಗಳಾಗಿದ್ದರೆ, ಮಹಾನಗರ್‌ ಸ್ವಾತಂತ್ರ್ಯೋತ್ತರದ್ದು. ‘ಮಹಾನಗರ್‌’ನಲ್ಲಿ ಕಚೇರಿಯ ಮುಖ್ಯಸ್ಥ ಅನಾವಶ್ಯಕವಾಗಿ ಒಬ್ಬ ಆಂಗ್ಲೋ ಇಂಡಿಯನ್‌ ಮಹಿಳೆಯನ್ನು ‘ ಅವರು ಇದುವರೆಗೂ ನಮ್ಮನ್ನು ಆಳಿದರು’ ಎನ್ನುವ ಕಾರಣಕ್ಕಾಗಿಯೇ ಅವಮಾನ ಮಾಡಿದಾಗ ಅದನ್ನು ಸಂಪ್ರದಾಯಸ್ಥ ಬೆಂಗಾಲಿ ಹೆಣ್ಣೊ ಬ್ಬಳು ಪ್ರತಿಭಟಿಸಿ ನಿಲ್ಲುತ್ತಾಳೆ ‘ಮದರ್‌ ಇಂಡಿಯಾ’ ನರ್ಗೀಸ್‌ ದತ್ತ್‌ ಇದನ್ನು ಕಾಣಲೇ ಇಲ್ಲ ಎಂದೆನಿಸುತ್ತದೆ ! ಅಥವಾ ಆ ಸನ್ನಿವೇಶದ ಹೊತ್ತಿಗೆ ತನ್ನ ‘ದೇಶಭಕ್ತ’ ಮಗ ಸಂಜಯ ದತ್ತನಿಗೆ ಪಾಪ್‌ ಕಾರ್ನ್‌ ತರಲು ಎದ್ದು ಹೋಗಿದ್ದಳೇನೋ!!

ಸತ್ಯಜಿತ್‌ ರೇ ಅವರ ಮೇಲಿನ ಪಾಶ್ಚಾತ್ಯ ಪ್ರಭಾವದ ಬಗ್ಗೆಯೂ ಅನೇಕ ಸಿಡಿಮಾತುಗಳಿವೆ. ರೇ ಒಂದು ರೀತಿಯಲ್ಲಿ ಪೂರ್ವ ಮತ್ತು ಪಶ್ಚಿಮಗಳನ್ನು ಸಮನ್ವಯಿಸಿಕೊಂಡವರು. ಐವತ್ತು ವರ್ಷಗಳ ಹಿಂದೆಯೇ ಅವರು ಅಳವಡಿಸಿಕೊಂಡ ಅನೇಕ ಛಾಯಾಚಿತ್ರಗಳನ್ನು ತಂತ್ರಗಳನ್ನು ಗಮನಿಸಿದರೆ, ಅವರು ಪಶ್ಚಿಮದಿಂದ ಏನನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡೇ ಇದ್ದಾರೆ- ಅದು ತಂತ್ರಜ್ಞಾನ ! ಆದರೆ ಆ ತಂತ್ರಜ್ಞಾನ ಜೀವಕೊಟ್ಟದ್ದು ಮಾತ್ರ ಭಾರತದ ಮಣ್ಣಿನಲ್ಲಿ ಅರಳಿ ನಿಂತ ಚಿತ್ರಕ್ಕೆ. ಪಾಶ್ಚಿಮಾತ್ಯರನ್ನು ಮೆಚ್ಚಿಸಲು ರೇ ತನ್ನ ಚಿತ್ರದಲ್ಲಿ ಯಾವ ದೃಶ್ಯವನ್ನೂ ಸೇರಿಸಲಿಲ್ಲ. ಹಾಗೆ ನೋಡಿದರೆ ದೇಶೀಯರೋ, ವಿದೇಶೀಯರೋ, ಯಾರನ್ನೂ ಮೆಚ್ಚಿಸಲು ರೇ ಪ್ರಯತ್ನಿಸಲಿಲ್ಲ. ಅದರ ಅಗತ್ಯವೇ ಅವರಿಗಿರಲಿಲ್ಲ.

ಕಲೆ ಕಬ್ಬಿಣದ ಕಡಲೆಯಲ್ಲ !
ಕಲಾಚಿತ್ರವೆಂದರೆ ಕೇವಲ ಸಿದ್ಧಾಂತ ಮಂಡನೆ ಮಾತ್ರ ಎನ್ನುವ ಕೆಲವು ನಿರ್ದೇಶಕರು ರೇ ಚಿತ್ರಗಳನ್ನು ‘ನೆಲಗಟ್ಟುಗಳಿಲ್ಲದೆ ಬರೀ ಭಾವನೆಗಳ ಮೇಲೆ ಓಡುವ ಚಿತ್ರಗಳು ಮತ್ತು ಪಾತ್ರಗಳ ನಡುವಿನ ಸಂಬಂಧಗಳು ಮಿತಿಗಳನ್ನೆಲ್ಲಾ ಮೀರಿ ಬಿಡುತ್ತವೆ ’ಎಂದು ಟೀಕಿಸಿದರು. ರೇಗೆ ಚಿತ್ರಗಳ ಆಧಾರ ಜೀವನ, ಸಿದ್ಧಾಂತಗಳಲ್ಲ. ಜೀವನದ ಮೇಲಿನ ಚಿತ್ರಗಳು ಸಿದ್ಧಾಂತಗಳನ್ನು ಸಾರುವುದಿಲ್ಲವೆಂದರೆ ಸಿದ್ಧಾಂತಗಳನ್ನು ಸಾರುವ ಮತ್ಯಾವ ವಸ್ತುವೂ ಈ ಪ್ರಪಂಚದಲ್ಲಿ ಇಲ್ಲ. ಕಲೆಯ ಹೆಸರಿನಲ್ಲಿ ಕಬ್ಬಿಣದ ಕಡಲೆಯಾಗುವುದು ವ್ಯರ್ಥವಲ್ಲದೆ ಮತ್ತೇನೂ ಅಲ್ಲ. ಲಂಕೇಶರ ‘ಪಲ್ಲವಿ’ ಚಿತ್ರ ಯಾವ ದೃಷ್ಠಿಕೋನದಿಂದಲೂ ನನಗೆ ಅರ್ಥವಾಗಲಿಲ್ಲ. ರೇ ಚಿತ್ರಗಳ ಅನೇಕ ಗುಣಲಕ್ಷಣಗಳನ್ನು ನಾನು ಗಿರೀಶ್‌ ಕಾಸರವಳ್ಳಿಯವರ ಚಿತ್ರಗಳಲ್ಲಿ ಕಾಣುತ್ತೇನೆ. ಅವರ ಚಿತ್ರಗಳೂ ಕೂಡ ಸರಳ, ನೇರ ಮತ್ತು ನಿಜಜೀವನಕ್ಕೆ ಹತ್ತಿರವಾದದ್ದು.

‘ಪಥೇರ್‌ ಪಾಂಚಾಲಿ’ಯನ್ನೇ ಏಕೆ ಚಿತ್ರ ಮಾಡಲು ಆಯ್ದುಕೊಂಡೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ರೇ ಹೇಳುತ್ತಾರೆ : ‘ಅದರ ಮಾನವೀಯ ಮೌಲ್ಯಗಳು, ಸಾಹಿತ್ಯದ ಬದ್ಧತೆ ಮತ್ತು ಎದೆಯಲ್ಲಿ ಉಳಿಸಿ ಹೋಗುವ ಸತ್ಯಗಳಿಂದ ಮಾತ್ರಾ.’ ರಸಪ್ರಜ್ಞೆಯ ಮೂಲಗಳು ಇವೇ ಅಲ್ಲವೇ ?

ಸತ್ಯಜಿತ್‌ ರೇ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಅಕಿರೋ ಕುರೊಸವಾ (‘ ರೋಷಮನ್‌’ ಖ್ಯಾತಿಯವನು) ರೇ ಬಗ್ಗೆ ಹೇಳುವ ಈ ಮಾತುಗಳು ರೇಯ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ:

Apu‘ಪಥೇರ್‌ ಪಾಂಚಾಲಿಯನ್ನು ನೋಡಿದ ಮೇಲೆ ನನಗುಂಟಾದ ತೃಪ್ತಿಯನ್ನು ನಾನೆಂದೂ ಮರೆಯಲಾರೆ. ಇಡೀ ಚಿತ್ರವು ಒಂದು ಮಹಾನದಿಯಂತೆ ಗಾಂಭೀರ್ಯ ಮತ್ತು ಉತ್ಕೃಷ್ಟತೆಯಿಂದ ಕೂಡಿದೆ. ಹುಟ್ಟು ಸಾವುಗಳು ಯಾವ ಕೋಲಾಹಲವೂ ಇಲ್ಲದೆ, ಮೂಡಿ ಬರುತ್ತವೆ. ಸತ್ಯಜಿತ್‌ ರೇ ಇದನ್ನು ಹೇಗೆ ಸಾಧಿಸಿದ ಎಂದು ಯೋಚಿಸಿದಾಲೆಲ್ಲಾ ಅವನೊಬ್ಬ ಮಾಂತ್ರಿಕನಂತೆ ನನಗೆ ತೋರುತ್ತಾನೆ’.

ಪಥೇರ್‌ ಪಾಂಚಾಲಿ Vs ಸಿಟಿಝನ್‌ ಕೇನ್‌ ?

ಕೆಲವರು ಪಥೇರ್‌ ಪಾಂಚಾಲಿಯನ್ನು ಇಂಗ್ಲಿಷ್‌ನ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ಸಿಟಿಝನ್‌ ಕೇನ್‌ನೊಂದಿಗೆ ಹೋಲಿಸಿ ನೋಡುತ್ತಾರೆ. ನಾನೂ ಅಭ್ಯಾಸದ ದೃಷ್ಠಿಯಿಂದ ಸಿಟಿಝನ್‌ ಕೇನ್‌ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ್ಫ ಅದೂ ಒಂದು. ಆದರೆ ಚಿತ್ರಗಳ ನಡುವಿನ ಸಾಮ್ಯತೆಗಿಂತಲೂ ಅವುಗಳ ನಿರ್ದೇಶಕರ ನಡುವಿನ ಸಾಮ್ಯತೆ ಹೆಚ್ಚಾಗಿರುವಂತೆ ನನಗೆ ತೋರಿದೆ. ಸಿಟಿಝನ್‌ ಕೇನ್‌ನ ನಿರ್ದೇಶಕ ಆರ್ಸನ್‌ ವೇಲ್ಸ್‌ ಕೂಡ ರೇಯಂತೆಯೇ ಅತ್ಯಂತ ಪ್ರತಿಭಾವಂತ ನಿರ್ದೇಶಕ. ಇಬ್ಬರ ನಡುವಿನ ಸಾಮ್ಯತೆಗಳಲ್ಲಿ ಎದ್ದು ಕಾಣುವುದು ತಂತ್ರಗಳ ಬಳಕೆಯಲ್ಲಿ. ಅದರಲ್ಲೂ ಆರ್ಸನ್‌ ವೇಲ್ಸ್‌ ಬಳಸಿದ ‘ಡೀಪ್‌ ಫೋಕಸ್‌’ ತಂತ್ರಗಳು ಇಂದಿಗೂ ಛಾಯಾಗ್ರಹಣದಲ್ಲಿ ಸಿಟಿಝನ್‌ ಕೇನ್‌ನ್ನು ಒಂದು ಅಭ್ಯಾಸದ ಮಾದರಿಯಾಗಿ ಇಟ್ಟಿವೆ. ಭೂತ ಮತ್ತು ವರ್ತಮಾನದಲ್ಲಿ ಹೊಯ್ದಾಡುವ ಅದರ ಕಥಾತಂತ್ರವೂ ತೀರಾ ವಿಭಿನ್ನವಾದದ್ದು . ಆದರೆ ಸಿಟಿಝನ್‌ ಕೇನ್‌ನಲ್ಲಿ ಪಥೇರ್‌ ಪಾಂಚಾಲಿಯಲ್ಲಿ ಸಿಗುವ ‘ಜೀವನ ’ ಇಲ್ಲ. ಭಾವನೆಗಳ ಲಹರಿಯಿಲ್ಲ, ಸಾಮಾನ್ಯನ ನಿಜಜೀವನಕ್ಕೆ ಹತ್ತಿರವಾಗಿಲ್ಲ.

ಸಿಟಿಝನ್‌ ಕೇನ್‌ ಪ್ರಸಿದ್ಧವಾದದ್ದು ಇತರ ಕಾರಣಗಳಿಂದ ಕೂಡಾ. ಇಡೀ ಕತೆ ಸ್ಥೂಲವಾಗಿ ಒಂದು ಕಾಲದಲ್ಲಿ ಪತ್ರಿಕೋದ್ಯಮವನ್ನು ಸಂಪೂರ್ಣವಾಗಿ ನಿಯಂತ್ರಿಸಿದ ವಿಲ್ಲಿಯಂ ಹರ್ಸ್ಟ್‌ ಮೇಲೆ ಆಧಾರಿತವಾಗಿದೆ. ಹರ್ಸ್ಟ್‌ ಆಗ ಪತ್ರಿಕೋದ್ಯಮಕ್ಕೆ ಬಿಲ್‌ ಗೇಟ್ಸ್‌ !. ರಸವತ್ತಾದ ಸುದ್ದಿಗಳನ್ನು ಅವು ಘಟಿಸಲಿ, ಬಿಡಲಿ ಪತ್ರಿಕೆಯಲ್ಲಿ ನೀಡಿ ಪ್ರಚಾರವನ್ನು ಹೆಚ್ಚಿಸುವ ‘ಪೀತ ಪತ್ರಿಕೋದ್ಯಮ’(Yellow Journalism) ದ ಪಿತಾಮಹ ಇವನು. ಕ್ಯೂಬಾದಿಂದ ವರದಿಗಾರನೊಬ್ಬ ಫೋನ್‌ ಮಾಡಿ ‘ ಯುದ್ಧದ ವರದಿ ಬರೆಯಲು ನನ್ನನ್ನೇಕೆ ಇಲ್ಲಿಟ್ಟಿದ್ದೀ ? ಇಲ್ಲಿ ಯುದ್ಧವೇ ನಡೆಯುತ್ತಿಲ್ಲ ’ ಎಂದರೆ ಅದಕ್ಕೆ ಹರ್ಸ್ಟ್‌ ನೀಡಿದ ಉತ್ತರ - ‘ ನೀನು ಅಲ್ಲಿಯೇ ಇರು, ನಿನಗೆ ಯುದ್ಧವನ್ನು ಒದಗಿಸುವುದು ನನ್ನ ಜವಾಬ್ದಾರಿ’ ಎಂಬುದು ಯಥಾವತ್ತಾಗಿ ಚಿತ್ರದಲ್ಲಿ ಮೂಡಿ ಕೋಲಾಹಲವನ್ನು ಎಬ್ಬಿಸಿತ್ತು. ಹರ್ಸ್ಟ್‌ನು ಚಿತ್ರವು ಬಿಡುಗಡೆಯಾಗದಂತೆ ತಡೆಯಲು ನೋಡಿದ್ದು, ನೆಗೆಟಿವ್‌ಗಳನ್ನು ಸಂಗ್ರಹಿಸಿ ಸುಡಲು ನೋಡಿದ್ದು ಹಾಗೂ 75ರ ಹರ್ಸ್ಟ್‌ ಮತ್ತು 25 ವರ್ಷ ವಯಸ್ಸಿನ ಆರ್ಸನ್‌ ವೆಲ್ಸ್‌ನ ಹಣಾಹಣಿ ಚಿತ್ರಕ್ಕೆ ಬಹಳ ರೋಚಕತೆಯನ್ನು ನೀಡಿತ್ತು.

ಸಿಟಿಝನ್‌ ಕೇನ್‌ ಹಾಗೂ ಪಥೇರ್‌ ಪಾಂಚಾಲಿ, ಇವೆರಡೂ ಚಿತ್ರಗಳೂ ಅರಳಿದ ಬೇರೆ ಬೇರೆ ಬಗೆಯ ಹೂವುಗಳಂತೆ . ಹೋಲಿಸಿ ನೋಡುವುದು ಸಮಂಜಸವಲ್ಲವೇನೋ ಎನ್ನಿಸುತ್ತದೆ. ಈ ಉನ್ನತ ಸಾಲಿನಲ್ಲಿ ನಾನು ಸೇರಿಸುವ ಮತ್ತೊಂದು ಚಿತ್ರ ಸ್ಪಿಲ್‌ಬರ್ಗ್‌ನ ‘ ಶಿಂಡ್ಲರ್ಸ್‌ ಲಿಸ್ಟ್‌’ (ನನ್ನ ಪಟ್ಟಿಯಲ್ಲಿರುವ ಮೂರು ಚಿತ್ರಗಳೂ ಕಪ್ಪು-ಬಿಳುಪಿನವು ! ಪ್ರಮಾಣ ಮಾಡಿ ಹೇಳುತ್ತೇನೆ ನನಗೆ ಬಣ್ಣದ ಕುರುಡೇನೂ ಇಲ್ಲ)

ಒಬ್ಬ ಪಾಶ್ಚಾತ್ಯ ವಿಮರ್ಶಕ, ಭಾರತೀಯ ಚಿತ್ರರಂಗವೆಂದರೆ ಸತ್ಯಜೀತ್‌ ರೇಯ ನೆನಪಾಗುತ್ತದೆ ಮತ್ತು ರೇ ಎಂದೊಡನೆ ಪಥೇರ್‌ ಪಾಂಚಾಲಿ ಕಣ್ಣ ಮುಂದೆ ನಿಲ್ಲುತ್ತದೆ ಎನ್ನುತ್ತಾನೆ.

ಪಥೇರ್‌ ಪಾಂಚಾಲಿ ಎಂದೊಡನೆಯೇ ನನಗೆ ಅಪು ಮತ್ತು ದುರ್ಗ ತೆನೆ ಹೂಗಳ ನಡುವೆ ತೂರಿ ಬಂದು ತಮ್ಮ ಬೆರಗುಗಣ್ಣುಗಳಿಂದ ಹೊಗೆ ಉಗುಳುತ್ತಾ ಸಾಗುವ ರೈಲನ್ನು ಆಶ್ಚರ್ಯದಿಂದ ದಿಟ್ಟಿಸುವುದು ಎದೆಯಲ್ಲಿ ಮೂಡುತ್ತದೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X