ಸತ್ಯಜಿತ ರೇ ಎಂಬ ಮಾಂತ್ರಿಕ ಮತ್ತು ಪಥೇರ್ ಪಾಂಚಾಲಿ ಎಂಬ ಮಂತ್ರ
*ಎಂ.ಆರ್.ದತ್ತಾತ್ರಿ (ಸನ್ನಿವೇಲ್, ಕ್ಯಾಲಿಫೋರ್ನಿಯಾ)
ನಾನಾಗ ಇಂಜಿನಿಯರಿಂಗ್ ಓದುತ್ತಿದ್ದ ಸಮಯ. ಪರೀಕ್ಷೆಗಳು ನಡೆಯುತ್ತಿದ್ದ ಸಮಯ. ಹಗಲು, ರಾತ್ರಿ ಎಷ್ಟು ಓದಿದರೂ ಮುಗಿಯಲೊಲ್ಲದು. ಅದೇ ಸಂದರ್ಭದಲ್ಲಿ ಸತ್ಯಜಿತ್ ರೇ ಸತ್ತ ಸುದ್ದಿ ಬಂತು. ಅವರ ಯಾವ ಚಿತ್ರಗಳನ್ನೂ ನೋಡದಿದ್ದ ನನಗೆ ಅದೇನೂ ಆಘಾತಕಾರಿಯಾದ ಅಥವಾ ಗಾಬರಿ ಹುಟ್ಟಿಸುವ ಸುದ್ದಿ ಆಗಿರಲಿಲ್ಲ. ಈ ಸಂದರ್ಭದಲ್ಲಿ, ಬಹಳ ಅಪರೂಪಕ್ಕೆ ದೂರದರ್ಶನದವರು ಒಂದು ಒಳ್ಳೆಯ ನಿರ್ಧಾರವನ್ನು ಕೈಗೊಂಡರು. ಸತ್ಯಜಿತ್ ರೇ ನೆನಪಿಗಾಗಿ ಅವರ ಚಿತ್ರಗಳ ಸಪ್ತಾಹವನ್ನು ಆಚರಿಸುವುದು. ರಾತ್ರಿ ಹತ್ತಕ್ಕೋ, ಹನ್ನೊಂದಕ್ಕೋ ಪ್ರತಿದಿನ ಒಂದೊಂದು ಅವರ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾರಂಭಿಸಿದರು. ಪರೀಕ್ಷೆಯ ಸಮಯದಲ್ಲಿ ಮಧ್ಯರಾತ್ರಿಯ ಸಿನಿಮಾಗಳನ್ನು ನೋಡುವುದೆಂತು? ಆದರೆ ಏನೋ ಕುತೂಹಲ. ಈ ರೀತಿಯ ಸಪ್ತಾಹ ಪ್ರಾರಂಭವಾದ ಮೊದಲ ದಿನ ಎಷ್ಟೋ ಹೊತ್ತಿನ ನಂತರ ಟಿವಿ ಆನ್ ಮಾಡಿದೆ. ಜಾಸ್ತಿ ಶಬ್ದವಿಟ್ಟು ಕೇಳುವಂತಿಲ್ಲ . ಎಲ್ಲರೂ ಮಲಗಿದ್ದಾರೆ. ಒಬ್ಬ ಹುಡುಗ ಮತ್ತು ಹುಡುಗಿ ತೆನೆ ಹೂವುಗಳು ದಟ್ಟವಾಗಿರುವ ಬಯಲಿನಲ್ಲಿ ಆಟವಾಡುತ್ತಿದ್ದಾರೆ. ತೆನೆಗಳನ್ನು ಸೀಳಿದಂತೆ ಒಂದು ಹೊಗೆ ಉಗುಳುವ ರೈಲು ಹಾದು ಹೋಯಿತು. ಮಕ್ಕಳಿಬ್ಬರೂ ನಿಬ್ಬೆರಗಾಗಿ ರೈಲನ್ನು ದೃಷ್ಟಿಸುತ್ತಾರೆ. ಈ ದೃಶ್ಯ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ನನಗೆ ಕೆಲವು ನಿಮಿಷಗಳ ಕಾಲ ಪರೀಕ್ಷೆ, ಓದು ಎಲ್ಲವೂ ಮರೆತುಹೋಯಿತು. ಸುಮ್ಮನೇ ಕುಳಿತು ಸಿನೆಮಾ ನೋಡತೊಡಗಿದೆ.
ರೇ ಅವರ ಚಿತ್ರಗಳನ್ನು ನೋಡಬೇಕು ಎಂಬ ಹಂಬಲ ಅಂದಿನಿಂದ ನನ್ನನ್ನು ಕಾಡತೊಡಗಿತು. ಆದರೆ ನಾನಿದ್ದ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಬೆಂಗಾಲಿ ಸಿನೆಮಾವನ್ನು ನೋಡುವುದಾದರೂ ಹೇಗೆ?
ಕೆಲಸದ ನಿಮಿತ್ತ ಅಮೆರಿಕೆಗೆ ಬಂದ ಮೇಲೆ ಒಮ್ಮೆ ಮನೆಗೆ ಹತ್ತಿರವಿರುವ ಸನ್ನಿವೇಲ್ ಪಬ್ಲಿಕ್ ಲೈಬ್ರರಿಯಲ್ಲಿ ಸತ್ಯಜಿತ್ ರೇ ಸಿನೆಮಾಗಳ ಸಂಚಯವೇ ಕಂಡಿತು! ನನಗೆ ನಿಧಿ ಸಿಕ್ಕಷ್ಟು ಆನಂದವಾಯಿತು. ಅಪರಾಜಿತೋ, ಅಪುರ್ ಸನ್ಸಾರ್, ಜಲ ಸಾಗರ್, ದೇವಿ, ಥೀನ್ ಕನ್ಯಾ, ಚಾರುಲತಾ, ಮಹಾನಗರ್, ಅಸಾನಿ ಸಂಕೇತ್ ಹೀಗೆ ಅವರ ಎಲ್ಲಾ ಚಿತ್ರಗಳನ್ನು ಲೈಬ್ರರಿಯಿಂದ ಎರವಲು ತಂದು ನೋಡಿದೆ. ಆದರೆ ಸತ್ಯಜಿತ್ ರೇ ಚಿತ್ರಗಳಲ್ಲೆಲ್ಲಾ ಮುಕುಟಪ್ರಾಯವಾದ ಪಥೇರ್ ಪಾಂಚಾಲಿ ಮಾತ್ರಾ ಸಿಗಲಿಲ್ಲ . ಲೈಬ್ರರಿಯ ಕ್ಯಾಟಲಾಗ್ನಲ್ಲಿ ಹುಡುಕಿದಾಗ ‘ಮಿಸ್ಸಿಂಗ್’ ಎಂಬ ಉತ್ತರ ಬಂತು. ರೇಯ ಮಹಾಭಿಮಾನಿಯಾಬ್ಬನಿಗೆ ವಿಡಿಯೋ ಟೇಪನ್ನು ಹಿಂದಿರುಗಿಸುವ ಮನಸ್ಸೇ ಆಗಲಿಲ್ಲ ಎಂದು ಕಾಣುತ್ತದೆ.
ಮೊನ್ನೆ ಮೊನ್ನೆ ನಾನು ಹುಡುಕುತ್ತಿದ್ದ , ಸಿಲ್ವಿಯಾ ಪ್ಲಾತ್ಳು ಆತ್ಮಹತ್ಯೆಗೆ ಮುನ್ನ ದಿನಗಳಲ್ಲಿ ಬರೆದ ಕವಿತೆಗಳ ಸಂಕಲನಕ್ಕಾಗಿ ಸಮೀಪದ ಲಾಸ್ ಅಲ್ಟೋಸ್ನ ಲೈಬ್ರರಿಗೆ ಹೋಗಬೇಕಾಯಿತು. ಆಗಲ್ಲಿ ನನಗೆ ‘ಪಥೇರ್ ಪಾಂಚಾಲಿ’ ವಿಡಿಯೋ ಟೇಪ್ ಕಣ್ಣಿಗೆ ಬಿತ್ತು ! ಬಿಡುವವನೇ ನಾನು? ತಕ್ಷಣ ತಂದು ನೋಡಿದೆ. ಸುಮಾರು ಐವತ್ತೆೈದು ವರ್ಷಗಳ ಹಿಂದೆ ನಿರ್ಮಿಸಿದ ಚಿತ್ರ! ಓದುವುದೇ ಕಷ್ಟ ಎನ್ನುವಂತಹ ಇಂಗ್ಲಿಷ್ ಸಬ್ ಟೈಟಲ್ಗಳು. ಯಾವಾಗ ವೀಡಿಯೋ ಆಗಿ ವರ್ಗಾಯಿತವಾಯಿತೋ ಗೊತ್ತಿಲ್ಲ . ಒಮ್ಮೊಮ್ಮೆ ಟಿವಿ ಪರದೆಯ ಮೇಲೆ ಮೂಡುತ್ತಿರುವುದೇನು ಎಂದು ತಲೆ ಕೆಡಿಸಿಕೊಳ್ಳಬೇಕು... ಹಾಗೆ ಮಬ್ಬು ಮಬ್ಬು. ಆದರೆ ಇದೆಲ್ಲದರ ನಡುವೆಯೇ ಅಚ್ಚಳಿಯದಂತೆ ಮನಸ್ಸಿನಲ್ಲಿ ನಿಲ್ಲುವ ಚಿತ್ರ ಪಥೇರ್ ಪಾಂಚಾಲಿ.
ಪಥೇರ್ ಪಾಂಚಾಲಿ ಎಂದರೆ ‘ಕಿರು ಹಾದಿಯ ಹಾಡು’ ಒಬ್ಬ ಚಿಕ್ಕ ಬಾಲಕನ ದೃಷ್ಟಿಕೋನದಿಂದ ಇಡೀ ವಿಶ್ವವನ್ನು ನಮಗೆ ಈ ಚಿತ್ರದಲ್ಲಿ ರೇ ದರ್ಶನ ಮಾಡಿಸುತ್ತಾರೆ. ಇದರ ಮೂಲಕತೆ ಬೆಂಗಾಲಿಯ ಪ್ರಸಿದ್ಧ ಕಾದಂಬರಿಕಾರರಾದ ವಿಭೂತಿ ಭೂಷಣ ಭಂಡೋಪಾಧ್ಯಾಯ ಅವರದ್ದು . ಈ ಕತೆಯನ್ನು ಓದಿ ರೇ ಎಷ್ಟು ಮನ ಸೋತರೆಂದರೆ ಚಿತ್ರವಾಗುವ ಮುನ್ನ ಸುಮಾರು ಏಳು ವರ್ಷಗಳ ಕಾಲ ಇದರ ಪ್ರತಿ ದೃಶ್ಯಕ್ಕೂ ಚಿತ್ರ ಸಂಪದ (Story Board) ಬರೆದಿದ್ದರು!
ಪಥೇರ್ ಪಾಂಚಾಲಿಯ ಕಥೆ ಸ್ಥೂಲವಾಗಿ ಹೀಗಿದೆ :
ಒಂದು ಬೆಂಗಾಲಿ ಬ್ರಾಹ್ಮಣ ಕುಟುಂಬದ ಸುತ್ತ ಹೆಣೆದ ಕತೆ ಇದು. ಹರಿಹರ ಒಬ್ಬ ಅರ್ಚಕ, ಪ್ರವೃತ್ತಿಯಲ್ಲಿ ಕವಿ. ಕುಸಿತದ ಅಂಚಿನಲ್ಲಿದ್ದ ಮನೆಯಲ್ಲಿ ಅವನೊಂದಿಗೆ ಸಂಸಾರದಲ್ಲಿದ್ದವರು ಅವನ ಹೆಂಡತಿ ಸರ್ಬೋಜಯ, ಮಗಳು ದುರ್ಗ ಮತ್ತು ಅವನ ಸಂಬಂಧಿ ಹಣ್ಣು ಹಣ್ಣು ಮುದುಕಿ ಇಂದಿರ. ಊರಿಗೆ ಬಂದ ಬರಗಾಲ ಮತ್ತು ಕಿತ್ತು ತಿನ್ನುವ ಬಡತನ ಹರಿಹರನನ್ನು ಕೆಲಸಕ್ಕಾಗಿ ಊರೂರು ಸುತ್ತುವಂತೆ ಮಾಡುತ್ತದೆ. ಈ ನಡುವೆ ಮಗ ಅಪು ಜನಿಸುತ್ತಾನೆ. ದಿನದಿನಕ್ಕೂ ಕ್ಷೀಣವಾಗುತ್ತಿರುವ ಆಹಾರ ಸಂಗ್ರಹ, ಬೆಳೆಯುತ್ತಿರುವ ಮಕ್ಕಳು, ಹಣ್ಣು ಮುದುಕಿ ಇಂದಿರಳೊಂದಿಗೆ ಆಗಾಗ ಮುಖಾಮುಖಿ, ಆಸೆಯ ಅಮಲಿನಲ್ಲಿ ಮಗಳು ಆಗಾಗ ನೆರೆಹೊರೆಯ ನಡುವೆ ನಡೆಸುವ ಸಣ್ಣಪುಟ್ಟ ಕಳ್ಳತನಗಳು, ಕೆಲಸದ ನಿಮಿತ್ತ ದೂರ ಹೋದ ಗಂಡ ಇವುಗಳೆಲ್ಲಾ ಸರ್ಬೋಜಯಳನ್ನು ಕಾಡುವ ಸಮಸ್ಯೆಗಳು.
ಇಡೀ ಚಿತ್ರದ ಅತಿ ಆಸಕ್ತಿದಾಯಕ ಭಾಗವೆಂದರೆ ದುರ್ಗ ಮತ್ತು ಅಪು ಬೆಳೆಯುವ ಬಗೆ. ತಮ್ಮ ಓರಗೆಯವರಿಗೆ ಲಭ್ಯವಾದ ಹಾಗು ಬಡತನದಿಂದಾಗಿ ವಂಚಿತರಾದ, ಮಿಠಾಯಿ ಕೊಂಡುಕೊಳ್ಳುವಂತಹ ಸಣ್ಣ ಪುಟ್ಟ ಘಟನೆಗಳು ಕೂಡ ಗಾಢ ಅಂಕಿತವನ್ನೂರುವಂತಾಗುತ್ತವೆ. ಮುದುಕಿ ಒಂದು ರೀತಿಯಲ್ಲಿ ಮಕ್ಕಳನ್ನು ಹಾಗೂ ತಾಯಿಯನ್ನು ಕೊಂಡಿಹಾಕುವವಳಾಗುತ್ತಾಳೆ. ಅದರಲ್ಲೂ ದುರ್ಗಳ ಮೇಲೆ ಇಂದಿರಾಗೆ ವಿಶೇಷ ಪ್ರೀತಿ. ಇಂದಿರಳೊಂದಿಗೆ ಘರ್ಷಣೆಯಲ್ಲಿಯೇ ಸರ್ಬೋಜಯ ದೂರ ಸರಿದಿದ್ದ ಗಂಡನಿಂದ ನಿರ್ಮಿತವಾದ ಏಕಾಂಗಿತನವನ್ನು ಕಳೆದುಕೊಳ್ಳುತ್ತಿರುತ್ತಾಳೆ.
ಇಂದಿರಳ ಸಾವು ಈ ಸಂಸಾರದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ. ಇಂದಿರಳೊಂದಿಗೆ ದುರ್ಗಳ ಎಳೆತನವೂ ಹೋಗಿ ದುರ್ಗಳು ಸಂಕೀರ್ಣವಾದ ವ್ಯಕ್ತಿತ್ವದೊಂದಿಗೆ ನಿಲ್ಲುತ್ತಾಳೆ. ದುರ್ಗ ಮತ್ತು ಅಪುವಿನ ನಡುವಿನ ಬಂಧ ಮಾತ್ರ ಅನೇಕ ಅಪೂರ್ವ ಕ್ಷಣಗಳನ್ನು ನೋಡುಗನಿಗೆ ನೀಡುತ್ತವೆ.
ಈ ನಡುವೆ ಋತುವು ಕಳೆದು ಮಳೆಗಾಲ ಪ್ರಾರಂಭವಾಗುತ್ತದೆ. ಮಳೆಯಲ್ಲಿ ನೆನೆಯುವುದು ಅಪು ಮತ್ತು ದುರ್ಗಳಿಗೆ ಯಾವ ಕಿಮ್ಮತ್ತೂ ಬಯಸದೆ ಬಂದ ಸುಖ. ಇದು ದುರ್ಗಳ ಆರೋಗ್ಯವನ್ನು ಹಾಳುಗೆಡಹುತ್ತದೆ. ಖಾಹಿಲೆ ಮಲಗಿದ ದುರ್ಗಳನ್ನು ಉಳಿಸಿಕೊಳ್ಳಲು ಸರ್ಬೋಜಯ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾಳೆ. ಶಿಥಿಲಗೊಂಡ ಮನೆ ಮತ್ತು ಕ್ರೌರ್ಯಕ್ಕೆ ತಿರುಗಿದ ಪ್ರಕೃತಿ ದುರ್ಗಳನ್ನು ಆ ಸಂಸಾರದಿಂದ ಕಸಿದುಕೊಳ್ಳುತ್ತವೆ.
ದುರ್ಗಳ ಸಾವು ಅಪುವಿನ ಮೇಲೆ ಗಾಢ ಪ್ರಭಾವವನ್ನು ಬೀರುತ್ತದೆ. ಅಪು ಈಗ ಮೊದಲಿನ ಸಣ್ಣ ಹುಡುಗನಲ್ಲ, ಪಾಠ ಕಲಿತವನು! ಒಂಟಿಯಾಗಿ ಬರಿಗೈನಲ್ಲಿ ಹೊರ ಹೊರಟವನು ವಾಪಸ್ಸು ಬಂದು ಕೊಡೆ ಹಿಡಿದು ಹೊರಡುತ್ತಾನೆ! ಸಿನೆಮಾದ ಅಂತ್ಯದಲ್ಲಿ ಹರಿಹರ ಮನೆಗೆ ಹಿಂತಿರುಗುತ್ತಾನೆ. ದುರ್ಗಳ ಸಾವಿನ ಸುದ್ದಿ ಅವನಿಗೂ ಆಘಾತವಾಗುತ್ತದೆ. ಬದುಕಲಸಾಧ್ಯವಾದ ಆ ಮನೆಯನ್ನು, ಹಳ್ಳಿಯನ್ನು ತ್ಯಜಿಸಿ ತನ್ನ ಸಂಸಾರವನ್ನು ವಾರಣಾಸಿಗೆ ಕೊಂಡೊಯ್ಯುತ್ತಾನೆ. ಪ್ರಯಾಣದುದ್ದಕ್ಕೂ ಇಡೀ ಸಂಸಾರಕ್ಕೆ ದುರ್ಗಳ ನೆನಪು ಕಾಡುತ್ತದೆ. ಇದಿಷ್ಟು ಕತೆ.
ಸಿನೆಮಾದ ಗತಿ ಬಹಳ ನಿಧಾನ. ಅದರಲ್ಲೂ ಜೆಟ್ವೇಗದಲ್ಲಿ ಚಲಿಸುವ ಹಾಲಿವುಡ್ನ ‘ಆ್ಯಕ್ಷನ್’ ಸಿನೆಮಾಗಳಿಗೆ ಹೋಲಿಸಿದರೆ ಇದರದ್ದು ಆಮೆಗತಿ. ಆದರೆ ಈ ನಿಧಾನ ಗತಿಯಿಂದಾಗಿಯೇ ರೇ ಈ ಸಿನೆಮಾವನ್ನು ಸಂಪೂರ್ಣವಾಗಿ ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಿದೆ. ಪ್ರತಿಯಾಂದು ದೃಶ್ಯಾವಳಿಯೂ ಎಷ್ಟರಮಟ್ಟಿಗೆ ಸ್ವಾಭಾವಿಕವಾಗಿ ಮೂಡಿದೆ ಎಂದರೆ ಎಲ್ಲಿಯೂ ಕೃತಕ ಭಾವನೆಗಳ ಸುಳಿವಿಲ್ಲ. ಪಾತ್ರಪಾತ್ರಗಳ ನಡುವಿನ ಅನುಬಂಧ ನಿಜ ಜೀವನಕ್ಕೆ ಸೇರಿದ್ದು. ನಟರೋ, ಬೇರ್ಪಡಿಸಲಾಗದಷ್ಟು ಪಾತ್ರಗಳಿಗೆ ಹೊಂದಿಕೊಂಡಿದ್ದಾರೆ. ಎಲ್ಲದಕ್ಕಿಂತಾ ಅದ್ಭುತವೆಂದರೆ ಎಂಭತ್ತು ದಾಟಿದ್ದ ಚಿನಿಬಾಲ ದೇವಿಯಿಂದ ಇಂದಿರಳ ಪಾತ್ರ ಮಾಡಿಸಿದ್ದು. ಈ ನಟನಾ ವರ್ಗದಲ್ಲಿ ಕೆಲವರಿಗೆ ಮಾತ್ರ ನಟನೆಯ ಅನುಭವವಿತ್ತು. ಮತ್ತೆಲ್ಲರೂ ಸಿನೆಮಾಕ್ಕೂ ನಟನೆಗೂ ಹೊಸಬರೇ. ‘ಹೊರಾಂಗಣದಲ್ಲಿ ಬೇಡ, ಸ್ಟುಡಿಯೋದಲ್ಲಿ ತೆಗಿ’ ಎಂಬ ಅನುಭವದ ಮಾತನ್ನೂ ಧಿಕ್ಕರಿಸಿ ರೇ ಬೆಂಗಾಲದ ಹಳ್ಳಿಯಾಂದರಲ್ಲಿ ಇಡೀ ಸಿನೆಮಾವನ್ನು ಚಿತ್ರೀಕರಿಸಿದರು. ನಟನಟಿಯರನ್ನು ಹುಡುಕುವುದನ್ನೇ ದೊಡ್ಡ ಪ್ರೊಸೆಸ್ ಮಾಡಿ, ಯಾವುದೋ, ಬಾಂಬೆಯದೋ, ಡೆಲ್ಲಿಯದೋ ಮುಖವನ್ನು ಹಿಡಿದು ತಂದು ಹೊರಾಂಗಣದ ನೆಪದಲ್ಲಿ ಅಮೆರಿಕೆಯ ಶ್ರೀಮಂತ ದೃಶ್ಯಾವಳಿಗಳನ್ನು ತುರುಕಿ ನಿಜದಿಂದ ಮೈಲಿ ದೂರ ನಿಲ್ಲುವ ನಮ್ಮ ಅನೇಕ ನಿರ್ದೇಶಕರು ರೇ ಅವರಿಂದ ಏನೂ ಕಲಿಯದೇ ‘ತಾವೇ ಎಲ್ಲರಿಗೂ’ ಕಲಿಸಲು ಹೊರಟಿದ್ದು ನಮ್ಮ ಚಿತ್ರರಂಗದ ವಿಪರ್ಯಾಸವೇ ಸರಿ!
ಸಹಜತೆಯ ಚೌಕಟ್ಟು ಮೀರದ ರೇ ಹಾಗೂ ಅವರ ಚಿತ್ರಗಳು
ರೇಯ ಸಿನಿಮಾಗಳ ಮತ್ತೊಂದು ವೈಶಿಷ್ಟ್ಯವೆಂದರೆ ಹೆಣ್ಣಿನ ಪಾತ್ರಗಳು. ಪಥೇರ್ ಪಾಂಚಾಲಿಯ ಸರ್ಬೋಜಯ, ದುರ್ಗ ಮತ್ತು ಇಂದಿರಾ, ಚಾರುಲತಾದಲ್ಲಿನ ಒಂಟಿತನದಿಂದ ಬಳಲುವ ಹೆಣ್ಣು, ಅಪುರ್ ಸಂಸಾರ್ನ ಅಪುನ ಹೆಂಡತಿ ಹೀಗೆ ತಮ್ಮ ಮನಸ್ಸನ್ನು ಬಿಚ್ಚಿಡುವ ನಡುವೆಯೂ ನಿಗೂಢವಾಗುವ ಪಾತ್ರಗಳು ರೇ ಅವರ ವಿಶೇಷ.
ರೇ ಸಿನಿಮಾದ ಪಾತ್ರಗಳು ಮಾತಿನಲ್ಲಾಗಲೀ ಅಥವಾ ವರ್ತನೆಯಲ್ಲಾಗಲೀ ಸಹಜತೆಯ ಚೌಕಟ್ಟನ್ನು ಮೀರುವುದಿಲ್ಲ. ರೇ ಇದರ ಬಗ್ಗೆ ಎಷ್ಟು ಎಚ್ಚರ ವಹಿಸುತ್ತಿದ್ದರೆಂದರೆ ಈ ಕಾರಣಕ್ಕಾಗಿಯೇ ಅವರು ಬಹುಪಾಲು ಚಿತ್ರಗಳನ್ನು ಬೆಂಗಾಲಿಯಲ್ಲಿ ಮಾತ್ರ ಮಾಡಬೇಕಾಯಿತು. ಬೆಂಗಾಲಿ ಸಂಸ್ಕೃತಿ ಅವರು ಕಂಡ ಮತ್ತು ಅನುಭವಿಸಿದ ಸಮಾಜದ ಸಂಸ್ಕೃತಿ. ಬೆಂಗಾಲದ ಕುಟುಂಬದ ಮೇಲೆ ಚಿತ್ರ ತೆಗೆದರೆ ಅವರು ಮಾತನಾಡುವ ಭಾಷೆಯೂ ಬೆಂಗಾಲಿಯೇ ಆಗಿರಬೇಕು. ‘ ಶತರಂಜ್ ಕೆ ಖಿಲಾಡಿ’ ಸೇರಿದಂತೆ ಒಂದೆರಡು ಚಿತ್ರಗಳನ್ನು ರೇ ಹಿಂದಿಯಲ್ಲೂ ತೆಗೆದರು. ಆದರೆ ಬೆಂಗಾಲಿಯ ಹೊರತಾಗಿ ಬೇರೆ ಭಾಷೆಯಲ್ಲಿ ಚಿತ್ರ ನಿರ್ಮಿಸುವುದು ಅವರಿಗೆ ಸ್ವಲ್ಪವೂ ಸರಿ ಬರಲಿಲ್ಲ. ಎಲ್ಲದಕ್ಕಿಂತಾ ಹೆಚ್ಚಾಗಿ ಕಲೆಯನ್ನು ಗುರುತಿಸುವಲ್ಲಿ ಬೆಂಗಾಲಿ ಬಾಬುಗಳು ಭಾರತದಲ್ಲೇ ಅಗ್ರಗಣ್ಯರು. ಪಥೇರ್ ಪಾಂಚಾಲಿ ಬಿಡುಗಡೆಯಾದಾಗ ಚಿತ್ರಮಂದಿರದಲ್ಲಿ ಟಿಕೇಟಿಗಾಗಿ ಅನೇಕ ದಿನಗಳ ಕಾಲ ನೂಕು ನುಗ್ಗಲು ಇತ್ತಂತೆ ! ಒಂದು ಕಲಾತ್ಮಕ ಚಿತ್ರಕ್ಕೆ ಬೇರೆಲ್ಲಿ ಈ ರೀತಿಯ ಸ್ಪಂದನೆಯನ್ನು ನಿರೀಕ್ಷಿಸಲು ಸಾಧ್ಯ? ಬೆಂಗಾಲಿ ಭಾಷೆ ತಿಳಿಯದ ನನ್ನಂತವನು ಕೂಡ ಪಥೇರ್ ಪಾಂಚಾಲಿಯನ್ನು ಆನಂದಿಸಲು ಸಾಧ್ಯವಾಯಿತು. ನಟನಟಿಯರು ತಮ್ಮ ಸಂಭಾಷಣೆಯಲ್ಲಿ ಕೃತಕತೆಯನ್ನು ಕಡೆಯುವುದಿಲ್ಲ. ಮಾತುಗಳಲ್ಲಿ ಆ ಮಾತನ್ನು ಅರ್ಥ ಮಾಡಿಕೊಂಡ ಭಾವನೆಗಳು ಮತ್ತು ಸಾರ್ಥಕತೆಗಳಿರುತ್ತವೆ. ಇದು ಸಹಜ ನಟನೆಯಲ್ಲಿ ಅತಿ ಮುಖ್ಯ.
ಮುಖಪುಟ / ಸಾಹಿತ್ಯ ಸೊಗಡು