• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂಮಿಕಾ ಭೂಮಿಕೆಯಲ್ಲಿ ‘ತಂದಾನಿ ತಾನೋ ತಂದನಾನಾ’ !

By Staff
|

*ಸತೀಶ್‌ ಕುಮಾರ್‌, ಅಲೆಕ್ಸಾ ್ಯಂಡ್ರಿಯಾ

H.Y.Rajagopal giving Key Addressಅದು ಚೊಕ್ಕ ಕಾರ್ಯಕ್ರಮ. ಅಲ್ಲಿ ಪಸರಿಸಿದ್ದು ಜನಪದದ ಸೊಗಡು. ಮೊಳಗಿದ್ದು ತಂದಾನಿ ತಾನೋ, ತಂದನಾನ... ಮಾತು ಮಾತಿನ ನಡುವೆ ಕಳೆದು ಹೋಗದ ಸಾಗರದಾಚೆಗಿನ ನಾವುಗಳು ಬೇರುಗಳ ಬೆದಕುವಿಕೆಗೆ ತೊಡಗಲು ಇಂಬುಗೊಟ್ಟಿದ್ದು ದಿವಂಗತ ಎಲ್‌. ಗುಂಡಪ್ಪನವರ ಮಕ್ಕಳಾದ ವಿಮಲಾ ರಾಜಗೋಪಾಲ್‌ ಹಾಗೂ ವಾಸಂತಿ. ಭೂಮಿಕಾ ತಿಂಗಳಂಗಳದ ಕಾಂತಿಗೂ ಈಗಲೇ ಶ್ರಾವಣದ ಕಳೆ !

ಕಾರ್ಯಕ್ರಮ ನಡೆದದ್ದು ಆಗಸ್ಟ್‌ 4ರಂದು, ಬಾವರ್‌ ಕಮ್ಯುನಿಟಿ ಹಾಲ್‌ನಲ್ಲಿ. ಮಟ ಮಟ ಮಧ್ಯಾಹ್ನ ಸುಮಾರು ಎರಡೂವರೆ ಗಂಟೆಗೆ ಶುರುವಾದ ಕಾರ್ಯಕ್ರಮ 2 ತಾಸು ಸಾಗಿತು. ಕಾರ್ಯಕ್ರಮದ ಶೀರ್ಷಿಕೆ- ‘ನಾಡ ಪದಗಳು : ಕನ್ನಡ ಜಾನಪದ ಲೋಕದಲ್ಲಿ ವಿಹಾರ’. ಪೆನ್ಸಿಲ್‌ವೇನಿಯಾದ ‘ಪ್ರಸ್ತಾಪ’ದ ಸದಸ್ಯರಾದ ವಿಮಲಾ ರಾಜಗೋಪಾಲ್‌ ಹಾಗೂ ಪರಿವಾರ ಶೀರ್ಷಿಕೆಗೆ ತಕ್ಕಂತೆ ಅಕ್ಷರಶಃ ಜನಪದ ಲೋಕದಲ್ಲಿ ವಿಹಾರ ಮಾಡಿಸಿದರು.

ಕಾರ್ಯಕ್ರಮದ ರಥ ಎಳೆಯಲು ವಿಮಲಾ ರಾಜಗೋಪಾಲ್‌ ದಂಪತಿಗಳಿಗೆ ಸಾಥಿಯಾಗಿ ರಾಬರ್ಟ್‌ ಕಲೆಟನ್‌ ದಂಪತಿಗಳೂ ಇದ್ದರು. ಅಪ್ಪ- ಅಮ್ಮಂದಿರ ಜಾನಪದ ಪ್ರೀತಿ ಹಂಚಲು ಅವರ ಮಕ್ಕಳೂ ನೆರವಿಗೆ ನಿಂತಿದ್ದು ವಿಶೇಷ.

ಅದರಲ್ಲೂ ವಿಮಲಾ ಉಸಿರಾಡಿದ್ದೇ ಜಾನಪದವನ್ನ ! ಹಾಸನದ ಹತ್ತಿರದ ಹಳ್ಳಿಯವರಾದ ಇವರು ಊರೂರು ಸುತ್ತಿ ಜಾನಪದ ಗೀತೆಗಳ ಅಧ್ಯಯನ ಮಾಡಿ, ಹಾಡುಗಳ ಸಂಗ್ರಹಿಸಿದ್ದಾರೆ. ವೃತ್ತಿಯಲ್ಲಿ ಆಕಾಶವಾಣಿಯಲ್ಲಿ ಕೆಲಸ ಮಾಡಿದ ಅನುಭವ. ಆದರೆ, ಇವರು ಆರಾಧಿಸಿದ್ದು ಜಾನಪದ ಗೀತೆಗಳ ಪ್ರವೃತ್ತಿಯನ್ನು.

ಕಾರ್ಯಕ್ರಮ ನೋಡೋಣ ಬನ್ನಿ...

ಕಾರ್ಯಕ್ರಮ ಪ್ರಾರಂಭವಾದದ್ದು ಡಾ।। ವಿಜಯಾ ಕುಲಕರ್ಣಿ ಅವರ ಹಸನಾದ ಸ್ವಾಗತದ ಮೂಲಕ. ಸ್ವಾಗತದ ಜೊತೆಗೇ ಅತಿಥಿಗಳ ಕಿರುಪರಿಚಯವನ್ನೂ ಡಾ।। ವಿಜಯಾ ಕುಲಕರ್ಣಿ ಮಾಡಿಕೊಟ್ಟರು. ನಾಡ ಪದಗಳು ತಮ್ಮ ಕುಟುಂಬಕ್ಕೆ ಹೇಗೆ ಬೇರೆ ಅರ್ಥವನ್ನು ಕೊಡುತ್ತೆ, ಜಾನಪದ ಸಾಹಿತ್ಯ ಮತ್ತು ಸಂಗೀತದ ಅಭ್ಯಾಸದ ಮಹತ್ವವೇನು , ಜಾನಪದ ಗೀತೆಗಳ ಸಂಗ್ರಹಣೆಯ ಔಚಿತ್ಯವೇನು- ಎಲ್ಲಾ ಪ್ರಶ್ನೆಗಳಿಗೆ ರಾಜಗೋಪಾಲ್‌ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಉತ್ತರ ಕೊಟ್ಟ ರು. ಅಷ್ಟೇ ಅಲ್ಲ, ವಾಸಂತಿ ಮತ್ತು ರಾಬರ್ಟ್‌ ಅವರ ಪರಿಚಯವನ್ನೂ ಸಹೃದಯರಿಗೆ ಮಾಡಿಸಿದರು. ಇದು ಆಳವಾದ ಸಂಶೋಧನಾತ್ಮಕ ಭಾಷಣವೇನಲ್ಲ, ಇದರಲ್ಲಿ ನಮಗನ್ನಿಸಿದ್ದನ್ನ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇವೆ, ಅಷ್ಟೇ ! ಎಂಬ ತೂಕವಾದ ಮಾತುಗಳ ಮೂಲಕ ಪ್ರಾಸ್ತಾವಿಕ ಭಾಷಣ ಶುರು ಮಾಡಿದ ರಾಜಗೋಪಾಲ್‌, ತಮ್ಮ ದೊಡ್ಡತನದಿಂದಲೇ ನಮ್ಮನ್ನು ನಾವೇ ಮರೆವಂತೆ ಮಾಡಿದರು.

ಮಾತಿನ ನಡುವೆಯೇ ಹಾಡ ಹೊನಲು

ತಮ್ಮ ಘನೀರ್ಭವಿಸಿದ ಅನುಭವದ ಸಾರವನ್ನು ವಿಮಲಾ ಅವರು ಮಾತಾಗಿಸಿದ ಪರಿಯೇ ಸೊಗಸು. ಜಾನಪದ ಸಾಹಿತ್ಯ ಜನಜನಿತವಾದದ್ದು ಹೇಗೆ ಎಂಬುದರಿಂದ ಹಿಡಿದು ತಮಗೂ ತಮ್ಮ ಕುಟುಂಬಕ್ಕೂ ಜನಪದ ಸಾಹಿತ್ಯದ ಗೀಳು ಹತ್ತಿದ್ದು ಎಂತು ಎಂಬುದರವರೆಗೆ ವಿಮಲಾ ಅವರ ಮಾತು ಹರಿಯಿತು. ನಡುನಡುವೆ ರೋಚಕ ಕಿರುಕತೆ ಮತ್ತು ಜನಪದ ಸಾದೃಶಗಳು. ಮನದಿಂದ ಮನಕ್ಕೆ, ಮನೆಯಿಂದ ಮನೆಗೆ ಜಿಗಿದು ಬೆಳೆದ ಜಾನಪದದ ಬೆಳವಣಿಗೆಯ ವಿವರಣೆಯ ಜೊತೆಗೆ ಜಾನಪದದಲ್ಲಿ ಬರುವ ವಿಶೇಷ ಚಿತ್ರಣಗಳು, ಉಪಮೆಗಳು, ರೂಪಗಳ ಹಿನ್ನೆಲೆಯನ್ನೂ ವಿಮಲಾ ಅವರು ಪುಂಖಾನುಪುಂಖ ಬಿಚ್ಚಿಟ್ಟರು.

L.G.Vimala and Vasanthi in Singing mood !ತಂದೆ- ತಾಯಿ, ಅಜ್ಜ, ಚಿಕ್ಕಪ್ಪ ತಮ್ಮ ಜಾನಪದದ ಕೆಲಸಕ್ಕೆ ಹೇಗೆ ಪ್ರೇರಣೆ ಕೊಟ್ಟರು ಎಂಬುದನ್ನು ಹಾಗೂ ‘ಚಂದ್ರ- ದ್ರೋಣ ಪರ್ವತ (ಬಾಬಾ ಬುಡನ್‌ಗಿರಿ)’ ದ ಕುತೂಹಲ ಕಥೆಯನ್ನು ಶ್ರೋತೃಗಳಿಗೆ ವಿಮಲಾ ಅವರು ಉಣಬಡಿಸಿದ ಶೈಲಿಯ ಮೋಡಿ ಪ್ರೇಕ್ಷಕರು ಬಿಡ್ಡ ಕಣ್ಣು ಬಿಟ್ಟ ಹಾಗೇ ನೋಡುವಂತೆ ಮಾಡಿತ್ತು.

ಪ್ರೇಕ್ಷಕರನ್ನು ಮಾತಿನಲ್ಲೇ ಕಟ್ಟಿ ಹಾಕಿದ್ದ ವಿಮಲಾ ಹಾಡುವುದರಲ್ಲೂ ಹಿಂದಿಲ್ಲ. ಸೂರ್ಯನಿಗೆ ಸುಪ್ರಭಾತ ಹೇಳುವ ಹಾಡು, ಗೌರಿ ಹಾಡು, ಜೋಗುಳ ಎಲ್ಲಾ ಲೀಲಾಜಾಲ. ಹಾಡಿನ ಕೊನೆಗೆ ಅದರ ಭಾವ, ಅಲ್ಲಲ್ಲಿ ಬರುವ ಉಪಮೆಗಳ ವ್ಯಾಖ್ಯೆ. ವಿಮಲಾ ಅವರ ಹಾಡಿಗೆ ಅವರ ಸೋದರಿ ಡಾ।। ವಾಸಂತಿ ಕೋಲು- ಗೆಜ್ಜೆಯ ತಾಳ ಸೇರಿಸಿ, ದನಿಗೂಡಿಸಿದರೆ, ಬಾವ ಡಾ।। ರಾಬರ್ಟ್‌ ಕುಲಟಿನ್‌ ಗಿಟಾರ್‌ ಸಾಥಿಯಾದರು. ಇಡೀ ಪರಿವಾರ ಜಾನಪದ ಲೋಕದಲ್ಲಿ ತೊಡಗಿಕೊಂಡಿರುವ ಪರಿಗೆ ಈ ಕಾಂಬಿನೇಷನ್‌ ಕನ್ನಡಿ ಹಿಡಿದಂತಿತ್ತು.

ಕೆಲವು ನಿಮಿಷಗಳ ಕಾಲ ಸಹೃದಯರ ಪ್ರಶ್ನೆಗಳಿಗೆ ವಿಮಲಾ ಅವರ ಉತ್ತರ. ಆಮೇಲೊಂದು ಸಮುದಾಯ ಗೀತೆ. ‘ತಂದಾನಿ ತಾನೋ ತಂದನಾನಾ’ ಹೇಳಲು ಸಭೆಯ ಯಾರೊಬ್ಬರೂ ಹಿಂಜರಿಯಲಿಲ್ಲ. ಇಡೀ ಹಾಲ್‌ನಲ್ಲಿ ಸಮೂಹ ಗಾನದ ಗುಂಗು!

ತಾವು ಸಂಗ್ರಹಿಸಿರುವ ಜಾನಪದ ಗೀತೆಗಳು ಮತ್ತಿತರ ವಿವರಣೆಗಳಿರುವ ಹೊತ್ತಗೆಯನ್ನು ಸಭಾಸದರಿಗೆ ವಿಮಲಾ ಪರಿಚಯಿಸಿದರು. ತಾವೇ ಹೊರ ತಂದಿರುವ ‘ನಾಡ ಪದಗಳು’ ಆಡಿಯೋ ಸಿ.ಡಿ. ಕೂಡ ಪರಿಚಯವಾಯಿತು. ತಮ್ಮ ಬೆಂಗಳೂರು ಪ್ರವಾಸದ ಸಮಯದಲ್ಲಿ ರಾಜಗೋಪಾಲ್‌ ಚಿತ್ರಿಸಿರುವ ಹೋಮ್‌ ವಿಡಿಯೋ ಪ್ರದರ್ಶನ ಕಾರ್ಯಕ್ರಮದ ಇನ್ನೊಂದು ಭಾಗ.

ಶತಾಯುಷಿ ಎ.ಎನ್‌.ಮೂರ್ತಿರಾಯರು, ಎಲ್‌.ಜಿ . ಗುಂಡಪ್ಪನವರ ತಮ್ಮ ಮತ್ತಿಘಟ್ಟ ಕೃಷ್ಣಮೂರ್ತಿ ಹಾಗೂ ಎಲ್‌.ಜಿ. ಸಹೋದರಿಯರು ಜಾನಪದ ಲೋಕದಲ್ಲಿ ತಮ್ಮ ಸಹ ಪಯಣದ ಅನಿಸಿಕೆಗಳ ಜೊತೆಗೆ ನಾಡ ಪದಗಳ ಶ್ರೇಷ್ಠತೆಯನ್ನು ಕುರಿತು ಆಡಿರುವ ಮಾತುಗಳು ವಿಡಿಯೋದಲ್ಲಿ ಬಿಂಬಿತವಾದವು. ವಿಮಲಾ ಅವರ ಹಿರಿಯ ಸಹೋದರಿ ಕಮಲಾ ಮತ್ತು ಸಂಗಡಿಗರು ಹಾಡಿದ ಲಾವಣಿ ವಿಡಿಯೋದ ಹೈಲೈಟು.

ಭೂಮಿಕಾ ಪರವಾಗಿ ಅತಿಥಿಗಳಿಗೆ ಡಾ।। ವಿಜಯಾ ಮನೋಹರ್‌ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ಕೊಟ್ಟರು. ವಂದನಾರ್ಪಣೆಯ ನಂತರ ಲಘು ಉಪಹಾರ. ಉಪಹಾರದಲ್ಲಿ ನಂಚಿಕೊಂಡದ್ದೂ ಜಾನಪದವನ್ನೇ !

ಕಾಲದ ಪ್ರವಾಹದಲ್ಲಿ ಹಿಂದಿನದೆಲ್ಲವೂ ಕೊಚ್ಚಿ ಹೋದರೂ ಮುಗುಮ್ಮಾಗೇ ಇರಬೇಕೇ ಅಥವಾ ನಮ್ಮತನದ ಬೇರುಗಳ ಬೆದಕಬೇಕೆ ಎಂಬ ಪ್ರಶ್ನೆ ಕಾರ್ಯಕ್ರಮದ ನಂತರ ಗಾಢವಾಗಿ ಕಾಡತೊಡಗಿತು !

ಎಲ್‌ಜಿ ಸಹೋದರಿಯರು : ಒಂದು ಟಿಪ್ಪಣಿ

ಎಲ್‌ಜಿ ಸಹೋದರಿಯರು ಅಂದರೆ ಬೆಂಗಳೂರಲ್ಲಿ ‘ಗೊತ್ತು’ ಅನ್ನುವವರಿಗೆ ಕಡಿಮೆಯಿಲ್ಲ. ಪ್ರಖ್ಯಾತ ಕವಿಗಳು, ವಿದ್ವಾಂಸರು ಆದ ಎಲ್‌. ಜಿ. ಗುಂಡಪ್ಪ ಅವರ ಮಗಳು ವಿಮಲ. ವಿಮಲ ಅವರ ಅಕ್ಕ ಎಲ್‌.ಜಿ. ಸುಮಿತ್ರ ಮತ್ತು ತಂಗಿ ಎಲ್‌.ಜಿ. ಕಮಲ. ಮೂವರೂ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದವರೇ. ಸುಮಿತ್ರ ನವದೆಹಲಿಯಲ್ಲಿ (NCERT) ಕೆಲಸ ಮಾಡಿದರೆ, ಕಮಲ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು. ಆದರೆ, ನಾಡಪದಗಳ ಪರಿಣತೆ ವಿಮಲ ಆಕಾಶವಾಣಿಗೆ ರಾಜಿನಾಮೆ ಕೊಟ್ಟು ಅಮೆರಿಕಾಗೆ ಹೋದರು. ಹೆಚ್‌. ವೈ . ಶಾರದಾಪ್ರಸಾದ್‌ ಅವರ ತಮ್ಮ ಹೆಚ್‌.ವೈ. ರಾಜಗೋಪಾಲ್‌ ಅವರ ಕೈಹಿಡಿದರು. ವಿಮಲಾಗೆ ಇನ್ನಿಬ್ಬರು ತಂಗಿಯರು , ಎಲ್‌ಜಿ ವಾಸಂತಿ ( ಅಮೆರಿಕಾ) ಎಲ್‌ಜಿ ವೀಣಾ (ಬೆಂಗಳೂರು)

ನಾಡಪದಗಳ ಬಗ್ಗೆ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ವಿಮಲಾ ಅವರು ಗಾಯನ ಸಮಾಜದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಅದು ಬೆಂಗಳೂರಿನ ಜನರ ಮೆಚ್ಚುಗೆಯನ್ನೂ ಪಡೆದಿತ್ತು ! ಅಂದಹಾಗೆ, ವಿಮಲಾ ಅವರ ಪತಿ ರಾಜಗೋಪಾಲ್‌ ಕನ್ನಡವನ್ನ ಚೆನ್ನಾಗಿ ಬರೆಯುತ್ತಾರೆ . ಅವರು ದಟ್ಸ್‌ಕನ್ನಡ ಲೇಖಕ ಬಳಗದಲ್ಲಿ ಒಬ್ಬರು ಎನ್ನುವುದು ನಮ್ಮ ಹೆಮ್ಮೆ.- ಸಂ

ಇದನ್ನೂ ಓದಿ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more