ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನ್ನಡೆದಿರುವ ಕನ್ನಡ- ಭಾಗ 2

By Staff
|
Google Oneindia Kannada News

ನಮ್ಮ ಹಳ್ಳಿಯಲ್ಲಿ ನಮ್ಮ ತಾತನವರು ಒಂದು ಸಣ್ಣ ಲಂಗೋಟಿಯಂಥ ಭೂಮಿಯನ್ನು ನನಗೆ ಬಿಟ್ಟಿದ್ದರು. ಅದರ ಪತ್ರದ ವಿಷಯವಾಗಿ ರೆವಿನ್ಯೂ ಇಲಾಖೆಯ ಕಾರ್ಯಾಲಯದ ಗವಿಗಳಲ್ಲಿ ಅಡಗಿ ಕುಳಿತು ದೇಶ ಸೇವೆ ಮಾಡುತ್ತಿರುವ, ಅನೇಕ ಗುಮಾಸ್ತರುಗಳನ್ನು ನೋಡಬೇಕಾಯಿತು. ನನ್ನ ವಶದಲ್ಲಿದ್ದ ಪತ್ರಗಳನ್ನು ಹಿಡಿದುಕೊಂಡು ಬೆಳಗಾಗುತ್ತಲೇ ಆ ಆಫೀಸಿಗೆ ಹೋಗಿ ಮೊದಲನೆಯ ಗುಮಾಸ್ತರರ ಮುಂದಿದ್ದ ಕ್ಯೂನಲ್ಲಿ ನಿಂತುಕೊಂಡೆ. ನನ್ನ ಸರದಿ ಬರುವ ವೇಳೆಗೆ ನಮ್ಮ ಗುಮಾಸ್ತರು ತನ್ನ ಸಹ ಗುಮಾಸ್ತರ ಜೊತೆ ಕಾಫೀ ಕುಡಿಯುವುದಕ್ಕೆ ಹೊರಟು ಹೋದರು. ಅವರು ವಾಪಸ್ಸು ಬರುವುದು ಮುಕ್ಕಾಲು ಘಂಟೆಯಾಯಿತು. ಇದೇನೂ ಅನಿರೀಕ್ಷಿತವಲ್ಲ, ಇದು ಕರ್ಣಾಟಕ ರಾಜ್ಯವೆನ್ನುವುದನ್ನು ಮರೆತು ಬಿಟ್ಟಿರೇನು ಎಂದು ನನ್ನನ್ನು ಕೇಳಬೇಡಿ. ಮುಂದಾದ್ದನ್ನು ಹೇಳ್ತೀನಿ. ಸ್ವಲ್ಪ ತಡೀರಿ.

ಗುಮಾಸ್ತರು ಬಂದ ಮೇಲೆ ಅವರಿಗೆ ನನ್ನ ಅರ್ಜಿಯ ವಿಷಯ ಹೇಳಿ ಪತ್ರಗಳನ್ನು ತೋರಿಸಲು ಅವರ ಕಡೆಗೆ ನೀಡಿದೆ. ಅವರು ಅದರ ಕಡೆಗೆ ಕಡೆಗಣ್ಣು ಬೀರಿ, ಇವನ್ನು ನೋಂದಾಯಿಸಿಲ್ಲ. ನೋಂದಾಯಿಸಿಕೊಂಡು ಆಮೇಲೆ ಈ ಲೈನಿಗೆ ಬನ್ನಿ ಎಂದು ಆ ಪತ್ರಗಳನ್ನು ನನ್ನ ಕಡೆಗೆ ವಾಪಸು ಎಸೆದರು. ನನಗೆ ತಿಳಿಯದ ಈ ಅಪರಿಚಿತ ಶಬ್ದ ನನ್ನನ್ನು ತಬ್ಬಿಬ್ಬು ಮಾಡಿತು. ಗೋಂದು ಹಾಕಿಕೊಂಡು ಬರಬೇಕೇನೋ ಎಂದು ಗೋಂದಿನ ಬಾಟಲಿರುವಲ್ಲಿಗೆ ಹೋಗಿ ಆ ಪತ್ರಗಳ ಮೇಲಿನ ಎಡ ಮೂಲೆಗಳಿಗೆ ಗೋಂದಿನ ಸಣ್ಣ ಬೊಟ್ಟಿಟ್ಟು ಅಂಟಿಸಿಕೊಂಡು ಮತ್ತೆ ಆ ಗುಮಾಸ್ತನ ಲೈನಿನಲ್ಲಿ ಹೋಗಿ ನಿಂತುಕೊಂಡೆ.

ಮತ್ತೆ ನನ್ನ ಸರದಿ ಬರುವ ವೇಳೆಗೆ ಗುಮಾಸ್ತರ ಎರಡನೇ ಕಾಫಿ ಬ್ರೇಕ್‌ ಟೈಮ್‌ ಒದಗಿ ಬಂದಿತ್ತು. ಅವರು ಮತ್ತೆ ಬರುವ ವೇಳೆಗೆ ನನಗೆ ಹಸಿವು ಹತ್ತಿಕೊಂಡು ಲಂಚಿನ ನೆನಪಾಗಲು ತೊಡಗಿತು. ನನ್ನ ಪತ್ರಗಳನ್ನು ನೋಡಿ ಗುಮಾಸ್ತರು ಈ ಬಾರಿ ಸ್ವಲ್ಪ ತಾಳ್ಮೆ ಕಳೆದುಕೊಂಡರು. ನಿಮಗೇನು ಮಾತು ತಿಳಿಯುವುದೋ ಇಲ್ಲವೋ ಅನ್ನುವ ರೀತಿಯಲ್ಲಿ ನನ್ನ ಕಡೆ ನೋಡಿದರು. ‘ಇವನ್ನು ಇಲ್ಲಿಗೆ ತರುವ ಮೊದಲು ನೋಂದಾಯಿಸಬೇಕು. ಅಲ್ಲಿ ನೋಡಿ. ಆ ನೋಂದಣೋಪಗುಮಾಸ್ತರ ಲೈನಿಗೆ ಹೋಗಿ ನೋಂದಣಾ ಶುಲ್ಕವನ್ನು ಕೊಟ್ಟು ಸ್ಟಾಂಪು ಅಂಟಿಸಿ ರುಜುಹಾಕಿ ತಗೊಂಡು ಇಲ್ಲಿಗೆ ತನ್ನಿ’ ಎಂದು ಆ ಪತ್ರಗಳನ್ನು ನನ್ನ ಕಡೆಗೆ ಬಿಸಾಕಿದರು. ದಿಗ್ಭ್ರಮೆ ಹಿಡಿದಂತಾಗಿದ್ದ ನನ್ನನ್ನು ಕಂಡ ಒಬ್ಬ ಸ್ವಲ್ಪ ವಯಸ್ಸಾದವರು ‘ಸಾರ್‌, ನೋಂದಾಯಿಸೋದು ಅಂದರೆ ರಿಜಿಸ್ಟ್ರೇಷನ್‌ ಅಂತ ಸಾರ್‌. ಅದೇ ಅವನು ಅಸಿಸ್ಟೆಂಟ್‌ ರಿಜಿಸ್ಟ್ರೇಷನ್‌ ಕ್ಲರ್ಕ್‌. ಅಲ್ಲಿ ಹೋಗಿ. ಅವನು ಮಾಡಿ ಕೊಡ್ತಾನೆ’ ಎಂದು ಹೇಳಿ ಕೈ ಹಿಡಿದು ನನ್ನನ್ನು ಆ ಇನ್ನೊಂದು ಗುಮಾಸ್ತರ ಲೈನಿಗೆ ಕರೆದುಕೊಂಡು ಹೋಗಿ ನಿಲ್ಲಿಸಿದರು.

ಆಮೇಲಾದುದನ್ನು ನೀವು ಈಗಾಗಲೇ ಊಹಿಸಿಯೇ ಇದ್ದೀರಿ. ಆ ಲೈನಿನಲ್ಲಿ ನನ್ನ ಸರದಿ ಬರುವ ವೇಳೆಗೆ ಸರಿಯಾಗಿ ಲಂಚಿನ ಸಮಯವು ಸಂದಣಿಸಿತು. ಅವನು ಲಂಚಿಗೆಂದು ಎದ್ದು ಹೊರಟು ಹೋದ. ರೀ ರೀ ಎಂದು ಎಷ್ಟು ಅಂಗಲಾಚಿದರೂ ಅವನು ಕೇಳಿಸಿಕೊಳ್ಳಲೇ ಇಲ್ಲ. ಅವನು ವಾಪಸು ಬಂದು ನನ್ನ ಪತ್ರಗಳನ್ನು ನೋಂದಾಯಿಸಿ ಹಣ (ಮತ್ತು ಮಾಮೂಲಿ) ತೆಗೆದುಕೊಂಡು ಸ್ಟಾಂಪಿನ ಮೇಲೆ ರುಜು ಹಾಕಿಸಿಕೊಂಡು ಮೊದಲಿನ ಲೈನಿಗೆ ಬರುವ ವೇಳೆಗೆ ಮೂರು ಗಂಟೆ ಆಗಿ ಹೋಯಿತು. ಮೂರು ಗಂಟೆಯಾದ ಮೇಲೆ ಖಾತೆ ನಂಬರ್‌ ಕೆಲಸ ಮಾಡುವುದಿಲ್ಲವಾದ್ದರಿಂದ ಆ ಗುಮಾಸ್ತರ ಖಿಡಕಿ ಬಂದಾಗಿತ್ತು. ನಾಳೆ ಬಂದರೆ ಕೆಲಸ ಆಗಬಹುದೆಂದು ತಿಳಿಸಿದರು.

ಇಂತಹ ಸಂಗತಿ ಹೀಗೆ ವಿಶದವಾಗಿ ವರ್ಣಿಸುವಷ್ಟು ಅಪರೂಪದ್ದೇನೂ ಅಲ್ಲ. ಹೌದು, ಸರ್ವ ಸಾಧಾರಣ. ರಾಜಕಾರ್ಯದಲ್ಲಿ ತೊಡಗಿರುವ ಗುಮಾಸ್ತರು ಕರುಣೆಯಿಂದ ನಮ್ಮ ಇಂತಹ ಕೆಲಸಗಳನ್ನು ಮಾಡಿಕೊಡುವುದೇ ಒಂದು ಉಪಕಾರ. ಅದು ನಮ್ಮ ಅವಸರಕ್ಕೆ ಆಗಬೇಕೆಂದು ಆಗ್ರಹ ಮಾಡುವುದು ಎಂತಹ ಗರ್ವ! ಛೆ. ನನಗೆ ಮುನ್ನಡ ಭಾಷೆ ತಿಳಿದಿದ್ದರೆ ಆವತ್ತು ನನ್ನ ಕೆಲಸ ಆಗುತ್ತಿತ್ತೇನೋ ಎಂದು ಅಂದಿನಿಂದ ಮುನ್ನಡವನ್ನು ಗಮನವಿಟ್ಟು ಕಲಿಯಲು ತೊಡಗಿದೆ. ಅದರಲ್ಲಿ ನನಗೆ ಆಶ್ಚರ್ಯವಾದ ಸಂಗತಿಗಳು ಕಾಣತೊಡಗಿದವು.

ಉದಾಹರಣೆಗೆ, ನೋಂದಣೋಪಗುಮಾಸ್ತ ಅನ್ನುವ ಪದದ ವೈಖರಿ ನೋಡಿ. ಈ ಪದದ ಜೋಡಣೆಯಲ್ಲಿ ಕಂಡು ಬರುವ ಪಾಂಡಿತ್ಯ ನಿಜವಾಗಿಯೂ ಅಸಾಧಾರಣ ದರ್ಜೆಯದು. ಈಗ ಅದರ ಪದ ವಿಭಾಗದಲ್ಲಿ ತೊಡಗುತ್ತೇನೆ. ಇದು ನೋಂದಣಿ ಮತ್ತು ಉಪ ಗುಮಾಸ್ತ ಎಂಬ ಎರಡು ಪದಗಳ ಷಷ್ಠೀ ತತ್ಪುರುಷ ಸಮಾಸದಿಂದ ಬಂದಿರುವ ಪದ. ನೋಂದಣಿ ಎನ್ನುವ ಪದ ಎಲ್ಲಿಂದ ಬಂದಿದೆ, ಅದು ಹೇಗೆ ಹುಟ್ಟಿಕೊಂಡಿತು ಎಂದು ಬಹಳ ಯೋಚಿಸಿ ವಿಫಲನಾಗಿ ಕೈ ಬಿಟ್ಟಿದ್ದೇನೆ. ಇದು ಇತ್ತೀಚೆಗೆ ಮರಾಠಿ ಭಾಷೆಯಿಂದ ಕನ್ನಡಕ್ಕೆ ಗಡಿ ದಾಟಿಕೊಂಡು ಬಂದಿರುವ ಪದದಂತೆ ನನಗನ್ನಿಸುತ್ತದೆ. ಇದರ ಧಾತು ರೂಪವೇನಿರಬಹುದು? ನೋಂದಾಯಿಸು ಅನ್ನುವುದು ಅದರ ಕಾರಕ ರೂಪ. ಅದೊಂದೇ ರೂಪದಲ್ಲಿ ಇದು ಚಲಾವಣೆಯಲ್ಲಿರುವ ಹಾಗೆ ಕಾಣುತ್ತೆ. ಸಂಸ್ಕೃತವಲ್ಲದ ನೋಂದಣೆಯನ್ನು ತತ್ಪುರುಷ ಸಮಾಸಕ್ಕೆ ಹೇಗೆ ಕಟ್ಟುವುದು? ಅದು ಮುನ್ನಡ ಭಾಷೆಯ ಒಂದು ಅತಿ ಮುಖ್ಯವಾದ ನಿಯಮವೊಂದರಿಂದ ಸಾಧ್ಯವಾಗುತ್ತದೆ. ಈ ನಿಯಮವನ್ನು ಮುಂದೆ ಇನ್ನೂ ಚೆನ್ನಾಗಿ ವಿಶದ ಪಡಿಸುತ್ತೇನೆ. ಈ ನಿಯಮದ ಪ್ರಕಾರ ನೋಂದಣೆ ನೋಂದಣಾ ಎಂದಾಗುತ್ತದೆ. ಇದು ನನಗೆ ತಿಳಿಯದೂಂತ ಹೇಳಿದೆನಲ್ಲಾ, ಆ ಧಾತುವಿನ ತದ್ಧಿತ ರೂಪ. ಈ ಪದದ ಆಕಾರಾಂತವು ಅದರ ಮುಂದಿನ ‘ಉಪ’ ಪದದ ಉ- ಕಾರಾದಿಯಾಂದಿಗೆ ಸೇರಿ ಗುಣ ಸಂಧಿಯಾಗಿ, ನೋಂದಣೋಪ ಎಂದಾಗುತ್ತದೆ. ಇದು ಅದ್ಭುತ ಪಾಂಡಿತ್ಯವಲ್ಲವೆ?

ಆಹಾ ! ಉಪಗುಮಾಸ್ತ ಅನ್ನುವುದು ಎಂತಹ ಘನವಾದ ಪದ ! ಅದಿರಲಿ. ಗುಮಾಸ್ತ ಅನ್ನುವುದೇ ಬಹಳ ಸ್ವಾರಸ್ಯದ ಪದ. ಈ ಫಾರಸೀ ಪದ ನಮ್ಮ ದೇಶಕ್ಕೆ ಮುಘಲರ ಕಾಲದಲ್ಲಿ ಪ್ರವೇಶಿಸಿತೂಂತ ಕಾಣುತ್ತೆ. ಅದು ಕನ್ನಡಕ್ಕೆ ಟೀಪೂ ಸುಲ್ತಾನನ ಕಾಲದಲ್ಲಿ ಬಂದಿತೇನೋ. ಅದರ ಅರ್ಥ ‘ಅಡಗಿ ಕುಳಿತಿರುವವನು’ ಎಂದು. ಆಫೀಸುಗಳ ಕತ್ತಲು ಕೋಣೆಗಳಲ್ಲಿ, ಕಡತಗಳ ರಾಶಿಗಳಲ್ಲಿ, ಕುರ್ಚಿ ಮೇಜುಗಳ ನಡುವೆ, ಅನಾಮಿಕರಾಗಿ ಕೆಲಸ ಮಾಡುವವರಿಗೆ ಇದು ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ. ಅಂತಹವನೊಬ್ಬನ ಕೈಕೆಳಗೆ ಇರುವವನಿಗೆ ಉಪ ಅನ್ನುವ ಘನತೆಯಿಂದ ಕೂಡಿದ ಸಂಸ್ಕೃತದ ಪ್ರತ್ಯಯವನ್ನು ಸೇರಿಸಿ, ಈ ಹೆಸರು ಕೊಟ್ಟು, ತಮ್ಮ ಔದಾರ್ಯವನ್ನು ತೋರಿದ್ದಾರೆ. ಈ ಪದಗಳನ್ನು ಕಟ್ಟಿದವರು ಎಂತಹ ಒಳ್ಳೆಯವರು, ನೀವೇ ನೋಡಿ.

ಮುನ್ನಡದಲ್ಲಿ ಅರಿ ಸಮಾಸಕ್ಕೆ ಯಾವ ವಿಧವಾದ ಕೀಳರಿಮೆಯೂ ಇಲ್ಲದೇ ಅದು ಒಂದು ಬಗೆಯ ಸೊಕ್ಕಿನಿಂದಲೇ ಮೆರೆಯುತ್ತದೆ. ಮೇಲಿನ ಉದಾಹರಣೆಯನ್ನು ಅರಿ- ಸಮಾಸವೆಂದೇಕೆ, ಮಹಾರಿಸಮಾಸ ಅಥವಾ ಪರಮಾರಿಸಮಾಸವೆಂದು ಕರೆಯಬಹುದು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕನ್ನಡವು ಯಾವ ಭಾಷೆಗೂ ಜಾತಿ ಭೇದ ಮಾಡುವಂತಿಲ್ಲ. ಈಗಿನ ಕಾಲದಲ್ಲಿ ಎಲ್ಲಾ ಜಾತಿಯವರೂ ಬಸ್ಸಿನಲ್ಲಾಗಲಿ ಹೋಟೆಲಿನಲ್ಲಾಗಲಿ ಅಕ್ಕಪಕ್ಕದಲ್ಲೇ ಮೈಯುಜ್ಜಿಕೊಂಡು ಕುಳಿತುಕೊಳ್ಳುವುದಿಲ್ಲವೆ? ಹಾಗೆ. ಈ ಮುಕ್ತ ಮನೋಭಾವ ದೇಶಕ್ಕೆ ಹೇಗೋ ಭಾಷೆಗೂ ಹಾಗೆಯೇ ತುಂಬಾ ಶಕ್ತಿದಾಯಕವಾದುದು. ಇದರಿಂದ ಬಲಶಾಲಿಯಾದ ಪದಗಳನ್ನು ಕಟ್ಟಬಹುದು.

ಈಗ ಎ-ಆ ನಿಯಮವನ್ನು ವಿವರಿಸುತ್ತೇನೆ. ಸಂಸ್ಕೃತದಲ್ಲಿ ಆ-ಕಾರಾಂತ ಸ್ತ್ರೀಲಿಂಗದ ಅನೇಕ ಪದಗಳು ಕನ್ನಡಕ್ಕೆ ಬಂದಾಗ ಅವುಗಳ ಆ-ಕಾರಾಂತವು ಎ-ಕಾರಾಂತವಾಗಿ ಪರಿಣಮಿಸುತ್ತವೆ. ಸೀತಾ ಸೀತೆಯಾಗುತ್ತದೆ. ಭಾಷಾ ಭಾಷೆಯಾಗುತ್ತದೆ. ಹಾಗೆ. ಈ ನಿಯಮವನ್ನು ಹಿಂತಿರುಗಿಸಿದರೆ, ಎ-ಕಾರಾಂತವಾದೊಂದು ಕನ್ನಡ ಪದವನ್ನು ಆ-ಕಾರಾಂತದ ಸಂಸ್ಕೃತ ಪದವಾಗಿ ಮಾಡಿ ಬಿಡಬಹುದು. ಇದೇ ಮುನ್ನಡದ ಎ-ಆ ನಿಯಮ. ಅನೇಕ ಉದಾಹರಣೆಗಳನ್ನು ಕೊಡಬಹುದು. ಈ ಕೆಳಗಿನ ಪಟ್ಟಿಯನ್ನು ನೋಡಿ.

ಕನ್ನಡ ಸಂಸ್ಕೃತ
ನೋಂದಾವಣೆ ನೋಂದಾವಣಾ
ಚುನಾವಣೆ ಚುನಾವಣಾ
ಕೈಗಾರಿಕೆ PæÇWÝÄPÝ
ಗ್ರಾಮಸಾರಿಕೆ ಗ್ರಾಮಸಾರಿಕಾ
ಮನ್ನಣೆ ಮನ್ನಣಾ

ಉದಾಹರಣಾ ಸಲುವಾಗಿ, ಈ ವಾಕ್ಯವನ್ನು ಗಮನಿಸಿ. ಗ್ರಾಮಸಾರಿಕಾ ನಿರ್ದೇಶಿಕರಾದ ಬಸವೇಗೌಡರು ಕೈಗಾರಿಕಾಸಚಿವರಾಗಲು ಚುನಾವಣಾಚಳುವಳಿಗಳಲ್ಲಿ ನಿರತರಾಗಿ ತಮ್ಮ ಕೆಲಸವನ್ನೇ ಕೈ ಬಿಟ್ಟು ದುಡಿದರು. ಅವರು ಗೆದ್ದ ಮೇಲೆ ಅವರನ್ನು ಮನ್ನಣಾ ಮಹಾಸಭೆಯಾಂದರಲ್ಲಿ ಅವರ ತ್ಯಾಗಬುದ್ಧಿಯನ್ನು ಹೊಗಳಿ ಅಭಿನಂದಿಸಲಾಯಿತು. ಇದರಲ್ಲಿ ಎ-ಆ ನಿಯಮವನ್ನು ನಮ್ಮ ಬಾತ್ಮೀದಾರರು ಕುಶಲತೆಯಿಂದ ಹೇಗೆ ಉಪಯೋಗಿಸಿಕೊಳ್ಳುತ್ತಾರೆಂದು ಕಾಣಬಹುದು.

ನೋಂದಣೆಯ ಹಾಗೆಯೇ ಇನ್ನೂ ಹಲವು ಹೊಸ ಪದಗಳು ನಮ್ಮ ಭಾಷಾಜ್ಞಾನವನ್ನು ಪರೀಕ್ಷಿಸುತ್ತವೆ. ರಿಕಾರ್ಡ್‌ಗೆ ದಾಖಲೆ, ಡೇಟಾಗೆ ಮಾಹಿತಿ, ಪ್ರೋಗ್ರಾಂಗೆ ಕಾರ್ಯಕ್ರಮ, ಅದನ್ನು ಕಲಾವಿದರು ನೋಡುವುದು, ಸಭಿಕರು ಪ್ರತಿಕ್ರಿಯಿಸುವುದು, ಇವೆಲ್ಲಾ ಇಂಗ್ಲಿಷ್‌ ಪದಗುಚ್ಛಗಳ ಸ್ಥಾನದಲ್ಲಿ ಬಳಕೆಗೆ ಬಂದಿವೆ. ಇವುಗಳಲ್ಲಿ ಮಾಹಿತಿ ಅತಿ ನವೀನ. ಅದರ ವ್ಯುತ್ಪತ್ತಿ ಹೇಗೆ, ಯಾವ ಭಾಷೆಯಿಂದ ಬಂದಿದೆ, ಸಂಸ್ಕೃತ ‘ಸಮಾಹಿತ’ ಏನಾದರೂ ಈ ರೂಪ ತಾಳಿದೆಯೋ ಎಂದು ತುಂಬಾ ಚಿಂತಿಸಿ ವಿಫಲನಾಗಿದ್ದೇನೆ. ಮರಾಠಿಯಿಂದ ಬಂದ ಪದವಾಗಿರಬಹುದು ಎಂದು ಒಂದು ಕುರುಡು ಊಹೆ. ಇಂತಹ ಅಣಿಮುತ್ತುಗಳು ನೀಲಾಕಾಶದಿಂದ ಧುಮುಕಿ ಯಾರ ಚಿತ್ತವನ್ನೋ ಹೊಕ್ಕು ಒಂದು ಇಡೀ ಭಾಷೆಯನ್ನೇ ಆಕ್ರಮಿಸಿಕೊಳ್ಳುತ್ತವೆ. ಇವು ಭಾಷಾ ಶಾಸ್ತ್ರಜ್ಞರಿಗೆ ಒಳ್ಳೆಯ ರಸಗವಳ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X