ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳಗನ್ನಡ, ಹೊಸಗನ್ನಡದಿಂದ ‘ಮುನ್ನಡೆ’ದಿರುವಕನ್ನಡದ ಬಗ್ಗೆ

By Super Admin
|
Google Oneindia Kannada News

*ಡಾ.ಎಚ್‌.ವಿ.ರಂಗಾಚಾರ್‌, ನ್ಯೂಜೆರ್ಸಿ

ಅಮೆರಿಕಾದಲ್ಲಿ ವಲಸೆಯಾಗಿರುವ ಕನ್ನಡಿಗರಿಗೆ 'ಕಂಡಾ" ಬರೋಲ್ಲ ಅನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅವರಿಗೆ ಇಲ್ಲಿಗೆ ಬರುವ ಮೊದಲು ಅದು ಬರುತ್ತಿತ್ತೇ ಎಂದು ಕೇಳಿದರೆ ಇತ್ತು ಎಂದು ಕೆಲವರೂ, ಇಲ್ಲ ಎಂದು ಹಲವರೂ ವಾದಿಸುತ್ತಾರೆ. ಇಂತಹ ವಾದಗಳಲ್ಲಿ ಅಭಿರುಚಿಯಿಲ್ಲದವರು ಜೈನ ದಾರ್ಶನಿಕರು ತೋರಿದ ದಾರಿಯನ್ನು ಹಿಡಿದು 'ಇದ್ದಿರಬಹುದು" ಎಂದು ತಪ್ಪಿಸಿಕೊಳ್ಳುತ್ತಾರೆ. ಅಲ್ಲಿಗೆ ಹೋಗಿ ವಾಸಿಸುತ್ತಿರುವ ಜನ ಇಂಜಿನೀರುಗಳು, ಡಾಕ್ಟ್ರುಗಳು, ಅಂಗ್ಡಿ ಮಾಲೀಕರು. ಅಂತಹವರಿಗೆ ಯಾವ ಭಾಷೆಯೂ ಬರದು ಎಂದು ಅನೇಕ ತಿಳಿದವರ ಅಭಿಪ್ರಾಯ.

ನಾನೂ ಅಮೆರಿಕಾದಲ್ಲಿ ವಲಸೆಯಾಗಿರುವಂತಹವನೊಬ್ಬ. ಆದರೆ ನನ್ನ ತಪ್ಪೇನೆಂದರೆ ನನಗೆ 'ಕಂಡಾ" ಬರುತ್ತದೆಂದು ತಿಳಿದುಕೊಂಡಿರುವುದು. ನನ್ನ ಹಿತೈಷಿಗಳು ಸತ್ಯಾಂಶವನ್ನು ನನಗೆ ಬಹಳ ತಾಳ್ಮೆಯಿಂದ ವಿಧವಿಧವಾಗಿ ವಿವರಿಸಿದರೂ ಅವರ ಮಾತುಗಳನ್ನು ನಾನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ . ಆದರೆ ಈಗ ಮಂದಟ್ಟಾಗಿದೆ. ಏಕೆಂದರೆ, ಈ ವರ್ಷದ ಟ್ರಿಪ್ಪಿನಲ್ಲಿ ಪ್ರಜಾವಾಣಿ ಮುಂತಾದ ಪತ್ರಿಕೆಗಳನ್ನು ಓದಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅದರಿಂದ ನನಗೆ ಭಾಷೆ ತಿಳಿಯದು ಎಂದು ಜ್ಞಾನೋದಯವಾಯಿತು.

ನಾನು ಚಿಕ್ಕಂದಿನಲ್ಲಿ , ನಮ್ಮ ಹಳ್ಳಿಯ ಪಾಠಶಾಲೆಯಲ್ಲಿ ನಮ್ಮ ಕನ್ನಡ ಪಂಡಿತರ ಕೈಯಲ್ಲಿ ಕನ್ನಡ ಕಲಿತದ್ದು . ಆ ಪಂಡಿತರು ನಮ್ಮ ಕುಗ್ರಾಮದಲ್ಲಿ ನೆಲೆಸಿದ್ದರೂ ಒಳ್ಳೆಯ ವಿದ್ವಾಂಸರಾಗಿದ್ದರು. ಕನ್ನಡದ ಮಹಾಕವಿಗಳ ಕಾವ್ಯಗಳ ಪರಿಚಯ ಮಾಡಿಸಿ, ಕೇಶಿರಾಜನ ವ್ಯಾಕರಣಕ್ಕಿಂತ ತುಂಬಾ ಈಚೆಯದಲ್ಲದ ವ್ಯಾಕರಣವೊಂದನ್ನಿಟ್ಟುಕೊಂಡು ಪಾಠ ಮಾಡುತ್ತಿದ್ದರು. ಅದೇ ನಮ್ಮ ಪ್ರಾಬ್ಲಮ್ಮು . ಆ ಭಾಷೆ ನಮ್ಮ ಬ್ರೇನಿನಲ್ಲಿ ಮುದ್ರಿತವಾಗಿಬಿಟ್ಟಿದೆ. ಆದೇಶ ಸಂಧಿ, ಅರಿ ಸಮಾಸ, ತತ್ಸಮ- ತದ್ಭವಗಳು, ಮುಂತಾದ ಅನವಶ್ಯಕ ಅವಶೇಷಗಳ ಹೊರೆ ಹೊತ್ತುಕೊಂಡು ಇಲ್ಲಿಗೆ ಬಂದಿದ್ದೇವೆ. ಅದರಿಂದ ನಮಗೆ ಕನ್ನಡ ಚೆನ್ನಾಗಿ ಬರುತ್ತೆ ಎಂಬ ಹುಸಿ ಹೆಮ್ಮೆಯಿಂದ ತಿರುಗಾಡುತ್ತಿದ್ದೇವೆ. ನಾವು ಆಗ ಕಲಿತ ಕನ್ನಡಕ್ಕೂ, ಈಗ ಜನಸಾಮಾನ್ಯರು ಪ್ರತಿದಿನವೂ ಬೆಳಗಿನ ಕಾಫಿಯ ಜತೆಗೆ ಓದುವ ವೃತ್ತಪತ್ರಿಕೆಗಳ ಸುದ್ದಿಗಾರರು ಬಳಸುವ ಅಥವಾ ಕೇಳುವ ಭಾಷಣಗಳಲ್ಲಿ ರಾಜಕಾರಣಿಗಳು ಬಳಸುವ ಕನ್ನಡಕ್ಕೂ , ಬಹಳ ವ್ಯತ್ಯಾಸಗಳಿವೆಯೆಂದು ಬೇರೆ ಹೇಳಬೇಕಾಗಿಲ್ಲ . ಆದರೆ ಈಗಿನ ಸಾಹಿತ್ಯವೆನಿಸಿಕೊಳ್ಳುವ ಬರಹಗಳಲ್ಲಿರುವ ಭಾಷೆಯೂ ನನಗೆ ಅರ್ಥವಾಗದ ಸಂದರ್ಭ ಸನ್ನಿವೇಶಗಳು ಬಹಳ ಬಂದಿವೆ.

ಜೀವಿಗಳು ಹೇಗೆ ವಿಕಾಸಗೊಂಡು, ಒಂದು ಪ್ರಾಣಿಯು ಇನ್ನೊಂದು ಬೇರೆ ಪ್ರಾಣಿಯೇ ಆಗಿಬಿಡುವುದೋ, ಭಾಷೆಗಳ ಪಾಡೂ ಹಾಗೆಯೇ. ಕನ್ನಡಭಾಷೆಯೂ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ಮುಂತಾದ ಪರಿವರ್ತನೆಗಳನ್ನು ತಳೆದು ಈಗ ಹೊಸಾಹೊಸ ಕನ್ನಡವಾಗಿದೆ. ಈ ಕನ್ನಡಕ್ಕೆ ನಾನು 'ಮುನ್ನಡ" ಅಂದರೆ 'ಮುಂದುವರೆದ ಕನ್ನಡ" ಎಂದು ಹೆಸರಿಟ್ಟಿದ್ದೇನೆ. ಇಂತಹ ಪ್ರಯೋಗಗಳಿಗೆ ಆಗಲೇ ಸಾಕಷ್ಟು ಆಧಾರಗಳಿವೆ. ಉದಾಹರಣೆಗೆ 'ಅಮೇರಿಕದ ಕನ್ನಡ" ಅನ್ನುವುದು 'ಅಮೇರಿಕನ್ನಡ" ಎಂದು. 'ಕಲೋಪ" ಸಂಧಿಯುಳ್ಳ ಸಮಾಸಪದವನ್ನು ಕೊಡುತ್ತೇನೆ.

ನಮ್ಮ ಭಾಷೆ ಹೀಗೆ ನಮಗೇ ಅರ್ಥವಾಗದಂತೆ ಗಾಡಿ ಮತ್ತು ಲಗಾಮುಗಳನ್ನು ಕಳಚಿಕೊಂಡು ಅತಿ ವೇಗದಿಂದ ಓಡುತ್ತಿರುವ ಕುದುರೆಯಂತಾಗಿರುವುದು ನನ್ನಂತಹ ಹಳೆಯ ತಲೆಗಳಿಗೆ ವ್ಯಾಕುಲ ತರುತ್ತಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಅದರಲ್ಲೂ ಕರ್ಣಾಟಕವು ಒಂದುಗೂಡಿ ಒಂದು ರಾಷ್ಟ್ರವಾದ ಮೇಲೆ, ಕನ್ನಡದಲ್ಲಿ ಬಹಳ ಮಾರ್ಪಾಡುಗಳು ಆಗಲೇ ಬೇಕಾದವು. ಆಗಿವೆ. ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರಚಲಿತವಾಗಿದ್ದ ಅಪರಿಚಿತ ಪದಗಳು ಈಗ ಎಲ್ಲೆಲ್ಲೂ ಸರ್ವ ಸಾಧಾರಣವಾಗಿವೆ. ಧಾರವಾಡದಲ್ಲಿ ನಮ್ಮ ಒಬ್ಬ ಪರಿಚಿತರ ಮನೆಯ ಅಟ್ಟದ ಮೇಲೆ ಚಹಾ ಕುಡಿಯುತ್ತಾ ಈ ವಿಷಯವಾಗಿ ಚರ್ಚೆ ಮಾಡುವಾಗೊಮ್ಮೆ ಅವರು 'ನಿಮ್ಮಾತ್‌ ಭಾಳಾ ಖರೇವ್ರೀ. ಅಂಥಾ ಮಾತ್‌ ಅಗದೀ ಇದ್ದಾವ್ರಾ. ಅದರ್ಕಾಳಜೀ ಈಗ್ಬ್ಯಾಡ್ರೀ" ಎಂದು ಮಾತನ್ನು ಬೇರೆ ಕಡೆಗೆ ತಿರುಗಿಸಿದರು. ಹಾಗೇ ನಾವು ಮಾತುಕತೆ ಮುಂದುವರಿಸುತ್ತಲೇ ಹೋದಾಗ ಅಚಾನಕ್‌ ಗರ್ದಿಯಾಯಿತು. ಯಾರೂ ಮುದ್ದೆಗೆ ಇನ್ನೂ ಬಂದೇ ಇರಲಿಲ್ಲ .

ಸೆಕ್ಯುಲರಿಸಮ್‌ ಪ್ರಭಾವದಿಂದ ಅನೇಕ ಮುಸ್ಲಿಮ್‌ ಪದಗಳು ಸಖತ್ತಾಗಿ ಬಳಕೆಗೆ ಬರುತ್ತಿವೆ. ಹೈದರ್‌ ಆಲೀ ಮತ್ತು ಟಿಪೂ ಸುಲ್ತಾನರ ಕಾಲದಿಂದೀಚೆಗೆ ಈ ಕಾಲದಲ್ಲೇ ಹೀಗಾಗಿರುವುದು. ಅದಕ್ಕೆ ಹಿಂದೆ ಬ್ರಾಹ್ಮನೀ ರಾಜ್ಯದ ಕಾಲದ ಪ್ರಭಾವವನ್ನೂ ಸೇರಿಸಿಕೊಳ್ಳಬೇಕು. ಜಮಾನಾ ಬದಲಾಯಿಸಿದೆ. ಅಷ್ಟೇ ಅಲ್ಲ . ಈಗ ಕನ್ನಡ ಸರ್ಕಾರೀ ಭಾಷೆಯಾಗಿರುವುದರಿಂದ, ಹಿಂದೆ ಆಡಳಿತಕ್ಕೆ ಬೇಕಾಗಿದ್ದ ಇಂಗ್ಲಿಷ್‌ ಪದಗಳಿಗೆ ಸಮನಾದ ದೇಶೀಪದಗಳು ಬಳಕೆಗೆ ಬಂದಿವೆ. ಈ ಕ್ಷೇತ್ರದಲ್ಲಂತೂ ಬಹಳ ತಬ್ಬಿಬ್ಬಾಗುವಂತಹ ಪದಗಳು ರೂಢಿಗೆ ಬಂದಿವೆ. ಆಮೇಲೆ ಪತ್ರಿಕೋದ್ಯಮಿಗಳ ಕನ್ನಡವೊಂದು ಹೊಸದಾಗಿ ಹುಟ್ಟಿಕೊಂಡಿದೆ. ಅದರ ಬಳಕೆಗಾರರು ತಂತಿಯ ಮೇಲೆ ಇಂಗ್ಲಿಷ್‌ ಭಾಷೆಯಲ್ಲಿ ಬರುತ್ತಿರುವ ಬಿಸಿ ಸುದ್ದಿಗಳನ್ನು, ಅವು ಬರುತ್ತಿರುವ ಹಾಗೇ ಕನ್ನಡಕ್ಕೆ ಭಾಷಾಂತರಿಸಿ, ಬಿಸಿಯಾಗಿ ಅಚ್ಚಿಗೆ ಕಳುಹಿಸುತ್ತಾರಂತೆ. ಇದರಿಂದ ಅವರಿಗೆ ಅವು ಅರ್ಥವಾಗುವುದಕ್ಕೆ ಮುಂಚೆಯೇ ತರ್ಜುಮೆ ನಡೆಯುವುದು ಸಹಜ. ಅವರ ಭಾಷೆಯ ಒಂದು ವೈಶಿಷ್ಟ್ಯವೇನೆಂದರೆ, ವಾಕ್ಯಗಳು ಕನಿಷ್ಠಪಕ್ಷ ಎರಡು ಮೂರು ದೊಡ್ಡ ದೊಡ್ಡ ಕ್ಲಾಸುಗಳನ್ನೊಳಗೊಂಡು ಉದ್ದವಾಗಿರುತ್ತವೆ. ನಡುನಡುವೆ ಹಲವು ನೆಗೆಟಿವ್‌ಗಳಿರುತ್ತವೆ. ಒಟ್ಟಿನಲ್ಲಿ ಎಲ್ಲಾ ಪದಗಳೂ ಅರ್ಥವಾಗುತ್ತವೆ. ಆದರೆ ವಾಕ್ಯದ ಅರ್ಥ ತಿಳಿಯುವುದಿಲ್ಲ. ಒಂದು ಬಗೆಯ ಮಿಸ್ಟೆರಿ, ಭಯ ಸುತ್ತಿಕೊಂಡಿರುತ್ತದೆ. ಮತ್ತೆ ಮತ್ತೆ ಓದಿ ನಿರಾಶರಾಗಿ ಮುಂದಕ್ಕೆ ಹೋಗಬೇಕಾಗುತ್ತದೆ.

ಕಡೆಯದಾಗಿ ಇದು ಜಾತಿ ನಿರ್ಮೂಲನದ ಕಾಲ. ಅದರ ಫಲವಾಗಿ ಈಗ ಕನ್ನಡ ಭಾಷೆಯನ್ನು ಹಲವಾರು ಭಾಗಗಳನ್ನಾಗಿ ಒಡೆದು ಪ್ರತಿಯಾಂದು ಜಾತಿಯವರೂ ತಮ್ಮದೇ ಆದ ಒಂದು ಕನ್ನಡವನ್ನು ಸೃಜಿಸಿಕೊಂಡಿದ್ದಾರೆ. ಹೀಗೆ ಒಂದು ಭಾಷೆಯಾಗಿದ್ದ ಕನ್ನಡವು ಹಲವಾಗಿ ಒಡೆದಿರುವುದು, ಗಿಡವು ಬೆಳೆದಾಗ ಕೊಂಬೆಗಳನ್ನು ಬೆಳೆಸಿಕೊಳ್ಳುವಂತೆ, ಅದರ ಬೆಳವಣಿಗೆಯ ಗುರುತೆಂದು ಕೆಲವರು ಗಣಿಸುತ್ತಾರೆ. ಇದರಲ್ಲಿ ಒಂದು ವಿಧವಾದ ಅನುಕೂಲವಿದೆ. ಪ್ರತಿ ಜಾತಿ, ಪಂಗಡ, ಒಳಪಂಗಡ, ಇವುಗಳೆಲ್ಲಾ ತಂತಮ್ಮ ಬರವಣಿಗೆ, 'ಸಾಹಿತ್ಯ", ಅಥವಾ ಬೇರೆ ಭಾಷೆಯನ್ನೇ ಮಾಡಿಕೊಂಡು ಬಿಟ್ಟರೆ ತುಂಬಾ ಸುಖವೇ ಅಲ್ಲವೆ? ನನಗೇನೋ ಇನ್ನೊಬ್ಬರ ಬರಹಗಳನ್ನು ಓದುವುದು ಕಷ್ಟದ ಕೆಲಸ. ನನ್ನಲ್ಲೇ ಇಷ್ಟೊಂದು ಒಳ್ಳೆಯ ಐಡಿಯಾಗಳು ತುಂಬಿಕೊಂಡು ಜಾಗವೇ ಇಲ್ಲದಿರುವಾಗ ಇನ್ನೊಬ್ಬರ ಐಡಿಯಾಗಳನ್ನು ಓದಿ ಎಲ್ಲಿ ತುರುಕುವುದು? ಪ್ರತಿ ಪಂಗಡಕ್ಕೂ ಪ್ರತ್ಯೇಕ ಭಾಷೆಯಿದ್ದರೆ ಯಾರಾದರೂ ಇಂತಹವರ, (ಫಲಾನಾ ಅಯ್ಯಂಗಾರ್‌ ರದು ಅಂತ ಇಟ್ಟುಕೊಳ್ಳಿ) ಹೊಸ ಪುಸ್ತಕ ಓದಿದಿರಾ ಎಂದು ಕೇಳಿದರೆ, ನಾವು ಆ ಜಾತಿಯವರು ಬರೆದಿದ್ದನ್ನು ಓದುವುದಿಲ್ಲ ಎಂದು ಯಾವ ವಿಧವಾದ ಅಳುಕು ಭಾವನೆಗಳೂ ಇಲ್ಲದೆಯೇ ಹೇಳಿಬಿಡಬಹುದು. ಆದರೂ ನಮಗೆ ಬೇರೆ ಜಾತಿಯವರ ಬರಹಗಳನ್ನು ಟೀಕಿಸುವ ಹಕ್ಕು ಇದ್ದೇ ಇರುತ್ತದೆ. ಏನೂ ಭಯ ಪಡಬೇಕಾಗಿಲ್ಲ. ಏಕೆಂದರೆ ಒಂದು ಕೃತಿಯನ್ನು ಟೀಕಿಸುವುದಕ್ಕೆ ಅದನ್ನು ಓದಿರಲೇಬೇಕೆಂಬ ನಿಯಮವೇನಿಲ್ಲ. ಯಾರಾದರೂ ಒಂದಿಬ್ಬರು, ಬೇರೆ ಕೆಲಸವಿಲ್ಲದೇ ಇರುವವರು, ಓದಿದರೆ ಸಾಕು... ನಾವೆಲ್ಲಾ, ನಮ್ಮ ಜಾತಿ ಬಾಂಧವರೆಲ್ಲಾ, ಸೇರಿಕೊಂಡು ಟೀಕಿಸಬಹುದು.. ಓದುವುದು ಬೋರು ಕೆಲಸ. ಟೀಕಿಸುವುದಾದರೆ ಸೃಜನಶೀಲವಾದುದು.

ಹೀಗೆ ಸಹಸ್ರ ಶೀರ್ಷಾ- ಮುಖಗಳಿಂದ ಹರಿಯುತ್ತಿರುವ ಕನ್ನಡದ ಪ್ರಗತಿಯನ್ನು ಅಮೇರಿಕಾದಲ್ಲಿ ಆಫೀಸಿನ ನಾಲ್ಕು ಗೋಡೆಗಳ ಆವರಣಗಳಲ್ಲಿ ಫ್ಲೂರೆಸ್ಸೆಂಟ್‌ ಲೈಟ್‌ಗಳ ಕೆಳಗೆ ಎಚ್ಚರದ ಘಳಿಗೆಗಳನ್ನೆಲ್ಲಾ ಕಳೆಯುವ ನಮಗೆ ಹೇಗೆ ತಿಳಿದುಕೊಳ್ಳಲು ಸಾಧ್ಯ. ನಾನೂ ನಿಮ್ಮೆಲ್ಲರ ಹಾಗೇ ನನಗೆ ಕಂಡಾ ಗೊತ್ತೆಂದು ತಿಳಿದುಕೊಂಡು ಈ ತರಹದ ಮುನ್ನಡೆದ ಭಾಷೆ ನಮ್ಮ ಸುತ್ತ ಹರಿಯುತ್ತಿದೆಯೆಂಬ ಅರಿವೇ ಇಲ್ಲದೇ ಅಜ್ಞಾನದಲ್ಲಿದ್ದೆ. ಆದರೆ ಎರಡು ವರ್ಷಗಳ ಹಿಂದೆ ನಡೆದ ಒಂದು ಸಾಧಾರಣವಾದ ಘಟನೆಯಿಂದ ನನ್ನ ಕಣ್ಣುಗಳು ತೆರೆದವು. ಆ ಘಟನೆ ಹೀಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X