ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ-ರಾಜಕೀಯ ಸಂಗಮ : ಮೊಯಿಲಿ ಜೊತೆಸಾಹಿತ್ಯ ಸಂಜೆ

By Staff
|
Google Oneindia Kannada News

*ರೂಪಶ್ರೀ ದತ್ತಾತ್ರಿ
ಸನ್ನಿವೇಲ್‌, ಕ್ಯಾಲಿಫೋರ್ನಿಯಾ

Interaction with Veerappa Moily and his wife Malathi Veerappa Moilyಸಾಹಿತ್ಯ ಮತ್ತು ರಾಜಕೀಯ ಇವೆರಡೂ ಸಾಮಾನ್ಯವಾಗಿ ಸಮಾನಾಂತರವಾಗಿ ಹೋಗುವ ಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆಸರು ಮಾಡಿದವರಿಗಾಗಿ ಇತಿಹಾಸ ಹುಡುಕಿದರೆ ಉತ್ತರಭಾರತದಲ್ಲಿ ಅಕ್ಬರ್‌, ದಕ್ಷಿಣದಲ್ಲಿ ಕೃಷ್ಣದೇವರಾಯ, ಚಾವುಂಡರಾಯ, ಜಯಚಾಮರಾಜೇಂದ್ರ ಒಡೆಯರ್‌- ಹೀಗೆ ಕೆಲವೇ ಕೆಲವರು. ಈ ವಿರಳವಾದ ಪಟ್ಟಿಯಲ್ಲಿ ಸೇರುವ ಸಮಕಾಲೀನರಲ್ಲಿ ತಟ್ಟನೆ ನೆನಪಾಗುವುದು ವಾಜಪೇಯಿ ಮತ್ತು ವೀರಪ್ಪ ಮೊಯಿಲಿಯವರ ಹೆಸರುಗಳು. ಕರ್ನಾಟಕದ ಮಾಜೀ ಮುಖ್ಯಮಂತ್ರಿ ಮತ್ತು ಕವಿ ವೀರಪ್ಪ ಮೊಯಿಲಿ ಅವರೊಂದಿಗೆ ಬೆರೆಯುವ ಅವಕಾಶ ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರಿಗೆ ಜೂನ್‌ 1ರಂದು ಒದಗಿತು. ಶನಿವಾರ ಮಧ್ಯಾಹ್ನ 3 ಗಂಟೆಗೆ ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’ ಮತ್ತು ‘ಸಾಹಿತ್ಯ ಗೋಷ್ಠಿ’ಗಳ ವತಿಯಿಂದ ಸನ್ನಿವೇಲ್‌ ಹಿಂದೂ ಮಂದಿರದ ಸಭಾಂಗಣದಲ್ಲಿ ಈ ಉಪನ್ಯಾಸ ಕಾರ್ಯಕ್ರಮ ನಡೆಯಿತು.

Author Roopashri with her loving familyಸಮೃದ್ಧ ಬರಹಗಾರ ಎಂ.ವಿ. ನಾಗರಾಜ ರಾವ್‌ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಾಲತಿ ಮೊಯಿಲಿ ಮತ್ತು ಲಂಡನ್ನಿನ ಯು.ಕೆ. ಕನ್ನಡ ಬಳಗದ ಮಾಜಿ ಅಧ್ಯಕ್ಷೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಭಾನುಮತಿ ಸಹ ಉಪಸ್ಥಿತರಿದ್ದರು. ಕುಮಾರಿ ಮೇಘನ ವಿಶ್ವನಾಥ್‌ರವರ ಪ್ರಾರ್ಥನೆಯಾಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಉಪಾಧ್ಯಕ್ಷೆ ಪುಷ್ಪ ಸುಬ್ಬರಾವ್‌. ಮೊಯಿಲಿಯವರ ಮಹಾಕಾವ್ಯ ‘ ಶ್ರೀರಾಮಾಯಣ ಮಹಾನ್ವೇಷಣಂ’ನ ಪ್ರಥಮ ಸೋಪಾನದ 36ನೇ ಪ್ರಸ್ಥಾನದಿಂದ ಆಯ್ದ ‘ಅಕಲಾಶೃಂಗಿವೇರಪುರಕೆ....’ಮತ್ತು ಮಾಲತಿಯವರ ‘ಹಾಲು ಜೇನು’ ಕವನ ಸಂಕಲನದ ‘ಎಲ್ಲೆಲ್ಲೂ ಶಿಲೆಯಲ್ಲೂ ...’ಎಂಬ ಕವನಗಳಿಗೆ ರಾಗ ಅಳವಡಿಸಿ, ಸುಶ್ರಾವ್ಯವಾಗಿ ಹಾಡಿ ಸಭಿಕರ ಮನ ರಂಜಿಸಿದವರು ಜಯಂತಿ ಉಮೇಶ್‌. ಮೊಯಿಲಿಯವರ ಸಾಹಿತ್ಯ ಚಟುವಟಿಕೆಗಳ ಕಿರು ಪರಿಚಯವನ್ನು ವಿಶ್ವನಾಥ್‌ ಹುಲಿಕಲ್‌ ಅವರು ಸಭೆಗೆ ಮಾಡಿಸಿದರು. ‘ಹಾಲು-ಜೇನು’, ‘ಮತ್ತೆ ನಡೆಯಲಿ ಸಮರ’, ಮತ್ತು ‘ಯಕ್ಷ ಪ್ರಶ್ನೆ’ ಕವನ ಸಂಕಲನಗಳನ್ನೂ ‘ಮಿಲನ’, ‘ಪರಾಜಿತ’ ಮತ್ತು ‘ಪ್ರೇಮವೆಂದರೆ’ ನಾಟಕಗಳನ್ನೂ, ‘ಕೊಟ್ಟ ’, ‘ಸುಳಿಗಾಳಿ ’, ‘ಸಾಗರ ದೀಪ’, ‘ತೆಂಬೆರೆ’, ಕಾದಂಬರಿಗಳನ್ನೂ ಬರೆದು ಪ್ರಕಟಿಸಿರುವ ಮೊಯಿಲಿಯವರು ತಮ್ಮ ಇತ್ತೀಚಿನ ಮತ್ತು ಈ ಶತಮಾನದ ಮಹಾಕಾವ್ಯವೆಂದು ಹೆಸರು ಗಳಿಸಿರುವ ‘ಶ್ರೀ ರಾಮಾಯಣ ಮಹಾನ್ವೇಷಣಂ’ನ ಮೊದಲ ಎರಡು ಸೋಪಾನಗಳ ಬಗ್ಗೆ ಸುಮಾರು ಒಂದು ಗಂಟೆಯ ಕಾಲ ಉಪನ್ಯಾಸ ಕೊಟ್ಟರು.

‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂದು ಕುಮಾರವ್ಯಾಸ ಹೇಳಿದ್ದಾನೆ. ಅಂತೆಯೇ ಕನ್ನಡವನ್ನೊಳಗೊಂಡು ಭಾರತೀಯ ವಿವಿಧ ಭಾಷೆಗಳಲ್ಲಿ , ವಿವಿಧ ಪ್ರಕಾರಗಳಲ್ಲಿ ರಾಮಾಯಣ ಬಂದಿದೆ. ಆದರೆ ಇತರ ರಾಮಾಯಣಗಳಿಗೆ ಭಿನ್ನವಾಗಿ ಸಾಮಾಜಿಕ, ಮಾನವೀಯ, ಆರ್ಥಿಕ , ರಾಜಕೀಯ ಸಮಸ್ಯೆಗಳ ಪ್ರಸ್ತಾಪ, ಮೌಲ್ಯಗಳ ನೇರ ವಿಶ್ಲೇಷಣೆ, ಸಾಮಾನ್ಯ ನಾಗರಿಕನ ಮಾನಸಿಕ ದ್ವಂದ್ವಗಳ ಪ್ರಸ್ತಾಪ ಇವುಗಳನ್ನು ನನ್ನ ಕಾವ್ಯದಲ್ಲಿ ತರಲು ಪ್ರಯತ್ನಿಸಿದ್ದೇನೆ ಎಂದು ಮೊಯಿಲಿ ಹೇಳಿದರು.

ರಾಮಾಯಣ ದ ಮುಖ್ಯ ಪಾತ್ರಗಳಾದ ರಾಮ ಹಾಗೂ ಲಕ್ಷ್ಮಣರ ಮೂಲಕ ಆಗಿನ ಕಾಲದ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳ, ಶೋಷಿತರ, ದೀನ ದಲಿತರ ಒಂದು ಚಿತ್ರವನ್ನು ತಂದಿರುವುದಾಗಿ ಉದಾಹರಣೆ ಸಹಿತವಾಗಿ ವಿವರಿಸಿದರು. ‘ ರಾಜ್ಯ ದಾಹ, ಧನ ದಾಹ ಇವ್ಯಾವುವೂ ಇರದೆ ಉತ್ತರದಿಂದ ದಕ್ಷಿಣದವರೆಗೆ ಯಾತ್ರೆ ಮಾಡಿ ಅಸಹಾಯಕ ವ್ಯಕ್ತಿ ಮತ್ತು ಪ್ರದೇಶಗಳಿಗೆ ಶಕ್ತಿಯನ್ನು ತುಂಬಿದ ಸಾರ್ವಕಾಲಿಕ ವ್ಯಕ್ತಿ ರಾಮನ ತತ್ವ ಒಂದು ಮಹತ್ತರ ವಿಶ್ವ ಸಂದೇಶ. ಆ ಸಂದೇಶವನ್ನು ಪಾಲಿಸಿಕೊಂಡು ಬಂದರೆ ಕಳೆದು ಹೋಗುತ್ತಿರುವ ಮಾನವೀಯತೆ , ವಿಶ್ವಶಾಂತಿ ಭಾರತದ ದೆಸೆಯಿಂದ ಮತ್ತೆ ಮೈದೋರುವುವು. ಆಗಿನ ರಾಮರಾಜ್ಯದ ಕಲ್ಪನೆ, ಈಗ ಪ್ರಜಾಪ್ರಭುತ್ವದ ಕಲ್ಪನೆಯಾಗಿರಬೇಕು’ ಎಂದರು. ‘ಶ್ರೀ ರಾಮಾಯಣ ಮಹಾನ್ವೇಷಣಂ’ನ ವಿವಿಧ ಪಾತ್ರಗಳ ವೈಶಿಷ್ಟ್ಯ ಹಾಗೂ ಮುಖ್ಯ ಘಟನೆಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಸಭಿಕರ ಪ್ರಶ್ನೆಗಳಿಗೆ ಮೊಯಿಲಿಯವರು ಉತ್ತರಿಸಿದರು. ಪದ್ಮನಾಭ್‌ರವರು ಕೇಳಿದ ‘ ಶ್ರೀರಾಮಾಯಣ ಮಹಾನ್ವೇಷಣಂನಲ್ಲಿ ರಾಮನನ್ನು ಬಿಟ್ಟು ಲಕ್ಷ್ಮಣನನ್ನು ನಾಯಕನನ್ನಾಗಿ ಮಾಡಲು ಕಾರಣ ?’ ಎಂಬ ಪ್ರಶ್ನೆಗೆ ‘ರಾಮಾಯಣ ಒಂದು ಬಹುಮುಖೀ ಸಂಸ್ಕೃತಿ. ರಾಮ ಗರ್ಭ ಗುಡಿಯ ಮೂರ್ತಿಯಾದರೆ, ರಾಮಾಯಣದ ಬಂಡಾಯದ ಧ್ವನಿ ಲಕ್ಷ್ಮಣನದು. ತಾಟಕವನದಲ್ಲಿ ರಾಕ್ಷಸರನ್ನು ಸಂಹರಿಸಲು ವಿಶ್ವಾಮಿತ್ರ ಆಹ್ವಾನಿಸಿದ್ದು ಬರೀ ರಾಮನನ್ನು, ಲಕ್ಷ್ಮಣನನ್ನಲ್ಲ. ಆದರೆ ಲಕ್ಷ್ಮಣ ಬಂದೇ ಬರುತ್ತಾನೆ. ಲಕ್ಷ್ಮಣನಿಲ್ಲದ ರಾಮ ಅಪೂರ್ಣ ಎಂಬುದು ಅದರ ಗೂಢಾರ್ಥ. ರಾಮ ಧ್ವಜವಾದರೆ ಲಕ್ಷ್ಮಣ ರಾಮನನ್ನು ಎತ್ತರಕ್ಕೆ ಏರಿಸಿದ ಕೇತನ ದಂಡ. ಲಕ್ಷ್ಮ ಣ ತ್ಯಾಗದ ಪ್ರತಿರೂಪ’ ಎಂದು ಉತ್ತರಿಸಿದರು.

ಅನ್ನಪೂರ್ಣ ವಿಶ್ವನಾಥ್‌ರವರ ‘ರಾಮಾಯಣವನ್ನೇ ಕಥಾ ವಸ್ತು ಮಾಡಿಕೊಳ್ಳಲು ಸ್ಫೂರ್ತಿ ಅಥವಾ ಕಾರಣವೇನು ?’ ಎಂಬ ಪ್ರಶ್ನೆಗೆ ಉತ್ತರವಾಗಿ ‘ರಾಮಾಯಣ ಎಂದಿನಿಂದಲೂ ನನ್ನ ಮನಸ್ಸಿನಲ್ಲಿತ್ತು. ಕವನ ಅಥವಾ ಕಾದಂಬರಿಯಾಂದರ ವಸ್ತುವಾಗಿ ಬರಬಹುದೆನಿಸಿದ್ದ ಈ ರಾಮಾಯಣವನ್ನು ಮಹಾಕಾವ್ಯವಾಗಿ ಹೊರತರುವಂತೆ ಸ್ಫೂರ್ತಿ ಕೊಟ್ಟದ್ದು ನನ್ನ ಧರ್ಮಪತ್ನಿ ಮಾಲತಿ. ಸುಮಾರು 10 ವರ್ಷಗಳಿಂದ ರಾಮಾಯಣಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿ, ಅಭ್ಯಸಿಸಿದ ನಂತರವೇ ಸುಮಾರು ಮೂರು ವರ್ಷದ ಹಿಂದೆ ಪ್ರಾರಂಭವಾದ ಈ ಮಹಾ ಕಾವ್ಯ ನಿರಂತರವಾಗಿ ಹರಿಯುತ್ತಿದೆ. ಮೂರನೇ ಸೋಪಾನವೂ ಶೀಘ್ರದಲ್ಲೇ ಪ್ರಕಾಶಿತಗೊಳ್ಳಲಿದೆ ’ ಎಂದರು.

ಗಣೇಶ್‌ರ ಪ್ರಶ್ನೆ- ‘ಶಬರಿ ನಿಮ್ಮ ಕಾವ್ಯದ ಪ್ರಕಾರ ಕರ್ನಾಟಕದವಳು. ಹಾಗಾದರೆ ಅದಕ್ಕೆ ಪುರಾವೆಯಾಗಿ ಇಂದಿಗೂ ಯಾವುದಾದರೂ ದೇವಾಲಯ ಇತ್ಯಾದಿ ಇವೆಯೇ ’ಎಂಬುದಕ್ಕೆ, ‘ಶಬರಿ ನಮ್ಮ ರಾಜ್ಯದವಳು ಎಂದು ಎಲ್ಲಾ ರಾಜ್ಯದವರೂ ಹೇಳಿಕೊಳ್ಳುತ್ತಾಳೆ. ಆದರೆ ರಾಮಾಯಣದ ಅನೇಕ ಪ್ರಸಂಗಗಳನ್ನು ಓದಿ ನಾನು ನನ್ನದೇ ಆದ ಒಂದು ಭೂಗೋಳ ಶಾಸ್ತ್ರವನ್ನು ರಚಿಸಿದೆ. ಹಂಪಿಯ ಹತ್ತಿರ ಇರುವ ಆನೆಗೊಂದಿ ಎಂಬ ಎತ್ತರ ಪ್ರದೇಶವೇ ರಾಮಾಯಣದ ಕಿಷ್ಕಿಂದೆ, ತುಂಗಭದ್ರಾ ನದಿಯೇ ಪಂಪಾ ಸರೋಪರ ಹೀಗೆ ಸುಮಾರಾದ ಅಂದಾಜಿನಲ್ಲಿ ನಾನು ಶಬರಿ ಕರ್ನಾಟಕದವಳು, ಹನುಮನ ನಾಡು ಕರ್ನಾಟಕ, ವಾಲಿ ಇದ್ದದ್ದು ಕರ್ನಾಟಕದಲ್ಲಿ.. ಹೀಗೆ ನಿರೂಪಿಸಿದ್ದೇನೆ’ ಎಂದರು.

‘ತಮ್ಮ ರಾಜಕೀಯದ ಅನುಭವಗಳನ್ನು ರಾಮಾಯಣಕ್ಕೆ ಹೇಗೆ ತಂದಿರುವಿರಿ?’ ಎಂಬ ವಿಶ್ವನಾಥ್‌ರವರ ಪ್ರಶ್ನೆಗೆ ‘ಸುಗ್ರೀವನ ರಾಜ್ಯಭಾರ ದಕ್ಷತೆಗೆ ಮತ್ತು ಕಟ್ಟುನಿಟ್ಟಿಗೆ ಹೆಸರಾದದ್ದು. ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ನಾನು ಮಾಡಲು ಪ್ರಯತ್ನಿಸಿದ್ದು ಸುಗ್ರೀವನ ಆಡಳಿತವನ್ನು. ಇಂಜಿನಿಯರಿಂಗ್‌ ಮತ್ತು ಮೆಡಿಕಲ್‌ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ಪರೀಕ್ಷೆಯನ್ನು ತಂದಿದ್ದು ಇದೇ ಸ್ಫೂರ್ತಿಯಿಂದಲೇ ’ಎಂದರು.

ನಂತರ ಮಾಲತಿ ಮೊಯಿಲಿಯವರು ‘ಹೃದಯ ಒಂದು ಮಾಂಸದ ಮುದ್ದೆಯಲ್ಲ’, ‘ಅಮ್ಮನ ನೆನಪು’ ಮುಂತಾದ ಸುಂದರ ಸ್ವರಚಿತ ಕವನಗಳನ್ನು ಅರ್ಥಪೂರ್ಣವಾಗಿ ಓದಿ ಸಭಿಕರ ಹೃದಯ ಗೆದ್ದರು. ಶ್ರೀಮತಿ ಮತ್ತು ಶ್ರೀ ಮೊಯಿಲಿಯವರಿಗೆ ಸನ್ಮಾನ ಪತ್ರಗಳನ್ನು ಅರ್ಪಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಎಂ. ವಿ. ನಾಗರಾಜ್‌ರವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ‘ಶ್ರೀರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯದ ವೈಶಿಷ್ಟ್ಯತೆಗಳನ್ನು ವಿವರಿಸುತ್ತಾ ‘ಮೂಲಭೂತವಾದ ನವರಸಗಳೊಂದಿಗೆ ಈ ಕಾವ್ಯದಲ್ಲಿ ಇನ್ನೂ 2 ರಸಗಳನ್ನು ಕಂಡುಕೊಳ್ಳಬಹುದು. ಅವೆಂದರೆ ಹನುಮನ ಭಕ್ತಿರಸ ಹಾಗೂ ಅತ್ರಿ ಮತ್ತು ಅಗಸ್ತ್ಯ ಮುನಿಗಳ ವಾತ್ಸಲ್ಯ ರಸ’ ಎಂದರು. ಮೊಯಿಲಿಯವರ ಸೃಜನಶೀಲತೆಗೆ ಉದಾಹರಣೆಯಾಗಿ ಅವರು ಸಂದರ್ಭೋಚಿತವಾಗಿ ಸೃಷ್ಟಿಸಿಕೊಂಡ ಪಾತ್ರಗಳು ಮತ್ತು ಅಂದಿನ ಸಾಮಾಜಿಕ ಪರಿಸರಕ್ಕೆ ಹೊಂದಿಕೊಂಡಂತೆಯೇ ಇಂದಿನ ಸಮಾಜದ ವಿಡಂಬನೆಗೆ ಪ್ರತೀಕಗಳಾದ ಬಗೆಯನ್ನು ರಸವತ್ತಾಗಿ ವಿವರಿಸಿದರು.

ನರೇಂದ್ರ ಕೊಹಿಲಿಯವರ ಏಳು ರಾಮಾಯಣ ಆಧಾರಿತ ಹಿಂದಿ ಕಾದಂಬರಿಗಳನ್ನು ಕನ್ನಡಕ್ಕೆ ತಂದಿರುವ ಎಂ. ವಿ. ನಾಗರಾಜ್‌ರಾವ್‌ರವರ ಪ್ರೌಢ ವಿಶ್ಲೇಷಣೆ ಮೊಯಿಲಿಯವರ ‘ಶ್ರೀ ರಾಮಾಯಣ ಮಹಾನ್ವೇಷಣಂ’ ನ್ನು ಅರ್ಥ ಮಾಡಿಕೊಳ್ಳುವಲ್ಲಿ ಕೈಪಿಡಿಯಂತಿತ್ತು.

ವೀಣಾ ಗೌಡರವರ ವಂದನಾರ್ಪಣೆಯಾಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವಿಶ್ವನಾಥ್‌ ಹುಲಿಕಲ್‌ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ಶ್ರೀಮತಿ ಮತ್ತು ಶ್ರೀ ವೀರಪ್ಪ ಮೊಯಿಲಿಯವರು ಕಾರ್ಯಕ್ರಮದ ಮೊದಲು ಮತ್ತು ನಂತರ ಎಲ್ಲರೊಡನೆ ಬೆರೆತು ಮಾತನಾಡಿದ್ದು ಒಂದು ವೈಶಿಷ್ಟ್ಯವಾಗಿತ್ತು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X