ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದ ವ್ಯಾಂಕ್ಯುವರ್‌ನಲ್ಲಿ ಮೊಟ್ಟ ಮೊದಲ ಕನ್ನಡ ಸ್ನೇಹ ಕೂಟ

By Staff
|
Google Oneindia Kannada News

*ಪ್ರಶಾಂತ್‌ ಬಿಚಗತ್ತಿ, ವ್ಯಾಂಕ್ಯುವರ್‌

Vancouver kannadigas celebrate kannada sneha koota‘ಕನ್ನಡ’ ಮತ್ತು ‘ಕೆನಡಾ’ಕ್ಕೆ ಬಹಳ ಸಾಮ್ಯವಿದೆ ಅಲ್ಲವೇ ? ಕೊನೇ ಪಕ್ಷ ಇಂಗ್ಲೀಷ್‌ ಮಾತೃಭಾಷೆಯವರು ‘ಕನ್ನಡ’ವನ್ನು ‘ಕೆನಡಾ’ ಎಂದೇ ಉಚ್ಚರಿಸಿದರೆ ಆಶ್ಚರ್ಯವೆನಿಸದು !

ಆ ಮಾತು ಒತ್ತಟ್ಟಿಗಿರಲಿ. ಮೊನ್ನೆ ಜುಲೈ 1ರಂದು ಕೆನಡಾ ದೇಶದಲ್ಲಿ ‘ಕೆನಡಾ’ ದಿನಾಚರಣೆ ನಡೆಯಿತು. ಪ್ರತೀ ವರ್ಷ ಜುಲೈ 1ರಂದು ಈ ಆಚರಣೆ ನಡೆಯುತ್ತದೆ. ಈ ವರ್ಷ ಏನಪ್ಪಾ ವಿಶೇಷ ಅಂದ್ರೆ, ಕೆನಡಾದ ವ್ಯಾಂಕ್ಯುವರ್‌ ಎಂಬಲ್ಲಿರುವ ನಾವು ಕೆಲವು ಕನ್ನಡಿಗರು ಸೇರಿ ಆ ದಿನವನ್ನು ‘ಕನ್ನಡ’ ದಿನವನ್ನಾಗಿಯೂ ಮಾಡಿದೆವು. ಸಾರ್ವಜನಿಕ ರಜಾದಿನ ಆದ್ದರಿಂದ ಆಚರಣೆಗೆ ಅನುಕೂಲವೂ ಆಯಿತೆನ್ನಿ !

ವ್ಯಾಂಕ್ಯುವರ್‌ ಪ್ರದೇಶದ ಒಟ್ಟು ಐದಾರು ಕನ್ನಡಿಗ ಕುಟುಂಬದವರೆಲ್ಲ ಸುಮಾರು ಇಪ್ಪತ್ತೆೈದು ಮಂದಿ ಸ್ನೇಹ ಸಮ್ಮಿಲನ ನಡೆಸಿದೆವು. ಅದು ಅನೌಪಚಾರಿಕ ಕಾರ್ಯಕ್ರಮ. ಆದರೆ ಕನ್ನಡಿಗರು ಒಂದೆಡೆ ಸೇರಿದಾಗ ಕಾಣುವ ಸಂಭ್ರಮಕ್ಕೆ ಎಣೆಯುಂಟೇ ? ಅನೌಪಚಾರಿಕವಾಗಿಯಾದರೂ ವ್ಯಾಂಕ್ಯುವರ್‌ ಪರಿಸರದಲ್ಲಿ ನಡೆದ ಮೊಟ್ಟ ಮೊದಲ ಕನ್ನಡ ಸ್ನೇಹ ಕೂಟ ಇದು.

ಚಳಿಯ ಕಾಟವಿಲ್ಲ. ಬೇಸಿಗೆಯ ಹಿತವಾದ ಹವಾಮಾನ. ಸುಂದರ ದಿನಾವಾಗಿದ್ದ ಅಂದು, ಸ್ಟಾನ್ಲೇ ಪಾರ್ಕ್‌ನಲ್ಲಿ ನಮ್ಮ ಸಮಾವೇಶ. ಕುಲಕರ್ಣಿ, ಪಾಟೀಲ್‌, ಕಳ್ಳೂರ್‌, ಫ್ಯಾಮಿಲಿಗಳು ಹುಬ್ಬಳ್ಳಿ ಧಾರವಾಡ ಮೂಲದವರು. ಸುಭಾಷ್‌ ಮತ್ತವರ ಕುಟುಂಬ ಬೆಂಗಳೂರಿನವರು. ಪ್ರಭು ಮತ್ತು ಬಳಗ ಮೂಲತಃ ಗೋವಾ ಕಡೆಯವರು. ಹಾಗಾಗಿ ಕರ್ನಾಟಕದ ಸ್ವಾದಿಷ್ಟ ಅಡಿಗೆಯ ಸವಿಯೂಟ ಇತ್ತು.

ಸಂಜೆ ಸಮೋಸಾ- ಕಾಫಿಯಾಂದಿಗೆ ಆರಂಭವಾದ ಈ ಗೆಟ್‌-ಟುಗೆದರ್‌ ಅನಂತರ ಬ್ಯಾಡ್ಮಿಂಟನ್‌, ಡಿಸ್ಕಸ್‌ ತ್ರೋ ಇತ್ಯಾದಿ ಆಟಗಳಿಂದ ರಂಗೇರಿತು. ಮತ್ತೂ ಕಳೆ ಕಟ್ಟಿದ್ದು ಅದೇ ಪಾರ್ಕ್‌ನ ಇನ್ನೊಂದೆಡೆ ಕೆನಡಾ ದಿನಾಚರಣೆಯ ಸಂಬಂಧ ಸುಡು ಮದ್ದು ಪ್ರದರ್ಶನದಿಂದಾಗಿ.

ಅಂತೂ ಎಲ್ಲರಿಗೂ ಒಮ್ಮೆ ಬಾಯಿ ತುಂಬ ಕನ್ನಡ ಮಾತನಾಡಿ ಖುಷಿಯಾಯಿತು. ದಿನವೂ ಇಂಗ್ಲಿಷ್‌, ಅಥವಾ ಹೆಚ್ಚೆಂದರೆ ಹಿಂದಿ, ಪಂಜಾಬಿ ಭಾಷೆಗಳು ಮಾತ್ರ ಕಿವಿಗೆ ಬೀಳುತ್ತವೆ. ಆಫೀಸು, ರಸ್ತೆ, ಶಾಪಿಂಗು ಎಲ್ಲೆಂದರಲ್ಲಿ ಕನ್ನಡವೆಂದರೆ ಕಿವಿ ನಿಮಿರುತ್ತದೆ. ಈ ಮಿಲನದ ತುಂಬಾ ಕನ್ನಡವೇ ಕನ್ನಡ. ಮನಸ್ಸೂ ಹಗುರ ಹಗುರ... ! ಅಗ್ದೀ ಛಲೋ ಧಾರ್ವಾಡ್‌ ಕನ್ನಡ್‌ದಾಗೆ ಹರ್ಟಿ ಹೊಡ್ದು, ಹೊಟ್ಟಿ ತುಂಬ ಕನ್ನಡದೂಟ ಉಂಡು ರಾತ್ರೆ ಮನೆ ಸೇರಿದಾಗ ಅನಿರ್ವಚನೀಯ ಆನಂದವಾಯಿತು. ಕೆನಡಾ ದಿನಾಚರಣೆ ನಮ್ಮ ಪಾಲಿಗೆ ಕನ್ನಡ ದಿನಾಚರಣೆಯಾಯಿತು.

ಮನಸ್ಸು ಹಗುರವಾಗಿಸುವ, ಸಂಭ್ರಮಿಸುವ ದಿನಕ್ಕೆ ಏನೇ ಹೆಸರಿರಲಿ. ಅದು ಹಬ್ಬ ಅಲ್ಲವೇ?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X