• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಂಧೀಜಿ ನ್ಯೂಯಾರ್ಕ್‌ಗೆ ಬಂದರು- ಭಾಗ 2

By Staff
|

Mahatma Gandhijiಮಾರ್ಚ್‌ 1985ರಲ್ಲಿ ನ್ಯೂಯಾರ್ಕ್‌ ಟೈಂಸ್‌ ಪತ್ರಿಕೆಯಲ್ಲಿ ಎರಡನೆಯ ಬಾರಿಗೆ Staten Island ನಲ್ಲಿ ಹಿಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿದ್ದ Mahatma Gandhi International Foundation ದ ಬಗ್ಗೆ ವರದಿಯಾಂದು ಪ್ರಕಟವಾಯಿತು. ಅದರ ನಿರ್ವಾಹಕರು ಯೋಗೇಶ್‌ ಗಾಂಧಿ. ಮಹಾತ್ಮರ ಮೂರನೆಯ ಪೀಳಿಗೆಯ ಸಂಬಂಧಿಯೆಂದೂ, ಈ ದೇಶದಲ್ಲಿ ಗಾಂಧೀತತ್ವ ಪ್ರಚಾರಕ್ಕಾಗಿ ಪಣ ತೊಟ್ಟಿದ್ದಾರೆಂದೂ ವರದಿಯಲ್ಲಿ ಸೂಚಿಸಿದ್ದರು. ಮೇ 1985ರಲ್ಲಿ ಯೋಗೇಶ್‌ ಗಾಂಧಿ ನನ್ನ ಮ್ಯಾನ್‌ಹ್ಯಾಟನ್‌ ಮೆಡಿಕಲ್‌ ಆಫೀಸಿಗೆ ಬಂದು ನನ್ನನ್ನು ಕಂಡರು. ಪ್ರತಿಷ್ಠಾನದ ಬಗ್ಗೆ ಅವರಿಂದ ವಿವರ ಪಡೆದ ನಂತರ ನನ್ನ ಕಾಣಿಕೆಯ ಚೆಕ್‌ ಸ್ವೀಕರಿಸಿ ಹೊರಡುವುದರಲ್ಲಿದ್ದ ಅವರನ್ನ ತಡೆದು, ನನ್ನ ಗಾಂಧಿ ಯೋಜನೆಯ ಬಗ್ಗೆ ಅವರೊಡನೆ ಪ್ರಸ್ತಾಪಿಸಿದೆ. ಅವರು ಕೂಡಲೆ ಆ ವಿಷಯದಲ್ಲಿ ಉತ್ಸಾಹ ತೋರಿಸಿ ಪ್ರತಿಮೆ ಯೋಜನೆಯನ್ನು ಪ್ರತಿಷ್ಠಾನದ ಕಾರ್ಯವನ್ನಾಗಿ ಕೈಗೊಳ್ಳುವುದಾಗಿ ತಿಳಿಸಿ ನನ್ನೊಡನೆ ಕೆಲಸ ಮಾಡಲು ಉದ್ಯುಕ್ತರಾದರು. ಪ್ರತಿಮಾ ನಿರ್ಮಾಣಕ್ಕೆ ಸಂಬಂಧಿಸಿದ ಜವಾಬುದಾರಿಯನ್ನು ಹಂಚಿಕೊಳ್ಳಲು ಒಂದು ಪ್ರತಿಷ್ಠಾನದ ಸಹಾಯ ದೊರಕಿದ್ದು ನನಗೆ ಹರ್ಷವೇ ಆಯಿತು.

ಯೋಗೇಶ್‌ ಗಾಂಧಿಯವರ ಗಾಂಧೀ ಪ್ರತಿಷ್ಠಾನದ ಕಟ್ಟಡದ ಮಾಲೀಕರೇ ಒಳ್ಳೆಯ ಶಿಲ್ಪ ಕೃತಿಗಳನ್ನು ಪ್ಲಾಸ್ಟರ್‌ನಲ್ಲಿ ಮಾಡುವ ಕೌಶಲ್ಯ ಉಳ್ಳವರಾಗಿದ್ದುದರಿಂದ ಅವರನ್ನೇ ಪ್ರತಿಮೆಯ ನಿರ್ಮಾಣಕ್ಕೆಂದು ಕೇಳಿದೆವು. ಅವರು ಬರೆದ ಸೊಗಸಾದ ರೇಖಾ ಚಿತ್ರಗಳನ್ನು ನಗರಸಭೆಗೂ ತೋರಿಸಿದ್ದಾಯಿತು. ಅವರು ರಚಿಸಿದ ಆಲೋಚನಾಮಗ್ನ ಗಾಂಧಿರೂಪವೊಂದನ್ನು ಪ್ರತಿಷ್ಠಾನದ ಭವನದಲ್ಲಿ ನೋಡಿ ಬಂದೆ. ಈ ನಂತರದಲ್ಲಿ ಗಾಂಧಿ ಶಿಲ್ಪಕೃತಿಗಳನ್ನು ಕಂಚಿನಲ್ಲಿ ಅನೇಕ ವರ್ಷಗಳಿಂದ ತಯಾರಿಸುತ್ತಿದ್ದು , ಭಾರತದ ಅನೇಕ ನಗರಗಳಲ್ಲಿ ಸ್ಥಾಪನೆ ಮಾಡಿದ್ದ ಅಹಮದಾಬಾದಿನ ಕಾಂತಿಲಾಲ್‌ ಪಟೇಲ್‌ ಬಗ್ಗೆ ಯೋಗೇಶ್‌ ಗಾಂಧಿಗೆ ವರ್ತಮಾನ ಬಂತು. ಆ ವರ್ಷದ ಕೊನೆಗೆ ಗುಜರಾತಿಗೆ ಪ್ರವಾಸ ಹೋಗಿ ಕೆಲವು ತಿಂಗಳುಗಳು ಅಲ್ಲಿದ್ದು ಬಂದ ಯೋಗೇಶ್‌ ಈ ಬಗ್ಗೆ ಹೆಚ್ಚಿನ ಮಾಹಿತಿ ತಂದರು. 1985ರ ಅಂತ್ಯದಲ್ಲಿಯೇ ಇದಕ್ಕೆ ತಗಲುವ ಹಣವನ್ನು ಜೋಡಿಸಿಕೊಳ್ಳಲು ಯಾರಾದರೊಬ್ಬ ಭಾರತೀಯ ಧನಿಕರನ್ನು ಮೊರೆಹೋಗಬೇಕೆಂದು ನಿರ್ಧರಿಸಿದೆವು. ಕ್ಯಾಲಿಫೋರ್ನಿಯಾದ ಜಾಗ್ಗಿ ಟಂಡನ್‌, ಕನೆಕ್ಟಿಕಟ್‌ನ ರವಿ ಕುಟ್ರು, ಲಂಡನ್‌ ಮತ್ತು ನ್ಯೂಯಾರ್ಕ್‌ ಟಕ್ಸ್‌ಟೈಲ್ಸ್‌ ಧನಿಕರು ಮೋಹನ್‌ ಮುರ್ಜಾನಿ, ಭಾರತದ ಹಿಂದುಜಾ ಈ ಮಹಾಶಯರು ಗಮನಕ್ಕೆ ಬಂದರು.

ಮೋಹನ್‌ ಮುರ್ಜಾನಿಯವರು ಇದಕ್ಕೆ ತಗುಲಬಹುದಾದ ಸುಮಾರು ನೂರು ಸಾವಿರ ಡಾಲರುಗಳನ್ನು ಒದಗಿಸುವುದಾಗಿ ವಾಗ್ದಾನ ಮಾಡಿದರು. ಫೆಬ್ರವರಿ, ಮಾರ್ಚ್‌ ಹೊತ್ತಿಗೆ ಪ್ರತಿಮೆಗೆ ತಗಲುವ ವೆಚ್ಚ ಸುಮಾರು ಕಾಲು ಮಿಲಿಯನ್‌ ಡಾಲರು ಎಂದು ಅಂದಾಜು ಮಾಡಲಾಗಿತ್ತು. ಉಳಿದ ಹಣವನ್ನು ಪ್ರತಿಷ್ಠಾನದ ವಿಳಾಸಪಟ್ಟಿಯಿಂದ ಆರಿಸಿದ ಮಂದಿ ಮತ್ತಿತರ ಭಾರತೀಯರು ಅಲ್ಲದೆ ಉಳಿದೆಲ್ಲ ಆಸಕ್ತ ಅಮೆರಿಕನ್‌ ಜನರಿಂದ ಕಾಣಿಕೆಯ ಮೂಲಕ ಜೋಡಿಸುವ ಕೆಲಸ ಆರಂಭವಾಯಿತು. ಹಣ ಐವತ್ತು, ನೂರು, ಸಾವಿರ, ಎರಡು ಸಾವಿರ ಡಾಲರಿನಂತೆ ಪ್ರತಿಷ್ಠಾನ ತಲುಪಲು ಆರಂಭವಾಯಿತು. ಪಟೇಲ್‌ ಚಿತ್ರಿಸಿದ ಮೂರ್ತಿ ರೂಪ ನಮಗೆಲ್ಲರಿಗೂ ಬಹುವಾಗಿ ಮೆಚ್ಚಿಗೆಯಾಯಿತು.

ಈ ಮಧ್ಯೆ ಕಾಂತಿಲಾಲ್‌ ಪಟೇಲ್‌ ಶಿಲ್ಪಕೃತಿಯ ರೇಖಾ ಚಿತ್ರಗಳನ್ನು ನ್ಯೂಯಾರ್ಕ್‌ ಆರ್ಟ್‌ ಕಮಿಷನ್‌ ಅವಗಾಹನೆಗೆ ನಿಯಮದ ಪ್ರಕಾರ ತಂದಿದ್ದು ಆಯ್ತು. ಆರ್ಟ್‌ ಕಮಿಷನ್‌ನಲ್ಲಿ ಸ್ಥಳೀಯ ಶಿಲ್ಪಿಗಳೂ ಸದಸ್ಯರಾಗಿರುವುದರಿಂದ ಅಲ್ಲಿ ಅಸ್ತು ಎನಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ನಮ್ಮ ಸುದೈವಕ್ಕೆ ಕಮಿಷನರ್‌ ಸ್ಟರ್ನ್‌ ಪ್ರತಿಮಾ ನಿರ್ಮಾಣದ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದರಿಂದ ಆರ್ಟ್‌ ಕಮಿಷನ್‌ ಪ್ರತಿಮೆಯ ಕಲಾ ಕೌಶಲ್ಯದ ಬಗ್ಗೆ ಒಪ್ಪಿಗೆ ನೀಡಿತು.

ಕಮಿಷನ್‌ ಸದಸ್ಯರಿಗೆ ಗಾಂಧಿ ಚಿತ್ರವನ್ನು ಹೊತ್ತು ತೋರಿಸಲು ಓಡಾಡಿ ಯೋಗೇಶ್‌ ಸಾಕಾದರು. ಇನ್ನು ಸ್ಥಳ ಯಾವುದು ? ಸ್ಥಳವನ್ನು ಗುರುತಿಸುವ ಕೆಲಸವನ್ನೇನೋ ನಗರ ಸರಕಾರದ ಇಲಾಖೆಯಾಂದು ಮಾಡಿ ಬಿಡಬಹುದು. ಆದರೆ ಆ ಸ್ಥಳದಲ್ಲಿ ವಾಸಿಸುವ ಪ್ರಜಾವರ್ಗ ಒಪ್ಪಬೇಕಲ್ಲ ! ನ್ಯೂಯಾರ್ಕ್‌ ನಿವಾಸಿಗಳ ನಾಗರಿಕ ಹಕ್ಕುಗಳನ್ನು ರಕ್ಷಿಸಲು ಕಮ್ಯೂನಿಟಿ ಬೋರ್ಡ್‌ಗಳು ಇವೆ. ಈ ಬೋರ್ಡ್‌ ತನ್ನ ಸರಹದ್ದಿನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಗಳಿಗೆ ನಿಷ್ಕರ್ಷಿತ ಸಭೆಯಲ್ಲಿ ಸಮರ್ಪಕವಾಗಿ ಚರ್ಚಿಸಿದ ನಂತರವೇ ಒಪ್ಪಿಗೆ ಇಲ್ಲವೇ ನಕಾರ ನೀಡುತ್ತದೆ.

ಮೊದಲು ನಗರ ಸಭೆ ಆರಿಸಿದ ಸ್ಥಳ ಮ್ಯಾನ್‌ ಹ್ಯಾಟನ್‌ ದಕ್ಷಿಣದಲ್ಲಿರುವ ಚೇಂಬರ್ಸ್‌ ಮತ್ತು ರೀಡ್‌ ರಸ್ತೆಗಳು ಒಂದನ್ನೊಂದು ದಾಟುವ ಜಾಗದಲ್ಲಿ ಇತ್ತು. ಇದು ನಗರ ಸಭಾ ಭವನಕ್ಕೆ ಪಶ್ಚಿಮದಲ್ಲಿದೆ. ಕಮ್ಯೂನಿಟಿ ಬೋರ್ಡ್‌ ನಂ. 1 ಈ ಸ್ಥಳ ಅಂತರರಾಷ್ಟ್ರೀಯ ವ್ಯಕ್ತಿಗೆ ತಕ್ಕುದಲ್ಲ ಎಂದು ನಿರ್ಧರಿಸಿ ನಿರಾಕರಿಸಿತು. ನಂತರ ಹುಡುಕಿದ ಸ್ಥಳ ಫೆಡರಲ್‌ ಮತ್ತು ಸ್ಟೇಟ್‌ ಕೋರ್ಟ್‌ಗಳ ಎದುರಿಗಿನ Foley square ಅಲ್ಲಿ ಕೆಲಸ ಮಾಡುವ ಜಡ್ಜ್‌ಗಳು ಪ್ರತಿಮೆ ಅಲ್ಲಿ ಬೇಡವೆಂದರೆಂದು ತಿಳಿಯಿತು. ಗಾಂಧಿಗೆ ತೀರ ಸಮೀಪವಾಗಿರಲು ನ್ಯಾಯಮೂರ್ತಿಗಳು ಹೆದರಿರಬೇಕು !

ಜೂನ್‌ 86ರ ವೇಳೆಗೆ ಪಾರ್ಕ್ಸ್‌ ಕಮಿಷನ್‌ ಅಧಿಕಾರಿಗಳು ಮ್ಯಾನ್‌ ಹ್ಯಾಟನ್‌ನಲ್ಲಿ ಪಾರ್ಕ್‌ ಅವೆನ್ಯೂ ಸೌತ್‌ ಮತ್ತು ಯೂನಿವರ್ಸಿಟಿ ಪ್ಲೇಸ್‌ ನಡುವೆ ಇರುವ ಯೂನಿಯನ್‌ ಸ್ಕ್ವೇರ್‌ ಪಾರ್ಕ್‌ನ ದಕ್ಷಿಣ ಪೂರ್ವದ ತ್ರಿಕೋಣಾಕೃತಿಯ ಜಾಗದಲ್ಲಿ ಪ್ರತಿಮೆಯನ್ನು ನಿರ್ಮಿಸಲು ಆರಿಸಿದರು. ಈ ಪಾರ್ಕ್‌ಗಳಿಗೆ ದಕ್ಷಿಣದಲ್ಲಿ 14ನೇ ರಸ್ತೆ ಹಾಯುತ್ತದೆ. ಉತ್ತರಕ್ಕೆ 17ನೇ ರಸ್ತೆ, ಕಮಿಷನರ್‌ ಸ್ಟರ್ನ್‌ ಗಂತೂ ಈ ನೆಲೆಯ ಬಗ್ಗೆ ವಿಶೇಷ ಉತ್ಸಾಹ. ಆರ್ಟ್‌ ಕಮಿಷನ್‌ ಅಧಿಕಾರ ವರ್ಗದವರೂ ಆ ಆಯ್ಕೆ ಉಚಿತವಾಗಿದೆಯೆಂದು ಒಪ್ಪಿಗೆ ನೀಡಿದರು. ಆದರೆ ಅಲ್ಲಿನ ಯೂನಿಯನ್‌ ಸ್ಕ್ವೇರ್‌ ಪಾರ್ಕ್‌ ಕೋಯಲಿಷನ್‌ ಕಮಿಟಿ ಈ ವಿಷಯದಲ್ಲಿ ಪ್ರತಿಭಟನೆ ಸೂಚಿಸಿತು. ಆ ಸಂಸ್ಥೆಯ ಪ್ರಮುಖರಿಗೆ ಈ ಸ್ಥಳದ ಆಯ್ಕೆಯ ಬಗ್ಗೆ ತಿಳಿದದ್ದು ಮೇ ತಿಂಗಳಿನಲ್ಲಿ. ಪ್ರತಿಮೆಯ ವಿಷಯವಾಗಿ ನ್ಯೂಯಾರ್ಕ್‌ ಮ್ಯಾಗರಿkುೕನ್‌ನಲ್ಲಿ ಪ್ರಕಟವಾದ ಲೇಖನದಿಂದ. ಪಾರ್ಕ್ಸ್‌ ಇಲಾಖೆಯವರು ತಮಗೆ ಸುದ್ದಿಯನ್ನೇ ತಿಳಿಸದೆ ನಿರ್ಧರಿಸಿದ್ದಾರೆ ಎಂದು ಆಪಾದಿಸಿದರು. ಕೊಯಲಿಷನ್‌ ನಾಯಕ ಜಾಕ್‌ ಟೇಲರ್‌ ಯೂನಿಯನ್‌ ಸ್ಕ್ವೇರ್‌ ಪಾರ್ಕ್‌ ಹದಿನಾರಾಣೆ ಅಮೆರಿಕನ್‌ ಪ್ರದೇಶ. ಅದರಲ್ಲಿ ಆಗಲೇ ಸಾಕಷ್ಟು ಭಾರೀ ಪ್ರತಿಮೆಗಳು ಇವೆ. ಇನ್ನೊಂದು ಬೇಕಿಲ್ಲ ಎಂದರು.

ಆ ಪಾರ್ಕಿನಲ್ಲಿ ಇರುವ ಪ್ರತಿಮೆಗಳು ಆರು : ಜಾರ್ಜ್‌ ವಾಷಿಂಗ್ಟನ್‌, ಏಬ್ರಹಾಂ ಲಿಂಕನ್‌, ಲಫಾಯೆಟ್‌ (ಅಮೆರಿಕಾದ ಕ್ರಾಂತಿ ಯೋಧ) ಈ ಮೂರಲ್ಲದೆ ಇನ್ನೊಂದು ಅಮೆರಿಕ ಸ್ವಾತಂತ್ರ್ಯದ ಪ್ರಸಿದ್ಧ ಪತ್ರಿಕೆಯ ಶಿಲ್ಪಕೃತಿ, ಮತ್ತೊಂದು ಮೊದಲನೆಯ ಮಹಾಯುದ್ಧದ ಸ್ಮಾರಕ, ಮಗದೊಂದು ತಾಯಿ ಮಕ್ಕಳ ಪ್ರತಿಮೆ.

ಕೊಯಲಿಷನ್‌ ಪ್ರತಿಭಟನೆ ಎಷ್ಟೇ ಇದ್ದರೂ ಪಾರ್ಕ್‌ನ ಹೊಣೆಗಾರಿಕೆ ಇರುವ ಕಮ್ಯೂನಿಟಿ ಬೋರ್ಡ್‌ ನಂ. 5 ಒಪ್ಪಿಗೆ ಕೊಡುವುದು ಮುಖ್ಯವೆಂದು ಎಲ್ಲರಿಗೂ ಗೊತ್ತಿತ್ತು. ಈ ಬೋರ್ಡ್‌ನ ಪಾರ್ಕ್ಸ್‌ ಸಬ್‌ ಕಮಿಟಿ ಮೊದಲು ಈ ವಿಷಯ ಚರ್ಚಿಸಿ ಬೋರ್ಡ್‌ಗೆ ಶಿಫಾರಸು ಮಾಡುತ್ತದೆಂದು ನಾವು ಮೊದಲೇ ತಿಳಿದೆವು. ಜುಲೈ 5, 1986ರ ಸಂಜೆ ನಡೆದ ಪಾರ್ಕ್ಸ್‌ ಉಪ ಸಮಿತಿಯ ಸಭೆಯಲ್ಲಿ ಕಮಿಷನರ್‌ ಸ್ಟರ್ನ್‌ ಪಾರ್ಕ್ಸ್‌ ಕ್ಯೂರೇಟರ್‌ ಡಾನ್‌ ರೇನಾಲ್ಡ್ಸ್‌, ಯೋಗೇಶ್‌ ಮತ್ತು ನಾನು ಪ್ರತಿಮೆಯ ಪರವಾಗಿ ಮಾತನಾಡಿದೆವು. ಅನೇಕರು ವಿರುದ್ಧವಾಗಿ ಮಾತನಾಡಿದರು. ಪ್ರತಿಮೆ ಅಮೆರಿಕನ್ನನದು ಆಗಬೇಕು. ಗಾಂಧಿ ಪ್ರಪಂಚದ ವ್ಯಕ್ತಿ. ಇನ್ನೂ ಉತ್ತಮವಾದ ಸ್ಥಳ ಬೇರೆಲ್ಲಿಯಾದರೂ ಹುಡುಕಿ... ಉತ್ತರ ಮ್ಯಾನ್‌ ಹ್ಯಾಟನ್ನಿನ ರಿವರ್‌ಸೈಡ್‌ ಪಾರ್ಕ್‌ ಏಕೆ ಕೂಡದು. ಈಗಾಗಲೇ ಅನೇಕ ಭಾರಿ ಕಂಚಿನ ಪ್ರತಿಮೆಗಳು ಪಾರ್ಕಿನಲ್ಲಿವೆ. ಎಲ್ಲವೂ ಯುದ್ಧ ಸಂಬಂಧಿ ಪ್ರತಿಮೆಗಳು. ಶಾಂತಿದೂತ ಗಾಂಧಿಯ ವ್ಯಕ್ತಿ ರೂಪ ಅಲ್ಲಿ ಸರಿಹೊಂದುವುದಿಲ್ಲ ಇತ್ಯಾದಿ. ಚರ್ಚೆ ಮುಗಿದು ಮತ ಚಲಾವಣೆ ನಡೆದಾಗ ಎಣಿಸಿದಂತೆ ಗಾಂಧಿ ಪ್ರತಿಮೆಯ ವಿರುದ್ಧ ಉಪಸಮಿತಿ ನಿರ್ಧರಿಸಿತ್ತು.

ಈಗ ಏನು ಮಾಡುವುದು ? ಪಾರ್ಕ್ಸ್‌ ಉಪಸಮಿತಿಯ ನಿರ್ಧಾರವನ್ನು ಸಾಮಾನ್ಯವಾಗಿ ಸಭೆ ಸೇರಿದಾಗ ಅಲ್ಲಗಳೆಯುವುದಿಲ್ಲ. ಕಮ್ಯೂನಿಟಿ ಬೋರ್ಡ್‌ 5ರ ಮಹಾ ಸಭೆ ಸೇರುವುದಕ್ಕೆ ಇನ್ನು ಐದೇ ದಿನಗಳು ಉಳಿದಿವೆ. ಸರಿ. ಮಾರನೆಯ ದಿನವೇ ನ್ಯೂಯಾರ್ಕ್‌ Senator Moynihan ಅವರನ್ನು ಆಫೀಸಿನಲ್ಲಿ ಕಂಡು ಜುಲೈ 10ರ ಬೋರ್ಡ್‌ ಸಭೆಗೆ ಬರಲು ಬೇಡಿದೆವು. ಆ ದಿನ ಬರಲು ಪ್ರಯತ್ನ ಮಾಡುವುದಾಗಿಯೂ, ಅದಾಗದಿದ್ದರೆ ಒಂದು ಕಾಗದ ಕಳಿಸಿಕೊಡುವುದಾಗಿಯೂ ಅವರು ಆಶ್ವಾಸನೆಯಿತ್ತರು. ಹೆನ್ರಿ ಸ್ಟರ್ನ್‌ ಅವರು ಪಾರ್ಕ್‌ನ ಎಲ್ಲ ಪ್ರತಿಮೆಗಳನ್ನು 20-25 ವರ್ಷಗಳ ಕಾಲ ದುರಸ್ತಾಗಿಟ್ಟಿರಲು ಹಣ ಒದಗಿಸುವ ಏರ್ಪಾಡು ಮಾಡಿದರೆ ಬೋರ್ಡ್‌ ಒಪ್ಪೀತು ಎಂದು ಸಲಹೆ ಮಾಡಿದರು.

ಜುಲೈ 10, 1986. ಬ್ರಾಡ್‌ವೇಗೆ ಪಶ್ಚಿಮದಲ್ಲಿ 49ನೇ ರಸ್ತೆಯಲ್ಲಿ ರುವ St. Malachy churchನಲ್ಲಿ ಕಮ್ಯೂನಿಟಿ ಬೋರ್ಡ್‌ ನಂ. 5ರ ಸಭೆ ಸಂಜೆ ಆರು ಗಂಟೆಗೆ ಆರಂಭವಾಯಿತು. ಬೋರ್ಡ್‌ ಅಧ್ಯಕ್ಷರಾಗಿ ಜೋಸೆಫ್‌ ರೋಸ್‌ ವಿಷಯವನ್ನು ಸಭೆಯ ಮುಂದಿಟ್ಟು ಭಾಷಣಕಾರರನ್ನು ಆಹ್ವಾನಿಸಿದರು. ಕಮಿಷನರ್‌ ಸ್ಟರ್ನ್‌ ಮಾತನಾಡಿ ಮಹಾತ್ಮರ ಪ್ರತಿಮೆಯನ್ನು ನಗರದಲ್ಲಿ ನಿರ್ಮಿಸುವುದು ನಮ್ಮನ್ನೇ ಗೌರವಿಸಿಕೊಂಡಂತೆ.... ಆರ್ಟ್‌ ಕಮಿಷನ್ನಿನವರು ಈ ಕಲಾಕೃತಿಯನ್ನು ಒಪ್ಪಿದ್ದಾರೆ.... ಯೂನಿಯನ್‌ ಸ್ಕ್ವೇರ್‌ ಸ್ವತಂತ್ರ ಭಾಷಣಗಳಿಗೆ ನಿರ್ದಾಕ್ಷಿಣ್ಯ ಅಭಿಪ್ರಾಯ ನಿವೇದನೆಗೆ ಹೆಸರಾದ ಸ್ಥಳ. ಗಾಂಧಿ ಇಲ್ಲಿ ಸ್ಥಾಪಿತವಾಗುವುದು ಯೋಗ್ಯವಾಗಿದೆ ಎಂದರು. ನಾನು, ಪ್ರಜಾಸ್ವಾತಂತ್ರ್ಯದ ಕುರುಹಾದ ಪಾರ್ಕ್‌ ಇದು... ಇಲ್ಲಿ ಜಗದ್ವಿಖ್ಯಾತ ಸ್ವಾತಂತ್ರ್ಯಪ್ರೇಮಿಯ ಸ್ಮಾರಕ ಇರುವುದು ಉಚಿತ. ಪ್ರಪಂಚ ಶಾಂತಿ ಮತ್ತು ಮಾನವ ಸಿದ್ಧ ಹಕ್ಕುಗಳ ಬಗ್ಗೆ ಜನಕ್ಕೆ ಸಭೆ ಸೇರಲು ಗಾಂಧಿಯ ಸಾನ್ನಿಧ್ಯಕ್ಕಿಂತ ಬೇರೆ ಸಂಕೇತ ಸ್ಥಳ ಬೇಕೆ ? ಸಾವಿರಾರು ಜನ ಓಡಿಯಾಡುವ ಈ ಸ್ಥಳವೇ ಸರಿಯಾದದ್ದು. Lady Liberty ಶತಾಬ್ಧಿಯನ್ನು ಆಚರಿಸುತ್ತಿರುವ ಈ ವರ್ಷವೇ ಗಾಂಧಿ ಪ್ರತಿಮೆಯ ಅನಾವರಣ ಮಾಡಿದರೆ ನಗರಕ್ಕೆ ಅಸಾಧಾರಣ ಗೌರವ ಬರುವುದರಲ್ಲಿ ಸಂದೇಹವಿಲ್ಲ ಮುಂತಾಗಿ ಮಾತನಾಡಿದೆ. ಸೆನೆಟರ್‌ ಮೊಯ್ಸಿ ಹಾನ್‌ ಅವರ ಪ್ರತಿನಿಧಿ ಇಲ್ಲಿ ಭಾರತೀಯ ಜನ ವೃದ್ಧಿಸುತ್ತ ಇದಾರೆ, ಈ ಕಾರಣಕ್ಕಾಗಿಯೂ ಪ್ರತಿಮೆಯ ಸ್ಥಾಪನೆ ಯೋಗ್ಯವಾದದ್ದು ಎಂದು ಬರೆದ ಪತ್ರವನ್ನು ಸಭೆಗೆ ಓದಿದರು. ಕ್ಯೂರೇಟರ್‌ ರೆನಲ್ಡ್‌ ಅವರು ಪ್ರತಿಷ್ಠಾನ ಪಾರ್ಕಿನ ಎಲ್ಲ ಪ್ರತಿಮೆಗಳನ್ನು ದುರಸ್ತಾಗಿಡಲು ನಿಧಿಯಿರಿಸುವುದಾಗಿ ಒಪ್ಪಿದೆ ಎಂದು ತಿಳಿಸಿದರು. ಯೋಗೇಶ್‌ ಮಹಾತ್ಮರ ಶಿಲ್ಪಕೃತಿಯ ಫೋಟೋಗಳನ್ನು ಪ್ರದರ್ಶಿಸಿದರು.

ಪ್ರತಿಮೆಯ ನಿರ್ಮಾಣವನ್ನು ಪ್ರತಿಭಟಿಸಲು ಅನೇಕ ಮಂದಿ ಸಿದ್ಧವಾಗಿ ಬಂದಿದ್ದರು. ಪಾರ್ಕಿನಲ್ಲಿ Eleanor Rousevelt ಅವರ ಪ್ರತಿಮೆ ಇಡುವುದು ಸರಿ- ಅಮೆರಿಕನ್ನರಲ್ಲದ ಗಾಂಧಿ ಏಕೆ ? ಬೇಕಿದ್ದರೆ Martin Luther King ನಿಲ್ಲಿಸೋಣ (ಸಧ್ಯದ ಚರ್ಚೆ ಗಾಂಧಿಯ ಬಗ್ಗೆ. ಬೇರೆ ಹೆಸರುಗಳು ತರಬೇಡಿ ಎಂದು ಎಚ್ಚರಿಸಿದರು.) New York Artists Guild ಪ್ರತಿನಿಧಿಗಂತೂ ಅಮೆರಿಕನ್‌ ಅಲ್ಲದವನು ರಚಿಸಿದ ಕೃತಿಯ ಅನಾವರಣ ಹೇಯವಾಗಿ ಕಂಡಿತು. ‘ಇವನ್ನು ರಾಷ್ಟ್ರಪ್ರೇಮಿ ಅಮೆರಿಕನ್‌ ಸಹಿಸಲಾರ’ ಎಂದು ಕೂಗಲು ಆರಂಭಿಸಿದ. Larry Zim ಎಂಬ ಬೋರ್ಡ್‌ ಸದಸ್ಯರು ಎದ್ದು ನಿಂತು ಪ್ರತಿಮೆಗಳ ಸಂರಕ್ಷಣೆಗೆ ಹಣ ಬರುತ್ತದೆ ಎಂಬುದನ್ನೇ ದೊಡ್ಡ ವಿಷಯವನ್ನಾಗಿ ಪರಿಗಣಿಸಿ ನಿರ್ಮಿಸಲು ಅವಕಾಶಕೊಡಬೇಡಿ ಎಂದರು. ಕಡೆಗೊಬ್ಬ ಮಹಿಳೆ ನಿಂತು ತನ್ನನ್ನು ಜ್ಯೂಯಿಷ್‌ ಮಹಿಳೆ ಎಂದು ಗುರ್ತಿಸಿಕೊಂಡು, ಈ ನಗರದಲ್ಲಿ ಗಾಂಧಿಗೆ ಮರ್ಯಾದೆ ಮಾಡುತ್ತಿರುವುದು ನನಗೆ ಸಹಿಸುವುದಿಲ್ಲ, ಎರಡನೆ ಯುದ್ಧದಲ್ಲಿ ಹಿಟ್ಲರ್‌ ಲಕ್ಷಾಂತರ ಜ್ಯೂಯಿಷ್‌ ಜನರನ್ನು ಕೊಲ್ಲುತ್ತಿದ್ದಾಗ, ಗಾಂಧಿ ಒಂದೇ ಒಂದು ಮಾತು ವಿರುದ್ಧವಾಗಿ ಆಡಿದರೆ? ಎಂದರು.

ನನಗೆ ಎದೆ ಧಸಕ್ಕೆಂದಿತು.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more