• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಂಧೀಜಿ ನ್ಯೂಯಾರ್ಕ್‌ಗೆ ಬಂದರು

By Staff
|

*ಡಾ।। ಎಚ್‌.ಕೆ.ಚಂದ್ರಶೇಖರ್‌, ಜಮೈಕಾ ಎಸ್ಟೇಟ್ಸ್‌, ನ್ಯೂಯಾರ್ಕ್‌

Mahatma Gandhiji portrait by Dr. Ashwatha Raoಅನೇಕ ವರ್ಷಗಳ ಹಿಂದಿನ ಮಾತು. ನಮ್ಮ ತಂದೆ ಆಗ್ಗೆ ಮೈಸೂರಿನಲ್ಲಿ ಇಂಜಿನಿಯರ್‌ ಆಗಿದ್ದರು. ಯೂರೋಪಿನಲ್ಲಿ ಯುದ್ಧ ನಡೆಯುತ್ತಿತ್ತು. ನಮಗಂತೂ ರೇಷನ್‌ ಕಾರ್ಡ್‌ ಒಂದರಿಂದ ಮಾತ್ರ ಯುದ್ಧ ಅದೆಲ್ಲೋ ನಡೆಯುತ್ತಿದೆ ಎಂದು ಮನಸ್ಸಿಗೆ ಬಂದಿತ್ತೇ ಹೊರತು ಅದರ ಪ್ರಭಾವದಿಂದ ಯಾವ ವಿಶೇಷ ನೋವೂ ತಟ್ಟಿರಲಿಲ್ಲ. ನಮ್ಮದೇ ಸಂಗ್ರಾಮ ಬೇರೆ ಇತ್ತಲ್ಲ !

ಖಾದಿ ಅಂಗಿ ಪಾಯಿಜಾಮ ತಲೆಗೆ ಬಿಳಿಟೋಪಿ ಏರಿಸಿ ಬರಿಗಾಲಲ್ಲಿ ಬೆಳಗ್ಗೆ ಧ್ವಜವಂದನೆ, ಪ್ರಭಾತ ಪೇರಿ... ದಿನದಲ್ಲಿ ಅರ್ಧಗಂಟೆ ಚರಕದಲ್ಲಿ ನೂಲು ತೆಗೆಯುವುದು, ಸ್ಕೂಲು ಮುಗಿಸಿ ಸಂಜೆಯ ಹೊತ್ತಿಗೆ ಒಂಟಿಕೊಪ್ಪಲಿನಲ್ಲಿ ಪೋಸ್ಟ್‌ ಆಫೀಸ್‌ ಎದುರಿಗಿದ್ದ ಶಾಂತಿಲಾಲ್‌ ಮನೆಯಲ್ಲಿ ಪ್ರಾರ್ಥನಾ ಸಭೆ, ರಘುವೀರ ತುಮಕೋ ಮೇರಿ ಲಾಜ್‌ ಇತ್ಯಾದಿ ಗಾಂಧಿಗೆ ಪ್ರಿಯವಾದ ಗೀತೆಗಳ ಸಮೂಹಗಾನ... ಯಾವುದಾದರೊಂದು ಬೆಳಗಿನ ಜಾವ ನಾವು ಮೂರು ನಾಲ್ಕು ಮಕ್ಕಳು ಎಂಥದೋ ಗುಪ್ತ ಕಾಗದ ಶಿವರಾಮ ಪೇಟೆಯಲ್ಲಿ ಯಾರಿಗೋ ತಲುಪಿಸಬೇಕು... ಪ್ರಚಂಡ ಶ್ರದ್ಧೆ ಉತ್ಸಾಹ.

ವರ್ಷವೆಲ್ಲ ತಯಾರಿಸಿದ ನೂಲಿನ ದಂಡೆಗಳನ್ನು ಹೊತ್ತು ರೈಲಿನಲ್ಲಿ ನಂಜನಗೂಡಿನ ಮಾರ್ಗದಲ್ಲಿದ್ದ ಬದನವಾಳ ಖಾದಿ ಕೇಂದ್ರಕ್ಕೆ ಹೋಗಿ ಸಂಜೆಯ ತನಕ ಇಷ್ಟಗಲ ಬಟ್ಟೆ ನೇಯಿಸಿ ತರುವುದು.. ವರ್ಷಕ್ಕೆಲ್ಲ ಎರಡೇ ಅಂಗಿ, ಪಾಯಿಜಾಮ.. ಗಾಂಧಿ ಹೇಳಿದ್ದರಲ್ಲ, ಮಿತವಾಗಿ ಬಳಸಿ ಅಂತ... ಧೃಡಕಾಯರಾಗಿ ಅಂತಲೂ ಹೇಳಿದ್ದರು. ಸರಿ, ಬೆಳಗ್ಗೆ ಅಷ್ಟು ಹೊತ್ತಿಗೇ ಅನಂತರಾಯರ ವ್ಯಾಯಾಮಶಾಲೆಯಲ್ಲಿ ಕಸರತ್ತು . ಅಕ್ಷರ ಕಲಿಸಿ ಅಂದಿದ್ದರು.. ಮನೆಯ ಆಳುಗಳಿಗೆ ಕನ್ನಡದ ಪಾಠ...

ಗಾಂಧೀಜಿಯ ಪರಿಣಾಮ ಬೀಳದ ಜನರನ್ನೇ ಆಗ ಕಾಣುವುದು ಸಾಧ್ಯವಿರಲಿಲ್ಲ... ಗಾಂಧಿ ನನಗಂತೂ ಇಷ್ಟದೇವತೆಯೇ. ನಮ್ಮ ಅಮ್ಮನ ಜತೆ ದೇವರ ಪೂಜ ಯಾಕೆ ಮಾಡುತೀ... ಗಾಂಧೀಜಿ ಹೇಳಿದ ಹಾಗೆ ಸಮಾಜ ಸೇವೆ ಮಾಡು ಎಂದು ಹೇಳಿ ಗದರಿಸಿಕೊಳ್ಳುತ್ತಿದ್ದುದೂ ಸಾಮಾನ್ಯವಾಗಿತ್ತು.

1982 ನ್ಯೂಯಾರ್ಕಿನಲ್ಲಿ ನಾನು ಭಾರತೀಯ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷನಾಗಿದ್ದ ಸಮಯ. ಆಗ ತಾನೇ ವರ್ಷದ ಇಂಡಿಯಾ ಡೇ ಪೆರೆಡ್‌ ಮುಗಿಸಿದ್ದೆವು. ಕಾರ್ಯ ಸಮಿತಿಯ ಸಭೆಯಲ್ಲಿ ಈ ವರ್ಷದಿಂದ ಗಾಂಧಿ ಜಯಂತಿ ಆಚರಿಸುವುದನ್ನು ಆರಂಭಿಸೋಣ ಎಂದು ಪ್ರಸ್ತಾಪ ಮಾಡಿದೆ. ಒಕ್ಕೂಟದ ರಾಜಕೀಯ ಪರಿಸ್ಥಿತಿಯಲ್ಲಿ ಅಂಥ ಹೊಸದೇನೂ ಆರಂಭಿಸುವುದು ಸಾಧ್ಯವಿಲ್ಲ ಎಂದು ತಿಳಿಯಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಹಗುರಾಗಿ ಅಧಿಕಾರವರ್ಷ ಕಳೆಯುವುದು ಸಾಧುವಾಗಿತ್ತು. ಹಾಗೆಯೆ ಮಾಡಿದೆ. ಅದೇ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಆಮಾನ್‌ ಹ್ಯಾಟನ್ನಿನ Ziegfeld ಥಿಯೇಟರಿನಲ್ಲಿ Richard Atten Borough ಸಿದ್ಧಪಡಿಸಿದ ಗಾಂಧಿ ಚಿತ್ರಪ್ರದರ್ಶನಕ್ಕೆ ಮೊದಲಿಟ್ಟಿತು. ಬಹು ಸೊಗಸಾದ ನಿರೂಪಣೆ , ಕಣ್ಣು ತೇವವಾಗುವಂಥ ಹೃದಯ ಉಬ್ಬಿ ಬರುವಂಥ ದೃಶ್ಯಗಳು, ತಿಂಗಳುಗಟ್ಟಲೆ ನಡೆದ ಆ ಸಿನಿಮಾ ನೋಡಲು ದಿನವೆಲ್ಲ ಕ್ಯೂನಲ್ಲಿ ಚಳಿಯಲ್ಲಿ ಕಾದು ಟಿಕೆಟ್‌ ಪಡೆಯಬೇಕಾಗಿತ್ತು. ಎಲ್ಲೆಲ್ಲೂ ಗಾಂಧಿಯ ಮಾತು.. ಪೇಪರಿನಲ್ಲಿ ಟೆಲಿವಿಷನ್ನಿನಲ್ಲಿ, ಸಭೆಗಳಲ್ಲಿ ಗಾಂಧಿಯ ಪುಸ್ತಕಗಳ ಸುರಿಮಳೆ !

Dr. Shridevi and Dr.H. K. Chandrashekhar1983ರ ಬೇಸಿಗೆಯಲ್ಲಿ ನ್ಯೂಯಾರ್ಕ್‌ ನಗರದ ಮೇಯರ್‌ ಕಚೇರಿಯಿಂದ ಕರೆ ಬಂತು. ಮೇಯರ್‌ ಅವರ ಜನಾಂಗ ಸಲಹಾ ಸಮಿತಿ (Ethnic advisory council) ಯಲ್ಲಿ ಭಾರತವನ್ನು ಪ್ರತಿನಿಧಿಸಲು ನನ್ನನ್ನು ಆಹ್ವಾನಿಸಿದ್ದರು. ಸಮಿತಿಯಲ್ಲಿ ನ್ಯೂಯಾರ್ಕ್‌ ನಗರದಲ್ಲಿ ನೆಲಸಿರುವ ವಿವಿಧ ಜನಾಂಗಗಳ ಪ್ರಾತಿನಿಧ್ಯ ಇದ್ದು, ಅವರವರ ವಿಶೇಷ ಕುಂದು ಕೊರತೆಗಳನ್ನು ಮೇಯರ್‌ ಗಮನಕ್ಕೆ ತರಲು ಸಾಧ್ಯವಾಗುವಂತೆ ಅವಕಾಶ - ಹಾಗೆಯೇ ಒಂದೊಂದು ಸಮೂಹದ ವೈವಿಧ್ಯತೆಯನ್ನು ಎತ್ತಿ ಹಿಡಿಯುವ ಏನಾದರೊಂದು ಕಾರ್ಯಕ್ರಮ ಹಾಕಿಕೊಳ್ಳಿರೆಂದು ನಮಗೆ ಮೇಯರ್‌ ಅವರ ವಿಶೇಷ ಸಹಾಯಕ Herb Rickman ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆದ ಮೊದಲ ಸಭೆಯಲ್ಲಿ ತಿಳಿಸಿದರು. ಚೀನೀಯರು, ರಷ್ಯದವರು, ಐರಿಷ್‌ಮಂದಿ, ಜರ್ಮನರು ಮುಂತಾಗಿ ಎಲ್ಲರೂ ಒಂದಲ್ಲ ಒಂದು ಸಮಾರಂಭವನ್ನೋ ಸಾಂಕೇತಿಕ ಫಲಕಗಳ ನಿರ್ಮಾಣವನ್ನೋ ಸೂಚಿಸುತ್ತಿದ್ದರು. ಮ್ಯಾನ್‌ಹ್ಯಾಟ್‌ನ್ನಿನಲ್ಲಿ ಕೆಳ Lexington ಅಡಛಿ‘ಲಿಟಲ್‌ ಇಂಡಿಯಾ’ ಮೂಲಕ ಸಾಗುತ್ತದೆ. ಅವೆನ್ಯೂದ ಇಕ್ಕೆಡೆಗಳಲ್ಲೂ ಭಾರತವನ್ನು ಸೂಚಿಸುವ ದಾರಿ ಫಲಕಗಳ ನಿರ್ಮಾಣ ನನ್ನ ಸಲಹೆಯಾಗಿತ್ತು.

ತಿಂಗಳಿಗೊಂದು ಬಾರಿ ಈ ಸಮಿತಿ ಕೂಡುತ್ತದೆ. ಜನವರಿ 1984ರ ಸಭೆಯಲ್ಲಿ ನಾನು ಮಹಾತ್ಮಾ ಗಾಂಧಿ ಭಾರತದ ಅಮೂಲ್ಯ ಆಸ್ತಿ , ಅವರ ಸ್ಮಾರಕ ಇಲ್ಲೇ ಏಕೆ ಇಡೀ ಅಮೆರಿಕದಲ್ಲೇ ಕಂಡಿಲ್ಲ. - ನಾವು ನ್ಯೂಯಾರ್ಕಿನಲ್ಲಿ ಅವರ ಸ್ಮಾರಕ ಏನನ್ನಾದರೂ ಏಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದೆ. ಹರ್ಬ್‌ ಸಲಹೆಯನ್ನು ಒಪ್ಪಿ ಮೇಯರ್‌ ಜತೆಗೆ ಮಾತನಾಡಿ ಎಂದರು. ಫೆಬ್ರವರಿ 11ರಂದು ಮೊದಲ ಬಾರಿಗೆ ನಡೆದ ಜನಾಂಗಗಳ ಪತ್ರಿಕಾಗೋಷ್ಠಿಯಲ್ಲಿ ನಾನು ಮೇಯರ್‌ ಅವರನ್ನು ಉದ್ದೇಶಿಸಿ ಗಾಂಧೀಜಿ ಜಗತ್ಪ್ರಸಿದ್ಧ ಮಹಾಪುರುಷರು, ಈ ಶತಮಾನದಲ್ಲಿ ಜೀವಿಸಿದ್ದವರು. ಅಂಥವರ ಸ್ಮಾರಕವನ್ನು ಪ್ರಪಂಚದಲ್ಲೇ ಅತ್ಯುನ್ನತ ಸ್ಥಾನ ಗಳಿಸಿರುವ ನ್ಯೂಯಾರ್ಕ್‌ ಮಹಾನಗರದಲ್ಲಿ ನಾವು ನಿರ್ಮಿಸಬೇಡವೇ ? ಏನನ್ನುತ್ತೀರಿ ? ಎಂದು ಕೇಳಿದೆ. ಮೇಯರ್‌ ಎಡ್ವರ್ಡ್‌ ಕೋಚ್‌ ಹುರುಪಿನ ಮನುಷ್ಯ. ಖಂಡಿತವಾಗಿಯೂ ಮಾಡೋಣಾ. ಮಹಾತ್ಮರ ಸ್ಮರಣೆಗಾಗಿ ಸೂಕ್ತವಾದ ಸ್ಮಾರಕ ನಿರ್ಮಿಸೋಣ. ಕೂಡಲೇ ಹರ್ಬ್‌ ರಿಕ್‌ಮನ್‌ರೊಂದಿಗೆ ಚರ್ಚಿಸಿ ಸರಿಯಾದ ಸಲಹೆಗಳನ್ನು ತನ್ನಿ ಎಂದರು. ಕೆಲವೇ ದಿನಗಳಲ್ಲಿ ಮೇಯರ್‌ ಕಚೇರಿಯಿಂದ ನನಗೊಂದು ಕಾಗದ ಬಂತು, ಅದರಲ್ಲಿ ಗಾಂಧಿ ಸ್ಮಾರಕವನ್ನು ಸೂಚಿಸಿದ್ದಕ್ಕೆ ಪ್ರಶಂಸಿಸಿ ಈ ಕೆಲಸಕ್ಕೆ ಎಲ್ಲ ವಿಧದಲ್ಲೂ ನನಗೆ ಸಹಾಯ ನೀಡುವುದಾಗಿ ಆಶ್ವಾಸನೆಯಿತ್ತು.

ನಂತರದಲ್ಲಿ ಎರಡು ಯೋಜನೆಗಳನ್ನು ಮಂಡಿಸಿ ಕಾಗದ ಬರೆದೆ. ಒಂದು ನಗರದ ಯಾವುದಾದರೊಂದು ದೊಡ್ಡ ರಸ್ತೆಗೆ ‘ಮಹಾತ್ಮಾ ಗಾಂಧಿ ಅವೆನ್ಯೂ’ ಎಂದು ಹೆಸರಿಡುವುದು. ಎರಡು ನಗರದ ಪ್ರಮುಖ ಸ್ಥಳವೊಂದಲ್ಲಿ ಅವರ ಪೂರ್ಣ ಪ್ರತಿಮೆಯ ನಿರ್ಮಾಣ. ಈ ಕಾಗದ ಸೇರಿದ ಒಂದೆರಡು ತಿಂಗಳಲ್ಲಿ ನಗರದ ಮಾರ್ಕ್ಸ್‌ ಇಲಾಖೆಯ ಜೋಸೆಫ್‌ ಬ್ರೆಸ್ನನ್‌ ಅವರಿಂದ ಲಿಟಲ್‌ ಇಂಡಿಯ ಮೂಲಕ ಹೋಗುವ ಹಾದಿಗೆ ಅವರ ಹೆಸರಿಟ್ಟರೆ ಅವರ ಘನತೆಗೆ ಸಾಕಾಗುವುದಿಲ್ಲ. ಮ್ಯಾನ್‌ ಹ್ಯಾಟನ್ನಿನಲ್ಲಿ ಹೆಸರಿಡಲು ಸೂಕ್ತವಾದ ದೊಡ್ಡ ರಸ್ತೆ ಗುರುತಿಸಲು ಬಹು ಸಮಯ ಹಿಡಿದೀತು. ಆದರೆ ಪ್ರತಿಮಾ ನಿರ್ಮಾಣಕ್ಕಾದರೆ ಜಾಗ ಹುಡುಕುವುದು ಬೇಗ ಸಾಧ್ಯವಾಗಬಹುದು ಎಂದಿದ್ದರು. ನನಗೆ ಕಾಗದ ಬರೆದು ಭಾರತೀಯರು ಬಹುಸಂಖ್ಯೆಯಲ್ಲಿ ವಾಸಿಸುವ ಕ್ವೀನ್ಸ್‌ ವಿಭಾಗದಲ್ಲಿ ಪ್ರತಿಮೆಗೆ ಅವಕಾಶ ಮಾಡಿಕೊಡುವದೇ ಎಂದು ಕೇಳಿದರು. ನಾನು ಮೇಯರ್‌ ಕಚೇರಿಯಲ್ಲಿ ಕಮಿಷನರ್‌ ಜತೆ ಮಾತನಾಡಿ ಗಾಂಧೀಜಿ ಕೇವಲ ಭಾರತೀಯ ಸಂಕೇತ ಮಾತ್ರವಲ್ಲ. ಅವರು ಇಡೀ ಮನುಷ್ಯ ವರ್ಗಕ್ಕೆ ಸೇರಿದವರು. ಆದ್ದರಿಂದ ನ್ಯೂಯಾರ್ಕಿನಲ್ಲಿ ಭಾರತೀಯರ ವಾಸಸ್ಥಾನವನ್ನು ಹುಡುಕಿಕೊಂಡು ಹೋಗಬೇಕಾದ್ದಿಲ್ಲ. ಮೇಲಾಗಿ ನ್ಯೂಯಾರ್ಕ್‌ ನಗರವೆಂದರೆ ಲೋಕ ತಿಳಿಯುವುದು ಮ್ಯಾನ್‌ ಹ್ಯಾಟನ್‌ ಮಾತ್ರವೇ. ಅಮೆರಿಕಾಕ್ಕೆ ಮ್ಯಾನ್‌ ಹ್ಯಾಟನ್‌ ಪ್ರಮುಖ ನೋಟದ ಸ್ಥಳ, ಅಲ್ಲಿಯೇ ನಿರ್ಮಿಸಬೇಕಾದ್ದು ಸರಿ. ನಮ್ಮ ಜನ ಬೇರೆಯಲ್ಲಿಯೂ ಪ್ರತಿಮೆ ಇಡಲು ಒಪ್ಪುವುದಿಲ್ಲ ಎಂದೆ. ಮೊದಲನೆಯ ಅವೆನ್ಯೂದಲ್ಲಿರುವ ಯುನೈಟೆಡ್‌ ನೇಷನ್ಸ್‌ ಕಟ್ಟಡದ ಸುತ್ತಣ ಪ್ರದೇಶದಲ್ಲಿ ಜಾಗ ಹುಡುಕಿರಿ ಎಂದೂ ಸೂಚಿಸಿದೆ.

ಅನೇಕ ವಾರಗಳ ನಂತರ ಮೇಯರ್‌ ಕಚೇರಿಯಿಂದ ನನಗೊಂದು ಕಾಗದ ಬಂತು. ಮೇಯರ್‌ ಕಚೇರಿಯ ವಿವಿಧ ಏಜೆನ್ಸಿಗಳು ಈ ಕಾರ್ಯದಲ್ಲಿ ನೆರವಾಗಬೇಕಾದ್ದರಿಂದ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಪ್ರತಿಮೆಯ ರೇಖಾ ಚಿತ್ರಗಳು ಇವೆಯೇ ? ಅದನ್ನು ತಯಾರಿಸಿಕೊಡುವ ಕಲೆಗಾರ ಸಿದ್ಧವಾಗಿದ್ದಾನೆಯೇ ? ಅದಕ್ಕೆ ತಗಲುವ ವೆಚ್ಚ ಯಾವ ಸಂಸ್ಥೆ ಭರಿಸುತ್ತದೆ ? ಈಗಾಗಲೇ ಈ ಬಗ್ಗೆ ಎಷ್ಟು ಹಣ ಸೇರಿದೆ ? ಇತ್ಯಾದಿ. ಯುನೈಡ್‌ ನೇಷನ್ಸ್‌ ಪರಿಸರದಲ್ಲಿ ಒಂದಂಗುಲ ಜಾಗವೂ ತೆರವಾಗಿಲ್ಲ ಎಂದು ತಿಳಿಯಿತು. ಈ ವೇಳೆಗಾಗಲೇ ಸೆಪ್ಟೆಂಬರ್‌ 1984ಕ್ಕೆ ಕಾಲಿಟ್ಟಿದ್ದೆವು. ನಾನು ಕಲೆಗಾರರನ್ನು ನಿರ್ದೇಶಿಸಲು ಆರಂಭಿಸಿದೆ. ಭಾರತ ಮತ್ತು ಯೂರೋಪಿನಲ್ಲಿ ಉತ್ತಮ ದರ್ಜೆಯ ನವೀನ ಮಾದರಿಯ ಕೆತ್ತನೆ ಕೆಲಸ ಪ್ರದರ್ಶನ ಮಾಡಿ ಪ್ರಖ್ಯಾತರಾಗಿರುವ ಅಮರನಾಥ್‌ ಸೆಹಗಲ್‌ ಪಾರ್ಟಿಯಾಂದರಲ್ಲಿ ಸಿಕ್ಕಿದ್ದರು. ಅವರೊಂದಿಗೆ ಪ್ರತಿಮೆಯ ಬಗ್ಗೆ ಚರ್ಚಿಸಿದೆ. ರೇಖಾ ಚಿತ್ರಗಳನ್ನೂ ಅಂದಾಜು ವೆಚ್ಚವನ್ನೂ ಕುರಿತು ಪರಿಶೀಲಿಸಿದೆವು. ಆಗ್ಗೆ ಯುನೈಟೆಡ್‌ ನೇಷನ್ಸ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ ನಟರಾಜನ್‌ ಕೃಷ್ಣನ್‌ ಅವರು ಭಾರತದಲ್ಲಿ ನೆಲೆಸಿರುವ ಕಲೆಗಾರರನ್ನು ಬಳಸಿಕೊಳ್ಳಲು ಸೂಚಿಸಿ ಆ ಬಗ್ಗೆ ಸಹಾಯ ಮಾಡಲು ಒಪ್ಪಿದರು. ದೆಹಲಿಯಾಂದಿಗೆ ಪತ್ರ ವ್ಯವಹಾರ ಆರಂಭಿಸಿದೆವು. ಆಗ್ಗೆ ನ್ಯೂಯಾರ್ಕಿನಲ್ಲಿ ಕಾನ್ಸಲ್‌ ಜನರಲ್‌ ಆಗಿದ್ದ ಪಟವರ್ಧನ್‌ ಅವರು ಗಾಂಧಿಯ ಮುಖದ ಶಿಲ್ಪಕೃತಿ ಮಾತ್ರವೇ ಸಾಕು. ಅದನ್ನು ಯಾವುದಾದರೂ ಸಾರ್ವಜನಿಕ ಕಟ್ಟಡದ ಆವರಣದಲ್ಲಿ ಇಟ್ಟರೆ ಸಮಂಜಸವಾಗುತ್ತದೆ ಎಂದೂ ಅಭಿಪ್ರಾಯಪಟ್ಟರು. ನನಗೇನೋ ಕೈಯಲ್ಲಿ ದಂಡ ಹಿಡಿದು ನಿಂತ ಗಾಂಧಿ ರೂಪದ ಬಗ್ಗೆ ಮನಸ್ಸು ನೆಟ್ಟಿತ್ತು...

ಅನೇಕ ತಿಂಗಳುಗಳು ಉರುಳಿದವು. 1985ರ ಮೊದಲ ಭಾಗದಲ್ಲಿ ಪಾರ್ಕ್ಸ್‌ ಕಮೀಷನರ್‌ ಕಚೇರಿಯಲ್ಲಿ ಪ್ರತಿಮಾ ನಿರ್ಮಾಣಕ್ಕೆ ಸ್ಥಳ ಹುಡುಕುವ ಕೆಲಸ ನಿಧಾನವಾಗಿ ಸಾಗುತ್ತಿತ್ತು. ನಾನು ಹರ್ಬ್‌ರಿಕ್‌ ಮನ್‌ ಅವರಿಗೆ ಕಾಗದ ಬರೆದು, ಭಾರತೀಯ ಉತ್ಸವ 1985ರ ಜೂನ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಆರಂಭವಾಗುವುದರಲ್ಲಿ ಇರುವುದರಿಂದ ಪ್ರತಿಮಾ ನಿರ್ಮಾಣದ ಕೆಲಸ ತ್ವರೆಮಾಡಿ ಎಂದು ಒತ್ತಾಯಿಸಿದೆ. ಜನವರಿ 25, 1985ರ ದಿನ ಪಾರ್ಕ್ಸ್‌ ಇಲಾಖೆಯ ಜೋಸೆಫ್‌ ಬ್ರೆಸ್‌ನನ್‌ Commissioner Stern ಅವರಿಗೆ ನಿರ್ಮಾಣ ಯೋಗ್ಯ ಸ್ಥಳಗಳ ಬಗ್ಗೆ ಒಂದು ಮೆಮೋ ಕಳಿಸಿದರು. ಅದರ ಪ್ರತಿ ನನಗೆ ತಲುಪಿತು. Battery Park Lafayette & Kenmare ರಸ್ತೆಗಳ ನಡುವಿನ ಚಚ್ಚೌಕ; ಆರನೆ ಅವೆನ್ಯೂ ಮತ್ತು Spring Street ಸಂಧಿಸುವ ಕಡೆ ಇರುವ ತ್ರಿಕೋಣಾಕಾರದ ಜಾಗ, Chamber Street & Reade Street ಹತ್ತಿರದ ಇನ್ನೊಂದು ತ್ರಿಕೋಣ- ಈ ಜಾಗಗಳಲ್ಲಿ ಯಾವೊಂದನ್ನಾದರೂ ಆರಿಸಿಕೊಳ್ಳಬಹುದು ಎಂದು ಸೂಚಿಸಿದ್ದರು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X