ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕಾಗೊ ಕನ್ನಡಿಗರ ಯುಗಾದಿ ಆಚರಣೆಗೆ ಸಕ್ಕರೆಯಾದ ಸಂಗೀತ ರಸಗಂಗೆ

By Staff
|
Google Oneindia Kannada News

*ನಳಿನಿ ಮೈಯ

ಅಂದು ಏಪ್ರಿಲ್‌ 29 ಶನಿವಾರ. ಶಿಕಾಗೊ ವಲಯದ ಕನ್ನಡಿಗರ ಹೃದಯದಲ್ಲಿ ಹೊಸ ಉತ್ಸಾಹ, ಸಂಭ್ರಮ ತುಂಬಿತ್ತು. ಆ ದಿನ ಸಂಜೆ ಕನ್ನಡ ಕೂಟ ವಿದ್ಯಾರಣ್ಯವು ರಾಮಾಲಯ ದೇವಸ್ಥಾನದಲ್ಲಿ ಯುಗಾದಿ ಸಮಾರಂಭವನ್ನು ಆಚರಿಸಲಿತ್ತು ! ಅಷ್ಟೇ ಅಲ್ಲ, ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅಂಗವಾಗಿ ಭೋಜನಾನಂತರ ಕರ್ನಾಟಕದ ಹೆಮ್ಮೆಯ ಸಂಗೀತ ಕಲಾನಿಧಿ ಆರ್‌. ಕೆ. ಶ್ರೀಂಕಂಠನ್‌ ಅವರ ಸಂಗೀತ ಕಚೇರಿಯೂ ಇತ್ತು !

April showers bring may flowers ಎಂದು ಗಾದೆಯೇ ಇದೆ. ಕನ್ನಡ ಕೂಟದ ಯುಗಾದಿ ಸಮಾರಂಭಕ್ಕಾಗಿ ಪ್ರಕೃತಿ ಯಾವ ರಿಯಾಯಿತಿಯನ್ನೂ ತೋರಿಸಲಿಲ್ಲ. ದಿನವಿಡೀ ಜಿನುಗುವ ಮಳೆ ! ಆದರೇನು ? ಹೃದಯದಲ್ಲಿ ಜಿನುಗುವ ಕನ್ನಡದ ಅಭಿಮಾನ, ಕನ್ನಡಿಗರ ಒಡನಾಟದ ನಿರೀಕ್ಷೆಯ ಸಂಭ್ರಮ, ಪುಳಕಕ್ಕೆ ಹೊರಗೆ ಜಿನುಗುವ ಮಳೆ ಸಾಟಿಯೇ ? ಗುಂಪು ಗುಂಪಾಗಿ ಬಂದರು ಜನ ! ಸಭಾಂಗಣದ ತುಂಬೆಲ್ಲ ಜನ !

ದೇವಸ್ಥಾನದ ಅರ್ಚಕರಿಂದ ಪೂಜೆ, ಪಂಚಾಂಗ ಶ್ರವಣ. ಶ್ರೀದೇವಿ ರಂಗರಾಜನ್‌ ಅವರ ಪ್ರಾರ್ಥನೆಯಾಂದಿಗೆ ಅಂದಿನ ಕಾರ್ಯಕ್ರಮ ಆರಂಭವಾಯಿತು. ಕುಮಾರಿ ಸ್ವಾತಿ ಭಟ್‌ ಅಮೆರಿಕಾದ ರಾಷ್ಟ್ರಗೀತೆಯನ್ನು ಹಾಡಿದರು. ಪ್ರಸನ್ನ ರಾವ್‌ ಅವರು ಭಾರತದ ರಾಷ್ಟ್ರಗೀತೆಯನ್ನು ಹಾರ್ಮೋನಿಕಾದಲ್ಲಿ ನುಡಿಸಿದರು. ನಂತರ ಅಧ್ಯಕ್ಷರಾದ ಮೋಕ್ಷಗುಂಡಂ ಜಯರಾಮ್‌ ಅವರ ಸ್ವಾಗತ ಭಾಷಣ.

ಜಯರಾಮ್‌ ಅವರು ಈಗಾಗಲೇ ಹಲವು ಬಾರಿ ಕನ್ನಡ ಕೂಟದ ಪದಾಧಿಕಾರಿಗಳಾಗಿದ್ದವರು. ಅಲ್ಲದೆ ದೇವಸ್ಥಾನದ ಆಡಳಿತದಲ್ಲೂ ನುರಿತವರು. ಅವರ ಕಾರ್ಯದಕ್ಷತೆ, ಶಿಸ್ತು ಅಂದಿನ ಸಮಾರಂಭದ ಎಲ್ಲ ಮಜಲುಗಳಲ್ಲೂ ತಾನೇ ತಾನಾಗಿ ವ್ಯಕ್ತವಾಗಿತ್ತು.

Kannadave Shaktiಇನ್ನು ಮನರಂಜನೆಯ ಕಾರ್ಯಕ್ರಮ ! ಪುಟಾಣಿಗಳೆಲ್ಲ ‘ ಭಾರತದ ಪ್ರಸಿದ್ಧ ವ್ಯಕ್ತಿಗಳು’ಎಂಬ ಕಾರ್ಯಕ್ರಮದಲ್ಲಿ ವಿವಿಧ ಪೋಷಾಕುಗಳನ್ನು ಧರಿಸಿ ವೇದಿಕೆಯ ಮೇಲೆ ಬಂದರು. ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಕೃಷ್ಣ ದೇವರಾಯ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವಿಶ್ವೇಶ್ವರಯ್ಯ ಮುಂತಾದವರು ಕಾಲದ ಪರದೆಯನ್ನು ಸರಿಸಿ ವಿದ್ಯಾರಣ್ಯ ಸದಸ್ಯರಿಗೆ ಭೇಟಿ ನೀಡುವ ಸಲುವಾಗಿ ಇಲ್ಲಿಗೆ ಚಿತ್ತೆೈಸಿದರೆ! ಆಮೇಲೆ ಹದಿನಾರರ ಹರೆಯದ ಕಿಶೋರಿಯರಿಂದ ಕೋಲಾಟ ಮತ್ತು ನೃತ್ಯ ಕಣ್ಮನಗಳನ್ನು ಸೂರೆಗೊಂಡಿತ್ತು. ಜ್ಞಾನ ಭಾರತಿ ಕನ್ನಡ ಶಾಲೆಯ ಮಕ್ಕಳಿಂದ ‘ವಂದೇ ಮಾತರಂ’ ಮತ್ತು ‘ಏರಿಸಿ, ಹಾರಿಸಿ ಕನ್ನಡದ ಬಾವುಟ’ ಹಾಡುಗಳಿಗೆ ತಕ್ಕಂತೆ ಕುಣಿತ! ಸಮಾರಂಭಕ್ಕೆ ಕಳೆ ಏರಿಸಿತ್ತು. ಹಲವು ವರ್ಷಗಳಿಂದ ಕನ್ನಡ ಕೂಟದ ಆಧಾರ ಸ್ತಂಭವಾಗಿದ್ದ ನಾಗ ಐತಾಳರ ಸೇವೆಯನ್ನು ಗುರುತಿಸಿ ಅಧ್ಯಕ್ಷ ಜಯರಾಮ್‌ ಅವರು ಅವರಿಗೆ ಫಲಕವನ್ನಿತ್ತು ಗೌರವಿಸಿದರು.

Vidyaranya KK girlsಎಲ್ಲರಿಗೂ ರೋಮಾಂಚನವಾಗುವಂತೆ ಭಾವಗೀತೆಗಳನ್ನು ಹಾಡಿದವರು ಮೆಂಫಿಸ್‌ನಿಂದ ಬಂದಿದ್ದ ವಿಶ್ವೇಶ್‌ ಭಟ್‌ ಅವರು ಮತ್ತು ಸ್ಥಳೀಯ ಕನ್ನಡತಿ ಶೀಲಾ ಶಂಕರ್‌ ಅವರು. ವಿಶ್ವೇಶ್‌ ಅವರ ಕಂಚಿನ ಕಂಠದಲ್ಲಿ ‘ಸಿರಿಗೆರೆಯ ನೀರಿನಲಿ’, ‘ ಘಮ ಘಮ ಘಮ್ಮಾಡಿಸ್ತಾವ’ ‘ ಯಾವುದೀ ಪ್ರವಾಹವೋ’ ಮುಂತಾದ ಪರಿಚಿತ ಕವನಗಳಿಗೆ ಹೊಸ ಚೈತನ್ಯ ತುಂಬಿ ಬಂದ ಹಾಗಾಗಿದ್ದನ್ನು ಮರೆಯುವಂತೆಯೇ ಇಲ್ಲ ! ಶೀಲಾ ಅವರ ಸುಶ್ರಾವ್ಯ ಕಂಠದಲ್ಲಿ ‘ಯಾವ ಜನ್ಮದ ಮೈತ್ರಿ’ , ‘ಪೂಜಿಸಲೆಂದೇ ಹೂಗಳ ತಂದೆ’ ಹಾಡುಗಳು ಪ್ರೇಕ್ಷಕರನ್ನು ರಸಗಡಲಿನಲ್ಲಿ ತೇಲಿಸಿದವು.
ಬಿಸಿಬೇಳೆ ಭಾತ್‌, ಹೋಳಿಗೆಯನ್ನೊಡಗೂಡಿದ ರಸಗವಳ, ಆರ್‌. ಕೆ.ಶ್ರೀಕಂಠನ್‌ ಅವರ ಸಂಗೀತದ ರಸದೌತಣ ! ಇನ್ನೇನು ಬೇಕು ! ಸ್ವರ್ಗಕ್ಕೆ ಮೂರೇ ಗೇಣು ಉಳಿದಿತ್ತು. ಆ ಮೂರು ಗೇಣುಗಳನ್ನು ಪಾರುಗಾಣಿಸಿ ಸ್ವರ್ಗವನ್ನು ಧರೆಗಿಳಿಸಿತ್ತು ಶಿಕಾಗೋ ವಲಯದ ಕನ್ನಡ ಪತ್ರಿಕೆ ‘ ಸಂಗಮ’ದ ಬಿಡುಗಡೆ!

ಅಮೆರಿಕಾ ಎಂಬ ಹೊರ ದೇಶದಲ್ಲಿ ತಮ್ಮ ಕನ್ನಡತನದ ಅನುಭವಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಹಂಬಲಿಸಿ ಬಾಯಾರಿದ್ದ ಕನ್ನಡಿಗರ ಅಂತರಂಗಕ್ಕೆ ರಸಗಂಗೆಯ ಮಹಾಪೂರವಾಗಿ ಹರಿದುಬಂದು ಮೈಮನಗಳನ್ನು ತಣಿಸಿತ್ತು ಕನ್ನಡ ಕೂಟದ ಯುಗಾದಿ ಸಮಾರಂಭ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X