• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಾನು ಪ್ರಪಂಚ ಸುತ್ತಿ ಬಂದೆ’(ವಿಶ್ವ ಪರ್ಯಟನ- ಕೆಲವು ಅನುಭವಗಳು)

By Staff
|

*ವಿಜಯ ಗುಂ. ರುಈಕರ
ಅಂಟಿಯೋಕ್‌, ಕ್ಯಾಲಿಫೋರ್ನಿಯ, ಯುಎಸ್‌

Vijay Ruikar‘ಯುದ್ಧಸ್ಯ ವಾರ್ತಾ ರಮ್ಯಾ’ ಎಂಬ ಒಂದು ಗಾದೆ ಸಂಸ್ಕೃತ ಭಾಷೆಯಲ್ಲಿದೆ. ಯುದ್ಧದ ವಾರ್ತೆಗಳಿಗಿಂತಲೂ ಸ್ವಾರಸ್ಯಕರವಾದ ಅನುಭವಗಳು ಕೆಲವು ಸಾರಿ ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ಕಂಡು ಬರುವುದು ಸಹಜ. ಒಂದು ಕಾಲಕ್ಕೆ ತಿಂಗಳುಗಟ್ಟಲೆ ಸಮಯ ತೆಗೆಯುತ್ತಿದ್ದ ಪ್ರವಾಸಗಳು, ಇಂದು ವಿಮಾನ ವೇಗದಿಂದ ಕೆಲವು ಗಂಟೆಗಳಲ್ಲಿಯೇ ಪೂರ್ತಿಯಾಗುತ್ತವೆ. ‘ಇಂಟರ್‌ನೆಟ್‌’ ಮತ್ತು ಇ- ಮೇಲ್‌ ಕ್ಷಣಾರ್ಧದಲ್ಲಿ ಸಂದೇಶಗಳ ವಹನ ಸಾಧ್ಯಗೊಳಿಸಿವೆ, ಆದರೆ ಸ್ವಂತ ಪ್ರವಾಸ ಮಾಡಿದಾಗ ಕಂಡುಬರುವ ವಿವಿಧ ಆಚಾರ ವಿಚಾರಗಳು, ಆಹಾರ, ವಸ್ತ್ರಗಳ ಪದ್ಧತಿಗಳು, ಸಾಂಸ್ಕೃತಿಕ ವೈವಿಧ್ಯತೆಗಳು ಕಂಪ್ಯೂಟರ್‌ ಮುಖಾಂತರ ಅನುಭವಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ . ಈ ಕೆಳಗೆ ಇಂಥ ಕೆಲವು ನೈಜ ಅನುಭವಗಳನ್ನು ಬಣ್ಣಿಸುವ ಪ್ರಯತ್ನ ವಾಚಕರನ್ನು ಸಂತೋಷಪಡಿಸುವುದೆಂದೇ ನನ್ನ ನಂಬುಗೆ.

ಜರ್ಮನಿಯಲ್ಲಿ ಚೀನೀಯರ ಟೀ

ಜನವರಿ ತಿಂಗಳ ಕಡು ಚಳಿಯ ದಿನಗಳಲ್ಲೊಮ್ಮೆ ನಾನು ಹ್ಯಾಂಬುರ್ಗ ಪಟ್ಟಣದ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಬೇಗ ಹೊರಡುವ ವಿಮಾನಕ್ಕೆಂದು ಬಂದೆ. ಕೋರೈಸುವ ಚಳಿಗಾಳಿ, ಹಿಂದಿನ ರಾತ್ರಿಯಿಡೀ ಹಿಮವೃಷ್ಟಿಯಾದುದರಿಂದ ಇಡೀ ಭೂಭಾಗ ಬೆಳ್ಳಗೆ ಕಾಣಿಸುತ್ತಿತ್ತು . ಬೇಗಬೇಗನೇ ನನ್ನ ಬಾಡಿಗೆಯ ಕಾರನ್ನು ಹಿಂತಿರುಗಿಸಿ, ವಿಮಾನ ನಿಲ್ದಾಣದ ಒಳಗೆ ಹೊಕ್ಕಾಗ, ಎದುರಿಗೇ ಒಂದು ರೆಸ್ಟೋರೆಂಟ್‌ ಕಾಣಿಸಿತು. ಸರಿ, ಟೀ ಕುಡಿಯಲೆಂದು ಒಳಗೆ ಹೋದೆ. ಆಗ ಇನ್ನೂ ಬೆಳಗಿನ ಆರೂವರೆ ಗಂಟೆ ; ಇಡೀ ರೆಸ್ಟೋರೆಂಟಿನಲ್ಲಿ ನಾನೊಬ್ಬನೇ ಗಿರಾಕಿ. ಒಂದು ಕಡೆ ಕ್ಯಾಷ್‌ ರೆಜಿಸ್ಟರಿನ ಬಳಿ ಒಬ್ಬ ವಯೋವೃದ್ಧೆ- ಚೀನಾ ಮಹಿಳೆ ಕುಳಿತಿದ್ದಳು.

ನನ್ನನ್ನು ನೋಡಿದಾಗ, ತನಗೆ ತುಂಬಾ ಆರ್ಥರೈಟಿಸ್‌ ಇದೆ; ಆದ್ದರಿಂದ ನಾನೇ ನನಗೆ ಇಷ್ಟವಾದ ಟೀ, ಬಿಸ್ಕತ್ತು ಇತ್ಯಾದಿ ವಸ್ತುಗಳನ್ನು ಒಂದು ಟ್ರೇ ಮೇಲೆ ಇಟ್ಟು, ಅವಳ ಬಳಿ ಕ್ಯಾಷ್‌ ರೆಜಿಸ್ಟರಿಗೆ ಹಣ ಕೊಡಲು ಬರಬೇಕೆಂದು ಅವಳು ಸೂಚಿಸಿದಳು.

ನಾನು ಟೀ ಡಿಕಾಕ್ಷನ್‌ ಒಂದು ಕಪ್ಪಿನಲ್ಲಿ ಹಾಕಿ, ಹಾಲು, ಸಕ್ಕರೆ ಅದರಲ್ಲಿ ಹಾಕುತ್ತಿರುವಾಗ ನನ್ನ ಬೆನ್ನಿನ ಮೇಲೆ ಯಾರೋ ತಟ್ಟಿದಂತಾಯಿತು. ತಿರುಗಿ ನೋಡಿದಾಗ ಅವಳೇ ಮುದುಕಿ. ತನ್ನ ಆರ್ಥರೈಟಿಸ್‌ನ್ನು ಬದಿಗಿಟ್ಟು ಕುಳಿತಲ್ಲಿಂದ ಎದ್ದು, ನನ್ನ ಹತ್ತಿರ ಬಂದಿದ್ದಳು. ದೊಡ್ಡ ಕಣ್ಣು ಮಾಡಿ ನನ್ನ ಕೇಳಿದಳು. ‘ what are you doing to my tea ?’

ಚೀನಿಯರು ಜಗತ್ತಿನಲ್ಲಿಯೇ ಅತಿ ಹೆಚ್ಚು ಟೀ ಕುಡಿಯುವವರು. ಅವರಲ್ಲಿ ಡಿಕಾಕ್ಷನ್‌ ಮಾತ್ರ ಕುಡಿಯುವುದು ರೂಢಿ. ಹಾಲು, ಸಕ್ಕರೆಗಳು ಸೇರಿಸುವ ಪದ್ಧತಿ ಬ್ರಿಟಿಷರಲ್ಲಿ ಮತ್ತು ಭಾರತೀಯರಲ್ಲಿ ಇದ್ದದ್ದು ಆ ಮುದುಕಿಗೆ ಗೊತ್ತೇ ಇರಲಿಲ್ಲ ! ಮೇಲಾಗಿ, ನನ್ನ ಬದಿಯಲ್ಲೊಬ್ಬ ಜರ್ಮನ್‌ ಮನುಷ್ಯ ಟೀ ಡಿಕಾಕ್ಷನ್‌ದಲ್ಲಿ ನಿಂಬೆ ಹಣ್ಣು ಹಿಂಡಿ, ಅದನ್ನು ಕುಡಿದು ಬಾಯಿ ಚಪ್ಪರಿಸುತ್ತಿದ್ದ. ನಾನದನ್ನು ಅವಳಿಗೆ ತೋರಿಸಿದಾಗ, ಬೆರಗಾಗಿ, ಅವಾಕ್ಕಾಗಿ ಅವಳು ಹೊರಟು ಹೋದಳು.

ಡೆನ್ಮಾರ್ಕಿನಲ್ಲಿ ಶ್ರೀಕೃಷ್ಣನ ಕೃಪೆ

ಜಗತ್ತಿಡೀ ತಿರುಗುವಾಗ, ಶುದ್ಧ ಶಾಕಾಹಾರಿ ವ್ಯಕ್ತಿಗೆ ಕೆಲವೊಮ್ಮೆ ಶಾಕಾಹಾರ ಸಿಗಲು ತೀರಾ ತೊಂದರೆಯಾಗುವುದುಂಟು. ಒಮ್ಮೆ ನಾನು ಡೆನ್ಮಾರ್ಕ್‌ ದೇಶದ ‘ಕಾರುಪ್‌’(karup) ಎಂಬ ಪಟ್ಟಣಕ್ಕೆ ಹೋಗಿದ್ದೆ. ಇಲ್ಲಿಂದ ಹತ್ತಿರದಲ್ಲಿ ‘ವ್ಹೀ ಬೋರ್ಗ’( viborg) ಎಂಬ ಔದ್ಯೋಗಿಕ ಭಾಗಕ್ಕೆ ತಲುಪುವಾಗ ರಾತ್ರಿ ಎಂಟೂವರೆಯಾಗಿತ್ತು. ಜಡಿ ಮಳೆ ಸುರಿಯುತ್ತಿತ್ತು. ಅಕ್ಕಪಕ್ಕದಲ್ಲಿ ನೋಡುವಾಗ, ಈ ಚಿಕ್ಕ ಊರಿನ ಅಂಗಡಿಗಳೆಲ್ಲ ಮುಚ್ಚಿಹೋಗಿ, ರಸ್ತೆಗಳೆಲ್ಲ ಶಾಂತವಾಗಿದ್ದವು. ಸುಮಾರು ಮುಕ್ಕಾಲು ಗಂಟೆ ಹುಡುಕಾಡಿದ ನಂತರ ನನ್ನ ಬಾಡಿಗೆಯ ಕಾರನ್ನು ನನ್ನ ನಿವಾಸದ ಹೋಟೆಲಿನ ಬಳಿ ತರಲು ಸಾಧ್ಯವಾಯಿತು. ಅಲ್ಲಿ ಕೆಳ ಅಂತಸ್ತಿನಲ್ಲಿ ಒಂದು ರೆಸ್ಟೋರೆಂಟ್‌ ಇನ್ನೂ ತೆರೆದಿತ್ತು.

ಜಡಿ ಮಳೆಯಲ್ಲಿ, ರಾತ್ರಿಯ ಇಷ್ಟು ತಡವಾದ ಸಮಯದಲ್ಲಿ, ಊರಲ್ಲೆಲ್ಲ ಬೇರೆ ರೆಸ್ಟೋರೆಂಟ್‌ ಹುಡುಕುವುದು ಯುಕ್ತವಾಗಿರಲಿಲ್ಲ. ಆದ್ದರಿಂದ, ನನ್ನ ಹೋಟೆಲಿನ, ತೆರೆದಿದ್ದ ರೆಸ್ಟೋರೆಂಟಿಗೇ ರಾತ್ರಿಯ ಊಟದ ಸಲುವಾಗಿ ನಾನು ಹೋದೆ. ಈ ಹೋಟಲು ತುಂಬಾ ಚಿಕ್ಕದು. ಅದರ ಮಾಲೀಕನೇ ರೆಸ್ಟೋರೆಂಟ್‌ ಸಂಚಾಲಕ, ಅಡುಗೆಯವ ಮತ್ತು ವೇಟರ್‌ (waiter)ಆಗಿದ್ದ .

ಐರೋಪ್ಯರ ಮಾಂಸಾಹಾರ ಪ್ರಸಿದ್ಧವಷ್ಟೇ. ಇಡೀ ಮೆನ್ಯು ದಲ್ಲಿ ಕೇವಲ ‘ಗ್ರೀನ್‌ ಸ್ಯಾಲಡ್‌’(Green salad) ಮಾತ್ರ ಶಾಕಾಹಾರಿ ಪದಾರ್ಥವಿತ್ತು . ಅದನ್ನೇ ತಂದುಕೊಡಿ, ಎಂದು ನಾನು ಆ ಮಾಲೀಕನಿಗೆ ವಿನಂತಿಸಿದೆ.

ಆತ ನನ್ನ ಹತ್ತಿರ ಬಂದು, ಕನ್ನಡಕ ಹಾಕಿಕೊಂಡು, ಪುನಃ ಒಮ್ಮೆ ನನ್ನನ್ನು ನೋಡಿದ. ‘ನೀವು ಭಾರತೀಯರಲ್ಲವೇ?’ ಎಂದು ಕೇಳಿದ. ನಾನು ಹೌದೆಂದಾಗ, ‘ನಿಮಗೆ ಭಾರತೀಯ ಶಾಕಾಹಾರ ಊಟವೇ ಉತ್ತಮ, ಅಲ್ಲವೇ’ ಎಂದು ಕೇಳಿದ. ‘ಹೌದು, ಆದರೆ ಇಲ್ಲೆಲ್ಲಿ ಅದು ಈಗ ಸಿಗಬಹುದು?’ ಎಂದು ನಾನು ಕೇಳಿದೆ. ಆಗ ಆತ, ಬೇರೆ ಎಲ್ಲ ಗಿರಾಕಿಗಳು ನೋಡುತ್ತಿದ್ದಾಗ ಹೇಳಿದ : ‘ಸ್ವಲ್ಪ ತಡೆಯಿರಿ. ಈ ‘ಮೆನ್ಯು’ ದಿಂದ ಏನನ್ನೂ ‘ಆರ್ಡರ್‌’ ಮಾಡಬೇಡಿ. ನಾನೀಗ ಒಂದು ನಿಮಿಷದಲ್ಲಿ ಪುನಃ ಬರುತ್ತೇನೆ’ ಎಂದು ಗಡಿಬಿಡಿಯಿಂದ ಹೊರಟುಹೋದ.

ಸುಮಾರು ಕಾಲುಗಂಟೆಯ ನಂತರ ಆತ ಹಿಂದಿರುಗಿದ. ಅವನ ಜೊತೆಗೆ ಅವನ ಹೆಂಡತಿ, ಮಗ ಮತ್ತು ಸೊಸೆ ಇದ್ದರು. ಮೂವರು ಭಾರತೀಯ ವೇಷಭೂಷಣದಲ್ಲಿದ್ದರು! ಇಬ್ಬರೂ ಹೆಂಗಸರು ಸೀರೆ, ಕುಬುಸ, ಕುಂಕುಮ, ಬಳೆಗಳೊಂದಿಗೆ ಸಾಲಂಕೃತರಾಗಿದ್ದರು. ಅವನ ಮಗ, ಧೋತರ ಮತ್ತು ಶರ್ಟನ್ನು ಧರಿಸಿದ್ದ . ಎಲ್ಲರೂ ಬಿಳಿಯರೇ! ಮಗ ಹಣೆಯ ಮೇಲೆ ವೈಷ್ಣವ ನಾಮ ಧರಿಸಿದ್ದ . ತನ್ನ ಟೊಪ್ಪಿಗೆ ಎತ್ತಿ ತಲೆಯ ಮೇಲೆ ಇದ್ದ ಜುಟ್ಟನ್ನು ಅಭಿಮಾನದಿಂದ ತೋರಿಸಿದ!

ಇವರೆಲ್ಲರೂ ಇಸ್ಕಾನ್‌(ISCON- International Society for Krishna consciousness) ಸದಸ್ಯರು, ಅರ್ಥಾತ್‌ ಹರೇಕೃಷ್ಣ ಸಂಪ್ರದಾಯಸ್ಥರು ಆಗಿದ್ದರು. ಸಂಸ್ಕೃತದಲ್ಲಿ ಮಾತುಕತೆ ಮಾಡುವಷ್ಟು ಅವರ ಪ್ರಾವೀಣ್ಯ ನೋಡಿ ನಾನೇ ಬೆಚ್ಚ ಬೆರಗಾದೆ. ತುಪ್ಪದಲ್ಲಿ ಕರಿದು ಮಾಡಿದ ಪೂರಿ, ಪಲ್ಯ, ಸಾಂಬಾರು, ಅನ್ನ ಮುಂತಾದವುಗಳಿಂದ ಪರಿಪೂರ್ಣ ಶಾಕಾಹಾರ ಅಂದು ಭಗವಾನ್‌ ಶ್ರೀಕೃಷ್ಣನ ಕೃಪೆಯಿಂದಲೇ, ಆತನ ಪ್ರಸಾದವೆಂದು ದೊರಕಿತು.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X