ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆರೆಯ ನೀರನು ಕೆರೆಗೆ ಚೆಲ್ಲಿ

By ನಳಿನಿ ಮೈಯ
|
Google Oneindia Kannada News

ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೊ - ಪುರಂದರ ದಾಸ.

ಇಲಿನಾಯ್‌ ಕನ್ನಡ ಕೂಟ, ವಿದ್ಯಾರಣ್ಯವು ಕಳೆದ ಎಂಟು ವರ್ಷಗಳಿಂದ ತನ್ನ ಚಾರಿಟಬಲ್‌ ಫಂಡ್‌ ಸಮಿತಿಯ ಮೂಲಕ ಸಮಾಜದ ನಿರಾಶ್ರಿತರಿಗೆ, ದೀನರಿಗೆ, ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಿರುವ ವಿವಿಧ ಸಂಸ್ಥೆಗಳಿಗೆ ಧನ ಸಹಾಯ ನೀಡುತ್ತಿದೆ. ಈ ವರ್ಷ ಈ ಬಗ್ಗೆ ನಿಧಿ ಸಂಗ್ರಹಕ್ಕಾಗಿ ಎರಡು ಕಾರ್ಯಕ್ರಮಗಳನ್ನು ನಿಯೋಜಿಸಲಾಗಿತ್ತು. ಮೊದಲನೆಯ ಕಾರ್ಯಕ್ರಮ ಎಂ.ಎಸ್‌. ಶೀಲಾ ಅವರ ಸಂಗೀತ ಕಛೇರಿ ಏಪ್ರಿಲ್‌ ತಿಂಗಳಿನಲ್ಲಿ ನಡೆಯಿತು.

ಎರಡನೆಯ ಕಾರ್ಯಕ್ರಮ ಉತ್ತರ ಕ್ಯಾಲಿಫೋರ್ನಿಯಾದ 'ರಾಗ" ತಂಡದವರಿಂದ 'ಸಂಗೀತ ಸಂಧ್ಯೆ" ಡಿಸೆಂಬರ್‌ ಎಂಟರಂದು ನಡೆಯಿತು. 'ಸ್ವಾಮಿ ಕಾರ್ಯ, ಸ್ವಕಾರ್ಯ" ಎಂಬ ಗಾದೆಯನ್ನು ಅನ್ವರ್ಥಗೊಳಿಸಿದ ಕಾರ್ಯಕ್ರಮವಿದು. ವಿವಿಧ ವಸ್ತುಗಳ ಆಕ್ಷನ್‌, ರ್ಯಾಫಲ್‌ ಹಾಗೂ ಟಿಕೆಟ್‌ಗಳ ಮಾರಾಟದಿಂದ ಬಹಳಷ್ಟು ಹಣ ಸಂಗ್ರಹವಾಗಿತ್ತು. 'ರಾಗ" ತಂಡದವರೂ ಉದಾರ ಮನಸ್ಸಿನವರಾಗಿದ್ದು, ತಾಯ್ನಾಡ ಸೇವೆಯಲ್ಲಿ ತಮ್ಮದೊಂದು ಕಿರುಕಾಣಕೆ ಎಂಬ ಮನೋಭಾವದಿಂದ ಈ ಕಾರ್ಯಕ್ರಮವನ್ನು ಉಚಿತವಾಗಿ ನೀಡಿದರು. ಆದರೆ, ಅಂದಿನ ಸಂಗೀತದ ಅಮಲೇರಿಸುವ ಮಾದಕತೆ, ಕಲಾವಿದರು ಮತ್ತು ಸಭಿಕರ ಪರಸ್ಪರ ಭಾಗವಹಿಸುವಿಕೆಯಿಂದ ಸಭಾಂಗಣದಲ್ಲಾದ ವಿದ್ಯುತ್‌ ಸಂಚಾರ, ಮೈ ಮರೆಸುವ ಕುಣಿತ, ಮನ ತಣಿಸುವ ಗಾಯನ ಎಲ್ಲವೂ ಸೇರಿ '"ಸ್ವಾಮಿ ಕಾರ್ಯ" ಮರೆಯಾಗಿ ಇದು 'ಸ್ವಕಾರ್ಯ" ಎನ್ನಿಸುವಂತೆ ಮಾಡಿತ್ತು.

ಹಲವಾರು ಹಳೆಯ ಚಿತ್ರಗೀತೆಗಳು : 'ಮಾಯಾ ಬಜಾರ್‌" ಚಿತ್ರದ 'ಸಾಗಲಿ ತೇಲಿ ತರಂಗದೊಳು", 'ಗೆಜ್ಜೆಪೂಜೆ"ಯ 'ಗಗನವು ಎಲ್ಲೋ", 'ಮನ ಮೆಚ್ಚಿದ ಮಡದಿ" ಚಿತ್ರದ ಪಿ.ಬಿ. ಶ್ರೀನಿವಾಸ್‌ ಹಾಡಿದ 'ಜೈ ಭಾರತ ಜನನಿಯ ತನುಜಾತೆ" 'ಬಬ್ರುವಾಹನ" ಚಿತ್ರದ 'ಆರಾಧಿಸುವೆ ಮದನಾರಿ" ಮುಂತಾದ ಹಾಡುಗಳು ಸಭಿಕರನ್ನು ಗತಿಸಿದ ಸುಂದರ ದಿನಗಳ ಯಕ್ಷ ಲೋಕಕ್ಕೆ ಕೊಂಡೊಯ್ದವು. ಜೊತೆಗೇ ಹೊಸ ಚಿತ್ರಗಳಾದ 'ಅಮೃತವರ್ಷಿಣಿ", 'ನಮ್ಮೂರ ಮಂದಾರ ಹೂವೆ" ಮುಂತಾದ ಚಿತ್ರಗಳ ಗೀತೆಗಳೂ ಇದ್ದವು. ಕಾರ್ಯಕ್ರಮದ ಉತ್ತರಾರ್ಧದಲ್ಲಿ ಸಭಿಕರು ತಮ್ಮ ಸಂಕೋಚ , ನಾಚಿಕೆಯನ್ನು ಬದಿಗೊತ್ತಿ ಎದ್ದು ನರ್ತಿಸಲು ಶುರು ಮಾಡಿದಾಗಲಂತೂ 'ಈ ಸಂಗೀತದ ಮರುಳು ಮಾಡುವ ಶಕ್ತಿಯಾದರೂ ಎಷ್ಟು ಅದ್ಭುತವಾದದ್ದು" ಎಂದು ಎಲ್ಲರಿಗೂ ಅನಂದಾಶ್ಚರ್ಯ ಉಂಟಾಗಿತ್ತು.

ಸಂಗೀತ ಸಂಧ್ಯೆಯಲ್ಲಿ ಭಾಗವಹಿಸಿದ ಕಲಾವಿದರು ರಾಮ್‌ ಪ್ರಸಾದ್‌, ಅಶೋಕ್‌ ಕುಮಾರ್‌, ರವಿಕುಮಾರ್‌, ಬಿ.ವಿ. ಜಗದೀಶ್‌, ಪರಿಮಳ ಮುರಳೀಧರ, ದೀಪ್ತಾ ಕಾರ್ತಿಕ್‌, ಚಂದ್ರಿಕ ಶಂಕರ್‌, ಅಂಜನ್‌ ಶ್ರೀನಿವಾಸ್‌, ಸುನೀಲ್‌ ನಾಡಿಗ್‌ ಶಂಕರ್‌, ಮಹೇಶ್‌ ಕುಮಾರ್‌, ನಟರಾಜ್‌ ಗುಜರನ್‌, ಸತೀಶ್‌ ತಾರೆ ಮತ್ತು ವೆಂಕಟೇಶನ್‌ ವಿಜಯಕುಮಾರ್‌. ಅದಮ್ಯ ಉತ್ಸಾಹವನ್ನೂ, ನಿಸ್ವಾರ್ಥ ಸೇವಾ ಮನೋಭಾವವನ್ನೂ ಹೊಂದಿದ ಕಲಾವಿದರಿಗೆ ಇಲಿನಾಯ್‌ ಕನ್ನಡ ಕೂಟವು ಒಂದು ಕಿರುಕಾಣಿಕೆಯನ್ನು ಮತ್ತು ಶಿಕಾಗೋ ವಲಯದ ಪತ್ರಿಕೆಯಾದ ' ಸಂಗಮ"ವನ್ನು ನೀಡಿ ಗೌರವಿಸಿತು.

ಈ ಕಾರ್ಯಕ್ರಮ ಮೋಕ್ಷಗುಂಡಂ ಜಯರಾಮ್‌ ಅವರ ನೇತೃತ್ವದಲ್ಲಿ ನಡೆದಿದ್ದು ಅವರು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಎರಡು ಸಮಾರಂಭಗಳನ್ನೂ ಸೇರಿಸಿ ಹಲವು ಸಾವಿರ ಡಾಲರ್‌ಮೊತ್ತದ ಹಣ ಕಲೆಕ್ಟ್‌ ಆಗಿದ್ದು, ಸದ್ಯದಲ್ಲೇ ಈ ಹಣವನ್ನು ವಿವಿಧ ಸಂಸ್ಥೆಗಳಿಗೆ ವಿತರಣೆ ಮಾಡಲಾಗುತ್ತದೆ.

English summary
Illinois Kannada koota Vidyaranya organized a sound of music programme to help poor
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X