ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಯಾ ವಿಶೇಷಣವಾಗಿ ಅವ್ಯಯಗಳು :

By Staff
|
Google Oneindia Kannada News

ನಾಮಪದಗಳಿಗೆ ವಿಶೇಷಣಗಳು ಬೇಕಾದಾಗ, ಸಂಸ್ಕೃತದಲ್ಲಿ ಒಂದು ವೈಶಿಷ್ಟ್ಯವಿದೆ : ನಾಮಪದದ ಲಿಂಗ. ವಚನ ಇತ್ಯಾದಿಗಳನ್ನೇ ಆ ವಿಶೇಷಣಗಳೂ ಮೈಯುಂಡಿರಬೇಕು- ಎಂಬುದು ಒಂದು ನಿಯಮ. ‘ಸುಂದರ :ಪುರುಷ :, ಸುಂದರೀ ನಾರೀ, ಸುಂದರಂ ವನಮ್‌’- ಎಂಬಂತೆ.

ಕನ್ನಡದಲ್ಲೂ ಸ್ವಲ್ಪ ಹೆಚ್ಚೂ ಕಡಿಮೆ ಇಂಥದೇ ನಿಯಮವಿದೆ. ನೋಡಿ : ‘ಸುಂದರನಾದ, ಸುಂದರಳಾದ, ಸುಂದರವಾದ....’, ಹೀಗೆ. ಆದರೆ ‘ಅವ್ಯಯ’ಗಳಿಗೆ ಈ ಇಯಮ ತಗಲುವುದಿಲ್ಲ. ‘ಅವ್ಯಯ’ ಎನ್ನುವುದು ಮೂರೂ ಲಿಂಗ, ವಚನಗಳಲ್ಲಿ, ಏಳೂ ವಿಭಕ್ತಿಗಳಲ್ಲಿ ಏನೂ ಬದಲಾಗದೇ ಇದ್ದಂತೆಯೇ ಇರುವ ‘ದೇವರ’ಂಥಾ ಪದ ! ‘ಸಮಯ’ದ ವಿಚಾರ ಬಂದಾಗ, ‘ಕಾಲ’ಕ್ಕೆ ಸಂಬಂಧಿಸಿದಂತೆ, ಕ್ರಿಯಾಪದಗಳ ವಿಶೇಷಣವಾಗಿ ಇರುವ ‘ಅವ್ಯಯ’ಗಳ ಕಡೆಗೆ ಈಗ ಗಮನ ಹರಿಸೋಣ :

‘ಅದೇ ಸಮಯದಲ್ಲಿ’ ಎಂಬ ಅರ್ಥದಲ್ಲಿ, ‘ಸಾಕಮ್‌’ ಎಂಬ ಸಮಯ ಸೂಚಕ ಸಂಸ್ಕೃತ ಪದವನ್ನ, ಬಹಳ ಬಹಳ ಹಿಂದೆಯೇ (ಉದಾ :ಋಗ್ವೇದದ ಹತ್ತನೆಯ ಮಂಡಲದ 54.3ರಲ್ಲಿ ) ನೋಡುತ್ತೇವೆ. ಇದರ ಹಿಂದೆ, ಮುಂದೆ ಇಲ್ಲಿ ಈ ಕ್ರಿಯಾ ವಿಶೇಷಣಗಳ ಅವ್ಯಯಗಳ ದೊಡ್ಡ ಸೈನ್ಯವೇ ಇದೆ.

ಈ ಸೈನ್ಯದಲ್ಲಿ, ಸಂಸ್ಕೃತವನ್ನು ಸ್ವಲ್ಪ ಬದಿಗಿರಿಸಿ, ಕನ್ನಡದ ಕಾಲಸೂಚಕ ಸಾಮಾನ್ಯ ಅವ್ಯಯಗಳೆಂಬ ಪದಾತಿಗಳನ್ನು ಮಾತ್ರ ಪಟ್ಟಿ ಮಾಡೋಣ :

ಕೂಡಲೇ, ಈಗಲೇ, ಒಡನೆ, ಬೇಗ, ವೇಗವಾಗಿ, ತ್ವರೆಯಿಂದ, ತ್ವರಿತವಾಗಿ; ಮೆಲ್ಲಗೆ, ಮೆಲ್ಲ ಮೆಲ್ಲಗೆ, ನಿಧಾನವಾಗಿ, ಸಾವಕಾಶವಾಗಿ; ಮೊದಲು, ಮುನ್ನ; ಇನ್ನು, ಬಳಿಕ, ತರುವಾಯ, ಅನಂತರ, ನಂತರ ; ಈಗ, ಈವಾಗ, ಆಗ, ಆವಾಗ, ಯಾವಾಗ, ಎಂದು ; ಇಂದು, ನಾಳೆ, ನಾಳಿದ್ದು, ನಾಡಿದ್ದು, ; ನೆನ್ನೆ, ಮೊನ್ನೆ ; ಯಾವಾಗಲೂ, ಸದಾ, ನಿರಂತರ, ಚಿರಕಾಲ- ಮುಂತಾದವು.

ಹಳೆಗನ್ನಡದಲ್ಲಿ ಕಾಲಸೂಚಕ ಪ್ರತ್ಯಯಗಳನ್ನು ಗಮನಿಸಿ : ‘ಒಡೆ’ (ತೀಡುವೊಡಲ್ಲಿ ಕಮ್ಮೆಲರ್‌ ತೀಡುಗಂ), ‘ಎ’ (ಗಾಯಕಂ ಪಾಡೆ ದೇವಂ ಮೆಚ್ಚಿದಂ), ‘ಅಲ್‌’ (ಕೆಂಬಿಸಿಲ್‌ ಎಳೆಸಲ್‌ ಎಸೆದುವು ಆಶ್ರಮತರುಗಳ್‌), ‘ಅಲ್‌ ಒಡಂ’ (ವಸಂತಂ ಬರಲೊಡಂ ಕೋಗಿಲೆ ಉಲಿಗುಂ), ‘ಅನ್ನಂ’ (ಹರಿ ಬರ್ಪನ್ನಂ ತಪ ಗೆಯ್ದೆಪಂ), ‘ಅನ್ನೆಗಂ’ (ನೆನೆವನ್ನೆಗಂ ಬಂದಂ), ‘ಇನಂ’ (ಬೆಳಗಪ್ಪಿನಂ ಕೇಳಿಸಿದಂ), ‘ಇನೆಗಂ’ (ಅವಧಿ ಬರ್ಪಿನೆಗಂ ಸೈರಿಸಿದಂ), ‘ಉದುಂ’ (ಬರವೇರೆಂಬುದಂ)- ಮುಂತಾದ ಪ್ರಯೋಗಗಳಿವೆ.

‘ಶಬ್ದಮಣಿದರ್ಪಣ’ದಲ್ಲಿ ಕೇಶೀರಾಜ ‘ಅವ್ಯಯ ಪ್ರಕರಣ’ದಲ್ಲಿ, ‘ಆನೆ’ಯ ವಿಚಾರವಾಗಿ ‘ಇಮ್ಮನೆ, ಸಿಯ್ಯನೆ, ಮೆಲ್ಲನೆ’ಯ ಮಾತಾಡಿ, ‘ಆನುಂ ಎನಿಪ್ಪ ಅವ್ಯಯಮಂ ಸ್ಥಾನ- ದಿಶಾ- ಕಾಲ - ಸಂಖ್ಯೆಗಳೊಳ್‌ ಉಸಿರ್ವರ್‌’ (318) ಎಂದಾಗ, ‘ಎಂದಾನುಂ’ ಇದಕ್ಕೆ ಉದಾಹರಣೆ ಆಗುತ್ತದೆ.

ಇವೆಲ್ಲ ಪದಪುಷ್ಪಗಳು ನಮ್ಮ ‘ಸಮಯ’ದ ‘ಕಾಲ’ದ ದಾಯಾದಿಗಳು, ಒಂದಲ್ಲ ಒಂದು ತರಹಾ.

ವಿಶಿಷ್ಟ ಪಾರಿಭಾಷಿಕ ಪದವಾಗಿ ‘ಸಮಯ’ :

ದೇವರನ್ನು ‘ಶಕ್ತಿ’ಯನ್ನಾಗಿ, ‘ದೇವಿ’ಯನ್ನಾಗಿ ಪರಿಭಾವಿಸಿಕೊಂಡು ಉಪಾಸನೆ ಮಾಡುವವರು, ಇದಕ್ಕೆ ಸಂಬಂಧಿಸಿದ ‘ತಂತ್ರಶಾಸ್ತ್ರ’ ಗ್ರಂಥಗಳನ್ನು ಆಧರಿಸಿ, ಪೂಜೆಮಾಡುತ್ತಾರೆ. ಇಂಥ ತಂತ್ರಶಾಸ್ತ್ರ ಗ್ರಂಥಗಳಲ್ಲಿ ಸಂಕೇತಮಯವಾದ ಮತ್ತು ಗುಪ್ತಸಂಜ್ಞೆಗಳಿಂದ ಕೂಡಿದ ಹಲವಾರು ತಾಂತ್ರಿಕ ಪಾರಿಭಾಷಿಕ ಪದಗಳು ಇವೆ. ‘ಸಮಯ’ ಎಂಬುದು ಅವುಗಳಲ್ಲಿ ಒಂದು.

‘ಲಲಿತಾ ಸಹಸ್ರನಾಮ’ ಈ ಬಗೆಯ ಆರಾಧನೆಗೆ ಒಂದು ಸಾಧನ. ಬ್ರಂಹ್ಮಾಂಡಪುರಾಣದ ಆ ಭಾಗದಲ್ಲಿ, ಶ್ರೀಮಾತಾ- ಲಲಿತಾಂಬಿಕಾ ‘ದೇವಿ’ಯರ ಸಾವಿರ ಹೆಸರುಗಳಲ್ಲಿ ‘ಸಮಯ ಅಂತಸ್ಥಾ’ (97) ಮತ್ತು ‘ಸಮಯಾಚಾರ -ತತ್ಪರಾ’ (98) ಎಂಬ ಸ್ತುತಿಯೂ ಉಂಟು. ‘ಸಮಯ’ದ ಒಳಗಿರುವವಳು, ‘ಸಮಯ’ಕ್ಕೆ ಒಳಗಾಗಿರುವವಳು- ಎಂದು ವಾಚ್ಯಾರ್ಥ. ‘ಸಮಯ’ ಎಂದರೆ, ಹೃದಯಾಕಾಶದಲ್ಲಿ ಇರುವ ಚಕ್ರಕ್ಕೆ ಪೂಜೆಯನ್ನು ಸಲ್ಲಿಸುವುದು- ಎಂದು. ಸಮಯದ ಇನ್ನೊಂದು ಅರ್ಥ : ವಸಿಷ್ಟ, ಶುಕ, ಸನಕ, ಸನಕನಂದನ, ಸನತ್ಕುಮಾರ- ಈ ಐವರ ತಂತ್ರಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ಆಂತರಿಕ ಪೂಜಾ ವಿಧಾನ. ‘ಸಮ’ ಎಂದರೆ ಎಲ್ಲಾ ಬಗೆಯಲ್ಲಿ ಒಂದೇ ರೀತಿ, ‘ಯ’ ಎಂದರೆ ಆ ಭಾವವನ್ನು ಹೊಂದುವವನು/ಳು- ಎಂಬ ವ್ಯಾಖ್ಯಾನವೂ ‘ಸಮಯ’ಕ್ಕೆ ಉಂಟು. ತನ್ನ ‘ವಾಸನಾ ಶುಭಗೋದಯ’ ಸಂಸ್ಕೃತ ಭಾಷ್ಯ ಗ್ರಂಥದಲ್ಲಿ ‘ಲೊಲ್ಲ’ ಎಂಬ ವಿದ್ವಾಂಸ ಇನ್ನೊಂದು ರೀತಿ ‘ಸಮಯ’ಕ್ಕೆ ವಿವರಣೆ ಕೊಡುತ್ತಾನೆ : ‘ಶಿವ ಮತ್ತು ಶಕ್ತಿಯರಿಗೆ ಬಹಳ ‘ಸಾಮ’್ಯ ಉಂಟು ; ಇದನ್ನು ನಾವು ಐದು ಬಗೆಯಲ್ಲಿ ಕಾಣಬಹುದು : 1. ಅಧಿಷ್ಠಾನ ಸಾಮ್ಯ, ಅಂದರೆ ಚಕ್ರ, ಪೂಜಾಕ್ರಮಗಳಲ್ಲಿ. 2. ಅನುಷ್ಠಾನ ಸಾಮ್ಯ, ಅಂದರೆ, ಸೃತಿ, ಸ್ಥಿತಿ, ಸಂಹಾರ ಇತ್ಯಾದಿಗಳಲ್ಲಿ. 3. ಅವಸ್ಥಾನ ಸಾಮ್ಯ, ಅಂದರೆ ನೃತ್ಯ, ಗೀತಾದಿಗಳಲ್ಲಿ. 4. ನಾಮ ಸಾಮ್ಯ, ಅಂದರೆ ಶಿವ-ಶಿವೆ ಎಂಬ ಹೆಸರುಗಳಲ್ಲಿ. 5. ರೂಪ ಸಾಮ್ಯ, ಅಂದರೆ ಆಕಾರ, ಬಣ್ಣಗಳಲ್ಲಿ ಒಂದೇ ರೀತಿಯಲ್ಲಿ ತೋರುವುದು’.

ಶ್ರೀದೇವಿ ‘ಸಮಯಾಚಾರ ತತ್ಪರಾ’ ಎಂದರೆ, (ಮಹಾಭಾರತದಷ್ಟೇ ದೊಡ್ಡದಾದ ಆದರೆ, ಅದರ ಕೆಲವು ಭಾಗಗಳು ಮಾತ್ರ ಉಪಲಬ್ಧವಾಗಿರುವ) ‘ರುದ್ರಯಾಮಳ’ ಎಂಬ ತಾಂತ್ರಿಕ ಗ್ರಂಥದ ಹತ್ತೂ ಅಧ್ಯಾಯಗಳಲ್ಲಿ ಹೇಳಿದ ರೀತಿಯ ನಡವಳಿಕೆಗಳಲ್ಲಿ ತೊಡಗಿರುವವಳು- ಎಂದು ಒಂದು ವ್ಯಾಖ್ಯೆ. ಇನ್ನೊಂದು ವಿಶಿಷ್ಟ ಪೂಜಾ ವಿಧಾನದಲ್ಲಿ, ಮೂಲಾಧಾರದಲ್ಲಿ ಮಣಿಪೂರಚಕ್ರದಲ್ಲಿ ‘ದೇವಿ’ಯನ್ನು ಕಂಡು, ವಿವಿಧ ಚಕ್ರಗಳಲ್ಲಿ ಪಾದ್ಯದಿಂದ ಹಿಡಿದು ನೀರಾಜನದವರೆಗೆ ಷೋಡಶ ಉಪಚಾರಗಳಿಂದ ಪೂಜಿಸಿ, ಕೊನೆಗೆ ಸಹಸ್ರದಳ ಕಮಲದಲ್ಲಿ, ಸರಘಾಮಧ್ಯದಲ್ಲಿ ಸದಾಶಿವನೊಡನೆ ಶಿವೆಯನ್ನು ಸಂಯೋಜಿಸುತ್ತಾರೆ. ಇದು ‘ಸಮಯಾಚಾರ’.

ಆಚಾರ್ಯ ಶ್ರೀ ಶಂಕರರ ‘ಆನಂದ ಲಹರೀ’ ಈ ಸಮಯಾಚಾರದ ತತ್ತ್ವದ ಸಾರಸರ್ವಸ್ವವನ್ನು ಒಳಗೊಂಡಿದೆ- ಎಂದು ಅದಕ್ಕೆ ವ್ಯಾಖ್ಯಾನಿಸುವವರು ಅಭಿಪ್ರಾಯಪಡುತ್ತಾರೆ.


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X