• search

‘ಸಮಯ’ ಪದದ ಬಗ್ಗೆ ಒಂದು ವಿವೇಚನೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  *ಎಸ್‌.ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

  ಕನಕದಾಸರು ಉಡುಪಿಯ ಕೃಷ್ಣನನ್ನು ‘ಬಾಗಿಲನು ತೆರೆದು ಸೇವೆಯನು ಕೊಡು’ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಾ , ‘ಭಕ್ತರ ಮೊರೆ ಕೇಳಿ ಅವರ ನೆರವಿಗೆ ಬರಲು, ‘ಇದು ಸರಿಯಾದ ವೇಳೆಯೋ, ಅಲ್ಲವೋ’ ಎಂದು ಯೋಚಿಸುತ್ತಾ ನೀನು ನಿಲ್ಲುವುದಿಲ್ಲ, ಕೂಡಲೇ ಆ ಆರ್ತನಾದಕ್ಕೆ ಓಗೊಡುವೆ’- ಎನ್ನುವ ಭಾವದಲ್ಲಿ, ‘ಸಮಯ- ಅಸಮಯ’ವುಂಟೆ, ಭಕ್ತವತ್ಸಲ, ನಿನಗೆ?’ ಎಂದು ಪ್ರಶ್ನಿಸುತ್ತಾರೆ. ಈ ‘ಸಮಯ’ ಎಂಬುದು ನಾವೇ ಕಲ್ಪಿಸಿಕೊಂಡಿರುವ, ಆದರೆ, ಮುಟ್ಟಿ ಅನುಭವಿಸಲಾಗದ, ನಮಗೆ ಅತಿ ಅವಶ್ಯಕವಾದ, ಬಾಳಿನುದ್ದಕ್ಕೂ ಇರುವ ನಮ್ಮೊಡನಾಟದ ಒಂದು ವಿಚಿತ್ರ ‘ವಸ್ತು ’! ಏನಿದು ಆ ‘ಸಮಯ’?

  ಸಂಸ್ಕೃತದಲ್ಲಿ ‘ಸಮಯ’ :

  ಸಂಸ್ಕೃತದಲ್ಲಿ ‘ಸಮಯ’ಕ್ಕೆ ಕಾಲ, ವೇಳೆ- ಎಂಬ ಸಾಮಾನ್ಯ ಅರ್ಥವಿದೆ. ಅಮರಕೋಶದಲ್ಲಿ, ‘ಕಾಲ’ಕ್ಕೇ ಮೀಸಲಾದ ಒಂದು ವರ್ಗ (ಅಧ್ಯಾಯ) ಇದೆ; ಅದರಲ್ಲಿ , ಪ್ರಾರಂಭದಲ್ಲೇ, ‘ಕಾಲೋ ದಿಷ್ಟೋ ಅಪಿ ಅನೇಹ ಅಪಿ ಸಮಯೋ ಅಥ ಪಕ್ಷಿ :।।’ ಎಂದು, ‘ಕಾಲ’ಕ್ಕೆ ದಿಷ್ಟ, ಅನೇಹಸ್‌, ಮತ್ತು ಸಮಯ : - ಎಂಬ ಪರ್ಯಾಯ ಪದಗಳನ್ನು ಹೇಳಿದೆ.

  ವಿಶೇಷ ಅರ್ಥಗಳಲ್ಲಿ ‘ಸಮಯ’ ಕ್ಕೆ ಈ ಬೇರೆ ಬೇರೆ ಅರ್ಥಗಳೂ ಸಹ ಬಳಕೆಯಲ್ಲಿವೆ.

  1. ಕ್ಲುಪ್ತವಾದ ಕಾಲ, ಗೊತ್ತಾದ ವೇಳೆ ; 2. ಗೊತ್ತು , ಗುರುತು, ಸಂಕೇತ ; 3. ಪ್ರತಿಜ್ಞೆ , ಶಪಥ ; 4. ಆಚಾರ, ಸಂಪ್ರದಾಯ, ನಡವಳಿಕೆ, ನಿಯಮ ; 5. ಸಿದ್ಧಾಂತ ; 6. ಅವಕಾಶ, ಅನುಕೂಲ- ಇತ್ಯಾದಿ.
  ‘ಸಮಯ’ ಪದ ಹುಟ್ಟಿ ಬಂದದ್ದು ಹೇಗೆ?

  Clockಸಂಸ್ಕೃತ ಧಾತುಗಳಲ್ಲಿ ‘ಇಣ್‌ (=ಗತೌ)’ ಎಂಬ ಒಂದು ಧಾತು, ಕ್ರಿಯಾಪದದ ಮೂಲವಸ್ತು ಇದೆ. ಈ ‘ಇಣ್‌’ ಎಂಬುದು ಹೋಗು, ಸೇರು, ತಲುಪು, ಹೊಂದು, ಪಡೆ- ಇತ್ಯಾದಿ ಅರ್ಥಗಳಲ್ಲಿ ಉಪಯೋಗವಾಗುತ್ತದೆ. ಅದು ಕ್ರಿಯಾಪದವಾದಾಗ, ಉದಾಹರಣೆಗೆ, ‘ಏತಿ’ (ವರ್ತಮಾನ ಕಾಲ, ‘ಹೋಗುತ್ತಾನೆ’) ; ‘ಏತು’ ( ವಿಧ್ಯರ್ಥಕ ‘ಲೋಟ್‌’ ಗಣ, ‘ಹೊಂದಲಿ’) ಎಂಬಂಥ ರೂಪಗಳನ್ನು ಹೊಂದುತ್ತದೆ. ‘ಏತಿ’ಗೆ ಒಂದು ಸ್ವಾರಸ್ಯಕರವಾದ ಶ್ಲೋಕವನ್ನು ಉದ್ಧರಿಸಿ ಹೇಳಲು ಬಯಸುತ್ತೇನೆ:

  ‘ಎಲ್ಲ ತಿಳಿದವ(ಬ್ರಾಹ್ಮಣ)ನ ಬಳಿಗೆ ಬಂದು, ವಿದ್ಯೆ ಕೇಳಿಕೊಳ್ಳುತ್ತದೆಯಂತೆ : ‘ನಾನು ನಿನ್ನ ನಿಧಿಯಿದ್ದಂತೆ. ನನ್ನನ್ನು ಕಾಪಾಡು! ಅಸೂಯೆಯುಳ್ಳವನಿಗೆ ನನ್ನನ್ನು ಕೊಡಬೇಡಯ್ಯಾ ! ಹೀಗೆ ನೀನು ನನ್ನನ್ನು ನೋಡಿಕೊಂಡರೆ, ನಾನು ವೀರ್ಯವತಿಯಾಗಿ ಇರಬಲ್ಲೆ !’ (ವಿದ್ಯಾ ಬ್ರಾಹ್ಮಣಂ ಏತಿ, ಆಹ- ‘ಶೇವಧಿ ಷ್ಟೇ ಅಸ್ಮಿ; ರಕ್ಷ ಮಾಂ। ಅಸೂಯಕಾಯ ಮಾಂ ಮಾ ಅದಾಸ್‌; ತಥಾ ಸ್ಯಾಂ ವೀರ್ಯವತ್ತಮಾ।।’- ಮನುಸ್ಮೃತಿ 2.114; ನಿರುಕ್ತ 2.4.) ಇಲ್ಲಿ ‘ಏತಿ’ ಎಂದರೆ, ಹತ್ತಿರ ಹೋಗುತ್ತದೆ ಎಂದರ್ಥ.

  ಉಪಸರ್ಗದೊಡನೆ ಸೇರಿದಾಗ ಬಗೆ ಬಗೆಯ ಅರ್ಥಕ್ಕೆ ಈಡಾಗಿ, ಈ ‘ಇಣ್‌’ ಧಾತು ಬಣ್ಣ ಬದಲಾಯಿಸುತ್ತದೆ. ನಿದರ್ಶನಕ್ಕೆ : ‘ಅನು+ ಏತು = ಅನ್ವೇತು’, ಅನುಸರಿಸುವಂತಾಗಲಿ (ಉದಾಹರಣೆಗೆ : ‘ವಿಷ್ಣು ತ್ವಾ ಅನ್ವೇತು’ = ‘ನೀನು ನನ್ನನ್ನು ಅನುಸರಿಸುವಂತೆ ಆ ಭಗವಂತ ಮಾಡಲಿ’- ಮದುವೆಯ ಸಪ್ತಪದಿಯ ಮಂತ್ರಭಾಗದಲ್ಲಿ ) ; ‘ಉಪ +ಏತು = ಉಪೈತು’, ಸಮೀಪಕ್ಕೆ ಬರಲಿ (ಉದಾ : ‘ಉಪೈತು ಮಾಂ ದೇವಸಖ:.. ’= ‘ನನ್ನ ಸಮೀಪಕ್ಕೆ ನೀನು ಬರುವಂತೆ ಆ ದೇವತೆಗಳ ಗೆಳೆಯ ಅಗ್ನಿ ಅನುಗ್ರಹಿಸಲಿ’ - ಶ್ರೀ ಸೂಕ್ತದಲ್ಲಿ ) ಇತ್ಯಾದಿ.

  ಈ ದಿಕ್ಕಿನಲ್ಲಿ , ಧಾತುಗಳೊಂದಿಗೆ ಪ್ರತ್ಯಯಗಳು ಸೇರಿ ಹೊಸ ಪದಗ ಳು ರಚಿತವಾದ ದಾರಿಯಲ್ಲಿ , ‘ಸಮ್ಯಕ್‌+ಇಣ್‌(ಏತಿ)’ ಇದರಿಂದ ‘ಸಮಯ’ ಎಂಬ ಪದ ಬಂದಿದೆ, ಎಂದು ನಿಷ್ಪತ್ತಿಯನ್ನು ಹೇಳಬಹುದು.


  ಮುಖಪುಟ / ಸಾಹಿತ್ಯ ಸೊಗಡು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more