ಅಮೆರಿಕೆಯ ವೀರಶೈವ ಸಮಾವೇಶಕ್ಕೆ ಸಿದ್ಧರಾಮ ಸ್ವಾಮಿಗಳು
ಬೆಂಗಳೂರು : ಜೂನ್ 30 ಹಾಗೂ ಜುಲೈ 1ರಂದು ಕ್ಯಾಲಿಫೋರ್ನಿಯಾ ಪ್ರದೇಶದ ಸ್ಯಾನ್ಜೋಸ್ನಲ್ಲಿ ನಡೆಯಲಿರುವ ವೀರಶೈವ ಸಮಾವೇಶದಲ್ಲಿ ಪಾಲ್ಗೊಳ್ಳಲು ಚಿತ್ರದುರ್ಗದ ಮುರುಗರಾಜೇಂದ್ರ ಬೃಹನ್ಮಠದ ಶ್ರೀ ಸಿದ್ಧರಾಮ ಸ್ವಾಮೀಜಿಗಳು ಅಮೆರಿಕೆಗೆ ತೆರಳುತ್ತಿದ್ದಾರೆ.
25ರಂದು ಬೆಂಗಳೂರಿನಿಂದ ಹೊರಟು ಮುಂಬೈ ಮಾರ್ಗವಾಗಿ ಅಮೆರಿಕೆಗೆ ತೆರಳುವ ಅವರು, 26ರಂದು ನ್ಯೂಯಾರ್ಕ್ನಲ್ಲಿ ಉಳಿದು, 28ರಂದು ಸಂಜೆ ಸ್ಯಾನ್ಫ್ರಾನ್ಸಿಕೋ ತಲುಪಲಿದ್ದಾರೆ. ಜೂನ್ 30 ಹಾಗೂ ಜುಲೈ 1ರಂದು ವೀರಶೈವ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಸ್ವಾಮಿಗಳು, ಲಾಸ್ ಏಂಜಲೀಸ್, ಫೋರಿಡಾಗಳಿಗೂ ಭೇಟಿ ನೀಡುವ ಕಾರ್ಯಕ್ರಮ ಇದೆ.
ಮಹಾಮನೆ : ಶ್ರೀ ಶಿವಮೂರ್ತಿ ಮುರುಗ ರಾಜೇಂದ್ರ ಮಹಾಸ್ವಾಮಿಗಳ ಜತೆಯಲ್ಲಿ ಬಸವತತ್ವ ಪ್ರಸಾರದಲ್ಲಿ ನೆರವಾಗುತ್ತಿರುವ ಸಿದ್ಧರಾಮ ಸ್ವಾಮಿಗಳು ಅಮೆರಿಕದಲ್ಲಿ ತಾವು ಹೋದೆಡೆಯಲ್ಲೆಲ್ಲಾ ಮಹಾಮನೆ ಕಾರ್ಯಕ್ರಮ ನಡೆಸಲಿದ್ದಾರೆ. ಅಮೆರಿಕೆಯಲ್ಲಿರುವ ಕುಲ ಬಾಂಧವರನ್ನೆಲ್ಲಾ ಒಂದು ಮನೆಯಲ್ಲಿ ಸೇರಿಸಿ, ಬಸವ ತತ್ವದ ಬಗ್ಗೆ ಸ್ವಾಮಿಗಳು ಉಪನ್ಯಾಸ ನೀಡಲಿದ್ದಾರೆ.
ಸ್ವಾಮಿಗಳು ಅಮೆರಿಕೆಗೆ ಹೋಗುತ್ತಿರುವ ವಿಷಯ ತಿಳಿದು, ಅವರ ಪ್ರವಾಸ ಕಾರ್ಯಕ್ರಮದ ವಿವರ ತಿಳಿಯಲು ಕಿರಿಯ ಸ್ವಾಮಿಗಳಾದ ಸಿದ್ದರಾಮ ಸ್ವಾಮಿಗಳ ಮೊಬೈಲ್ ಫೋನ್ಗೆ ಕರೆ ಮಾಡಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.
ಅಮೆರಿಕೆಯ ಪ್ರವಾಸಾವಧಿಯಲ್ಲಿ ಸುಮಾರು 15ರಿಂದ 20 ಉಪನ್ಯಾಸ ಕಾರ್ಯಕ್ರಮಗಳನ್ನು ನೀಡುವ ಉದ್ದೇಶ ಸ್ವಾಮಿಯವರದಾಗಿದೆ. ಸದ್ಯದ ಕಾರ್ಯಕ್ರಮ ಪಟ್ಟಿಯಲ್ಲಿರುವುದೂ ಅಷ್ಟೇ. ಆದರೆ, ಅಲ್ಲಿ ಹೋದ ನಂತರ ಪರಿಸ್ಥಿತಿಗನುಗುಣವಾಗಿ ತಮ್ಮ ಕಾರ್ಯಕ್ರಮ ಬದಲಾಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.
ಅಮೆರಿಕೆಯಲ್ಲಿ ನಡೆಯಲಿರುವ ವೀರಶೈವ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಹಿರಿಯ ಸ್ವಾಮಿಗಳಿಗೆ ಆಹ್ವಾನವಿತ್ತಾದರೂ, ಅವರು ತಮ್ಮ ಕಾರ್ಯ ಬಾಹುಳ್ಯದ ಕಾರಣ ಕಿರಿಯ ಸ್ವಾಮಿಗಳಿಗೆ ಮಠವನ್ನು ಪ್ರತಿನಿಧಿಸುವಂತೆ ಆಣತಿ ಇತ್ತಿದ್ದಾರೆ. ಉತ್ತಮ ವಾಗ್ಮಿಗಳಾದ ಸಿದ್ದ ರಾಮ ಸ್ವಾಮಿಗಳು ಬಸವ ತತ್ವಗಳ ಬಗ್ಗೆ ಮನಮುಟ್ಟುವಂತೆ ಉಪನ್ಯಾಸ ನೀಡುತ್ತಾರೆ.
ಅಮೆರಿಕಾ, ಕೆನಡಾ ಹಾಗೂ ಭಾರತದ ಹಲವು ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಖ್ಯಾತ ಕವಿ ಪ್ರೊ. ಜಿ.ಎಸ್. ಶಿವರುದ್ರಪ್ಪ ಅವರು ಈ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
ವಿ.ಸೂ : ಅಮೆರಿಕೆಯಲ್ಲಿ ನಡೆಯಲಿರುವ ವೀರಶೈವ ಸಮಾವೇಶದ ಸಂದರ್ಭದಲ್ಲಿ ಕನ್ನಡ.ಇಂಡಿಯಾಇನ್ಫೋ.ಕಾಂ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ.
Warm welcome to Sri Siddarama swamiji
ಕವಿ ಜಿ.ಎಸ್. ಶಿವರುದ್ರಪ್ಪ ಅಮೆರಿಕಾ ಪ್ರವಾಸ
ಮುಖಪುಟ / ಸಾಹಿತ್ಯ ಸೊಗಡು