ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಬೇರನ ದೇಶದಲ್ಲಿ ಕಡಿಮೆ ವೆಚ್ಚದ ಪ್ರಯೋಗಕನ್ನಡಿಗ ರೇವಣಕರ್‌ಗಲ್ಲದೆ ಇನ್ನಾರಿಗೆ ಈ ಯೋಗ !

By Staff
|
Google Oneindia Kannada News

* ಹಾ.ನಾ.ಸು.

ಭೂಸ್ಥಿರ ಕಕ್ಷೆಯೂ ಸೇರಿದಂತೆ ವಿವಿಧ ಕಕ್ಷೆಗಳಲ್ಲಿ ಸಹಸ್ರಾರು ಉಪಗ್ರಹಗಳು ಸುತ್ತುತ್ತಿರುತ್ತವೆ. ಇವುಗಳ ಕಾರ್ಯ ನಿರ್ವಹಣೆಗೆ ಬೇಕಾದ ವಿದ್ಯುತ್‌ ಪೂರೈಕೆಯ ಹೊಣೆ ‘ಸೌರ ವಿದ್ಯುತ್‌ ವ್ಯವಸ್ಥೆ’ಯದು. ಹಗಲಿನಲ್ಲಿ ನೇರವಾಗಿ ಬೀಳುವ ಸೂರ್ಯ ಕಿರಣಗಳಿಂದ ಉತ್ಪಾದನೆಯಾಗುವ ವಿದ್ಯುತ್‌, ಬೃಹದಾಕಾರದ ಬ್ಯಾಟರಿಗಳನ್ನು ಸತತವಾಗಿ ‘ಚಾರ್ಜ್‌’ ಮಾಡುತ್ತಲೇ ಇರುತ್ತದೆ. ಸೂರ್ಯ ಮರೆಯಾದಾಗ ಉಪಗ್ರಹಗಳಿಗೆ ಅಗತ್ಯವಾದ ವಿದ್ಯುತ್‌, ಈ ಬ್ಯಾಟರಿಗಳಿಂದ ಸಂವಹನೆಯಾಗುತ್ತದೆ.

‘ಸೌರ’ ಬ್ಯಾಟರಿಗಳ ಕಾರ್ಯಕ್ಷಮತೆಯನ್ನು ನಿಖರವಾಗಿ ಪರೀಕ್ಷಿಸದೇ, ಉಪಗ್ರಹಗಳಿಗೆ ಅಳವಡಿಸುವ ಹಾಗಿಲ್ಲ. ಕೆಲವೊಂದು ಪ್ರಯೋಗಗಳಿಗೆ ಅಂತರಿಕ್ಷ ನೌಕೆಗಳೇ ಸೂಕ್ತ ತಾಣ. ಈ ನೌಕೆಗಳ ಮೇಲೆ ನಡೆಸುವ ‘ತೂಕದ’ ಪ್ರಯೋಗಗಳಿಗೆ ಹಲವು ದಶಲಕ್ಷ ಡಾಲರ್‌ಗಳು ಬೇಕು. ಪ್ರಯೋಗಗಳಿಗೆ ಖರ್ಚಾಗುತ್ತಿರುವ ದುಬಾರಿ ವೆಚ್ಚದಲ್ಲಿ ಕಿಂಚಿತ್ತಾದರೂ ಮಿತವ್ಯಯ ಸಾಧಿಸಲು ಸಾಧ್ಯವೇ? ಎಂಬ ಯೋಚನೆ ‘ನಾಸಾ’ಗೆ.

ಇಂತಹ ಯೋಜನೆಗಾಗಿ ಸೂಕ್ತ ವ್ಯಕ್ತಿಯನ್ನು ಅರಸುತ್ತಿದ್ದಾಗ ‘ನಾಸಾ’ ಕಣ್ಣಿಗೆ ಬಿದ್ದವರು, ಶ್ರೀಪಾದ್‌. ಈ ಪ್ರಾಯೋಜಿತ ಯೋಜನೆಗೆ ಶ್ರೀಪಾದ ಜೊತೆ ಕ್ಲೀವ್‌ಲೆಂಡಿನಲ್ಲಿರುವ ‘ನಾಸಾ’ದ ಗ್ಲೆನ್‌ ಸಂಶೋಧನಾ ಕೇಂದ್ರದ ಪ್ಯಾಟ್ರಿಕ್‌ ಜಾರ್ಜ್‌ ಮತ್ತು ಪರ್‌ಡ್ಯೂ ವಿದ್ಯಾರ್ಥಿ ಟ್ರಾವಿಸ್‌ ಕ್ರಾಯ್‌ ಕೈಜೋಡಿಸಿದರು.

ಸೂರ್ಯನ ಕಣ್ಮುಮುಚ್ಚಾಲೆಯಿಂದ ಅಂತರಿಕ್ಷದಲ್ಲಿನ ಸೌರ ವಿದ್ಯುತ್‌ ಕೋಶದ ತಾಪಮಾನವು ಹಗಲಿನಲ್ಲಿ ಎಂಟುನೂರು ಡಿಗ್ರಿ ಸೆಂಟಿಗ್ರೇಡ್‌ಗೇರಿದರೆ, ರಾತ್ರಿ ಶೂನ್ಯದತ್ತ ಸರಿಯುತ್ತದೆ. ಈ ಸಮಯದಲ್ಲಿ ವಿದ್ಯುತ್‌ ಕೋಶದಿಂದ ಪ್ರಸರಣೆಯಾಗುವ ಶಾಖವನ್ನು ಸದುಪಯೋಗಪಡಿಸಿಕೊಳ್ಳಬಾರದೇಕೆ? ಎಂಬ ಪ್ರಶ್ನೆ ಶ್ರೀಪಾದರನ್ನು ಕಾಡತೊಡಗಿತು. ಶಾಖ ಹೆಚ್ಚಾದೊಡನೆ ಕರಗಿ ದ್ರವವಾಗುವ, ತಂಪು ಮಾಡಿದೊಡನೆ ಹೆಪ್ಪುಗಟ್ಟಿ ಘನಸ್ಥಿತಿಗೆ ಬರುವ ‘ವಸ್ತು’ವೊಂದನ್ನು ಸೌರವಿದ್ಯುತ್‌ ವ್ಯವಸ್ಥೆಗೆ ಶ್ರೀಪಾದ್‌ ಅಳವಡಿಸಿದರು. ಅಂತರಿಕ್ಷದಲ್ಲಿ ಕಾದ ವಸ್ತು, ತಂಪಾಗುವ ಸಮಯದಲ್ಲಿ ಹೊರಚೆಲ್ಲುವ ಶಾಖ ಶಕ್ತಿಯಿಂದ ಪುಟಾಣಿ ಉಗಿಟರ್‌ಬೈನ್‌ ಯಂತ್ರವನ್ನು ತಿರುಗಿಸುವ ಯತ್ನದಲ್ಲಿ ಯಶಸ್ವಿಯಾದರು.

ಈ ರೀತಿ ಉತ್ಪಾದನೆಯಾದ ವಿದ್ಯುತ್‌ನಿಂದ, ‘ಬ್ಯಾಟರಿ’ಯ ಮೇಲೆ ಒತ್ತಡ ಕಮ್ಮಿಯಾದವು. ಅಂದರೆ ಸೂರ್ಯನ ಬೆಳಕಿಲ್ಲದ ಸಮಯದಲ್ಲೂ ಬ್ಯಾಟರಿಯ ನೆರವು ಬೇಕಿಲ್ಲ.

ಭಾರಿ ಗಾತ್ರದ, ಹೆಚ್ಚಿನ ತೂಕದ ಬ್ಯಾಟರಿ ವ್ಯವಸ್ಥೆಯನ್ನು ಮೂರನೇ ಒಂದು ಭಾಗಕ್ಕೆ ಇಳಿಸಿರುವ ಈ ಯೋಜನೆಯನ್ನು ‘ನಾಸಾ’ ಒಪ್ಪಿಕೊಂಡಿದೆ. ಬಿಸಿಗೆ ಕರಗಿ, ತಂಪಿಗೆ ಗಟ್ಟಿಯಾಗುವ ‘ಗೌಪ್ಯ’ ವಸ್ತುವಿನ ಬಗ್ಗೆ ಹೆಚ್ಚಿನ ಸಂಶೋಧನೆಗಳಿಗೆ ಮತ್ತಷ್ಟು ಹಣ ಬಿಡುಗಡೆ ಮಾಡಿದೆ. ಪುಟಾಣಿ ಶಾಖ ವಿದ್ಯುತ್‌ ಉತ್ಪಾದಕರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಬಗ್ಗೆಯೂ ‘ನಾಸಾ’ ವಿಜ್ಞಾನಿಗಳು ಗಮನಹರಿಸಿದ್ದಾರೆ.

ಶಾಖ ಪ್ರಸರಣೆ ವಿಷಯದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗಳಿಸಿರುವ, ಕರ್ನಾಟಕ ವಿವಿಯ ಡಾಕ್ಟರೇಟ್‌ ಪದವೀಧರ ಶ್ರೀಪಾದರಿಗೆ, ಇದೊಂದು ಹೆಮ್ಮೆಯ ಗರಿ. ತಮ್ಮ ಸಾಧನೆಗಳಿಂದ ಸುದ್ದಿ ಮಾಡುತ್ತಿರುವ ಅಮೆರಿಕ ಕನ್ನಡಿಗರ ಪಟ್ಟಿಗೆ ಮತ್ತೊಬ್ಬ ವಿಜ್ಞಾನಿ ಸೇರ್ಪಡೆಯಾಗಿದ್ದಾರೆ.

(ಕೃಪೆ ವಿಜ್ಞಾನ ಸಂಗಾತಿ, ಜನವರಿ 2002)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X