ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ.ಷಿಫ್‌ಮನ್‌ಗೆ‘ಕನ್ನಡಾಭಿಮಾನ ಪ್ರಶಸ್ತಿ’

By Staff
|
Google Oneindia Kannada News

*ಜ್ಯೋತಿ ಮಹಾದೇವ, ಕುಪರ್ಟಿನೋ, ಕ್ಯಾಲಿಫೋರ್ನಿಯಾ

Dr. Harold Schiffman addresses the gathering after felicitationಉತ್ತರ ಅಮೆರಿಕಾದ ಸ್ಯಾನ್‌ ಫ್ರಾನ್‌ಸಿಸ್ಕೋದ ಸುತ್ತ ಮುತ್ತಣ ಪ್ರದೇಶದ (ಬೇ ಏರಿಯಾ ) ಕನ್ನಡಿಗರು ‘ತೆನೆಯ ಕೆನೆ’(ಕ್ರೀಮ್‌ ಆಫ್‌ ದ ಕ್ರಾಪ್‌) ಎಂದೇ ಪ್ರತಿಭೆಗೆ ಹೆಸರಾದವರು. ಹಲವಾರು ವರ್ಷಗಳ ಹಿಂದೆಯೇ ಆಗಲೀ, ಅಥವಾ ಕೆಲವಾರು ತಿಂಗಳುಗಳ ಈಚೆಗೇ ಆಗಲಿ ಇಲ್ಲಿಗೆ ಬಂದಿದ್ದಿರಬಹುದು ; ಏನೇ ಇರಲಿ, ಇಲ್ಲಿನ ಈ ಕನ್ನಡಿಗರಲ್ಲಿ ತಮ್ಮ ನಾಡು ನುಡಿಗಳ ಬಗ್ಗೆ ತುಂಬು ಅಭಿಮಾನ ಕಳಕಳಿ ಕಾಳಜಿ ಇರುವುದು, ಎದ್ದು ತೋರುವುದೂ ಅಪರೂಪವೇನಲ್ಲ. ಇಂತಹ ಪ್ರೀತಿಯ ಪ್ರತೀಕವೊಂದು ಇತ್ತೀಚೆಗೆ ಸನ್ನಿವೇಲ್‌ ದೇವಳದ ಒಳಾಂಗಣದಲ್ಲಿ ನಡೆದ ವಿಶೇಷ ಸಭೆಯಾಂದರಲ್ಲಿ ಕಾಣ ದೊರೆಯಿತು. ಇದೇ ಕಳೆದ ಜುಲೈ 28ರಂದು ಸಂಜೆ, ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಹೆರಾಲ್ಡ್‌ ಷಿಫ್‌ಮನ್‌ ಅವರನ್ನು ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ’ದ ಮತ್ತು ‘ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಬಳಗ’ ದ ವತಿಯಿಂದ, ಕರ್ನಾಟಕದ ಖ್ಯಾತ ಸಾಹಿತಿ ಡಾ. ಸಾ.ಶಿ. ಮರುಳಯ್ಯನವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.

ಕನ್ನಡಕ್ಕೆ ಅಸದೃಶ ಅಕ್ಕರೆ ತೋರುವ ಈ ವಿದೇಶಿ ಪ್ರೊಫೆಸರ್‌

ಪ್ರೊ. ಹೆರಾಲ್ಡ್‌ ಎಫ್‌. ಷಿಫ್‌ಮನ್‌, ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದ ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕ. ಈ ಪ್ರಾದೇಶಿಕ ಅಧ್ಯಯನ ವಿಭಾಗದಲ್ಲಿ , ದ್ರಾವಿಡ ಭಾಷಾ ಶಾಸ್ತ್ರ ಮತ್ತು ಸಂಸ್ಕೃತಿ ವಿಷಯಗಳ ಪ್ರಾಧ್ಯಾಪಕರು. ಪೆನ್‌ ಭಾಷಾ ಕೇಂದ್ರದ ನಿರ್ದೇಶಕರೂ ಹೌದು. ಅವರ ಅಧ್ಯಾಪನ ವಿಷಯ... ಕನ್ನಡ ಮತ್ತು ತಮಿಳು ! ಹೌದು, ಒಬ್ಬ ಅಮೆರಿಕನ್‌, ಭಾರತೀಯ ಭಾಷೆಗಳ ಬಗ್ಗೆ ಆಸಕ್ತಿ ತೋರಿ ಅವುಗಳೆರಡನ್ನೂ ಸ್ವತಃ ಕಲಿತು, ಸಂಶೋಧನೆ ಮಾಡಿ, ಈಗ ಆಸಕ್ತರಿಗೆ ಕಲಿಸುತ್ತಿರುವುದು ವಿಶೇಷ. ಆದರೆ, ಇನ್ನೂ ಮಹತ್ವವಿರುವುದು ಅವರು ತೋರುತ್ತಿರುವ ಆಸಕ್ತಿ ಅಷ್ಟಕ್ಕೇ ಸೀಮಿತವಲ್ಲ ಅನ್ನುವ ನೆಲೆಯಲ್ಲಿ , ಅವರ ಮುಂದಿನ ಯೋಜನೆಯಲ್ಲಿ . ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪೀಠವೊಂದನ್ನು ಹುಟ್ಟುಹಾಕಬೇಕು ಎಂದುಕೊಂಡು, ಕನ್ನಡಕ್ಕೆ ಅಸದೃಶ ಅಕ್ಕರೆ ತೋರುತ್ತಿರುವ ಈ ವಿದೇಶೀಯರ ಹಂಬಲ ಕನ್ನಡಿಗರ ಅಭಿಮಾನಕ್ಕೆ ಒಂದು ಒತ್ತಾಸೆಯಂತಿದೆ, ಒತ್ತಾಯ, ಸವಾಲೂ ಆಗುವಂತಿದೆ.

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ...’ ಭಾವಗೀತೆಯನ್ನು ಭಾವಪೂರ್ಣವಾಗಿ ಪ್ರಾರ್ಥನೆಯಾಗಿ ಮನೋರಮ ರಾವ್‌ ಅವರು ಹಾಡುವುದರೊಂದಿಗೆ ಸಂಜೆಯ ಕಾರ್ಯಕ್ರಮ ಸರಿಯಾದ ಸಮಯಕ್ಕೆ ಪ್ರಾರಂಭವಾಯಿತು. ತದನಂತರ ಹರಿಹರೇಶ್ವರ ಅವರು ಮುಖ್ಯ ಅತಿಥಿಗಳಾದ ಪ್ರೊ. ಷಿಫ್‌ಮನ್‌ ಅವರನ್ನು ಪರಿಚಯಿಸಿದರು. ‘ಪ್ರೊ. ಷಿಫ್‌ಮನ್‌ ಅವರು ಕನ್ನಡಿಗರು ಹೆಮ್ಮೆ ಪಡಬೇಕಾದ ವ್ಯಕ್ತಿ...’ ‘ಕನ್ನಡ ಆಡು ನುಡಿಯ ಪರಾಮರ್ಶನ ವ್ಯಾಕರಣ’ ಎಂಬ ಮೌಲಿಕ ಗ್ರಂಥವನ್ನು ಬರೆದು ಆದರಕ್ಕೆ ಪಾತ್ರರಾಗಿದ್ದಾರೆ... ಎಂದು ಹೇಳಿದರು. ಕನ್ನಡ ಭಾಷಾ ವಿಜ್ಞಾನದ ವಿಭಾಗದಲ್ಲಿ ನ್ಯೂಯಾರ್ಕ್‌ನ ಸ್ಟೇಟ್‌ ಯೂನಿವರ್ಸಿಟಿಯ ಪ್ರಾಧ್ಯಾಪಕ ಎಸ್‌. ಎನ್‌. ಶ್ರೀಧರ್‌ ಅವರ ಸಂಶೋಧನೆಗಳನ್ನು ಹೆಸರಿಸಿದರು. ಅಮೆರಿಕಾದಲ್ಲಿ, ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಕನ್ನಡದ ಅಧ್ಯಯನ ಈ ಮೊದಲು ಎಲ್ಲಿ ನಡೆಯುತ್ತಿತ್ತು ಎನ್ನುವುದನ್ನು ವಿವರವಾಗಿ ಹೇಳಿ, ಈಗ ಫಿಲಿಡಲ್ಫಿಯಾ ಬಳಿ ಇರುವ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಮಾತ್ರ ವಿಮಲಾ ರಾಜಗೋಪಾಲ್‌ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಮನ್ನಣೆ ಗಳಿಸಿರುವ ಪಠ್ಯ ವಿಷಯವಾಗಿ ಕನ್ನಡ ಕಲಿಸಲಾಗುತ್ತಿದೆ’ ಎಂದರು.

ನಾನು ಇಂಗ್ಲಿಷ್‌ನಲ್ಲೇ ಮಾತಾಡ್‌ತೀನಿ.. .

ಪ್ರೊ.ಷಿಫ್‌ಮನ್‌ ಅವರು ತಮ್ಮ ಭಾಷಣವನ್ನು ಕನ್ನಡದಲ್ಲೇ ಪ್ರಾರಂಭಿಸಿ, ‘ನನಗೆ ಮಾತ್ನಾಡಿ ಅಭ್ಯಾಸ ತಪ್ಪಿ ಹೋಗಿದೆ. ತಮಿಳ್‌ ಟೇಕ್ಸ್‌ ಓವರ್‌ ಮೈ ಹೆಡ್‌; ... ಆದ್ದರಿಂದ ನಾನು ಇಂಗ್ಲಿಷ್‌ನಲ್ಲೇ ಮಾತಾಡ್‌ತೀನಿ,’ ಎಂದು ಸಭೆಯ ಅನುಮತಿ ಕೋರಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಭಾಷಣದುದ್ದಕ್ಕೂ ಉದಾಹರಣೆಗಳನ್ನು ಕನ್ನಡದಲ್ಲೇ ಕೊಡುತ್ತಾ ಸಭಿಕರ ಮನರಂಜಿಸಿದರು.

‘ಆಡು-ನುಡಿಯ ಮತ್ತು ಬರವಣಿಗೆಯ ಕನ್ನಡಗಳಲ್ಲಿ ಎಷ್ಟೊಂದು ವ್ಯತ್ಯಾಸ ಇದೆಯೆಂದರೆ, ಹೊರಗಿನವರಾದ ನಮಗೆ ಅವೆರಡೂ ಬೇರೆ ಬೇರೆ ಭಾಷೆಗಳಂತೆಯೇ ತೋರುತ್ತವೆ ! ಆ ಕ್ಲಿಷ್ಟತೆಯನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ‘ಕನ್ನಡ ಆಡುನುಡಿಯ ವ್ಯಾಕರಣ’ವನ್ನು ಬರೆದೆ’, ಎಂದು ಆರಂಭಿಸಿದ ಪ್ರೊ.ಷಿಫ್‌ಮನ್‌ ಅವರು, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಒಂದು ಕನ್ನಡ ಪೀಠ ಸ್ಥಾಪಿಸುವ ಯೋಜನೆಯ ಪ್ರಸ್ತಾಪ ಮಾಡಿ, ‘ಅದಕ್ಕಾಗಿ ಅಮೆರಿಕೆಯಲ್ಲಿರುವ ಕನ್ನಡಿಗರೆಲ್ಲರೂ ಸಹಾಯ ನೀಡಬೇಕು, ಆಗ ಮಾತ್ರ ಈ ಕೆಲಸ ಸಾಧ್ಯ’ವೆಂದರು.

ತಾನೆಂದಿಗೂ ಹಿಂದೆ ‘ಫಂಡ್‌ ರೈಸಿಂಗ್‌’ ಮಾಡಿಲ್ಲ. ಅಭ್ಯಾಸವಿಲ್ಲ, ಈಗ ಕನ್ನಡಕ್ಕಾಗಿ ಕನ್ನಡಿಗರಲ್ಲಿ ನಿಧಿ ಶೇಖರಣೆಗಾಗಿ ಕೇಳಿಕೊಳ್ಳುತ್ತಿದ್ದೇನೆ, ಎಂದ ಅವರು, ‘...ನೀವೆಲ್ಲರೂ ಸೇರಿ ಈ ಪೀಠವನ್ನು ಸ್ಥಾಪಿಸಬಲ್ಲಿರಿ. ಪ್ರತಿ ಕನ್ನಡಿಗ ಕುಟುಂಬವೂ ದಿನಕ್ಕೊಂದು ಡಾಲರಿನಂತೆ ಇದಕ್ಕಾಗಿ ಸೇರಿಸಿದರೆ, ಮೂರು ವರ್ಷಗಳಲ್ಲಿ ಆ ಕುಟುಂಬದ ಉಳಿತಾಯ ಸಾವಿರ ಡಾಲರ್‌ಗಳಾಗುತ್ತದೆ. ಅಮೆರಿಕಾದಲ್ಲಿರುವ ಎಲ್ಲ ಕನ್ನಡಿಗರೂ ಈ ರೀತಿ ಮಾಡಿದರೆ ಆ ಅವಧಿಯಲ್ಲಿ ಸುಮಾರು ಐದು ಮಿಲಿಯನ್‌ ಡಾಲರ್‌ಗಳಷ್ಟು ಉಳಿಸಬಹುದು. ಇದರಿಂದ ನಾವು ಮಾಡಬೇಕು ಅಂದುಕೊಂಡಿರುವ ಕೆಲಸ ಸುಲಭವಾಗುತ್ತದೆ...’, ಎಂದು ಸೂಚಿಸಿದರು.


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X