ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಂಗ್ಯಾ ಬಾಳ್ಯಾ’ ಮತ್ತು ಐತಾಳರ ಗೀಳು

By Staff
|
Google Oneindia Kannada News

*ಶಾಂತಾರಾಮ ಸೋಮಯಾಜಿ

ಇತ್ತೀಚೆಗೆ ಲಾಸ್‌ಎಂಜಲೀಸ್‌ನಲ್ಲಿ ನಡೆದ(ಫೆಬ್ರವರಿ 16, 2002) ನಾಟಕ ಹಬ್ಬದಲ್ಲಿ ಪ್ರದರ್ಶನಗೊಂಡ ಹಾಡು - ನಾಟ್ಯ (ಗೀತ) ನಾಟಕ, ‘ಸಂಗ್ಯಾ ಬಾಳ್ಯಾ’ದಲ್ಲಿ ಶ್ರೀಮಂತ ಕುಟುಂಬದ ಬಿಸಿ ರಕ್ತದ ಮತ್ತು ಸೊಕ್ಕಿನ ಮನೋಭಾವದ ಸಂಗ್ಯಾ ಅಥವಾ ಸಂಗಣ್ಣನದು ಪ್ರಮುಖ ಪಾತ್ರ. ಕಚ್ಚೆ-ಜುಬ್ಬಾ ಧರಿಸಿಕೊಂಡು, ಮುಖಕ್ಕೆ ಬಣ್ಣದ ಕಚಗುಳಿಯಿಟ್ಟು, ಕಣ್ಣುಗಳಲ್ಲಿ ಬಿಸಿಲ ಕಿಡಿ ಅಂಟಿಸಿಕೊಂಡು ಕೈಕಾಲುಗಳನ್ನು ಚಕಚಕ ಕುಣಿಸಿಕೊಂಡು, ತುಟಿಗಳಲ್ಲಿ ರಾಗದ ದನಿ ಸ್ಮರಿಸಿಕೊಳ್ಳುತ್ತಾ ಸಂಗ್ಯಾನ ಪಾತ್ರದ ಚಂದ್ರ ಐತಾಳರು ರಂಗದ ಮೇಲೆ ಹಾರಿ ಬರುತ್ತಾರೆ. ಕಾಲುಗಳಡಿಯ ದಪ ದಪ ಸದ್ದಿನಿಂದ ಪ್ರೇಕ್ಷಕರ ಕುತೂಹಲದ ಬಾಗಿಲು ಬಡಿಯುತ್ತಾರೆ. ತನ್ನ ಬಡತನದ ತಾಪತ್ರಯಗಳನ್ನು ತಲೆ ತುಂಬಾ ತುಂಬಿಸಿಕೊಂಡು ತನ್ನದೇ ಉದ್ದ ಮುಖದ ನೆರಳಿನಡಿ ಕೂತು ಕೊರಗುತ್ತಿರುವ ನೆಚ್ಚಿನ ಗೆಳೆಯ ಬಾಳಣ್ಣ (ಬಾಳ್ಯಾ)ನನ್ನು ಹುಡುಕುವವರಂತೆ ರಂಗದ ಆ ಮೂಲೆಯಿಂದ ಈ ಮೂಲೆಗೆ, ಈ ಮೂಲೆಯಿಂದ ಓ ಅಲ್ಲಿಗೆ ಜಿಗಿಯುತ್ತಾರೆ. ಗೆಳೆಯನಿಗಾಗಿ ಹುಡುಕುವ ನಟನೆ ಮಾಡಿ ತೋರಿಸುತ್ತಾರೆ. ಅಥವಾ ನಾಟ್ಯ ಧಾಟಿಯಲ್ಲಿ ವಿವರಿಸುತ್ತಾರೆ.

ಬಹಳ ವರ್ಷಗಳ ನಂತರ ಐತಾಳರನ್ನು ನೋಡುತ್ತಿದ್ದ ನಾನು, ಪ್ರೇಕ್ಷಕರ ಸಾಲಿನಲ್ಲಿ ಕತ್ತು ಉದ್ದ ಮಾಡಿ ಕೂತು ಯೋಚಿಸತೊಡಗಿದೆ. ‘ಅರೇ, ಈ ಮನುಷ್ಯನಿಗೆ ಪ್ರಾಯ ಆಗುವುದೇ ಇಲ್ಲವೇ ? ಈತನ ಉತ್ಸಾಹ, ಚೈತನ್ಯ, ಶ್ರದ್ಧೆ ಎಲ್ಲಾ ತಣ್ಣಗಾಗುವುದೇ ಇಲ್ಲವೇ ?...’

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಐತಾಳ ಅಣ್ಣ ತಮ್ಮಂದಿರನ್ನು ಭೇಟಿಯಾದಾಗ, ಸಾಹಿತ್ಯದಿಂದ ರಂಗಭೂಮಿಯವರೆಗೆ, ಯಕ್ಷಗಾನದಿಂದ ಜಾನಪದ ನೃತ್ಯದವರೆಗೆ ಚಂದ್ರ ಐತಾಳರಲ್ಲಿದ್ದ ಆಸಕ್ತಿ, ಉತ್ಸಾಹ ಮತ್ತು ಪಾಂಡಿತ್ಯಕ್ಕೆ ಬೆರಗಾಗಿದ್ದೆ. ಕೆಲ ವರ್ಷಗಳ ನಂತರ ಲಾಸ್‌ ಎಂಜಲೀಸ್‌ನ ಇನ್ನೊಬ್ಬ ಗೆಳೆಯ ಶ್ರೀನಿವಾಸ ಭಟ್‌ ದಂಪತಿಗಳ ಮನೆಯಲ್ಲಿ ಮತ್ತೆ ಐತಾಳರ ಭೇಟಿ. ಶ್ರೀನಿವಾಸ- ಸುಮ ಅವರಿಗೆ ಸಂಗೀತದ ಗೀಳು. ಒಬ್ಬರು ಶ್ರುತಿ ಕೊಟ್ಟೇ ಹಾಡಿದರೆ ಇನ್ನೊಬ್ಬರಿಗೆ ಶೃತಿ ತಪ್ಪಿಯೇ ದನಿ ಕೊಡಿಸಿ ಅಭ್ಯಾಸ; ವ್ಯತ್ಯಾಸ ಅಷ್ಟೆ. ಆದರೆ ಮನೆಪೂರ್ತಿ ಸಂಗೀತದ ಗಾಳಿ.

ಆ ದಿನದ ಇಡೀ ರಾತ್ರೆ ಸಂಗೀತ ಕೂಟಕ್ಕೆ ಪಾರುಪತ್ಯ ವಹಿಸಿಕೊಳ್ಳಲು ಬಂದೇ ಬಿಟ್ಟರು, ಚಂದ್ರ ಐತಾಳರು. ಹಾರ್ಮೋನಿಯಂ ಹಿಡಿದುಕೊಂಡು, ಚಟ್ಟಾಮುಟ್ಟಿಗೆ ಹಾಕಿ ನೆಲಕ್ಕೆ ಭಾರ ಕೊಟ್ಟು ಕೂತುಕೊಂಡರು. ಹಾರ್ಮೋನಿಯಂನ್ನು ಎದೆಗೊತ್ತಿ ಹಿಡಿದು, ಬಲಕೈ ಬೆರಳುಗಳನ್ನು ಏಡಿಯ ಕಾಲುಗಳಂತೆ ಸರಿದಾಡಿಸಿಕೊಂಡು, ಕಣ್ಣುಗಳಿಂದ ರಾಗದ ಎಸಳುಗಳನ್ನು ಹುಡುಕುತ್ತಾ ಯಾವ ಮೂಲೆಗೆ ಯಾವ ಯಾವುದೋ ಹಾಡಿಗೆ, ಅದರದ್ದೇ ಆದ ರಾಗದುಡುಗೆ ತೊಡಿಸಿ, ತಾನೂ ಸಂತೃಪ್ತಿ ಪಡುತ್ತಾ , ಸುತ್ತ ಕುಳಿತಿದ್ದವರಿಗೆ ಆನಂದದ ಲೋಕ ಕಾಣಿಸುತ್ತಾ ಹೋದಂತೆ ಸಮಯದ ಪ್ರಜ್ಞೆ ಯಾರಿಗೆ ಬೇಕಿತ್ತು ? ಬೆರಗಿನಿಂದ ಬಾಯಿ ತೆರೆದು ಐತಾಳರನ್ನು ನೋಡತೊಡಗಿದೆ. ಅರೇ, ಇವರಿಗೆ ಸಂಗೀತವೂ ಬರ್ತದಾ ? ಹಾರ್ಮೊನಿಯಂ ಕೂಡ ಬರ್ತದಾ ? ಇದೆಲ್ಲಾ ಯಾವಾಗ ಕಲಿತದ್ದು ಇವರು?... ಮುಂದೆ ತಿಳಿಯಿತು, ಚಂದ್ರರಿಗೆ ಚಂದ್ರ ಐತಾಳರೇ ಗುರು ಎಂದು.

ಈ ಅನನ್ಯ ಗುರು ಶಿಷ್ಯ ಸಂಬಂಧದಿಂದಲೋ ಏನೋ, ಐತಾಳರು ಯಾವುದೇ ಕಟ್ಟುಪಾಡಿಗೆ ಗಂಟು ಬೀಳದೆ, ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ, ಹೊಸ ಹೊಸ ಸ್ವರ-ರಾಗ ಸಂದರ್ಭಗಳನ್ನು ಸೃಷ್ಟಿಸಬಲ್ಲರು. ‘ಸಂಗ್ಯಾ ಬಾಳ್ಯಾ’ ನಾಟಕದಲ್ಲಿ ಶಾಸ್ತ್ರೀಯ ಮತ್ತು ಜಾನಪದ ಧಾಟಿಗಳಲ್ಲದೆ, ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಗ್ರೀಕ್‌ ತಲೆಮಾರಿನ ಪ್ರಾದೇಶಿಕ ಹಾಡು ವಾದ್ಯಗಳನ್ನು ಸೇರಿಸಿಕೊಂಡು ಸಂಗೀತ ಸಂಯೋಜಿಸಿದ್ದಾರೆ. ವಾದ್ಯಗಳ ಆಯ್ಕೆಯಲ್ಲೂ ಮಿತಿ ಹಾಕಿಕೊಂಡು, ತಬಲಾ, ಡೋಲಕ್‌, ಚಿಟಿಕೆ ಮತ್ತು ತಾಳ ಇವಿಷ್ಟನ್ನೇ - ನಾಟ್ಯದ ತಿರುಳಿಗೆ ಪೂರಕವಾಗುವಂತೆ- ಉಪಯೋಗಿಸಿಕೊಂಡು ಹಾಡಿದ್ದು ಮತ್ತೊಂದು ವಿಶೇಷ. ಈ ನಾಟಕದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರೂ ಗೀತನಾಟಕದಲ್ಲಿ ಹೊಸಬರು. ಇಂತವರನ್ನು ಕಲೆಹಾಕಿ, ಹುರಿದುಂಬಿಸಿ, ಕಲಿಸಿ, ಹಾಡಿಸಿ, ಕುಣಿಸಿ ನಾಟಕ ಮಾಡುವುದು- ನಾಟಕ ಮಾಡುವ ಹೊರೆ ಹೊರುವುದು- ಸುಲಭದ ಕೆಲಸವಲ್ಲ . ಹಾಗಿದ್ದೂ , ಸಭಿಕರ ಮೆಚ್ಚಿಕೆ ಗಳಿಸಿ, ಹಾಡಿನ ಗುಂಗಿನಲ್ಲಿ ಮೈ ಮರೆಸಿ, ಯಶಸ್ಸು ಸ್ಥಾಪಿಸಿದ ಐತಾಳರ ತಾಳ್ಮೆ ಮತ್ತು ಶ್ರಮವನ್ನು ಮೆಚ್ಚದಿರುವುದು ಹೇಗೆ ?

ಕೆಲ ತಿಂಗಳ ಹಿಂದೆ ಮೈಸೂರಿನಲ್ಲಿ ಗೆಳೆಯರೊಬ್ಬರು ಕೇಳಿದ್ದರು- ‘ಪ್ರೊ.ವೈ.ಆರ್‌.ಮೋಹನ್‌ರ ‘ನೆನಪುಗಳು’ ಓದಿದ್ದೀರಾ?’ ಎಂದು. ಕೇಳಿದ್ದೆ. ಆದರೆ ಓದಿರಲಿಲ್ಲ . ‘ತುಂಬಾ ಚೆನ್ನಾಗಿದೆ, ಓದಿ’, ಎಂದವರು ಶಿಫಾರಸ್ಸು ಕೊಟ್ಟಿದ್ದರೇನೋ ಸರಿ, ಆದರೆ ಪುಸ್ತಕ ಕೊಂಡುಕೊಳ್ಳಲು ಸಿಕ್ಕಿರಲಿಲ್ಲ . (ಅಂತಹ ಪ್ರಯತ್ನವನ್ನು ಮಾಡಿರಲಿಲ್ಲ , ಬಿಡಿ) ಮೊನ್ನೆ ಶ್ರೀನಿವಾಸ ಭಟ್‌ ಮನೆಯಲ್ಲುಳಿದಾಗ, ಅವರೇ ‘ಎರಕ ಹೊಯ್ದು’ ಕಟ್ಟಿದ ಅಡಿಗೆಮನೆಯ ಕೌಂಟರಿನ ಮೇಲೆ ‘ನೆನಪುಗಳು’ ಪುಸ್ತಕವನ್ನಿಟ್ಟು ಕೇಳಿದರು- ‘ಓದಿದ್ದೀರಾ?’ ಅರೇ! ಓದಿ ಹಿಂದೆ ಕೊಡ್ತೀನಿ ಎಂಬ ಬಾಯಿಮಾತಿನ ಭರವಸೆಯಾಂದಿಗೆ ಪುಸ್ತಕ ತೆಗೆದುಕೊಂಡು ಬಂದು ನೋಡುತ್ತೇನೆ- ಒಳಗೆ, ‘ನನ್ನ ನೆನಪುಗಳನ್ನು ಬರಹದಲ್ಲಿ ಮೂಡಿಸಲು ಎಲ್ಲಾ ರೀತಿಯ ನೆರವು ನೀಡಿದ ಸಹೃದಯ ಚಂದ್ರು ಮತ್ತು ಸುಜಾತ ಐತಾಳರಿಗೆ’, ಎಂದು ಅಭಿಮಾನದಿಂದ ಅರ್ಪಿಸಿದ ಮೋಹನರು, ಮುಂದೆ (ಪು.267) ರಲ್ಲಿ ಬರೆಯುತ್ತಾರೆ- ‘... ಇಲ್ಲಿ ನನಗೆ ಜಾರ್ಜಿಯಾ ಟೆಕ್‌ನಲ್ಲಿ ಓದುತ್ತಿದ್ದ , ಈಗ ನನ್ನ ಆಪ್ತ ಸ್ನೇಹಿತರಾಗಿರುವ ಚಂದ್ರ ಐತಾಳರ ಪರಿಚಯವಾಗಿ ಸ್ನೇಹ ಬೆಳೆಯಿತು. ಸಂಗೀತ, ನೃತ್ಯ, ನಾಟಕ ಇವು ನನಗೆ ಮೊದಲಿಂದಲೂ ಇಷ್ಟವಾದ ಹವ್ಯಾಸವಾಗಿತ್ತು . ಚಂದ್ರಶೇಖರರಿಗೆ ಇವುಗಳ ಗೀಳು ಹಿಡಿದಿತ್ತು...’

ಈ ಗೀಳಿಗೆ ತಮ್ಮನ್ನು - ಈಗ ತಮ್ಮವಳನ್ನು - ಸಮರ್ಪಿಸಿಕೊಂಡ ಐತಾಳರ ಮೇಧಾವಿತನದಿಂದ, ಮತ್ತು ನಮ್ಮೆಲ್ಲರ ಪ್ರೋತ್ಸಾಹದಿಂದ, ಇನ್ನು ಬಹಳಷ್ಟು ರಸ ನಿಮಿಷಗಳು ನಮ್ಮದಾಗಬಹುದೇನೋ!


ಲೇಖಕರ ಪರಿಚಯ:
ಡಾ.ಶಾಂತಾರಾಮ ಸೋಮಯಾಜಿ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ನೆಲಸಿದ್ದು ಕನ್ನಡದ ಕಥಾ ಸಾಹಿತ್ಯ ಲೋಕದಲ್ಲಿ ಹೆಸರುವಾಸಿಯಾಗಿದ್ದಾರೆ. ಕಳೆದ ಸುಮಾರು ವರ್ಷಗಳಿಂದ 300 ಕ್ಕೂ ಹೆಚ್ಚು ಕಥೆಗಳನ್ನು ಬರೆದುದೇ ಅಲ್ಲದೆ, 7 ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಕಥೆಗಳು ಕರ್ನಾಟಕದ ಎಲ್ಲ ಪ್ರಸಿದ್ಧ ಪತ್ರಿಕೆಗಳು ಹಾಗೂ ವಿಶೇಷಾಂಕಗಳಲ್ಲಿ ಪ್ರಕಟವಾಗಿವೆ. ಅಮೆರಿಕದ ಜನ ಜೀವನ ಮತ್ತು ಕರ್ನಾಟಕದ ಮೂಲ ಅನುಭವಗಳು- ಇವೆರಡರ ಸಮನ್ವಯ ಮತ್ತು ಘರ್ಷಣೆ ಇವರ ಇತ್ತೀಚಿನ ಕಥೆಗಳಲ್ಲಿ ಎದ್ದು ಕಾಣುವ ಗುಣಗಳು.

Post Your Views

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X