• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವ್ಯದಲ್ಲಿ ರೂಪಾಂತರದ ಸವಾಲುಗಳು- ಭಾಗ 3

By Staff
|

*ಎಂ. ಆರ್‌. ದತ್ತಾತ್ರಿ, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

Dattatri Ramanna, The Author ಚಿತ್ರರೂಪ

ವಸ್ತುವಿನ ವ್ಯಕ್ತತೆಗೆ ಭಾಷೆ ಅಗತ್ಯವಾದರೆ ವಸ್ತುವಿನ ಸಾಕಾರತೆಗೆ ಚಿತ್ರರೂಪ ನೆರವಿಗೆ ಬರುತ್ತದೆ. ನಾದರೂಪದ ವಾಚ್ಯತೆ ಮನಸ್ಸನ್ನು ಹಿಡಿದಿಡುವಲ್ಲಿ ನೆರವಾದರೆ ಚಿತ್ರರೂಪದ ಬಿಂಬವು ಅರ್ಥ ಮೂಡಿಸುವಲ್ಲಿ ಸಫಲವಾಗಿ ಕಾವ್ಯವನ್ನು ಪೂರ್ಣಗೊಳಿಸುತ್ತದೆ. ನಾದರೂಪದಂತೆಯೇ ಚಿತ್ರರೂಪವೂ ಭಾವದ ಸೂಕ್ಷ್ಮಗಳನ್ನು ಹಿಡಿದಿಡುವ ಸಾಧನವಾಗಿ ಮನಸ್ಸಿನ ವ್ಯಕ್ತ ಮತ್ತು ಅವ್ಯಕ್ತಗಳ್ನ್‌ು ಕೂಡಿಸುವ ತಂತುವಾಗುತ್ತದೆ. ನಾದರೂಪಕ್ಕಿಂತ ಹೊರತಾಗಿ ಚಿತ್ರರೂಪವು ವೈಯುಕ್ತಿಕ ನೆಲಗಟ್ಟಿನಲ್ಲಿ ( personification) ತನ್ನ ಅರ್ಥವನ್ನು ಕಾಣುತ್ತದೆ. ಕಾವ್ಯದಲ್ಲಿ ಚಿತ್ರರೂಪದ ಗಹನತೆಯನ್ನು ಅರಿಯಲು ಈ ಕೆಳಕಂಡ ಪದ್ಯವನ್ನು ಉದಾಹರಣೆಯಾಗಿ ಬಳಸುತ್ತಿದ್ದೇನೆ :

ಬಾಳಕ

ಹಸಿ ಮೆಣಸ ಸೀಳಿ ಉಪ್ಪು ಮೆಂತ್ಯವ ತುಂಬಿ
ಒಣಗಿಸಿದ ಬಾಳಕದಲ್ಲಿ ತಂದೆಗೆ ಪಂಚಪ್ರಾಣ
ಉಪ್ಪು ಮೆಣಸು ಮೆಂತ್ಯಗಳೆಂತೇ ಇರಲಿ
ತಾಯಿ ಮಾಡುವ ಬಾಳಕಕ್ಕೆ ಇಲ್ಲ ಸಮಾನ
ಎಷ್ಟೋ ದಿವಸದ ಬಳಿಕ ಇಂದೀಗ ಅಮ್ಮ
ಮಾಡಿದ್ದ ಬಾಳಕವ ಕರಿದ ಮಧ್ಯಾಹ್ನ
ಯಾರೂ ನೆನೆಯಲಿಲ್ಲವಲ್ಲಾ ಅಣ್ಣನನ್ನ !
ಆರು ಬಾಳಕ ಮುರಿದು ಹುಡಿ ಮಾಡಿ
ಕಲಸಿದನ್ನವನ್ನು ಉಡುಂಡೆ ಸವಿಯುತ್ತಿದ್ದ
ಕಣ್ಣು ಮೂಗು ನಾಲಿಗೆಯ ಝರಿಗಳಲ್ಲಿ ಮೀಯುತ್ತಿದ್ದ
ಅಪ್ಪನನ್ನ !
ಹೇಗೆ ಮರೆತೆ ನಾನು ಈ ಚಿತ್ರವನ್ನ ?
ಮರೆಯಬಹುದೇ ನಾನು ಮಗನಾಗಿ ಅವನಿಗೊಂದು
ತುತ್ತನ್ನ ?
ಉಳಿದ ಬಾಳಕದ ಚೂರ ಎಸೆದಾಗ ಹಾರಿ ಬಂದಿಳಿದವನು
ಈ ಪುಟ್ಟ ಪಾಪ್ಪುಟ್ಟಿಯ ಅಪ್ಪನೇ ಸರಿ !
ಕೊಕ್ಕಲ್ಲಿ ಕಚ್ಚಿದುದ ಕುಕ್ಕಿ ತಿನುವಾಗವನ ಮುಖದ ಸುಖವ
ಬಳಿಕ ಬಚ್ಚಲ ನೀರನೆರಡು ಗುಟುಕು ಕುಡಿದ ಜೀವದ ತಣಿವ
ಕಂಬನಿಯ ಕಣ್ಣಿಂದ ಗುರುತಿಸಿದೆನು
ತಂದೇ, ಬಂದೆ !.....ಬರುತ್ತಿರು
ಸದಾ ಇರು
ಎಲ್ಲೆಲ್ಲೂ ನಿನ್ನ ಸುಳಿವ ತೋರು.
(ಎಸ್‌. ಮಂಜುನಾಥ್‌, ಕರ್ನಾಟಕ ಸಾಹಿತ್ಯ ಅಕಾಡೆಮಿಯ 1997ರ ಕವಿತೆಗಳಿಂದ)

ಸಂಪೂರ್ಣವಾಗಿ ಚಿತ್ರರೂಪಕವಾದ ಈ ಕವಿತೆ ಪ್ರಾರಂಭವಾಗುವುದು ತಾಯಿಯ ಬಾಳಕ ಮಾಡುವ ತಾಂತ್ರಿಕತೆಯನ್ನು ಚಿತ್ರಿಸುವ ಮೂಲಕ. ಕೆಲವು ಸಾಲುಗಳು ನಂತರ ಕುತೂಹಲ ಒಡೆದಂತೆ ತಿಳಿಯುವ ‘ ಈಗಿಲ್ಲದ’ ಮನುಷ್ಯನ ಚಿತ್ರಣ ಒಂದೇ ಸಾಲಿನಲ್ಲಿ ಹೆಪ್ಪುಗಟ್ಟುತ್ತದೆ. (‘ ಉಪ್ಪು ಮೆಣಸುಗಳೆಂತೇ ಇರಲಿ, ತಾಯಿ ಮಾಡುವ ಬಾಳಕಕ್ಕೆ ಇಲ್ಲ ಸಮಾನ’). ಹೃದಯಕ್ಕೆ ಆಪ್ತರಾದವರನ್ನು ನೆನೆಯಲು ಘಟನೆಗಳು ನಿಮಿತ್ತ ಮಾತ್ರ. ಅಂತಹ ಒಂದು ಘಟನೆ ಇಲ್ಲಿ ಸಂಸಾರಕ್ಕೆ ‘ ಅಪ್ಪ ’ನೆನಿಸಿಕೊಂಡವನು ಬಾಳಕದಲ್ಲಿ ಕಲೆಸಿದ ಅನ್ನವನ್ನು ಸವಿಯುತ್ತಿದ್ದ ರೀತಿ. ಅತಿ ಸಾಧಾರಣವಾದ ಘಟನೆ. ಆದರೆ ನೆನಪಿನಂಗಳದಲ್ಲಿ ಆ ವ್ಯಕ್ತಿಯನ್ನು ಜೀವಂತವಾಗಿರಿಸಿದಂತದ್ದು. ಅಂತಹ ಪ್ರೇರೇಪಿತವಾದ ದೃಶ್ಯದಲ್ಲಿ ಪಾಲ್ಗೊಂಡ ವ್ಯಕ್ತಿ (‘ ಮಗ ’) ಮತ್ತೆ ಅದೇ ರೀತಿಯ ಸಂದರ್ಭದಲ್ಲಿ (‘ಮಾಡಿದ್ದ ಬಾಳಕವ ಕರಿದ ಮಧ್ಯಾಹ್ನ ’) ತಂದೆಯನ್ನು ನೆನೆಸಿಕೊಳ್ಳಲಿಲ್ಲ ಎಂಬುದು ‘ ಆ ಮನುಷ್ಯನನ್ನು ಮರೆತೇ ಬಿಟ್ಟೆವಲ್ಲಾ ’, ‘ ಅವನಿಲ್ಲದ ಬದುಕಿಗೆ ಎಷ್ಟು ಸರಾಗವಾಗಿ ಹೊಂದಿಕೊಂಡೆವು ಎಂಬುವುಗಳ ಜೊತೆಗೇ ‘ ಮಗನಾಗಿ ಮರೆಯಬಹುದೇ’ಎಂಬ ರಕ್ತದ ಮತ್ತು ನೀತಿಯ ಚಿತ್ರವನ್ನು ಹೆಣೆಯುತ್ತದೆ. ‘ ಪಿಂಡ ಸ್ವೀಕಾರಕ್ಕಾಗಿ ಕಾಗೆಯಾಗಿ ಬರುತ್ತಾರೆ ’ ಎಂಬ ನಂಬಿಕೆ ಸಾಕ್ಷಾತ್ಕಾರಗೊಂಡ ‘ ಮಗ ’ ಬಚ್ಚಲ ಅಂಚಿನಲ್ಲಿ ಬಿಸಾಡಿದ ಬಾಳಕದ ತುಂಡನ್ನು ಕುಕ್ಕಿ ತಿನ್ನುವ ಕಾಗೆಯಲ್ಲಿ ಅಪ್ಪನನ್ನು ಕಾಣುವ ದೃಶ್ಯ ಓದುಗನನ್ನು ಅತಿ ಉತ್ಕಟತೆಯ ಮತ್ತು ಗದ್ಗದತೆಯ ಕೊನೆಯ ಸಾಲುಗಳಿಗೆ ತಯಾರು ಮಾಡುತ್ತದೆ. (‘ ತಂದೇ! ಬಂದೆ....ಬರುತ್ತಿರು’). ಸಾಧಾರಣವಾದ ನಾದರೂಪ, ಸಾಧಾರಣವಾದ ವಸ್ತು ರೂಪ ಆದರೆ ಅಸಾಮಾನ್ಯವಾದ ಚಿತ್ರರೂಪದಿಂದ ರಚಿತವಾದ ಕವಿತೆ ಇದು.

ಚಿತ್ರರೂಪ ನಾದರೂಪದಂತಲ್ಲದೇ ಸರಳವಾಗಿ ವರ್ಗಾಂತರಗೊಳ್ಳಬಹುದಾದ ಕಾವ್ಯದ ಮೂಲಧಾತುವು. ಕಲ್ಪನಾ ಪ್ರಧಾನವಾದ ಚಿತ್ರರೂಪದಲ್ಲಿ ಭಾಷೆಯ ಸ್ತರದಿಂದ ಮೇಲ್ಮಟ್ಟದಲ್ಲಿ ಕಾವ್ಯದ ಮೇಲೆ ಪ್ರಭಾವ ಬೀರುವ ‘ ಬಿಂಬಗಳು’ಕೆಲಸ ಮಾಡುವುದರಿಂದ ಭಾಷೆಗಳ ಬದಲಾವಣೆ ಚಿತ್ರರೂಪದ ಯಥಾವತ್ತತೆಯಲ್ಲಿ ಅಷ್ಟೇನೂ ಸವಾಲುಗಳನ್ನು ಒಡ್ಡಲಾರವು. ಚಿತ್ರರೂಪದ ಅನುವಾದದಲ್ಲಿ ಅತಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಸಾಮಾಜಿಕ ಪರಿಸರ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು. ಉದಾಹರಣೆಗೆ ಎಝ್ರಾ ಪೌಂಡ್‌ನ ಈ ಕೆಳಗಿನ ಸಾಲುಗಳನ್ನು ತೆಗೆದುಕೊಳ್ಳಿ :

While my hair was still cut straight across my forehead
I played about the front gate, pulling flowers
you came by on bamboo stilts, playing horse,
you walked about my seat, playing with blue plums.
And we went on living in the village of Chokan;
Two small people, without dislike or suspicision
(The River Merchants wife : A Letter)

ಬಾಲ್ಯ ಸ್ನೇಹಿತರಿಬ್ಬರ ಒಡನಾಟದ ವಿವರಣೆಯಾಂದಿಗೆ ಪ್ರಾರಂಭವಾಗುವ ಈ ಕವನ 8ನೇ ಶತಮಾನದ ಚೀನಾ ದೇಶದ ಕವಿ ಲಿ ಪೋನ ಕವಿತೆಯಾಂದರ ಮೇಲೆ ಆಧಾರವಾದದ್ದು. ಆಡುವ ವಯಸ್ಸಿನ ಚಿಕ್ಕ ಹುಡುಗಿಯ ಮುಂದಲೆಯನ್ನು ಹಣೆಯ ಮಟ್ಟದಲ್ಲಿ ಕತ್ತರಿಸಿದ್ದು ಚೀನಾ ದೇಶದಲ್ಲಿ ಮಕ್ಕಳ ಕೇಶಾಲಂಕಾರ. ವಿವರಿತವಾಗಿರುವ ಪ್ರದೇಶ ಚೀನಾದ ಒಂದುಹಳ್ಳಿ. ಇದೇ ಸಾಲುಗಳ ಅನುವಾದವನ್ನು ಬಿ.ಸಿ. ರಾಮಚಂದ್ರಶರ್ಮರು ಹೇಗೆ ಮಾಡುತ್ತಾರೆ ನೋಡಿ:

ಎಣ್ಣೆ ಹಚ್ಚಿ ಪಿಣ್ಣನೆ ಹೆಣೆದು ಮುಂದಲೆ ತಿದ್ದಿ
ಚೋಟುದ್ದದ ಜಡೆ ಬೆನ್ನಿಗಿಳಿಬಿಟ್ಟ ಕಾಲ.
ಹೂವು ಕೀಳಲು ಗೇಟಿನವರೆಗೂ ಬಂದವಳ ಸುತ್ತ
ಗಣೆಯೇರಿ ನಡೆದು ಪೇರಲ ಹಣ್ಣು ಮುಕ್ಕಿ
ಕೆನೆದವರು ನೀವು. ಅಳುಕು, ಅಸಹ್ಯ
ಯಾವುದೂ ಇರದ ಎಳಕರು ನಾವು,
ಸಣ್ಣ ಹಳ್ಳಿಯ ಬದುಕಾಗ ನಮಗೆ.
(ವರ್ತಕನ ಹೆಂಡತಿ: ಒಂದು ಕಾಗದ)


ಮೂಲ ಕವನದಲ್ಲಿ ಎಣ್ಣೆಯೂ ಇಲ್ಲ. ಜಡೆಯೂ ಇಲ್ಲ ಮತ್ತು ಪೇರಲ ಹಣ್ಣೂ ಇಲ್ಲ. ಆದರೆ ಅವುಗಳ ಸೇರ್ಪಡೆಯಿಂದಾಗಿ ಕವಿತೆಯು ‘ಚೀನಾ ದೇಶದ ಹಳ್ಳಿಯಲ್ಲಿ ನಡೆದದ್ದು’ ಎಂಬ ಹಣೆಪಟ್ಟಿಯಿಂದ ಮುಕ್ತವಾಗಿ ಭಾರತೀಯ ಸಹಜ ಪರಿಸರದ ಎಲ್ಲೂ ನಡೆಯುವಂತದ್ದಾಗಿ ಬದಲಾವಣೆ ಹೊಂದುತ್ತದೆ. ಮೂಲಕವಿತೆಯಲ್ಲಿ ಹುಡುಗಿ ಗೇಟಿನ ಬಳಿ ಆಟವಾಡುವುದಕ್ಕಾಗಿ ಹೂವು ಕೀಳುತ್ತಾಳೆ . ಆದರೆ ಅನುವಾದದಲ್ಲಿ ಅದೇ ಹುಡುಗಿ ಹೂವು ಕೀಳುವುದಕ್ಕಾಗಿ ಗೇಟಿನ ಬಳಿ ಹೋಗುತ್ತಾಳೆ. ಪರಿಸರಕ್ಕೆ ತಕ್ಕನಾದ ಅರ್ಥಗರ್ಭಿತ ಬದಲಾವಣೆಗಳು ಇವು. ಈ ಸಾಂಸ್ಕೃತಿಕ ಬದಲಾವಣೆಗಳಿಗೆ ಸಮನಾಗಿ ಭೌಗೋಳಿಕ ಬದಲಾವಣೆಗಳೂ ಕಾಣಿಸುತ್ತವೆ. ಚೋಕನ್‌ ಎಂಬ ಚೀನಾ ದೇಶದ ಸಣ್ಣ ಹಳ್ಳಿ ನಮ್ಮ ಹೆಸರಿಲ್ಲದ ‘ ಸಣ್ಣ ಹಳ್ಳಿ’ಯಾಗಿ ಮಾರ್ಪಾಡು ಹೊಂದುತ್ತದೆ.

ಇಷ್ಟೆಲ್ಲಾ ಬದಲಾವಣೆಗಳ ಅಗತ್ಯವೇಕಾಯಿತು ಎಂದು ಯೋಚಿಸಿದರೆ ನಮಗೆ ಅನುವಾದ ಕ್ರಿಯೆಯ ಸೃಜನಶೀಲತೆ ಮತ್ತು ರಸಪ್ರಜ್ಞೆಯ ಅರಿವಾದೀತು.

ವಸ್ತು ರೂಪ

ಭಾಷೆ ಮತ್ತು ಬಿಂಬಗಳು ಸಮರಸವಾಗಿ ಸಂಧಿಸಿ ಭಾವದ ರಸೋತ್ಪತ್ತಿಯಲ್ಲಿ ಪರ್ಯಾಪ್ತಗೊಳ್ಳುವುದು ವಸ್ತುವನ್ನು ನಿರ್ಮಿಸುವ ಉದ್ದೇಶದಿಂದಲೇ. ನಾದವು ತನ್ನ ಭಾಷೆಯ ಹರವಿನಿಂದ ಬಿಂಬವನ್ನು ಮೂಡಿಸುತ್ತದೆ ಮತ್ತು ಬಿಂಬವು ಅರ್ಥ ಮತ್ತು ಭಾವದ ನೆರವಿನಿಂದ ಪ್ರತೀಕಗಳನ್ನು ನಿರ್ಮಿಸುತ್ತದೆ. ಜೀವನ ಮೌಲ್ಯಗಳೊಡನೆ ಬೆರೆತ ಪ್ರತೀಕಗಳು ಕಾವ್ಯದ ‘ವಸ್ತು’ ವಾಗುತ್ತವೆ.

ಉದಾಹರಣೆಗೆ ‘ಪ್ರೀತಿ ಇಲ್ಲದ ಮೇಲೆ - ಹೂವು ಅರಳೀತು ಹೇಗೆ ? ’ ಎನ್ನುವಲ್ಲಿ ಕವಿತ ವಸ್ತು ಪ್ರೀತಿ ರಾಹಿತ್ಯ. ಅರಳುವ ಹೂವು ಬಿಂಬ ಮಾತ್ರ. ಪ್ರತೀಕದ ರೂಪಕ್ಕೆ ಬರುವಲ್ಲಿ ಬಿಂಬವು ತನ್ನ ನಿಜ ಅರ್ಥವನ್ನು ಕಳೆದುಕೊಂಡಿರುತ್ತದೆ. ಬರೀ ‘ ಹೂವು ಅರಳೀತು ಹೇಗೆ ’ ಎಂಬ ಸಾಲನ್ನು ಯಾರಿಗಾದರೂ ಓದಿದರೆ ಮೂಡುವ ಅರ್ಥ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ಪ್ರೇರಿತವಾದದ್ದು. ‘ ನೀರಿಲ್ಲದಿರಬಹುದು,’ ‘ ಬಿಸಿಲಿಲ್ಲದಿರಬಹುದು’ , ‘ಗಿಡ ಒಣಗಿರಬಹುದು’ ಎಂದೆಲ್ಲಾ ಸಹಜ ಉತ್ತರಗಳು ಹೊರಬರುತ್ತವೆ. ‘ ಪ್ರೀತಿ ಇಲ್ಲದ ಮೇಲೆ ’ ಸೇರಿದ ಮೇಲೆ ಮಾತ್ರ ಸಾಲು ತಮ್ಮ ಸಾಮಾನ್ಯ ಅರ್ಥದಿಂದ ಮುಕ್ತವಾಗಿ ಪ್ರತೀಕದ ರೂಪ ಪಡೆಯುತ್ತದೆ. ಪ್ರತೀಕದೊಂದಿಗೆ ಭಾವವು ಮಿಲನಗೊಂಡ ಫಲವಾಗಿ ಕವಿಯ ಉದ್ದಿಶ್ಯವನ್ನು ಸಾರುವ ಕಾವ್ಯದ ವಸ್ತುವಾಗುತ್ತದೆ.

ಅನುವಾದಕನ ಪ್ರಾಥಮಿಕ ಜವಾಬ್ದಾರಿಯೆಂದರೆ ಮೂಲ ಕಾವ್ಯದ ವಸ್ತುವನ್ನು ಅನುವಾದದಲ್ಲಿ ಸಂರಕ್ಷಿಸುವುದು. ಭಾಷೆ ಮತ್ತು ಚಿತ್ರಗಳ ಬದಲಾವಣೆ ಈ ಜವಾಬ್ದಾರಿಗೆ ಪೂರಕವಾಗಿರಬೇಕು.

ಮೂಲ ಕವನದಿಂದ ವಸ್ತುವಿನಲ್ಲಿ ವಿಮುಖವಾದ ಕವಿತೆ ಮೂಲದಿಂದ ಸ್ಫೂರ್ತಿ ಪಡೆದ ಸ್ವತಂತ್ರ್ಯ ಕವಿತೆ ಹಾಗೂ ಅದನ್ನು ಬಹಳಷ್ಟರ ಮಟ್ಟಿಗೆ ಅನುವಾದ ಎಂದು ಹೇಳಲು ಬಾರದು. ಏಕೆಂದರೆ ವಸ್ತುವಿನ ಜೊತೆಗೆ ಬಹಳ ಮಟ್ಟಿಗೆ ನಾದ ಮತ್ತು ಚಿತ್ರಗಳೂ ಬದಲಾಗಿ ಕಾವ್ಯಭಾಷೆಯು ಬೇರೆಯಾಗಿ ನಿಲ್ಲುತ್ತದೆ. ಸ್ಫೂರ್ತಿಯೇ ಕೇಂದ್ರವಾಗುಳ್ಳ ಕಾವ್ಯದ ವಸ್ತುವಿನ ರಚನಾಕ್ರಿಯೆಯು ಕಲ್ಪಿಸುವ ಕಾವ್ಯ ಪ್ರವೇಶದ ಅನೇಕಾನೇಕ ಸಾಧ್ಯತೆಗಳಲ್ಲಿ ಬೇರೆ ಕವಿತೆಗಳಿಂದ ಪಡೆದ ವಶೀಲಿಯೂ ಒಂದು. ಈ ರೀತಿಯ ಕವಿತೆಯನ್ನು ಅನುವಾದವೆಂದು ಕರೆಯುವುದು ಸೂಕ್ತವಲ್ಲ .

ಜೇನ್‌ ಹರ್ಷಫೀಲ್ಡ್‌ (Jane Hirsfield) ತನ್ನ Nine gates Entering the mind of poetry ಪುಸ್ತಕದಲ್ಲಿ ಹೇಳುವಂತೆ ‘ ಅನುವಾದವೆನ್ನುವುದು ಕಾಲನ ಸೂಕ್ಷ್ಮತೆಯಲ್ಲಿ ಕಾವ್ಯವು ನಂಬಿಕೆ, ನಾದ, ಅರ್ಥ ಮತ್ತು ಭಾವಗಳನ್ನು ಸಮಯದ ದಾರದಲ್ಲಿ ಹೇಗೆ ಪೋಣಿಸಿತು ಎಂದು ಅರಿವಲ್ಲಿನ ಒಂದು ವಿಧಾನ.’ ಇದಕ್ಕೂ ಹೊರತಾಗಿ ಅನುವಾದವು ಜೀವನ ದರ್ಶನದ ಅನೇಕ ಬಾಗಿಲುಗಳನ್ನು ಪರಿಚಯಿಸುವ ಒಂದು ಸಾಧನ. ಅನುವಾದಗಳು ನಮಗೆ ಕಾವ್ಯದ ಎಲ್ಲಾ ಶ್ರೀಮಂತಿಕೆಗಳನ್ನು ನಮ್ಮ ಮುಂದಿಡುವಂತೆಯೇ, ನಾವು ಕಂಡರಿಯದ ಸಂಸ್ಕೃತಿ, ನಾವು ಕಂಡರಿಯದ ಆಚರಣೆಗಳು, ನಾವು ಕಂಡರಿಯದ ನಂಬಿಕೆಗಳು, ಹೊಸ ದೃಷ್ಟಿಕೋನಗಳು ಮತ್ತು ಅಭಿವ್ಯಕ್ತಿಯ ಹೊಸ ತಂತ್ರಗಳೊಂದಿಗೆ ನಮ್ಮಲ್ಲಿಗೆ ಬಂದು ನಮ್ಮ ಜ್ಞಾನದ ಗಡಿಯನ್ನು ವೃದ್ಧಿಸುವಲ್ಲಿ ಸಾಧನವಾಗಿ ನಿಲ್ಲುತ್ತವೆ.

ಪೋಲಿಷ್‌ ಅನುವಾದಕನಿಗೆ ತನ್ನ ಪುಸ್ತಕವನ್ನು ನೀಡುತ್ತಾ ರಿಲ್ಕ ತನ್ನ ಸಹಿಯಾಂದಿಗೆ ಬರೆದ ಈ ಕೆಲವು ಸಾಲುಗಳು ಅನುವಾದಕನ ಮಹತ್ವ ಮತ್ತು ಜವಾಬ್ದಾರಿಯನ್ನು ಸ್ಪಷ್ಟವಾಗಿ ಸಾರುತ್ತವೆ.

ಅರಿತವರೆದೆಯಲ್ಲಿ ಉಳಿದ ಸತ್ಯ :
ಮಾತು ಮಾತುಗಳ ಹಿಂದೆ ಉಳಿದದ್ದು ಹೇಳಲಾರದ್ದು ಮಾತ್ರ
ಉದುರಿದವು ಅಲ್ಲೇ ಕರಗಿದವು, ಉಳಿದುದರಲ್ಲೇ ಬೆಳಕು
ಅಲ್ಲೇ ಅನಂತತೆಯ ಸ್ಪರ್ಶ.
ಅಂಗೈಯ ಹಣತೆಯಲಿ ಕಣ್ಣುಬಿಟ್ಟಾಗ
ಕಿರಿದಾದ ಸೇತುವೆಗಳೆಲ್ಲಾ ಹೆದ್ದಾರಿಗಳಾಗಿ
ಕಲ್ಲು ಬರಹಗಳೆಲ್ಲಾ ಮೇದಂತೆ ಕರಗಿ
ಉಳಿದುದೊಂದೇ ಶುದ್ಧ ಹರುಷ.


( Happy are those who know:
Behind all words, the unsayable stands;
And from that source alone. the Infinite
Crosses over to gladness, and us
Free of bridges,
Built with the stone of distinctions;
so that always, with in each delight,
we gaze at what is purely single and joined. )


ಹೇಳಲಾಗದ್ದು ಹೇಳಲಾಗದ್ದಾಗಿಯೇ ಉಳಿಯುವಲ್ಲಿ ಹೊಳೆಯುವುದು ಭಾಷಾಂತರದ ಸಫಲತೆ.

What do you think about Translation?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more