• search

ಕಾರ್ಯಕ್ರಮದಲ್ಲಿ ಹಾಡಿನ ಹೊಳೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಕಾರ್ಯಕ್ರಮ ಹೀಗೆ ಜರುಗಿತು: ಮೊದಲು ಶ್ರೀ ಚಾಮುಂಡೇಶ್ವರಿಯ ಪ್ರಾರ್ಥನೆಯಾಂದಿಗೆ (ಪದ್ಮಜಾ ಕಿಶೋರ್‌ ಮತ್ತು ಅಶೋಕ್‌ಕುಮಾರ್‌) ಹಾಡಿನ ಹೊಳೆ ಹರಿಯತೊಡಗಿತು. ಕ್ರಮೇಣ 1960ರ ದಶಕದಲ್ಲಿ ತಯಾರಾದ ಚಿತ್ರಗಳ ಗೀತೆಗಳೊಂದಿಗೆ ಮುಂದುವರೆಯಿತು. ಚಂದ್ರಿಕಾ ಶಂಕರ್‌ ಅವರು ಹಾಡಿದ ‘ ಗಗನವು ಎಲ್ಲೋ ಭೂಮಿಯು ಎಲ್ಲೋ’ ಎಂಬ ಪುಟ್ಟಣ್ಣನವರ ‘ ಗೆಜ್ಜೆ ಪೂಜೆ’ಯ ಹಾಡು, ದಿವಂಗತ ಕಲ್ಪನ ಅವರನ್ನು ಪ್ರೇಕ್ಷಕರು ನೆನಪಿಸಿಕೊಳ್ಳುವಂತೆ ಮಾಡಿತು. ನಂತರ ರಾಂ ಪ್ರಸಾದ್‌ ಹಾಡಿದ ರಾಷ್ಟ್ರ ಕವಿ ಕುವೆಂಪು ಅವರ ‘ ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಸಾಹಿತ್ಯ ಆಸಕ್ತರ ಕನ್ನಡದ ಒಲವನ್ನು ಇಮ್ಮಡಿಗೊಳಿಸಿತು. ಬಳಿಕ ಬಂದ ‘ ಸಾಗಲಿ ತೇಲಿ ತರಂಗದೊಳು ’(1950ರ ‘ ಮಾಯಾ ಬಜಾರ್‌’ಚಿತ್ರದ ಆಯ್ಕೆ) ವೀಕ್ಷಕರನ್ನು ದೋಣಿ ವಿಹಾರಕ್ಕೆ ಕರೆದೊಯ್ಯಿತು.

    ನಂತರ ನಟ ಸಾರ್ವಭೌಮ ರಾಜ್‌ಕುಮಾರ್‌ ನಟಿಸಿದ, ‘ ಬಭ್ರುವಾಹನ’ದ ‘ ಆರಾಧಿಸುವ ಮದನಾರಿ’ಯನ್ನು ಹಾಡಿದ ಅಶೋಕ್‌ ಕುಮಾರ್‌ ಪ್ರೇಕ್ಷಕರ ಶಿಳ್ಳು, ಭರ್ಜರೀ ಚಪ್ಪಾಳೆ ಗಿಟ್ಟಿಸಿಕೊಂಡರು; ಹಾಗೆಯೇ ‘ ಸಂಶಯ ಫಲ’ ಚಿತ್ರದ ‘ ದೂರದಿಂದ ಬಂದಂಥ ಸುಂದರಾಂಗ ಜಾಣ’ ಕೂಡ. ಹಾಡಿದ ಗಾಯಕಿ ಪರಿಮಳಾ ಮುರಳೀಧರ ಅವರು ಹುಚ್ಚೆದ್ದ ಜನರ ಒತ್ತಡಕ್ಕೆ ಮಣಿದು, ಮತ್ತೊಮ್ಮೆ ಕೊನೆಯಲ್ಲಿ ಅದನ್ನು ಹಾಡಲೇ ಬೇಕಾಯಿತು. ಶ್ರೀರಂಜಿನಿ, ಶೇಷ ಪ್ರಸಾದ್‌ ಮತ್ತು ರಾಮ್‌ ಪ್ರಸಾದ್‌ ಅವರು ಜೊತೆಗೂಡಿ ‘ ಅಮೆರಿಕಾ ಅಮೆರಿಕಾ’ದ ‘ ಬಾನಲ್ಲಿ ಓಡೋ ಮೇಘ’ ಹಾಡಿದರು. ಇನ್ನೂ ಕೆಲವು ಚಿತ್ರಗೀತೆಗಳಾದವು.

    ಮಧ್ಯಂತರದ ಊಟದ ನಂತರ ಹಾಡಿನ ಅಣೆಕಟ್ಟಿನ ತೂಬು ತೆರೆಯಿತು. ವೇದಿಕೆಗೆ ಎಚ್‌.ಸಿ. ಶ್ರೀನಿವಾಸ್‌, ಭಗವಾನ್‌, ಗಿರೀಶ್‌, ದಿವ್ಯಾ ಹೆಗ್ಡೆ, ಪ್ರಶಾಂತ್‌ ಭಟ್‌, ತ್ರಿವೇಣಿ ಕಟೀಲ್‌, ದಿನೇಶ್‌ ಕಟೀಲ್‌, ವಿನಯ್‌ ಹೆಗ್ಡೆ, ಶೇಷಾದ್ರಿ, ಕಲಾ ಶೇಷಾದ್ರಿ, ಶ್ರೀನಾಥ್‌ ಮತ್ತು ರಮೇಶ್‌ ಇವರ ಆಗಮನವಾಯಿತು. ನಂದಿನಿ ಉಮೇಶ್‌ ಅವರ ನೇತೃತ್ವದಲ್ಲಿ ‘ ನಾಗರಹೊಳೆ’ ಚಿತ್ರದ ಆದಿವಾಸಿಗಳ ಹಾಡು, ಅದಕ್ಕೆ ತಕ್ಕ ಜಾನಪದ ಕುಣಿತ, ಅದಕ್ಕೆ ಅನುರೂಪವಾದ ವೇಷ ಭೂಷಣ - ತಾಳ ಮೇಳ ಮೇಳೈಸಿ ಹೊಂದಾಣಿಕೆ ಬಲು ಸೊಗಸಾಗಿತ್ತು ! (ವಸ್ತ್ರಾಲಂಕಾರ, ಸಂಯೋಜನೆ ಮತ್ತು ರಾಗ ವಿನ್ಯಾಸವೂ ನರ್ತಕಿ ನಂದಿನಿ ಅವರದ್ದೇ). ನಂತರ ಬಿ.ವಿ. ಜಗದೀಶ್‌ ಮತ್ತು ರವಿ ಕುಮಾರ್‌ ಅವರುಗಳು ‘ ಸೀನ ಸುಬ್ಬು, ಸೀನ ಸುಬ್ಬು’ಗಳ ತುಂಟ ಗೆಳೆಯರ ಅಪರೂಪದ ಜೋಡಿಯನ್ನು ಹಾಡಿದರು; ಪ್ರೇಕ್ಷಕ ಸಮೂಹ ಗಾಯಕರ ಜೊತೆ ಶಿಳ್ಳು ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕಿ ಕುಣಿದಾಡಿದರು. ಶ್ರೀರಂಜಿನಿ ಮತ್ತು ಶೋಭಾ ಪ್ರಭಾಕರ್‌ ಅವರು ‘ ರಂಗೇನ ಹಳ್ಳಿಯಾಗೆ’ ಹಾಡಿದರು. ಮುಂದುವರಿದು, ಇನ್ನೂ ಕೆಲವು ಜನಪ್ರಿಯ ಗೀತೆಗಳ ಮಳೆಗರೆದರು.

    ಇಂದಿನ ಪ್ರಪಂಚದ ಅಭಿರುಚಿಗೆ ಅನುಗುಣವಾಗಿ ಹಾಡು, ಅದರ ಅವಿಭಾಜ್ಯ ಅಂಗವಾಗಿ ನೃತ್ಯ, ಈ ಕಾರ್ಯಕ್ರಮದಲ್ಲಿ ಅಲ್ಲಲ್ಲಿ ಸಿಂಪಡಿಸಲಾಗಿತ್ತು. ವಿಶೇಷವಾಗಿ ರಶ್ಮಿ ಅಶೋಕ್‌ ಕುಮಾರ್‌ ಅವರು ಮಾಡಿದ ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿತು. ಕೊನೆಯಲ್ಲಿ ಗಾಯಕರೊಂದಿಗೆ ಪ್ರೇಕ್ಷಕರೂ ಕೂಡಿ ಸಾಮೂಹಿಕವಾಗಿ ‘ ನಾವಾಡುವ ನುಡಿಯೇ ಕನ್ನಡ ನುಡಿ’(ಗಂಧದ ಗುಡಿ) ಎಂದು ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಇತಿಶ್ರೀ ಹೇಳಲಾಯಿತು.

    ಕನ್ನಡ ಕೂಟದ ಪದಾಧಿಕಾರಿಗಳ ಅವಿರತ ಸಹಾಯ ಸ್ತುತ್ಯರ್ಹವಾಗಿತ್ತು. ಧ್ವನಿವರ್ಧಕ ವ್ಯವಸ್ಥೆ ಸಮರ್ಪಕವಾಗಿತ್ತು.(ಅತುಲ್‌ ವೈದ್ಯ ನೇತೃತ್ವ , ಅನುರೋಧ, ಶ್ರೀಕಾಂತ್‌ ಮತ್ತು ಆನಂದ್‌ ಸಹಾಯ). ಅಚ್ಚುಕಟ್ಟಾದ ನೆರಳು ಬೆಳಕಿನ ವ್ಯವಸ್ಥೆ (ಸಂಧ್ಯಾ ರಾಮ್‌ ಕೆದ್ಲಾಯ ಅವರ ನೇತೃತ್ವ, ಕಾರ್ತೀಕ್‌ ಮತ್ತು ಶಂಕರ್‌ ಜಯರಾಮನ್‌ ಸಹಾಯ ) ವೇದಿಕೆಯ ತಾರೆಯರಿಗೆ ಮೆರುಗು ಕೊಟ್ಟಿತು. ರಂಗ ಸಜ್ಜಿಕೆ ಮನಮೋಹಕವಾಗಿತ್ತು (ಮೋನಿಕಾ ವೆಂಕಟೇಶ ಮೂರ್ತಿ, ಮಂಗಳಾಕುಮಾರ ಮತ್ತು ಅನುರಾಧಾ ಭಟ್‌ ). ಚಲನ ಚಿತ್ರ ಕಲಾವಿದೆ ಸುಮನ್‌ ನಗರ್‌ಕರ್‌ ಅವರ ಸಮರ್ಥ ಕಾರ್ಯಕ್ರಮ ನಿರೂಪಣೆ, ಅದಕ್ಕಾಗಿಯೇ ಸಾಹಿತ್ಯ ರಚಿಸಿದ ಎಚ್‌. ಸಿ. ಶ್ರೀನಿವಾಸರ ಅಚ್ಚುಕಟ್ಟಾದ ಮಾತಿನ ಮೋಜು ಎಲ್ಲರ ನೆನಪಿನಲ್ಲಿ ಉಳಿಯಿತು.

    ಒಟ್ಟಾರೆ, ಎಲ್ಲರೂ ಬಹುಕಾಲ ಮೆಲುಕು ಹಾಕುವಂತಹ ಸುಂದರ ‘ ಸಂಗೀತ ಸಂಧ್ಯೆ’ಅದಾಗಿತ್ತು.

    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more