• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುತಿನ ಕಾವ್ಯ : ವರ್ತಮಾನದ ಕನ್ನಡಿಯಲ್ಲಿ ಮೌಲ್ಯ ವ್ಯವಸ್ಥೆಯ ಸಾಕ್ಷಾತ್ಕಾರ ಭಾಗ- 2

By Staff
|

Cover page of collection of poems by Pu.Ti.Narasimhacharಗೋರೂರು ಪು.ತಿ.ನ ಅವರು ಎಳೆತನದಲ್ಲಿ ಬೆಳೆದ ಊರು. ಅಪ್ಪಟ ಕನ್ನಡದ ಚಾವಡಿ ಹರಟೆಗಳನ್ನು ಅಲ್ಲಿ ಕೇಳುತ್ತ ಬಾಲ್ಯದ ನರುಗಂಪಿನ ಜೊತೆ ಹಿರಿಯರ ಮಮತೆಯನ್ನು ಅನುಭವಿಸಿದ ಕವಿ ಅಲ್ಲಿನ ನದಿ ಗಿಡ ಮರ ಬಳ್ಳಿಗಳನ್ನ ಆಗಾಗ್ಗೆ ನೆನಸಿಕೊಳ್ಳುತ್ತಿರುತ್ತಾರೆ. ಆಮೇಲೆ ಹಳಗನ್ನಡ ನಡುಗನ್ನಡದ ಪರಿಚಯವಾದದ್ದು ಹೆಮ್ಮಿಗೆಗೆ ಬಂದಮೇಲೆ. ನಂತರ ಬಂದು ನೆಲೆಸಿದ ಮೇಲುಕೋಟೆಯಂತೂ, ಅವರೇ ಹೇಳುವಂತೆ, ಅವರ ‘ಪ್ರಪಂಚದ ರಸವತ್ತಾದ ಭಾಗ (ಅವರಿಗೆ ) ಮೇಲುಕೋಟೆಯ ಕೊಡಿಗೆ!’

ಮುಂದಿನ ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲಿ ನಡೆಯಿತು. ಸುಪ್ತ ಪ್ರತಿಭೆಯ ಒಬ್ಬ ಬೆಳೆಯುವ ಕವಿಗೆ ಅವಶ್ಯಕವಾದ ಸೂಕ್ಷ್ಮ ಸಂವೇದನೆ, ಕುಶಲ ಅಭಿರುಚಿ, ಚುರುಕು ಬುದ್ಧಿ, ವಿಶಾಲ ದೃಷ್ಟಿ ಮುಂತಾದುವೆಲ್ಲಾ ಗರಿಗೆದುರಿದುದು ಈ ಕಾಲೇಜು ವ್ಯಾಸಂಗದ ಅವಧಿಯಲ್ಲೇ. ಪಾಶ್ಚಾತ್ಯ ಕವಿಗಳ , ವಿಮರ್ಶಕರ ಆಳವಾದ ಅಧ್ಯಯನಕ್ಕೆ ತೊಡಗಿದುದೂ ಈವಾಗಲೇ. ಇದಕ್ಕೆಲ್ಲ ಕಾರಣರಾದ, ಬಹುಶ್ರುತರೂ ಮೇಧಾವಿಗಳೂ ಆಗಿದ್ದ ಗುರುಗಳನೇಕರನ್ನ ಕೃತಜ್ಞತೆಯಿಂದ ತಮ್ಮ ಮುನ್ನುಡಿಗಳಲ್ಲಿ ಸ್ಮರಿಸಿಕೊಳ್ಳುತ್ತಾರೆ, ಪುತಿನ.

1933 ರಿಂದ 1981ರ ವರೆಗೆ ಪುತಿನ ಅವರ ಒಂಬತ್ತು ಕವನ ಸಂಕಲನಗಳು ಪ್ರಕಟವಾದವು. ಹಣತೆ ( 1933), ಮಾಂದಳಿರು (1936), ಶಾರದ ಯಾಮಿನಿ (1944), ಗಣೇಶ ದರ್ಶನ (1947), ರಸ ಸರಸ್ವತಿ (1957), ಮನೆದೇಗುಲ ( 1954), ಹೃದಯ ವಿಹಾರಿ ( 1960), ಇರುಳ ಮೆರಗು (1974), ಹಳೆಯ ಬೇರು, ಹೊಸ ಚಿಗುರು (1981); ಹತ್ತನೆಯದು, ‘ ಎಂಬತ್ತರ ನಲುಗು ’ ವಿನಲ್ಲಿ 1981 ರಿಂದ 1988 ರವರೆಗೆ ಬರೆದ ಅವರ ಕವನಗಳು ಇವೆ.

ಕನ್ನಡ ನಾಟಕ ಲೋಕದಲ್ಲಿ ಹೊಸ ಹಾದಿಯನ್ನು ಬಿಚ್ಚಿದವರು ಪುತಿನ. ಅವರ ‘ ಅಹಲ್ಯೆ’ ಸೊಗಸಾದ ಕಾವ್ಯ ನಾಟಕ. ಗೀತರೂಪಕಗಳಲ್ಲಿ ಅವರ ರಾಮಾಯಣ ಗೇಯಕಾವ್ಯ ನಾಟಕಚಕ್ರ ‘ ಅಹಲ್ಯೆ’ (1965) ಯಿಂದ ಮೊದಲುಗೊಂಡು ‘ ಶಬರಿ ’ ( 1946), ‘ ಹರಿಣಾಭಸರಣ ’ ( 1965), ‘ ರಾಮೋದಯಂ’ (1965), ‘ ಸೀತಾಪರಿಣಯ (1965), ಗಳಿಂದ ಹಾಯ್ದು , ಕೊನೆಗೆ ‘ ಶ್ರೀ ರಾಮಪಟ್ಟಾಭಿಷೇಕ ’ ( 1967)ದ ವರೆಗೂ ಹಬ್ಬಿದೆ. (ಯಕ್ಷಗಾನ ಪ್ರಕಾರದಲ್ಲಿ ಬರೆದ ಅವರ ‘ರಾವಣ ಬಂದು ಹೋದದ್ದು ’ ( 1970) ಎಂಬುದನ್ನೂ ಇಲ್ಲಿ ಸೇರಿಸಬಹುದೇನೋ.

ಸ್ಫೂರ್ತಿಗಳು ಮೈಗರೆವ ಮುನ್ನ ಅವರು ತಮ್ಮ ‘ಹಂಸ ದಮಯಂತಿ ’ ( 1965) ಗೆ ‘ದಮಯಂತೀ ಸ್ವಯಂವರ’ ಮತ್ತು ‘ಪುನರ್ಮಿಳನ ’ ಗಳನ್ನು ಸೇರಿಸಿ, ಒಂದು ಸಂಪೂರ್ಣ ನಾಟಕವನ್ನಾಗಿ ಮಾಡಬಹುದಾಗಿತ್ತೇನೋ. ‘ಗೋಕುಲ ನಿರ್ಗಮನ’ (1945) ವಂತೂ ಕನ್ನಡದ ‘ಗೀತಗೋವಿಂದ’. ಪುತಿನ ಗೀತರೂಪಕಗಳಲ್ಲಿ ಸಾಹಿತ್ಯ ಸಂಗೀತಗಳ ಮಧುರ ದಾಂಪತ್ಯವಿದೆ. ಸಾಹಿತ್ಯವು ಸಂಗೀತಕ್ಕೆ ತನ್ನನ್ನೇ ತಾನು ಸಮರ್ಪಿಸಿಕೊಂಡಿದೆ. ಪು.ತಿ.ನ ರೂಪಕಗಳಲ್ಲಿ ‘ಸಂಗೀತ ಮುಂದು, ಸಾಹಿತ್ಯ ಹಿಂದು’ ಎಂದು ಕೆಲವರಿಗೆ ಅನುಭವವಾದರೆ ಅಚ್ಚರಿ ಪಡಬೇಕಾಗಿಲ್ಲ . ಅವರೇ ಹೇಳಿದ್ದಾರೆ : ‘ಮನಸ್ಸು ಒಂದು ಲಹರಿಯಲ್ಲಿದ್ದಾಗ ಸಂಗೀತ ಸ್ವರಗಳು ಅದಕ್ಕೆ ಬಂದು ಮುತ್ತಿಕೊಳ್ಳುತ್ತವೆ... ನಡುರಾತ್ರಿಯ ಮೌನದಲ್ಲಿ ಇವು ನನ್ನ ಕರ್ಣಾಕಾಶದಲ್ಲಿ ಸ್ಪಷ್ಟವಾಗಿ, ಕೆಲವು ವೇಳೆ ಥಳಥಳನೆ ಹೊಳೆದಿವೆ; ಎದ್ದು ಅವನ್ನು ಹಿಡಿಯಲು ನಾನು ಮಾತುಗಳನ್ನು ಬೀಸಿರುವುದುಂಟು... ’

ಕನ್ನಡದಲ್ಲಿ ಸುಲಭವಾಗಿ ಅರಗದ ಸಂಸ್ಕೃತದ ಪದಗಳು, ಹಳಗನ್ನಡದ ರೂಪಗಳು, ಹಳೆಯ ಪ್ರತ್ಯಯರೂಪಗಳು ಎಲ್ಲ ಒಟ್ಟಾಗಿ ಸೇರಿ ರಚನೆ ಕ್ಲಿಷ್ಟವಾಗುತ್ತವೆ, ಮಾತು ಸಹಜತೆಗೆ ಎರವಾಗುತ್ತವೆ. ತೀವ್ರತೆ ತಗ್ಗಬಹುದು ಎನ್ನುವ ಅಪಸ್ವರ ದೂರು ಪುತಿನ ಬಗ್ಗೆ ಅಲ್ಲಲ್ಲಿ ಕೇಳಿ ಬರುವುದುಂಟು.

‘ನೈಶಕಾಲಿಕಾಲ್ಪ ಜಲಾಕುಲಿತಾತಪಭಾಗಣ
ಗುಲುಂಛ ಸಮೀರಂ,
ತರುಗಾರಣ ಪ್ರಾಸೀ, ಹರಿಜಾಗರ ಸೂಚೀ
ಪ್ರಸರಿಸುತಿದೆ ಗಹನಗಗನ
ಗೊಹನಪಟು ಸೂರ್ಯಮರೀಚಿ!’‘ಸುದೀರ್ಘ ಪ್ರಾಲಂಭ ಪ್ರಸೃತ ವಿಟಪಂ ಪಾದಮಹೋ
ಪ್ರಸೂನ ಪ್ರದ್ಯೋತಂ ಗಗನ ಪರಿಕರ್ಮ ಪ್ರಚಲಿತಂ
ಸರಂ ಜ್ಯೋತಿಯ್ಯಾಪನ ಸುಪಿಹಿತಂ ಪಾಲಕಮನಂ
ವನಂ ನಮ್ಮಾತಿಥ್ಯಕ್ಕನ್ಯುಮನುತಿಸಿ ಬಂದಂತಿದೆ, ಸಖ!’


ನಾಲಗೆಗೆ ಸ್ವಲ್ಪ ಕಸರತ್ತಾಯಿತೇ? ‘ಶ್ರೀರಾಮ ಪಟ್ಟಾಭಿಷೇಕ’ದ ಪ್ರಾರಂಭದಲ್ಲಿ ಬರುವ ‘ಕಥಕ’ನ ಕೇದಾರಗೌಳ ರಾಗದ ವೃತ್ತವನ್ನು ಗಮನಿಸಿ :

ಪಿತೃವಾಕ್ಯಂ ನಿಲ್ಲಲೆಂದಾ ರಘುಕುಲನಿಯತ
ಪ್ರಾಪ್ತಿಯಂ ರಾಜ್ಯವಂ ಬಿಟ್ಟು,
ಅತಿ ಘೋರಾರಣ್ಯಕ್ಕೆ ಐದುತ್ತ ,
ಅನುಜ ಸಹಚರೀ ಸಾಹಚರ್ಯೈಕ ಸೌಖ್ಯಂ,
ಹೃತದಾರಂ, ಕೀಶಸೌಖ್ಯಂ,
ಜಲಧಿ-ನಯ-ಗುರುಜ್ಯಾ-ರವೋದೃಷ್ಟ-ದುಷ್ಟ-ಪ್ರತತಿ-ಪ್ರಾಣಾಪ್ತಬಾಣಂ,
‘ಜಯಜಯ’-ನುತಿಗೆ
ಇಂಬಾದನಾ ಮೈಥಿಲೀಶಂ।।


ಇಲ್ಲಿ ‘ಜಲಧಿ-ನಯ-ಗುರುಜ್ಯಾ-ರವೋದೃಷ್ಟ-ದುಷ್ಟ-ಪ್ರತತಿ-ಪ್ರಾಣಾಪ್ತಬಾಣಂ’ ಸ್ವಲ್ಪ ಕಬ್ಬಿಣದ ಕಡಲೆಯೇನೇ! ಹಿಂದೆ ಇಂತಹ ಸಂಸ್ಕೃತ ಭೂಯಿಷ್ಟವಾದ ಹವಳದ ಮಣಿಕಟ್ಟಿನಂತಿರುವ ರಚನೆಗೆ ‘ಮಣಿಪ್ರವಾಳ’ ಶೈಲಿ ಎನ್ನುತ್ತಿದ್ದರು. ಕನ್ನಡದ ಪ್ರಾಚೀನ ಕವಿ ಅಗ್ಗಳ (ಕ್ರಿ.ಶ.1189)ನ ಎರಡು ಉದಾಹರಣೆಗಳನ್ನು ಹೋಲಿಸಿ :

‘ಘನ ಸಮಯ ಶಬರಕರಗತ
ಕನತ್ತಟಿದ್ದಂಡ ಪಾತವಿಗಳನ್ನೀಲ
ಸ್ತನಯಿತ್ನಕುಲತಮಾಲೀ
ವನಪ್ರಸೂನಂಗಳೆನಿಸಿದುವು ಕರಕಂಗಳ್‌।
(‘ಆಲಿಕಲ್ಲು’ ವರ್ಣನೆ, ಚಂದ್ರಪ್ರಭ ಪುರಾಣ, 4.37)ಅತಿತಪ್ತೋದ್ದೃಪ್ತದೂಳಿವಿಹಿತ ಮಹಿತಳಂ,
ತುಂಗವಾತೂಳಿಕಾಲಿಂಗಿತರೋದೋಮಂಡಲಂ,
ಪ್ರೋಚ್ಚಳಿತ ಮರುಮರೀಚಿವ್ರಜ ವ್ಯಾಪ್ತದಿಕ್ಸಂ।
ತತಿ ಬಂದತ್ತಂದಗುರ್ವಿಂ ಬಗೆಗೆ ಪಡೆದಮೋಘಂ,
ಸಮುದ್ಧೂತ ಮಾಘಂ ಹೃತನದ್ಯೋ ಘಂ ವಿಮೇಘಂ,
ಜನಿತಜನಮನೋಗ್ಲಾನಿದಾಘಂ ನಿದಾಘಮ್‌।।
(‘ಬೇಸಗೆ’ಯ ವರ್ಣನೆ, ಚಂದ್ರಪ್ರಭ ಪುರಾಣ, 9.65)

‘ಛೆ,ಛೆ! ಎಲ್ಲಾದರೂ ಉಂಟೆ?’- ಎನ್ನುತ್ತಾರೆ, ಪು.ತಿ.ನ.

‘ಭವದ ಮೇಲಿಂದೆದ್ದು , ಭಾವದಲಿ ಸಂಚರಿಸಿ,
ನುಡಿನುಡಿಯ ಕೇಂದ್ರದೊಳು ರೂಹುಗೂಡಿ’

ಇಂಥ ರಸಸರಸ್ವತಿಯ ಪದ, ನಿಮಗೆ ಸೊಡಕೆ?’- ಎಂದು ನಮ್ಮನ್ನು ಸುಮ್ಮನಾಗಿಸುತ್ತಾರೆ. ಅವರೋ ಸಂಸ್ಕೃತದ ಪಂಡಿತರು. ಎಲ್ಲ ಅವರಿಗೆ ಸರಳ. ನಮಗೋ ಸ್ವಲ್ಪ ಪೆಡಸು ಕಷ್ಟ . ಸಂಸ್ಕೃತ ಪ್ರವೇಶವಿಲ್ಲದವರಿಗೆ ಇದು ಅಸ್ಪಷ್ಟ . ರಸಗ್ರಹಣಕ್ಕೆ, ಬೇಗ ಅರ್ಥ ಗೊತ್ತಾಗದವರಿಗಾಗುವ ಕಾಲ್ತೊಡುಕು!

ಆದರೂ ನಮಗೆ ಈ ನಾರಿಕೇಳಪಾಕಗಳು ಎಲ್ಲೋ ಅಲ್ಲೊಂದು ಇಲ್ಲೊಂದು ಇದ್ದರೂ ರಸಾಸ್ವಾದನೆಗೆ ಈ ಅಹಲ್ಯೆಯ ಮಾತಿನಂತೇ ಸರಳ :

ಬಯಸುವೆ ನಾ ಗಂಗೆಯ ತೆರ
ಪದರಿ ಕರಗಿ ಹರಿಯೆ
ಇಲ್ಲದಿರಲು ಹಗುರವಾಗಿ
ಕಂಪಿನಂತೆ ಸರಿಯೆ
ಮೈಯ ಭಾರ ಮನವೆ ಭಾರ
ಬದುಕೆ ಭಾರವೆಂಬ
ಆಸಕ್ತಿಯೇ ಬೇಡದಂಥ
ನೆಲವೆ ನನ್ನ ತುಂಬಾ
(ಅಹಲ್ಯೆ, ಉತ್ತರಾಂಕ, ದೃಶ್ಯ 4, ಪುಟ 108)ಪುತಿನ ಅವರ ಒಂದು ‘ನಿವೇದನೆ’ ತುಂಬ ಅರ್ಥಪೂರ್ಣವಾಗಿ ನಮ್ಮೊಂದಿಗೆ ಮಾತನಾಡುತ್ತದೆ :

‘ನಾಡಿದರ ರೂಢಿಯಾಳಗೊಲವಿಹುದೆ ನಿಮಗೆ,
ಹಾಡ ಹೊಸಕಟ್ಟುಗಳ ಹದಕೆ ನಲಿವ ಬಗೆ ?
ಮೂಡಿಬರುವೆದೆಯಾಸಗೆಗೇಳು ಬಣ್ಣಗಳೊಡೆವ
ಮೋಡಿಯನು ಕಾಂಬಿರಾ ಕಿವಿ ತೆರೆಯಿರಿವಕೆ ;
ಪಾಡೆಲ್ಲ ನನಗಿರಲಿ, ಹಾಡು ನಿನಗಿರಲೆಂದ
ಬೀಡಿನೊಡತಿಗೆಯೆನ್ನ ಕೊಡಿಗೆಯಿಂಚರಕೆ !’
ಎಲ್ಲಾ ಹೇಳಿದ ಮೇಲೆ ಕೊನೆಗೆ ಒಂದು ಪ್ರಶ್ನೆ ಎದ್ದೇ ಏಳುತ್ತದೆ. ಹೌದು ಈ ‘ಕಾವ್ಯ’ದಿಂದ ಏನು ಪ್ರಯೋಜನ ? ಕವಿ ಅದನ್ನು ರಚಿಸುವುದಾಗಲೀ ಸಹೃದಯರು ಓದುವುದಾಗಲೀ ಏತಕ್ಕೆ ? ಇದಕ್ಕೆ ಲಾಕ್ಷಣಿಕರು ಹಲವು ರೀತಿಯಲ್ಲಿ ಉತ್ತರಿಸಿದ್ದಾರೆ. ಪ್ರಸಿದ್ಧವಾದ ಒಂದು ದ್ವಿಪದಿ ಇದೆ ಮಮ್ಮಟ ತನ್ನ ‘ಕಾವ್ಯಪ್ರಕಾಶ’ದಲ್ಲಿ ಹೇಳುತ್ತಾನೆ:

‘ಕಾವ್ಯಂ ಯಶಸೇ, ಅರ್ಥಕೃತೇ,
ವ್ಯವಹಾರವಿದೇ, ಶಿವೇತರ -ಕ್ಷತಯೇ !
ಸದ್ಯ: ಪರನಿರ್ವೃತಯೇ,
ಕಾಂತಾ ಸಂಮಿತತಯಾ ಉಪದೇಶಯುಜೇ ।।


- (ಕಾವ್ಯಪ್ರಕಾಶ 1, 2)

‘ಕಾವ್ಯ ಕೀರ್ತಿಗಾಗಿ, ಧನಾರ್ಜನೆಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಅಮಂಗಳ ನಿವಾರಣೆಗಾಗಿ, ತತ್ಕಾಲದಲ್ಲೇ ಪರಮಾನಂದ ಹೊಂದುವುದಕ್ಕಾಗಿ, ನಲ್ಲನಿಗೆ ನಲ್ಲಳು ಸೂಚಿಸುವಂತೆ ( ಅಥವಾ ಹೆಂಡತಿಗೆ ಗಂಡ ಹೇಳುವಂತೆ) ಸಮಯೋಚಿತ ಸಲಹೆ ಕೊಡಲಿಕ್ಕಾಗಿ !’ ಪಂಪ ಇದನ್ನೇ ಹೇಳುತ್ತಾನೆ :
‘ಕವಿತೆಯಾಳ್‌ ಆಸೆಗೆಯ್ವ ಫಲಮಾವುದೋ ?-
ಪೂಜೆ, ನೆಗಳ್ರೆ, ಲಾಭಂ ಎಂಬಿವೆ ವಲಂ’

(ಆದಿಪುರಾಣ 1.36)

ಅವನೇ ಅಲ್ಲಿ ಹೇಳುವ ‘ಇಂದ್ರ ಪೂಜೆ, ಭುವನಸ್ತುತಂ ಅಪ್ಪ ನೆಗಳ್ತೆ, ಮುಕ್ತಿ ಸಂಭವಿಸುವ ಲಾಭ(ಗೌರವ, ಸನ್ಮಾನ, ಕೀರ್ತಿ, ಸಂಪತ್ತು) ಕವಿಗೆ ಇವು ಸಿಕ್ಕಿವೆ !

ನನ್ನಿಗಾಗಲಿ ಸಕಲ ಜೀವರ ಚಿತ್ತವುನ್ನತಿಗಾಗಲಿ
ತಾಳ್ಮೆಗಾಗಲಿ ಬಾಳ್ವೆ , ಅಂತೆಯೆ ಶಿವಕೆ ಸಮ್ಮುಖವಾಗಲಿ !
ಮೋದಸುರಭಿಯ ನಿರುತ ಬೀರುತ
ಸುಹೃನ್ಮಾನಸ ಸರದಲಿ
ಕವಿ ಪುರೋಹಿತನೀತಂ ಆದೀ ಗೀತ ರೂಪಕವರಳಲಿ !
(ಅಹಲ್ಯೆ , ಮಂಗಳ ನುಡಿ, ಪುಟ 116)
ಎಲ್ಲ ಪ್ರಯೋಜನಗಳಿಗೂ ಶಿಖರದಂತೆ ಇರುವುದು ಏನು? ರಸಾಸ್ವಾದದಿಂದ ಆಗುವ ಆನಂದ. ಅದು ಎಂಥ ಆನಂದ ? ಕಾವ್ಯವಿಹಾರದ ಆ ಸಮಯದಲ್ಲಿ ಬೇಕೊಂದರ ಅರಿವನ್ನೇ ಉಳಿಸದಂಥ ಆನಂದ.’

‘ಸಕಲ ಪ್ರಯೋಜನ ಮೌಲೀ ಭೂತಾಂ
ಸಮನಂತರಮೇವ ರಸಾಸ್ವಾದನ ಸಮೂದ್ಭೂತಂ
ವಿಗಲಿತವೇದ್ಯಾಂತರಂ ಆನಂದಂ’
ಪುತಿನ ಅವರ ಕಾವ್ಯದಿಂದ ಖಂಡಿತಾ ಈ ರಸಾಸ್ವಾದದ ಆನಂದ ನಮಗೆ ಸಿಗುತ್ತದೆ!.


Post your Views?

ವಾರ್ತಾ ಸಂಚಯ
‘ನೆರಳು’: ಪುತಿನ ಕಾವ್ಯ ಕೊಳದಿಂದ ಆರಿಸಿ ತಂದ ತಾವರೆ !
ಯದುಗಿರಿಯ ಪ್ರಶಾಂತತೆಯ ನಾಡಿಗೆ ಹಂಚುವ ಡಾ। ಪುತಿನ ಪ್ರತಿಷ್ಠಾನ
ಪು.ತಿ.ನ. ಪ್ರತಿಷ್ಠಾನ ಸಹಾಯಾರ್ಥ -ಗಾನ ಸುಧೆ, ನಗೆ ನಾಟಕ
ಯದುಗಿರಿಯ ಮೌನದ ಕೊಳದಲ್ಲಿ ಮತ್ತೊಮ್ಮೆ ಶ್ರೀಹರಿಚರಿತೆಯ ಅಲೆ
ಜೀವನಪ್ರೀತಿಯ ಗಾಜುಗೋಳ
ರಂಗಾಯಣದ ಪ್ರಸನ್ನರ ಹದ್ದು ಮೀರಿದ ಹಾದಿಗೊಲಿದ ಪುತಿನ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more