ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತಿನ ಕಾವ್ಯ : ವರ್ತಮಾನದ ಕನ್ನಡಿಯಲ್ಲಿ ಮೌಲ್ಯ ವ್ಯವಸ್ಥೆಯ ಸಾಕ್ಷಾತ್ಕಾರ

By Staff
|
Google Oneindia Kannada News

*ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

Harihareshwara writes on Pu.Ti.Nas poemಇಲ್ಲಿ ನೋಡಿ :

‘ಕೊಳದ ಕರೆ ಬಳಿ ಅಂದು ಮರುಗಿದೆ
ಸುಳಿದ ನೋವಿನ ಅಳುವ ಕೇಳಿ,
ಬೆಳೆದ ಇರುಳೊಳು ದನಿಯನರಸಿ,
ಮನದೊಳ್‌ ಅಳುಕುತ ನಡೆದೆನು.’

ಹೆಣ್ಣು ನಾಯಿಯಾಂದು ಸತ್ತು ಬಿದ್ದಿದೆ. ಅದರ ಪುಟ್ಟ ಮರಿ ಮೊಲೆಗೆ ಬಾಯಿಟ್ಟು ಎದೆ ಕರಗುವಂತೆ ಕೂಗುತ್ತಿದೆ. ಮಡಿವಂತನೊಬ್ಬ ಅದನ್ನು ನೋಡಿ, ಮರಿಯ ಕುತ್ತಿಗೆಗೆ ಹಗ್ಗ ಹಾಕಿ ಎಳೆದುಕೊಂಡು ಮನೆಗೆ ತರುತ್ತಾನೆ;

‘ ಮೈಯ್ಯ ಮುಟ್ಟಲು ತಡೆದುದಂದು
ಜಾತಿ ಹೆಚ್ಚಿನ ಹೆಮ್ಮೆಯು !’

ಮನೆ ಮಕ್ಕಳಿಗೆ ನಾಯಿ ಮರಿ ಮನೆಗೆ ಬಂತೆಂದು ಬಲು ಸಂತಸ, ಅನ್ನ, ಹಾಲು ಪೋಷಣೆಯೆಲ್ಲ ದೂರ ಬಾಗಿಲಿನಾಚೆಯಿಂದಲೇ ನಡೆಯುತ್ತದೆ. ಮುಟ್ಟಿದರೆ ಮೈಲಿಗೆಯಾಗುತ್ತದಲ್ಲ ! ನಾಯಿ ಮರಿಗೂ ಇವರ ಧರ್ಮ ಸಂಕಟ ಅರ್ಥವಾಗುತ್ತದೇನೋ, ಅದಕ್ಕೆ-

‘ಮರಿಯು ನಮ್ಮ ಬಿಂಕವರಿತು
ಹೊರಗೆ ನಿಲುವುದು ಹೊಸಿಲು ದಾಟದು!
ಹಿರಿಯತನದ ಹೆಮ್ಮೆಗಡಲು
ಹರಿಯತೆಮ್ಮಯ ಮಧ್ಯದಿ!’

ಒಂದು ದಿನ ಆ ನಾಯಿ ಮರಿ ಕಾಣೆಯಾಗುತ್ತದೆ. ತಂದೆ ಮತ್ತು ಮಕ್ಕಳು ಊರಿನಲ್ಲೆಲ್ಲಾ ಹುಡುಕುತ್ತಾರೆ. ಕೊನೆಗೆ ಒಬ್ಬ ಕುರುಬ ಗೌಡನ ಮನೆಯ ಬಳಿ ನಾಯಿ ಮರಿ ಪತ್ತೆಯಾಗುತ್ತದೆ. ಗೌಡನನ್ನು ಗದರಿ ಕೇಳುತ್ತಾರೆ:
‘ಕದ್ದೆಯೇತಕೋ ಮರಿಯನು?’

ಅವನು ಹೇಳುತ್ತಾನೆ : ಆ ದಿನ ಆ ಕುರುಬ ಗೌಡ ಆ ಊರಿಗೆ ಏನೋ ಕೆಲಸಕ್ಕಾಗಿ ಸಂಜೆ ಬಂದಿರುತ್ತಾನೆ. ಸಂಜೆಯೆಲ್ಲಾ ಸುತ್ತಿ ‘ಅಂದು ಆ ಊರೊಳಗೆ ತಂಗಿ, ಮುಂದೆ ಪಯಣವ ಬೆಳೆಸಲೆಂದು, ಮಂದಿ ಮಲಗಿದ ಹೊತ್ತಿನಲ್ಲಿ ’ ಬಂದು, ಇವರ ಮನೆಯ ಜಗಲಿಯ ಮೇಲೆ ಮಲಗುತ್ತಾನೆ. ಚಳಿಯಿಂದ ಪಾರಾಗಲು ನಾಯಿಮರಿ ಗೌಡನ ಕಂಬಳಿ ಒಳಗೆ ಸೇರುತ್ತದೆ. ಗೌಡ ನಾಯಿ ಮರಿಯನ್ನೂ ಕಂಬಳಿಯಾಳಗೆ ಸೇರಿಸಿಕೊಂಡು ಅಪ್ಪಿಕೊಂಡು ಮಲಗುತ್ತಾನೆ.

ಬೆಳಗ್ಗೆ ಗೌಡ ಹೊರಟರೆ, ನಾಯಿಮರಿಯೂ ಅವನನ್ನು ಹಿಂಬಾಲಿಸಿ ಹೋಗಿಬಿಡುತ್ತದೆ. ಗೌಡ ಅದನ್ನು ಎತ್ತಿಕೊಂಡು ಮೈದಡವಿ ಮುದ್ದಿಟ್ಟು ಮನೆಗೆ ಒಯ್ಯುತ್ತಾನೆ.

‘ಕರುಣೆ’ ಎಷ್ಟು ಕಾಲ ತೋರಿದ್ದರೇನು ? ಒಂದು ರಾತ್ರಿಯ ‘ ಪ್ರೀತಿಯ’ ಮುಂದೆ ಅದು ಸಾಟಿಯೇ ? ‘ನಾಯಿ ಮರಿಯನ್ನು ನಮಗೇ ಹಿಂತಿರುಗಿಸಿ ಬಿಡು ’- ಎಂದು ಗದರಿಸಿದಾಗ, ಗೌಡ ಅಂಗಲಾಚುತ್ತಾನೆ:

‘ಬಂಧುಬಳಗಗಳಿಲ್ಲ ವೆನಗೆ
ಕಂದನೀ ಮರಿ, ಕಳೆಯಲಾರೆ’
- ಎಂದ ಗೌಡನ ಕಣ್ಣು ಹನಿತುದು
ಮರಿಯ ಹಗ್ಗವ ಹಿಡಿಯಲು.

ಹಗ್ಗವೆಳೆದೆನು, ಕುರಿಯು ಬಾರದು;
ಸಗ್ಗದೆನ್ನಯ ಸವಿಯನುಡಿಗೆ.
ಹಗ್ಗ ಸಡಿಲಿಸಿ ಬಿಟ್ಟೆನದನು -
ಕುರುಬ ತಬ್ಬಿದ ಸೊಣಗನ !

ಕರುಣೆಯಿಂದ ಸಾಕಿದ ಮಡಿವಂತ ಎಷ್ಟು ಕರೆದರೂ ಬಾರದ ನಾಯಿಮರಿ, ಮನಸಾರೆ ಮುದ್ದಿಸಿದ ಗೌಡನೊಡನೆ ಹೋಗಿಬಿಡುತ್ತದೆ.
ಈಗ ಕವಿ ಹೇಳುವುದನ್ನು ಕೇಳಿ: ‘ ಕರುಣೆ ಒಲುಮೆಗೆ ಸಾಟಿಯೇ ’
ಇದು ಒಂದು ಕವನ ‘ನಾಯಿಮರಿ’(‘ಗಣೇಶ ದರ್ಶನದಲ್ಲಿ’). ಇದನ್ನು ಬರೆದವರು ಪುರೋಹಿತ ತಿರುನಾರಾಯಣ ಐಯಂಗಾರ್‌ ನರಸಿಂಹಾಚಾರ್‌ (‘ ಪುತಿನ’). ಮೇಲುನೋಟಕ್ಕೆ ಶಾಸ್ತ್ರ ನೇಮ ವ್ರತ ಆಚಾರ ಇವುಗಳೇ ಇಲ್ಲಿ ಮೂರ್ತೀಭವಿಸಿದೆಯೇನೋ ಎನ್ನುವಂತೆ ಇರುವ ಹಿರಿಯರು. ಇವರ ಕಾವ್ಯ ಜೀವನದ ಆರಂಭದ ದಿನಗಳಲ್ಲಿ ಹೊಮ್ಮಿದ ರಚನೆ ಇದು. ಆ ಕಾಲವನ್ನ ಕನ್ನಡ ಸಾಹಿತ್ಯದಲ್ಲಿ ನವೋದಯ ಮಾರ್ಗ ಎನ್ನುತ್ತಾರೆ. ಈ ಮಾರ್ಗದ ಜೊತೆಗೇ ಪು.ತಿ.ನ. ಅವರ ಕಾವ್ಯವೂ ಬೆಳೆಯಿತು.

ಪ್ರೊ.ಲಕ್ಷ್ಮಿನಾರಾಯಣ ಭಟ್ಟರು ಹೇಳುವಂತೆ ‘ಒಂದು ರೀತಿಯಲ್ಲಿ ನವೋದಯ ಸಾಹಿತ್ಯ ಮಾರ್ಗದ ಚರಿತ್ರೆ ಸ್ಥೂಲವಾಗಿ, ಪು.ತಿ.ನ. ಅವರ ಕಾವ್ಯದ ಬೆಳವಣಿಗೆಯ ಚರಿತ್ರೆಯೂ ಕೂಡ.’ ಕನ್ನಡದ ನವೋದಯ ಕಾಲದ ಕವಿಗಳಲ್ಲಿ ಮೂವರು ಅಗ್ರಗಣ್ಯರು. ಅವರೇ: ಬೇಂದ್ರೆ, ಕುವೆಂಪು, ಪು.ತಿ.ನ. ಇವರೇ ರಮ್ಯ ಯುಗದ ರತ್ನತ್ರಯರೂ ಕೂಡ !

ಇವರುಗಳ ಕಾವ್ಯವನ್ನು ಅಭ್ಯಸಿಸುವಾಗ ಅಲ್ಲಲ್ಲಿ ಸ್ವಲ್ಪ ಅಡಿ ಟಿಪ್ಪಣಿಗಳ ಅವಶ್ಯಕತೆ ಬೀಳುತ್ತವೆ. ಆ ಅಡಿಟಿಪ್ಪಣಿಗಳಲ್ಲಿ ಇದು ಮೊದಲು : ‘ ಪರಂಪರೆ, ಸಾಂಪ್ರದಾಯಿಕತೆ’ ಎನ್ನುವ ಮಾತು.

ಟಿ.ಎಸ್‌. ಈಲಿಯಟ್‌ 1917ರಲ್ಲಿ ‘ ಟ್ರೆಡಿಷನ್‌ ಎಂಡ್‌ ದ ಇಂಡಿವಿಜುಯಲ್‌ ಟ್ಯಾಲೆಂಟ್‌’ ಎಂಬ ಪ್ರಬಂಧ ಪ್ರಕಟಿಸಿದ ನಂತರ ಸಾಹಿತ್ಯ ವಿಮರ್ಶೆಯ ಲೇಖನಗಳಲ್ಲಿ ‘ ಟ್ರೆಡಿಷನ್‌’ ಎಂಬ ಪದಕ್ಕೆ ಎಲ್ಲಿಲ್ಲದ ಮಹತ್ವ ಬಂದು ಬಿಟ್ಟಿತು. ಕೀರ್ತಿನಾಥ ಕುರ್ತಕೋಟಿಯವರು ಚೆನ್ನಾಗಿ ವಿವರಿಸುತ್ತಾರೆ. (ನೋಡಿ : ‘ಕನ್ನಡ ಕಾವ್ಯದಲ್ಲಿ ಪರಂಪರೆಯ ಪ್ರಜ್ಞೆ’ ಯಲ್ಲಿ ‘ಹೊಸಗನ್ನಡ ಕಾವ್ಯದ ಎರಡು ಮಾರ್ಗಗಳು’). ಸಾರಾಂಶ ಇಷ್ಟು : ‘ ಈ ‘ ಸಂಪ್ರದಾಯ’ ಪದ ‘ಪರಂಪರೆ ’ಗಿಂತ ಹೆಚ್ಚೂ ಅರ್ಥಪೂರ್ಣ ಶಬ್ದ. ಕೊಡುವುದು- ಕೊಳ್ಳುವುದು, ಇದರ ಅರ್ಥವ್ಯಾಪ್ತಿ ‘ ಸಂಪ್ರದಾಯ’ಕ್ಕಿದೆ, ‘ ಪರಂಪರೆ’ಗೆ ಇಲ್ಲ. ಸಾಮಾನ್ಯವಾಗಿ ‘ ಸಂಪ್ರದಾಯ’ ಮತ್ತು ‘ ಸಹಜತೆ’ ಈ ಎರಡು ಶಬ್ದಗಳಲ್ಲಿ ನಾವು ಜನ್ಮಸಿದ್ಧವಾದ ವಿರೋಧವನ್ನ ಕಾಣುತ್ತಿದ್ದೇವೆ.’

‘ ಸಹಜತೆ’ಯನ್ನ ಎತ್ತಿ ಹಿಡಿಯುವ ರಭಸದಲ್ಲಿ ನಾವು ನಮ್ಮ ವಿಚಾರಗಳಿಗೆ, ಭಾವನೆಗಳಿಗೆ, ಅಭಿವ್ಯಕ್ತಿಗೆ ಒಂದು ಸಾಂಪ್ರದಾಯಿಕತೆ ಇರುವುದನ್ನ ಗಮನಿಸುವುದಿಲ್ಲ. ಒಂದು ರೀತಿಯಿಂದ ನೋಡಿದರೆ ಭಾರತೀಯರಾದ ನಮಗೆ ನಮ್ಮ ಸಂಪ್ರದಾಯ ಎಷ್ಟು ದೊಡ್ಡದೋ ಅದಕ್ಕೆ ತಗಲುತ್ತಿರುವ ಆಘಾತಗಳೂ ಅಷ್ಟೇ ದೊಡ್ಡದಾಗಿವೆ. ಹೀಗಾಗಿ ಕೃತಕ ಮೌಲ್ಯಗಳು ತಲೆ ಎತ್ತುವುದು ಸಹಜ, ಸಾಮಾನ್ಯ. ಸಂಪ್ರದಾಯ ನಿರ್ಮಾಣ ಒಂದು ಸಾಂಸ್ಕೃತಿಕ ಕ್ರಿಯೆ. ಅದನ್ನು ಕಷ್ಟಪಟ್ಟು ಆರ್ಜಿಸಿಕೊಳ್ಳಬೇಕು; ಸೃಜನಶೀಲ-ವಾಗಿರುವುದೆಲ್ಲ ನೈಸರ್ಗಿಕ ಕ್ರಿಯೆ ಎಂದು ತಿಳಿಯುವುದು ಬರಿ ಭ್ರಮೆ ಮಾತ್ರ.

ಬಿ.ಎಂ.ಶ್ರೀ ಅವರ ಸಾಹಿತ್ಯದಲ್ಲಿ ಹಳೆಯ ಅಂಶಗಳನ್ನ ಹೊಸ ಪ್ರಜ್ಞೆಯಿಂದ ಉಪಯೋಗಿಸಿಕೊಂಡುದನ್ನ ಕಾಣುತ್ತೇವೆ. ಬೇಂದ್ರೆಯವರ ಕಾವ್ಯದಲ್ಲಿ ಎಂಥ ಗಹನವಾದ ತತ್ವವಾಗಿರಲಿ, ಎಷ್ಟೇ ಸಂಪೂರ್ಣವಾಗಿರಲಿ. ಆ ಅನುಭೂತಿಯನ್ನ ಕನ್ನಡದ ಜನಪದ ಪ್ರಜ್ಞೆಗೆ ನಿಲುಕುವಂತೆ ಮಾಡುವ ಸಾಹಸವಿದೆ; ನಿದರ್ಶನಕ್ಕೆ ‘ ಹಕ್ಕಿ ಹಾರುತಿದೆ ನೋಡಿದಿರಾ’, ‘ ಇಳಿದು ಬಾ ತಾಯಿ’, ‘ ಇನ್ನೂ ಯಾಕೆ ಬರಲಿಲ್ಲಾ, ಹುಬ್ಬಳ್ಳಿಯಾಂವಾ ?’, ಕುರುಡು ಕಾಂಚಾಣ’ ಇತ್ಯಾದಿ. ಪ್ರಕೃತಿಯನ್ನು ಕುರಿತ ಒಂದು ಬಗೆಯ ಚಿರಂತನ ದಾಹ, ಸೌಂದರ್ಯದ ಕಡಲಿನಲ್ಲಿ ಧುಮ್ಮಿಕ್ಕಿ ರಸಪಾನಗೈಯ್ಯುವ ಸಿರಿ ಕುವೆಂಪು ಅವರದು.

ಈ ಜಾಡಿನಲ್ಲಿ ನಡೆದು ಹೊರಟಾಗ ನಮಗನಿಸೀತು : ಪು.ತಿ.ನ. ಅವರಲ್ಲಿ ಸಂಪ್ರದಾಯ ನಿಷ್ಠೆ ಒಂದು ತೂಕ ಹೆಚ್ಚಾಗಿಯೇ ಇದೆ. ಜೊತೆಗೆ, ವರ್ತಮಾನದಲ್ಲಿ ನಿಂತು ಹಳೆಯ ಮೌಲ್ಯ ವ್ಯವಸ್ಥೆಯನ್ನು ಸರಿಯಾಗಿ ಸಾಕ್ಷಾತ್ಕರಿಸಿಕೊಳ್ಳುವ ಸೃಜನಶೀಲತೆ ಪು.ತಿ.ನ ಅವರಿಗೆ ಸಿದ್ಧಿಸಿದೆ.

S.K.Harihareswara, The Author‘ ಭವನಿಯುಕ್ತಿ ವಿಮುಕ್ತಿ’ ಪ್ರತ್ಯಕ್ಷವಾಗಿದೆ. ಕವಿ ಪರಿಭಾವನೆಯಲ್ಲಿ ‘ವಸ್ತುವಿಗೂ ಅವರ ಲೌಕಿಕ ಸಂಬಂಧದಿಂದ ಬಿಡುಗಡೆ’; ಈ ‘ ಮುದದ ಬೇಹರ’ ದಲ್ಲಿ ಒಲುವಿನ ಕೊಡು-ಕೊಳ್ಳುವುದು ಈ ಎಲ್ಲಾ ಸಾಮರಸ್ಯಗಳೂ ಸಿದ್ಧಿಸಿವೆ. ಪ್ರತಿಭೆಯುಳ್ಳ ಕವಿಗೇನೇ ಅಚೇತನವಾದುದನ್ನ ಸಚೇತನಗೊಳಿಸುವ ಸಾಮರ್ಥ್ಯವುಂಟು; ಹಕ್ಕಿ ಪ್ರಾಣಿಗಳು ಮನುಷ್ಯರಂತೆ ವರ್ತಿಸುತ್ತವೆ, ಕಲ್ಲು ಮಣ್ಣು ಬೆಟ್ಟ ಗುಡ್ಡಗಳು ಮಾತನಾಡುತ್ತವೆ, ಗಿಡ ಮರ ಬಳ್ಳಿಗಳು ಹಾಡತೊಡಗುತ್ತವೆ. ಆನಂದ ವರ್ಧನ ಇದನ್ನೇ ಸ್ಪಷ್ಟವಾಗಿ ಹೇಳಿದ್ದು :

‘ ಅಪಾರೇ ಕಾವ್ಯ ಸಂಸಾರೇ ಕವಿರ್‌ ಏವ ಪ್ರಜಾಪತಿಃ ;
ಯಥಾ ಅಸ್ಯೈ ರೋಚತೇ,
ವಿಶ್ವಂ ತಥಾ ಇದಂ ಪರಿವರ್ತತೇ:
ಶೃಂಗಾರೀ ಚೇತ್‌ ಕವಿ: ;
ಕಾವ್ಯೇ ಜಾತಂ ರಸಮಯಂ ಜಗತ್‌;
ಸ ಏವ ವೀತರಾಗಶ್ಚೇತ್‌ ನೀರಸಂ ಸರ್ವಮೇವ ತತ್‌;
ಭಾವಾನ್‌ ಅಚೇತನಾನ್‌ ಅಪಿ ಚೇತನವತ್‌,
ಚೇತನಾನ್‌ ಅಚೇತನವತ್‌,

ವ್ಯವಹಾರಯತಿ ಯಥೇಷ್ಟಂ -
ಸುಕವಿ: ಕಾವ್ಯೇ ಸ್ವತಂತ್ರಯಾ’.

- (ಧ್ವನ್ಯಾಲೋಕ ಮೂರನೇ ಉದ್ಯೋತ )

ಅಪಾರವಾದ ಕಾವ್ಯ ಪ್ರಪಂಚದಲ್ಲಿ ಕವಿಯೇ ಬ್ರಹ್ಮ. ಅವನ ಇಷ್ಟದ ಪ್ರಕಾರವೇ ಇಡೀ ವಿಶ್ವವೇ ಪರಿವರ್ತನೆಗೊಳ್ಳುತ್ತದೆ. ಪ್ರತಿಭೆಯುಳ್ಳ ಒಬ್ಬ ಒಳ್ಳೆಯ ಕವಿ ಸಂಪೂರ್ಣ ಸ್ವತಂತ್ರ !

ಕನ್ನಡ ಸಾಹಿತ್ಯದಲ್ಲಿ ‘ ವಿಮರ್ಶೆಯ ನೆಲೆ- ಬೆಲೆ ’ಯನ್ನು ಗುರುತಿಸುತ್ತ ಡಾ। ಎಸ್‌. ಎಲ್‌. ಭೈರಪ್ಪನವರು ಒಂದು ಕಡೆ ಹೀಗೆ ಹೇಳುತ್ತಾರೆ :

‘ ನನ್ನ ಹಿಂದಿನ ತಲೆಮಾರಿನ ಲೇಖಕರಾದ ಬೇಂದ್ರೆ, ಕುವೆಂಪು, ಪು.ತಿ.ನ. ವಿ.ಸೀ, ಶ್ರೀರಂಗ - ಮೊದಲಾದವರೆಲ್ಲರೂ ತತ್ವಶಾಸ್ತ್ರ ಪರಂಪರೆಯನ್ನು ಅಧ್ಯಯನ ಮಾಡಿದವರು. ತತ್ವಶಾಸ್ತ್ರದ ಯಾವುದೇ ಪರಂಪರೆಯನ್ನು ಅಧ್ಯಯನ ಮಾಡಿದ್ದರೂ , ಬೇರೊಂದು ಪರಂಪರೆಯ ಸಮಸ್ಯೆಗಳನ್ನು ಅರಿತು ಅವುಗಳ ಸ್ಥಾನ ಮೌಲ್ಯಗಳನ್ನು ನಿಷ್ಕರ್ಷಿಸುವುದು ಸುಲಭವಾಗುತ್ತದೆ. ಆದ್ದರಿಂದ ಈ ಲೇಖಕರು ಯಾವ ಪಾಶ್ಚಿಮಾತ್ಯ ಲೇಖಕರ ತತ್ವಶಾಸ್ತ್ರಕ್ಕೂ ಮರುಳಾಗಿಲ್ಲ’

‘ಮುಂದು ಹಿಂದಿನ ಹೊಂದಾಣಿಕೆಯಿಂದಲೇ ಇಂದು ನಡೆಯುತ್ತಿದೆ’ (‘ಧೇನುಕಪುರಾಣ’ 19 ) ಎನ್ನುವ ಪು.ತಿನ. ಅವರ ಕೃತಿಗಳಲ್ಲಿ ಧ್ವನಿಸುವುದು ಯಾವುದೆಂದರೆ- ಇವರೇ ಗಟ್ಟಿಯಾಗಿ ಕಂಡುಕೊಂಡಿರುವ ಪರಂಪರೆಯ ತಾತ್ವಿಕ ವಿಚಾರಗಳು ಮತ್ತು ನಂಬಿಕೆಗಳೇ ಹೊರತು,ಓದಿ ಮನನ ಮಾಡಿಕೊಂಡಿದ್ದರೂ ಆ ಪಾಶ್ಚಾತ್ಯ ಕವಿಪುಂಗವರ ಕಾವ್ಯದ ಛಾಯೆಯಲ್ಲ ; ಹೊರಗಿನ ಪ್ರಭಾವ ದಟ್ಟವಾಗಿ ಬಿದ್ದಮೇಲೆ ತಪ್ಪಿಸಿಕೊಳ್ಳಲಾಗದೆ ಹೋದ ಇನ್ನಿತರ ಕವಿಗಳ ಕೃತಿಯಂತೆ ಅವುಗಳ ಪಡಿಯಚ್ಚಲ್ಲ. ಪು.ತಿನ ಅವರ ಕಾವ್ಯದ ನೆಲಗಟ್ಟು ಅಪ್ಪಟ ಭಾರತೀಯ !


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X