ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ। ಪುತಿನ ಪ್ರತಿಷ್ಠಾನ- ಇಣುಕು ನೋಟ!

By Staff
|
Google Oneindia Kannada News

*ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

A over view of Pu.Ti.Narasimhachar Trustಹೊಸಕನ್ನಡದ ನವೋದಯ ಕಾವ್ಯದ ಹರಿಕಾರರೆಂದು ಹೆಸರಾದ, ಕನ್ನಡದ ಮೊದಲ ಗೀತರೂಪಕಕಾರರೆಂದು ಪ್ರಸಿದ್ಧರಾದ, ತಮ್ಮ ಅಹಲ್ಯೆ, ಗೋಕುಲ ನಿರ್ಗಮನ, ಹರಿಣಾಭಿಸರಣ, ಶ್ರೀರಾಮ ಪಟ್ಟಾಭಿಷೇಕ ಮುಂತಾದವುಗಳಿಂದ ಕನ್ನಡದ ಮನೆ ಮನೆಗಳಲ್ಲಿ, ಮನಗಳಲ್ಲಿ ನೆಲೆಸಿದ, ಶ್ರೇಷ್ಠ ಕವಿ ಡಾ। ಪುತಿನ ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ಒಂದು ಪ್ರತಿಷ್ಠಾನ (ಟ್ರಸ್ಟ್‌) ವನ್ನು ರಚಿಸಿದೆ. ಹಣತೆ, ಮಾಂದಳಿರು, ಶಾರದಯಾಮಿನಿ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ ಮುಂತಾದ ತಮ್ಮ ಕವನಸಂಕಲನಗಳಿಂದ ಕನ್ನಡ ಕಾವ್ಯ ಪ್ರಕಾರವನ್ನು ಬೆಳಗಿದ ಪುತಿನ ಅವರ ಸಮಗ್ರ ಸಾಹಿತ್ಯ ಕೃತಿಗಳ ಪ್ರಕಟಣೆ, ಅವರ ಜನ್ಮ ಸ್ಥಳವಾದ ಮೇಲುಕೋಟೆಯಲ್ಲಿ ಅವರ ಕಾವ್ಯ ನಿರ್ಮಿತಿಗೆ ನೆಲೆಯಾದ ಪುತಿನ ನಿವಾಸದ ಸಂರಕ್ಷಣೆ, ಅಲ್ಲೊಂದು ಸಂಶೋಧನಾಲಯದ ಸ್ಥಾಪನೆ, ಕಾವ್ಯ ಕುಟೀರ, ರಂಗಮಂದಿರ ನಿರ್ಮಾಣ, ವಾಚನಾಲಯ, ಹಾಗೂ ಇನ್ನಿತರ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದು ಈ ಪ್ರತಿಷ್ಠಾನದ ಉದ್ದೇಶ. ನವಂಬರ್‌ 16, 1995 ರಲ್ಲಿ ಈ ಪ್ರತಿಷ್ಠಾನವು ನೋಂದಾಯಿಸಲ್ಪಟ್ಟು ಅಸ್ತಿತ್ವಕ್ಕೆ ಬಂತು. ಬಗೆಬಗೆಯ ಯೋಜನೆಗಳು ಪ್ರತಿಷ್ಠಾನದ ಬಾನಂಗಳದಲ್ಲಿ ಗರಿಗೆದರುತ್ತಿವೆ.

ಪ್ರತಿಷ್ಠಾನದ ಕಾರ್ಯಕಾರೀ ಸಮಿತಿ :

ಪ್ರತಿಷ್ಠಾನದ ಮೊದಲ ಅಧ್ಯಕ್ಷರು, ಬೆಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ ಸಂಗೀತ ನಿರ್ದೇಶಕರಾಗಿದ್ದ, ಶ್ರೀ ಪುತಿನ ಅವರ ಮನಸ್ಸಿಗೆ ಬಹಳ ಹತ್ತಿರದವರಾಗಿದ್ದ, ಡಾ। ವಿದ್ವಾನ್‌ ವೀಣಾ ದೊರೆಸ್ವಾಮಿ ಅಯ್ಯಂಗಾರರು. ಅವರ ನಿಧನಾನಂತರ ಡಾ.ಜಿ.ಎಸ್‌. ಶಿವರುದ್ರಪ್ಪನವರು ಮೇ 1998 ರಿಂದ ಈ ಪ್ರತಿಷ್ಠಾನದ ಅಧ್ಯಕ್ಷರಾದರು. ಖಾದ್ರಿ ಅಚ್ಯುತನ್‌ ಇದರ ಕಾರ್ಯದರ್ಶಿಗಳು. ಪ್ರೊ। ಪು ನ ತಿರುನಾರಾಯಣ, ಡಾ। ಎಚ್‌ ಎಸ್‌ ವೆಂಕಟೇಶಮೂರ್ತಿ, ಪ್ರೊ। ಸುಜನಾ (ಎಸ್‌. ನಾರಾಯಣ ಶೆಟ್ಟಿ), ಪ್ರೊ। ಡಿ ಬಾಲಕೃಷ್ಣ , ಜಿ. ಮಾದೇಗೌಡ ಮತ್ತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು ಈ ಪ್ರತಿಷ್ಠಾನದ ಸದಸ್ಯರುಗಳು.

ಪ್ರತಿಷ್ಠಾನವು ಈವರೆಗೆ ಕೈಗೊಂಡ ಕಾರ್ಯಕ್ರಮಗಳು :

  1. ಪುತಿನ ಸಾಂಸ್ಕೃತಿಕ ಸ್ಮರಣಾಲಯ :
ಮೇಲುಕೋಟೆಯಲ್ಲಿ ಶಿಥಿಲವಾಗಿದ್ದ ಪುತಿನ ಅವರ ಮನೆಯನ್ನು ಪ್ರತಿಷ್ಠಾನದ ಕೋರಿಕೆಯ ಮೇರೆಗೆ, ಅದರ ಮೂಲರೂಪಕ್ಕೆ ಚ್ಯುತಿ ಬಾರದಂತೆ, ಪುನಾರಚನೆ ಮಾಡುವ ಕಾರ್ಯವನ್ನು ಮೈಸೂರಿನ ಪ್ರಾಚ್ಯ ವಾಸ್ತು ಇಲಾಖೆಯವರು ಕೈಕೊಂಡು, ಪುನಾರಚಿತವಾದ ಮನೆಯನ್ನು ಪ್ರತಿಷ್ಠಾನಕ್ಕೆ ಜೂನ್‌ 2000 ರಂದು ಹಸ್ತಾಂತರಿಸಿತು. ಈ ಮನೆಯನ್ನು ಜೂನ್‌ 14, 2000 ದಂದು ಕರ್ನಾಟಕ ಸರ್ಕಾರದ ವಾರ್ತಾ ಸಚಿವರಾದ ಡಾ।ಬಿ.ಕೆ.ಚಂದ್ರಶೇಖರ ಅವರು, ಮುಖ್ಯಮಂತ್ರಿಗಳ ಪರವಾಗಿ, ‘ಸಾಂಸ್ಕೃತಿಕ ಸ್ಮರಣೆ’ಯಾಗಿ ಅದನ್ನು ಉದ್ಘಾಟಿಸಿದರು. ಪುತಿನ ಅವರ ಸಾಹಿತ್ಯಿಕ- ಸಾಂಸ್ಕೃತಿಕ ಮಾಹಿತಿ ಹಾಗೂ ಸಾಮಗ್ರಿಗಳನ್ನೊಳಗೊಂಡ ಈ ವಸ್ತು ಪ್ರದರ್ಶನಾಲಯ ರೂಪದ ಮನೆ ಈಗ ಮೇಲುಕೋಟೆಯಲ್ಲಿ ಒಂದು ಸಾರಸ್ವತ ತೀರ್ಥ ಕ್ಷೇತ್ರದಂತೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಗತಿಸಿದ ಕನ್ನಡದ ಶ್ರೇಷ್ಠ ಸಾಹಿತಿಗಳ ಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಉಳಿಸಿಕೊಳ್ಳುವ ಈ ಸ್ತುತ್ಯ ಕ್ರಮವನ್ನು ಕೊಂಡಾಡುವ ಎಲ್ಲ ಸಾಹಿತ್ಯಾಭಿಮಾನಿಗಳು ಪುತಿನ ಸಾಂಸ್ಕೃತಿಕ ಸ್ಮರಣಾಲಯವು ಅಂಥದೊಂದರ ಆದರ್ಶ ರೂಪ ತಳೆಯಲು ಪ್ರತಿಷ್ಠಾನವು ಶ್ರಮಿಸುತ್ತಿರುವುದನ್ನು ಗಮನಿಸಿದ್ದಾರೆ.

2. ಪುತಿನ. ಪ್ರತಿಷ್ಠಾನದ ಪ್ರಕಟಣೆಗಳು :

  • ಪುತಿನ ಅವರ ಸಮಗ್ರ ಗೇಯ ಕಾವ್ಯ ನಾಟಕಗಳ 827 ಪುಟಗಳ ಸಂಪುಟವೊಂದನ್ನು ಪ್ರತಿಷ್ಠಾನವು ಜೂನ್‌ 1998ರಲ್ಲಿ ಬಿಡುಗಡೆ ಮಾಡಿದೆ. ಡಾ.ವೀಣಾ ದೊರೆಸ್ವಾಮಿ ಅಯ್ಯಂಗಾರ್‌ ಅವರ ಮುನ್ನುಡಿಯನ್ನೊಳಗೊಂಡ ಈ ಬೃಹತ್‌ ಗ್ರಂಥದಲ್ಲಿ ಪುತಿನ ಅವರ ಎಲ್ಲಾ ಗೀತನಾಟಕಗಳೂ ಇರುವುದಲ್ಲದೆ, ಅನುಬಂಧದಲ್ಲಿ ಆಯಾಯ ರೂಪಕ ಕೃತಿಗಳಿಗೆ ಪ್ರಕಟಿತವಾದಾಗ ಬರೆದ ಮುನ್ನುಡಿ, ಪ್ರಸ್ತಾವನೆಗಳೂ, ಶಬ್ದಾರ್ಥಕೋಶ ಮತ್ತು ಲಘು ಟಿಪ್ಪಣಿಗಳೂ ಕೃತಿಗಳ ಮೊಟ್ಟ ಮೊದಲ ಮುದ್ರಣ ವಿವರಗಳೂ ಇವೆ.
  • ಪುತಿನ ಅವರ ‘ರಸಪ್ರಕಾಶ’ ಎಂಬ ಹೆಸರಿನ ಕಾವ್ಯಚಿಂತನೆಗಳ ಮುಕ್ತಕಗಳ ಸಂಕಲನವೊಂದನ್ನು ಜನವರಿ 20002ರಲ್ಲಿ ಪ್ರತಿಷ್ಠಾನವು ಪ್ರಕಟಿಸಿದೆ.
  • ಪುತಿನ ಅವರ ಸಮಗ್ರ ಗದ್ಯಕೃತಿಗಳ ಸಂಪುಟವೊಂದು ಕನ್ನಡ ಪುಸ್ತಕ ಪ್ರಾಧಿಕಾರದ ನೆರವಿನಿಂದ ಪ್ರಕಟವಾಗುವ ಹಂತದಲ್ಲಿದೆ.
3. ಪುತಿನ ಪುರಸ್ಕಾರ :

ಪುತಿನ ಅವರ ಹೆಸರಿನ ಪುರಸ್ಕಾರವನ್ನು ಆಯಾಯ ವರ್ಷ ಪ್ರಕಟವಾದ ಕನ್ನಡದ ಶ್ರೇಷ್ಠವಾದ ಕಾವ್ಯ ಅಥವಾ ನಾಟಕ ಕೃತಿಗೆ ಪ್ರತಿವರ್ಷವೂ ಪ್ರತಿಷ್ಠಾನದ ವತಿಯಿಂದ ನೀಡಲಾಗುತ್ತಿದೆ. ಇದು 1998ನೆಯ ಇಸವಿಯಿಂದ ಪ್ರಾರಂಭವಾಯಿತು. ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಳ್ಳುವ ಈ ಪುರಸ್ಕಾರದೊಂದಿಗೆ ಈಗಾಗಲೇ ಕನ್ನಡದ ನಾಲ್ಕು ಶ್ರೇಷ್ಠ ಸಾಹಿತಿಗಳು ಹೀಗೆ ಸನ್ಮಾನಿತರಾಗಿದ್ದಾರೆ.

  • 1998ರ ಪ್ರಶಸ್ತಿಯನ್ನು ಕಾವ್ಯಕೃತಿಗಾಗಿ ಆನಂದ ಜಂಝರವಾಡ/ಸಿದ್ಧರಾಮಯ್ಯ ಅವರಿಗೆ.
  • 1999ರ ಪ್ರಶಸ್ತಿಯನ್ನು ಕಾವ್ಯಕೃತಿಗಾಗಿ ಪ್ರತಿಭಾ ನಂದಕುಮಾರ್‌ ಅವರಿಗೆ,
  • 2000ರ ಪ್ರಶಸ್ತಿಯನ್ನು ಕಾವ್ಯಕೃತಿಗಾಗಿ ಎಚ್‌.ಎಲ್‌.ಪುಷ್ಪಾ ಅವರಿಗೆ, ಮತ್ತು
  • 2001ರ ಪ್ರಶಸ್ತಿಯನ್ನು ನಾಟಕ ಕೃತಿಗಾಗಿ ಪ್ರಸನ್ನ ಅವರಿಗೆ
ಪುತಿನ ಪ್ರಶಸ್ತಿಯನ್ನು ಕೊಡಲಾಗಿದೆ. ಈ ಕಾರ್ಯಕ್ರಮಗಳನ್ನು ಅನುಕ್ರಮವಾಗಿ ಬೆಂಗಳೂರು, ಮಂಡ್ಯ, ಮೇಲುಕೋಟೆ ಮತ್ತು ಮೈಸೂರುಗಳಲ್ಲಿ ಪ್ರತಿಷ್ಠಾನವು ನಡೆಸಿತು. ಆ ದಿನಗಳಲ್ಲಿ ವಿಶೇಷ ಸಾಹಿತ್ಯೋಪನ್ಯಾಸ, ವಿಚಾರಸಂಕಿರಣ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಪ್ರತಿಷ್ಠಾನವು ಆಯೋಜಿಸಿದೆ.

4. ಪುತಿನ ಸುವರ್ಣ ಪದಕ :

ಕನ್ನಡ ಅಧ್ಯಯನಕ್ಕೆ ವಿಶೇಷ ಪ್ರೊತ್ಸಾಹ ಕೊಡುವುದರ ಸಂಕೇತವಾಗಿ, ಪುತಿನ ಅವರ ಹೆಸರಿನ ಸುವರ್ಣ ಪದಕವೊಂದನ್ನು ಮೈಸೂರು ವಿಶ್ವವಿದ್ಯಾಲಯದ ಒಬ್ಬ ಪ್ರತಿಭಾವಂತ ಕನ್ನಡ ವಿದ್ಯಾರ್ಥಿಗೆ ಪ್ರತಿ ವರ್ಷವೂ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದ ವೇಳೆಯಲ್ಲಿ ನೀಡುವ ವ್ಯವಸ್ಥೆಯನ್ನು ಪ್ರತಿಷ್ಠಾನವು ಮಾಡಿದೆ.

5. ಪುತಿನ ರಂಗಮಂದಿರ:

ಮೇಲುಕೋಟೆಯಂತ ಊರಿನಲ್ಲಿ ಸುಸಜ್ಜಿತವಾದ ರಂಗಮಂದಿರದ ಅವಶ್ಯಕತೆ ತುಂಬಾ ಇದೆ. ಪ್ರತಿಷ್ಠಾನದ ಕೋರಿಕೆಯ ಮೇರೆಗೆ, ದೊಡ್ಡ ಮನಸ್ಸು ಮಾಡಿ ಮೇಲುಕೋಟೆಯ ಗ್ರಾಮಪಂಚಾಯಿತಿಯವರು 100 ಅಡಿX 150 ಅಡಿ ನಿವೇಶನವೊಂದನ್ನು ಪುತಿನ ರಂಗಮಂದಿರ ನಿರ್ಮಾಣಕ್ಕಾಗಿ ಪುತಿನ ಪ್ರತಿಷ್ಠಾನಕ್ಕೆ ಉಚಿತವಾಗಿ ಕೊಟ್ಟಿದ್ದಾರೆ. ಈ ಸ್ಥಳದಲ್ಲಿ ವಾಚನಾಲಯವನ್ನು ಒಳಗೊಂಡಂತೆ ಒಂದು ಬಯಲು ರಂಗಮಂದಿರವನ್ನು ನಿರ್ಮಿಸಬೇಕೆಂಬುದು ಪ್ರತಿಷ್ಠಾನದ ಆಶಯವಾಗಿದೆ. ಇದಕ್ಕಾಗಿ ನೀಲನಕಾಶೆ ಸಿದ್ಧವಾಗಿದೆ !

ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಮನವಿ:

ಸರಕಾರ ನೀಡುವ ವಾರ್ಷಿಕ ಅನುದಾನ ಕೇವಲ ಒಂದು ಲಕ್ಷ ರೂಪಾಯಿಗಳು. ಇದು ವಾರ್ಷಿಕ ಕಾರ್ಯಕ್ರಮಗಳ ನಿರ್ವಹಣೆಗೆ ಸಾಕಾಗುತ್ತದೆ. ಇನ್ನು ಹೆಚ್ಚಿನ ವಿಸ್ತರಣೆಗೆ ಹಮ್ಮಿಕೊಂಡ ವಿಶೇಷ ಯೋಜನೆಗಳಿಗೆ ಬೇರೆಯೇ ಸಂಪನ್ಮೂಲಗಳನ್ನು ಅರಸಬೇಕಾಗಿದೆ. ಪುತಿನ ರಂಗಮಂದಿರ ನಿರ್ಮಾಣಕ್ಕೇನೇ ಹತ್ತು ಲಕ್ಷ ರೂಪಾಯಿಗಳ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಅವುಗಳನ್ನು ಕಟ್ಟಿದ ಮೇಲೆ ವ್ಯವಸ್ಥಿತವಾಗಿ ನೋಡಿಕೊಳ್ಳಲು ಅಲ್ಲಿ ಸಿಬ್ಬಂದಿ, ಮತ್ತು ಅನುದಿನದ ವ್ಯವಹಾರಗಳಿಗಾಗಿ ಏರ್ಪಾಟು ಅಗತ್ಯ. ಮೇಲುಕೋಟೆಯಲ್ಲಿ ಸಾಂಸ್ಕೃತಿಕ ಸ್ಮರಣೆಯಾಗಿರುವ ಪುತಿನ ಅವರ ಮನೆಯನ್ನು ಸಂದರ್ಶಿಸುವವರಿಗೆ, ಪುತಿನ ಅವರ ಜೀವನ- ಕಾವ್ಯ ಸಂದೇಶಗಳನ್ನು ಶ್ರವ್ಯ-ದೃಶ್ಯ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಳ್ಳುವ ಹೊಸ ತಂತ್ರಜ್ಞಾನ ಸಾಧನಗಳನ್ನು ಅಳವಡಿಸಬೇಕಾಗಿದೆ. ಹಾಗೆಯೇ ಪುತಿನ ಅವರ ಸಮಗ್ರ ಕಾವ್ಯವನ್ನು ಒಳಗೊಂಡ ಪರಿಷ್ಕೃತ ಸಂಪುಟವನ್ನು ಪ್ರಕಟಿಸುವ ಹೊಣೆಯನ್ನು ಪ್ರತಿಷ್ಠಾನ ನಿರ್ವಹಿಸಬೇಕಾಗಿದೆ. ಇವೆಲ್ಲಕ್ಕೂ ಸಾಹಿತ್ಯಾಭಿಮಾನೀ ಕನ್ನಡಿಗರನ್ನು ಆರ್ಥಿಕ ಬೆಂಬಲಕ್ಕಾಗಿ ಆಶ್ರಯಿಸಬೇಕಾಗಿದೆ. ಕೊಡುಗೈ ದಾನಿಗಳು ಈ ಸಾರಸ್ವತ ಯಜ್ಞದಲ್ಲಿ ಪಾಲುಗೊಂಡು ಪ್ರತಿಷ್ಠಾನದ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ನೆರವಾಗಿರಿ. ಪುತಿನ ಕಾವ್ಯದ ಅಧ್ಯಯನ, ಸಂಶೋಧನೆ, ಪ್ರಸರಣ ಮುಂತಾದುವುಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಪ್ರತಿಷ್ಠಾನದೊಂದಿಗೆ ನಿಮ್ಮ ಸಲಹೆ ಸೂಚನೆ ಸಮಾಲೋಚನೆಗಳನ್ನು ಹಂಚಿಕೊಳ್ಳಿ.

ವಿದೇಶದ ಕನ್ನಡಿಗರಲ್ಲಿ ಒಂದು ಮನವಿ. ಭಾರತಕ್ಕೆ ಪ್ರವಾಸ ಹೋದಾಗ ನಿಮ್ಮ ತಿರುಗಾಟದ ಕಾರ್ಯಕ್ರಮದಲ್ಲಿ ಮೇಲುಕೋಟೆಗೆ ಹೋಗಿ ಬರುವ ಅಂಶವನ್ನು ತಪ್ಪದೇ ಹಾಕಿಕೊಳ್ಳಿ. ಪುತಿನ ಸಾಂಸ್ಕೃತಿಕ ಸಂಸ್ಮರಣಾಲಯಕ್ಕೆ ಭೇಟಿಕೊಟ್ಟು ಬನ್ನಿ. ಸ್ಫೂರ್ತಿ ಚಿಮ್ಮಿ , ಬೆಳಕು ಹೊಮ್ಮಿ , ಚಿರಕಾಲ ಉಳಿಯುವ ಕಾವ್ಯರಚನೆ ಮಾಡಿದ, ಕವಿ ನಡೆದಾಡಿದ ನೆಲವನ್ನು ಮುಟ್ಟಿ ನೀವೂ ಪುನೀತರಾಗಿ ಬನ್ನಿ !

ಸಂಪರ್ಕ ವಿಳಾಸ : ಪುತಿನ ಟ್ರಸ್ಟ್‌ (ರಿ.), 578, 11ನೇ ಮುಖ್ಯರಸ್ತೆ, 5ನೇ ಬ್ಲಾಕ್‌, ಜಯನಗರ, ಬೆಂಗಳೂರು - 560 011, ಅಮೆರಿಕಾದಲ್ಲಿ : ಅಲಮೇಲು ಅಯ್ಯಂಗಾರ್‌, ಈ ಮೇಯ್ಲ್‌ :[email protected]

Post your Views?

ವಾರ್ತಾ ಸಂಚಯ

ಪು.ತಿ.ನ. ಪ್ರತಿಷ್ಠಾನ ಸಹಾಯಾರ್ಥ -ಗಾನ ಸುಧೆ, ನಗೆ ನಾಟಕ
ಯದುಗಿರಿಯ ಮೌನದ ಕೊಳದಲ್ಲಿ ಮತ್ತೊಮ್ಮೆ ಶ್ರೀಹರಿಚರಿತೆಯ ಅಲೆ
ಜೀವನಪ್ರೀತಿಯ ಗಾಜುಗೋಳ
ರಂಗಾಯಣದ ಪ್ರಸನ್ನರ ಹದ್ದು ಮೀರಿದ ಹಾದಿಗೊಲಿದ ಪುತಿನ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X