• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪದ್ಮಜಾ ಕಿಶೋರ್‌ ಅವರ ನಾದೋಪಾಸನೆ ಮತ್ತು ಸಂಗೀತ ಸಾಧನೆ

By Staff
|

(ಪರಿಚಯ ಲೇಖನ: ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ)

‘ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಂಗೀತ ಒಂದು ಉತ್ತಮ ಸಾಧನ; ಭಗವಂತನ ಗುಣಗಾನ ನಾಮಸಂಕೀರ್ತನೆಯ ಸಂಗೀತ ಲಹರಿಯಲ್ಲಿ ಅವಿರತವಾಗಿ, ಶ್ರದ್ಧಾಪೂರ್ವಕವಾಗಿ ಹಾಡುತ್ತ, ತೊಡಗುವುದರಿಂದ ಬಿಡುಗಡೆ ಸಾಧ್ಯ ! ’- ಎಂಬ ಮಾತಿನಲ್ಲಿ ದೃಢ ನಂಬಿಕೆ ಉಳ್ಳ ಪದ್ಮಜಾ ಕಿಶೋರ್‌ ಅವರು ಹಾಡಿರುವ ಕರ್ನಾಟಕ ಸಂಗೀತದ ಗೀತೆಗಳ ಎರಡು ಧ್ವನಿಮುದ್ರಿಕೆಯ ಗಣಕ ಸಂಪುಟ (ಸಿ.ಡಿ.)ಗಳು ಈ ಜನವರಿ 26ರ ಸಂಜೆ ಕ್ಯಾಲಿಫೋರ್ನಿಯಾದ ಸ್ಯಾನ್‌ ಹೋಸೆಯಲ್ಲಿ ಬಿಡುಗಡೆಯಾಗಲಿವೆ.

ಮೊದಲನೆಯದು: ಶ್ರೀ ಪುರಂದರ ದಾಸರ ಆಯ್ದ ದೇವರ ನಾಮಗಳ ಕೃತಿ ಮಂಜರಿ; ಎರಡನೆಯದು : ‘ದಾಸಗಾನ ಮಂಜರಿ’ ನಾಮಾಂಕಿತ ದಾಸವರೇಣ್ಯರ ಭಕ್ತಿಗೀತೆಗಳ ಸಂಪುಟ.

ಸ್ಯಾನ್‌ ಹೋಸೆಯಲ್ಲಿರುವ ‘ಗಾನಮಂದಿರ ಫೈನ್‌ ಆರ್‌ಟ್ಸ್‌’ ಎಂಬ ಸಂಗೀತ ಕಲಾಶಾಲೆಯ ನಿರ್ದೇಶಕರಾಗಿದ್ದು, ಇಲ್ಲಿನ ಮಕ್ಕಳಿಗೆ, ಆಸಕ್ತ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸುತ್ತಿರುವ ಪದ್ಮಜಾ ಕಿಶೋರ್‌ ಅವರು ಸಂಗೀತ ಕಲಾನಿಧಿ ಟಿ.ಕೆ. ಗೋವಿಂದರಾವ್‌ ಅವರ ಮಗಳು ; ಗೋವಿಂದರಾಯರ ಶಿಷ್ಯರೂ ಹೌದು. ಇಲ್ಲಿನ ಹೆಸರಾಂತ ಸಂಗೀತ ನಿರ್ದೇಶಕರಾದ ರವಿ ರವೀಂದ್ರನಾಥ್‌ ಅವರು ಪದ್ಮಜಾ ಅವರ ಧ್ವನಿ ಮುದ್ರಿಕೆಯ ಸಂಪುಟ(ಸಿ.ಡಿ.)ಗಳನ್ನು ಬಿಡುಗಡೆ ಮಾಡುತ್ತಾರೆ.

ಕನ್ನಡಿಗರಾದ ಪದ್ಮಜಾ ಅವರು ಹುಟ್ಟಿದ್ದು ಕೇರಳದ ಎರ್ನಾಕುಲಂನಲ್ಲಿ ; ಬೆಳೆದದ್ದು ತಮಿಳುನಾಡಿನಲ್ಲಿ . ಮನೆ ಮಾತು ತುಳು ಮತ್ತು ಕನ್ನಡ. ಹೀಗಾಗಿ, ಅವರಿಗೆ ಬಹುಭಾಷೆಗಳ ನೇರ ಪರಿಚಯ ಲಭ್ಯವಾಗಿದೆ. ತಾಯಿ ಹೇಮಾವತಿ ಇವರಿಗೆ ಸಂಗೀತದಲ್ಲಿ ಆಸಕ್ತಿಯನ್ನು ಹುಟ್ಟಿಸಿದರು, ಅದನ್ನು ಪೋಷಿಸಿದವರೂ ಇವರ ತಂದೆಯವರೇ. ತಂದೆಯ ಬಳಿಯಲ್ಲಲ್ಲದೆ, ತಮಿಳುನಾಡಿನ ಚೆನ್ನೈನ ಶಂಕರಿ ನಟರಾಜನ್‌ ಅವರ ಮತ್ತು ಮುಂಬಯಿಯ ಬಾಲಮಣಿ ಅವರಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸಂಗೀತ ಕಲಾನಿಧಿ ಶೆಮ್ಮನ್‌ಗುಡಿ ಶ್ರೀನಿವಾಸ ಅಯರ್‌ ಅವರ ಬಳಿಯೂ ಸ್ವಲ್ಪ ಕಾಲ ವ್ಯಾಸಂಗ ಮಾಡಿದ್ದಾರೆ.

ಕರುನಾಡಿನಿಂದ ಕ್ಯಾಲಿಫೋರ್ನಿಯಾವರೆಗೆ ಗಾನಗಂಗೆ

ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಭಾರತದಲ್ಲಿ ಹಲವೆಡೆ, ಮುಖ್ಯವಾಗಿ ಚೆನ್ನೈನಲ್ಲಿ , ಪಾಂಡಿಚೆರಿಯಲ್ಲಿ ನಡೆಸಿದ್ದಾರೆ. ಭಾರತದಲ್ಲಿ ಆಕಾಶವಾಣಿಯಲ್ಲಿ ಚೆನ್ನೈನ ದೂರದರ್ಶನದಲ್ಲಿ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಮದುವೆಯಾಗಿ (1985 ಜೂನ್‌) ಇನ್ನೂ ಮೂರು ದಿನ ಆಗಿಲ್ಲ , ಉಡುಪಿಯ ಶ್ರೀಕೃಷ್ಣ ದೇವಾಲಯದಲ್ಲಿ ತಂದೆಯವರೊಂದಿಗೆ ಹಾಡಿ, ‘ ಸಂಗೀತ ಸೇವಾಂ ಅವಧಾರಯ’ ಎಂದು ನಾದಲೋಲನಿಗೆ ರಸಾಮೃತದ ಸಮರ್ಪಣೆಯನ್ನ ಇತ್ತು ಬಂದವರು ಇವರು.

ಇತ್ತ ಅಮೆರಿಕಾಗೆ ಬಂದ ಮೇಲೆ (1987), ಇಲ್ಲಿ ಕ್ಯಾಲಿಫೋರ್ನಿಯಾದ ಅನೇಕ ಸಂಘ- ಸಂಸ್ಥೆಗಳ, ದೇವಸ್ಥಾನಗಳ ಕಲಾ ವೇದಿಕೆಗಳ ಮೇಲೆ ಸಂಗೀತ ಕಾರ್ಯಕ್ರಮದ ನಡೆಸಿಕೊಟ್ಟಿದ್ದಾರೆ. ಕಾನ್‌ಕಾರ್ಡಿನ ಸುಬ್ರಹ್ಮಣ್ಯ ದೇವಸ್ಥಾನ, ಯೂಬಾ ನಗರದ ಲಕ್ಷ್ಮೀನಾರಾಯಣ ಮಂದಿರ, ಸ್ಯಾನ್‌ ಲಿಯಾಂಡ್ರೋದ ಬದರಿಕಾಶ್ರಮ ಮುಂತಾದವುಗಳಲ್ಲಿ ರಸಿಕರು ಕಿಕ್ಕಿರಿದು ನೆರೆದ ಸಭೆಗಳಲ್ಲಿ ಸುಸಜ್ಜಿತ ಪಕ್ಕವಾದ್ಯಗಳೊಂದಿಗೆ ಮೋಹನ ಪೂರ್ಣ ಚಂದ್ರಿಕೆ ಹಂಸಧ್ವನಿ ರಾಗಮಾಲಿಕಾ ಕಲ್ಯಾಣಿಗಳಿಂದ ಜನ ಮನರಂಜಿಸಿದ್ದಾರೆ.

ಮರೆತೇನೆಂದರ ಮರೆಯಲಿ ಹ್ಯಾಂಗ..

ಪದ್ಮಜಾ ಅವರು ಯಶಸ್ವಿಯಾಗಿ ಸಂಘಟಿಸಿದ, ಸಹೃದಯಿ ಜನಸ್ತೋಮ ಮೆಚ್ಚಿದ ಕೆಲವು ಉತ್ತಮ ಕಾರ್ಯಕ್ರಮಗಳು: ವಿಶ್ವ ಹಿಂದೂ ಪರಿಶಷತ್ತಿನ ರಾಷ್ಟ್ರೀಯ ಸಮಿತಿಯ ಸಭೆಯ ಮುಕ್ತಾಯ ಸಮಾರಂಭದಲ್ಲಿ ಆಂಟಿಯೋಕ್‌, ಕ್ಯಾಲಿಫೋರ್ನಿಯಾದಲ್ಲಿ ನಡೆಸಿಕೊಟ್ಟ ‘ಗಾನ ಮಾಧುರೀ’ ಕಾರ್ಯಕ್ರಮ, ಪುತ್ತೂರು ಶ್ರೀನಿವಾಸ ನಾಯಕರು ಇತ್ತ ಬಂದಿದ್ದಾಗ ಇಲ್ಲಿನ ಸನಿವೇಲ್‌ ದೇವಸ್ಥಾನ ಮತ್ತು ಭಾರತೀಯ ಸಮುದಾಯ ಕೇಂದ್ರದಲ್ಲಿ ನಡೆಸಿದ ಅವರ ‘ಸಂಗೀತ ಸಂಜೆ’; ಇದೇ ದೇವಸ್ಥಾನದಲ್ಲಿ ನಡೆಸಿರುವ ‘ನವರಾತ್ರಿ ಸಂಗೀತೋತ್ಸವ’ಗಳು ಮತ್ತು ‘ಪುರಂದರ ಸಂಗೀತ ಆರಾಧನಾ’ ಕಾರ್ಯಕ್ರಮಗಳು.

ಪದ್ಮಜಾ ಅವರ ಮೆಚ್ಚುಗೆಯ ಕೆಲವು ರಾಗಗಳೆಂದರೆ: ಕಾಂಬೋಜಿ, ಖರಹರಪ್ರಿಯ, ಸಿಂಹೇಂದ್ರ ಮಧ್ಯಮ ಮತ್ತು ಅಭೇರಿ. ಪದ್ಮಜಾ ಅವರ ಮನಸೆಳೆದ ಕೆಲವು ಸಂಗೀತ ಕೃತಿಗಳೆಂದರೆ: ತ್ಯಾಗರಾಜರ ‘ಅಭೇರಿ’ರಾಗದ ‘ನಗುಮೋಮು’ ; ತ್ಯಾಗರಾಜರ ‘ ಕಾಂಬೋಜಿ’ ರಾಗದ ‘ ಓ ರಂಗಶಾಯಿ’ ; ಮತ್ತು ಕನಕದಾಸರ ‘ ಬಾರೋ ಕೃಷ್ಣಯ್ಯ’.

ತ್ಯಾಗರಾಜರ (688 ಕೃತಿಗಳು) ಮತ್ತು ಶ್ರೀ ಮುತ್ತು(ದ್ದು) ಸ್ವಾಮಿ ದೀಕ್ಷಿತರ (472 ಕೃತಿಗಳು) ಕೀರ್ತನ ಸಂಪುಟಗಳ ಬೃಹತ್‌ ಗ್ರಂಥಗಳನ್ನು ಹಲವು ವರ್ಷಗಳ ಕಾಲ ತುಂಬಾ ಸಂಶೋಧನೆ ಮಾಡಿ, ಶುದ್ಧ ಪಾಠಗಳನ್ನು ಸಂಕೇತ, ಅರ್ಥ, ಭಾಷ್ಯ, ಕಾರಿಕೆಗಳ ಸಮೇತ ಪ್ರಕಟಿಸಿರುವ ಕೀರ್ತಿ ಸಂಗೀತ ಕಲಾನಿಧಿ ಟಿ.ಕೆ. ಗೋವಿಂದರಾಯರದ್ದು. ಅವರೇ ಸಂಪಾದಕರಾಗಿ, ಹಾಡುಗಾರರಿಗೆ ಅವಶ್ಯಕವಾದ ಸಂಕೇತಗಳ ಸಮೇತ, ‘ ಶ್ಯಾಮಾಶಾಸ್ತ್ರಿ , ಸುಬ್ಬರಾಯ ಶಾಸ್ತ್ರಿ ಮತ್ತು ಅಣ್ಣ ಸ್ವಾಮಿ ಶಾಸ್ತ್ರಿಗಳ (96 ಕೃತಿಗಳ) ಸಂಗ್ರಹ’ವನ್ನೂ, ‘ ಘನರಾಗ ಪಂಚರತ್ನ ಕೃತಿಗಳ ಸಂಪುಟ’ವನ್ನೂ , ಐವತ್ತು ಆಯ್ದ ತಾನ ಪದವರ್ಣಗಳ ಇಂಗ್ಲಿಷ್‌ ವಿವರಣೆಯುಳ್ಳ ‘ವರ್ಣ ಮಂಜರಿ’ಗ್ರಂಥವನ್ನೂ ‘ಗಾನಮಂದಿರ’ದಿಂದಲೇ ಪ್ರಕಟಿಸಿದ್ದಾರೆ.

ನಿನ್ನಂಥ ಅಪ್ಪ ಇಲ್ಲ : ಪಿತೃ ದೇವೋಭವ

ಗೋವಿಂದರಾಯರಂಥವರ ಮಗಳಾಗಿ, ಭಾಷಾ ಶುದ್ಧಿಯ ಬಗ್ಗೆ ಅತೀವ ಕಾಳಜಿ, ಪದ್ಮಜಾ ಅವರಿಗೆ. ಪದಗಳ ಅರ್ಥ ಸರಿಯಾಗಿ ತಿಳಿದು ಹಾಡಿದರೇನೇ ಪದ್ಮಜಾಗೆ ತೃಪ್ತಿ. ಸಾಹಿತ್ಯಕ್ಕೆ ಗಾಯನ ಹೊಸದೊಂದು ಆಯಾಮ ಕೊಡುತ್ತದೆ ಎಂಬುದನ್ನು ಅವರು ಬಲ್ಲರು. ಕನ್ನಡ, ಸಂಸ್ಕೃತ , ತಮಿಳು, ತೆಲುಗು, ಮಲಯಾಳಂ, ಹಿಂದೀ - ಹೀಗೆ ಗೀತೆ ಬೇರೆ ಬೇರೆ ಭಾಷೆಯ ಕೃತಿಯಾಗಿದ್ದಾಗ, ಆ ಹಾಡಿನ ಸರಿಯಾದ ಪಾಠ ಯಾವುದು ಓದಿ, ನೋಡಿ, ಬಲ್ಲವರಲ್ಲಿ ಕೇಳಿ ತಿಳಿದುಕೊಂಡು ಹಾಡುವ ಮನೋವೃತ್ತಿ ಅವರದು.

ಶುದ್ಧ ಉಚ್ಛಾರಣೆಯ ಬಗ್ಗೆ ಮತ್ತು ಅರ್ಥಪೂರ್ಣ ಪದಚ್ಛೇದದ ಬಗ್ಗೆ ಕೆಲವು ಸುಶ್ರಾವ್ಯವಾಗಿ ಹಾಡಬಲ್ಲವರ ಉದಾಸೀನತೆಯನ್ನು ಕಿವಿಯಾರ ಕೇಳು ನಾವು ಮರುಗುತ್ತೇವಲ್ಲ, ಅದಕ್ಕೆ ಪದ್ಮಜಾ ಅವರ ವಿಚಾರದಲ್ಲಿ ಅವಕಾಶವಿಲ್ಲ. (ಕೆಲವರು ‘ ಪುರಂದರ’ರನ್ನೇ ‘ ಪುರಂಧರ’ರನ್ನಾಗಿ ಹಾಡಿ, ಕೇಳುಗರ ಹೊಟ್ಟೆ ಸೀಳುತ್ತಾರಲ್ಲ, ಏನು ಹೇಳೋಣ ! ‘ ಶೂಲಧರ-ಆದಿ-ಅಮರಾಳೀ-ಬಲದೇ’ ಆದ ಲಕ್ಷ್ಮಿ ಕೆಲವರ ಕಂಠಶ್ರೀ ‘ ಶೂಲಧರಾಧ್ಯ- ಮುರಾಳೀಬಲದೇ’ ಆಗಿ ಚುಚ್ಚಿಸಿಕೊಂಡು ನೋಯುತ್ತಾಳಲ್ಲ, ಏನು ಮಾಡೋಣ) ಪದ್ಮಜಾ ಹಾಗೆ ಮಾಡಲೊಲ್ಲರು. ಉದಾಹರಣೆಗೆ, ರಾಘವೇಂದ್ರರನ್ನು ಸ್ತುತಿಸುವ ಒಂದು ಕೀರ್ತನೆಯಲ್ಲಿ ‘ ಧ್ವಾನ್ತ’ ಪದದ ಅರ್ಥ ತಿಳಿಯದೇ, ‘ ಕತ್ತಲು’ ಕವಿದಾಗ ಬೆಳಕು ಬೀಳುವವರೆಗೂ ಹುಡುಕಾಡಿದ್ದುಂಟು; ‘ತಲ್ಲಣಿಸದಿರು ಕಂಡ್ಯಾ ತಾಳು ಮನವೇ’ ಎಂದು (ರಾಗ ನರ್ತಕಿ, ಖಂಡಛಾಪು ತಾಳದಲ್ಲಿ) ಕನಕದಾಸರು ಸಂತೈಸುವ ಹಿತವಚನದಲ್ಲಿ ಕೆಲವರು ಬೇಡ ಇನ್ನು ಕೆಲವರು ಇಲ್ಲ ಬಳಸುತ್ತಾರಲ್ಲ ಎಂದು ಸರಿಯಾದ ಪಾಠ ಏನೆಂದು ಸಂಶಯ ಪಟ್ಟಿದ್ದುಂಟು, ಪರಿಹರಿಸಿಕೊಂಡಿದ್ದುಂಟು ; ಇದು ದಾಸಗಾನ ಮಂಜರಿಯಲ್ಲಿ ಇದೆ. ‘ ಕಮಲೇಶ’ ಅಂಕಿತದ ಒಂದು ಕೃತಿ ‘ ಕರೆದರೆ ಬರಬಾರದೇ’ (ರಾಗ ರೇವತಿ, ಆದಿ ತಾಳ) ದ ಕೊನೆಯಲ್ಲಿ ‘ ಪೂಸರಪಿತ’ ಎಂಬ ಪದ ಬರುತ್ತದೆ. ಈ ಕೀರ್ತನೆಯನ್ನೂ ಪದ್ಮಜಾ ಅವರು ತಮ್ಮ ಧ್ವನಿ ಸಂಪುಟದಲ್ಲಿ ಹಾಡಿದ್ದಾರೆ. ‘ ಪೂ-ಸರ-ಪಿತ’ ಪದವೇ ಸರಿಯಾದದ್ದು; ಅದರ ಅರ್ಥ ‘ ಕುಸುಮಶರ, ಮನ್ಮಥನ ತಂದೆ ಪ್ರದ್ಯುಮ್ನನ ಅಪ್ಪ, ಕೃಷ್ಣ ’ - ಎಂದು ಅವರು ತಿಳಿದುಕೊಳ್ಳುವವರೆಗೂ ಅವರು ಆ ಹಾಡಿನ ರಿ-ರೆಕಾರ್ಡಿಂಗ್‌ಗೆ ಹೋಗಿ ಹಾಡಲು ಒಪ್ಪಲಿಲ್ಲ !

ಎಂದುರೋ ಮಹಾನುಭಾವಲು..

‘ಪದ್ಮಜಾ, ನಿಮ್ಮ ಮೆಚ್ಚುಗೆಯ ಸಂಗೀತಗಾರರು ಯಾರು ?’ ಎಂದು ಕೇಳಿದೆ- ಹೇಳಿದರು: ‘ನಮ್ಮ ತಂದೆ ಟಿ. ಕೆ. ಗೋವಿಂದರಾವ್‌ ಮುಸಿರಿ ಸುಬ್ರಹ್ಮಣ್ಯ ಐಯರ್‌, ಎಂ. ಎಸ್‌. ಸುಬ್ಬುಲಕ್ಷ್ಮಿ, ಮತ್ತು ವೀಣಾ ವಾದ ಪಟು ಆರ್‌.ಜಯಂತಿ.’ -ಎಂದರು.

ಪದ್ಮಜಾ ಅವರ ಮೇಲೆ ತುಂಬಾ ಪ್ರಭಾವ ಬೀರಿದವರೆಂದರೆ, ತಂದೆ ಟಿ.ಕೆ. ಗೋವಿಂದರಾವ್‌ ಮತ್ತು ಪತಿ ಕಿಶೋರ್‌ ಕುಮಾರ್‌ ಅವರುಗಳು, ಎನ್ನುತ್ತಾರೆ. (ಕಿಶೋರ್‌ ಮತ್ತು ಪದ್ಮಜಾ ಅವರ ಮುದ್ದಿನ ಮಗಳು ದೀಪಿಕಾ ಸಹ ತಾಯಿಯ ಗಂಧರ್ವ ಮಂದಿರ ‘ಗಾನಮಂದಿರ ಕಲಾ ಶಾಲೆ’ಯಲ್ಲಿ ವಿದ್ಯಾರ್ಥಿನಿ!) ಪದ್ಮಜಾ ಅವರು ಸವಿನೆನಪಿನಿಂದ ಮೆಲುಕು ಹಾಕುವ ತುಂಬಾ ಮೆಚ್ಚುಗೆಯ ಸ್ವಂತ ಸಂಗೀತ ಕಚೇರಿಗಳು, ಚೆನ್ನೈನಲ್ಲಿ ನಡೆದ ‘ನಾದ ಇನ್ಬಮ್‌’ ಮತ್ತು ಸನಿವೇಲ್‌ ಕ್ಯಾಲಿಫೋರ್ನಿಯಾದಲ್ಲಿ ‘ಲೋಟಸ್‌’ ವತಿಯಿಂದ ನಡೆದ ಅವರ ಕಚೇರಿಗಳು.

ಈಗ ಬಿಡುಗಡೆಯಾಗಲಿರುವ ಧ್ವನಿ ಮುದ್ರಿಕೆ ಸಂಪುಟಗಳ ವಿವರ ಮತ್ತು ಪದ್ಮಜಾ ಅವರ ಗಾನ ಮಂದಿರದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ www.ganamandir.com ಎಂಬ ಜಾಲ ತಾಣಕ್ಕೆ.

ಅವುಗಳ ವಿಹಂಗಮ ನೋಟ ಹೀಗಿದೆ. ಪದ್ಮಜಾ ಕಿಶೋರ್‌ ಅವರು ಹಾಡಿರುವ ಎರಡೂ ಧ್ವನಿಮುದ್ರಿಕೆಯ ಸಂಪುಟಗಳಿಗೆ ರಾಗ ಸಂಯೋಜನೆ ಮತ್ತು ಸಂಗೀತ ನಿರ್ದೇಶನ ಮಾಡಿದವರು ಸಂಗೀತ ಕಲಾನಿಧಿ ಟಿ.ಕೆ. ಗೋವಿಂದರಾಯರು. ಪಕ್ಕ ವಾದ್ಯದಲ್ಲಿ, ಆರ್‌. ಶಿವಕುಮಾರ್‌ ಅವರ ವಯಲಿನ್‌, ಎ. ಅನಂತಕೃಷ್ಣನ್‌ ಅವರ ಮೃದಂಗ, ಎನ್‌. ಗೋವಿಂದರಾಜನ್‌ ಅವರ ಘಟ ಮತ್ತು ಬಿ.ಎಸ್‌. ಪುರುಷೋತ್ತಮ ಅವರು ಖಂಜರಾ ನುಡಿಸಿದ್ದಾರೆ.

‘ದಾಸಗಾನ ಮಂಜರಿ’ಯಲ್ಲಿ ಆಯ್ದ ಬೇರೆ ಬೇರೆ ವಾಗ್ಗೇಯಕಾರ ದಾಸಶ್ರೇಷ್ಠರ ಹತ್ತು ಕೀರ್ತನೆಗಳು ಇವೆ. ‘ಪುರಂದರ ದಾಸ ಸಂಪುಟ’ದಲ್ಲಿ ಆ ಕರ್ನಾಟಕ ಸಂಗೀತ ಪಿತಾಮಹರ ಆರಿಸಿಕೊಂಡ ಎಂಟು ದೇವರ ನಾಮಗಳು ಇವೆ. ಇವೆರಡರಲ್ಲೂ ಸಾಹಿತ್ಯ, ಉದ್ದೇಶ, ದರ್ಶನ, ರಾಗಗಳ ಲಕ್ಷ್ಯ-ಲಕ್ಷಣಗಳ ವಿನ್ಯಾಸ ಸೂಕ್ಷತೆ, ಒಂದೊಂದೂ ತನ್ನದೇ ಆದ ವಿಶಿಷ್ಟ ನಾದ ಮಾಧುರ್ಯದಿಂದ ಸಾಹಿತ್ಯಕ್ಕೆ ಜೀವ ತುಂಬುವ ಗುಣ- ಇವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯಾಂದನ್ನೂ ಬೇರೆ ಬೇರೆ ರಾಗದಲ್ಲಿ ಪದ್ಮಜಾ ಅವರು ಹಾಡಿದ ವೈವಿಧ್ಯಪೂರ್ಣ ಕೀರ್ತನೆಗಳು ಇವೆ.

ಪದ್ಮಜಾ ಕಿಶೋರ್‌ ಅವರ ನಾದೋಪಾಸನೆ ಮತ್ತು ಸಂಗೀತ ಸಾಧನೆ ಹೀಗೇ ಮುಂದುವರಿದು, ಯಶಸ್ಸಿನ ಹಲವಾರು ಉನ್ನತ ರಸ-ಶಿಖರಗಳನ್ನು ಹೋಗಿ ಮುಟ್ಟಲಿ!

ಪದ್ಮಜಾ ಕಿಶೋರ್‌ ಅವರ ವಿಳಾಸ :

Padmaja kishore,
Ganamandir Fine Arts
1309, Hare field Court, San Jose,
California, 95131, USA.
Phone/Fax : (408) 441 6732
Email: padmaja@gtelmedia.com
Website: http://www.ganamandir.com

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X