• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಳಿಗಾಲದ ಒಲಿಂಪಿಕ್ಸ್‌ : ಮೆರೆದ ಕ್ರೀಡಾಪ್ರೇಮ, ಉದ್ದಕ್ಕೂ ವಿವಾದ

By Staff
|

*ಯೋಗೇಶ್‌ ದೇವರಾಜ್‌, ಸನ್ನಿವೇಲ್‌, ಕ್ಯಾಲಿಫೋರ್ನಿಯ

Yogesh Devarajಫೆಬ್ರವರಿ 8 ರಿಂದ 24 ರವರೆಗೆ, 17 ದಿನಗಳ ಕಾಲ ಜಗತ್ತಿನ ಕ್ರೀಡಾಸಕ್ತರನ್ನು ರಂಜಿಸಿದ 19ನೇ ಚಳಿಗಾಲದ ಒಲಂಪಿಕ್‌ ಪಂದ್ಯಾವಳಿಗಳು ಅಮೆರಿಕದ ಯುಟಾ ರಾಜ್ಯದ ಸಾಲ್ಟ್‌ ಲೇಕ್‌ ನಗರದಲ್ಲಿ ನಡೆಯಿತು. ವಿವಾದದೊಂದಿಗೆ ಪ್ರಾರಂಭವಾಗಿ ವಿವಾದಗಳೊಂದಿಗೆ ಜರುಗಿದ್ದು ಸಾಲ್ಟ್‌ ಲೇಕ್‌ ಒಲಂಪಿಕ್ಸ್‌ ನ ವಿಶೇಷ. ಆದರೂ ಹಿಂದಿನ ಒಲಂಪಿಕ್ಸ್‌ಗಳಿಗಿಂತ ಈ ಒಲಂಪಿಕ್ಸ್‌ ಭಿನ್ನವಾಗಿತ್ತು.

ಐಓಸಿ ಹಗರಣ

1998 ರ ನವೆಂಬರ್‌ನಲ್ಲಿ ಬಯಲಾದ ಸಾಲ್ಟ್‌ ಲೇಕ್‌ ಒಲಂಪಿಕ್‌ ಲಂಚದ ಹಗರಣ ಕ್ರೀಡಾ ಜಗತ್ತನ್ನು ತಲ್ಲಣಗೊಳಿಸಿತ್ತು. 105 ವರ್ಷದ ಒಲಂಪಿಕ್‌ ಇತಿಹಾಸದಲ್ಲೇ ಅತೀ ದೊಡ್ಡದೆನಿಸಿದ ಈ ಹಗರಣ, ಐಓಸಿ (ಅಂತರರಾಷ್ಟ್ರೀಯ ಒಲಂಪಿಕ್‌ ಕಮಿಟಿ)ಯನ್ನೇ ಅಲುಗಾಡಿಸಿತ್ತು. ಸಾಲ್ಟ್‌ ಲೇಕ್‌ ಒಲಂಪಿಕ್‌ನ ಆಡಳಿತ ಮಂಡಳಿ, ಒಲಂಪಿಕ್ಸ್‌ನ್ನು ದಕ್ಕಿಸಿಕೊಳ್ಳಲು ಐಒಸಿ ಸದಸ್ಯರಿಗೆ ಯಥೇಚ್ಛವಾಗಿ ಕಾಣಿಕೆಯನ್ನು ಸಲ್ಲಿಸಿದ ವಿಷಯ ಬಯಲಾಗಲು ಬಹಳ ಸಮಯ ಹಿಡಿಯಲಿಲ್ಲ. ಐಓಸಿ ಆರು ಸದಸ್ಯರನ್ನು ಹೊರಹಾಕಿ ನಾಲ್ವರು ಸದಸ್ಯರು ರಾಜಿನಾಮೆ ನೀಡುವಂತೆ ಮಾಡಿ ಹೊಸ ಸಮಿತಿ ನೇಮಕದೊಂದಿಗೆ ಹಗರಣ ಕೊನೆಗೊಂಡಿತು.

ಯೋತ್ಪಾದಕತೆಯ ಭೀತಿ

ಸಾಲ್ಟ್‌ ಲೇಕ್‌ ನಗರ ಒಲಂಪಿಕ್ಸ್‌ಗೆ ಅಣಿಯಾಗುತ್ತಿದ್ದಂತೆಯೇ ಸೆಪ್ಟೆಂಬರ್‌ 11ರಂದು ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಆಕ್ರಮಣ ನಡೆಯಿತು. ಒಲಂಪಿಕ್ಸ್‌ನ್ನು ನಡೆಸುವುದೋ, ಅಥವಾ ಮುಂದೂಡಬೇಕೋ ಎಂಬ ದ್ವಂದ್ವದಲ್ಲಿದ್ದ ಸಂಯೋಜಕರು ಕೊನೆಗೆ ಅತ್ಯಂತ ಭದ್ರತೆಯಾಂದಿಗೆ ಒಲಂಪಿಕ್‌ ನಡೆಸುವ ತೀರ್ಮಾನ ತೆಗೆದುಕೊಂಡರು. ಭದ್ರತಾ ವ್ಯವಸ್ಥೆಗೆ ಎಂದಿಗಿಂತ ಹತ್ತು ಪಟ್ಟು ಹೆಚ್ಚು ಖರ್ಚು.

ಸಾಲ್ಟ್‌ ಲೇಕ್‌ ಸಿಟಿ ಮೊರ್ಮೊನರ ನಾಡು

ಇತಿಹಾಸ, ಸಂಸ್ಕೃತಿ, ಮತ್ತು ವಿಹಾರಗಳ ಸಮ್ಮಿಶ್ರದ ಸಂಕೇತವಾದ ಸಾಲ್ಟ್‌ ಲೇಕ್‌ ನಗರ, ಯುಟಾ ರಾಜ್ಯದ ರಾಜಧಾನಿ. ಮೊರ್ಮೊನ್‌ ಕ್ರಿಶ್ಚಿಯನ್ನರ ಕೇಂದ್ರ ಸ್ಥಳವಾದ ಸಾಲ್ಟ್‌ ಲೇಕ್‌ ನಗರ ಅತಿ ಎತ್ತರ ಹಿಮ ಪರ್ವತಗಳನ್ನು ಹೊಂದಿದ್ದು . ಚಳಿಗಾಲದ ಒಲಿಂಪಿಕ್ಸ್‌ಗೆ ಹೇಳಿ ಮಾಡಿಸಿದಂಥ ನಗರವಾಗಿದೆ. ಇಲ್ಲಿಯವರೆಗೆ ಚಳಿಗಾಲದ ಒಲಂಪಿಕ್ಸ್‌ ನಡೆದಿರುವ ನಗರಗಳಲ್ಲಿ ಸಾಲ್ಟ್‌ ಲೇಕ್‌ ಸಿಟಿಯೆ ಅತಿ ದೊಡ್ಡದು.

ಚಿತ್ತಾಕರ್ಷಕ ಸಮಾರಂಭ

Winter Olympic opening ceremony28 ರಾಷ್ಟ್ರಗಳನ್ನು ಪ್ರತಿನಿಧಿಸಿದ 2,500ಕ್ಕೂ ಹೆಚ್ಚಿನ ಕ್ರೀಡಾ ಪಟುಗಳು ತಮ್ಮ ನಾಲ್ಕು ವರ್ಷದ ಅವಿರತ ಸಾಧನೆಯನ್ನು ಪ್ರದರ್ಶಿಸಲು ಸಾಲ್ಟ್‌ ಲೇಕ್‌ ನಗರದ ರೈಸ್‌-ಎಕ್ಕ್ಲೆ ಸ್‌ ಒಲಂಪಿಕ್‌ ಕ್ರೀಡಾಂಗಣದಲ್ಲಿ ಸೇರಿದ್ದರು. ಅಂದಿನ ಸಮಾರಂಭದ ಮುಖ್ಯ ಅತಿಥಿ ಜಾರ್ಜ್‌ ಬುಷ್‌. ಯುಟ ರಾಜ್ಯದ ಐದು ಮೂಲ ನಿವಾಸಿ (ಅಮೆರಿಕನ್‌ ಇಂಡಿಯನ್‌) ಗುಂಪಿನ ಪ್ರತಿನಿಧಿಗಳು ಕ್ರೀಡಾಪಟುಗಳನ್ನು ಒಗ್ಗಟ್ಟಿನ ಸಂದೇಶದೊಂದಿಗೆ ಸ್ವಾಗತಿಸಿದರು. ಹೆಸರಾಂತ ಗಾಯಕರ ಮತ್ತು ಸಂಗೀತಗಾರರ ಕಾರ್ಯಕ್ರಮಗಳು ಸಮಾರಂಭದ ವಿಶೇಷವಾಗಿತ್ತು. ಉದ್ಘಾಟನೆ ನಂತರದ ಭರ್ಜರಿ ಪಟಾಕಿ, ಬಾಣ- ಬಿರುಸುಗಳ ಪ್ರದರ್ಶನ ಮನ ಮೋಹಕವಾಗಿತ್ತು. ಪ್ರಪಂಚದ ಸುಮಾರು 2 ಬಿಲಿಯನ್‌ ಜನ ಸಮಾರಂಭವನ್ನು ವೀಕ್ಷಿಸಿದರು.

ಜೋಡಿ ಫಿಗರ್‌ ಸ್ಕೇಟಿಂಗ್‌- ರೆಫರಿ ರಾಜಕೀಯ

ಕೆನೆಡಿಯನ್‌ ಜೋಡಿ ಜೇಮಿ ಸಾಲೆ ಮತ್ತು ಡೆವಿಡ್‌ ಪೆಲ್ಲೆಟಿಯರ್‌ ಫಿಗರ್‌ ಸ್ಕೇಟಿಂಗ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಪ್ರೇಕ್ಷಕರ ಮನ ಸೂರೆಗೊಂಡರು. ಆದರೆ ರೆಫರಿಗಳು ಸ್ವರ್ಣವನ್ನು ರಶಿಯನ್‌ ಜೋಡಿ ಯೆಲೆನ ಭ್ರೆಜ್ಹ್ನಯ ಮತ್ತು ಅನ್ಟೊನ್‌ ಸ್ಕಿಹರುಲಿಡ್ಜ್‌ಗೆ ನೀಡಿ ವಿವಾದಕ್ಕೆ ಎಡೆ ಮಾಡಿಕೊಟ್ಟರು. ಮಾದ್ಯಮಗಳು ರೆಫರಿ ಅಚಾತುರ್ಯವನ್ನು ಪ್ರಕಟಿಸಿ, ತನಿಖೆ ನಡೆಸುವಂತೆ ಒತ್ತಾಯಿಸಿದವು. ತನಿಖೆಯ ನಂತರ ಐಓಸಿ ವಿವಾದಕ್ಕೆ ಕಾರಣಳಾದ ಫ್ರೆಂಚ್‌ ರೆಫರಿಯನ್ನು ವಜಾ ಮಾಡಿ ಕೆನೆಡಿಯನ್‌ ಜೋಡಿಯನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಿ ಅವರಿಗೂ ಸ್ವರ್ಣ ಪದಕ ನೀಡಿ ವಿವಾದ ಸಮಾಪ್ತಿಗೊಳಿಸಿತು.

ಪದಕಗಳ ರಾಣಿಧೀರೆ ‘ಯಾನಿಕ ಕಾಸ್ಟೆಲಿಕ್‌’

ಇಳಿಜಾರು ಬೆಟ್ಟ (ಅಲ್ಪೈನ್‌)ದ ಸ್ಕಿಯಿಂಗ್‌ನಲ್ಲಿ ಹಿಂದೊಮ್ಮೆ ಬೃಹತ್‌ ಶಕ್ತಿಯಾಗಿದ್ದ ಕ್ರೊಯೆಶಿಯಾದ ಯಾನಿಕಗೆ ವರ್ಷದ ಕೆಳಗೆ ಮಂಡಿಯಲ್ಲಿ ಮೂರು ಶಸ್ತ್ರ ಚಿಕಿತ್ಸೆಯಾಗಿತ್ತು. ದೈಹಿಕವಾಗಿ ಕುಂದಿದ್ದರೂ ಮಾನಸಿಕವಾಗಿ ಪ್ರಬಲವಾಗಿದ್ದ ಯಾನಿಕ 3 ಚಿನ್ನದೊಂದಿಗೆ 4 ಪದಕಗಳನ್ನು ಗೆದ್ದಳು. ಒಂದು ಒಲಿಂಪಿಕ್ಸ್‌ನಲ್ಲಿ 4 ಪದಕಗಳ ಗೆದ್ದ ಪ್ರಥಮ ಮಹಿಳೆ ಎಂಬುದು ಯಾನಿಕ ಅಗ್ಗಳಿಕೆ.

ಫಿಗರ್‌ ಸ್ಕೇಟಿಂಗ್‌ನ ಅಚ್ಚರಿ ‘ಸ್ಯಾರ ಹ್ಯುಜ್ಸ್‌’

Sarah Hughesಫಿಗರ್‌ ಸ್ಕೇಟಿಂಗ್‌ ಸ್ಪರ್ಧೆ ಒಲಂಪಿಕ್ಸ್‌ನ ಪ್ರಮುಖ ಆಕರ್ಷಣೆ. ಅನಿರೀಕ್ಷಿತ ಫಲಿತಾಂಶಗಳು ಫಿಗರ್‌ ಸ್ಕೇಟಿಂಗ್‌ಗೆ ಹೊಸತಲ್ಲ . ಕಳೆದ ಒಲಂಪಿಕ್ಸ್‌( ನಾಗನೊ, ಜಪಾನ್‌) ನಲ್ಲಿ ಅಮೆರಿಕದ 16ರ ತರುಣಿ ತಾರ ಲಿಪಿನ್ಸ್ಕಿ ಸ್ವರ್ಣ ಗೆದ್ದು ದಾಖಲೆ ಸೃಷ್ಟಿಸಿದಳು. ಈ ಸಾರಿ ಸ್ವರ್ಣವು ಅಮೆರಿಕದ ಮಿಷೆಲ್‌ ಕ್ವಾನ್‌ ಅಥವಾ ರಷ್ಯನ್‌ ಐರಿನ ಸ್ಲಶ್ಕಾಯಗೆ ಸಿಗುತ್ತದೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ತನ್ನ ಅಮೋಘ ಪ್ರದರ್ಶನದಿಂದ 16 ವರ್ಷದ ಸ್ಯಾರ ಹ್ಯುಜ್ಸ್‌ ಚಿನ್ನ ಗೆದ್ದಳು. ಬೆಳ್ಳಿ ಗೆದ್ದ ತನ್ನ ಸ್ಪರ್ಧಿಗೆ ಚಿನ್ನ ಬರಬೇಕಿತ್ತು. ಆದರೆ ರೆಫರಿ ತಪ್ಪಿನಿಂದಾಗಿ ಸ್ವರ್ಣ ತಪ್ಪಿ ಹೋಯಿತು ಎಂದು ರಷ್ಯ ಅಳಲು ತೋಡಿಕೊಂಡಿತು.

ಚಿನ್ನ ಗೆದ್ದ ಮೊದಲ ಕಪ್ಪು ಕ್ರೀಡಾಪಟು ‘ವನೆಟ್ಟ ಫ್ಲವರ್ಸ್‌ ’

ಚಳಿಗಾಲದ ಒಲಂಪಿಕ್ಸ್‌ನಲ್ಲಿ ಬಹಳ ಮಟ್ಟಿಗೆ ಬಿಳಿಯ ಕ್ರೀಡಾ ಪಟುಗಳದ್ದೇ ಮೇಲುಗೈ. ಅದಕ್ಕೆ ಕಾರಣ ಹಲವು. ಹಿಮ ಬೆಟ್ಟಗಳು ಎಲ್ಲೆಡೆಯಲ್ಲೂ ಇರುವುದಿಲ್ಲ. ಐಸ್‌ ಕ್ರೀಡಾಂಗಣಗಳು ಮತ್ತು ಸಲಕರಣೆಗಳೂ ದುಬಾರಿ. ಆದರೆ ಇದ್ಯಾವುದೂ ಅಮೆರಿಕದ ಬಾಬ್‌ ಸ್ಲೆಡ್‌ ಕ್ರೀಡಾಪಟು ವನೆಟ್ಟ ಫ್ಲವರ್ಸ್‌ಗೆ ತೊಡಕಾಗಲಿಲ್ಲ. ಜೊತೆಗಾತಿ ಜಿಲ್‌ ಬಕ್ಕೆನ್‌ಳೊಡನೆ ಸೇರಿ ಮೊದಲ ಸ್ಥಾನ ಗಳಿಸಿ, ಚಳಿಗಾಲದ ಒಲಂಪಿಕ್ಸ್‌ನಲ್ಲಿ ಸ್ವರ್ಣ ಗೆದ್ದ ಮೊದಲ ಕಪ್ಪು ಕ್ರೀಡಾಪಟು ಎಂಬ ಬಿರುದಿಗೆ ಪಾತ್ರಳಾದಳು.

3ನೇ ತಲೆಮಾರಿನ ಒಲಂಪಿಯನ್‌ ಜಿಮ್‌ ಶಿಯ

ಶಿಯ ಕುಟುಂಬಕ್ಕೆ ಒಲಂಪಿಕ್ಸ್‌ನಲ್ಲಿ ಭಾಗವಹಿಸುವುದು ಹೊಸದಲ್ಲ. ಜಿಮ್‌ನ ತಾತ ಜಾಕ್‌ ಮತ್ತು ಅಪ್ಪ ಜಿಮ್‌ (ಸೀನಿಯರ್‌) ಅನುಕ್ರಮವಾಗಿ 1932 ಮತ್ತು 1964ರ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. 2 ಸ್ವರ್ಣ ಪದಕಗಳ ವಿಜೇತ 91 ವರ್ಷದ ಜಿಮ್‌ ಶಿಯ ಕ್ರೀಡೆ ಶುರುವಾಗುವ ತಿಂಗಳ ಹಿಂದೆ ಕಾರ್‌ ಅಪಘಾತದಲ್ಲಿ ಮರಣಹೊಂದಿದರು. ಸ್ಕೆಲಿಟನ್‌ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಸ್ವರ್ಣ ಗೆದ್ದ ಜಿಮ್‌, ತಾತನ ಫೋಟೋ ಹಿಡಿದು ನಿರ್ಣಾಯಕ ರೇಖೆ ದಾಟಿದ ದೃಶ್ಯ ಮನ ಕರಗಿಸುವಂತಿತ್ತು.

50 ವರ್ಷಗಳ ನಂತರ ನನಸಾದ ಕೆನೆಡಿಯನ್ನರ ಕನಸು

ಐಸ್‌ ಹಾಕಿ ಕೆನೆಡಿಯನ್ನರ ಒಲವಿನ ರಾಷ್ಟ್ರ ಕ್ರೀಡೆ. (ಭಾರತೀಯರಿಗೆ ಕ್ರಿಕೆಟ್‌ ಇದ್ದ ಹಾಗೆ). ಕೆನೆಡಿಯನ್‌ ಪುರುಷರು 50 ವರ್ಷಗಳಲ್ಲಿ ಒಮ್ಮೆಯೂ ಚಿನ್ನ ಗೆದ್ದಿಲ್ಲ. ಐಸ್‌ ಹಾಕಿಯ ದಿಗ್ಗಜ ಕೆನಡಿಯನ್ನಾದ ವೆಯ್ನ ಗ್ರೆಟ್ಸ್ಕಿ ಮುಂದಾಳತ್ವದಲ್ಲಿ ಇನ್ನೊಬ್ಬ ದಿಗ್ಗಜ ಮಾರಿಯೋ ಲೆಮೆಕ್ಸ್‌ನ ನಾಯಕತ್ವದ ಕೆನೆಡಿಯನ್‌ ತಂಡ ಅಮೆರಿಕ ತಂಡವನ್ನು 5-2 ಸ್ಕೋರ್‌ನಿಂದ ಸೋಲಿಸಿ, ಕೆನೆಡಿಯನ್ನರ 50 ವರ್ಷದ ಕನಸನ್ನು ನನಸಾಗಿಸಿತು. ಮಹಿಳಾ ಹಾಕಿ ತಂಡವೂ ಸ್ವರ್ಣ ಗೆದ್ದಿತು.

ಜರ್ಮನರಿಂದ ಪದಕಗಳ ಸೂರೆ

ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಜರ್ಮನಿಗೆ. 12 ಸ್ವರ್ಣದೊಂದಿಗೆ ಒಟ್ಟು 35 ಪದಕಗಳು ಜರ್ಮನರ ಪಾಲಿಗೆ. ಆನಂತರ ಸ್ಥಾನ ಅನುಕ್ರಮವಾಗಿ ಅಮೆರಿಕ, ನಾರ್ವೆ, ಕೆನಡ, ಮತ್ತು ಆಸ್ಟ್ರಿಯ ದೇಶಗಳಿಗೆ. ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ 78 ರಾಷ್ಟ್ರಗಳಲ್ಲಿ 25 ರಾಷ್ಟ್ರಗಳು ಮಾತ್ರ ಪದಕ ಪಡೆದವು. ರಷ್ಯನ್‌ ಒಕ್ಕೂಟ ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲ. ಮೂವರು ಕ್ರಾಸ್‌ ಕಂಟ್ರಿ ಸ್ಕಿಯರ್ಸ್‌ ಉದ್ದೀಪನ ಔಷಧಿ ಸೇವನೆಯಲ್ಲಿ ಸಿಕ್ಕಿ ಬಿದ್ದು , ತಮಗೆ ದೊರೆತ ಪದಕಗಳನ್ನು ಕಳೆದುಕೊಂಡರು.

ರಷ್ಯನ್‌ ಮತ್ತು ಕೊರಿಯನ್ನರ ಪ್ರತಿಭಟನೆ

ಕ್ರೀಡೆಗಳುದ್ದಕ್ಕೂ ರಷ್ಯನ್ನರು ರೆಪರಿಗಳು ಉತ್ತರ ಅಮೆರಿಕದ ಪರವಾಗಿ ನಿರ್ಣಯಗಳನ್ನು ಕೊಡುತ್ತಿದ್ದಾರೆ ಎಂದು ದೂರುತ್ತಿದ್ದರು. ಕ್ರೀಡೆಗಳನ್ನು ಬಹಿಷ್ಕರಿಸುವ ಬಗ್ಗೆಯೂ ಮಾತನಾಡಿದ್ದರು. ಫಿಗರ್‌ ಸ್ಕೇಟಿಂಗ್‌ನಲ್ಲಿ ಐರಿನ ಸ್ಲಶ್ಕಾಯಗೆ ಸ್ವರ್ಣ ಸಿಗದಿದ್ದಾಗ ಪತ್ರಿಗಳಲ್ಲಿ ರೆಫರಿಗಳ ಬಗ್ಗೆ ದೂರಿದರು. ಪ್ರತಿಭಟನೆ ಎಷ್ಟು ತೀವ್ರವಾಗಿತ್ತೆಂದರೆ ರಷ್ಯ ಸಂಸತ್ತಿನ ಕೆಳ ಮನೆ ಮುಕ್ತಾಯ ಸಮಾರಂಭ ಬಹಿಷ್ಕರಿಸುವ ವಿಧೇಯಕವನ್ನು ಅನುಮೋದಿಸಿತು. ನಂತರ ಅಧ್ಯಕ್ಷ ಪುಟಿನ್‌ ರಷ್ಯನ್‌ ತಂಡ ಸಮಾರಂಭವನ್ನು ಬಹಿಷ್ಕರಿಸುವುದಿಲ್ಲ ಎಂದು ತಿಳಿಸಿ, ರಷ್ಯದ ದೂರನ್ನು ಐಓಸಿಗೆ ಪರಿಶೀಲಿಸುವಂತೆ ಹೇಳಿದರು. ಕ್ರೀಡೆಗಳಲ್ಲಿನ ಕಳಪೆ ಪ್ರದರ್ಶನ, ರಷ್ಯನ್ನರ ಅತೃಪ್ತಿ ಮತ್ತು ಪ್ರತಿಭಟನೆಗೆ ಕಾರಣ ಎಂದು ಅಂತರರಾಷ್ಟ್ರೀಯ ಪತ್ರಿಕೆಗಳು ಬರೆದವು.

ವೇಗದ ಸ್ಕೇಟಿಂಗ್‌ ಚಾಂಪಿಯನ್‌ ಕಿಂ ಡಾಂಗ್‌-ಸುಂಗ್‌ ನು ಅನರ್ಹನಾದಾಗ ದಕ್ಷಿಣ ಕೊರಿಯಾದವರು ರಷ್ಯನ್ನರ ಹಾಗೆ ರೆಫರಿಗಳ ದೂರಿ ಮುಕ್ತಾಯ ಸಮಾರಂಭ ಬಹಿಷ್ಕರಿಸುವುದಾಗಿ ಮೊದಲಿಗೆ ಹೆದರಿಸಿ ನಂತರ ಐಓಸಿಯಾಡನೆ ಚರ್ಚಿಸಿ ತಮ್ಮ ನಿರ್ಣಯ ಬದಲಿಸಿದರು.

ಮತ್ತೆ 2006ರಲ್ಲಿ ನೋಡುವ- ಟೊರಿನೊ ಇಟಲಿಯಲ್ಲಿ

Closing ceremonyವರ್ಣರಂಜಿತ ಸಮಾರೋಪ ಸಮಾರಂಭ ಒಲಂಪಿಕ್ಸ್‌ಗೆ ಇನ್ನೂ ಹೆಚ್ಚಿನ ಕಳೆ ತರುವಲ್ಲಿ ಯಶಸ್ವಿಯಾಯಿತು. ಅಮೆರಿಕದ ಉಪಾಧ್ಯಕ್ಷ ಡಿಕ್‌ ಚೆಯ್ನಿ ಸಮಾರಂಭದ ಮುಖ್ಯ ಅತಿಥಿಯಾಗಿದ್ದು, ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಖುಷಿಯಾಗಿಸಿದವು. ಹೆಸರಾಂಥ ಹಾಡುಗಾರರ ಹಾಡಿಗೆ ಮತ್ತು ಸಂಗೀತದ ತಾಳಕ್ಕೆ ಸ್ಕೇಟರ್‌ಗಳು ಹೆಜ್ಜೆ ಹಾಕಿದರು.

ಅಚ್ಚುಕಟ್ಟಾಗಿ ಕ್ರೀಡೆಯನ್ನು ನಡೆಸಿಕೊಟ್ಟ, ಸಾಲ್ಟ್‌ ಲೇಕ್‌ ಒಲಂಪಿಕ್ಸ್‌ ಸಮಿತಿ ಮತ್ತು ಸಾಲ್ಟ್‌ ಲೇಕ್‌ ಜನತೆಗೆ ಸ್ಪರ್ಧಿಗಳು ಮತ್ತು ನೆರೆದಿದ್ದ ಪ್ರೇಕ್ಷಕರು ಅಭಿನಂದನೆ ಸಲ್ಲಿಸಿದರು. ಸಾಲ್ಟ್‌ ಲೇಕ್‌ ಸಿಟಿ ಮೇಯರ್‌, ಇಟಲಿಯ ಟೊರಿನೊ (2006 ಒಲಂಪಿಕ್ಸ್‌ನ ತಾಣ) ದ ಮೇಯರ್‌ಗೆ ಒಲಂಪಿಕ್‌ ಬಾವುಟವನ್ನು ವರ್ಗಾಯಿಸಿದ ನಂತರ ಒಲಂಪಿಕ್‌ ಜ್ಯೋತಿಯನ್ನು ಆರಿಸಲಾಯಿತು.

ಭಾರತೀಯ ರಾಜಕಾರಣಿಗಳೇ ಇಲ್ಲಿ ಕೇಳಿ...

100 ಕೋಟಿಗೂ ಮಿಗಿಲಾಗಿ ಜನಸಂಖ್ಯೆಯನ್ನು ಹೊಂದಿರುವ ಭಾರತಾಂಬೆ, ನೀನು ಒಬ್ಬ ಸ್ಪರ್ಧಿಯನ್ನು ಆರತಿಗೆ ಕಳಿಸಿ ಕೀರುತಿ ಅಪೇಕ್ಷಿಸಿದರೆ ಹೇಗೆ ? ಮಂದಿರ-ಮಸೀದಿ, ತೆಹಲ್ಕ-ಬೋಫೋರ್ಸ್‌ ಗಳಲ್ಲೇ ಮುಳುಗಿ ಹೋದ ನಿನ್ನ ಜನಪ್ರತಿನಿಧಿಗಳಿಗೆ ಕ್ರೀಡೆಗಳತ್ತ ಗಮನ ಹರಿಸುವ ಚಿತ್ತ ನೀಡು.

ಅಧಿಕಾರವಧಿಯಲ್ಲಿ ಹುಲುಸಾಗಿ ಮೇಯುತ್ತ, ಕೋಟಿ ಕೋಟಿ ಕೂಡಿಡುವ ನಾಯಕರೆ, ಶಿವಕೇಶವನಂಥ ಎಳೆ ಕರುಗಳತ್ತ ಸ್ವಲ್ಪ ಗಮನ ಹರಿಸಿ. ಕ್ರೀಡಾಭ್ಯಾಸ ಮಾಡಿಕೊಳ್ಳಲು ಸವಲತ್ತುಗಳನ್ನು ಒದಗಿಸಿ. ಶಿವ ಕೇಶವನಿಗೆ ಪ್ರಾರಂಭದ ಮತ್ತು ಮುಕ್ತಾಯದ ದಿನ ಧ್ವಜ ಹಿಡಿಯುವುದರ ಜೊತೆಗೆ ವಿಜಯದ ಮೆಟ್ಟಿಲು ಏರುವ ಆಸೆಯಿದೆ ಮತ್ತು ಸಾಮರ್ಥ್ಯವಿದೆ. ಆದರೆ ಅವನ ಆಸೆಯನ್ನು ಪ್ರೋತ್ಸಾಹಿಸಿ ಸಾಕಾರಗೊಳಿಸುವ ಛಲ ನಿಮಗಿದೆಯೇ ... ಶಿವಕೇಶವನೇ, ನೀನು ಪದಕ ಗೆಲ್ಲದಿದ್ದರೇನು ಒಲಂಪಿಕ್ಸ್‌ನಲ್ಲಿ ಭಾಗವಹಿಸಿ ತ್ರಿವರ್ಣ ಧ್ವಜ ಹಿಡಿದದ್ದೇ ಸಾಕು- ಸಮಸ್ತ ಭಾರತೀಯರಿಗೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X