• search

ಜೀವ ಪೊರೆಯುವ ನೀರೇ ನೀನು ನಿಜಕ್ಕೂ ಅದ್ಭುತ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಸಮುದ್ರಜ್ಯೇಷ್ಠಳಾದ ಆ ನೀರಿನಲ್ಲಿ ಇರುವ ದೈವೀಶಕ್ತಿಗಳು ನನ್ನನ್ನು ಕಾಪಾಡಲಿ (‘ತಾ ಆಪೋ ದೇವೀರ್‌ ಇಹ ಮಾಂ ಅವನ್ತು!’) ಎಂಬ ಮೈತ್ರಾವರುಣಿ ವಸಿಷ್ಠ ಋಷಿಯ ಕಳಕಳಿಯ ಬಿನ್ನಹ ಋಗ್ವೇದ 7.49ರಲ್ಲಿ ಇದೆ. ಜೀವ ಉಳಿಸಬಲ್ಲ ಶಕ್ತಿ ಇದೆಯೆಂದೇ ನೀರು ನಿಜಕ್ಕೂ ಅಮೃತ ! ಋಷಿ ಹೇಳುತ್ತಾನೆ :
    ನೀರಲ್ಲಿ, ಸೋಮ ಏನು ಹೇಳಿದ ಗೊತ್ತ?,
    ಅಡಗಿ ಕುಳಿತಿದೆ ಜಗದೆಲ್ಲ ಬಗೆಯ ಮದ್ದು;
    ಅಗ್ನಿಯೂ ನೀರಲ್ಲಿ ತಾನೆ ಹುದುಗಿರಲು,
    ಜಗಕೆಲ್ಲ ನೀರೊಂದೆ ಔಷಧದ ಮುದ್ದು !
    (ಅಪ್ಸು, ಮೇ ಸೋಮೋ ಅಬ್ರವೀತ್‌। ಅನ್ತರ್‌ ವಿಶ್ವಾನಿ ಭೇಷಜಾ। ಅಗ್ನಿಂ ಚ ವಿಶ್ವಶಂಭುವಂ। ಆಪಶ್ಚ ವಿಶ್ವಭೇಷಜೀ:।।- ಋಗ್ವೇದ 1.23.20; 10.9.6)

    ಸರ್ಪದೊಲು ಸಂಚರಿಪ ಮೇಘಗಳು ಇತ್ತಂಥ ನೀರೆ ಹೊನಲಿಗೆ ಮೂಲ

    ಅಥರ್ವವೇದದಲ್ಲಿ ಒಂದು ಹಾರೈಕೆ ಹೀಗೆ ಬರುತ್ತದೆ: ‘‘ಮೋಡಗಳ ಒಡೆಯ ಇಂದ್ರ. ಅವನ ರಥವನ್ನು ನಡೆಸುವವನು ಮಾತಲಿ. ಈ ರಥದ ನಡೆಯಿಂದ ತಿಕ್ಕಿದ ಆ ಮೇಘಗಳು ಸುರಿವ ನೀರಿನಲ್ಲಿ ಅಮೃತದಂಥ ಔಷಧಿ ಉಂಟಾಗುತ್ತದೆಯೆಂದು ನಮ್ಮ ಮಾತಲಿ ಬಲ್ಲ. ಹೀಗೆ, ಇಂದ್ರ ಯಾವ ನೀರಿನಲ್ಲಿ ಅಮೃತಸದೃಶ ರಸವನ್ನು ತುಂಬಿದನೋ ಆ ನೀರು ನಮಗೆ ಔಷಧಿಯಾಗಿ ಪರಿಣಮಿಸಲಿ!’’ (ಯನ್‌ ಮಾತಲೀ ರಥಕ್ರೀತಂ ಅಮೃತಂ ವೇದ ಭೇಷಜಮ್‌। ತದ್‌ ಇನ್ದ್ರೋ ಅಪ್ಸು ಪ್ರವೇಶಯತ್‌ ತದ್‌ ಆಪೋ ದತ್ತ ಭೇಷಜಂ।।- ಅಥರ್ವವೇದ 11.6.23)

    ಅದೇ ಅಥರ್ವವೇದದಲ್ಲಿ ಇನ್ನೊಂದೆಡೆ, (ಅಥರ್ವವೇದ 3:13: 1-7) ಸ್ವಾರಸ್ಯಕರವಾಗಿ ನೀರಿನ ಬಗ್ಗೆ ಬೇರೆ ಬೇರೆ ಪದಗಳ ನಿಷ್ಪತ್ತಿಯನ್ನು ಭೃಗು ಋಷಿ ನಮಗೆ ಹೀಗೆ ಹೇಳಿಕೊಡುತ್ತಾನೆ : ಮೇಘಗಳ ಗರ್ಜನೆಯ ‘ನಾದ’ವೇ ‘ನದಿ’ಯ ಮೂಲವಾಯ್ತು; ‘ಆಪ್ನೋತ್‌’ ಎಂದರೆ, ಪಡೆಯುವುದು ಎಂಬುದರಿಂದ ‘ಆಪ’ ಪದ ಬಂತು; ಜಲಾಭಿಮಾನೀ ದೇವತೆ ವರುಣನ್ನು ‘ವರಿ’ಸಿದ್ದರಿಂದ ನೀರು ‘ವಾರಿ’ಯಾಯಿತು; ಎತ್ತ ಬೇಕೆಂದತ್ತ ಹರಿವ ಶಕ್ತಿಯುಳ್ಳದ್ದು ‘ಉತ್‌’ ಎಂದರೆ ಮೇಲಕ್ಕೂ ಚಿಮ್ಮ ಬಲ್ಲದು- ಎಂಬ ಕಾರಣಕ್ಕೆ ‘ಉದಕ’ ಬುಗ್ಗೆಯಾಡಿತು- ಇಂಥ ಅರ್ಥಪೂರ್ಣ ಅಭಿಧಾನ ಹೊತ್ತ ‘ನೀರೆ’ಯರೇ, ನೀವು ನಮ್ಮನ್ನು ಆಹ್ಲಾದಗೊಳಿಸಿ- ಎಂದು ಭೃಗು ಮೊರೆಯಿಡುತ್ತಾನೆ. ಆ ಏಳು ಪದ್ಯಗಳ ಭಾವಾನುವಾದ ಇಗೋ ಇಲ್ಲಿವೆ:

    ಸರ್ಪದೊಲು ಸಂಚರಿಪ ಮೇಘಗಳು ಕೊನೆಗೊಂಡು,
    ಗರ್ಜಿಸುತ ಇತ್ತಂಥ ನೀರೆ ಹೊನಲಿಗೆ ಮೂಲ;
    ಹೀಗಾಗಿ, ‘ನಾದ’ವೇ ‘ನದಿ’ಯಾಯ್ತು ಉಳಿದು,
    ಹೆಸರುಗಳೋ ಹಲವಾರು ತೊರೆಗಳಿಗೆ, ಹೊಳೆಗೆ! ।। 1 ।।

    ‘ಆಪ’ ಎಂಬುದು, ನೀರೆ, ‘ಆಪ್ನೋತ್‌’ದಿಂದಲೆ ಬಂತು;
    ಅದರರ್ಥ ‘ಪಡೆವುದು’, ‘ಹೊಂದುವುದು’- ಎಂದು.
    ವರುಣ ನಿಮ್ಮನು ಅಂದು ಕಳಿಸಲುಬ್ಬುತ ನಡೆದು
    ಇಂದ್ರನನು ಸೇರಿದಿರಿ, ಅವ ಪಡೆದ, ಹಿಡಿದ ।। 2 ।।

    ನಿಮಗೆ ಮನಸಿರಲಿಲ್ಲ, ಆದರೂ ಹೋದಿರಿ ಅತ್ತ’
    ವರುಣ ನಿಮ್ಮನು ಆಗ ‘ವರಿ’ಸಿದನು ಮುದದಿ,
    ತನ್ನದಾಗಿಸಿಕೊಂಡ, ಶಕ್ತಿಯುತ ದೇವಿಯರೆ!-
    ನಿಮಗಾಯ್ತು ‘ವಾರಿ’ಯೆಂದಿನ್ನೊಂದು ಹೆಸರು! ।। 3 ।।

    ಒಬ್ಬ ದೇವನು ನಿಮ್ಮ ಜೊತೆಗಿದ್ದು, ನಿಂತಿಹನು;
    ಎತ್ತಬೇಕೆಂದತ್ತ ಹರಿಯುವಿರಿ, ನೀವು!
    ಮೇಲೇರಬಲ್ಲಿರಿ, ಅದೆ ನಿಮ್ಮ ಮೇಲ್ಮೆ, ಹಿರಿಮೆ-
    ಹಾಗಾಗಿಯೇ, ‘ಉದಕ’ವೆಂದಭಿಧಾನ ನಿಮಗೆ ! ।। 4।।

    ನೀರೆ, ಶುಭಕರಿ ನೀನು, ಸವಿಯಾಡಲ ನವನೀತ;
    ಅಗ್ನಿ- ಸೋಮರ ಒಲಿದು ಹೊತ್ತ ಮಡಿಲು;
    ಇತ್ತ ಬಾ, ನನ್ನತ್ತ, ಜೇನು ತೊಟ್ಟಿಕ್ಕುವ ರಸವೇ,
    ವರ್ಚಸ್ಸಿನೊಡಗೂಡಿ, ಹೂಡಿ ಜೀವದುಸಿರ ! ।। 5 ।।

    ಅಗೊ, ಅಲ್ಲಿ ಗೋಚರಿಸಿ, ಕೇಳಿ ಬರುತಿದೆ ಘೂಷ,
    ನನ್ನತ್ತ ಬರುವವಳನ್ನ ನಾ ಕಾಣುತಿಹೆನು;
    ಹೊನ್ನಿನೊಲು ಹೊಳೆವವಳೆ, ನಿನ್ನ ಸೇವಿಸಿ, ನೀರೆ,
    ಅಮೃತವೆಂದೇ ತಿಳಿವೆ, ಮನದಣಿಯೆ, ದಣಿಯೆ! ।। 6 ।।

    ನಿನ್ನ ಹೃದಯವು ಇಲ್ಲೆ, ಒಲುಮೆ ಮಗುವೂ ಇಲ್ಲೆ;
    ಓ ನೀರೆ, ಸರಿನಡೆ ಧೀರೆ, ಬಾ ಇಲ್ಲೆ, ಇಲ್ಲೇ !
    ಇತ್ತ ಬಾ, ಶಕ್ತಿಯುತೆ, ಮತ್ತೆ ಅನುಸರಿಸೆನ್ನ,
    ಒಯ್ದತ್ತ ಸಾಗಿ ಬಾ, ಬಾರೆ, ಮನಸಾರೆ! ।। 7।।

    (ಯದ್‌ ಅದ: ಸಂಪ್ರಯತೀರ್‌ ಅಹೌ ಅನದತಾ ಹತೇ। ತಸ್ಮಾದ್‌ ಆ
    ನದ್ಯೋ ನಾಮ ಸ್ಥ, ತಾ ವೋ ನಾಮಾನಿ ಸಿನ್ಧವ: ।। 1 ।।

    ಯತ್‌ ಪ್ರೇಷಿತಾ ವರುಣೇನ ಅಚ್ಛೀಭಂ ಸಂ ಅವಲ್ಗತ। ತದ್‌ ಆಪ್ನೋದ್‌
    ಇನ್ದ್ರೋ ವೋ ಯತೀಸ್‌ ತಸ್ಮಾದ್‌ ಆಪೋ ಅನು ಷ್ಠನ ।। 2 ।।

    ಅಪಕಾಮಂ ಸ್ಯನ್ದಮಾನಾ ಅವೀವರತ ವೋ ಹಿ ಕಮ್‌। ಇನ್ದ್ರೋ ವ:
    ಶಕ್ತಿಭಿರ್‌ ದೇವೀಸ್‌, ತಸ್ಮಾದ್‌ ವಾರ್‌ ನಾಮ ವೋ ಹಿತಮ್‌।। 3 ।।

    ಏಕೋ ವೋ ದೇವೋ ಅಪಿ+ಅತಿಷ್ಠತ್‌ ಸ್ಯನ್ದಮಾನಾ ಯಥಾವಶಮ್‌।
    ಉದಾನಿಷುರ್‌ ಮಹೀರ್‌ ಇತಿ ತಸ್ಮಾದ್‌ ಉದಕಂ ಉಚ್ಯತೇ ।। 4।।

    ಆಪೋ ಭದ್ರಾ ಘೃತಂ ಇದ್‌ ಆಪ ಆಸನ್ನ್‌ ಅಗ್ನೀ- ಷೋಮೌ
    ಬಿಭ್ರತಿ+ಆಪ ಇತ್‌ ತಾ:। ತೀವ್ರೋ ರಸೋ ಮಧುಪೃಚಾಂ ಅರಂಗಮ
    ಆ ಮಾ ಪ್ರಾಣೇನ ಸಹ ವರ್ಚಸಾ ಗಮೇತ್‌।। 5 ।।

    ಆದಿತ್‌ ಪಶ್ಯಾಮಿ+ ಉತ ವಾ ಶೃಣೋಮಿ+ ಆ ಮಾ ಘೋಷೋ ಗಚ್ಛತಿ
    ವಾಂಗ್‌ ಮಾಸಾಮ್‌। ಮನ್ಯೇ ಭೇಜಾನೋ ಅಮೃತಸ್ಯ ತರ್ಹಿ
    ಹಿರಣ್ಯವರ್ಣಾ ಅತೃಪಂ ಯದಾ ವ:।। 6 ।।
    ಇದಂ ವ್‌ ಆಪೋ ಹೃದಯಂ ಅಯಂ ವತ್ಸ ಋತಾವರೀ: ।
    ಇಹ + ಇತ್ಥಂ ಏತ ಶಕ್ವರೀರ್‌ ಯತ್ರ ಇದಂ ವೇಶ್ಯಾಮಿ ವ:।। 7 ।।
    - ಅಥರ್ವ ವೇದ 3: 13: 1-7 )


    ಮುಖಪುಟ / ಸಾಹಿತ್ಯ ಸೊಗಡು

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more