• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರನ್ನು ಕುರಿತು ವಿಚಾರಲಹರಿಗಳು

By Staff
|

ಲಹರಿ-1

ನೀರು, ನಿನಗೆ ಎಷ್ಟೊಂದು ಹೆಸರು!?

  • ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ
Water Water every where...ಜಗತ್ತಿನ ಸ್ಥಾವರ- ಜಂಗಮ ವಸ್ತುಗಳ ಮೂಲಭೂತ ತತ್ತ್ವಗಳಲ್ಲಿ- ನೆಲ, ನೀರು, ಗಾಳಿ, ಬೆಂಕಿ, ಆಕಾಶ(ಪೃಥ್ವೀ, ಅಪ್‌, ವಾಯು, ತೇಜಸ್‌, ಆಕಾಶ) ಗಳಲ್ಲಿ- ನೀರು ಪ್ರಧಾನವಾದದ್ದು, ಇದನ್ನು ಮನಗಂಡ ನಮ್ಮ ಪೂರ್ವೀಕರು ‘ನೀರಿ’ಗೆ ಮಹತ್ವದ ಕಿರೀಟವನ್ನು ನಾನಾ ರೀತಿಯಲ್ಲಿ ಹೊರೆಸಿದ್ದರು ; ಹಾಡಿ ಹೊಗಳಿದ್ದರು.

ಜಗತ್ತಿನ ಬೇರೆ ಬೇರೆ ನಾಗರೀಕತೆಗಳ ಉಗಮವಾದದ್ದು ಆಯಾಯ ನೀರತಾಣಗಳ ಬಳಿಯೇ, ನದಿತೀರಗಳಲ್ಲೇ. ಸಿಂಧೂನದಿಯ ಕಣಿವೆಯ ನಾಗರೀಕತೆ ದೇಶಕ್ಕೊಂದು ಹೆಸರನ್ನು ತಂದಿತೆಂದು ಸಂಶೋಧಕರ ಮತ. ಎಲ್ಲಾ ಜನಾಂಗದ, ಎಲ್ಲಾ ಸಂಸ್ಕೃತಿಯ ಜನರೂ ಬಗೆ ಬಗೆಯಲ್ಲಿ ‘ನೀರ’ನ್ನು ಕೊಂಡಾಡಿದ್ದಾರೆ. ಒಂದು ವಸ್ತು (ಅಥವಾ ವ್ಯಕ್ತಿ) ವನ್ನು, ಅದರ ಉಪಯುಕ್ತತೆಯ ಹಿನ್ನೆಲೆಯಲ್ಲಿ ಗೌರವಿಸುವಾಗ, ನಾವು ನೋಡುವ, ಕಾಣುವ ದೃಷ್ಟಿಕೋನಕ್ಕನುಗುಣವಾಗಿ ಅದನ್ನು ಬಣ್ಣಿಸುತ್ತೇವೆ. ರೂಪಗಳೇ ನಾಮಗಳಾಗಿ, ಆ ವಿಶೇಷಣಗಳೇ ಅದರ ವಿವಿಧ ಹೆಸರುಗಳಾಗಿ ಆಮೇಲೆ ರೂಪಾಂತರಗೊಳ್ಳುತ್ತವೆ. ಹೀಗಾಗಿ ನೀರಿಗೆ ಹಲವಾರು ಹೆಸರುಗಳು.

ಅರಮನೆಗೆ ಹೋದ ಕನ್ನೆಯರು ! ಅಲ್ಲಿಂದ ಇತ್ತ ಬಂದ ಮನ್ನೆಯರು!

ಸಂಸ್ಕೃತದಲ್ಲಿ ನೀರಿಗೆ ಅಪ್‌, ವಾರ್‌, ವಾರಿ, ಸಲಿಲ, ಕಮಲ, ಜಲ, ಪಯಸ್‌, ಕೀಲಾಲ, ಅಮೃತ, ಜೀವನ, ಭುವನ, ವನ, ಕಬಂಧ, ಉದಕ, ಪಾಥಸ್‌, ಪುಷ್ಕರ, ಸರ್ವತೋಮುಖ, ಅಂಭಸ್‌, ಅರ್ಣಸ್‌, ತೋಯ, ಪಾನೀಯ, ನೀರ, ಕ್ಷೀರ, ಅಂಬು, ಶಂಬರ, ಕೃಪೀಟ, ಕಾಂಡ, ದೇವನೀಯ, ಕುಶ, ವಿಷ, ಮೇಘಪುಷ್ಪ, ಘನರಸ- ಹೀಗೆ ಹಲವಾರು ಹೆಸರುಗಳಿವೆ. (ಅಮರಕೋಶ, ವಾರಿವರ್ಗ 264-266.) ಇವುಗಳಲ್ಲಿ ಕನ್ನಡದಲ್ಲಿ ಹಲವಾರು ತತ್ಸಮ ಶಬ್ದವಾಗಿ ಉಳಿದಿವೆ ; ಕೆಲವು ಕಳಚಿಕೊಂಡು ಕಣ್ಮರೆಯಾಗಿವೆ. ಇನ್ನು ಕೆಲವು ಮೊದಲು ಕನ್ನಡದ್ದೇ (ದ್ರಾವಿಡ ಮೂಲದ್ದೇ) ಆಗಿದ್ದು, ಬೆಳವಣಿಗೆಯ ಕೊಂಡು-ಕೊಳ್ಳುವ ಸ್ಥಿತಿಯಲ್ಲಿ ಸಂಸ್ಕೃತ ಇದ್ದಾಗ, ಆ ಅರಮನೆಗೆ ಹೋದ ಕನ್ನೆಯರು ! ಅಲ್ಲಿಂದ ಇತ್ತ ಬಂದ ಮನ್ನೆಯರು!

ಈ ಮೃದುಪದಗಳ ಹಂಸನಡೆಯನ್ನೂ , ಜಿಂಕೆಯೋಟವನ್ನೂ, ದುಂಬಿಯಾಟವನ್ನೂ ಮತ್ತು ಗಜಗಮನವನ್ನೂ ಕೊನೆಗೆ ವಿಚಾರಿಸೋಣ.

ಋಗ್ವೇದದ ಅಂಬರೀಷ ಸಿಂಧುದ್ವೀಪನೆಂಬ ಋಷಿ ‘ನೀರ’ ನ್ನು ತುಂಬಾ ಆತ್ಮೀಯತೆಯಿಂದ ಭಾವುಕ ಕವಿಹೃದಯದಿಂದ ಕರೆದುದು ಆ ಕಾಲದ ಎಲ್ಲರನ್ನೂ ಆಕರ್ಷಿಸಿರಬೇಕು. ಅದಕ್ಕೇನೇ, ಈ ಮೂರೂ ಋಕ್‌ಗಳು (ಋಗ್ವೇದ 10.9.1-3) ವೇದ ವಾಙ್ಗ್ಮಯದಲ್ಲಿ ಎಲ್ಲೆಲ್ಲೂ ಒಳಸುಳಿದಾಡುವ ಹಾರೈಕೆಗಳು :

ಓ ನೀರೆ, ನಮಗಿಲ್ಲಿ ಸುಖದಾಯಿಯಾಗಿಯೆ ನಿಲ್ಲು !
ಒಳಗಣ್ಣ ತೆರೆಯಿಸುತ ನಿನ್ನ ರಮಣೀಯತೆಯತ್ತ,
ನೀ ಹೊತ್ತ ಜೀವ ಪೋಷಕ ರಸವ ನಮಗೀಯೆ ಬಾರ!
(ಆಪೋ ಹಿ ಷ್ಠಾ, ಮಯೋಭುವಸ್‌, ತಾ ನ ಊರ್ಜೇ
ದಧಾತನ। ಮಹೇರಣಾಯ ಚಕ್ಷಸೇ।।1।।

ಒಲವ ಸೂಸುವ ತಾಯಿಯೋಪಾದಿಯಲಿ ನೀರಿರಲಿ;
ಬತ್ತದೊಲುಮೆಯ ಒರತೆ ಚಿಲುನೆಯಾಗಿರಲಿ!
ತುಂಬ ಸುಖವನು ಕೊಡುವ ಆ ಜೀವರಸದ ಸೆಲೆ
ನಮ್ಮ ಪಾಲಿಗೆ ತುಂಬಿ ಹರಿದಿತ್ತ ಬರಲಿ!
(ಯೋ ವ: ಶಿವತಮೋ ರಸಸ್‌, ತಸ್ಯ ಭಾಜಯತ ಇಹ ನ :।
ಉಶತೀರ್‌ ಇವ ಮಾತರ : ।।2।।)

ಯಾವ ಪ್ರಾಣಾಧಾರ ದ್ರವ ನಿನ್ನಲ್ಲಿರುತಿರಲಿಂತು
ಸಂತಸವೆ ಉಕ್ಕಿ ಹರಿಯುತಿಹುದೋ ಅಂಥ
ಜೀವರಸ ಬೇಡುತ್ತ ಬಂದಿಹೆವು ನಿನ್ನತ್ತ-
ನೀರೆ, ನಮ್ಮೆಲ್ಲದನು ಸೃಜಿಸು, ಉಳಿಸು!
(ತಸ್ಮಾ ಅರಂ ಗಮಾಮ ವೋ, ಯಸ್ಯ ಕ್ಷಯಾಯ ಜಿನ್ವಥ।
ಆಪೋ ಜನಯಥಾ ಚ ನ: ।।3।।)

(ಭಾವಾನುವಾದಕನ ಬಿನ್ನಹ: ಸಂಸ್ಕೃತದಲ್ಲಿ ‘ ಆಪ’ (ನೀರು) ಎಂಬುದು, ಅಪ್‌ ಶಬ್ದ ಸ್ತ್ರೀಲಿಂಗ ಮತ್ತು ನಿತ್ಯ ಬಹುವಚನದಲ್ಲಿ ಪ್ರಯೋಗವಾಗುತ್ತದೆ. ಅದನ್ನು ಕನ್ನಡಿಸಿದಾಗ, ‘ ನೀರುಗಳೇ’ ಎಂದಾಗ ಅದು ಹೊಂದಿಕೊಳ್ಳುವುದಿಲ್ಲ. ಆಧುನಿಕ ಇಂಗ್ಲೀಷಿನಲ್ಲಿ ‘ ಯು’ ಎಂಬುದು ಬಹುವಚನದಲ್ಲಿ ಇದ್ದು , ಸಮಯೋಚಿತವಾಗಿ, ಏಕವಚನದ ಅರ್ಥದಲ್ಲೂ ಬಳಕೆಯಾಗುವುದನ್ನ ನೋಡಿ. ದೇವರನ್ನ , ಆತ್ಮೀಯರನ್ನ ಏಕವಚನದಲ್ಲಿ ಸಂಬೋಧಿಸುವುದು ಕನ್ನಡದ ಜಾಯಮಾನ. ಹೀಗಾಗಿ, ಇಲ್ಲಿ , ಮೂಲದ ‘ ನೀರುಗಳೇ’ ಎನ್ನುವುದಕ್ಕೆ ಬದಲಾಗಿ, ‘ ನೀರೇ’ ಇಟ್ಟುಕೊಂಡಿದ್ದೇನೆ!)

ನಮ್ಮ ಎದುರಿಗಿರುವ ನೀರನ್ನು ಪವಿತ್ರೀಕರಿಸಿಕೊಳ್ಳುವಾಗ, ಪೂತ ಜಲವನ್ನು ತನ್ನ ಮೇಲೆ ಪ್ರೋಕ್ಷಿಸಿಕೊಳ್ಳುವಾಗ, ಅಭಿಮಂತ್ರಿತ ನೀರ ಹನಿಗಳನ್ನು ಸಿಂಪಡಿಸಿ ಎಲ್ಲ ವಸ್ತುಗಳನ್ನೂ ವಿಶುದ್ಧಗೊಳಿಸುವ ನಂಬಿಕೆಯ ನೆಲೆಯಲ್ಲಿ- ಹೀಗೆ ನೀರಿನ ದೈವಾಂಶವನ್ನು ಅನುಗ್ರಹಕ್ಕಾಗಿ ಯಾಚಿಸುವಾಗಲೆಲ್ಲ ಮೇಲೆ ಹೇಳಿದ ಈ ಮೂರು ಋಕ್ಕುಗಳನ್ನು ವಾಚಿಸುತ್ತೇವೆ.


ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more