ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೌಶಿಕ್‌ ಅವರ ಬೋಸ್ಟನ್‌ ಪ್ರವಾಸ ಮುಂದಕ್ಕೆ

By Staff
|
Google Oneindia Kannada News

* ಟಿ. ಎಂ. ಸತೀಶ್‌

ಬೆಂಗಳೂರು : ಕರಿ ಕೋಟಿಗೆ (ಲಾಯರ್‌ ವೃತ್ತಿಗೆ) ಗುಡ್‌ಬೈ ಹೇಳಿ ಚಿತ್ರರಂಗಕ್ಕೆ ಅಂಟಿಕೊಂಡ ನಟ, ನಿರ್ದೇಶಕ ಮುರಳೀಧರ ಕೌಶಿಕ್‌ (ಎಂ.ಡಿ. ಕೌಶಿಕ್‌) ಮೇ ತಿಂಗಳ ಕೊನೆಯ ವಾರದಲ್ಲಿ ಬೋಸ್ಟನ್‌ಗೆ ಹೊರಡಲು ರೆಡಿ ಆಗಿದ್ದರು. ಅದಕ್ಕಾಗಿ ಟಿಕೆಟ್‌ ಕೂಡ ಬುಕ್‌ ಮಾಡಿದ್ದರು. ಆದರೆ ಈಗ ಅನಿವಾರ್ಯ ಕಾರಣದಿಂದ ತಮ್ಮ ಅಮೆರಿಕ ಯಾತ್ರೆಯನ್ನು ಒಂದೂವರೆ ತಿಂಗಳ ಕಾಲ ಮುಂದೂಡಿರುವುದಾಗಿ ತಿಳಿಸಿದ್ದಾರೆ.

12 ಗಂಟೆಗಳ ಹಿಂದಷ್ಟೇ ‘ಮೇ ತಿಂಗಳ ಕೊನೆಯ ವಾರದಲ್ಲಿ ಬೋಸ್ಟನ್‌ಗೆ ಕೌಶಿಕ್‌’ ಎಂಬ ಸುದ್ದಿ ನಮ್ಮ ಜಾಲದಲ್ಲಿ ಪ್ರಸಾರವಾಗಿತ್ತು. ಕೌಶಿಕ್‌ ಅವರನ್ನು ಕಂಡು ಪ್ರವಾಸದ ಇನ್ನಷ್ಟು ವಿವರಗಳನ್ನು ತಿಳಿಯಲು ಯತ್ನಿಸಿದ ಕನ್ನಡ.ಇಂಡಿಯಾಇನ್‌ಫೊಗೆ ಅವರ ಕಾರ್ಯಕ್ರಮ ಬದಲಾಗುತ್ತಿರುವ ವಿಷಯ ತಿಳಿಯಿತು.

ರಾಷ್ಟ್ರೀಯ ಮಟ್ಟದ ಡಾಕ್ಯುಮೆಂಟರಿ ಚಿತ್ರೀಕರಣದ ದಿನಾಂಕ ಪ್ರಿಪೋನ್‌ ಆದ ಹಿನ್ನೆಲೆಯಲ್ಲಿ ಅಮೆರಿಕಾ ಪ್ರವಾಸ ಮುಂದೂಡುವುದು ಅನಿವಾರ್ಯವಾಯಿತು ಎಂಬುದು ಕೌಶಿಕ್‌ ಹೇಳಿಕೆ. ಈ ಸಂಬಂಧ ಅವರು ಅಮೆರಿಕದ ಕನ್ನಡ ಸಂಘಟನೆಯ ಮುಖ್ಯಸ್ಥರಿಗೆ ದೂರವಾಣಿ ಮೂಲಕ ತಿಳಿಸಿದ್ದಾರಂತೆ.

ದಕ್ಷಿಣ ಭಾರತೀಯ ಅದರಲ್ಲೂ ಕನ್ನಡಿಗನಾದ ನನಗೆ ರಾಷ್ಟ್ರೀಯ ಮಟ್ಟದ ಹಾಗೂ ಮಹತ್ವವಾದ ಒಂದು ಡಾಕ್ಯುಮೆಂಟರಿ ತೆಗೆಯುವ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಪ್ರವಾಸ ಮುಂದೂಡಲೇ ಬೇಕಾಯಿತೆಂಬ ಅಸಹಾಯಕತೆ ವ್ಯಕ್ತಪಡಿಸಿರುವ ಕೌಶಿಕ್‌, ಡಾಕ್ಯುಮೆಂಟರಿಯ ಕಥಾವಸ್ತುವಿನ ಬಗ್ಗೆ ಹೇಳಲು ಹಿಂಜರಿದರು.

ಈ ಮಧ್ಯೆ ಕೌಶಿಕ್‌ ನಿರ್ಮಿಸಿರುವ ‘ಓರು ಭಾರತೀಯನ್‌ ಕನವು’ ಎಂಬ 60 ನಿಮಿಷಗಳ ತಮಿಳು ಚಿತ್ರದ ಪ್ರದರ್ಶನವೂ ಅಮೆರಿಕೆಯಲ್ಲಿ ನಡೆಯುತ್ತಿದೆ. ಜುಲೈ ಕೊನೆಯ ವಾರದಲ್ಲಿ ಜಾರ್ಜಿಯಾ - ಅಟ್ಲಾಂಟಾದ ತಮಿಳು ಸಂಘಗಳು ಈ ಚಿತ್ರ ಪ್ರದರ್ಶನ ಏರ್ಪಡಿಸಿವೆ. ಈ ಎರಡೂ ಕಾರಣಗಳ ಹಿನ್ನೆಲೆಯಲ್ಲಿ ಪ್ರವಾಸದ ಮುಂದೂಡಿಕೆ.

ವ್ಯಾಪಾರಾರ್ಥ : ಮುಂಡೂಡಲಾಗಿರುವ ಈ ಪ್ರವಾಸ ಕಾಲದಲ್ಲಿ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಬಗ್ಗೆಯೂ ಅವರು ಕಾರ್ಯಕ್ರಮ ನೀಡುತ್ತಿದ್ದಾರೆ. ಮನರಂಜನಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿದ್ದಾರೆ. ಅಮೇರಿಕೆಯಲ್ಲಿನ ಕನ್ನಡ ಚಟುವಟಿಕೆಗಳ ಬಗೆಗೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸುವ ಕಾರ್ಯಕ್ರಮವೂ ಇದೆ.

ಇದು ಕೌಶಿಕರ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಪ್ರವಾಸ ಮಾತ್ರ ಅಲ್ಲ. ಈ ಪ್ರವಾಸ ಕಾಲದಲ್ಲಿ ಅಂಗೈನಲ್ಲಿ ಬಚ್ಚಿಡುವಂತಹ ಅತಿ ಚಿಕ್ಕ ವಿಡಿಯೋ ಕ್ಯಾಮರಾಗಳನ್ನು (ಭಾರಿ ಸುದ್ದಿ ಮಾಡಿದ ತೆಹಲ್ಕಾ ಪ್ರಕರಣದಲ್ಲಿ ಬಳಸಿದಂತಹ) ಖರೀದಿಸಿ, ಅವುಗಳನ್ನು ತಂದು ಭಾರತದಲ್ಲಿ ಮಾರಾಟ ಮಾಡುವ ಯೋಜನೆಯೂ ಇದೆ.

ನಾರ್ತ್‌ ಅಮೆರಿಕಾ ಸಂಕೇತಿ ಅಸೋಸಿಯೇಷನ್‌ (ನಾಸ) ಕಾರ್ಯಕ್ರಮವೊಂದರಲ್ಲೂ ಕೌಶಿಕ್‌ ಭಾಗವಹಿಸುವ ಸಾಧ್ಯತೆ ಇದೆ. ತಮ್ಮ ಕಾಲೇಜು ದಿನಗಳಲ್ಲಿ ಕನ್ನಡ ಚರ್ಚಾಸ್ಪರ್ಧೆ, ಮಿಮಿಕ್ರೀ, ಏಕಪಾತ್ರಾಭಿನಯ, ನಾಟಕಗಳಲ್ಲಿ ನೂರಾರು ಬಹುಮಾನಗಳನ್ನು ಗಳಿಸಿರುವ ಕೌಶಿಕ್‌ ಮೈಮರೆಯುವಂತೆ ಮಾತನಾಡುತ್ತಾರೆ. ಹಾಸ್ಯ ಚಟಾಕಿಗಳನ್ನು ಹಾರಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಇವರ ಕಾರ್ಯಕ್ರಮ ವೀಕ್ಷಿಸಲು ಅಮೆರಿಕನ್ನಡಿಗರು ಒಂದೂವರೆ ತಿಂಗಳು ಕಾಯಬೇಕು ಅಷ್ಟೇ.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X